Revised Common Lectionary (Complementary)
ಸ್ತುತಿಗೀತೆ.
66 ಸರ್ವಭೂನಿವಾಸಿಗಳೇ, ದೇವರಿಗೆ ಜಯಘೋಷ ಮಾಡಿರಿ!
2 ಆತನ ಹೆಸರಿನ ಮಹಿಮೆಯನ್ನು ಕೀರ್ತಿಸಿರಿ.
ಸ್ತುತಿಗೀತೆಗಳಿಂದ ಆತನನ್ನು ಸನ್ಮಾನಿಸಿರಿ.
3 ದೇವರೇ, ನಿನ್ನ ಕಾರ್ಯಗಳು ಎಷ್ಟು ಅದ್ಭುತವಾಗಿವೆ!
ನಿನ್ನ ಮಹಾಶಕ್ತಿಯಿಂದಾಗಿ ಶತ್ರುಗಳು ನಿನಗೆ ಭಯಪಟ್ಟು ಅಡ್ಡಬೀಳುವರು.
4 ಸರ್ವಭೂನಿವಾಸಿಗಳು ನಿನ್ನನ್ನು ಆರಾಧಿಸಲಿ.
ಪ್ರತಿಯೊಬ್ಬರೂ ನಿನ್ನ ಹೆಸರನ್ನು ಕೀರ್ತಿಸಲಿ.
5 ಬನ್ನಿರಿ, ದೇವರ ಕಾರ್ಯಗಳನ್ನು ನೋಡಿರಿ;
ಆತನ ಕಾರ್ಯಗಳು ಅತ್ಯದ್ಭುತವಾಗಿವೆ!
6 ಆತನು ಸಮುದ್ರವನ್ನು ಒಣನೆಲವನ್ನಾಗಿ ಮಾಡಿದನು.
ಆತನ ಜನರು ಕಾಲುನಡಿಗೆಯಿಂದ ನದಿಯನ್ನು ದಾಟಿದರು.
ಅದಕ್ಕಾಗಿ ನಾವು ಆತನಲ್ಲಿ ಉಲ್ಲಾಸಪಡೋಣ.
7 ಆತನು ಪ್ರಪಂಚವನ್ನು ತನ್ನ ಮಹಾಶಕ್ತಿಯಿಂದ ಆಳುತ್ತಾನೆ.
ಆತನು ಎಲ್ಲರನ್ನೂ ಗಮನಿಸುತ್ತಾನೆ.
ಆತನ ವಿರುದ್ಧ ದಂಗೆಯೇಳಲು ಯಾರಿಗೂ ಆಗದು.
8 ಜನಾಂಗಗಳೇ, ನಮ್ಮ ದೇವರನ್ನು ಕೊಂಡಾಡಿರಿ.
ಆತನಿಗೆ ಸ್ತುತಿಗೀತೆಗಳನ್ನು ಹಾಡಿರಿ.
9 ನಮಗೆ ಜೀವಕೊಟ್ಟವನು ಆತನೇ.
ನಮ್ಮನ್ನು ಕಾಪಾಡುವವನೂ ಆತನೇ.
47 ನಾನು ಬಾಬಿಲೋನಿನ ಸುಳ್ಳುದೇವತೆಗಳನ್ನು ದಂಡಿಸುವ ಸಮಯ ಖಂಡಿತವಾಗಿ ಬರುವುದು.
ಬಾಬಿಲೋನಿನ ಇಡೀ ಪ್ರದೇಶವು ನಾಚಿಕೆಪಡುವುದು.
ನಗರದ ಬೀದಿಗಳಲ್ಲಿ
ಅನೇಕಾನೇಕ ಶವಗಳು ಬಿದ್ದಿರುವವು.
48 ಆಗ ಭೂಮ್ಯಾಕಾಶಗಳು ಮತ್ತು ಅವುಗಳಲ್ಲಿರುವ ಸಮಸ್ತ ವಸ್ತುಗಳು
ಬಾಬಿಲೋನಿನ ಬಗ್ಗೆ ಹರ್ಷಧ್ವನಿ ಮಾಡುವವು.
ಏಕೆಂದರೆ ಸೈನ್ಯವು ಉತ್ತರದಿಂದ ಬಂದಿತು,
ಬಾಬಿಲೋನಿನ ವಿರುದ್ಧ ಯುದ್ಧಮಾಡಿತು”
ಇದು ಯೆಹೋವನ ನುಡಿ.
49 “ಬಾಬಿಲೋನ್ ಇಸ್ರೇಲರನ್ನು ಕೊಂದಿತು.
ಬಾಬಿಲೋನ್ ಭೂಮಂಡಲದ ಎಲ್ಲೆಡೆಯ ಜನರನ್ನು ಕೊಂದಿತು.
ಅದಕ್ಕಾಗಿ ಬಾಬಿಲೋನ್ ಪತನವಾಗಲೇಬೇಕು.
50 ನೀವು ಖಡ್ಗಗಳಿಂದ ತಪ್ಪಿಸಿಕೊಂಡಿರಿ.
ನೀವು ಅವಸರ ಮಾಡಿ ಬಾಬಿಲೋನನ್ನು ಬಿಡಬೇಕು.
ತಡೆಯಬೇಡಿ,
ನೀವು ಬಹಳ ದೂರಪ್ರದೇಶದಲ್ಲಿ ಇದ್ದೀರಿ.
ಆದರೆ ನೀವು ಇರುವಲ್ಲಿಯೇ ಯೆಹೋವನನ್ನು ಸ್ಮರಿಸಿರಿ; ಜೆರುಸಲೇಮನ್ನೂ ಸ್ಮರಿಸಿಕೊಳ್ಳಿರಿ.
51 “ಯೆಹೂದದ ಜನರಾದ ನಾವು ನಾಚಿಕೆಪಟ್ಟೆವು.
ಜನರು ನಮ್ಮನ್ನು ಅಪಮಾನಗೊಳಿಸಿದ್ದರಿಂದ ನಾವು ನಾಚಿಕೆಪಟ್ಟಿದ್ದೇವೆ.
ಏಕೆಂದರೆ ಯೆಹೋವನ ಆಲಯದ
ಪವಿತ್ರ ಸ್ಥಳಗಳಲ್ಲಿ ಅಪರಿಚಿತರು ಪ್ರವೇಶಗೈದಿದ್ದಾರೆ.”
52 ಯೆಹೋವನು ಹೀಗೆನ್ನುವನು: “ಬಾಬಿಲೋನಿನ ವಿಗ್ರಹಗಳನ್ನು
ನಾನು ದಂಡಿಸುವ ಕಾಲ ಬರುತ್ತಿದೆ.
ಆಗ ಆ ದೇಶದಲ್ಲೆಲ್ಲಾ ಗಾಯಗೊಂಡ ಜನರು
ನೋವಿನಿಂದ ಗೋಳಾಡುವರು.
53 ಬಾಬಿಲೋನ್ ನಗರವು ಗಗನ ಚುಂಬಿಯಾಗಿ ಬೆಳೆಯಬಹುದು.
ಅದು ತನ್ನ ಕೋಟೆಗಳನ್ನು ಭದ್ರಪಡಿಸಿಕೊಳ್ಳಬಹುದು.
ಆದರೆ ಆ ನಗರದ ವಿರುದ್ಧ ಯುದ್ಧಮಾಡಲು ನಾನು ಜನರನ್ನು ಕಳುಹಿಸುತ್ತೇನೆ.
ಆ ಜನರು ಅದನ್ನು ನಾಶಮಾಡುವರು.”
ಇದು ಯೆಹೋವನ ನುಡಿ.
54 “ಬಾಬಿಲೋನಿನಲ್ಲಿ ಜನರು ರೋಧಿಸುವದನ್ನು ನಾವು ಕೇಳುವೆವು.
ಬಾಬಿಲೋನ್ ಪ್ರದೇಶದಲ್ಲಿ ವಸ್ತುಗಳನ್ನು ನಾಶಮಾಡುವ ಜನರ ಧ್ವನಿಯನ್ನು ನಾವು ಕೇಳುವೆವು.
55 ಯೆಹೋವನು ಬಾಬಿಲೋನನ್ನು ಬಹುಬೇಗನೆ ನಾಶಮಾಡುವನು.
ಆ ನಗರದ ದೊಡ್ಡ ಧ್ವನಿಗಳು ಶಾಂತವಾಗುವಂತೆ ಆತನು ಮಾಡುವನು.
ವೈರಿಗಳು ಸಾಗರದ ತರಂಗಮಾಲೆಗಳಂತೆ ಗರ್ಜಿಸುತ್ತಾ ಬರುವರು.
ಸುತ್ತಮುತ್ತಲಿನ ಜನರೆಲ್ಲರು ಆ ಗರ್ಜನೆಯನ್ನು ಕೇಳುವರು.
56 ಸೈನ್ಯವು ಬಂದು ಬಾಬಿಲೋನನ್ನು ನಾಶಮಾಡುವುದು.
ಬಾಬಿಲೋನಿನ ಸೈನಿಕರನ್ನು ವಶಪಡಿಸಿಕೊಳ್ಳಲಾಗುವುದು.
ಅವರ ಬಿಲ್ಲುಗಳನ್ನು ಮುರಿಯಲಾಗುವುದು.
ಏಕೆಂದರೆ ಯೆಹೋವನು ಜನರನ್ನು ಅವರು ಮಾಡುವ ದುಷ್ಕೃತ್ಯಗಳಿಗಾಗಿ ಶಿಕ್ಷಿಸುತ್ತಾನೆ.
ಯೆಹೋವನು ಅವರಿಗೆ ತಕ್ಕ ಶಿಕ್ಷೆಯನ್ನು ಸಂಪೂರ್ಣವಾಗಿ ಕೊಡುತ್ತಾನೆ.
57 ಬಾಬಿಲೋನಿನ ಮುಖ್ಯ ಅಧಿಕಾರಿಗಳಿಗೂ
ಪಂಡಿತರಿಗೂ ದ್ರಾಕ್ಷಾರಸ ಕುಡಿಯುವಂತೆ ಮಾಡುತ್ತೇನೆ.
ಅಲ್ಲಿಯ ಅಧಿಪತಿಗಳಿಗೂ ಅಧಿಕಾರಿಗಳಿಗೂ ಸೈನಿಕರಿಗೂ ದ್ರಾಕ್ಷಾರಸ ಕುಡಿಸುತ್ತೇನೆ.
ಆಮೇಲೆ ಅವರು ಶಾಶ್ವತವಾಗಿ ಮಲಗಿಬಿಡುತ್ತಾರೆ.
ಅವರು ಎಚ್ಚರಗೊಳ್ಳುವುದೇ ಇಲ್ಲ.”
ಸರ್ವಶಕ್ತನಾದ ಯೆಹೋವನೆಂಬ
ನಾಮಧೇಯದ ರಾಜಾಧಿರಾಜನ ನುಡಿಯಿದು.
58 ಸರ್ವಶಕ್ತನಾದ ಯೆಹೋವನು ಹೀಗೆನ್ನುವನು:
“ಬಾಬಿಲೋನಿನ ಅಗಲವಾದ ಮತ್ತು ಸುಭದ್ರವಾದ ಗೋಡೆಯನ್ನು ಬೀಳಿಸಲಾಗುವುದು.
ಅದರ ಎತ್ತರವಾದ ಬಾಗಿಲುಗಳನ್ನು ಸುಟ್ಟುಹಾಕಲಾಗುವುದು.
ಬಾಬಿಲೋನಿನ ಜನರು ನಗರವನ್ನು ರಕ್ಷಿಸಲು ಬಹಳ ಕಷ್ಟಪಡುವರು.
ಆದರೆ ಅದು ನಿಷ್ಪ್ರಯೋಜಕವಾಗುವುದು.
ನಗರವನ್ನು ರಕ್ಷಿಸುವ ಪ್ರಯತ್ನದಲ್ಲಿ ಅವರು ತುಂಬಾ ಶ್ರಮವಹಿಸುವರು.
ಆದರೆ ಅವರು ಕೇವಲ ಅಗ್ನಿಗೆ ಆಹುತಿಯಾಗುವರು.”
ಕ್ರೈಸ್ತರ ಕೊಡುವಿಕೆ
8 ಸಹೋದರ ಸಹೋದರಿಯರೇ, ಮಕೆದೋನಿಯದ ಸಭೆಗಳಲ್ಲಿ ದೇವರು ತೋರಿದ ಕೃಪೆಯ ಬಗ್ಗೆ ನಿಮಗೆ ತಿಳಿಸಲು ಇಷ್ಟಪಡುತ್ತೇವೆ. 2 ಆ ವಿಶ್ವಾಸಿಗಳು ಅತೀವ ಕಷ್ಟಗಳಿಂದ ಪರೀಕ್ಷಿಸಲ್ಪಟ್ಟಿದ್ದಾರೆ. ಅವರು ಬಹಳ ಬಡಜನರು. ಆದರೆ ಅವರು ತಮ್ಮ ಮಹಾ ಆನಂದದಿಂದ ಬಹಳವಾಗಿ ಕೊಟ್ಟರು. 3 ತಮ್ಮಿಂದ ಸಾಧ್ಯವಾದಷ್ಟರ ಮಟ್ಟಿಗೆ ಕೊಟ್ಟಿದ್ದಾರೆಂದು ನಾನು ನಿಮಗೆ ಹೇಳುತ್ತೇನೆ. ಅವರು ತಮ್ಮ ಶಕ್ತಿಮೀರಿ ಕೊಟ್ಟಿದ್ದಾರೆ. ಅವರು ತಾವಾಗಿಯೇ ಕೊಟ್ಟರು. ಕೊಡಬೇಕೆಂದು ಅವರಿಗೆ ಯಾರೂ ಹೇಳಲಿಲ್ಲ. 4 ದೇವಜನರಿಗೋಸ್ಕರವಾದ ಈ ಸೇವೆಯಲ್ಲಿ ತಾವೂ ಪಾಲುಗಾರರಾಗುವ ಭಾಗ್ಯ ದೊರೆಯಬೇಕೆಂದು ಅವರು ನಮ್ಮನ್ನು ಪದೇಪದೇ ಕೇಳಿಕೊಂಡರು ಮತ್ತು ಬೇಡಿಕೊಂಡರು. 5 ನಾವೆಂದೂ ನೆನಸಿಲ್ಲದ ರೀತಿಯಲ್ಲಿ ಅವರು ಕೊಟ್ಟರು. ಅವರು ತಮ್ಮ ಹಣವನ್ನು ನಮಗೆ ಕೊಡುವುದಕ್ಕಿಂತ ಮೊದಲು ತಮ್ಮನ್ನೇ ಪ್ರಭುವಿಗೂ ನಮಗೂ ಒಪ್ಪಿಸಿಕೊಟ್ಟರು. ದೇವರು ಬಯಸುವುದು ಇದನ್ನೇ.
6 ಆದ್ದರಿಂದ, ವಿಶೇಷವಾದ ಈ ಕೃಪಾಕಾರ್ಯವನ್ನು ಪೂರೈಸಲು ನಿಮಗೆ ಸಹಾಯ ಮಾಡಬೇಕೆಂದು ನಾವು ತೀತನನ್ನು ಕೇಳಿಕೊಂಡೆವು. ಈ ಕಾರ್ಯವನ್ನು ಪ್ರಾರಂಭಿಸಿದವನು ತೀತನೇ. 7 ನೀವು ಪ್ರತಿಯೊಂದರಲ್ಲಿಯೂ ಅಂದರೆ, ನಂಬಿಕೆಯಲ್ಲಿ, ಮಾತಾಡುವುದರಲ್ಲಿ, ಜ್ಞಾನದಲ್ಲಿ, ಸಹಾಯಮಾಡಬೇಕೆಂಬ ಆಸಕ್ತಿಯಲ್ಲಿ ಮತ್ತು ನಮ್ಮಿಂದ ಕಲಿತುಕೊಂಡ ಪ್ರೀತಿಯಲ್ಲಿ ಶ್ರೀಮಂತರಾಗಿದ್ದೀರಿ. ಆದ್ದರಿಂದ ಕೃಪಾಕಾರ್ಯದಲ್ಲಿಯೂ ನೀವು ಶ್ರೀಮಂತರಾಗಿರಬೇಕೆಂದು ನಾವು ಬಯಸುತ್ತೇವೆ.
Kannada Holy Bible: Easy-to-Read Version. All rights reserved. © 1997 Bible League International