Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 64

ರಚನೆಗಾರ: ದಾವೀದ.

64 ದೇವರೇ, ನನಗೆ ಕಿವಿಗೊಡು.
    ವೈರಿಯು ನನಗೆ ಬೆದರಿಕೆ ಹಾಕಿದ್ದಾನೆ.
    ನನ್ನ ಪ್ರಾಣವನ್ನು ರಕ್ಷಿಸು.
ನನ್ನ ಶತ್ರುಗಳ ಒಳಸಂಚುಗಳಿಂದ ನನ್ನನ್ನು ಸಂರಕ್ಷಿಸು.
    ಆ ದುಷ್ಟರಿಗೆ ಸಿಕ್ಕದಂತೆ ನನ್ನನ್ನು ಮರೆಮಾಡು.
ಅವರು ನನ್ನ ಬಗ್ಗೆ ಕಡುಸುಳ್ಳುಗಳನ್ನು ಹೇಳಿದ್ದಾರೆ.
    ಅವರ ನಾಲಿಗೆಗಳು ಹರಿತವಾದ ಖಡ್ಗಗಳಂತಿವೆ.
    ಅವರ ಮಾತುಗಳು ವಿಷಬಾಣಗಳಂತಿವೆ.
ಗುಪ್ತಸ್ಥಳಗಳಲ್ಲಿ ಅಡಗಿಕೊಂಡಿದ್ದು ನಿರ್ಭಯದಿಂದ[a]
    ನೀತಿವಂತನ ಮೇಲೆ ಆ ಬಾಣಗಳನ್ನು ಎಸೆಯುತ್ತಾರೆ.
ಕೇಡುಮಾಡಲು ಒಬ್ಬರನ್ನೊಬ್ಬರು ಪ್ರೋತ್ಸಾಹಿಸಿ ಬಲೆಯೊಡ್ಡಲು ಆಲೋಚಿಸುವರು.
    “ತಮ್ಮ ಬಲೆಗಳು ಯಾರಿಗೂ ಕಾಣುವುದಿಲ್ಲ” ಎಂದು ಮಾತಾಡಿಕೊಳ್ಳುವರು.
ಅವರು ತಮ್ಮ ಬಲೆಗಳನ್ನು ಅಡಗಿಸಿಟ್ಟಿದ್ದಾರೆ; ಬೇಟೆಗಳಿಗಾಗಿ ಎದುರುನೋಡುತ್ತಿದ್ದಾರೆ.
    ಜನರು ಕುತಂತ್ರಿಗಳಾಗಿದ್ದರೆ, ಅವರ ಆಲೋಚನೆಗಳನ್ನು ತಿಳಿದುಕೊಳ್ಳುವುದು ಬಹು ಕಷ್ಟ.[b]
ಆದರೆ ದೇವರು ಇದ್ದಕ್ಕಿದ್ದಂತೆ ತನ್ನ ಬಾಣಗಳನ್ನು ಎಸೆಯುವನು.
    ಆಗ ಆ ದುಷ್ಟರು ಗಾಯಗೊಳ್ಳುವರು.
ದುಷ್ಟರು ಬೇರೆಯವರಿಗೆ ಕೇಡುಮಾಡಲು ಆಲೋಚಿಸುವರು.
    ಆದರೆ ಆ ಕೇಡುಗಳು ಅವರಿಗೇ ಸಂಭವಿಸುವಂತೆ ದೇವರು ಮಾಡುವನು.
ಆಗ ಅವರನ್ನು ಕಂಡ ಪ್ರತಿಯೊಬ್ಬನೂ
    ಆಶ್ಚರ್ಯದಿಂದ ತಲೆಯಾಡಿಸುವನು.
ದೇವರ ಕಾರ್ಯವನ್ನು ಜನರು ಕಂಡು
    ಅದರ ಬಗ್ಗೆ ಬೇರೆಯವರಿಗೂ ತಿಳಿಸುವರು.
ಹೀಗೆ ಪ್ರತಿಯೊಬ್ಬರೂ ದೇವರ ಬಗ್ಗೆ ಹೆಚ್ಚಾಗಿ ಕಲಿತುಕೊಂಡು
    ಆತನಲ್ಲಿ ಭಯಭಕ್ತಿಯುಳ್ಳವರಾಗುವರು.
10 ಸಜ್ಜನರು ಯೆಹೋವನಲ್ಲಿ ಸಂತೋಷಿಸುತ್ತಾ
    ಆತನನ್ನೇ ಆಶ್ರಯಿಸಿಕೊಳ್ಳುವರು.
ಯಥಾರ್ಥವಂತರು ಯೆಹೋವನನ್ನು ಕೊಂಡಾಡುವರು.

ಯೆಹೆಜ್ಕೇಲ 32:1-10

ಫರೋಹನು ಮೃಗರಾಜನೋ, ಪೇರ್ಮೊಸಳೆಯೋ?

32 ಸೆರೆಹಿಡಿದ ಹನ್ನೆರಡನೇ ವರ್ಷದ, ಹನ್ನೆರಡನೇ ತಿಂಗಳಿನ ಮೊದಲನೇ ದಿವಸದಲ್ಲಿ ಯೆಹೋವನ ಸಂದೇಶ ನನಗೆ ಬಂದಿತು. ಆತನು ಹೇಳಿದ್ದೇನೆಂದರೆ, “ನರಪುತ್ರನೇ, ಈಜಿಪ್ಟಿನ ರಾಜನಾದ ಫರೋಹನಿಗೆ ಈ ಶೋಕಗೀತೆಯನ್ನು ಹಾಡು. ಅವನಿಗೆ ಹೀಗೆ ಹೇಳು:

“‘ಜನಾಂಗಗಳ ಮಧ್ಯೆ ಹೆಮ್ಮೆಯಿಂದ ನಡೆದಾಡುತ್ತಿರುವ ಮೃಗರಾಜನಂತೆ ನೀನಿರುವೆ ಎಂದು ನೀನು ಭಾವಿಸಿದ್ದೆ.
    ಆದರೆ ನಿಜವಾಗಿಯೂ ನೀನು ಸರೋವರದಲ್ಲಿರುವ ಪೇರ್ಮೊಸಳೆಯಾಗಿರುವೆ.
ನೀರಿನ ಹೊಳೆಗಳಲ್ಲಿ ನೀನು ನಿನ್ನ ದಾರಿಯನ್ನು ಮಾಡುವೆ.
    ನಿನ್ನ ಕಾಲುಗಳಿಂದ ಆ ನೀರನ್ನು ನೀನು ಕೆಸರಾಗಿ ಮಾಡುವೆ.
    ನೀನು ಈಜಿಪ್ಟಿನ ಹೊಳೆಗಳನ್ನು ಕದಡಿಸುವೆ.’”

ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ:

“ಅನೇಕರನ್ನು ನಾನು ಒಟ್ಟುಗೂಡಿಸಿದ್ದೇನೆ.
    ಈಗ ನನ್ನ ಬಲೆಯನ್ನು ನಿನ್ನ ಮೇಲೆ ಬೀಸುವೆನು.
    ಆಗ ಅವರು ನಿನ್ನನ್ನು ಒಳಸೆಳೆಯುವರು.
ಆಮೇಲೆ ನಿನ್ನನ್ನು ಒಣನೆಲದ ಮೇಲೆ ಹಾಕುವೆನು.
    ಹೊಲದ ಮೇಲೆ ನಿನ್ನನ್ನು ಬಿಸಾಡುವೆನು.
ಎಲ್ಲಾ ಪಕ್ಷಿಗಳು ನಿನ್ನನ್ನು ತಿಂದುಬಿಡುವಂತೆ ಮಾಡುವೆನು.
    ಎಲ್ಲಾ ಕಡೆಗಳಿಂದ ಕಾಡುಮೃಗಗಳು ಬಂದು ನಿನ್ನನ್ನು ಹೊಟ್ಟೆತುಂಬಾ ತಿನ್ನುವಂತೆ ಮಾಡುವೆನು.
ಪರ್ವತಗಳ ಮೇಲೆ ನಿನ್ನ ದೇಹವನ್ನು ಬಿಸಾಡುವೆನು.
    ಬಯಲು ಪ್ರದೇಶವನ್ನು ನಿನ್ನ ಹೆಣಗಳಿಂದ ತುಂಬಿಸುವೆನು.
ನಿನ್ನ ರಕ್ತವನ್ನು ಪರ್ವತಗಳ ಮೇಲೆ ಚೆಲ್ಲುವೆನು,
    ಅದು ನೆಲವನ್ನು ಒದ್ದೆ ಮಾಡುವದು.
    ಹೊಳೆಗಳಲ್ಲಿ ನೀನು ತುಂಬಿರುವಿ.
ನೀನು ಕಾಣೆಯಾಗುವಂತೆ ನಾನು ಮಾಡುವೆನು.
    ಆಕಾಶವನ್ನು ಮುಚ್ಚಿ ನಕ್ಷತ್ರಗಳನ್ನು ಹೊಳೆಯದಂತೆ ಮಾಡುವೆನು.
ಸೂರ್ಯನನ್ನು ಮೋಡವು ಮುಚ್ಚುವಂತೆ ಮಾಡುವೆನು.
    ಚಂದ್ರನು ಪ್ರಕಾಶಿಸದಂತೆ ಮಾಡುವೆನು.
ನಿನ್ನ ಮೇಲೆ ಆಕಾಶದಲ್ಲಿ ಹೊಳೆಯುವ ಜ್ಯೋತಿಗಳನ್ನು ಮಂಕುಗೊಳಿಸುವೆನು;
    ನಿನ್ನ ದೇಶದಲ್ಲಿ ಕತ್ತಲನ್ನು ಬರಮಾಡುವೆನು”
ನನ್ನ ಒಡೆಯನಾದ ಯೆಹೋವನು ಇವುಗಳನ್ನು ಹೇಳಿದನು.

“ನಿನ್ನನ್ನು ನಾಶಮಾಡಲು ನಾನು ನಿನ್ನ ಶತ್ರುವನ್ನು ಬರಮಾಡುವಾಗ ಅನೇಕ ಜನರು ದುಃಖಿತರಾಗಿ ಗಲಿಬಿಲಿಗೊಳ್ಳುವರು. ನಿನ್ನನ್ನು ಅರಿಯದ ರಾಜ್ಯದವರೂ ಗಲಿಬಿಲಿಗೊಳ್ಳುವರು. 10 ಅನೇಕ ಮಂದಿ ನಿನಗೆ ಸಂಭವಿಸಿದ್ದನ್ನು ನೋಡಿ ಚಕಿತರಾಗುವರು. ನಾನು ನಿನ್ನ ಕಡೆಗೆ ಖಡ್ಗ ಬೀಸುವಾಗ ಅವರ ಅರಸರು ಬಹಳ ಭಯಗ್ರಸ್ತರಾಗುವರು; ನೀನು ಬೀಳುವ ದಿವಸದಲ್ಲಿ ಅರಸರು ಹೆದರಿ ನಡುಗುವರು. ಪ್ರತಿಯೊಬ್ಬ ರಾಜನು ತನ್ನ ಜೀವವನ್ನು ಉಳಿಸಿಕೊಳ್ಳಲು ಆತುರಪಡುವನು.”

ಲೂಕ 9:37-43

ದೆವ್ವದಿಂದ ಪೀಡಿತನಾಗಿದ್ದ ಬಾಲಕನಿಗೆ ಬಿಡುಗಡೆ

(ಮತ್ತಾಯ 17:14-18; ಮಾರ್ಕ 9:14-27)

37 ಮರುದಿನ, ಯೇಸು, ಪೇತ್ರ, ಯಾಕೋಬ ಮತ್ತು ಯೋಹಾನ ಬೆಟ್ಟದಿಂದಿಳಿದು ಬಂದರು. ಜನರ ಬಹು ದೊಡ್ಡ ಗುಂಪೊಂದು ಯೇಸುವನ್ನು ಎದುರುಗೊಂಡಿತು. 38 ಗುಂಪಿನಲ್ಲಿದ್ದ ಒಬ್ಬ ಮನುಷ್ಯನು, “ಉಪದೇಶಕನೇ, ದಯಮಾಡಿ ಬಂದು ನನ್ನ ಮಗನನ್ನು ನೋಡು. ನನಗೆ ಅವನೊಬ್ಬನೇ ಮಗನು. 39 ದೆವ್ವವೊಂದು ನನ್ನ ಮಗನೊಳಗೆ ಬರುತ್ತದೆ. ಆಗ ಅವನು ಕೂಗಾಡುತ್ತಾನೆ. ಸ್ವಾಧೀನ ಕಳೆದುಕೊಂಡು ಬಾಯಿಂದ ನೊರೆಸುರಿಸುತ್ತಾನೆ. ದೆವ್ವವು ಅವನನ್ನು ಒದ್ದಾಡಿಸಿ ಜಜ್ಜದ ಹೊರತು ಬಿಟ್ಟುಬಿಡುವುದೇ ಇಲ್ಲ. 40 ನನ್ನ ಮಗನನ್ನು ದೆವ್ವದಿಂದ ಬಿಡಿಸಬೇಕೆಂದು ನಿನ್ನ ಶಿಷ್ಯರನ್ನೂ ಬೇಡಿಕೊಂಡೆನು. ಆದರೆ ಅವರಿಂದ ಸಾಧ್ಯವಾಗಲಿಲ್ಲ” ಎಂದು ಯೇಸುವಿಗೆ ಕೂಗಿ ಹೇಳಿದನು.

41 ಆಗ ಯೇಸು, “ನಂಬಿಕೆಯಿಲ್ಲದ ದುಷ್ಟಸಂತಾನವೇ, ಇನೆಷ್ಟು ಕಾಲ ನಾನು ನಿಮ್ಮ ಸಂಗಡ ತಾಳ್ಮೆಯಿಂದ ಇರಲಿ?” ಎಂದು ಉತ್ತರಿಸಿ, ಆ ಮನುಷ್ಯನಿಗೆ, “ನಿನ್ನ ಮಗನನ್ನು ಇಲ್ಲಿಗೆ ಕರೆದುಕೊಂಡು ಬಾ” ಅಂದನು.

42 ಆ ಹುಡುಗನು ಬರುತ್ತಿದ್ದಾಗ, ದೆವ್ವವು ಅವನನ್ನು ನೆಲಕ್ಕೆ ಅಪ್ಪಳಿಸಿತು. ಹುಡುಗನು ತನ್ನ ಸ್ವಾಧೀನ ಕಳೆದುಕೊಂಡನು. ಆಗ ಯೇಸು ದೆವ್ವವನ್ನು ಗದರಿಸಿ ಆ ಹುಡುಗನನ್ನು ಗುಣಪಡಿಸಿದನು. ಬಳಿಕ ಅವನನ್ನು ಅವನ ತಂದೆಗೆ ಒಪ್ಪಿಸಿಕೊಟ್ಟನು. 43 ಜನರೆಲ್ಲರೂ ದೇವರ ಮಹಾಶಕ್ತಿಯನ್ನು ಕಂಡು ಬೆರಗಾದರು.

ತನ್ನ ಮರಣದ ಬಗ್ಗೆ ಯೇಸುವಿನ ಪ್ರಕಟಣೆ

(ಮತ್ತಾಯ 17:22-23; ಮಾರ್ಕ 9:30-32)

ಯೇಸು ಮಾಡಿದ ಎಲ್ಲಾ ಕಾರ್ಯಗಳ ಬಗ್ಗೆ ಜನರು ಇನ್ನೂ ಆಶ್ಚರ್ಯಚಕಿತರಾಗಿದ್ದರು. ಯೇಸು ತನ್ನ ಶಿಷ್ಯರಿಗೆ,

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International