Revised Common Lectionary (Complementary)
ಸ್ತುತಿಗೀತೆ. ರಚನೆಗಾರ: ದಾವೀದ.
140 ಯೆಹೋವನೇ, ಕೆಡುಕರಿಂದ ನನ್ನನ್ನು ರಕ್ಷಿಸು.
ಕ್ರೂರಿಗಳಿಂದ ನನ್ನನ್ನು ಕಾಪಾಡು.
2 ಅವರು ಕೇಡುಮಾಡಬೇಕೆಂದಿದ್ದಾರೆ. ಅವರು ಯಾವಾಗಲೂ ಜಗಳವೆಬ್ಬಿಸುತ್ತಾರೆ.
3 ಅವರ ನಾಲಿಗೆಗಳು ಸರ್ಪಗಳಂತಿವೆ.
ಅವರ ನಾಲಿಗೆಯ ಕೆಳಗೆ ಹಾವಿನ ವಿಷವಿದೆ.
4 ಯೆಹೋವನೇ, ದುಷ್ಟರಿಂದ ನನ್ನನ್ನು ರಕ್ಷಿಸು.
ಕ್ರೂರಿಗಳಿಂದ ನನ್ನನ್ನು ಕಾಪಾಡು.
ಅವರು ನನ್ನನ್ನು ಹಿಂದಟ್ಟಿ ನನಗೆ ಕೇಡುಮಾಡಬೇಕೆಂದಿದ್ದಾರೆ.
5 ಆ ಗರ್ವಿಷ್ಠರು ನನಗೆ ಉರುಲನ್ನು ಒಡ್ಡಿದ್ದಾರೆ;
ನನ್ನನ್ನು ಹಿಡಿಯಲು ಬಲೆಯನ್ನು ಹಾಸಿದ್ದಾರೆ;
ನನ್ನ ದಾರಿಯಲ್ಲಿ ಬೋನನ್ನು ಇಟ್ಟಿದ್ದಾರೆ.
6 ಯೆಹೋವನೇ, ನನ್ನ ದೇವರು ನೀನೇ.
ನನ್ನ ಪ್ರಾರ್ಥನೆಗೆ ಕಿವಿಗೊಡು.
7 ಯೆಹೋವನೇ, ನನ್ನ ಬಲಿಷ್ಠನಾದ ಒಡೆಯನು ನೀನೇ.
ನನ್ನ ರಕ್ಷಕನೂ ನೀನೇ, ನನ್ನ ಶಿರಸ್ತ್ರಾಣವೂ ನೀನೇ.
8 ಯೆಹೋವನೇ, ಆ ದುಷ್ಟರ ದುರಾಶೆಯೂ
ದುರಾಲೋಚನೆಯೂ ನೆರವೇರಲು ಬಿಡಬೇಡ.
9 ನನ್ನ ವೈರಿಗಳಿಗೆ ಜಯವಾಗಲು ಬಿಡಬೇಡ.
ಅವರು ಕುಯುಕ್ತಿಗಳನ್ನು ಮಾಡುತ್ತಿದ್ದಾರೆ; ಅವುಗಳನ್ನು ವಿಫಲಗೊಳಿಸು.
10 ಅವರ ತಲೆಗಳ ಮೇಲೆ ಉರಿಯುವ ಕೆಂಡಗಳನ್ನು ಸುರಿದು
ಬೆಂಕಿಯೊಳಗೆ ಎಸೆದುಬಿಡು;
ಎಂದಿಗೂ ಹತ್ತಿ ಬರಲಾಗದ ಗುಂಡಿಯೊಳಗೆ ಅವರನ್ನು ಎಸೆದುಬಿಡು.
11 ಆ ಸುಳ್ಳುಗಾರರನ್ನು ಜೀವಂತವಾಗಿ ಉಳಿಸಬೇಡ.
ಆ ಕೆಡುಕರಿಗೆ ಕೇಡುಗಳಾಗುವಂತೆ ಮಾಡು.
12 ಯೆಹೋವನು ದೀನರಿಗೆ ನ್ಯಾಯವಾದ ತೀರ್ಪನ್ನು ಪಾಲಿಸುತ್ತಾನೆಂದು ನನಗೆ ಗೊತ್ತಿದೆ.
ದೇವರು ಅಸಹಾಯಕರಿಗೆ ಸಹಾಯಮಾಡುವನು.
13 ನೀತಿವಂತರು ನಿನ್ನ ಹೆಸರನ್ನು ಕೊಂಡಾಡುವರು;
ಯಥಾರ್ಥವಂತರು ನಿನ್ನ ಸನ್ನಿಧಿಯಲ್ಲಿ ಜೀವಿಸುವರು.
ರೆಬೆಕ್ಕಳನ್ನು ಇಸಾಕನಿಗಾಗಿ ಕೇಳಿದ್ದು
34 ಆ ಸೇವಕನು “ನಾನು ಅಬ್ರಹಾಮನ ಸೇವಕನು. 35 ಯೆಹೋವನು ನನ್ನ ಒಡೆಯನನ್ನು ಪ್ರತಿಯೊಂದರಲ್ಲಿಯೂ ಬಹಳವಾಗಿ ಆಶೀರ್ವದಿಸಿದ್ದಾನೆ. ನನ್ನ ಒಡೆಯನು ಮಹಾವ್ಯಕ್ತಿಯಾಗಿದ್ದಾನೆ. ಯೆಹೋವನು ಅಬ್ರಹಾಮನಿಗೆ ಅನೇಕ ಕುರಿಹಿಂಡುಗಳನ್ನೂ ದನಕರುಗಳ ಮಂದೆಗಳನ್ನೂ ಕೊಟ್ಟಿದ್ದಾನೆ. ಅಬ್ರಹಾಮನಿಗೆ ಬೇಕಾದಷ್ಟು ಬೆಳ್ಳಿಬಂಗಾರಗಳಿವೆ. ಅನೇಕ ಸೇವಕರಿದ್ದಾರೆ. ಅನೇಕ ಒಂಟೆಗಳೂ ಕತ್ತೆಗಳೂ ಇವೆ. 36 ಸಾರಳು ನನ್ನ ಒಡೆಯನ ಹೆಂಡತಿ. ಆಕೆ ತುಂಬಾ ವಯಸ್ಸಾಗಿರುವಾಗ ಒಬ್ಬ ಗಂಡುಮಗನನ್ನು ಹೆತ್ತಳು. ನನ್ನ ಒಡೆಯನು ತನ್ನ ಆಸ್ತಿಯನ್ನೆಲ್ಲ ಆ ಮಗನಿಗೇ ಕೊಟ್ಟಿದ್ದಾನೆ. 37 ನನ್ನ ಒಡೆಯನ್ನು ನನ್ನಿಂದ ಒಂದು ಪ್ರಮಾಣವನ್ನು ಬಲವಂತವಾಗಿ ಮಾಡಿಸಿದನು. ನನ್ನ ಒಡೆಯನು ನನಗೆ, ‘ನನ್ನ ಮಗನಿಗೆ ಕಾನಾನಿನ ಹುಡುಗಿಯೊಡನೆ ಮದುವೆಯಾಗದಂತೆ ನೀನು ನೋಡಿಕೊಳ್ಳಬೇಕು; ನಾವು ಈ ಜನರೊಡನೆ ವಾಸಿಸುತ್ತಿದ್ದೇವೆ. ಆದರೆ ಕಾನಾನಿನ ಹುಡುಗಿಯೊಂದಿಗೆ ನನ್ನ ಮಗನಿಗೆ ಮದುವೆಯಾಗುವುದು ನನಗೆ ಇಷ್ಟವಿಲ್ಲ. 38 ಆದ್ದರಿಂದ ನೀನು ನನ್ನ ಸ್ವದೇಶಕ್ಕೆ ಹೋಗಿ ನನ್ನ ಸ್ವಜನರಿಂದಲೇ ನನ್ನ ಮಗನಿಗೆ ಕನ್ಯೆಯನ್ನು ತೆಗೆದುಕೊಳ್ಳಬೇಕು’ ಎಂದು ಹೇಳಿದನು. 39 ನಾನು ನನ್ನ ಒಡೆಯನಿಗೆ, ‘ಆ ಕನ್ಯೆಯು ಈ ದೇಶಕ್ಕೆ ನನ್ನೊಂದಿಗೆ ಬರಲು ಒಪ್ಪದಿರಬಹುದು’ ಎಂದು ಹೇಳಿದೆ. 40 ಆದರೆ ನನ್ನ ಒಡೆಯನು ನನಗೆ, ‘ನಾನು ಯೆಹೋವನ ಸೇವೆ ಮಾಡುತ್ತಿದ್ದೇನೆ. ಆದ್ದರಿಂದ ಯೆಹೋವನು ತನ್ನ ದೂತನನ್ನು ನಿನ್ನೊಂದಿಗೆ ಕಳುಹಿಸಿ ನಿನಗೆ ಸಹಾಯ ಮಾಡುವನು. ಅಲ್ಲಿರುವ ನನ್ನ ತಂದೆಯ ಕುಟುಂಬದವರಲ್ಲಿ ನೀನು ನನ್ನ ಮಗನಿಗಾಗಿ ಒಬ್ಬ ಕನ್ಯೆಯನ್ನು ಕಂಡುಕೊಳ್ಳುವೆ. 41 ಆದರೆ ನೀನು ನನ್ನ ತಂದೆಯ ನಾಡಿಗೆ ಹೋದಾಗ ಅವರು ನನ್ನ ಮಗನಿಗೆ ಒಬ್ಬ ಕನ್ಯೆಯನ್ನು ಕೊಡಲು ಒಪ್ಪದಿದ್ದರೆ ನೀನು ಈ ಪ್ರಮಾಣದಿಂದ ಬಿಡುಗಡೆಯಾಗಿರುವೆ’ ಎಂದು ಹೇಳಿದನು.
50 ಅದಕ್ಕೆ ಲಾಬಾನನು ಮತ್ತು ಬೆತೂವೇಲನು, “ನಿನ್ನನ್ನು ಯೆಹೋವನೇ ಕಳುಹಿಸಿದ್ದಾನೆ. ನಡೆಯತಕ್ಕದ್ದನ್ನು ಬದಲಾಯಿಸಲು ನಮಗೆ ಸಾಧ್ಯವಿಲ್ಲ. 51 ರೆಬೆಕ್ಕಳು ನಿಮ್ಮವಳು. ನೀನು ಆಕೆಯನ್ನು ಕರೆದುಕೊಂಡು ಹೋಗಿ ಯೆಹೋವನ ಇಷ್ಟಕ್ಕನುಸಾರವಾಗಿ ನಿನ್ನ ಒಡೆಯನ ಮಗನಿಗೆ ಮದುವೆ ಮಾಡಿಸು” ಎಂದು ಹೇಳಿದರು.
52 ಅಬ್ರಹಾಮನ ಸೇವಕನು ಈ ಮಾತುಗಳನ್ನು ಕೇಳಿ ಯೆಹೋವನಿಗೆ ನೆಲದವರೆಗೂ ತಲೆಬಾಗಿ ನಮಸ್ಕರಿಸಿದನು. 53 ಆಮೇಲೆ ಆ ಸೇವಕನು ತಾನು ತಂದಿದ್ದ ಉಡುಗೊರೆಗಳನ್ನು ರೆಬೆಕ್ಕಳಿಗೆ ಕೊಟ್ಟನು. ಅವನು ರೆಬೆಕ್ಕಳಿಗೆ ಬೆಳ್ಳಿಬಂಗಾರಗಳ ಒಡವೆಗಳನ್ನೂ ಶ್ರೇಷ್ಠವಾದ ಬಟ್ಟೆಗಳನ್ನೂ ಕೊಟ್ಟನು. ಇದಲ್ಲದೆ ಅವನು ಬೆಲೆಬಾಳುವ ಉಡುಗೊರೆಗಳನ್ನು ಆಕೆಯ ಅಣ್ಣನಿಗೂ ತಾಯಿಗೂ ಕೊಟ್ಟನು. 54 ಆ ಸೇವಕನು ಮತ್ತು ಅವನ ಸಂಗಡಿಗರು ಅಲ್ಲಿ ಇಳಿದುಕೊಂಡು ಊಟಮಾಡಿದರು. ಅವರು ಮರುದಿನ ಮುಂಜಾನೆ ಎದ್ದು, “ಈಗ ನಾವು ನಮ್ಮ ಒಡೆಯನ ಬಳಿಗೆ ಹೋಗುತ್ತೇವೆ” ಎಂದು ಹೇಳಿದರು.
55 ರೆಬೆಕ್ಕಳ ತಾಯಿ ಮತ್ತು ಅಣ್ಣನು ಅವರಿಗೆ, “ರೆಬೆಕ್ಕಳು ಸ್ವಲ್ಪ ದಿನಗಳವರೆಗೆ ನಮ್ಮ ಜೊತೆ ಇರಲಿ. ಹತ್ತು ದಿನಗಳವರೆಗಾದರೂ ನಮ್ಮೊಡನೆ ಇರಲಿ. ಆಮೇಲೆ ಆಕೆಯನ್ನು ಕರೆದುಕೊಂಡು ಹೋಗು” ಎಂದು ಹೇಳಿದರು.
56 ಆದರೆ ಆ ಸೇವಕನು ಅವರಿಗೆ, “ನನ್ನನ್ನು ತಡೆಯಬೇಡಿ. ಯೆಹೋವನು ನನ್ನ ಪ್ರಯಾಣವನ್ನು ಯಶಸ್ವಿಗೊಳಿಸಿದ್ದಾನೆ. ಈಗ ನನ್ನನ್ನು ನನ್ನ ಒಡೆಯನ ಬಳಿಗೆ ಕಳುಹಿಸಿಕೊಡಿ” ಎಂದು ಹೇಳಿದನು.
57 ರೆಬೆಕ್ಕಳ ಅಣ್ಣ ಮತ್ತು ತಾಯಿ ಅವನಿಗೆ, “ನಾವು ರೆಬೆಕ್ಕಳನ್ನು ಕರೆದು ಆಕೆಯ ಇಷ್ಟವನ್ನು ಕೇಳುತ್ತೇವೆ” ಅಂದರು. 58 ಅವರು ರೆಬೆಕ್ಕಳನ್ನು ಕರೆದು, “ಈಗಲೇ ಈ ಮನುಷ್ಯನೊಡನೆ ಹೋಗಲು ನಿನಗೆ ಇಷ್ಟವಿದೆಯೋ?” ಎಂದು ಕೇಳಿದರು.
ರೆಬೆಕ್ಕಳು, “ಹೌದು, ನಾನು ಹೋಗುತ್ತೇನೆ” ಅಂದಳು.
59 ಆದ್ದರಿಂದ ಅವರು ರೆಬೆಕ್ಕಳನ್ನು ಅಬ್ರಹಾಮನ ಸೇವಕನೊಂದಿಗೂ ಅವನ ಸಂಗಡಿಗರೊಂದಿಗೂ ಕಳುಹಿಸಿಕೊಟ್ಟರು. ರೆಬೆಕ್ಕಳ ಸೇವಕಿ ಸಹ ಅವರೊಂದಿಗೆ ಹೋದಳು. 60 ಅವರು ಹೊರಡಲು ಸಿದ್ಧರಾಗಿದ್ದಾಗ ಅವರು ರೆಬೆಕ್ಕಳಿಗೆ,
“ನಮ್ಮ ತಂಗಿಯೇ,
ನೀನು ಕೋಟ್ಯಾನುಕೋಟಿ ಜನರ ತಾಯಿಯಾಗು.
ನಿನ್ನ ಸಂತತಿಗಳವರು ತಮ್ಮ ಶತ್ರುಗಳನ್ನು ಸೋಲಿಸಿ
ಅವರ ನಗರಗಳನ್ನು ವಶಮಾಡಿಕೊಳ್ಳಲಿ”
ಎಂದು ಹೇಳಿ ಹರಸಿದರು.
61 ಆಮೇಲೆ ರೆಬೆಕ್ಕಳು ಮತ್ತು ಆಕೆಯ ಸೇವಕಿಯರು ಒಂಟೆಯ ಮೇಲೆ ಹತ್ತಿ ಕುಳಿತುಕೊಂಡು ಆ ಸೇವಕನನ್ನೂ ಅವನ ಸಂಗಡಿಗರನ್ನೂ ಹಿಂಬಾಲಿಸಿದರು. ಹೀಗೆ ಆ ಸೇವಕನು ರೆಬೆಕ್ಕಳನ್ನು ಕರೆದುಕೊಂಡು ಮನೆಗೆ ಮರಳಿ ಪ್ರಯಾಣಮಾಡಿದನು.
62 ಆ ಸಮಯದಲ್ಲಿ, ಇಸಾಕನು ಬೀರ್ಲಹೈರೋಯಿಗೆ ಹೋಗಿ ಬಂದಿದ್ದನು; ಯಾಕೆಂದರೆ ಅವನು ನೆಗವ್ನಲ್ಲಿ ವಾಸವಾಗಿದ್ದನು. 63 ಸಾಯಂಕಾಲದಲ್ಲಿ ಇಸಾಕನು ಧ್ಯಾನಮಾಡಲು ಹೊಲಕ್ಕೆ ಹೋದನು. ಇಸಾಕನು ಕಣ್ಣೆತ್ತಿ ನೋಡಿದಾಗ ಬಹುದೂರದಲ್ಲಿ ಒಂಟೆಗಳು ಬರುತ್ತಿರುವುದನ್ನು ಕಂಡನು.
64 ರೆಬೆಕ್ಕಳು ಕಣ್ಣೆತ್ತಿ ನೋಡಿದಾಗ ಇಸಾಕನನ್ನು ಕಂಡಳು. ಆಮೇಲೆ ಆಕೆ ಒಂಟೆಯಿಂದ ಬೇಗನೆ ಇಳಿದು ಬಂದಳು. 65 ಆಕೆ, ಆ ಸೇವಕನಿಗೆ, “ನಮ್ಮನ್ನು ಭೇಟಿಯಾಗಲು ಹೊಲದಲ್ಲಿ ಬರುತ್ತಿರುವ ಆ ಯೌವನಸ್ಥನು ಯಾರು?” ಎಂದು ಕೇಳಿದಳು.
ಆ ಸೇವಕನು, “ಅವನು ನನ್ನ ಒಡೆಯನ ಮಗನು” ಎಂದು ಹೇಳಿದನು. ಆ ಕೂಡಲೇ ರೆಬೆಕ್ಕಳು ತನ್ನ ಮುಖಕ್ಕೆ ಮುಸುಕನ್ನು ಹಾಕಿಕೊಂಡಳು.
66 ಆ ಸೇವಕನು ನಡೆದ ಸಂಗತಿಯನ್ನೆಲ್ಲಾ ಇಸಾಕನಿಗೆ ತಿಳಿಸಿದನು. 67 ನಂತರ ಇಸಾಕನು ಆಕೆಯನ್ನು ಕರೆದುಕೊಂಡು ತನ್ನ ತಾಯಿಯ ಗುಡಾರಕ್ಕೆ ಬಂದನು. ಅಂದು ರೆಬೆಕ್ಕಳು ಇಸಾಕನ ಹೆಂಡತಿಯಾದಳು. ಇಸಾಕನು ಅವಳನ್ನು ಬಹಳವಾಗಿ ಪ್ರೀತಿಸಿದನು. ತಾಯಿಯ ಸಾವಿನಿಂದ ಉಂಟಾಗಿದ್ದ ದುಃಖವು ಕಡಿಮೆಯಾಗಿ ಇಸಾಕನಿಗೆ ಆದರಣೆಯಾಯಿತು.
ಇತರರನ್ನು ಪ್ರೀತಿಸಿ
7 ನನ್ನ ಪ್ರಿಯ ಸ್ನೇಹೀತರೇ, ನಾನು ನಿಮಗೆ ಹೊಸ ಆಜ್ಞೆಯನ್ನು ಬರೆಯುತ್ತಿಲ್ಲ. ಮೊದಲಿಂದಲೂ ಈ ಆಜ್ಞೆಯು ನಿಮಗಿತ್ತು. ನೀವು ಈಗಾಗಲೇ ಕೇಳಿರುವ ವಾಕ್ಯವೇ ಈ ಆಜ್ಞೆಯಾಗಿದೆ. 8 ಆದರೆ ಈ ಆಜ್ಞೆಯನ್ನು ನಾನು ನಿಮಗೆ ಹೊಸ ಆಜ್ಞೆಯೋ ಎಂಬಂತೆ ಬರೆಯುತ್ತಿದ್ದೇನೆ. ಈ ಆಜ್ಞೆಯು ಸತ್ಯವಾದದ್ದು. ಅದರ ಸತ್ಯತೆಯನ್ನು ನೀವು ಯೇಸುವಿನಲ್ಲಿಯೂ ನಿಮ್ಮಲ್ಲಿಯೂ ಕಾಣಬಹುದು. ಕತ್ತಲೆಯು ಕಳೆದುಹೋಗುತ್ತಿದೆ ಮತ್ತು ನಿಜವಾದ ಬೆಳಕು ಈಗಾಗಲೇ ಪ್ರಕಾಶಿಸುತ್ತಿದೆ.
9 “ನಾನು ಬೆಳಕಿನಲ್ಲಿದ್ದೇನೆ” ಎಂದು ಹೇಳುವವನು ತನ್ನ ಸಹೋದರನನ್ನು ದ್ವೇಷಿಸುತ್ತಿದ್ದರೆ, ಅವನಿನ್ನೂ ಅಂಧಕಾರದಲ್ಲಿದ್ದಾನೆ. 10 ತನ್ನ ಸಹೋದರನನ್ನು ಪ್ರೀತಿಸುವವನು ಬೆಳಕಿನಲ್ಲಿದ್ದಾನೆ. ಬೇರೊಬ್ಬನನ್ನು ಪಾಪಕ್ಕೆ ನಡೆಸುವಂಥದ್ದೇನೂ ಅವನಲ್ಲಿರುವುದಿಲ್ಲ. 11 ಆದರೆ ತನ್ನ ಸಹೋದರನನ್ನು ದ್ವೇಷಿಸುವವನು ಅಂಧಕಾರದಲ್ಲಿದ್ದಾನೆ. ಅವನು ಅಂಧಕಾರದಲ್ಲಿಯೇ ಜೀವಿಸುತ್ತಾನೆ. ಅವನಿಗೆ ತಾನು ಎಲ್ಲಿಗೆ ಹೋಗುತ್ತಿದ್ದೇನೆ ಎಂಬುದೇ ತಿಳಿದಿಲ್ಲ. ಏಕೆಂದರೆ ಅಂಧಕಾರವು ಅವನನ್ನು ಕುರುಡನನ್ನಾಗಿ ಮಾಡಿದೆ.
Kannada Holy Bible: Easy-to-Read Version. All rights reserved. © 1997 Bible League International