Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 25:11-20

11 ಯೆಹೋವನೇ, ನಾನು ಅನೇಕ ಪಾಪಗಳನ್ನು ಮಾಡಿದ್ದೇನೆ.
    ಆದರೆ ನೀನು ನಿನ್ನ ಹೆಸರಿನ ನಿಮಿತ್ತ ಅವುಗಳನ್ನೆಲ್ಲಾ ಕ್ಷಮಿಸಿಬಿಟ್ಟೆ.

12 ಯೆಹೋವನು ತನ್ನಲ್ಲಿ ಭಯಭಕ್ತಿಯುಳ್ಳವರಿಗೆ
    ಅತ್ಯುತ್ತಮವಾದ ಜೀವಮಾರ್ಗವನ್ನು ತೋರಿಸುವನು.
13 ಅವನು ಸುಖದಿಂದಿರುವನು.
    ಆತನು ವಾಗ್ದಾನ ಮಾಡಿದ ದೇಶವನ್ನು ಅವನ ಮಕ್ಕಳು ಅನುಭವಿಸುವರು.
14 ಯೆಹೋವನು ತನಗೆ ವಿಧೇಯರಾಗಿರುವವರಿಗೆ ಆಪ್ತಮಿತ್ರನಂತಿರುವನು.
    ಆತನು ಅವರಿಗೆ ತನ್ನ ಒಡಂಬಡಿಕೆಯನ್ನು ಉಪದೇಶಿಸುವನು.
15 ನನ್ನ ಕಣ್ಣುಗಳು ಸಹಾಯಕ್ಕಾಗಿ ಯೆಹೋವನನ್ನೇ ದೃಷ್ಟಿಸುತ್ತಿವೆ.
    ಆತನು ನನ್ನನ್ನು ತೊಂದರೆಗಳಿಂದ ಖಂಡಿತವಾಗಿ ಬಿಡುಸುವನು.[a]

16 ಯೆಹೋವನೇ, ನಾನು ಬಾಧೆಪಡುವವನೂ ಒಬ್ಬಂಟಿಗನೂ ಆಗಿದ್ದೇನೆ.
    ನನಗೆ ಅಭಿಮುಖನಾಗಿ ಕರುಣೆತೋರು.
17 ಇಕ್ಕಟ್ಟುಗಳಿಂದ ನನ್ನನ್ನು ಬಿಡಿಸು.
    ನನ್ನ ಸಮಸ್ಯೆಗಳನ್ನು ಪರಿಹರಿಸು.
18 ಯೆಹೋವನೇ, ನನ್ನ ಸಂಕಟವನ್ನೂ ತೊಂದರೆಗಳನ್ನೂ ನೋಡು.
    ನನ್ನ ಪಾಪಗಳನ್ನೆಲ್ಲ ಕ್ಷಮಿಸು.
19 ನನ್ನ ವೈರಿಗಳನ್ನೆಲ್ಲ ದೃಷ್ಟಿಸಿನೋಡು.
    ಅವರು ನನ್ನನ್ನು ದ್ವೇಷಿಸುತ್ತಾ ಕೇಡುಮಾಡಬೇಕೆಂದಿದ್ದಾರೆ.
20 ದೇವರೇ, ನನ್ನನ್ನು ಕಾಪಾಡು, ನನ್ನನ್ನು ರಕ್ಷಿಸು.
    ನಾನು ನಿನ್ನಲ್ಲಿ ಭರವಸವಿಟ್ಟಿರುವುದರಿಂದ ನನ್ನನ್ನು ನಿರಾಶೆಗೊಳಿಸಬೇಡ.

ಜ್ಞಾನೋಕ್ತಿಗಳು 19:1-17

19 ಸುಳ್ಳುಹೇಳುವ ಮತ್ತು ಮೋಸಮಾಡುವ ಮೂಢನಾಗಿರುವುದಕ್ಕಿಂತ, ಬಡವನಾಗಿಯೂ ಯಥಾರ್ಥನಾಗಿಯೂ ಇರುವುದು ಲೇಸು.

ಯಾವುದೇ ಕಾರ್ಯದಲ್ಲಿ ಉತ್ಸುಕತೆಯೊಂದೇ ಸಾಲದು, ತಿಳುವಳಿಕೆಯೂ ಬೇಕು. ಯಾವುದೇ ಕಾರ್ಯದಲ್ಲಿ ದುಡುಕದಿರಿ; ಇಲ್ಲವಾದರೆ, ತಪ್ಪಾದೀತು!

ಮೂಢನ ಮೂಢತನವು ಅವನ ಜೀವನವನ್ನೇ ನಾಶಪಡಿಸುತ್ತದೆ. ಆದರೆ ಅವನು ದೂಷಿಸುವುದು ಯೆಹೋವನನ್ನೇ.

ಐಶ್ವರ್ಯವಂತನಿಗೆ ಅನೇಕ ಸ್ನೇಹಿತರಿರುವರು; ಬಡವನಿಗೆ ಇದ್ದ ಸ್ನೇಹಿತರೂ ಬಿಟ್ಟುಹೋಗುವರು.

ಮತ್ತೊಬ್ಬನ ಮೇಲೆ ಸುಳ್ಳುಹೇಳುವವನು ದಂಡಿಸಲ್ಪಡುವನು. ಸುಳ್ಳುಸಾಕ್ಷಿಗೆ ಸುರಕ್ಷತೆಯಿಲ್ಲ.

ಉದಾರಿಯ ಸ್ನೇಹಿತರಾಗಿರಲು ಅನೇಕರಿಗೆ ಆಸೆ. ದಾನಶೂರನಿಗೆ ಸ್ನೇಹಿತರಾಗಿರಲು ಎಲ್ಲರಿಗೂ ಆಸೆ.

ಬಡವನಿಗೆ ಅವನ ಕುಟುಂಬವು ವಿರುದ್ಧವಾಗುವುದು; ಅವನ ಸ್ನೇಹಿತರೆಲ್ಲಾ ಮುಖತಿರುವಿಕೊಂಡು ಅವನಿಗೆ ದೂರವಾಗುವರು. ಆ ಬಡವನು ಸಹಾಯಕ್ಕಾಗಿ ಬೇಡಿಕೊಂಡರೂ ಅವನ ಸಮೀಪಕ್ಕೆ ಯಾರೂ ಹೋಗುವುದಿಲ್ಲ.

ತನ್ನನ್ನು ಪ್ರೀತಿಸುವ ಪ್ರತಿಯೊಬ್ಬನು ಜ್ಞಾನಿಯಾಗಲು ಪ್ರಯಾಸಪಡುವನು; ಅಭಿವೃದ್ಧಿಗಾಗಿ ಇಷ್ಟಪಡುವವನು ತಿಳುವಳಿಕೆಯನ್ನು ಹೊಂದಿಕೊಳ್ಳಲು ಪ್ರಯತ್ನಿಸುವನು.

ಸುಳ್ಳುಸಾಕ್ಷಿಯು ದಂಡಿಸಲ್ಪಡುವನು; ಸುಳ್ಳುಗಾರನು ನಾಶವಾಗುವನು.

10 ಮೂಢನಿಗೆ ಐಶ್ವರ್ಯವು ಸೂಕ್ತವಲ್ಲ; ರಾಜಕುಮಾರರ ಮೇಲೆ ದೊರೆತನ ಮಾಡುವುದು ಗುಲಾಮನಿಗೆ ಮತ್ತಷ್ಟು ಸೂಕ್ತವಲ್ಲ.

11 ಜ್ಞಾನಿಗೆ ಅವನ ಜ್ಞಾನವೇ ಸನ್ಮಾನವನ್ನು ತರುತ್ತದೆ. ತನಗೆ ತಪ್ಪು ಮಾಡಿದವರನ್ನು ಕ್ಷಮಿಸುವುದು ಅವನ ಸದ್ಗುಣವಾಗಿದೆ.

12 ರಾಜನ ಕೋಪವು ಸಿಂಹ ಘರ್ಜನೆಯಂತಿರುತ್ತದೆ. ರಾಜನಿಗೆ ನಿನ್ನ ಮೇಲಿರುವ ಸಂತೋಷವು ತುಂತುರು ಮಳೆಯಂತಿರುತ್ತದೆ.

13 ಮೂಢನಾದ ಮಗನು ತಂದೆಗೆ ಹಾನಿ; ವಾದಿಸುವ ಹೆಂಡತಿಯು ಸೋರುವ ಮೇಲ್ಛಾವಣಿಯಂತಿದ್ದಾಳೆ.

14 ಮಕ್ಕಳು ತಂದೆಯಿಂದ ಮನೆಗಳನ್ನು ಮತ್ತು ಹಣವನ್ನು ಸ್ವಾಸ್ತ್ಯವಾಗಿ ಪಡೆದುಕೊಳ್ಳುವರು. ವಿವೇಕಿಯಾದ ಹೆಂಡತಿಯಾದರೋ ಯೆಹೋವನಿಂದ ಬಂದ ಉಡುಗೊರೆ.

15 ಸೋಮಾರಿಗೆ ಗಾಢವಾದ ನಿದ್ರೆ. ಮೈಗಳ್ಳನಿಗೆ ಹಸಿವೆ.

16 ಆಜ್ಞೆಗಳಿಗೆ ವಿಧೇಯನಾಗುವವನು ತನ್ನ ಪ್ರಾಣವನ್ನು ಸಂರಕ್ಷಿಸಿಕೊಳ್ಳುವನು. ಆದರೆ ತನ್ನ ನಡತೆಯ ಬಗ್ಗೆ ನಿರ್ಲಕ್ಷ್ಯದಿಂದಿರುವವನು ಸಾವಿಗೀಡಾಗುವನು.

17 ಬಡಜನರಿಗೆ ಉದಾರವಾಗಿ ಕೊಡುವವನು ಯೆಹೋವನಿಗೆ ಸಾಲಕೊಡುತ್ತಾನೆ; ಅವನ ಕರುಣೆಯ ಕಾರ್ಯಕ್ಕೆ ಯೆಹೋವನು ಅವನ ಗೆ ಮರುಪಾವತಿ ಮಾಡುವನು.

1 ಯೋಹಾನ 3:11-17

ನಾವು ಒಬ್ಬರನ್ನೊಬ್ಬರು ಪ್ರೀತಿಸಬೇಕು

11 ನಾವು ಒಬ್ಬರನ್ನೊಬ್ಬರು ಪ್ರೀತಿಸಬೇಕು ಎಂಬುದೇ ನೀವು ಆರಂಭದಿಂದಲೂ ಕೇಳಿದ ವಾಕ್ಯ. 12 ನೀವು ಕಾಯಿನನಂತಿರಬೇಡಿ. ಅವನು ಕೆಡುಕನಿಗೆ ಸೇರಿದವನಾಗಿದ್ದನು. ಅವನು ತನ್ನ ತಮ್ಮನನ್ನು (ಹೇಬೆಲ) ಕೊಂದುಹಾಕಿದನು. ಅವನು ತನ್ನ ತಮ್ಮನನ್ನು ಕೊಂದದ್ದೇಕೆ? ತನ್ನ ಕೃತ್ಯಗಳು ಕೆಟ್ಟವುಗಳೂ ತನ್ನ ತಮ್ಮನ ಕೃತ್ಯಗಳು ಒಳ್ಳೆಯವುಗಳೂ ಆಗಿದ್ದರಿಂದಲೇ.

13 ಸಹೋದರ ಸಹೋದರಿಯರೇ, ಈ ಲೋಕದ ಜನರು ನಿಮ್ನನ್ನು ದ್ವೇಷಿಸುವಾಗ ಆಶ್ಚರ್ಯಗೊಳ್ಳದಿರಿ. 14 ನಾವು ಮರಣವನ್ನು (ಪಾಪಗಳನ್ನು) ತೊರೆದು ಜೀವಕ್ಕೆ ಬಂದಿದ್ದೇವೆ ಎಂಬುದು ನಮಗೆ ಗೊತ್ತಿದೆ. ಕ್ರಿಸ್ತನಲ್ಲಿ ನಮ್ಮ ಸಹೋದರ ಸಹೋದರಿಯರನ್ನು ನಾವು ಪ್ರೀತಿಸುತ್ತಿರುವುದರಿಂದಲೇ ಇದನ್ನು ತಿಳಿದುಕೊಂಡಿದ್ದೇನೆ. ಪ್ರೀತಿಸದಿರುವ ವ್ಯಕ್ತಿಯು ಇನ್ನೂ ಮರಣದಲ್ಲಿದ್ದಾನೆ. 15 ತನ್ನ ಸಹೋದರನನ್ನು ದ್ವೇಷಿಸುವ ಪ್ರತಿಯೊಬ್ಬನೂ ಕೊಲೆಗಾರನಾಗಿದ್ದಾನೆ. ಯಾವ ಕೊಲೆಗಾರನಲ್ಲಿಯೂ ನಿತ್ಯಜೀವ ಇರುವುದಿಲ್ಲವೆಂಬುದು ನಿಮಗೆ ತಿಳಿದಿದೆ.

16 ಯೇಸು ತನ್ನ ಪ್ರಾಣವನ್ನೇ ಕೊಟ್ಟದ್ದರಿಂದ ನಿಜವಾದ ಪ್ರೀತಿಯೆಂದರೇನೆಂಬುದನ್ನು ನಾವು ತಿಳಿದುಕೊಂಡೆವು. ಆದ್ದರಿಂದ ಕ್ರಿಸ್ತನಲ್ಲಿ ಸಹೋದರ ಸಹೋದರಿಯರಾದವರಿಗೋಸ್ಕರ ನಾವೂ ನಮ್ಮ ಪ್ರಾಣಗಳನ್ನು ಕೊಡಬೇಕು. 17 ಈ ಲೋಕದ ಐಶ್ವರ್ಯವನ್ನು ಹೊಂದಿರುವ ಯಾವನಾದರೂ ಕೊರತೆಯಲ್ಲಿರುವ ತನ್ನ ಸಹೋದರನನ್ನು ನೋಡಿದರೂ ಸಹಾಯ ಮಾಡದೆ ಹೋದರೆ, ಅವನಲ್ಲಿ ದೇವರ ಪ್ರೀತಿಯು ನೆಲೆಗೊಂಡಿಲ್ಲ. ಅವನೇಕೆ ಸಹಾಯ ಮಾಡಲಿಲ್ಲ? ಏಕೆಂದರೆ ಅವನ ಹೃದಯದಲ್ಲಿ ದೇವರ ಮೇಲೆ ಪ್ರೀತಿಯೇ ಇಲ್ಲ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International