Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 119:97-104

97 ನಿನ್ನ ಉಪದೇಶಗಳು ನನಗೆ ಪ್ರಿಯವಾಗಿವೆ;
    ದಿನವೆಲ್ಲಾ ಅವುಗಳನ್ನೇ ಧ್ಯಾನಿಸುವೆನು.
98 ನಿನ್ನ ಆಜ್ಞೆಗಳು ನನ್ನನ್ನು ನನ್ನ ಶತ್ರುಗಳಿಗಿಂತಲೂ ಹೆಚ್ಚು ಜ್ಞಾನಿಯನ್ನಾಗಿ ಮಾಡುತ್ತವೆ.
    ಅವು ಯಾವಾಗಲೂ ನನ್ನೊಂದಿಗಿವೆ.
99 ನಿನ್ನ ಒಡಂಬಡಿಕೆಯನ್ನು ನಾನು ಧ್ಯಾನಿಸುತ್ತಿರುವುದರಿಂದ
    ನನ್ನ ಉಪಾಧ್ಯಾಯರಿಗಿಂತ ಜ್ಞಾನಿಯಾಗಿದ್ದೇನೆ.
100 ನಾನು ನಿನ್ನ ಆಜ್ಞೆಗಳನ್ನು ಅನುಸರಿಸುವುದರಿಂದ
    ಹಿರಿಯರಿಗಿಂತ ವಿವೇಕಿಯಾಗಿದ್ದೇನೆ.
101 ನನ್ನ ಪಾದಗಳು ಕೆಟ್ಟದಾರಿಗೆ ಹೋಗದಂತೆ ನನ್ನನ್ನು ಕಾಪಾಡು,
    ಆಗ, ನಾನು ನಿನ್ನ ವಾಕ್ಯವನ್ನೇ ಅನುಸರಿಸುವೆನು.
102 ನೀನೇ ನನ್ನ ಉಪಾಧ್ಯಾಯ.
    ಆದ್ದರಿಂದ ನಿನ್ನ ಕಟ್ಟಳೆಗಳಿಗೆ ವಿಧೇಯನಾಗಿಯೇ ಇರುವೆನು.
103 ನಿನ್ನ ನುಡಿಗಳು ನನ್ನ ಬಾಯಲ್ಲಿ
    ಜೇನಿಗಿಂತಲೂ ಸಿಹಿಯಾಗಿವೆ.
104 ನಿನ್ನ ಉಪದೇಶಗಳು ನನ್ನನ್ನು ಜ್ಞಾನಿಯನ್ನಾಗಿ ಮಾಡುತ್ತವೆ,
    ಆದ್ದರಿಂದ ನಾನು ದುರುಪದೇಶಗಳನ್ನು ದ್ವೇಷಿಸುವೆನು.

ವಿಮೋಚನಕಾಂಡ 18:1-12

ಮೋಶೆಯ ಮಾವನಿಂದ ಸಲಹೆ

18 ಮೋಶೆಯ ಮಾವನಾದ ಇತ್ರೋನನು ಮಿದ್ಯಾನಿನಲ್ಲಿ ಯಾಜಕನಾಗಿದ್ದನು. ಮೋಶೆಗೆ ಮತ್ತು ಇಸ್ರೇಲರಿಗೆ ದೇವರು ಅನೇಕ ರೀತಿಗಳಲ್ಲಿ ಸಹಾಯ ಮಾಡಿದ್ದರ ಬಗ್ಗೆ, ಯೆಹೋವನು ಇಸ್ರೇಲರನ್ನು ಈಜಿಪ್ಟಿನಿಂದ ಹೊರಗೆ ನಡಿಸಿದ್ದರ ಬಗ್ಗೆ ಇತ್ರೋನನು ಕೇಳಿದನು. ಆದ್ದರಿಂದ ಅವನು ಮೋಶೆಯ ಹೆಂಡತಿಯಾದ ಚಿಪ್ಪೋರಳನ್ನು ಕರೆದುಕೊಂಡು ಬಂದನು. (ಚಿಪ್ಪೋರಳನ್ನು ಮೋಶೆಯು ಮನೆಗೆ ಕಳುಹಿಸಿದ್ದರಿಂದ ಆಕೆಯು ಮೋಶೆಯ ಸಂಗಡ ಇರಲಿಲ್ಲ.) ಇತ್ರೋನನು ಮೋಶೆಯ ಇಬ್ಬರು ಗಂಡುಮಕ್ಕಳನ್ನೂ ಕರೆದುಕೊಂಡು ಬಂದನು. ಮೊದಲಿನ ಮಗನ ಹೆಸರು ಗೇರ್ಷೋಮ್. ಅವನು ಹುಟ್ಟಿದಾಗ ಮೋಶೆಯು, “ನಾನು ಪರದೇಶದಲ್ಲಿ ಅಪರಿಚಿತನಾಗಿದ್ದೇನೆ” ಎಂದು ಹೇಳಿ ಆ ಹೆಸರನ್ನು ಇಟ್ಟನು. ಇನ್ನೊಬ್ಬ ಮಗನ ಹೆಸರು ಎಲೀಯೆಜೆರ್. ಇವನು ಹುಟ್ಟಿದಾಗ ಮೋಶೆಯು, “ನನ್ನ ತಂದೆಯ ದೇವರು ನನಗೆ ಸಹಾಯ ಮಾಡಿ ಈಜಿಪ್ಟಿನ ಅರಸನಿಂದ ರಕ್ಷಿಸಿದನು” ಎಂದು ಹೇಳಿ ಆ ಹೆಸರನ್ನು ಇಟ್ಟನು. ಆದ್ದರಿಂದ ಮೋಶೆಯು ಮರುಭೂಮಿಯಲ್ಲಿ ದೇವರ ಬೆಟ್ಟವಾದ ಸೀನಾಯ್ ಬೆಟ್ಟದ ಬಳಿ ತಂಗಿದ್ದಾಗ ಇತ್ರೋನನು ಮೋಶೆಯ ಬಳಿಗೆ ಹೋದನು. ಇತ್ರೋನನ ಜೊತೆಯಲ್ಲಿ ಮೋಶೆಯ ಹೆಂಡತಿ ಮತ್ತು ಅವನ ಇಬ್ಬರು ಗಂಡುಮಕ್ಕಳು ಇದ್ದರು.

ಇತ್ರೋನನು ಮೋಶೆಗೆ, “ನಾನು ನಿನ್ನ ಮಾವನಾದ ಇತ್ರೋನ. ನಾನು ನಿನ್ನ ಹೆಂಡತಿಯನ್ನು ಮತ್ತು ಆಕೆಯ ಇಬ್ಬರು ಗಂಡುಮಕ್ಕಳನ್ನು ನಿನ್ನ ಬಳಿಗೆ ಕರೆದುಕೊಂಡು ಬರುತ್ತಿದ್ದೇನೆ” ಎಂಬ ಸಂದೇಶವನ್ನು ಕಳುಹಿಸಿದನು.

ಆದ್ದರಿಂದ ಮೋಶೆ ತನ್ನ ಮಾವನನ್ನು ಭೇಟಿಯಾಗಲು ಹೊರಗೆ ಹೋದನು. ಮೋಶೆ ಅವನ ಮುಂದೆ ತಲೆಬಾಗಿ ಅವನಿಗೆ ಮುದ್ದಿಟ್ಟನು. ಅವರಿಬ್ಬರು ಪರಸ್ಪರ ಕ್ಷೇಮ ಸಮಾಚಾರವನ್ನು ವಿಚಾರಿಸಿಕೊಂಡರು. ಬಳಿಕ ಅವರು ಹೆಚ್ಚು ಮಾತಾಡಲು ಮೋಶೆಯ ಡೇರೆಯೊಳಕ್ಕೆ ಹೋದರು. ಯೆಹೋವನು ಇಸ್ರೇಲರಿಗೆ ಮಾಡಿದ ಪ್ರತಿಯೊಂದು ಸಂಗತಿಯನ್ನು ಮೋಶೆ ಇತ್ರೋನನಿಗೆ ಹೇಳಿದನು. ಯೆಹೋವನು ಫರೋಹನಿಗೆ ಮತ್ತು ಈಜಿಪ್ಟಿನವರಿಗೆ ಮಾಡಿದ ಸಂಗತಿಗಳ ಬಗ್ಗೆ ಮೋಶೆಯು ಹೇಳಿದನು. ದಾರಿಯ ಉದ್ದಕ್ಕೂ ತಮಗೆ ಬಂದೊದಗಿದ ಎಲ್ಲಾ ಸಮಸ್ಯೆಗಳ ಬಗ್ಗೆ ಮತ್ತು ತೊಂದರೆ ಬಂದೊದಗಿದ ಪ್ರತಿ ಸಾರಿಯೂ ಯೆಹೋವನು ಇಸ್ರೇಲರನ್ನು ಹೇಗೆ ರಕ್ಷಿಸಿದನೆಂಬುದನ್ನು ಮೋಶೆಯು ತನ್ನ ಮಾವನಿಗೆ ತಿಳಿಸಿದನು.

ಯೆಹೋವನು ಇಸ್ರೇಲರಿಗೆ ಮಾಡಿದ ಒಳ್ಳೆಯ ಸಂಗತಿಗಳಿಗಾಗಿಯೂ ಈಜಿಪ್ಟಿನವರಿಂದ ಇಸ್ರೇಲರನ್ನು ಯೆಹೋವನು ಬಿಡುಗಡೆಗೊಳಿಸಿದ್ದಕ್ಕಾಗಿಯೂ ಇತ್ರೋನನು ಬಹಳ ಸಂತೋಷಪಟ್ಟನು. 10 ಇತ್ರೋನನು,

“ಯೆಹೋವನನ್ನು ಸ್ತುತಿಸಿರಿ!
    ಆತನು ನಿಮ್ಮನ್ನು ಫರೋಹನಿಂದಲೂ
    ಈಜಿಪ್ಟಿನಿಂದಲೂ ರಕ್ಷಿಸಿದನು.
11 ಈಜಿಪ್ಟಿನವರು ತಾವು ಇಸ್ರೇಲರಿಗಿಂತಲೂ ಉತ್ತಮರೆಂದು ಭಾವಿಸಿಕೊಂಡಿದ್ದರು.
ಆದರೆ ಯೆಹೋವನು ಅವರನ್ನು ತಗ್ಗಿಸಿದ್ದರಿಂದ ಎಲ್ಲಾ ದೇವರುಗಳಲ್ಲಿ ಆತನೇ ದೊಡ್ಡವನೆಂದು ಈಗ ನಾನು ತಿಳಿದುಕೊಂಡೆನು”

ಎಂದು ಹೇಳಿದನು.

12 ಇತ್ರೋನನು ದೇವರಿಗೆ ಯಜ್ಞಗಳನ್ನು, ಕಾಣಿಕೆಗಳನ್ನು ಸಮರ್ಪಿಸಿದನು. ಆಗ ಆರೋನನು ಮತ್ತು ಇಸ್ರೇಲರ ಎಲ್ಲಾ ಹಿರಿಯರು ಮೋಶೆಯ ಮಾವನಾದ ಇತ್ರೋನನೊಡನೆ ದೇವರ ಸನ್ನಿಧಿಯಲ್ಲಿ ಊಟಮಾಡಲು ಬಂದರು.

ಕೊಲೊಸ್ಸೆಯವರಿಗೆ 1:27-2:7

27 ಮಹಿಮಾತಿಶಯವಾದ ಈ ಸತ್ಯವನ್ನು ಎಲ್ಲಾ ಜನರಿಗೆ ತಿಳಿಸಲು ದೇವರು ತೀರ್ಮಾನಿಸಿದನು. ಈ ಮಹಾಸತ್ಯವು ಎಲ್ಲಾ ಜನರಿಗಾಗಿ ಪ್ರಕಟವಾಯಿತು. ನಿಮ್ಮಲ್ಲಿರುವ ಕ್ರಿಸ್ತನೇ ಆ ಸತ್ಯವಾಗಿದ್ದಾನೆ. ದೇವರ ಮಹಿಮೆಯಲ್ಲಿ ಪಾಲುಹೊಂದಲು ಆತನೇ ನಮಗಿರುವ ಏಕೈಕ ನಿರೀಕ್ಷೆ. 28 ಆದ್ದರಿಂದಲೇ ನಾವು ಕ್ರಿಸ್ತನ ಬಗ್ಗೆ ಜನರಿಗೆ ತಿಳಿಸುವವರಾಗಿದ್ದೇವೆ. ಪ್ರತಿಯೊಬ್ಬರನ್ನೂ ಬಲಪಡಿಸುವುದಕ್ಕಾಗಿ ಪ್ರತಿಯೊಬ್ಬರಿಗೂ ಉಪದೇಶಿಸುವುದಕ್ಕಾಗಿ ನಮ್ಮ ಜ್ಞಾನವನ್ನೆಲ್ಲಾ ಉಪಯೋಗಿಸುತ್ತೇವೆ. ಪ್ರತಿಯೊಬ್ಬರನ್ನು ಕ್ರಿಸ್ತನಲ್ಲಿ ಸಂಪೂರ್ಣ ಆತ್ಮಿಕರನ್ನಾಗಿ ಮಾಡಿ ದೇವರ ಸನ್ನಿಧಿಗೆ ತರಲು ಪ್ರಯತ್ನಿಸುತ್ತೇವೆ. 29 ಕ್ರಿಸ್ತನು ನನಗೆ ನೀಡಿರುವ ಬಲದಿಂದ ಇದಕ್ಕೋಸ್ಕರವೇ ಕೆಲಸ ಮಾಡುತ್ತೇನೆ ಮತ್ತು ಹೋರಾಡುತ್ತೇನೆ. ಆ ಬಲವೇ ನನ್ನ ಜೀವನದಲ್ಲಿ ಕಾರ್ಯಮಾಡುತ್ತಿದೆ.

ನಿಮಗೆ ಸಹಾಯ ಮಾಡಲು ನಾನು ಬಹಳವಾಗಿ ಮಾಡುತ್ತಿರುವ ಪ್ರಯತ್ನ ನಿಮಗೆ ತಿಳಿದಿರಬೇಕೆಂಬುದು ನನ್ನ ಅಪೇಕ್ಷೆ ಇದಲ್ಲದೆ ಲವೊದಿಕೀಯದಲ್ಲಿರುವವರಿಗೆ ಮತ್ತು ನನ್ನನ್ನು ಎಂದೂ ನೋಡಿಲ್ಲದವರಿಗೆ ಸಹ ಸಹಾಯ ಮಾಡಲು ಪ್ರಯತ್ನಿಸುತ್ತಿದ್ದೇನೆ. ಅವರೆಲ್ಲರೂ ಆಂತರ್ಯದಲ್ಲಿ ಉತ್ತೇಜಿತರಾಗಿ ಪ್ರೀತಿಯಿಂದ ಒಂದಾಗಿರಬೇಕೆಂದು ಮತ್ತು ತಿಳುವಳಿಕೆಯಿಂದ ಬರುವ ದೃಢನಂಬಿಕೆಯಲ್ಲಿ ಶ್ರೀಮಂತರಾಗಿರಬೇಕೆಂದು ಆಶಿಸುತ್ತೇನೆ. ಅಂದರೆ ದೇವರ ನಿಗೂಢ ಸತ್ಯವನ್ನು ಅವರು ಸಂಪೂರ್ಣವಾಗಿ ತಿಳಿದುಕೊಳ್ಳಬೇಕು. ಸ್ವತಃ ಕ್ರಿಸ್ತನೇ ಆ ಸತ್ಯ. ಕ್ರಿಸ್ತನಲ್ಲಿ ಸರ್ವಜ್ಞಾನವು ಮತ್ತು ತಿಳುವಳಿಕೆಯು ಬಚ್ಚಿಟ್ಟಿರುವ ನಿಕ್ಷೇಪಗಳಂತಿವೆ.

ಯಾವನೂ ನಿಮ್ಮನ್ನು ಸರಿಯೆನಿಸುವ ಸುಳ್ಳು ಮಾತುಗಳಿಂದ ಮೋಸಗೊಳಿಸದಂತೆ ಈ ಸಂಗತಿಗಳನ್ನು ನಿಮಗೆ ಹೇಳಿದ್ದೇನೆ. ಅಲ್ಲಿ ನಾನು ನಿಮ್ಮೊಡನೆ ಇರದಿದ್ದರೂ ನನ್ನ ಮನಸ್ಸು ನಿಮ್ಮೊಡನಿರುತ್ತದೆ. ನಿಮ್ಮ ಕ್ರಮಬದ್ಧವಾದ ನಡತೆಯನ್ನು ನೋಡಲು ಮತ್ತು ಕ್ರಿಸ್ತನಲ್ಲಿ ಇಟ್ಟಿರುವ ದೃಢನಂಬಿಕೆಯನ್ನು ಅರಿಯಲು ಬಹಳ ಸಂತೋಷಪಡುತ್ತೇನೆ.

ಕ್ರಿಸ್ತನಲ್ಲಿ ನೆಲೆಗೊಂಡಿರಿ

ಪ್ರಭುವಾದ ಕ್ರಿಸ್ತ ಯೇಸುವನ್ನು ನೀವು ಸ್ವೀಕರಿಸಿಕೊಂಡಿರುವುದರಿಂದ ಆತನಲ್ಲಿ ನೆಲೆಗೊಂಡಿದ್ದು ಜೀವಿಸಿರಿ. ಕ್ರಿಸ್ತನನ್ನು ಮಾತ್ರ ನೀವು ಅವಲಂಬಿಸಬೇಕು. ಜೀವವೂ ಶಕ್ತಿಯೂ ಆತನಿಂದಲೇ ಬರುತ್ತವೆ. ನಿಮಗೆ ಸತ್ಯವನ್ನು ಉಪದೇಶಿಸಲಾಗಿದೆ. ನೀವು ಆ ಸತ್ಯ ಬೋಧನೆಯಲ್ಲಿ ದೃಢವಾಗಿ ನೆಲೆಗೊಂಡಿರಬೇಕು ಮತ್ತು ದೇವರಿಗೆ ಸಲ್ಲತಕ್ಕ ಕೃತಜ್ಞತಾಸ್ತುತಿಯಿಂದ ತುಂಬಿದವರಾಗಿರಬೇಕು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International