Revised Common Lectionary (Complementary)
ಸ್ತುತಿಗೀತೆ.
66 ಸರ್ವಭೂನಿವಾಸಿಗಳೇ, ದೇವರಿಗೆ ಜಯಘೋಷ ಮಾಡಿರಿ!
2 ಆತನ ಹೆಸರಿನ ಮಹಿಮೆಯನ್ನು ಕೀರ್ತಿಸಿರಿ.
ಸ್ತುತಿಗೀತೆಗಳಿಂದ ಆತನನ್ನು ಸನ್ಮಾನಿಸಿರಿ.
3 ದೇವರೇ, ನಿನ್ನ ಕಾರ್ಯಗಳು ಎಷ್ಟು ಅದ್ಭುತವಾಗಿವೆ!
ನಿನ್ನ ಮಹಾಶಕ್ತಿಯಿಂದಾಗಿ ಶತ್ರುಗಳು ನಿನಗೆ ಭಯಪಟ್ಟು ಅಡ್ಡಬೀಳುವರು.
4 ಸರ್ವಭೂನಿವಾಸಿಗಳು ನಿನ್ನನ್ನು ಆರಾಧಿಸಲಿ.
ಪ್ರತಿಯೊಬ್ಬರೂ ನಿನ್ನ ಹೆಸರನ್ನು ಕೀರ್ತಿಸಲಿ.
5 ಬನ್ನಿರಿ, ದೇವರ ಕಾರ್ಯಗಳನ್ನು ನೋಡಿರಿ;
ಆತನ ಕಾರ್ಯಗಳು ಅತ್ಯದ್ಭುತವಾಗಿವೆ!
6 ಆತನು ಸಮುದ್ರವನ್ನು ಒಣನೆಲವನ್ನಾಗಿ ಮಾಡಿದನು.
ಆತನ ಜನರು ಕಾಲುನಡಿಗೆಯಿಂದ ನದಿಯನ್ನು ದಾಟಿದರು.
ಅದಕ್ಕಾಗಿ ನಾವು ಆತನಲ್ಲಿ ಉಲ್ಲಾಸಪಡೋಣ.
7 ಆತನು ಪ್ರಪಂಚವನ್ನು ತನ್ನ ಮಹಾಶಕ್ತಿಯಿಂದ ಆಳುತ್ತಾನೆ.
ಆತನು ಎಲ್ಲರನ್ನೂ ಗಮನಿಸುತ್ತಾನೆ.
ಆತನ ವಿರುದ್ಧ ದಂಗೆಯೇಳಲು ಯಾರಿಗೂ ಆಗದು.
8 ಜನಾಂಗಗಳೇ, ನಮ್ಮ ದೇವರನ್ನು ಕೊಂಡಾಡಿರಿ.
ಆತನಿಗೆ ಸ್ತುತಿಗೀತೆಗಳನ್ನು ಹಾಡಿರಿ.
9 ನಮಗೆ ಜೀವಕೊಟ್ಟವನು ಆತನೇ.
ನಮ್ಮನ್ನು ಕಾಪಾಡುವವನೂ ಆತನೇ.
10 ಆ ಸಮಯದಲ್ಲಿ ಜೆರುಸಲೇಮಿನ ಸುತ್ತಮುತ್ತ ಇರುವ ಜಾಗವು ನಿರ್ಜನವಾಗಿದ್ದು ಅರಾಬಾ ಮರುಭೂಮಿಯಂತಿರುವದು. ದೇಶವು ಗೆಬದಿಂದ ಹಿಡಿದು ನೆಗೆವ್‌ನಲ್ಲಿರುವ ರಿಮ್ಮೋನ್ ತನಕ ಮರುಭೂಮಿಯಂತಿರುವದು. ಆದರೆ ಜೆರುಸಲೇಮ್ ನಗರವು ತಿರುಗಿ ಕಟ್ಟಲ್ಪಡುವದು. ಬೆನ್ಯಾಮೀನ್ ದ್ವಾರದಿಂದ ಮೂಲೇ ದ್ವಾರ ಅಥವಾ ಮೊದಲನೇ ದ್ವಾರದ ತನಕ ಮತ್ತು ಹನನೇಲ್ ಬುರುಜಿನಿಂದ ಹಿಡಿದು ಅರಸನ ದ್ರಾಕ್ಷಿತೊಟ್ಟಿಯ ತನಕ ಹೊಸದಾಗಿ ಕಟ್ಟಲ್ಪಡುವದು. 11 ಜನರು ಅಲ್ಲಿಗೆ ವಾಸಿಸಲು ಹೋಗುವರು. ಇನ್ನು ಮುಂದೆ ಯಾವ ಶತ್ರುವೂ ಅವರನ್ನು ನಾಶಮಾಡಲು ಬರುವುದಿಲ್ಲ. ಜೆರುಸಲೇಮ್ ಸುರಕ್ಷಿತವಾಗಿರುವದು.
12 ಆದರೆ ಜೆರುಸಲೇಮಿಗೆ ವಿರುದ್ಧವಾಗಿ ಯುದ್ಧ ಮಾಡಿದ ಜನಾಂಗಗಳನ್ನೆಲ್ಲಾ ಯೆಹೋವನು ಶಿಕ್ಷಿಸುವನು. ಅವರಿಗೆ ಭಯಂಕರ ರೋಗವನ್ನು ಬರಮಾಡುವನು. ಅವರು ಜೀವಂತರಾಗಿರುವಾಗಲೇ ಅವರ ಚರ್ಮವು ಕೊಳೆತುಹೋಗುವದು. ಅವರ ಕಣ್ಣುಗಳು ಅವು ಇರುವಲ್ಲಿಯೇ ಕೊಳೆತುಹೋಗುವವು. ಅವರ ಬಾಯೊಳಗೆ ಅವರ ನಾಲಿಗೆಗಳು ಕೊಳೆತುಹೋಗುವವು. 13-15 ಆ ಭಯಂಕರವಾದ ವ್ಯಾಧಿಯು ಶತ್ರುಗಳ ಶಿಬಿರದಲ್ಲಿರುವದು. ಅವರ ಬಳಿಯಲ್ಲಿರುವ ಕುದುರೆ, ಹೇಸರಕತ್ತೆ, ಒಂಟೆ ಮತ್ತು ಕತ್ತೆಗಳೆಲ್ಲಾ ಈ ವ್ಯಾಧಿಯಿಂದ ಸಂಕಟಪಡುವವು.
ಆ ಸಮಯದಲ್ಲಿ ಆ ಜನರು ನಿಜವಾಗಿಯೂ ಯೆಹೋವನಿಗೆ ಭಯಪಡುವರು. ಪ್ರತಿಯೊಬ್ಬನೂ ತನ್ನ ನೆರೆಯವನ ಕೈಗಳನ್ನು ಹಿಡಿದುಕೊಳ್ಳುವನು ಮತ್ತು ಆ ನೆರೆಯವರು ಪರಸ್ಪರ ಹೊಡೆದಾಡಿಕೊಳ್ಳುವರು. ಯೆಹೂದವೂ ಜೆರುಸಲೇಮಿನೊಂದಿಗೆ ಕಾದಾಡುವದು. ಎಲ್ಲಾ ಜನಾಂಗಗಳ ಐಶ್ವರ್ಯವನ್ನು ಪಟ್ಟಣದ ಸುತ್ತಲೂ ಶೇಖರಿಸಿಟ್ಟಿರುವಾಗಲೂ ಇದು ಸಂಭವಿಸುವುದು. ಆಗ ಅಲ್ಲಿ ಬಹು ಸಂಖ್ಯೆಯಲ್ಲಿ ಬೆಳ್ಳಿಬಂಗಾರ ಮತ್ತು ಬಟ್ಟೆಗಳ ರಾಶಿ ಇರುವದು. 16 ಜೆರುಸಲೇಮಿನೊಂದಿಗೆ ಯುದ್ಧಮಾಡಲು ಬಂದವರಲ್ಲಿ ಕೆಲವರು ಸಾಯದೆ ಉಳಿಯುವರು. ಅವರೆಲ್ಲರು ಪ್ರತಿವರ್ಷ ಅರಸನೂ ಸರ್ವಶಕ್ತನೂ ಆಗಿರುವ ಯೆಹೋವನನ್ನು ಆರಾಧಿಸಲು ಜೆರುಸಲೇಮಿಗೆ ಬರುವರು. ಪರ್ಣಶಾಲೆಗಳ ಹಬ್ಬವನ್ನು ಆಚರಿಸಲು ಬರುವರು. 17 ರಾಜನೂ ಸರ್ವಶಕ್ತನೂ ಆಗಿರುವ ಯೆಹೋವನನ್ನು ಆರಾಧಿಸಲು ಭೂಲೋಕದ ಕುಟುಂಬಗಳ ಯಾವ ಜನರಾದರೂ ಜೆರುಸಲೇಮಿಗೆ ಹೋಗದಿದ್ದಲ್ಲಿ ಅವರ ರಾಜ್ಯಗಳಲ್ಲಿ ಮಳೆಗೆರೆಯುವದು ನಿಂತುಹೋಗುವದು. 18 ಈಜಿಪ್ಟಿನಲ್ಲಿರುವ ಯಾವ ಕುಟುಂಬವಾಗಲಿ ಪರ್ಣಶಾಲೆಗಳ ಹಬ್ಬವನ್ನು ಆಚರಿಸಲು ಬಾರದೆ ಹೋದಲ್ಲಿ ಯೆಹೋವನು ಶತ್ರುಗಳಿಗೆ ತಂದ ವ್ಯಾಧಿಯನ್ನು ಅವರಿಗೂ ಬರಮಾಡುವನು. 19 ಇದು ಕೇವಲ ಈಜಿಪ್ಟಿನ ಜನರಿಗೆ ಮಾತ್ರವೇ ಆಗಿರದೆ ಯಾವ ದೇಶವು ಪರ್ಣಶಾಲೆಗಳ ಹಬ್ಬವನ್ನು ಆಚರಿಸಲು ಬರುವುದಿಲ್ಲವೋ ಆ ದೇಶದ ಜನರೂ ಅದೇ ರೋಗಕ್ಕೆ ತುತ್ತಾಗುವರು.
20 ಆ ಸಮಯದಲ್ಲಿ ಸಮಸ್ತವೂ ಯೆಹೋವನಿಗೆ ಸೇರಿದ್ದಾಗಿರುವದು. ಕುದುರೆಗಳ ಮೇಲಿರುವ ಜೀನಿನ ಮೇಲೂ ಸರ್ವಶಕ್ತನಾದ “ಯೆಹೋವನಿಗೆ ಇದು ಮೀಸಲಾಗಿರುವದು” ಎಂದು ಬರೆಯಲ್ಪಡುವದು. ಯೆಹೋವನ ಆಲಯದಲ್ಲಿ ಉಪಯೋಗಿಸುವ ಎಲ್ಲಾ ಮಡಕೆಗಳು ಯಜ್ಞವೇದಿಕೆಯ ಮೇಲೆ ಉಪಯೋಗಿಸುವ ಬೋಗುಣಿಗಳಷ್ಟೇ ಮುಖ್ಯವಾಗಿವೆ. 21 ವಾಸ್ತವವಾಗಿ ಜೆರುಸಲೇಮಿನ ಮತ್ತು ಯೆಹೊದದ ಪ್ರತಿಯೊಂದು ಪಾತ್ರೆಯ ಮೇಲೆ, “ಸರ್ವಶಕ್ತನಾದ ಯೆಹೋವನಿಗೆ ಮೀಸಲಾಗಿದೆ” ಎಂದು ಬರೆದಿರುತ್ತದೆ. ಯಜ್ಞಗಳನ್ನರ್ಪಿಸಲು ಬರುವ ಜನರೆಲ್ಲರೂ ಆ ಪಾತ್ರೆಗಳನ್ನು ತೆಗೆದುಕೊಂಡು ಅವುಗಳಲ್ಲಿ ವಿಶೇಷ ಅಡಿಗೆಯನ್ನು ಮಾಡುವರು.
ಆ ಸಮಯದಲ್ಲಿ ಸರ್ವಶಕ್ತನಾದ ಯೆಹೋವನ ಆಲಯದೊಳಗೆ ಯಾವ ವರ್ತಕನೂ ವ್ಯಾಪಾರ ನಡೆಸುವದಿಲ್ಲ.
ಯೇಸು ತನ್ನ ಅಪೊಸ್ತಲರನ್ನು ಸೇವೆಗೆ ಕಳುಹಿಸಿದ್ದು
(ಮತ್ತಾಯ 10:5-15; ಮಾರ್ಕ 6:7-13)
9 ಯೇಸು ಹನ್ನೆರಡು ಮಂದಿ ಅಪೊಸ್ತಲರನ್ನು ಒಟ್ಟಾಗಿ ಕರೆದು ಅವರಿಗೆ ಕಾಯಿಲೆಗಳನ್ನು ವಾಸಿಮಾಡುವ ಶಕ್ತಿಯನ್ನೂ ದೆವ್ವಗಳ ಮೇಲೆ ಅಧಿಕಾರವನ್ನೂ ಕೊಟ್ಟನು. 2 ದೇವರ ರಾಜ್ಯದ ಬಗ್ಗೆ ತಿಳಿಸುವುದಕ್ಕೂ ಅಸ್ವಸ್ಥರಾದವರನ್ನು ವಾಸಿಮಾಡುವುದಕ್ಕೂ ಯೇಸು ಅಪೊಸ್ತಲರನ್ನು ಕಳುಹಿಸಿದನು. 3 ಆತನು ಅವರಿಗೆ ಹೇಳಿದ್ದೇನೆಂದರೆ: “ನೀವು ಪ್ರಯಾಣಕ್ಕಾಗಿ ಊರುಗೋಲನ್ನಾಗಲಿ ಚೀಲವನ್ನಾಗಲಿ ಆಹಾರವನ್ನಾಗಲಿ ಹಣವನ್ನಾಗಲಿ ತೆಗೆದುಕೊಂಡು ಹೋಗಬೇಡಿರಿ. ಎರಡು ಅಂಗಿಗಳನ್ನೂ ತೆಗೆದುಕೊಳ್ಳಬೇಡಿ. 4 ನೀವು ಒಂದು ಮನೆಯಲ್ಲಿ ಇಳಿದುಕೊಂಡಾಗ, ಆ ಊರನ್ನು ಬಿಟ್ಟುಹೋಗುವ ಸಮಯದವರೆಗೂ ಅಲ್ಲೇ ತಂಗಿರಿ. 5 ಆ ಊರಿನ ಜನರು ನಿಮ್ಮನ್ನು ಸ್ವಾಗತಿಸದಿದ್ದರೆ, ಆ ಊರಿನ ಹೊರಗೆ ಹೋಗಿ ನಿಮ್ಮ ಪಾದಗಳಿಗೆ ಹತ್ತಿದ ಧೂಳನ್ನು ಝಾಡಿಸಿಬಿಡಿರಿ. ಅದು ಅವರಿಗೆ ಎಚ್ಚರಿಕೆಯಾಗಿರುವುದು.”
6 ಆದ್ದರಿಂದ ಅಪೊಸ್ತಲರು ಹೊರಟು ಊರೂರುಗಳಿಗೆ ಹೋಗಿ, ಎಲ್ಲೆಲ್ಲೂ ಸುವಾರ್ತೆಯನ್ನು ಸಾರಿದರು ಮತ್ತು ರೋಗಿಗಳನ್ನು ವಾಸಿಮಾಡಿದರು.
Kannada Holy Bible: Easy-to-Read Version. All rights reserved. © 1997 Bible League International