Revised Common Lectionary (Complementary)
ರಚನೆಗಾರ: ದಾವೀದ.
15 ಯೆಹೋವನೇ, ನಿನ್ನ ಪವಿತ್ರ ಗುಡಾರದಲ್ಲಿ ಎಂಥವನು ವಾಸಿಸಬಲ್ಲನು?
ನಿನ್ನ ಪವಿತ್ರ ಪರ್ವತದ ಮೇಲೆ ಎಂಥವನು ನೆಲಸಬಲ್ಲನು?
2 ಅವನು ನಿರ್ದೋಷಿಯೂ ಒಳ್ಳೆಯ ಕಾರ್ಯಗಳನ್ನು ಮಾಡುವವನೂ
ಹೃದಯದಿಂದ ಸತ್ಯವನ್ನು ಮಾತಾಡುವವನೂ ಆಗಿರಬೇಕು.
3 ಅವನು ಚಾಡಿ ಹೇಳದವನೂ ನೆರೆಯವರಿಗೆ ಕೇಡನ್ನು ಮಾಡದವನೂ
ತನ್ನ ಸ್ವಂತ ಕುಟುಂಬದವರನ್ನು ನಿಂದಿಸದವನೂ ಆಗಿರಬೇಕು.
4 ಅವನು ದೇವದೂಷಕರನ್ನು ತಿರಸ್ಕರಿಸುವವನೂ
ಯೆಹೋವನಲ್ಲಿ ಭಯಭಕ್ತಿಯುಳ್ಳವರನ್ನು ಗೌರವಿಸುವವನೂ
ತನಗೆ ತೊಂದರೆಯಾದರೂ
ಕೊಟ್ಟ ಮಾತಿಗೆ ತಪ್ಪದವನೂ ಆಗಿರಬೇಕು.
5 ಅವನು ಕೊಟ್ಟ ಸಾಲಕ್ಕೆ ಬಡ್ಡಿ ಕೇಳದವನೂ
ನಿರಪರಾಧಿಗೆ ಕೇಡುಮಾಡಲು ಲಂಚ ತೆಗೆದುಕೊಳ್ಳದವನೂ ಆಗಿರಬೇಕು.
ಹೀಗೆ ಜೀವಿಸುವವನು
ದೇವರಿಗೆ ಸಮೀಪವಾಗಿಯೇ ಇರುತ್ತಾನೆ.[a]
ಈಜಿಪ್ಟಿನಲ್ಲಿ ಅಬ್ರಾಮ
10 ಈ ಕಾಲದಲ್ಲಿ ಭೂಮಿಯು ಒಣಗಿಹೋಗಿತ್ತು; ಮಳೆ ಇರಲಿಲ್ಲ. ಅಲ್ಲಿ ಆಹಾರವನ್ನು ಬೆಳೆಯಲು ಸಾಧ್ಯವಿರಲಿಲ್ಲ. ಆದ್ದರಿಂದ ಅಬ್ರಾಮನು ವಾಸಿಸುವುದಕ್ಕಾಗಿ ಈಜಿಪ್ಟಿಗೆ ಹೋದನು. 11 ತನ್ನ ಹೆಂಡತಿ ಸಾರಯಳು ರೂಪವತಿಯಾಗಿರುವುದು ಅಬ್ರಾಮನಿಗೆ ತಿಳಿದಿತ್ತು. ಆದ್ದರಿಂದ ಈಜಿಪ್ಟಿಗೆ ಹೋಗುವ ಮೊದಲೇ, ಅಬ್ರಾಮನು ಸಾರಯಳಿಗೆ, “ನೀನು ರೂಪವತಿಯೆಂದು ನನಗೆ ಗೊತ್ತಿದೆ. 12 ಈಜಿಪ್ಟಿನ ಗಂಡಸರು ನಿನ್ನನ್ನು ನೋಡಿ, ‘ಈಕೆ ಇವನ ಹೆಂಡತಿ’ ಎಂದು ತಿಳಿದು ನಿನ್ನನ್ನು ಪಡೆದುಕೊಳ್ಳುವುದಕ್ಕಾಗಿ ನನ್ನನ್ನು ಕೊಂದು ನಿನ್ನನ್ನು ಜೀವಂತವಾಗಿ ಉಳಿಸುವರು. 13 ಆದ್ದರಿಂದ ನೀನು ನನಗೆ ತಂಗಿಯಾಗಬೇಕೆಂದು ಜನರಿಗೆ ಹೇಳು. ಆಗ ಅವರು ನನ್ನನ್ನು ನಿನ್ನ ಸಹೋದರನೆಂದು ಭಾವಿಸಿ ನನ್ನನ್ನು ಕೊಲ್ಲದೆ ನನಗೆ ದಯೆತೋರುವರು. ಹೀಗೆ ನೀನು ನನ್ನ ಪ್ರಾಣ ಉಳಿಸುವೆ” ಎಂದು ಹೇಳಿದನು.
14 ಅಂತೆಯೇ ಅಬ್ರಾಮನು ಈಜಿಪ್ಟಿಗೆ ಹೋದನು. ಈಜಿಪ್ಟಿನ ಗಂಡಸರು ಸಾರಯಳನ್ನು ಕಂಡು ಈಕೆ ತುಂಬ ರೂಪವತಿ ಎಂದರು. 15 ಈಜಿಪ್ಟಿನ ಕೆಲವು ನಾಯಕರು ಸಹ ಆಕೆಯನ್ನು ಕಂಡರು. ಅವರು ಫರೋಹನ ಬಳಿಗೆ ಹೋಗಿ ಆಕೆಯ ಅಮೋಘ ಸೌಂದರ್ಯವನ್ನು ತಿಳಿಸಿದರು. ಬಳಿಕ ಆ ನಾಯಕರು ಸಾರಯಳನ್ನು ಫರೋಹನ ಬಳಿಗೆ ಕರೆದೊಯ್ದರು. 16 ಅಬ್ರಾಮನು ಸಾರಯಳ ಸಹೋದರನೆಂದು ಭಾವಿಸಿ ಫರೋಹನು ಅಬ್ರಾಮನಿಗೆ ದಯೆತೋರಿದನು. ಫರೋಹನು ಅಬ್ರಾಮನಿಗೆ ದನಕುರಿಗಳನ್ನೂ ಕತ್ತೆಗಳನ್ನೂ ಕೊಟ್ಟನು. ಅಲ್ಲದೆ ಅಬ್ರಾಮನಿಗೆ ದಾಸದಾಸಿಯರನ್ನೂ ಒಂಟೆಗಳನ್ನೂ ಕೊಟ್ಟನು.
17 ಫರೋಹನು ಅಬ್ರಾಮನ ಹೆಂಡತಿಯನ್ನು ತೆಗೆದುಕೊಂಡದ್ದರಿಂದ ಯೆಹೋವನು ಫರೋಹನಿಗೂ ಅವನ ಮನೆಯಲ್ಲಿದ್ದವರಿಗೂ ಭಯಂಕರವಾದ ರೋಗಗಳನ್ನು ಬರಮಾಡಿದನು. 18 ಆಗ ಫರೋಹನು ಅಬ್ರಾಮನನ್ನು ಕರೆಯಿಸಿ, “ನೀನು ನನಗೆ ತುಂಬ ಕೆಟ್ಟದ್ದನ್ನು ಮಾಡಿರುವೆ; ಸಾರಯಳು ನಿನಗೆ ಹೆಂಡತಿಯಾಗಬೇಕೆಂದು ಯಾಕೆ ತಿಳಿಸಲಿಲ್ಲ? 19 ‘ಈಕೆ ನನಗೆ ತಂಗಿಯಾಗಬೇಕು’ ಎಂದು ಯಾಕೆ ಹೇಳಿದೆ? ನೀನು ಹೀಗೆ ಹೇಳಿದ್ದರಿಂದ ನಾನು ಆಕೆಯನ್ನು ನನ್ನ ಹೆಂಡತಿಯಾಗಲಿಕ್ಕೆ ತೆಗೆದುಕೊಂಡೆ. ಆದರೆ ಈಗ ನಾನು ನಿನ್ನ ಹೆಂಡತಿಯನ್ನು ಮತ್ತೆ ನಿನಗೇ ಕೊಡುತ್ತೇನೆ. ನೀನು ಆಕೆಯನ್ನು ನಿನ್ನೊಂದಿಗೆ ಕರೆದುಕೊಂಡು ಹೊರಟುಹೋಗು” ಎಂದು ಹೇಳಿದನು. 20 ಆಮೇಲೆ ಫರೋಹನು ತನ್ನ ಜನರಿಗೆ ಅಬ್ರಾಮನನ್ನು ಈಜಿಪ್ಟಿನಿಂದ ಕಳುಹಿಸಿಕೊಡಬೇಕೆಂದು ಆಜ್ಞಾಪಿಸಿದನು. ಆದ್ದರಿಂದ ಅಬ್ರಾಮನು ಮತ್ತು ಅವನ ಹೆಂಡತಿ ಆ ಸ್ಥಳದಿಂದ ಹೊರಟುಹೋದರು; ಅವರು ತಮ್ಮೊಡನೆ ಇದ್ದವುಗಳನ್ನೆಲ್ಲ ತೆಗೆದುಕೊಂಡು ಹೋದರು.
5 ಪ್ರತಿಯೊಬ್ಬ ಯೆಹೂದ್ಯ ಪ್ರಧಾನಯಾಜಕನೂ ಮನುಷ್ಯರೊಳಗಿಂದ ಆರಿಸಲ್ಪಟ್ಟು ದೇವರಿಗೆ ಸಂಬಂಧಿಸಿದ ಕಾರ್ಯಗಳನ್ನು ಮನುಷ್ಯರಿಗೋಸ್ಕರ ಮಾಡಲು ನೇಮಿಸಲ್ಪಡುತ್ತಾನೆ. ಆ ಯಾಜಕನು ಪಾಪಗಳಿಗಾಗಿ ದೇವರಿಗೆ ಕಾಣಿಕೆಗಳನ್ನೂ ಯಜ್ಞಗಳನ್ನೂ ಅರ್ಪಿಸಬೇಕು. 2 ಅವನು ಜನರೆಲ್ಲರಂತೆ ದುರ್ಬಲನಾಗಿರುವುದರಿಂದ ಅರ್ಥಮಾಡಿಕೊಳ್ಳದ ಮತ್ತು ದಾರಿತಪ್ಪಿದ ಜನರ ವಿಷಯದಲ್ಲಿ ತಾಳ್ಮೆಯಿಂದ ಸಹಿಸಿಕೊಳ್ಳಲು ಶಕ್ತನಾಗಿದ್ದಾನೆ. 3 ತಾನೂ ಬಲಹೀನನಾಗಿರುವುದರಿಂದ ಅವನು ಮನುಷ್ಯರ ಪಾಪಗಳಿಗಾಗಿಯೂ ತನ್ನ ಸ್ವಂತ ಪಾಪಗಳಿಗಾಗಿಯೂ ಯಜ್ಞಗಳನ್ನು ಅರ್ಪಿಸುತ್ತಾನೆ.
4 ಪ್ರಧಾನಯಾಜಕನಾಗಿ ನೇಮಿಸಲ್ಪಡುವುದು ಒಂದು ಗೌರವ. ಆದರೆ ಯಾರೂ ತಮ್ಮನ್ನು ತಾವೇ ಈ ಕಾರ್ಯಕ್ಕೆ ಆರಿಸಿಕೊಳ್ಳುವುದಿಲ್ಲ. ದೇವರು ಆರೋನನನ್ನು ಕರೆದಂತೆ, ಆ ವ್ಯಕ್ತಿಯನ್ನು ಕರೆಯಬೇಕು. 5 ಕ್ರಿಸ್ತನೂ ಇದೇ ರೀತಿ ನೇಮಿಸಲ್ಪಟ್ಟನು. ಆತನು ಪ್ರಭಾವದ ಪ್ರಧಾನಯಾಜಕನಾಗಿ ತನ್ನನ್ನು ತಾನೇ ಆರಿಸಿಕೊಳ್ಳಲಿಲ್ಲ. ಆದರೆ ದೇವರು ಆತನನ್ನು ಆರಿಸಿದನು. ದೇವರು ಕ್ರಿಸ್ತನಿಗೆ ಹೀಗೆ ಹೇಳಿದನು:
“ನೀನು ನನ್ನ ಮಗನು.
ಈ ದಿನ ನಾನು ನಿನ್ನ ತಂದೆಯಾದೆನು.”(A)
6 ಪವಿತ್ರ ಗ್ರಂಥದ ಮತ್ತೊಂದು ಕಡೆಯಲ್ಲಿ ದೇವರು ಹೀಗೆನ್ನುತ್ತಾನೆ:
“ನೀನು ಮೆಲ್ಕಿಜೆದೇಕನಂತೆ ಸದಾಕಾಲವೂ
ಪ್ರಧಾನಯಾಜಕನಾಗಿರುವೆ.”(B)
Kannada Holy Bible: Easy-to-Read Version. All rights reserved. © 1997 Bible League International