Revised Common Lectionary (Complementary)
ರಚನೆಗಾರ: ದಾವೀದ.
64 ದೇವರೇ, ನನಗೆ ಕಿವಿಗೊಡು.
ವೈರಿಯು ನನಗೆ ಬೆದರಿಕೆ ಹಾಕಿದ್ದಾನೆ.
ನನ್ನ ಪ್ರಾಣವನ್ನು ರಕ್ಷಿಸು.
2 ನನ್ನ ಶತ್ರುಗಳ ಒಳಸಂಚುಗಳಿಂದ ನನ್ನನ್ನು ಸಂರಕ್ಷಿಸು.
ಆ ದುಷ್ಟರಿಗೆ ಸಿಕ್ಕದಂತೆ ನನ್ನನ್ನು ಮರೆಮಾಡು.
3 ಅವರು ನನ್ನ ಬಗ್ಗೆ ಕಡುಸುಳ್ಳುಗಳನ್ನು ಹೇಳಿದ್ದಾರೆ.
ಅವರ ನಾಲಿಗೆಗಳು ಹರಿತವಾದ ಖಡ್ಗಗಳಂತಿವೆ.
ಅವರ ಮಾತುಗಳು ವಿಷಬಾಣಗಳಂತಿವೆ.
4 ಗುಪ್ತಸ್ಥಳಗಳಲ್ಲಿ ಅಡಗಿಕೊಂಡಿದ್ದು ನಿರ್ಭಯದಿಂದ[a]
ನೀತಿವಂತನ ಮೇಲೆ ಆ ಬಾಣಗಳನ್ನು ಎಸೆಯುತ್ತಾರೆ.
5 ಕೇಡುಮಾಡಲು ಒಬ್ಬರನ್ನೊಬ್ಬರು ಪ್ರೋತ್ಸಾಹಿಸಿ ಬಲೆಯೊಡ್ಡಲು ಆಲೋಚಿಸುವರು.
“ತಮ್ಮ ಬಲೆಗಳು ಯಾರಿಗೂ ಕಾಣುವುದಿಲ್ಲ” ಎಂದು ಮಾತಾಡಿಕೊಳ್ಳುವರು.
6 ಅವರು ತಮ್ಮ ಬಲೆಗಳನ್ನು ಅಡಗಿಸಿಟ್ಟಿದ್ದಾರೆ; ಬೇಟೆಗಳಿಗಾಗಿ ಎದುರುನೋಡುತ್ತಿದ್ದಾರೆ.
ಜನರು ಕುತಂತ್ರಿಗಳಾಗಿದ್ದರೆ, ಅವರ ಆಲೋಚನೆಗಳನ್ನು ತಿಳಿದುಕೊಳ್ಳುವುದು ಬಹು ಕಷ್ಟ.[b]
7 ಆದರೆ ದೇವರು ಇದ್ದಕ್ಕಿದ್ದಂತೆ ತನ್ನ ಬಾಣಗಳನ್ನು ಎಸೆಯುವನು.
ಆಗ ಆ ದುಷ್ಟರು ಗಾಯಗೊಳ್ಳುವರು.
8 ದುಷ್ಟರು ಬೇರೆಯವರಿಗೆ ಕೇಡುಮಾಡಲು ಆಲೋಚಿಸುವರು.
ಆದರೆ ಆ ಕೇಡುಗಳು ಅವರಿಗೇ ಸಂಭವಿಸುವಂತೆ ದೇವರು ಮಾಡುವನು.
ಆಗ ಅವರನ್ನು ಕಂಡ ಪ್ರತಿಯೊಬ್ಬನೂ
ಆಶ್ಚರ್ಯದಿಂದ ತಲೆಯಾಡಿಸುವನು.
9 ದೇವರ ಕಾರ್ಯವನ್ನು ಜನರು ಕಂಡು
ಅದರ ಬಗ್ಗೆ ಬೇರೆಯವರಿಗೂ ತಿಳಿಸುವರು.
ಹೀಗೆ ಪ್ರತಿಯೊಬ್ಬರೂ ದೇವರ ಬಗ್ಗೆ ಹೆಚ್ಚಾಗಿ ಕಲಿತುಕೊಂಡು
ಆತನಲ್ಲಿ ಭಯಭಕ್ತಿಯುಳ್ಳವರಾಗುವರು.
10 ಸಜ್ಜನರು ಯೆಹೋವನಲ್ಲಿ ಸಂತೋಷಿಸುತ್ತಾ
ಆತನನ್ನೇ ಆಶ್ರಯಿಸಿಕೊಳ್ಳುವರು.
ಯಥಾರ್ಥವಂತರು ಯೆಹೋವನನ್ನು ಕೊಂಡಾಡುವರು.
ಬಿಲ್ದದನಿಗೆ ಯೋಬನ ಉತ್ತರ
18 ಬಳಿಕ ಶೂಹ ದೇಶದ ಬಿಲ್ದದನು ಹೀಗೆ ಉತ್ತರಕೊಟ್ಟನು:
2 “ಈ ಮಾತುಗಳನ್ನೆಲ್ಲಾ ಯಾವಾಗ ನಿಲ್ಲಿಸುವೆ?
ಪ್ರಜ್ಞೆವುಳ್ಳವನಾಗು, ಆಗ ನಾವು ಮಾತಾಡಲು ಸಾಧ್ಯ.
3 ನಮ್ಮನ್ನು ದಡ್ಡ ಪ್ರಾಣಿಗಳಂತೆ
ಯೋಚಿಸಿಕೊಂಡಿರುವುದೇಕೆ?
4 ಯೋಬನೇ, ನಿನ್ನ ಕೋಪದಿಂದ ನಿನ್ನನ್ನೇ ಗಾಯಮಾಡಿಕೊಳ್ಳುತ್ತಿರುವೆ.
ಕೇವಲ ನಿನಗೋಸ್ಕರ ಜನರು ಲೋಕವನ್ನು ಬಿಟ್ಟುಹೋಗಬೇಕೇ?
ಕೇವಲ ನಿನ್ನನ್ನು ತೃಪ್ತಿಪಡಿಸುವುದಕ್ಕಾಗಿ ದೇವರು ಬೆಟ್ಟಗಳನ್ನು ಜರುಗಿಸುತ್ತಾನೆಂದು ಭಾವಿಸಿಕೊಂಡಿರುವಿಯಾ?
5 “ಹೌದು, ದುಷ್ಟನ ದೀಪವು ಆರಿಹೋಗುವುದು;
ಅವನ ಬೆಂಕಿಯು ಉರಿಯುವುದಿಲ್ಲ.
6 ಅವನ ಗುಡಾರದಲ್ಲಿರುವ ಬೆಳಕು ಕತ್ತಲಾಗುವುದು;
ಅವನ ಪಕ್ಕದಲ್ಲಿರುವ ದೀಪವು ಆರಿಹೋಗುವುದು.
7 ಅವನ ಹೆಜ್ಜೆಗಳಲ್ಲಿ ಬಲವಿರುವುದಿಲ್ಲ;
ಅವನ ದುಷ್ಟ ಯೋಜನೆಗಳೇ ಅವನನ್ನು ಬೀಳಿಸುತ್ತವೆ.
8 ಅವನ ಸ್ವಂತ ಕಾಲುಗಳೇ ಅವನನ್ನು ಬಲೆಗೆ ನಡೆಸುತ್ತದೆ.
ಅವನು ಬಲೆಯೊಳಗೆ ನಡೆದುಹೋಗಿ ಸಿಕ್ಕಿಕೊಳ್ಳುವನು.
9 ಬೋನು ಅವನ ಹಿಮ್ಮಡಿಯನ್ನು ಹಿಡಿದುಕೊಳ್ಳುವುದು.
ಉರುಲು ಅವನನ್ನು ಗಟ್ಟಿಯಾಗಿ ಹಿಡಿದುಕೊಳ್ಳುವುದು.
10 ಅವನಿಗಾಗಿ ಹಗ್ಗವು ನೆಲದ ಮೇಲೆ ಅಡಗಿಕೊಂಡಿರುತ್ತದೆ.
ಅವನ ದಾರಿಯಲ್ಲಿ ಉರುಲು ಕಾದುಕೊಂಡಿರುತ್ತದೆ.
11 ಎಲ್ಲಾ ಕಡೆಗಳಿಂದಲೂ ಅಪಾಯವು ಅವನನ್ನು ಭಯಪಡಿಸುತ್ತದೆ.
ಅವನಿಡುವ ಪ್ರತಿಯೊಂದು ಹೆಜ್ಜೆಯನ್ನೂ ಭಯವು ಹಿಂಬಾಲಿಸುತ್ತದೆ.
12 ವಿಪತ್ತುಗಳು ಅವನಿಗಾಗಿ ಹಸಿವೆಯಿಂದ ಕಾದುಕೊಂಡಿವೆ.
ಅವನು ಬೀಳುವಾಗ ನಾಶನವು ಅವನಿಗಾಗಿ ಸಿದ್ಧವಾಗಿರುತ್ತದೆ.
13 ಭಯಂಕರವಾದ ಕಾಯಿಲೆಯು ಅವನ ಚರ್ಮದ ಭಾಗಗಳನ್ನು ತಿಂದುಬಿಡುತ್ತದೆ.
ಅದು ಅವನ ತೋಳುಗಳನ್ನೂ ಕಾಲುಗಳನ್ನೂ ಕೊಳೆಸಿಬಿಡುತ್ತದೆ.
14 ದುಷ್ಟನನ್ನು ಅವನ ಸುರಕ್ಷಿತವಾದ ಮನೆಯಿಂದ ಹೊರಗೆ ಹಾಕಲಾಗುವುದು.
ಅವನು ಮರಣವೆಂಬ ಅಪಾಯಗಳ ರಾಜನ ಕಡೆಗೆ ಮುನ್ನಡೆಯುತ್ತಾ ಹೋಗುವನು.
15 ಅವನ ಮನೆಯಲ್ಲಿ ಅವನದೇನೂ ಉಳಿದಿರುವುದಿಲ್ಲ.
ಉರಿಯುವ ಗಂಧಕವು ಅವನ ಆಸ್ತಿಯಲ್ಲೆಲ್ಲಾ ಹರಡಿಕೊಂಡಿರುತ್ತದೆ.
16 ಅವನ ಬೇರುಗಳು ಕೆಳಗೆ ಒಣಗಿಹೋಗುತ್ತವೆ.
ಅವನ ಕೊಂಬೆಗಳು ಮೇಲೆ ಸತ್ತುಹೋಗುತ್ತವೆ.
17 ಭೂಮಿಯ ಮೇಲಿರುವ ಜನರು ಅವನನ್ನು ಜ್ಞಾಪಿಸಿಕೊಳ್ಳುವುದಿಲ್ಲ;
ಇನ್ನು ಮೇಲೆ ಅವನನ್ನು ಯಾರೂ ಜ್ಞಾಪಿಸಿಕೊಳ್ಳುವುದಿಲ್ಲ.
18 ಜನರು ಅವನನ್ನು ಬೆಳಕಿನಿಂದ ತಳ್ಳಿಬಿಡುವರು; ಅವನನ್ನು ಕತ್ತಲೆಯೊಳಗೆ ನೂಕಿಬಿಡುವರು.
ಅವರು ಅವನನ್ನು ಲೋಕದಿಂದಲೇ ಅಟ್ಟಿಬಿಡುವರು.
19 ಅವನಿಗೆ ಸ್ವಜನರ ಮಧ್ಯದಲ್ಲಿ ಮಕ್ಕಳಾಗಲಿ ಸಂತತಿಯವರಾಗಲಿ ಇರುವುದಿಲ್ಲ.
ಅವನ ಮನೆಯಲ್ಲಿ ಯಾರೂ ಉಳಿದಿರುವುದಿಲ್ಲ.
20 ಪಶ್ಚಿಮದಲ್ಲಿ ವಾಸವಾಗಿರುವ ಜನರು ದುಷ್ಟನಿಗೆ ಸಂಭವಿಸಿದ್ದನ್ನು ಕೇಳಿ ಬೆರಗಾಗುವರು;
ಪೂರ್ವದಲ್ಲಿ ವಾಸವಾಗಿರುವ ಜನರು ಭೀತಿಯಿಂದ ನಡುಗುವರು.
21 ಇದು ಸತ್ಯ, ದುಷ್ಟನ ಮನೆಗೆ ಇದೇ ಸಂಭವಿಸುವುದು.
ದೇವರ ಬಗ್ಗೆ ಗಮನಕೊಡದ ವ್ಯಕ್ತಿಗೆ ಇದೇ ಸಂಭವಿಸುವುದು.”
ದೇವರ ಶಕ್ತಿ ಮತ್ತು ಕ್ರಿಸ್ತನ ಜ್ಞಾನ
18 ನಾಶನ ಮಾರ್ಗದಲ್ಲಿರುವ ಜನರಿಗೆ ಶಿಲುಬೆಯ ಉಪದೇಶವು ಮೂರ್ಖತನವಾಗಿದೆ. ಆದರೆ ರಕ್ಷಣೆಯ ಮಾರ್ಗದಲ್ಲಿರುವ ನಮಗಾದರೋ ಅದು ದೇವರ ಶಕ್ತಿಯಾಗಿದೆ. 19 ಪವಿತ್ರ ಗ್ರಂಥದಲ್ಲಿ ಹೀಗೆ ಬರೆಯಲ್ಪಟ್ಟಿದೆ:
“ಜ್ಞಾನಿಗಳ ಜ್ಞಾನವನ್ನು ನಾಶಮಾಡುವೆನು.
ಬುದ್ಧಿವಂತರ ಬುದ್ಧಿಯನ್ನು ಬೆಲೆಬಾಳದಂತೆ ಮಾಡುವೆನು.”(A)
20 ಜ್ಞಾನಿಯು ಎಲ್ಲಿದ್ದಾನೆ? ವಿದ್ಯಾವಂತನು ಎಲ್ಲಿದ್ದಾನೆ? ಈ ಕಾಲದ ತತ್ವಜ್ಞಾನಿಯು ಎಲ್ಲಿದ್ದಾನೆ? ದೇವರು ಲೋಕದ ಜ್ಞಾನವನ್ನು ಮೂರ್ಖತನವನ್ನಾಗಿ ಮಾಡಿದ್ದಾನೆ. 21 ಇದು ದೇವರ ಜ್ಞಾನದ ಸಂಕಲ್ಪವಾಗಿತ್ತು. ಲೋಕವು ತನ್ನ ಸ್ವಂತ ಜ್ಞಾನದ ಮೂಲಕವಾಗಿ ದೇವರನ್ನು ತಿಳಿದುಕೊಂಡಿರಲಿಲ್ಲ. ಆದ್ದರಿಂದ ಮೂರ್ಖತನದಂತೆ ತೋರುವ ಸಂದೇಶದ ಮೂಲಕ ನಂಬುವವರನ್ನು ರಕ್ಷಿಸುವುದು ದೇವರಿಗೆ ಒಳ್ಳೆಯದೆನಿಸಿತು.
22 ಯೆಹೂದ್ಯರು ಸೂಚಕಕಾರ್ಯಗಳನ್ನು ಕೇಳುತ್ತಾರೆ. ಗ್ರೀಕರಿಗೆ ಜ್ಞಾನವು ಬೇಕಾಗಿದೆ. 23 ನಾವಾದರೋ, ಶಿಲುಬೆಗೇರಿಸಲ್ಪಟ್ಟ ಕ್ರಿಸ್ತನ ಕುರಿತಾಗಿ ಬೋಧಿಸುತ್ತೇವೆ. ಇದು ಯೆಹೂದ್ಯರಿಗೆ ದೊಡ್ಡ ಸಮಸ್ಯೆಯಾಗಿದೆ; ಯೆಹೂದ್ಯರಲ್ಲದ ಜನರಿಗೆ ಮೂರ್ಖತನದಂತೆ ತೋರುತ್ತದೆ. 24 ದೇವರಿಂದ ಕರೆಯಲ್ಪಟ್ಟಿರುವ ಜನರು ಯೆಹೂದ್ಯರಾಗಿದ್ದರೂ ಯೆಹೂದ್ಯರಲ್ಲದವರಾಗಿದ್ದರೂ ಅವರಿಗೆ ಕ್ರಿಸ್ತನು ದೇವರ ಶಕ್ತಿಯಾಗಿದ್ದಾನೆ; ಮತ್ತು ದೇವರ ಜ್ಞಾನವಾಗಿದ್ದಾನೆ. 25 ದೇವರ ಮೂಢತನವು ಸಹ ಮನುಷ್ಯರ ಜ್ಞಾನಕ್ಕಿಂತಲೂ ಶ್ರೇಷ್ಠವಾಗಿದೆ. ದೇವರ ಬಲಹೀನತೆಯು ಸಹ ಮನುಷ್ಯರ ಬಲಕ್ಕಿಂತಲೂ ಹೆಚ್ಚು ಶಕ್ತಿಯುತವಾಗಿದೆ.
26 ಸಹೋದರ ಸಹೋದರಿಯರೇ, ದೇವರು ನಿಮ್ಮನ್ನು ಕರೆದಾಗ ನೀವು ಹೇಗಿದ್ದಿರಿ ಎಂದು ಜ್ಞಾಪಿಸಿಕೊಳ್ಳಿರಿ. ಲೋಕದ ಎಣಿಕೆಯಲ್ಲಿ ನಿಮ್ಮಲ್ಲಿ ಅನೇಕರು ಜ್ಞಾನಿಗಳಾಗಿರಲಿಲ್ಲ; ಅಧಿಕಾರಿಗಳಾಗಿರಲಿಲ್ಲ; ಪ್ರಾಮುಖ್ಯವಾದ ಕುಟುಂಬಗಳಿಗೆ ಸೇರಿದವರಾಗಿರಲಿಲ್ಲ. 27 ಆದರೆ ದೇವರು ಈ ಲೋಕದ ಜ್ಞಾನಿಗಳನ್ನು ನಾಚಿಕೆಪಡಿಸುವುದಕ್ಕಾಗಿ ಮೂಢರನ್ನು ಆರಿಸಿಕೊಂಡಿದ್ದಾನೆ; ಬಲಿಷ್ಠರನ್ನು ನಾಚಿಕೆಪಡಿಸುವುದಕ್ಕಾಗಿ ಬಲಹೀನರನ್ನು ಆರಿಸಿಕೊಂಡಿದ್ದಾನೆ. 28 ಲೋಕವು ಯಾವುದನ್ನು ಮುಖ್ಯವಲ್ಲವೆಂದು ಯೋಚಿಸುತ್ತದೆಯೋ ಯಾವುದನ್ನು ದ್ವೇಷಿಸುತ್ತದೆಯೋ ಮತ್ತು ನಿಷ್ಪ್ರಯೋಜಕವೆಂದು ಪರಿಗಣಿಸುತ್ತದೆಯೋ ಅದನ್ನು ದೇವರು ಆರಿಸಿಕೊಂಡನು. ಲೋಕವು ಯಾವುದನ್ನು ಮುಖ್ಯವೆಂದು ಯೋಚಿಸುತ್ತದೊ ಅದನ್ನು ನಾಶಪಡಿಸಲು ದೇವರು ಹೀಗೆ ಮಾಡಿದನು. 29 ಹೀಗಿರಲು ದೇವರ ಮುಂದೆ ಹೆಮ್ಮೆಪಡಲು ಯಾರಿಗೂ ಆಸ್ಪದವಿಲ್ಲ. 30 ನಿಮ್ಮನ್ನು ಕ್ರಿಸ್ತ ಯೇಸುವಿನಲ್ಲಿ ಒಂದು ಭಾಗವನ್ನಾಗಿ ಮಾಡಿದಾತನು ದೇವರೇ. ಕ್ರಿಸ್ತನು ನಮಗಾಗಿ ದೇವರಿಂದ ಬಂದ ಜ್ಞಾನವಾಗಿದ್ದಾನೆ. ನಾವು ನೀತಿವಂತರಾಗಿರುವುದಕ್ಕೆ, ಪಾಪದಿಂದ ಬಿಡುಗಡೆಯಾಗಿರುವುದಕ್ಕೆ ಮತ್ತು ಪವಿತ್ರರಾಗಿರುವುದಕ್ಕೆ ಕ್ರಿಸ್ತನೇ ಕಾರಣನಾಗಿದ್ದಾನೆ. 31 ಆದ್ದರಿಂದ ಪವಿತ್ರ ಗ್ರಂಥವು ಹೇಳುವಂತೆ, “ಹೆಮ್ಮೆಪಡುವವನು ಪ್ರಭುವಿನಲ್ಲಿ ಮಾತ್ರ ಹೆಮ್ಮೆಪಡಬೇಕು.”
Kannada Holy Bible: Easy-to-Read Version. All rights reserved. © 1997 Bible League International