Revised Common Lectionary (Complementary)
ರಚನೆಗಾರ: ದಾವೀದ.
16 ದೇವರೇ, ನನ್ನನ್ನು ಕಾಪಾಡು. ಯಾಕೆಂದರೆ ನಾನು ನಿನ್ನನ್ನೇ ಆಶ್ರಯಿಸಿಕೊಂಡಿರುವೆ.
2 ನಾನು ಯೆಹೋವನಿಗೆ, “ನೀನೇ ನನ್ನ ಒಡೆಯನು.
ನನ್ನಲ್ಲಿರುವ ಒಳ್ಳೆಯದನ್ನೆಲ್ಲ ದಯಪಾಲಿಸಿದಾತನು ನೀನೇ” ಎಂದು ಹೇಳಿದೆನು.
3 ಯೆಹೋವನು ಭೂಲೋಕದಲ್ಲಿರುವ ತನ್ನ ಭಕ್ತರಿಗೆ ಅತಿಶಯವಾದವುಗಳನ್ನು ಮಾಡುವನು;
ಅವರ ಮೇಲೆ ತನಗಿರುವ ನಿಜವಾದ ಪ್ರೀತಿಯನ್ನು ತೋರ್ಪಡಿಸುವನು.
4 ಆದರೆ ಅನ್ಯದೇವರುಗಳನ್ನು ಆಶ್ರಯಿಸಿಕೊಂಡವರಿಗೆ ಕೇಡುಗಳು ಹೆಚ್ಚಾಗುತ್ತವೆ.
ಅವರು ಆ ವಿಗ್ರಹಗಳಿಗೆ ಅರ್ಪಿಸುವ ರಕ್ತದ ಕಾಣಿಕೆಗಳಲ್ಲಿ ನಾನು ಪಾಲುಗಾರನಾಗುವುದಿಲ್ಲ,
ಆ ವಿಗ್ರಹಗಳ ಹೆಸರುಗಳನ್ನೂ ನಾನು ಉಚ್ಚರಿಸುವುದಿಲ್ಲ.
5 ನನ್ನ ಪಾಲೂ ನನ್ನ ಪಾತ್ರೆಯೂ ಯೆಹೋವನಿಂದಲೇ ಬರುತ್ತವೆ.
ನನಗೆ ಆಧಾರವಾಗಿದ್ದು ನನ್ನ ಪಾಲನ್ನು ದಯಪಾಲಿಸುವಾತನು ನೀನೇ.
6 ನನ್ನ ಪಾಲು[a] ರಮಣೀಯವಾಗಿದೆ.
ನನ್ನ ಸ್ವಾಸ್ತ್ಯವು[b] ಬಹು ಸುಂದರವಾಗಿದೆ.
7 ನನ್ನ ಆಲೋಚನಾಕರ್ತನಾದ ಯೆಹೋವನನ್ನು ಕೊಂಡಾಡುವೆನು;
ರಾತ್ರಿಯಲ್ಲಿಯೂ, ಆತನು ತನ್ನ ಆಲೋಚನೆಗಳನ್ನು ನನ್ನ ಅಂತರಾತ್ಮದಲ್ಲಿ ಬೇರೂರಿಸುವನು.
8 ನಾನು ಯೆಹೋವನನ್ನು ಯಾವಾಗಲೂ ನನ್ನ ಎದುರಿನಲ್ಲೇ ಇಟ್ಟುಕೊಂಡಿದ್ದೇನೆ;
ಆತನು ನನ್ನ ಬಲಗಡೆಯಲ್ಲಿರುವುದರಿಂದ ನಾನೆಂದಿಗೂ ಕದಲುವುದಿಲ್ಲ.
9 ಆದ್ದರಿಂದ ನನ್ನ ಹೃದಯವೂ ಆತ್ಮವೂ ಉಲ್ಲಾಸಪಡುತ್ತವೆ.
ನನ್ನ ದೇಹವೂ ಸುರಕ್ಷಿತವಾಗಿರುವುದು.
10 ಯಾಕೆಂದರೆ, ನೀನು ನನ್ನ ಆತ್ಮವನ್ನು ಪಾತಾಳದಲ್ಲಿ ಬಿಡುವುದಿಲ್ಲ.
ನಿನ್ನ ಪವಿತ್ರನನ್ನು ಸಮಾಧಿಯಲ್ಲಿ ಕೊಳೆಯಲು ಬಿಡುವುದಿಲ್ಲ.
11 ನೀನು ನನಗೆ ಜೀವಮಾರ್ಗವನ್ನು ಉಪದೇಶಿಸುವೆ.
ನಿನ್ನ ಸನ್ನಿಧಿಯಲ್ಲಿದ್ದರೆ ಪರಿಪೂರ್ಣ ಸಂತೋಷವಿರುವುದು;
ನಿನ್ನ ಬಲಗಡೆಯಲ್ಲಿದ್ದರೆ ಶಾಶ್ವತವಾದ ಆನಂದವಿರುವುದು.
22 ತರುವಾಯ ಆರೋನನು ತನ್ನ ಕೈಗಳನ್ನು ಜನರ ಕಡೆಗೆ ಎತ್ತಿ ಅವರನ್ನು ಆಶೀರ್ವದಿಸಿದನು. ಆರೋನನು ಪಾಪಪರಿಹಾರಕ ಯಜ್ಞವನ್ನೂ ಸರ್ವಾಂಗಹೋಮವನ್ನೂ ಸಮಾಧಾನಯಜ್ಞವನ್ನೂ ಅರ್ಪಿಸಿ ಮುಗಿಸಿದ ನಂತರ ಯಜ್ಞವೇದಿಕೆಯಿಂದ ಕೆಳಗಿಳಿದು ಬಂದನು.
23 ಮೋಶೆ ಮತ್ತು ಆರೋನನು ದೇವದರ್ಶನದ ಗುಡಾರದೊಳಗೆ ಹೋದರು. ಅವರು ಹೊರಗೆ ಬಂದು ಜನರನ್ನು ಆಶೀರ್ವದಿಸಿದರು. ಆಗ ಯೆಹೋವನ ಮಹಿಮೆಯು ಜನರೆಲ್ಲರಿಗೆ ಪ್ರತ್ಯಕ್ಷವಾಯಿತು. 24 ಯೆಹೋವನ ಬಳಿಯಿಂದ ಬೆಂಕಿಯು ಬಂದು ವೇದಿಕೆಯ ಮೇಲಿದ್ದ ಸರ್ವಾಂಗಹೋಮವನ್ನು ಮತ್ತು ಕೊಬ್ಬನ್ನು ದಹಿಸಿಬಿಟ್ಟಿತು. ಜನರೆಲ್ಲರೂ ಇದನ್ನು ನೋಡಿದಾಗ, ಅವರು ಆನಂದದಿಂದ ಆರ್ಭಟಿಸಿ ಅಡ್ಡಬಿದ್ದು ನಮಸ್ಕರಿಸಿದರು.
ಆರೋನನ ಪುತ್ರರ ಸಾವು
10 ತರುವಾಯ ಆರೋನನ ಪುತ್ರರಲ್ಲಿ ನಾದಾಬ ಮತ್ತು ಅಬೀಹು ಎಂಬಿಬ್ಬರು ಧೂಪ ಹಾಕಲು ಒಂದೊಂದು ಬಟ್ಟಲನ್ನು ತೆಗೆದುಕೊಂಡು ಅದರಲ್ಲಿ ಬೇರೆ ಬೆಂಕಿಯನ್ನಿಟ್ಟು ಯೆಹೋವನ ಮುಂದೆ ಧೂಪಹಾಕಿದರು. ಯೆಹೋವನ ಆಜ್ಞೆಗನುಸಾರವಾದ ಬೆಂಕಿಯನ್ನು ಅವರು ಉಪಯೋಗಿಸಲಿಲ್ಲ. 2 ಆದ್ದರಿಂದ ಯೆಹೋವನಿಂದ ಬೆಂಕಿ ಹೊರಟುಬಂದು ಅವರಿಬ್ಬರನ್ನು ನಾಶಮಾಡಿತು. ಅವರು ಯೆಹೋವನ ಸನ್ನಿಧಿಯಲ್ಲಿ ಸತ್ತರು.
3 ಆಗ ಮೋಶೆ ಆರೋನನಿಗೆ, “ಯೆಹೋವನು ಹೇಳುವುದೇನೆಂದರೆ, ‘ನನ್ನ ಬಳಿಗೆ ಬರುವ ಯಾಜಕರು ನನ್ನನ್ನು ಗೌರವಿಸಬೇಕು. ಯಾಕೆಂದರೆ ನಾನು ಅವರ ಮೂಲಕ ಜನರಿಗೆ ಪ್ರಕಟಿಸಿಕೊಳ್ಳುವೆನು. ನಾನು ಪರಿಶುದ್ಧನೆಂದು ಅವರು ಮತ್ತು ಎಲ್ಲಾ ಜನರು ತಿಳಿದುಕೊಂಡು ನನ್ನನ್ನು ಘನಪಡಿಸಬೇಕು’” ಎಂದು ಹೇಳಿದನು. ಆದ್ದರಿಂದ ಆರೋನನು ತನ್ನ ಪುತ್ರರು ಸತ್ತಿದ್ದರ ಬಗ್ಗೆ ಏನೂ ಹೇಳದೆ ಸುಮ್ಮನಿದ್ದನು.
4 ಆರೋನನ ಚಿಕ್ಕಪ್ಪನಾದ ಉಜ್ಜಿಯೇಲನಿಗೆ ಇಬ್ಬರು ಗಂಡುಮಕ್ಕಳಿದ್ದರು. ಅವರ ಹೆಸರು ಮೀಶಾಯೇಲ್ ಮತ್ತು ಎಲ್ಸಾಫಾನ್. ಮೋಶೆ ಆ ಪುತ್ರರಿಗೆ, “ಪವಿತ್ರಸ್ಥಳದ ಮುಂದೆ ಬಿದ್ದಿರುವ ನಿಮ್ಮ ಸಹೋದರರ ಮೃತಶರೀರಗಳನ್ನು ಪಾಳೆಯದ ಹೊರಗೆ ತೆಗೆದುಕೊಂಡು ಹೋಗಿರಿ” ಎಂದು ಹೇಳಿದನು.
5 ಮಿಶಾಯೇಲ ಮತ್ತು ಎಲ್ಸಾಫಾನ ಮೋಶೆಯ ಮಾತಿಗೆ ವಿಧೇಯರಾದರು. ಅವರು ನಾದಾಬ ಮತ್ತು ಅಬೀಹು ಎಂಬವರ ಮೃತಶರೀರಗಳನ್ನು ಪಾಳೆಯದ ಹೊರಗೆ ತೆಗೆದುಕೊಂಡು ಹೋದರು. ನಾದಾಬ ಮತ್ತು ಅಬೀಹು ತೊಟ್ಟುಕೊಂಡಿದ್ದ ವಿಶೇಷವಾದ ಹೆಣೆದ ಅಂಗಿಗಳು ಇನ್ನೂ ಅವರ ಮೃತಶರೀರಗಳ ಮೇಲಿದ್ದವು.
6 ಬಳಿಕ ಮೋಶೆ ಆರೋನನೊಡನೆ ಮತ್ತು ಅವನ ಪುತ್ರರಾದ ಎಲ್ಲಾಜಾರ್ ಮತ್ತು ಈತಾಮಾರ್ ಇವರೊಡನೆ ಮಾತಾಡಿದನು. ಮೋಶೆ ಅವರಿಗೆ, “ನೀವು ದುಃಖದಿಂದ ನಿಮ್ಮ ತಲೆಕೂದಲನ್ನು ಕೆದರಿಕೊಳ್ಳಬೇಡಿರಿ; ನಿಮ್ಮ ಬಟ್ಟೆಗಳನ್ನು ಹರಿದುಕೊಳ್ಳಬೇಡಿರಿ. ಇಲ್ಲವಾದರೆ ನೀವೂ ಕೊಲ್ಲಲ್ಪಡುವಿರಿ. ಅಲ್ಲದೆ ಯೆಹೋವನು ಜನರೆಲ್ಲರ ಮೇಲೆ ಕೋಪಗೊಳ್ಳುವನು. ಆದರೆ ಯೆಹೋವನು ಬೆಂಕಿಯಿಂದ ನಾಶಮಾಡಿದವರ ಬಗ್ಗೆ ಇಸ್ರೇಲರೆಲ್ಲರು ಮತ್ತು ನಿಮ್ಮ ಬಂಧುಗಳು ದುಃಖಿಸಬಹುದು. 7 ಆದರೆ ನೀವು ದೇವದರ್ಶನಗುಡಾರದ ಬಾಗಿಲನ್ನು ಸಹ ಬಿಟ್ಟುಹೋಗಬಾರದು. ಇಲ್ಲವಾದರೆ ನೀವು ಸಾಯುವಿರಿ! ಯಾಕೆಂದರೆ, ಯೆಹೋವನ ಅಭಿಷೇಕತೈಲವು ನಿಮ್ಮ ಮೇಲಿದೆ” ಎಂದು ಹೇಳಿದನು. ಆದ್ದರಿಂದ ಆರೋನ, ಎಲ್ಲಾಜಾರ್ ಮತ್ತು ಈತಾಮಾರ್ ಮೋಶೆಯ ಮಾತಿಗೆ ವಿಧೇಯರಾದರು.
8 ಬಳಿಕ ಯೆಹೋವನು ಆರೋನನಿಗೆ, 9 “ನೀನು ಮತ್ತು ನಿನ್ನ ಪುತ್ರರು ದೇವದರ್ಶನದ ಗುಡಾರದೊಳಗೆ ಬರುವಾಗ ದ್ರಾಕ್ಷಾರಸವನ್ನಾಗಲಿ ಮದ್ಯವನ್ನಾಗಲಿ ಕುಡಿಯಬಾರದು. ನೀವು ಅವುಗಳನ್ನು ಕುಡಿದರೆ ಸಾಯುವಿರಿ. ಈ ಕಟ್ಟಳೆಯು ನಿಮ್ಮ ಸಂತತಿಯವರಿಗೆ ಶಾಶ್ವತವಾಗಿದೆ. 10 ನೀವು ಪವಿತ್ರವಾದವುಗಳ ಮತ್ತು ಪವಿತ್ರವಲ್ಲದ ವಸ್ತುಗಳ ಕುರಿತಾಗಿಯೂ ಶುದ್ಧವಾದವುಗಳ ಮತ್ತು ಅಶುದ್ಧವಾದವುಗಳ ಕುರಿತಾಗಿಯೂ ಸ್ಪಷ್ಟವಾಗಿ ವಿವೇಚನೆಯುಳ್ಳವರಾಗಿರಬೇಕು. 11 ಯೆಹೋವನು ಮೋಶೆಯ ಮೂಲಕ ಇಸ್ರೇಲ್ ಜನರಿಗೆ ಕೊಟ್ಟ ಎಲ್ಲಾ ಕಟ್ಟಳೆಗಳನ್ನು ಅವರಿಗೆ ಬೋಧಿಸುವುದು ನಿನ್ನ ಜವಾಬ್ದಾರಿಯಾಗಿದೆ” ಎಂದು ಹೇಳಿದನು.
5 ನೀವು ನಂಬಿಕೆಯಲ್ಲಿ ಜೀವಿಸುತ್ತಿದ್ದೀರೋ ಎಂಬುದನ್ನು ತಿಳಿದುಕೊಳ್ಳಲು ನಿಮ್ಮನ್ನು ನೀವೇ ಪರೀಕ್ಷಿಸಿಕೊಳ್ಳಿರಿ. ಕ್ರಿಸ್ತಯೇಸುವು ನಿಮ್ಮೊಳಗೆ ಇದ್ದಾನೆಂಬುದು ನಿಮಗೆ ಗೊತ್ತಿದೆ. ಆತನು ನಿಮ್ಮಲ್ಲಿಲ್ಲದಿದ್ದರೆ ನೀವು ಅಯೋಗ್ಯರಾಗಿದ್ದೀರಿ. 6 ಆದರೆ ನಾವು ಅಯೋಗ್ಯರಲ್ಲವೆಂದು ನಿಮಗೆ ಖಚಿತವಾಗುವುದರಲ್ಲಿ ನಮಗೆ ಸಂದೇಹವಿಲ್ಲ. 7 ನೀವು ಯಾವ ತಪ್ಪನ್ನೂ ಮಾಡದಿರಲಿ ಎಂಬುದಾಗಿ ನಾವು ದೇವರಲ್ಲಿ ಪ್ರಾರ್ಥಿಸುತ್ತೇವೆ. ನಮ್ಮನ್ನು ಅಯೋಗ್ಯರೆಂದು ಜನರು ಭಾವಿಸಿಕೊಂಡರೂ ನೀವು ಒಳ್ಳೆಯದನ್ನು ಮಾಡುವುದೇ ಮುಖ್ಯ. 8 ಸತ್ಯಕ್ಕೆ ವಿರೋಧವಾದ ಸಂಗತಿಗಳನ್ನು ಮಾಡಲು ನಮಗೆ ಸಾಧ್ಯವಿಲ್ಲ. ಸತ್ಯದ ಪರವಾದ ಕಾರ್ಯಗಳನ್ನು ಮಾತ್ರ ಮಾಡಲು ನಮಗೆ ಸಾಧ್ಯ. 9 ನೀವು ಶಕ್ತರಾಗಿರುವುದಾದರೆ, ನಾವು ಬಲಹೀನರಾಗಿರಲು ಸಂತೋಷಿಸುತ್ತೇವೆ. ನೀವು ನಂಬಿಕೆಯಲ್ಲಿ ಪರಿಪೂರ್ಣರಾಗಬೇಕೆಂಬುದೇ ನಮ್ಮ ಉದ್ದೇಶ. 10 ನಾನು ನಿಮ್ಮೊಂದಿಗೆ ಇಲ್ಲದಿರುವಾಗ ಈ ಸಂಗತಿಗಳನ್ನು ಬರೆಯುತ್ತಿದ್ದೇನೆ. ಏಕೆಂದರೆ ನಾನು ಬಂದಾಗ ನಿಮ್ಮನ್ನು ದಂಡಿಸುವುದಕ್ಕಾಗಿ ನನ್ನ ಅಧಿಕಾರವನ್ನು ಉಪಯೋಗಿಸುವ ಅಗತ್ಯವಿರುವುದಿಲ್ಲ. ಪ್ರಭುವು ನನಗೆ ಅಧಿಕಾರವನ್ನು ಕೊಟ್ಟಿರುವುದು ನಿಮ್ಮನ್ನು ಬಲಗೊಳಿಸುವುದಕ್ಕಾಗಿಯೇ ಹೊರತು ನಾಶಮಾಡುವುದಕ್ಕಾಗಿಯಲ್ಲ.
Kannada Holy Bible: Easy-to-Read Version. All rights reserved. © 1997 Bible League International