Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 138

ಸ್ತುತಿಗೀತೆ. ರಚನೆಗಾರ: ದಾವೀದ.

138 ಯೆಹೋವನೇ, ಪೂರ್ಣಹೃದಯದಿಂದ ನಿನ್ನನ್ನು ಕೊಂಡಾಡುವೆನು.
    ನಿನ್ನ ಹಾಡುಗಳನ್ನು ಎಲ್ಲಾ ದೇವರುಗಳ ಎದುರಿನಲ್ಲಿ ಹಾಡುವೆನು.
ನಾನು ನಿನ್ನ ಪರಿಶುದ್ಧಾಲಯದ ಕಡೆಗೆ ಅಡ್ಡಬೀಳುವೆನು.
    ನಾನು ನಿನ್ನ ಹೆಸರನ್ನೂ ನಿನ್ನ ಪ್ರೀತಿಯನ್ನೂ ನಿನ್ನ ನಂಬಿಗಸ್ತಿಕೆಯನ್ನೂ ಕೊಂಡಾಡುವೆನು.
ನೀನು ನಿನ್ನ ವಾಕ್ಯವನ್ನು ನೆರವೇರಿಸಿ ನಿನ್ನ ನಾಮಮಹತ್ವವನ್ನು ಹೆಚ್ಚಿಸಿರುವೆ.
ನಾನು ಸಹಾಯಕ್ಕಾಗಿ ನಿನಗೆ ಮೊರೆಯಿಟ್ಟಾಗ
    ನೀನು ನನಗೆ ಸದುತ್ತರವನ್ನು ದಯಪಾಲಿಸಿದೆ; ನನಗೆ ಬಲವನ್ನು ಅನುಗ್ರಹಿಸಿದೆ.

ಯೆಹೋವನೇ, ಭೂರಾಜರುಗಳೆಲ್ಲಾ ನಿನ್ನ ನುಡಿಗಳನ್ನು ಕೇಳಿ
    ನಿನ್ನನ್ನು ಕೊಂಡಾಡಬೇಕೆಂಬುದು ನನ್ನ ಅಪೇಕ್ಷೆ.
ಅವರೆಲ್ಲರೂ ಯೆಹೋವನ ಮಾರ್ಗವನ್ನು ಹಾಡಿ ಕೊಂಡಾಡುವರು;
    ಯಾಕೆಂದರೆ ಯೆಹೋವನ ಮಹಿಮೆಯು ಮಹತ್ವವಾದದ್ದು.
ಯೆಹೋವನೇ ಮಹೋನ್ನತನು.
    ಆದರೂ ಆತನು ದೀನರಿಗೋಸ್ಕರ ಚಿಂತಿಸುವನು.
ಗರ್ವಿಷ್ಠರ ಕಾರ್ಯಗಳು ಆತನಿಗೆ ಗೊತ್ತಿವೆ.
    ಆದರೆ ಆತನು ಅವರಿಗೆ ದೂರವಾಗಿಯೇ ಇರುತ್ತಾನೆ.
ಯೆಹೋವನೇ, ನಾನು ಆಪತ್ತಿನಲ್ಲಿದ್ದರೆ, ನನ್ನ ಪ್ರಾಣವನ್ನು ಕಾಪಾಡು.
    ನನ್ನ ವೈರಿಗಳು ನನ್ನ ಮೇಲೆ ಕೋಪಗೊಂಡಿದ್ದರೆ, ನನ್ನನ್ನು ಅವರಿಂದ ರಕ್ಷಿಸು.
ಯೆಹೋವನೇ, ನಿನ್ನ ವಾಗ್ದಾನಗಳನ್ನು ನೆರವೇರಿಸು.
    ಯೆಹೋವನೇ, ನಿನ್ನ ಪ್ರೀತಿಯು ಶಾಶ್ವತವಾದದ್ದು.
ನಮ್ಮನ್ನು ಸೃಷ್ಟಿಸಿದಾತನು ನೀನೇ. ನಮ್ಮನ್ನು ಕೈಬಿಡಬೇಡ!

ಎಸ್ತೇರಳು 3:7-15

ಅಹಷ್ವೇರೋಷನ ಆಳ್ವಿಕೆಯ ಹನ್ನೆರಡನೆಯ ವರ್ಷದ ಮೊದಲನೆ ತಿಂಗಳಾದ ನೀಸಾನ್ ತಿಂಗಳಲ್ಲಿ ಒಂದು ನಿರ್ದಿಷ್ಟ ದಿವಸಕ್ಕಾಗಿ ಹಾಮಾನನು ಚೀಟು ಹಾಕಿದನು. ಆಗ ಹನ್ನೆರಡನೆ ತಿಂಗಳಾದ ಅದಾರ್ ಮಾಸವು ಆರಿಸಲ್ಪಟ್ಟಿತು. (ಆ ದಿವಸಗಳಲ್ಲಿ ಚೀಟು ಹಾಕುವದಕ್ಕೆ “ಪೂರ್” ಎಂದು ಅನ್ನುತ್ತಿದ್ದರು.) ಹಾಮಾನನು ಅರಸನಾದ ಅಹಷ್ವೇರೋಷನ ಬಳಿಗೆ ಬಂದು, “ಅರಸನೇ, ನಿನ್ನ ಸಾಮ್ರಾಜ್ಯದ ಎಲ್ಲಾ ಸಂಸ್ಥಾನಗಳಲ್ಲಿ ಒಂದು ಜನಾಂಗದವರು ಹಬ್ಬಿರುತ್ತಾರೆ. ಇವರು ಇತರ ಎಲ್ಲಾ ಜನರಿಂದ ಪ್ರತ್ಯೇಕವಾಗಿ ಇರುತ್ತಾರೆ. ಅವರ ನೀತಿರೀತಿಗಳೆಲ್ಲಾ ಬೇರೆ ಜನರಿಗಿಂತ ವಿಭಿನ್ನವಾಗಿರುತ್ತದೆ. ಅವರು ರಾಜನ ಕಟ್ಟಳೆಗೆ ವಿಧೇಯರಾಗುವುದಿಲ್ಲ. ನಿನ್ನ ರಾಜ್ಯದಲ್ಲಿ ಅವರು ಹೀಗೆಯೇ ಇರುವದು ಒಳ್ಳೆಯದಲ್ಲ.

“ರಾಜನೇ, ನೀನು ಸಮ್ಮತಿಸುವದಾದರೆ ನನ್ನ ಸಲಹೆ ಏನೆಂದರೆ, ಆ ಜನರನ್ನು ನಿರ್ಮೂಲ ಮಾಡಲು ಅಪ್ಪಣೆ ಕೊಡು. ನಾನು ಹತ್ತು ಸಾವಿರ ಬೆಳ್ಳಿನಾಣ್ಯಗಳನ್ನು ರಾಜ ಖಜಾನೆಯಲ್ಲಿ ಹಾಕುವೆನು. ಆ ಹಣವನ್ನು ಆ ಕಾರ್ಯ ಮಾಡುವ ಜನರ ಸಂಬಳಕ್ಕಾಗಿ ವಿನಿಯೋಗಿಸಬಹುದು” ಎಂದು ಹೇಳಿದನು.

10 ಆಗ ಅರಸನು ತನ್ನ ಮುದ್ರೆಯುಂಗುರವನ್ನು ಬೆರಳಿನಿಂದ ತೆಗೆದು ಹಾಮಾನನಿಗೆ ಕೊಟ್ಟನು. ಹಾಮಾನನು ಅಗಾಗನ ವಂಶದವನಾದ ಹಮ್ಮೆದಾತನ ಮಗನು. ಈ ಹಾಮಾನನು ಯೆಹೂದ್ಯರ ಕಡುವೈರಿಯಾಗಿದ್ದನು. 11 ಅರಸನು ಹಾಮಾನನಿಗೆ, “ನಿನ್ನ ಹಣವು ನಿನ್ನ ಹತ್ರವೇ ಇರಲಿ. ಆ ಜನರನ್ನು ನಿನಗೆ ಇಷ್ಟಬಂದ ಹಾಗೆ ಮಾಡಬಹುದು” ಅಂದನು.

12 ಮೊದಲನೆ ತಿಂಗಳಿನ ಹದಿಮೂರನೇ ದಿವಸದಂದು ರಾಜಲೇಖಕರನ್ನು ಕರೆಯಿಸಿ ಹಾಮಾನನ ಆಜ್ಞೆಯನ್ನು ಆಯಾಭಾಷೆಗಳಲ್ಲಿ ಬರೆಯಿಸಿದನು. ರಾಜನ ಸಂಸ್ಥಾನಾಧಿಕಾರಿಗಳಿಗೆ, ರಾಜ್ಯಪಾಲರಿಗೆ ಮತ್ತು ವಿವಿಧ ಜನಾಂಗದ ಅಧಿಕಾರಿಗಳಿಗೆ ಅರಸನಾದ ಅಹಷ್ವೇರೋಷನ ಹೆಸರಿನಲ್ಲಿ ಬರೆದು ಅದಕ್ಕೆ ರಾಜನ ಮುದ್ರೆಯನ್ನೊತ್ತಲಾಯಿತು.

13 ರಾಜಾಜ್ಞೆಯನ್ನು ಹೊತ್ತ ಸಂದೇಶವಾಹಕರು ದೇಶದ ಎಲ್ಲಾ ಕಡೆಗಳಲ್ಲಿ ಹೊತ್ತುಕೊಂಡು ಬಂದರು. ಆ ಪತ್ರದಲ್ಲಿ ಹನ್ನೆರಡನೇ ತಿಂಗಳಿನ ಹದಿಮೂರನೇ ದಿವಸದಂದು ಆಯಾ ಪ್ರಾಂತ್ಯಗಳಲ್ಲಿರುವ ಎಲ್ಲಾ ಯೆಹೂದ್ಯರನ್ನು ಚಿಕ್ಕವರು ದೊಡ್ಡವರು ಎನ್ನದೆ ಕೊಂದು ಅವರ ವಸ್ತುಗಳನ್ನೆಲ್ಲ ಸೂರೆ ಮಾಡಬೇಕೆಂಬದಾಗಿ ಬರೆದಿತ್ತು.

14 ಈ ಪತ್ರದ ಒಂದೊಂದು ಪ್ರತಿಯು ಪ್ರತಿಯೊಂದು ಸಂಸ್ಥಾನದಲ್ಲಿ ರಾಜವಿಧಿಯೆಂದು ಎಲ್ಲಾ ಜನರಲ್ಲಿ ಪ್ರಕಟಿಸಲ್ಪಡಬೇಕು ಅಲ್ಲದೆ ಆ ದಿನಕ್ಕಾಗಿ ಎಲ್ಲಾ ಜನರೂ ಸಿದ್ಧರಾಗಿರಬೇಕೆಂಬುದಾಗಿ ಬರೆದಿತ್ತು. 15 ರಾಜನ ಆಜ್ಞೆಯ ಪ್ರಕಾರ ಸಂದೇಶವಾಹಕರು ದೇಶದೇಶಗಳಿಗೆ ಚದರಿದರು. ರಾಜಧಾನಿಯಾದ ಶೂಷನ್ ನಗರದಲ್ಲೂ ಆ ಸಂದೇಶವನ್ನು ಪ್ರಕಟಿಸಲಾಯಿತು. ಅರಸನೂ ಹಾಮಾನನೂ ಮದ್ಯಪಾನ ಮಾಡಲು ಕುಳಿತರು. ಆದರೆ ರಾಜಧಾನಿಯಲ್ಲಿನ ಜನರು ಗಲಿಬಿಲಿಗೊಂಡಿದ್ದರು.

ಅಪೊಸ್ತಲರ ಕಾರ್ಯಗಳು 2:22-36

22 “ಯೆಹೂದ್ಯರೇ, ಈ ಮಾತುಗಳನ್ನು ಕೇಳಿರಿ: ನಜರೇತಿನ ಯೇಸು ಬಹು ವಿಶೇಷವಾದ ವ್ಯಕ್ತಿ. ದೇವರು ತಾನು ಯೇಸುವಿನ ಮೂಲಕ ಮಾಡಿದ ಶಕ್ತಿಯುತವಾದ ಮತ್ತು ಅದ್ಭುತವಾದ ಕಾರ್ಯಗಳ ಮೂಲಕ ಇದನ್ನು ಸ್ಪಷ್ಟವಾಗಿ ನಿರೂಪಿಸಿದ್ದಾನೆ. ಈ ಸಂಗತಿಗಳನ್ನು ನೀವೆಲ್ಲರೂ ನೋಡಿದಿರಿ. ಆದ್ದರಿಂದ ಇದು ಸತ್ಯವೆಂದು ನಿಮಗೆ ಗೊತ್ತಿದೆ. 23 ಯೇಸುವನ್ನು ನಿಮಗೆ ಒಪ್ಪಿಸಲಾಯಿತು. ನೀವು ಕೆಟ್ಟಜನರ ಸಹಾಯದಿಂದ ಆತನನ್ನು ಶಿಲುಬೆಗೇರಿಸಿದಿರಿ. ಆದರೆ ಇವುಗಳೆಲ್ಲಾ ಸಂಭವಿಸುತ್ತವೆಯೆಂದು ದೇವರಿಗೆ ಗೊತ್ತಿತ್ತು. ಇದು ದೇವರ ಯೋಜನೆ. ದೇವರು ಬಹು ಕಾಲದ ಹಿಂದೆಯೇ ಈ ಯೋಜನೆಯನ್ನು ಮಾಡಿದನು. 24 ಯೇಸು ಮರಣವೇದನೆಯನ್ನು ಅನುಭವಿಸಿದನು. ಆದರೆ ದೇವರು ಆತನನ್ನು ಬಿಡಿಸಿದನು. ದೇವರು ಯೇಸುವನ್ನು ಸತ್ತವರೊಳಗಿಂದ ಜೀವಂತವಾಗಿ ಎಬ್ಬಿಸಿದನು. ಮರಣವು ಯೇಸುವನ್ನು ಹಿಡಿದುಕೊಳ್ಳಲಾಗಲಿಲ್ಲ. 25 ಯೇಸುವಿನ ಬಗ್ಗೆ ದಾವೀದನು ಹೀಗೆ ಹೇಳಿದ್ದಾನೆ:

‘ಪ್ರಭುವು ಯಾವಾಗಲೂ ನನ್ನ ಮುಂದೆ ಇರುವುದನ್ನು ನಾನು ನೋಡುತ್ತಿದ್ದೆನು;
    ನನ್ನನ್ನು ಸುರಕ್ಷಿತವಾಗಿಡಲು ಆತನು ನನ್ನ ಬಲಗಡೆಯಲ್ಲಿದ್ದಾನೆ.
26 ಆದ್ದರಿಂದ ನನ್ನ ಹೃದಯವು ಹರ್ಷಿಸುತ್ತದೆ.
    ನನ್ನ ಬಾಯಿ ಆನಂದದಿಂದ ಮಾತಾಡುತ್ತದೆ.
ಹೌದು, ನನ್ನ ದೇಹವು ಸಹ ನಿರೀಕ್ಷೆಯಿಂದ ಜೀವಿಸುವುದು;
27     ಯಾಕೆಂದರೆ ನೀನು ನನ್ನ ಜೀವಾತ್ಮವನ್ನು ಪಾತಾಳದಲ್ಲಿ ತೊರೆದುಬಿಡುವುದಿಲ್ಲ.
    ನಿನ್ನ ಪರಿಶುದ್ಧನ ದೇಹವು ಸಮಾಧಿಯಲ್ಲಿ ಕೊಳೆಯಲು ನೀನು ಅವಕಾಶ ಕೊಡುವುದಿಲ್ಲ.
28 ಹೇಗೆ ಜೀವಿಸಬೇಕೆಂಬುದನ್ನು ನೀನು ನನಗೆ ಉಪದೇಶಿಸಿದೆ.
    ನಿನ್ನ ಪ್ರಸನ್ನತೆಯು ನನ್ನಲ್ಲಿ ಮಹಾ ಆನಂದವನ್ನು ಉಂಟುಮಾಡುವುದು.’(A)

29 “ನನ್ನ ಸಹೋದರರೇ, ನಮ್ಮ ಪಿತೃವಾದ ದಾವೀದನ ಬಗ್ಗೆ ನಾನು ನಿಮಗೆ ನಿಜವಾಗಿಯೂ ಹೇಳಬಲ್ಲೆನು. ಅವನು ಸತ್ತುಹೋದನು ಮತ್ತು ಅವನಿಗೆ ಸಮಾಧಿಯಾಯಿತು. ಅವನ ಸಮಾಧಿಯು ನಮ್ಮ ಮಧ್ಯದಲ್ಲಿ ಇಂದಿನವರೆಗೂ ಇದೆ. 30 ದಾವೀದನು ಒಬ್ಬ ಪ್ರವಾದಿಯಾಗಿದ್ದನು[a] ಮತ್ತು ‘ನಿನ್ನ ಕುಟುಂಬದ ಒಬ್ಬನನ್ನು ನಿನ್ನಂತೆಯೇ ರಾಜನನ್ನಾಗಿ ಮಾಡುವೆನು’ ಎಂದು ದೇವರು ಅವನಿಗೆ ಆಣೆಯಿಟ್ಟು ವಾಗ್ದಾನ ಮಾಡಿದ್ದು ಅವನಿಗೆ ಗೊತ್ತಿತ್ತು. 31 ಅದು ನೆರವೇರುವುದಕ್ಕಿಂತ ಮೊದಲೇ ದಾವೀದನಿಗೆ ತಿಳಿದಿತ್ತು. ಆದಕಾರಣ ದಾವೀದನು ಪುನರುತ್ಥಾನ ಹೊಂದುವ ಕ್ರಿಸ್ತನ ಬಗ್ಗೆ,

‘ಆತನನ್ನು ಪಾತಾಳದಲ್ಲಿ ಬಿಡಲ್ಪಡಲಿಲ್ಲ.
ಆತನ ದೇಹವು ಸಮಾಧಿಯಲ್ಲಿ ಕೊಳೆಯಲಿಲ್ಲ’

ಎಂದಿದ್ದಾನೆ. 32 ಆದ್ದರಿಂದ ದೇವರು ಸತ್ತವರೊಳಗಿಂದ ಜೀವಂತವಾಗಿ ಎಬ್ಬಿಸಿದ್ದು ಯೇಸುವನ್ನೇ ಹೊರತು ದಾವೀದನನ್ನಲ್ಲ! ಇದಕ್ಕೆ ನಾವೆಲ್ಲರೂ ಸಾಕ್ಷಿಗಳಾಗಿದ್ದೇವೆ. ನಾವು ಆತನನ್ನು ಕಂಡೆವು! 33 ಯೇಸು ಪರಲೋಕಕ್ಕೆ ಎತ್ತಲ್ಪಟ್ಟನು. ಈಗ ಯೇಸು ದೇವರೊಂದಿಗಿದ್ದಾನೆ, ದೇವರ ಬಲಗಡೆಯಲ್ಲಿದ್ದಾನೆ. ಈಗ ತಂದೆಯು (ದೇವರು) ಪವಿತ್ರಾತ್ಮನನ್ನು ಯೇಸುವಿಗೆ ಕೊಟ್ಟಿದ್ದಾನೆ. ಪವಿತ್ರಾತ್ಮನನ್ನು ಕೊಡುವುದಾಗಿ ದೇವರು ವಾಗ್ದಾನ ಮಾಡಿದ್ದನು. ಆದ್ದರಿಂದ ಯೇಸು ಈಗ ಆ ಆತ್ಮನನ್ನು ಸುರಿಸಿದ್ದಾನೆ. ನೀವು ನೋಡುತ್ತಿರುವುದು ಮತ್ತು ಕೇಳುತ್ತಿರುವುದು ಇದನ್ನೇ. 34-35 ಪರಲೋಕಕ್ಕೆ ಎತ್ತಲ್ಪಟ್ಟವನು ದಾವೀದನಲ್ಲ, ಯೇಸುವೇ. ದಾವೀದನೇ ಅದರ ಬಗ್ಗೆ ಹೇಳುತ್ತಾ,

‘ಪ್ರಭುವು (ದೇವರು) ನನ್ನ ಪ್ರಭುವಿಗೆ,
ನಾನು ನಿನ್ನ ಶತ್ರುಗಳನ್ನು ನಿನ್ನ ಪಾದಗಳಿಗೆ ಪೀಠವಾಗಿ ಮಾಡುವ ತನಕ
    ನನ್ನ ಬಲಗಡೆಯಲ್ಲಿ ಕುಳಿತುಕೊ ಎಂದು ತಿಳಿಸಿದನು’ ಎಂದಿದ್ದಾನೆ.(B)

36 “ಆದ್ದರಿಂದ ಯೆಹೂದ್ಯರೆಲ್ಲರೂ ಇದನ್ನು ನಿಜವಾಗಿಯೂ ತಿಳಿದುಕೊಳ್ಳಬೇಕು. ದೇವರು ಯೇಸುವನ್ನು ಪ್ರಭುವನ್ನಾಗಿಯೂ ಕ್ರಿಸ್ತನನ್ನಾಗಿಯೂ ಮಾಡಿದ್ದಾನೆ. ನೀವು ಶಿಲುಬೆಗೇರಿಸಿದ ವ್ಯಕ್ತಿಯೇ ಆತನು!”

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International