Revised Common Lectionary (Complementary)
ರಚನೆಗಾರರು: ಕೋರಹೀಯರು.
49 ಸರ್ವಜನಾಂಗಗಳೇ, ಕೇಳಿರಿ,
ಭೂನಿವಾಸಿಗಳೆಲ್ಲರೇ, ಆಲಿಸಿರಿ.
2 ಸಾಮಾನ್ಯ ಜನರೇ, ಅಧಿಪತಿಗಳೇ, ಬಡವರೇ, ಶ್ರೀಮಂತರೇ, ನೀವೆಲ್ಲರೂ ಒಂದಾಗಿ ಬಂದು ಕೇಳಿರಿ.
3 ನಾನು ನಿಮಗೆ ಸುಜ್ಞಾನವನ್ನೂ
ವಿವೇಕವನ್ನೂ ಬೋಧಿಸುವೆನು.
4 ನಾನು ಅವುಗಳನ್ನು ಕಿವುಗೊಟ್ಟು ಕೇಳಿದ್ದೇನೆ.
ನಾನು ಹಾರ್ಪ್‌ವಾದ್ಯವನ್ನು ನುಡಿಸುತ್ತಾ ಅವುಗಳನ್ನು ನಿಮಗಾಗಿ ಹಾಡುವೆನು.
5 ಆಪತ್ತು ಬಂದಾಗ ನಾನೇಕೆ ಭಯಪಡಬೇಕು?
ದುಷ್ಟರು ನನ್ನನ್ನು ಆವರಿಸಿ ಮೋಸದಿಂದ ಹಿಡಿಯಲು ಪ್ರಯತ್ನಿಸುವಾಗ ನಾನೇಕೆ ಭಯಪಡಬೇಕು?
6 ಅವರು ತಮ್ಮ ಸ್ವಂತ ಬಲದಲ್ಲಿಯೂ ಐಶ್ವರ್ಯದಲ್ಲಿಯೂ ಭರವಸೆಯಿಟ್ಟಿದ್ದಾರೆ;
ಅವರು ಬುದ್ಧಿಹೀನರಾಗಿದ್ದಾರೆ.
7 ಯಾವ ಮಾನವ ಸ್ನೇಹಿತನೂ ನಿನ್ನನ್ನು ರಕ್ಷಿಸಲಾರನು.
ಅಲ್ಲದೆ ದೇವರಿಗೆ ಈಡನ್ನು ಕೊಟ್ಟು ನಿನ್ನನ್ನು ಬಿಡಿಸಿಕೊಳ್ಳಲಾರನು.
8 ಸ್ವಂತ ಪ್ರಾಣವನ್ನು ಖರೀದಿಸಲು ಬೇಕಾಗುವಷ್ಟು
ಹಣ ಯಾವನಿಗೂ ದೊರೆಯುವುದಿಲ್ಲ.
9 ಸದಾಕಾಲ ಬದುಕುವ ಹಕ್ಕನ್ನು ಖರೀದಿಸಲು
ಮತ್ತು ತನ್ನ ಸಮಾಧಿಯಲ್ಲಿ ತನ್ನ ಸ್ವಂತ ದೇಹ ಕೊಳೆಯದಂತೆ ಮಾಡಲು
ಬೇಕಾಗುವಷ್ಟು ಹಣವನ್ನು ಯಾವನೂ ಪಡೆದುಕೊಳ್ಳಲಾರನು.
10 ಬುದ್ಧಿಹೀನರೂ ಮೂಢರೂ ಸಾಯುವಂತೆ ಜ್ಞಾನಿಗಳೂ ಸಾಯುವರು.
ಅವರು ಸತ್ತಾಗ ಅವರ ಆಸ್ತಿಯು ಬೇರೆಯವರ ಪಾಲಾಗುವುದು.
11 ಸಮಾಧಿಯೇ ಅವರ ಶಾಶ್ವತವಾದ ಹೊಸ ಮನೆ.
ಅವರೆಷ್ಟೇ ಭೂ ಆಸ್ತಿಯನ್ನು ಹೊಂದಿದ್ದರೂ ಅದರಿಂದೇನೂ ಪ್ರಯೋಜನವಿಲ್ಲ.
12 ಜನರು ಐಶ್ವರ್ಯವಂತರಾಗಿದ್ದರೂ ಭೂಲೋಕದಲ್ಲಿ ಶಾಶ್ವತವಾಗಿ ಇರಲಾಗದು.
ಎಲ್ಲರೂ ಪ್ರಾಣಿಗಳಂತೆಯೇ ಸಾಯುವರು.
1 ದಾವೀದನ ಮಗನೂ ಜೆರುಸಲೇಮಿನಲ್ಲಿ ಆಳುತ್ತಿದ್ದ ರಾಜನೂ ಆಗಿದ್ದ ಪ್ರಸಂಗಿಯ ಮಾತುಗಳು. ಪ್ರಸಂಗಿಯು ಹೇಳುವುದೇನೆಂದರೆ, 2 ವ್ಯರ್ಥವೇ ವ್ಯರ್ಥ, ವ್ಯರ್ಥವೇ ವ್ಯರ್ಥ, ಸಮಸ್ತವೂ ವ್ಯರ್ಥ! 3 ಈ ಲೋಕದಲ್ಲಿ ಮನುಷ್ಯರು ಪಡುವ ಪ್ರಯಾಸದಿಂದ ಅವರಿಗೇನು ಲಾಭ?
ಪ್ರಕೃತಿಯಲ್ಲಿ ಬದಲೇನೂ ಇಲ್ಲ
4 ಒಂದು ತಲೆಮಾರು ಹೋಗಿ ಮತ್ತೊಂದು ತಲೆಮಾರು ಬರುವುದು. ಆದರೆ ಭೂಮಿ ಎಂದೆಂದಿಗೂ ಮುಂದುವರಿಯುವುದು. 5 ಸೂರ್ಯನು ಏರುವನು ಮತ್ತು ಇಳಿಯುವನು; ಬಳಿಕ ಅದೇ ಸ್ಥಳದಲ್ಲಿ ಮತ್ತೆ ಏರಲು ಅವಸರಪಡುವನು.
6 ಗಾಳಿಯು ದಕ್ಷಿಣಕ್ಕೆ ಬೀಸುವುದು; ನಂತರ ಉತ್ತರಕ್ಕೆ ತಿರುಗಿಕೊಳ್ಳುವುದು; ಅದು ತಿರುತಿರುಗುತ್ತಾ ಹೋಗಿ ತಿರುತಿರುಗುತ್ತಾ ಬರುವುದು.
7 ನದಿಗಳು ಎಲ್ಲಿಗೆ ಹರಿದುಹೋಗುತ್ತವೋ ಅಲ್ಲಿಗೇ ತಿರಿಗಿ ಹೋಗುವವು. ನದಿಗಳೆಲ್ಲಾ ಸಮುದ್ರಕ್ಕೆ ಹರಿದು ಹೋಗುತ್ತಲೇ ಇರುತ್ತವೆ; ಆದರೂ ಸಮುದ್ರವು ತುಂಬುವುದಿಲ್ಲ.
8 ಮಾತುಗಳಿಂದ ಯಾವುದನ್ನೂ ಸಂಪೂರ್ಣವಾಗಿ ವಿವರಿಸಲು ಸಾಧ್ಯವಿಲ್ಲ; ಆದರೂ ಜನರು ಮಾತಾಡುತ್ತಲೇ ಇರುವರು. ನಮ್ಮ ಕಿವಿಗಳು ಮಾತುಗಳನ್ನು ಕೇಳುತ್ತಲೇ ಇರುತ್ತವೆ; ಆದರೂ ನಮ್ಮ ಕಿವಿಗಳು ತುಂಬುವುದಿಲ್ಲ. ನಮ್ಮ ಕಣ್ಣುಗಳು ನೋಡುತ್ತಲೇ ಇರುತ್ತವೆ; ಆದರೂ ಅವು ತುಂಬುವುದಿಲ್ಲ.
ಲೋಕದಲ್ಲಿ ಹೊಸದೇನೂ ಇಲ್ಲ
9 ಇದ್ದದ್ದೇ ಇರುವುದು; ನಡೆದದ್ದೇ ನಡೆಯುವುದು. ಲೋಕದಲ್ಲಿ ಹೊಸದೇನೂ ಇಲ್ಲ.
10 “ಇಗೋ, ಇದು ಹೊಸದು!” ಎಂದು ಒಬ್ಬನು ಹೇಳಬಹುದು. ಆದರೆ ಅದು ಸಹ ಮೊದಲಿಂದ ಇಲ್ಲಿ ಇದ್ದದ್ದೇ. ನಮಗಿಂತ ಮೊದಲೇ ಅದು ಇಲ್ಲಿತ್ತು.
11 ಬಹುಕಾಲದ ಹಿಂದಿನ ಘಟನೆಗಳನ್ನು ಜನರು ಜ್ಞಾಪಿಸಿಕೊಳ್ಳುವುದಿಲ್ಲ. ಈಗ ನಡೆಯುತ್ತಿರುವ ಸಂಗತಿಗಳನ್ನು ಮುಂದಿನ ಕಾಲದ ಜನರು ಜ್ಞಾಪಿಸಿಕೊಳ್ಳುವುದಿಲ್ಲ. ಹೀಗೆ, ತಮಗಿಂತ ಮುಂಚೆ ಇದ್ದವರು ಮಾಡಿದ್ದನ್ನು ಜನರು ಜ್ಞಾಪಿಸಿಕೊಳ್ಳುವುದಿಲ್ಲ.
ಯೇಸುವನ್ನು ಹಿಂಬಾಲಿಸಲು ಹಿಂಜರಿದ ಶ್ರೀಮಂತ
(ಮತ್ತಾಯ 19:16-30; ಲೂಕ 18:18-30)
17 ಯೇಸು ಅಲ್ಲಿಂದ ಹೊರಡಬೇಕೆಂದಿದ್ದಾಗ ಒಬ್ಬನು ಓಡಿಬಂದು, ಆತನ ಮುಂದೆ ತನ್ನ ಮೊಣಕಾಲೂರಿ, “ಒಳ್ಳೆಯ ಉಪದೇಶಕನೇ, ನಿತ್ಯಜೀವವನ್ನು ಪಡೆಯಲು ನಾನು ಏನು ಮಾಡಬೇಕು?” ಎಂದು ಕೇಳಿದನು.
18 ಯೇಸು ಅದಕ್ಕೆ, “ನೀನು ನನ್ನನ್ನು ಒಳ್ಳೆಯವನೆಂದು ಕರೆಯುವುದೇಕೆ? ಯಾವ ಮನುಷ್ಯನೂ ಒಳ್ಳೆಯವನಲ್ಲ. ದೇವರು ಮಾತ್ರ ಒಳ್ಳೆಯವನು. 19 ನೀನು ನಿತ್ಯಜೀವ ಹೊಂದಬೇಕಾದರೆ ನಿನಗೆ ತಿಳಿದೇ ಇರುವ ಈ ಆಜ್ಞೆಗಳನ್ನು ಪಾಲಿಸು: ‘ಕೊಲೆ ಮಾಡಬೇಡ, ವ್ಯಭಿಚಾರ ಮಾಡಬೇಡ, ಕದಿಯಬೇಡ, ಸುಳ್ಳು ಹೇಳಬೇಡ, ಮೋಸ ಮಾಡಬೇಡ, ಅಲ್ಲದೆ ನಿನ್ನ ತಂದೆತಾಯಿಯರನ್ನು ಸನ್ಮಾನಿಸು’” ಎಂದು ಉತ್ತರಿಸಿದನು.
20 ಅವನು, “ಉಪದೇಶಕನೇ, ನಾನು ಬಾಲ್ಯದಿಂದಲೂ ಈ ಆಜ್ಞೆಗಳಿಗೆಲ್ಲಾ ವಿಧೇಯನಾಗಿದ್ದೇನೆ” ಎಂದನು.
21 ಯೇಸು ಆ ಮನುಷ್ಯನನ್ನು ಪ್ರೀತಿಯಿಂದ ದೃಷ್ಟಿಸಿನೋಡಿ, “ನೀನು ಮಾಡಬೇಕಾದ ಕಾರ್ಯವೊಂದಿದೆ. ಹೋಗಿ, ನಿನ್ನ ಆಸ್ತಿಯನ್ನೆಲ್ಲಾ ಮಾರಿ, ಬಂದ ಹಣವನ್ನು ಬಡವರಿಗೆ ಕೊಡು. ನಿನಗೆ ಪರಲೋಕದಲ್ಲಿ ಪ್ರತಿಫಲ ಇರುವುದು. ನಂತರ ಬಂದು, ನನ್ನನ್ನು ಹಿಂಬಾಲಿಸು” ಎಂದು ಹೇಳಿದನು.
22 ಯೇಸುವಿನ ಈ ಮಾತನ್ನು ಕೇಳಿ ಅವನು ನಿರಾಶೆಯಿಂದ ದುಃಖಗೊಂಡು ಹೊರಟುಹೋದನು. ಬಹಳ ಧನವಂತನಾಗಿದ್ದ ಅವನು ತನ್ನ ಅಪಾರ ಆಸ್ತಿಯನ್ನು ಮಾರಲು ಇಷ್ಟಪಡಲಿಲ್ಲ.
Kannada Holy Bible: Easy-to-Read Version. All rights reserved. © 1997 Bible League International