Revised Common Lectionary (Complementary)
19 ಯೆಹೋವನೇ, ನನ್ನನ್ನು ತೊರೆಯಬೇಡ!
ನೀನೇ ನನ್ನ ಬಲ! ಬೇಗನೆ ನನಗೆ ಸಹಾಯಮಾಡು!
20 ಖಡ್ಗಕ್ಕೆ ಸಿಕ್ಕದಂತೆ ತನ್ನ ಜೀವವನ್ನು ರಕ್ಷಿಸು.
ನನ್ನ ಅಮೂಲ್ಯವಾದ ಜೀವವು ನಾಯಿಗಳ ಪಾಲಾಗದಂತೆ ರಕ್ಷಿಸು.
21 ನನ್ನನ್ನು ಸಿಂಹದ ಬಾಯಿಂದ ಬಿಡಿಸು;
ಹೋರಿಯ ಕೊಂಬುಗಳಿಂದ ನನ್ನನ್ನು ಸಂರಕ್ಷಿಸು.
22 ನಿನ್ನ ನಾಮದ ಕುರಿತು ನನ್ನ ಸಹೋದರರಿಗೆ ಹೇಳುವೆನು;
ಮಹಾಸಭೆಯಲ್ಲಿ ನಿನ್ನನ್ನು ಸುತ್ತಿಸುವೆನು.
23 ಯೆಹೋವನನ್ನು ಆರಾಧಿಸುವವರೇ, ಆತನಿಗೆ ಸ್ತೋತ್ರಮಾಡಿರಿ.
ಯಾಕೋಬನ ಸಂತತಿಗಳವರೇ, ಯೆಹೋವನಿಗೆ ಘನಮಾನವನ್ನು ಸಲ್ಲಿಸಿರಿ!
ಇಸ್ರೇಲರೇ, ಆತನಲ್ಲಿ ಭಯಭಕ್ತಿಯಿಂದಿರಿ!
24 ಯಾಕೆಂದರೆ ಇಕ್ಕಟ್ಟಿನಲ್ಲಿರುವ ಬಡವರಿಗೆ ಆತನು ಸಹಾಯಮಾಡುತ್ತಾನೆ; ಅವರ ವಿಷಯದಲ್ಲಿ ಆತನು ನಾಚಿಕೊಳ್ಳುವುದಿಲ್ಲ;
ಆತನು ಅವರನ್ನು ದ್ವೇಷಿಸುವುದಿಲ್ಲ.
ಅವರು ಆತನನ್ನು ಕೂಗಿಕೊಳ್ಳುವಾಗ
ಆತನು ಅವರಿಗೆ ಮರೆಯಾಗುವುದಿಲ್ಲ.
25 ಯೆಹೋವನೇ, ನಿನ್ನ ಕಾರ್ಯಗಳಿಗಾಗಿ ಮಹಾಸಭೆಯಲ್ಲಿ ನಿನ್ನನ್ನು ಕೊಂಡಾಡುವೆನು;
ನನ್ನ ಹರಕೆಗಳನ್ನು ನಿನ್ನ ಭಕ್ತರ ಮುಂದೆ ಸಲ್ಲಿಸುವೆನು.
26 ಬಡವರು ತಿಂದು ತೃಪ್ತರಾಗುವರು.
ಯೆಹೋವನಿಗಾಗಿ ಹುಡುಕುತ್ತಾ ಬಂದವರೇ, ಆತನಿಗೆ ಸ್ತೋತ್ರಮಾಡಿರಿ!
ನಿಮ್ಮ ಹೃದಯವು ಯಾವಾಗಲೂ ಸಂತೋಷವಾಗಿರಲಿ.[a]
27 ದೂರದೇಶಗಳಲ್ಲಿರುವ ಜನರೆಲ್ಲರೂ ಯೆಹೋವನನ್ನು ಜ್ಞಾಪಿಸಿಕೊಂಡು ಆತನ ಬಳಿಗೆ ಹಿಂತಿರುಗಲಿ.
ವಿದೇಶಗಳಿಲ್ಲಿರುವ ಜನರೆಲ್ಲರೂ ಆತನನ್ನು ಆರಾಧಿಸಲಿ.
28 ಯಾಕೆಂದರೆ ಯೆಹೋವನೇ ರಾಜನು!
ಆತನು ಜನಾಂಗಗಳನ್ನೆಲ್ಲಾ ಆಳುವನು.
9 ಕಾಡುಗಳಲ್ಲಿಯೂ ಹೊಲಗಳಲ್ಲಿಯೂ ಇರುವ ಪ್ರಾಣಿಗಳೇ, ಬಂದು ತಿನ್ನಿರಿ!
10 ಕಾವಲುಗಾರರೆಲ್ಲಾ ಕುರುಡರಾಗಿದ್ದಾರೆ.
ತಾವು ಮಾಡುತ್ತಿರುವುದು ಅವರಿಗೆ ತಿಳಿಯದು.
ಅವರು ಬೊಗಳದ ನಾಯಿಗಳಂತಿರುವರು.
ಅವುಗಳು ನೆಲದ ಮೇಲೆ ಬಿದ್ದುಕೊಂಡು ಮಲಗುವವು.
ಅವುಗಳಿಗೆ ಮಲಗುವುದೆಂದರೆ ತುಂಬಾ ಪ್ರೀತಿ.
11 ಅವರು ಹಸಿದ ನಾಯಿಗಳಂತಿದ್ದಾರೆ.
ಅವರು ಎಂದಿಗೂ ತೃಪ್ತಿ ಹೊಂದುವವರಲ್ಲ.
ಕುರುಬರಿಗೆ ತಾವು ಮಾಡುವುದೇ ತಿಳಿಯದು.
ಅವರು ತಮ್ಮ ಕುರಿಗಳ ಹಾಗೆ ದಾರಿತಪ್ಪಿದ್ದಾರೆ.
ಅವರೆಲ್ಲಾ ಅತ್ಯಾಶೆಯುಳ್ಳವರು;
ತಮ್ಮನ್ನು ತೃಪ್ತಿಪಡಿಸುವದೇ ಅವರ ಕೆಲಸ.
12 ಅವರು ಬಂದು,
“ನಾನು ಸ್ವಲ್ಪ ದ್ರಾಕ್ಷಾರಸ ಕುಡಿಯುತ್ತೇನೆ.
ಅಥವಾ ನಾನು ಸ್ವಲ್ಪ ಮದ್ಯವನ್ನು ಕುಡಿಯುತ್ತೇನೆ.
ನಾನು ನಾಳೆಯೂ ಹೀಗೆ ಮಾಡುವೆನು.
ನಾನು ಇನ್ನೂ ಹೆಚ್ಚಾಗಿ ಕುಡಿಯುವೆನು” ಎಂದು ಹೇಳುವರು.
ಯೆಹೂದ್ಯರು ಮತ್ತು ಧರ್ಮಶಾಸ್ತ್ರ
17 “ನಾನು ಯೆಹೂದ್ಯನು” ಎಂದು ಹೇಳಿಕೊಳ್ಳುತ್ತಿರುವ ನಿನ್ನ ವಿಷಯವಾದರೂ ಏನು? ಧರ್ಮಶಾಸ್ತ್ರದಲ್ಲಿ ನಂಬಿಕೆಯಿಟ್ಟು ದೇವರಿಗೆ ಸಮೀಪವಾಗಿರುವುದಾಗಿ ನೀನು ಹೆಮ್ಮೆಪಡುವೆ. 18 ದೇವರ ಚಿತ್ತಕ್ಕನುಸಾರವಾದ ಕಾರ್ಯಗಳನ್ನು ಧರ್ಮಶಾಸ್ತ್ರದಿಂದ ಕಲಿತುಕೊಂಡಿರುವುದಾಗಿ ನೀನು ಹೇಳಿಕೊಳ್ಳುವೆ. 19 ಸರಿಯಾದ ಮಾರ್ಗವನ್ನು ತಿಳಿದಿಲ್ಲದ ಜನರಿಗೆ ಮಾರ್ಗದರ್ಶಕನಾಗಿಯೂ ಕತ್ತಲೆಯಲ್ಲಿರುವ ಜನರಿಗೆ ಬೆಳಕಾಗಿಯೂ ಇರುವುದಾಗಿ ನಿನ್ನ ಕುರಿತು ಭಾವಿಸಿಕೊಂಡಿರುವೆ. 20 ಮೂಢರಿಗೆ ಶಿಕ್ಷಕನೆಂತಲೂ ಕಲಿಯಬೇಕಾದವರಿಗೆ ಉಪಾಧ್ಯಾಯನೆಂತಲೂ ನೀನು ನಿನ್ನ ಬಗ್ಗೆ ಆಲೋಚಿಸಿಕೊಂಡಿರುವೆ. ನಿನ್ನಲ್ಲಿ ಧರ್ಮಶಾಸ್ತ್ರವಿದೆ, ಆದ್ದರಿಂದ ಪ್ರತಿಯೊಂದನ್ನೂ ತಿಳಿದುಕೊಂಡಿರುವುದಾಗಿಯೂ ಎಲ್ಲಾ ಸತ್ಯವನ್ನು ಹೊಂದಿಕೊಂಡಿರುವುದಾಗಿಯೂ ನೀನು ಭಾವಿಸಿಕೊಂಡಿರುವೆ. 21 ನೀನು ಬೇರೆಯವರಿಗೆ ಉಪದೇಶಿಸುವೆ. ಹೀಗಿರಲು ನೀನು ನಿನಗೇ ಉಪದೇಶ ಮಾಡಿಕೊಳ್ಳಬಾರದೇಕೆ? ಕದಿಯಬಾರದೆಂದು ನೀನು ಜನರಿಗೆ ಹೇಳುವೆ, ಆದರೆ ನೀನೇ ಕದಿಯುವೆ. 22 ಜನರು ವ್ಯಭಿಚಾರವೆಂಬ ಪಾಪವನ್ನು ಮಾಡಕೂಡದೆಂದು ನೀನು ಹೇಳುವೆ, ಆದರೆ ನೀನೇ ಆ ಪಾಪಮಾಡಿ ಅಪರಾಧಿಯಾಗಿರುವೆ. ನೀನು ವಿಗ್ರಹಗಳನ್ನು ದ್ವೇಷಿಸುವೆ, ಆದರೆ ನೀನೇ ಅವುಗಳನ್ನು ಗುಡಿಗಳಿಂದ ಕದಿಯುವೆ. 23 ನೀನು ದೇವರ ಧರ್ಮಶಾಸ್ತ್ರದ ಬಗ್ಗೆ ಹೆಮ್ಮೆಪಡುವೆ. ಆದರೆ ಆ ಧರ್ಮಶಾಸ್ತ್ರವನ್ನು ಉಲ್ಲಂಘಿಸಿ ದೇವರಿಗೆ ಅವಮಾನ ಮಾಡುವೆ. 24 “ಯೆಹೂದ್ಯರಾದ ನಿಮ್ಮ ದೆಸೆಯಿಂದ ಯೆಹೂದ್ಯರಲ್ಲದ ಜನರು ದೇವರ ಹೆಸರಿಗೆ ವಿರೋಧವಾಗಿ ಮಾತಾಡುತ್ತಾರೆ”(A) ಎಂದು ಪವಿತ್ರ ಗ್ರಂಥದಲ್ಲಿ ಬರೆದಿದೆ.
25 ನೀನು ಧರ್ಮಶಾಸ್ತ್ರವನ್ನು ಅನುಸರಿಸಿದರೆ ನೀನು ಮಾಡಿಸಿಕೊಂಡ ಸುನ್ನತಿಗೆ ಅರ್ಥವಿದೆ. ಆದರೆ ನೀನು ಧರ್ಮಶಾಸ್ತ್ರವನ್ನು ಮೀರಿ ನಡೆದರೆ ನಿನಗೆ ಸುನ್ನತಿಯಾಗಿಲ್ಲದಂತೆಯೇ ಆಯಿತು. 26 ಯೆಹೂದ್ಯರಲ್ಲದ ಜನರಿಗೆ ಸುನ್ನತಿಯಾಗಿಲ್ಲ, ಆದರೆ ಧರ್ಮಶಾಸ್ತ್ರವು ಹೇಳುವುದನ್ನು ಅವರು ಮಾಡುವುದಾದರೆ, ಅವರು ಸುನ್ನತಿಯನ್ನು ಹೊಂದಿದಂಥವರಾದರು. 27 ಯೆಹೂದ್ಯರಾದ ನಿಮಗೆ ಲಿಖಿತ ಧರ್ಮಶಾಸ್ತ್ರವಿದೆ ಮತ್ತು ಸುನ್ನತಿಯಾಗಿದೆ. ಆದರೆ ನೀವು ಧರ್ಮಶಾಸ್ತ್ರವನ್ನು ಮೀರಿ ನಡೆಯುತ್ತೀರಿ. ಹೀಗಿರಲು, ದೇಹದಲ್ಲಿ ಸುನ್ನತಿಯನ್ನು ಹೊಂದಿಲ್ಲದಿದ್ದರೂ ಧರ್ಮಶಾಸ್ತ್ರಕ್ಕೆ ವಿಧೇಯರಾಗುವ ಜನರು ನಿಮ್ಮನ್ನು ಅಪರಾಧಿಗಳೆಂದು ತೋರ್ಪಡಿಸುತ್ತಾರೆ.
28 ಕೇವಲ ಬಾಹ್ಯ ದೇಹದಲ್ಲಿ ಯೆಹೂದ್ಯನಾಗಿರುವವನು ಯೆಹೂದ್ಯನಲ್ಲ. ಕೇವಲ ದೇಹದ ಹೊರಭಾಗದ ಸುನ್ನತಿಯು ನಿಜವಾದ ಸುನ್ನತಿಯಲ್ಲ. 29 ಅಂತರಂಗದಲ್ಲಿ ಯೆಹೂದ್ಯನಾಗಿರುವವನು ಮಾತ್ರ ನಿಜವಾದ ಯೆಹೂದ್ಯನು. ಹೃದಯದಲ್ಲಿ ಆದ ಸುನ್ನತಿಯೇ ನಿಜವಾದ ಸುನ್ನತಿ. ಈ ಸುನ್ನತಿಯಾದದ್ದು ಪವಿತ್ರಾತ್ಮನಿಂದಲೇ ಹೊರತು ಲಿಖಿತ ಧರ್ಮಶಾಸ್ತ್ರದಿಂದಲ್ಲ. ಪವಿತ್ರಾತ್ಮನಿಂದ ಹೃದಯದಲ್ಲಿ ಸುನ್ನತಿ ಹೊಂದಿರುವ ವ್ಯಕ್ತಿಯು ಹೊಗಳಿಕೆಯನ್ನು ಪಡೆಯುವುದು ದೇವರಿಂದಲೇ ಹೊರತು ಮನುಷ್ಯರಿಂದಲ್ಲ.
Kannada Holy Bible: Easy-to-Read Version. All rights reserved. © 1997 Bible League International