Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 127

ದೇವಾಲಯಕ್ಕೆ ಹೋಗುವಾಗ ಹಾಡುವ ಗೀತೆ. ರಚನೆಗಾರ: ಸೊಲೋಮೋನ.

127 ಯೆಹೋವನು ಮನೆಯನ್ನು ಕಟ್ಟದಿದ್ದರೆ,
    ಕಟ್ಟುವವರ ಸಮಯವೆಲ್ಲಾ ವ್ಯರ್ಥ.
ಯೆಹೋವನು ಪಟ್ಟಣವನ್ನು ಕಾಯದಿದ್ದರೆ,
    ಕಾವಲುಗಾರರ ಸಮಯವೆಲ್ಲಾ ವ್ಯರ್ಥ.

ಕೇವಲ ಹೊಟ್ಟೆಪಾಡಿಗಾಗಿ ಮುಂಜಾನೆಯಲ್ಲೇ ಎದ್ದು
    ರಾತ್ರಿಯವರೆಗೂ ದುಡಿಯುವುದು ಕೇವಲ ವ್ಯರ್ಥ.
ಯಾಕೆಂದರೆ ದೇವರು ತನ್ನ ಪ್ರಿಯರಿಗೆ
    ಆಹಾರವನ್ನು ನಿದ್ರೆಯಲ್ಲೂ ದಯಪಾಲಿಸುವನು.

ಮಕ್ಕಳು ಯೆಹೋವನ ಕೊಡುಗೆ.
    ತಾಯಿಯ ಗರ್ಭಫಲವು ಆತನ ಬಹುಮಾನ.
ಯೌವನಸ್ಥನ ಗಂಡುಮಕ್ಕಳು ಸೈನಿಕನ ಬತ್ತಳಿಕೆಯಲ್ಲಿರುವ ಬಾಣಗಳಂತಿದ್ದಾರೆ.
ತನ್ನ ಬತ್ತಳಿಕೆಯಲ್ಲಿ ಗಂಡುಮಕ್ಕಳನ್ನು ತುಂಬುವವನು ಭಾಗ್ಯವಂತನಾಗಿದ್ದಾನೆ.
    ಅವನಿಗೆ ಸೋಲೇ ಇಲ್ಲ.
    ಅವನ ಗಂಡುಮಕ್ಕಳು ಅವನ ಪರವಾಗಿಯೂ ಅವನ ಶತ್ರುಗಳ ವಿರೋಧವಾಗಿಯೂ ನ್ಯಾಯಸ್ಥ್ಥಾನಗಳಲ್ಲಿ ವಾದಿಸುವರು.

ಪ್ರಸಂಗಿ 2:1-17

“ಸುಖವು” ನೀತಿಮಾರ್ಗಕ್ಕೆ ನಡೆಸುವುದೇ?

ನಾನು ನನ್ನ ಹೃದಯದಲ್ಲಿ, “ಬಾ, ನಿನ್ನನ್ನು ಸುಖದ ಮೂಲಕ ಪರೀಕ್ಷಿಸುವೆನು; ಆಗ ನೀನು ನೀತಿಮಾರ್ಗವನ್ನು ಕಲಿತುಕೊಳ್ಳುವೆ” ಎಂದುಕೊಂಡೆನು. ಆದರೆ ಇದು ಸಹ ವ್ಯರ್ಥವೆಂದು ಕಂಡುಕೊಂಡೆನು. ನಗೆಯು ಹುಚ್ಚುತನ. ಸುಖದಿಂದ ಪ್ರಯೋಜನವೇನು? ಅಂದುಕೊಂಡೆನು.

ಮನುಷ್ಯರು ತಮ್ಮ ಕ್ಷಣಿಕ ಜೀವಮಾನದಲ್ಲಿ ಮಾಡತಕ್ಕ ಒಳ್ಳೆಯದನ್ನು ತಿಳಿದುಕೊಳ್ಳಬೇಕೆಂದು ನನ್ನ ಮನಸ್ಸನ್ನು ಜ್ಞಾನದಿಂದ ತುಂಬಿಸಿದೆ; ದೇಹವನ್ನು ದ್ರಾಕ್ಷಾರಸದಿಂದ ತುಂಬಿಸಿದೆ; ಮೂಢತನವನ್ನು ಅವಲಂಭಿಸಿಕೊಂಡೆ.

ದುಡಿಮೆಯಿಂದ ಸಂತೋಷವಾಗುವುದೇ?

ದೊಡ್ಡಕಾರ್ಯಗಳನ್ನು ಮಾಡಲಾರಂಭಿಸಿದೆ; ನನಗೋಸ್ಕರ ಮನೆಗಳನ್ನು ಕಟ್ಟಿಸಿದೆ; ದ್ರಾಕ್ಷಿತೋಟಗಳನ್ನು ಮಾಡಿಸಿದೆ; ತೋಟಗಳನ್ನೂ ಉದ್ಯಾನವನಗಳನ್ನೂ ಮಾಡಿಸಿದೆ; ಎಲ್ಲಾ ಬಗೆಯ ಹಣ್ಣಿನ ಮರಗಳನ್ನು ನೆಡಿಸಿದೆ. ನೀರಿನ ಕೊಳಗಳನ್ನು ಮಾಡಿಸಿ ಮರಗಳಿಗೆ ನೀರನ್ನು ಹಾಯಿಸಿದೆ. ಪುರುಷರನ್ನೂ ಸ್ತ್ರೀಯರನ್ನೂ ಗುಲಾಮರನ್ನಾಗಿ ಕೊಂಡುಕೊಂಡೆ. ನನ್ನ ಮನೆಯಲ್ಲೇ ಹುಟ್ಟಿದ ಗುಲಾಮರೂ ನನಗಿದ್ದರು. ನನಗೆ ದನದ ಹಿಂಡುಗಳೂ ಕುರಿಮಂದೆಗಳೂ ಇದ್ದವು. ಜೆರುಸಲೇಮಿನಲ್ಲಿ ಇದ್ದವರೆಲ್ಲರಿಗಿಂತಲೂ ಹೆಚ್ಚು ವಸ್ತುಗಳನ್ನು ನಾನು ಪಡೆದಿದ್ದೆ.

ಇದಲ್ಲದೆ ಬೆಳ್ಳಿಬಂಗಾರಗಳನ್ನು ನನಗೋಸ್ಕರ ಸಂಗ್ರಹಿಸಿದೆ; ರಾಜರುಗಳಿಂದಲೂ ಅವರ ದೇಶಗಳಿಂದಲೂ ಭಂಡಾರಗಳನ್ನು ತೆಗೆದುಕೊಂಡೆ. ನನಗೋಸ್ಕರ ಹಾಡಲು ಗಾಯಕಗಾಯಕಿಯರಿದ್ದರು. ನನ್ನನ್ನು ಸಂತೋಷಪಡಿಸಲು ಅನೇಕ ಉಪಪತ್ನಿಯರಿದ್ದರು. ಮನುಷ್ಯನು ಬಯಸಬಹುದಾದ ಪ್ರತಿಯೊಂದನ್ನೂ ನಾನು ಪಡೆದಿದ್ದೆ.

ನಾನು ಬಹು ಐಶ್ವರ್ಯವಂತನಾದೆ; ಪ್ರಸಿದ್ಧನಾದೆ. ನನಗಿಂತ ಮೊದಲು ಜೆರುಸಲೇಮಿನಲ್ಲಿದ್ದ ಎಲ್ಲರಿಗಿಂತಲೂ ನಾನು ದೊಡ್ಡವನಾದೆ. ನನಗೆ ಸಹಾಯಕ್ಕಾಗಿ ಯಾವಾಗಲೂ ನನ್ನಲ್ಲಿ ಜ್ಞಾನವಿತ್ತು. 10 ನನ್ನ ಕಣ್ಣುಗಳು ಬಯಸಿದ್ದನ್ನೆಲ್ಲ ನನಗೋಸ್ಕರ ಪಡೆದುಕೊಂಡೆನು. ಯಾವುದೇ ಸುಖದಿಂದಾಗಲಿ ನನ್ನ ಹೃದಯವನ್ನು ನಾನು ತಡೆಹಿಡಿಯಲಿಲ್ಲ; ಯಾಕೆಂದರೆ ನನ್ನ ಕಾರ್ಯಗಳಲ್ಲಿ ನನ್ನ ಹೃದಯವು ಸಂತೋಷಗೊಂಡಿತ್ತು. ನನ್ನ ಪ್ರಯಾಸದ ಫಲವು ಅದೊಂದೇ.

11 ನನ್ನ ಕಾರ್ಯಗಳನ್ನೂ ನನ್ನ ಪ್ರಯಾಸವನ್ನೂ ಆಲೋಚಿಸಿದೆ. ಗಾಳಿಯನ್ನು ಹಿಂದಟ್ಟಿದ ಹಾಗೆ ಅದೆಲ್ಲಾ ವ್ಯರ್ಥವೆಂದು ಕಂಡುಕೊಂಡೆ. ನಮ್ಮ ಈ ಜೀವಮಾನದ ಯಾವ ಕೆಲಸಗಳಿಂದಲೂ ಲಾಭವಿಲ್ಲ.

ಜ್ಞಾನಿಗೂ ಅಜ್ಞಾನಿಗೂ ವ್ಯತ್ಯಾಸವೇನು?

12 ರಾಜನಿಗಿಂತ ಹೆಚ್ಚಾಗಿ ಮಾಡಲು ಬೇರೆ ಯಾರಿಗೂ ಸಾಧ್ಯವಿಲ್ಲ. ನೀನು ಮಾಡಬೇಕೆನ್ನುವುದನ್ನು ನಿನಗಿಂತ ಮೊದಲೇ ಬೇರೊಬ್ಬ ರಾಜನು ಮಾಡಿರುತ್ತಾನೆ; ಆದ್ದರಿಂದ ರಾಜನ ಕಾರ್ಯಗಳು ಸಹ ವ್ಯರ್ಥವೆಂದು ಕಂಡುಕೊಂಡೆನು. ಆದ್ದರಿಂದ ನಾನು ಜ್ಞಾನವನ್ನೂ ಮೂಢತನವನ್ನೂ ಬುದ್ಧಿಹೀನತೆಯನ್ನೂ ಮತ್ತೆ ಮತ್ತೆ ಆಲೋಚಿಸಿದೆನು. 13 ಆಗ ಬೆಳಕು ಕತ್ತಲೆಗಿಂತ ಉತ್ತಮವಾಗಿರುವಂತೆ ಜ್ಞಾನವು ಮೂಢತನಕ್ಕಿಂತ ಉತ್ತಮವಾಗಿದೆ ಎಂಬುದನ್ನು ಅರಿತುಕೊಂಡೆನು. 14 ಅದು ಈ ರೀತಿಯಿದೆ: ಜ್ಞಾನಿಯು ತನ್ನ ಮಾರ್ಗವನ್ನು ತಿಳಿದುಕೊಳ್ಳಲು ತನ್ನ ಮನಸ್ಸನ್ನು ಕಣ್ಣುಗಳಂತೆ ಉಪಯೋಗಿಸುವನು. ಮೂಢನಾದರೋ ಕತ್ತಲೆಯಲ್ಲಿ ನಡೆದುಹೋಗುವನು.

ಆದರೆ ಜ್ಞಾನಿಗೂ ಮೂಢನಿಗೂ ಒಂದೇ ಗತಿಯೆಂದು ಕಂಡುಕೊಂಡೆನು; ಅವರಿಬ್ಬರೂ ಸಾಯುವರು. 15 ನಾನು ನನ್ನೊಳಗೆ, “ಮೂಢನಿಗೆ ಸಂಭವಿಸುವ ಗತಿಯು ನನಗೂ ಸಂಭವಿಸುವುದು. ಹೀಗಿರಲು ಜ್ಞಾನಿಯಾಗಲು ನಾನೇಕೆ ಪ್ರಯಾಸಪಡಬೇಕು? ಇದೂ ವ್ಯರ್ಥವಲ್ಲವೇ?” ಅಂದುಕೊಂಡೆನು. 16 ಯಾಕೆಂದರೆ ಮೂಢನು ಸಾಯುವಂತೆ ಜ್ಞಾನಿಯೂ ಸಾಯುವುದರಿಂದ ಜನರು ಜ್ಞಾನಿಯನ್ನಾಗಲಿ ಮೂಢನನ್ನಾಗಲಿ ಸದಾಕಾಲ ಜ್ಞಾಪಿಸಿಕೊಳ್ಳುವುದಿಲ್ಲ. ಅವರ ಕಾರ್ಯಗಳನ್ನು ಮುಂದಿನ ಕಾಲದ ಜನರು ಮರೆತುಬಿಡುವರು. ಆದ್ದರಿಂದ ಜ್ಞಾನಿಗೂ ಮೂಢನಿಗೂ ಯಾವ ವ್ಯತ್ಯಾಸವೂ ಇಲ್ಲ.

ಜೀವನದಲ್ಲಿ ನಿಜ ಸಂತೋಷವಿದೆಯೇ?

17 ಈ ಲೋಕದ ಕಾರ್ಯಗಳೆಲ್ಲಾ ಗಾಳಿಯನ್ನು ಹಿಂದಟ್ಟಿದ ಹಾಗೆ ವ್ಯರ್ಥವೆಂದು ನನಗೆ ಕಂಡುಬಂದದ್ದರಿಂದ ಜೀವನವೇ ನನಗೆ ಅಸಹ್ಯವಾಯಿತು.

ಕೊಲೊಸ್ಸೆಯವರಿಗೆ 3:18-4:1

ಮನೆಯವರೊಂದಿಗೆ ನಿಮ್ಮ ಹೊಸ ಜೀವನ

18 ಸ್ತ್ರೀಯರೇ, ನಿಮ್ಮ ಗಂಡಂದಿರಿಗೆ ವಿಧೇಯರಾಗಿರಿ. ಇದು ಪ್ರಭುವಿನಲ್ಲಿ ನೀವು ಮಾಡುವ ಯೋಗ್ಯ ಕಾರ್ಯವಾಗಿದೆ.

19 ಪುರುಷರೇ, ನಿಮ್ಮ ಪತ್ನಿಯರನ್ನು ಪ್ರೀತಿಸಿ, ಅವರೊಡನೆ ಸಾತ್ವಿಕರಾಗಿರಿ.

20 ಮಕ್ಕಳೇ, ನಿಮ್ಮ ತಂದೆತಾಯಿಗಳಿಗೆ ಎಲ್ಲಾ ವಿಷಯಗಳಲ್ಲಿಯೂ ವಿಧೇಯರಾಗಿರಿ. ಇದು ಪ್ರಭುವಿಗೆ ಸಂತೋಷವನ್ನು ಉಂಟುಮಾಡುವುದು.

21 ತಂದೆಗಳೇ, ನಿಮ್ಮ ಮಕ್ಕಳಿಗೆ ಕಿರುಕುಳ ಕೊಡಬೇಡಿ. ಇಲ್ಲವಾದರೆ ಅವರು ಕುಂದಿಹೋಗುವರು.

22 ಸೇವಕರೇ, ಎಲ್ಲಾ ಕಾರ್ಯಗಳಲ್ಲಿಯೂ ನಿಮ್ಮ ಯಜಮಾನರಿಗೆ ವಿಧೇಯರಾಗಿರಿ. ಅವರ ಮೆಚ್ಚಿಕೆಯನ್ನು ಗಳಿಸುವುದಕ್ಕಾಗಿ ಅವರ ಕಣ್ಣೆದುರಿನಲ್ಲಿ ಮಾತ್ರ ಸೇವೆ ಮಾಡದಿರಿ. ನೀವು ಪ್ರಭುವಿಗೆ ಭಯಪಡುವುದರಿಂದ ನಿಮ್ಮ ಯಜಮಾನರಿಗೆ ಯಥಾರ್ಥವಾಗಿ ಸೇವೆ ಮಾಡಿರಿ. 23 ಎಲ್ಲಾ ಕಾರ್ಯಗಳನ್ನು ನಿಮ್ಮಿಂದಾದಷ್ಟು ಅತ್ಯುತ್ತಮವಾಗಿಯೇ ಮಾಡಿರಿ. ಯಾವುದೇ ಕಾರ್ಯವನ್ನಾಗಲಿ ಜನರಿಗಾಗಿ ಮಾಡದೆ ಪ್ರಭುವಿಗಾಗಿ ಮಾಡಿರಿ. 24 ಪ್ರಭುವಿನಿಂದಲೇ ನಿಮಗೆ ಪ್ರತಿಫಲ ದೊರೆಯುತ್ತದೆ ಎಂಬುದನ್ನು ಜ್ಞಾಪಕದಲ್ಲಿಟ್ಟುಕೊಂಡಿರಿ. ಆತನು ತನ್ನ ಜನರಿಗೆ ಮಾಡಿದ ವಾಗ್ದಾನವು ನಿಮ್ಮ ನೆನಪಿನಲ್ಲಿರಲಿ. 25 ಅನ್ಯಾಯ ಮಾಡುವವನು ಅದಕ್ಕೆ ತಕ್ಕ ಶಿಕ್ಷೆಯನ್ನು ಪಡೆಯುವನು. ಪ್ರಭುವಿನಲ್ಲಿ ಪಕ್ಷಪಾತವಿಲ್ಲ.

ಯಜಮಾನರೇ, ನಿಮ್ಮ ಸೇವಕರಿಗೆ ನ್ಯಾಯವಾದದ್ದನ್ನೂ ಸರಿಯಾದದ್ದನ್ನೂ ಮಾಡಿರಿ. ಪರಲೋಕದಲ್ಲಿ ನಿಮಗೂ ಒಬ್ಬ ಯಜಮಾನನಿದ್ದಾನೆ ಎಂಬುದು ನಿಮ್ಮ ಜ್ಞಾಪಕದಲ್ಲಿರಲಿ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International