Revised Common Lectionary (Complementary)
73 ನಿನ್ನ ಕೈಗಳು ನನ್ನನ್ನು ರೂಪಿಸಿದವು.
ನಿನ್ನ ಆಜ್ಞೆಗಳನ್ನು ಕಲಿತುಕೊಳ್ಳಲು ನನಗೆ ಸಹಾಯಿಸು.
74 ನಾನು ನಿನ್ನ ವಾಕ್ಯದಲ್ಲಿ ಭರವಸವಿಟ್ಟಿರುವುದರಿಂದ
ನಿನ್ನ ಭಕ್ತರು ನನ್ನನ್ನು ಕಂಡಾಗ ಸಂತೋಷಿಸಲಿ.
75 ಯೆಹೋವನೇ, ನಿನ್ನ ತೀರ್ಪುಗಳು ನ್ಯಾಯವಾದವುಗಳೆಂದು ನನಗೆ ತಿಳಿದಿದೆ.
ನೀನು ನನ್ನನ್ನು ಶಿಕ್ಷಿಸಿದ್ದು ನನ್ನ ದೃಷ್ಟಿಯಲ್ಲಿ ನ್ಯಾಯವಾಗಿತ್ತು.
76 ಈಗ, ನಿನ್ನ ಶಾಶ್ವತ ಪ್ರೀತಿಯಿಂದ ನನ್ನನ್ನು ಸಂತೈಸು.
ನಿನ್ನ ವಾಗ್ದಾನದಂತೆ ನನ್ನನ್ನು ಸಂತೈಸು.
77 ನನ್ನನ್ನು ಸಂತೈಸಿ ಉಜ್ಜೀವನಗೊಳಿಸು;
ನಾನು ನಿನ್ನ ಉಪದೇಶಗಳಲ್ಲಿಯೇ ಆನಂದಿಸುತ್ತಿರುವೆ.
78 ಗರ್ವಿಷ್ಠರಿಗೆ ಅವಮಾನವಾಗಲಿ; ಅವರು ನನ್ನ ಬಗ್ಗೆ ಸುಳ್ಳು ಹೇಳಿದ್ದಾರೆ.
ನಾನಾದರೋ ನಿನ್ನ ನಿಯಮಗಳನ್ನು ಧ್ಯಾನಿಸುವೆನು.
79 ನಿನ್ನ ಭಕ್ತರು ನನ್ನ ಬಳಿಗೆ ಹಿಂತಿರುಗಿಬರಲಿ.
ನಿನ್ನ ಒಡಂಬಡಿಕೆಯನ್ನು ಅವರು ಕಲಿತುಕೊಳ್ಳಲಿ.
80 ನಾನು ನಿನ್ನ ಕಟ್ಟಳೆಗಳಿಗೆ ಪೂರ್ಣವಾಗಿ ವಿಧೇಯನಾಗಿರುವಂತೆ ಮಾಡು.
ಆಗ ನನಗೆ ಅವಮಾನವಾಗುವುದಿಲ್ಲ.
ಪಾಪ ಮತ್ತು ಶಿಕ್ಷೆ
4 “ಯೆರೆಮೀಯನೇ, ಯೆಹೂದದ ಜನರಿಗೆ ಹೀಗೆ ಹೇಳು: ‘ಯೆಹೋವನು ಈ ಮಾತನ್ನು ಹೇಳುತ್ತಾನೆ.
“‘ಒಬ್ಬ ಮನುಷ್ಯನು ಕೆಳಗೆ ಬಿದ್ದರೆ
ಪುನಃ ಅವನು ಮೇಲಕ್ಕೆ ಏಳುತ್ತಾನೆ;
ಒಬ್ಬ ಮನುಷ್ಯನು ತಪ್ಪುದಾರಿ ಹಿಡಿದರೆ
ಅವನು ಹಿಂತಿರುಗಿ ಬರುತ್ತಾನೆಂಬುದು ನಿಮಗೆ ಗೊತ್ತು.
5 ಯೆಹೂದದ ಜನರು ತಪ್ಪುದಾರಿಯನ್ನು ಹಿಡಿದಿದ್ದಾರೆ.
ಆದರೆ ಜೆರುಸಲೇಮಿನ ಜನರು ಆ ತಪ್ಪು ದಾರಿಯ ಮೇಲೆ ನಡೆಯುವದನ್ನು ಏಕೆ ಮುಂದುವರಿಸಿದ್ದಾರೆ?
ತಮ್ಮ ಸುಳ್ಳುಗಳನ್ನೇ ಅವರು ನಂಬಿದ್ದಾರೆ,
ಅವರು ಹಿಂತಿರುಗಿ ಬರಲು ಸಿದ್ಧರಿಲ್ಲ.
6 ನಾನು ಎಚ್ಚರವಹಿಸಿ ಅವರು ಹೇಳುವದನ್ನು ಕೇಳಿದ್ದೇನೆ.
ಆದರೆ ಅವರು ಸರಿಯಾದುದನ್ನು ಹೇಳುವದಿಲ್ಲ.
ತಾವು ಮಾಡಿದ ಪಾಪಕ್ಕಾಗಿ ಅವರು ಪಶ್ಚಾತ್ತಾಪಪಡುವದಿಲ್ಲ.
ಅವರು ಮಾಡಿದ ದುಷ್ಕೃತ್ಯದ ಬಗ್ಗೆ ಅವರು ಯೋಚಿಸುವದಿಲ್ಲ.
ಜನರು ವಿಚಾರ ಮಾಡದೆ ಕೆಲಸಮಾಡುತ್ತಾರೆ.
ಅವರು ಯುದ್ಧದಲ್ಲಿ ಓಡುವ ಕುದುರೆಯಂತಿದ್ದಾರೆ.
7 ಆಕಾಶದಲ್ಲಿ ಹಾರಾಡುವ ಬಕಪಕ್ಷಿಗಳಿಗೂ ಸಹ
ಆಯಾ ಕೆಲಸ ಮಾಡುವ ಸರಿಯಾದ ಸಮಯ ಗೊತ್ತಿದೆ.
ಬೆಳವಕ್ಕಿಯೂ ಬಾನಕ್ಕಿಯೂ ಕೊಕ್ಕರೆಯೂ
ಹೊಸ ಮನೆಗೆ ಹೋಗಬೇಕಾದ ಕಾಲವನ್ನು ಬಲ್ಲವು.
ಆದರೆ ನನ್ನ ಜನರಿಗೆ ತಮ್ಮ ಯೆಹೋವನು ಅವರಿಂದ ಏನನ್ನು ಬಯಸುತ್ತಾನೆ ಎಂಬುದು ಗೊತ್ತಿಲ್ಲ.
8 “‘“ಯೆಹೋವನ ಧರ್ಮಶಾಸ್ತ್ರವು ನಮ್ಮಲ್ಲಿ ಇದೆ.
ಆದ್ದರಿಂದ ನಾವು ಜ್ಞಾನಿಗಳು” ಎಂದು ನೀವು ಹೇಳುವಿರಿ.
ಆದರೆ ಅದು ನಿಜವಲ್ಲ.
ಏಕೆಂದರೆ ಲಿಪಿಗಾರರು ತಮ್ಮ ಲೇಖನಿಯಿಂದ ಸುಳ್ಳು ಬರೆದಿದ್ದಾರೆ.
9 ಆ “ಜ್ಞಾನಿಗಳು” ಯೆಹೋವನ ಉಪದೇಶವನ್ನು ಕೇಳಲು ಒಪ್ಪಲಿಲ್ಲ.
ಆದ್ದರಿಂದ ಅವರು ನಿಜವಾದ ಜ್ಞಾನಿಗಳಲ್ಲವೇ ಅಲ್ಲ.
ಆ “ಜ್ಞಾನಿಗಳು” ಸಿಕ್ಕಿಹಾಕಿಕೊಂಡಿದ್ದಾರೆ.
ಅವರು ಗಾಬರಿಪಟ್ಟಿದ್ದಾರೆ ಮತ್ತು ನಾಚಿಕೆಪಟ್ಟಿದ್ದಾರೆ.
ಅವರ ಜ್ಞಾನವು ಅಪ್ರಯೋಜಕವಾಗಿದೆ.
10 ಆದ್ದರಿಂದ ನಾನು ಅವರ ಹೆಂಡಂದಿರನ್ನು ಬೇರೆಯವರಿಗೆ ಕೊಡುತ್ತೇನೆ.
ನಾನು ಅವರ ಹೊಲಗಳನ್ನು ಬೇರೆಯವರಿಗೆ ಕೊಡುತ್ತೇನೆ.
ಇಸ್ರೇಲಿನ ಎಲ್ಲಾ ಜನರಿಗೆ ಹೆಚ್ಚಾಗಿ ಹಣಬೇಕು.
ಸಾಮಾನ್ಯರನ್ನು ಮೊದಲುಗೊಂಡು ಅತ್ಯಂತ ಮುಖ್ಯರಾದವರೆಲ್ಲರೂ ಹೀಗೇ ಇದ್ದಾರೆ.
ಪ್ರವಾದಿಗಳಿಂದ ಹಿಡಿದು ಯಾಜಕರವರೆಗೆ ಎಲ್ಲರೂ ಸುಳ್ಳು ಹೇಳುತ್ತಾರೆ.
11 ಪ್ರವಾದಿಗಳು ಮತ್ತು ಯಾಜಕರು ನಮ್ಮ ಜನರ ಆಳವಾದ ಗಾಯಗಳನ್ನು
ಕೇವಲ ಅಲ್ಪಗಾಯಗಳಂತೆ ಪರಿಗಣಿಸಿ ಚಿಕಿತ್ಸೆ ಕೊಡುತ್ತಿದ್ದಾರೆ.
“ಎಲ್ಲಾ ಚೆನ್ನಾಗಿದೆ, ಎಲ್ಲಾ ಚೆನ್ನಾಗಿದೆ” ಎಂದು ಅವರು ಹೇಳುತ್ತಾರೆ.
ಆದರೆ ಎಲ್ಲಾ ಚೆನ್ನಾಗಿಲ್ಲ.
12 ಅವರು ತಮ್ಮ ದುಷ್ಕೃತ್ಯಗಳಿಗಾಗಿ ನಾಚಿಕೆಪಡಬೇಕು.
ಆದರೆ ಅವರು ಸ್ವಲ್ಪವೂ ನಾಚಿಕೆಪಡುವುದಿಲ್ಲ.
ಅವರಿಗೆ ನಾಚಿಕೆ ಎಂಬುದೇ ತಿಳಿದಿಲ್ಲ.
ಆದ್ದರಿಂದ ಉಳಿದೆಲ್ಲರಂತೆ ಅವರಿಗೂ ಶಿಕ್ಷೆ ವಿಧಿಸಲಾಗುವುದು.
ನಾನು ಅವರನ್ನು ಶಿಕ್ಷಿಸುವಾಗ ಅವರು ಮುಗ್ಗರಿಸಿ ಬೀಳುವರು.’”
ಯೆಹೋವನ ನುಡಿಗಳಿವು.
13 “ನಾನು ಅವರ ಹಣ್ಣುಗಳನ್ನೂ ಬೆಳೆಗಳನ್ನೂ ಕಿತ್ತುಕೊಂಡು
ಅವರಿಗೆ ಸುಗ್ಗಿಯಾಗದಂತೆ ಮಾಡುತ್ತೇನೆ.” ಇದು ಯೆಹೋವನ ನುಡಿ.
ದ್ರಾಕ್ಷಿಬಳ್ಳಿಯಲ್ಲಿ ದ್ರಾಕ್ಷಿಗಳಿರುವದಿಲ್ಲ.
ಅಂಜೂರದ ಮರದಲ್ಲಿ ಒಂದಾದರೂ ಅಂಜೂರದ ಹಣ್ಣು ಇರುವದಿಲ್ಲ.
ಎಲೆಗಳು ಸಹ ಒಣಗಿ ಉದುರುವವು.
ನಾನು ಅವರಿಗೆ ಕೊಟ್ಟ ವಸ್ತುಗಳನ್ನು ಕಿತ್ತುಕೊಳ್ಳುವೆನು.
28 ಈ ಮಾತುಗಳನ್ನು ಕೇಳಿದ ಜನರು ಬಹು ಕೋಪಗೊಂಡು, “ಎಫೆಸದ ಅರ್ತೆಮಿದೇವಿಯೇ ಮಹಾದೇವಿ!” ಎಂದು ಕೂಗಿದರು. 29 ಪಟ್ಟಣದಲ್ಲಿದ್ದ ಜನರೆಲ್ಲಾ ಗಲಿಬಿಲಿಗೊಂಡರು. ಜನರು ಗಾಯ ಮತ್ತು ಅರಿಸ್ತಾರ್ಕ ಎಂಬವರನ್ನು ಹಿಡಿದುಕೊಂಡರು. (ಇವರಿಬ್ಬರು ಮಕೆದೋನಿಯದವರು ಮತ್ತು ಪೌಲನೊಂದಿಗೆ ಪ್ರಯಾಣ ಮಾಡುತ್ತಿದ್ದವರು.) ಬಳಿಕ ಜನರೆಲ್ಲರು ಕ್ರೀಡಾಂಗಣಕ್ಕೆ ಓಡಿಹೋದರು. 30 ಇದನ್ನು ತಿಳಿದ ಪೌಲನು ಒಳಗೆ ಹೋಗಿ ಜನರೊಂದಿಗೆ ಮಾತಾಡಬೇಕೆಂದಿದ್ದನು. ಆದರೆ ಯೇಸುವಿನ ಶಿಷ್ಯರು ಅವನನ್ನು ಹೋಗಗೊಡಿಸಲಿಲ್ಲ. 31 ಅಲ್ಲದೆ, ಪೌಲನ ಸ್ನೇಹಿತರಾಗಿದ್ದ ಈ ದೇಶದ ನಾಯಕರುಗಳಲ್ಲಿ ಕೆಲವರು ಅವನಿಗೆ ಒಂದು ಸಂದೇಶವನ್ನು ಕಳುಹಿಸಿ ಕ್ರೀಡಾಂಗಣದೊಳಗೆ ಹೋಗಬಾರದೆಂದು ತಿಳಿಸಿದರು.
32 ಕೆಲವು ಜನರು ಒಂದು ವಿಷಯದ ಬಗ್ಗೆ ಬೊಬ್ಬೆ ಹಾಕುತ್ತಿದ್ದರೆ, ಉಳಿದ ಜನರು ಬೇರೆ ವಿಷಯಗಳ ಬಗ್ಗೆ ಕೂಗಾಡುತ್ತಿದ್ದರು. ಸಭೆಯು ಬಹಳ ಗಲಿಬಿಲಿಗೊಳಗಾಯಿತು. ತಾವು ಅಲ್ಲಿಗೆ ಯಾಕೆ ಬಂದಿದ್ದೇವೆ ಎಂಬುದೇ ಅನೇಕ ಜನರಿಗೆ ತಿಳಿದಿರಲಿಲ್ಲ. 33 ಯೆಹೂದ್ಯರು ಅಲೆಕ್ಸಾಂಡರ್ ಎಂಬವನನ್ನು ಜನರ ಮುಂದೆ ನೂಕಿ ಮಾತಾಡಲು ಪುಸಲಾಯಿಸಿದರು. ಅವನು ಜನರಿಗೆ ಮೌನವಾಗಿರುವಂತೆ ಕೈಸನ್ನೆಮಾಡಿ ಜನರ ಪರವಾಗಿ ವಾದಿಸಬೇಕೆಂದಿದ್ದನು. 34 ಆದರೆ ಅಲೆಕ್ಸಾಂಡರನು ಯೆಹೂದ್ಯನೆಂದು ತಿಳಿದಾಗ ಜನರೆಲ್ಲರು, “ಎಫೆಸದ ಅರ್ತೆಮಿಯು ಮಹಾದೇವಿ! ಎಫೆಸದ ಅರ್ತೆಮಿಯು ಮಹಾದೇವಿ! ಅರ್ತೆಮಿಯು ಮಹಾದೇವಿ…!” ಎಂದು ಒಂದೇಸಮನೆ ಎರಡು ತಾಸುಗಳವರೆಗೆ ಕೂಗಿದರು.
35 ಬಳಿಕ ಪಟ್ಟಣದ ಅಧಿಕಾರಿಯು ಜನಸಮೂಹವನ್ನು ಶಾಂತಗೊಳಿಸಿ ಅವರಿಗೆ, “ಎಫೆಸದ ಜನರೇ, ಮಹಾದೇವತೆಯಾದ ಅರ್ತೆಮಿ ದೇವಿಯ ಗುಡಿಯನ್ನು ಎಫೆಸ ಪಟ್ಟಣವು ಕಾಪಾಡಿಕೊಂಡು ಬಂದಿರುವುದು ಜನರೆಲ್ಲರಿಗೆ ತಿಳಿದಿದೆ. ಆಕೆಯ ಪವಿತ್ರ ಕಲ್ಲನ್ನು[a] ಸಹ ನಾವು ಕಾಪಾಡಿಕೊಂಡು ಬಂದಿರುವುದು ಜನರೆಲ್ಲರಿಗೆ ಗೊತ್ತಿದೆ. 36 ಇದು ಸತ್ಯವಲ್ಲವೆಂದು ಯಾರೂ ಹೇಳಲಾಗದು. ಆದ್ದರಿಂದ ಮೌನದಿಂದಿರಬೇಕು. ನೀವು ಏನನ್ನೇ ಮಾಡುವುದಕ್ಕಿಂತ ಮೊದಲು ಸಮಾಧಾನದಿಂದ ಯೋಚಿಸಬೇಕು.
37 “ನೀವು ಈ ಜನರನ್ನು ಹಿಡಿದುಕೊಂಡು ಬಂದಿದ್ದೀರಿ. ಆದರೆ ಇವರು ನಮ್ಮ ದೇವತೆಯ ವಿರೋಧವಾಗಿ ಯಾವ ಕೆಟ್ಟದ್ದನ್ನೂ ಹೇಳಿಲ್ಲ. ಅವರು ಆಕೆಯ ಗುಡಿಯಿಂದ ಏನನ್ನೂ ಕದ್ದುಕೊಂಡಿಲ್ಲ. 38 ನಮ್ಮಲ್ಲಿ ನ್ಯಾಯಾಲಯಗಳಿವೆ ಮತ್ತು ನ್ಯಾಯಾಧೀಶರುಗಳು ಇದ್ದಾರೆ. ದೇಮೇತ್ರಿಯನಿಗಾಗಲಿ ಮತ್ತು ಅವನೊಂದಿಗೆ ಕೆಲಸ ಮಾಡುವ ಜನರಿಗಾಗಲಿ ಯಾರ ಮೇಲಾದರೂ ದೂರುಗಳಿವೆಯೇ? ದೂರುಗಳಿದ್ದರೆ, ಅವರು ನ್ಯಾಯಾಲಯಗಳಿಗೆ ಹೋಗಬೇಕು! ಅವರು ಪರಸ್ಪರ ವಾದ ಮಾಡಲು ಅದೇ ತಕ್ಕ ಸ್ಥಳ!
39 “ನೀವು ಬೇರೆ ಏನನ್ನಾದರೂ ಕುರಿತು ಮಾತಾಡಬೇಕೆಂದಿದ್ದೀರಾ? ಮಾತಾಡಬೇಕೆಂದಿದ್ದರೆ, ಕಾನೂನುಬದ್ಧವಾದ ನಗರಸಭೆಗೆ ಬನ್ನಿರಿ. ಅಲ್ಲಿ ಅದನ್ನು ನಿರ್ಧರಿಸಬಹುದು. 40 ನಾನು ಇದನ್ನು ಯಾಕೆ ಹೇಳುತ್ತಿದ್ದೇನೆಂದರೆ, ಇಂದಿನ ಗಲಭೆಯನ್ನು ಕಂಡ ಕೆಲವು ಜನರು ನಾವು ದಂಗೆ ಏಳುತ್ತಿದ್ದೇವೆಂದು ಹೇಳುವ ಸಾಧ್ಯತೆಯಿದೆ. ನಾವು ಈ ಗಲಭೆಯನ್ನು ಸಮರ್ಥಿಸಿಕೊಳ್ಳಲಾಗುವುದಿಲ್ಲ. ಯಾಕೆಂದರೆ ಈ ಸಭೆಗೆ ಸರಿಯಾದ ಕಾರಣವೇ ಇಲ್ಲ” ಎಂದು ಹೇಳಿದನು. 41 ಪಟ್ಟಣದ ಅಧಿಕಾರಿಯು ಈ ಸಂಗತಿಗಳನ್ನು ಹೇಳಿದ ಬಳಿಕ ಮನೆಗೆ ಹೋಗಬೇಕೆಂದು ಜನರಿಗೆ ತಿಳಿಸಿದನು. ಆಗ ಅವರೆಲ್ಲರು ಹೊರಟುಹೋದರು.
Kannada Holy Bible: Easy-to-Read Version. All rights reserved. © 1997 Bible League International