Revised Common Lectionary (Complementary)
16 ನಾನು ಸಹಾಯಕ್ಕಾಗಿ ದೇವರಲ್ಲಿ ಮೊರೆಯಿಡುವೆನು.
ಯೆಹೋವನು ನನಗೆ ಉತ್ತರ ಕೊಡುವನು.
17 ನಾನು ದೇವರೊಂದಿಗೆ ಸಾಯಂಕಾಲದಲ್ಲಿಯೂ ಮುಂಜಾನೆಯಲ್ಲಿಯೂ ಮಧ್ಯಾಹ್ನದಲ್ಲಿಯೂ ಮಾತಾಡುವೆನು.
ನನಗಾಗಿರುವ ದುಃಖವನ್ನು ಆತನಿಗೆ ಹೇಳಿಕೊಳ್ಳುವೆನು. ಆತನು ನನಗೆ ಕಿವಿಗೊಡುವನು!
18 ನಾನು ಅನೇಕ ಯುದ್ಧಗಳಲ್ಲಿ ಹೋರಾಡಿದ್ದೇನೆ.
ಆದರೆ ಪ್ರತಿಸಲವೂ ದೇವರು ನನ್ನನ್ನು ಪಾರುಮಾಡಿ, ಸುರಕ್ಷಿತವಾಗಿ ಬರಮಾಡಿದನು.
19 ದೇವರು ನನಗೆ ಕಿವಿಗೊಡುವನು.
ಅನಾದಿಕಾಲದ ರಾಜನು ನನಗೆ ಸಹಾಯ ಮಾಡುವನು.
ನನ್ನ ವೈರಿಗಳು ತಮ್ಮ ಜೀವಿತಗಳನ್ನು ಪರಿವರ್ತಿಸಿಕೊಳ್ಳುವುದಿಲ್ಲ.
ಅವರಿಗೆ ದೇವರಲ್ಲಿ ಭಯಭಕ್ತಿಯಿಲ್ಲ.
20 ನನ್ನ ವೈರಿಗಳು ತಮ್ಮ ಸ್ನೇಹಿತರ ಮೇಲೆಯೇ ಆಕ್ರಮಣ ಮಾಡುವರು;
ತಮ್ಮ ಒಡಂಬಡಿಕೆಗಳನ್ನು ತಾವೇ ಉಲ್ಲಂಘಿಸುವರು.
21 ನನ್ನ ವೈರಿಗಳು ನಯ ನಾಜೂಕಿನಿಂದ ಶಾಂತಿಯ ಕುರಿತು ಮಾತಾಡುವರು;
ಅಂತರಂಗದಲ್ಲಿಯೇ ಯುದ್ಧಗಳ ಕುರಿತು ಆಲೋಚಿಸುವರು.
ಅವರ ಮಾತುಗಳು ಬೆಣ್ಣೆಯಂತೆ ನುಣುಪಾಗಿದ್ದರೂ
ಅವರ ಹೃದಯಗಳು ಬಿಚ್ಚುಗತ್ತಿಗಳೇ ಸರಿ.
22 ನಿನ್ನ ಚಿಂತಾಭಾರವನ್ನು ಯೆಹೋವನ ಮೇಲೆ ಹಾಕು.
ಆತನು ನಿನ್ನನ್ನು ಉದ್ಧಾರ ಮಾಡುವನು.
ಸಜ್ಜನರಿಗೆ ಸೋಲಾಗಲು ಯೆಹೋವನೆಂದಿಗೂ ಬಿಡನು.
23 ದೇವರೇ, ನೀನು ದುಷ್ಟರನ್ನು ಪಾತಾಳಕ್ಕೆ ದಬ್ಬಿಬಿಡುವೆ.
ಕೊಲೆಪಾತಕರೂ ವಂಚಕರೂ ತಮ್ಮ ಅರ್ಧಾಯುಷ್ಯವಾದರೂ ಬದುಕರು.
ನಾನಾದರೊ ನಿನ್ನನ್ನೇ ನಂಬಿಕೊಂಡಿರುವೆನು.
7 ಅರಸನು ಕೋಪೋದ್ರಿಕ್ತನಾಗಿ, ಪಾನಪಾತ್ರೆಯನ್ನು ಅಲ್ಲಿಯೇ ಬಿಟ್ಟು ಎದ್ದು ಹೂತೋಟಕ್ಕೆ ಹೋದನು. ಹಾಮಾನನು ಕೋಣೆಯಲ್ಲಿಯೇ ಉಳಿದು ತನ್ನ ಪ್ರಾಣವನ್ನು ಉಳಿಸಬೇಕೆಂದು ಎಸ್ತೇರ್ ರಾಣಿಯನ್ನು ಬೇಡುತ್ತಿದ್ದನು. ಯಾಕೆಂದರೆ ರಾಜನು ತನ್ನನ್ನು ಕೊಲ್ಲಲು ತೀರ್ಮಾನಿಸಿರುವುದು ಅವನಿಗೆ ಅರಿವಾಯಿತು. 8 ಅರಸನು ಹೂತೋಟದಿಂದ ಹಿಂದಿರುಗಿ ಕೋಣೆಯೊಳಗೆ ಬಂದಾಗ ಹಾಮಾನನು ಆಸನದ ಮೇಲೆ ಒರಗಿದ್ದ ಎಸ್ತೇರ್ ರಾಣಿಯ ಆಸನದ ಮೇಲೆ ಬೀಳುವದನ್ನು ಕಂಡನು. ಅರಸನು ಸಿಟ್ಟು ತುಂಬಿದವನಾಗಿ, “ನನ್ನ ಮುಂದೆಯೇ ನೀನು ರಾಣಿಯ ಮೇಲೆ ಕೈಮಾಡುತ್ತೀಯಾ?” ಎಂದು ಕೇಳಿದನು.
9 ಇದನ್ನು ಹೇಳಿದೊಡನೆಯೇ ಹತ್ತಿರದಲ್ಲಿದ್ದ ಸೇವಕರು ಬಂದು ಹಾಮಾನನ ಮುಖಕ್ಕೆ ಮುಸುಕುಹಾಕಿದರು. ಅವರಲ್ಲಿದ್ದ ಹರ್ಬೋನ ಎಂಬ ಕಂಚುಕಿಯು, “ಹಾಮಾನನು ತನ್ನ ಮನೆಯ ಬಳಿಯಲ್ಲಿ ಎಪ್ಪತ್ತೈದು ಅಡಿ ಎತ್ತರದ ಗಲ್ಲುಮರವನ್ನು ಮೊರ್ದೆಕೈಗೋಸ್ಕರ ಮಾಡಿಸಿದ್ದಾನೆ. ನಿನ್ನನ್ನು ಕೊಲ್ಲಲು ನಡೆಸಿದ್ದ ಸಂಚನ್ನು ನಿನಗೆ ತಿಳಿಸಿ ನಿನ್ನನ್ನು ಕಾಪಾಡಿದವನೇ ಮೊರ್ದೆಕೈ” ಎಂದು ಹೇಳಿದನು.
ಅದಕ್ಕೆ ರಾಜನು, “ಹಾಮಾನನನ್ನು ಅದೇ ಗಲ್ಲುಮರಕ್ಕೆ ತೂಗುಹಾಕಿರಿ” ಎಂದನು.
10 ಮೊರ್ದೆಕೈಗೋಸ್ಕರ ಸಿದ್ಧಮಾಡಿದ್ದ ಗಲ್ಲುಮರಕ್ಕೆ ಸೇವಕರು ಹಾಮಾನನನ್ನು ತೂಗುಹಾಕಿದರು. ಅನಂತರ ರಾಜನ ಸಿಟ್ಟು ಇಳಿಯಿತು.
ಯೆಹೂದ್ಯರಿಗೆ ಸಹಾಯವಾಗುವ ರಾಜಾಜ್ಞೆ
8 ಅದೇ ದಿವಸದಲ್ಲಿ ರಾಜ ಅಹಷ್ವೇರೋಷನು ಯೆಹೂದ್ಯರ ವೈರಿಯಾದ ಹಾಮಾನನ ಆಸ್ತಿಪಾಸ್ತಿಗಳನ್ನೆಲ್ಲಾ ರಾಣಿ ಎಸ್ತೇರಳಿಗೆ ಕೊಟ್ಟನು. ಎಸ್ತೇರ್ ರಾಣಿಯು ಅರಸನಿಗೆ, “ಮೊರ್ದೆಕೈ ತನ್ನ ಸೋದರಣ್ಣನಾಗ ಬೇಕು” ಎಂದಳು. ನಂತರ ಮೊರ್ದೆಕೈಯು ಅರಸನನ್ನು ಕಾಣಲು ಬಂದನು. 2 ಹಾಮಾನನಿಂದ ತಿರಿಗಿ ಪಡೆದುಕೊಂಡಿದ್ದ ತನ್ನ ಮುದ್ರೆಯುಂಗುರವನ್ನು ರಾಜನು ಮೊರ್ದೆಕೈಗೆ ಕೊಟ್ಟನು. ಎಸ್ತೇರ್ ರಾಣಿಯು ಹಾಮಾನನ ಮನೆಯ ಆಡಳಿತವನ್ನು ಮೊರ್ದೆಕೈಗೆ ಕೊಡಿಸಿದಳು.
3 ಎಸ್ತೇರಳು ತಿರುಗಿ ರಾಜನನ್ನು ಮಾತಾಡಿಸುವುದಕ್ಕೆ ಹೋದಳು. ಎಸ್ತೇರಳು ಅರಸನ ಪಾದಗಳಿಗೆ ಅಡ್ಡಬಿದ್ದು ಅಳಲು ಪ್ರಾರಂಭಿಸಿದಳು. ಅವಳು ಹಾಮಾನನ ದುಷ್ಟ ಯೋಜನೆಯನ್ನು ರದ್ದುಮಾಡಬೇಕೆಂದು ಅರಸನನ್ನು ಬೇಡಿಕೊಂಡಳು. ಅಗಾಗನ ವಂಶಿಕನಾದ ಹಾಮಾನನು ಯೆಹೂದ್ಯರನ್ನು ನಿರ್ಮೂಲ ಮಾಡುವ ಹಂಚಿಕೆಯನ್ನು ಮಾಡಿದ್ದನು.
4 ಎಸ್ತೇರಳಿಗೆ ರಾಜನು ತನ್ನ ರಾಜದಂಡವನ್ನು ತೋರಿಸಿದಾಗ ಆಕೆಯು ಎದ್ದು ರಾಜನಿಗೆದುರಾಗಿ ನಿಂತುಕೊಂಡಳು. 5 ಆಕೆ ಅರಸನಿಗೆ, “ನೀವು ನನ್ನನ್ನು ಇಷ್ಟಪಡುವುದಾದರೆ ಮತ್ತು ನಿಮಗೆ ಮೆಚ್ಚಿಕೆಯಾದರೆ ನೀವು ನನ್ನ ಈ ಬಿನ್ನಹವನ್ನು ಪೂರೈಸಬೇಕು. ಅದೇನೆಂದರೆ, ರಾಜನ ಪ್ರಾಂತ್ಯಗಳಲ್ಲಿರುವ ಎಲ್ಲಾ ಯೆಹೂದ್ಯರನ್ನು ನಾಶಮಾಡಬೇಕೆಂದು ಹಾಮಾನನು ಹೊರಡಿಸಿರುವ ಆಜ್ಞೆಯನ್ನು ರದ್ದುಮಾಡಲು ನೀವು ಇನ್ನೊಂದು ಆಜ್ಞೆಯನ್ನು ಹೊರಡಿಸಬೇಕು. 6 ನನ್ನ ಜನರಿಗೆ ಭಯಂಕರವಾದ ಆ ಪರಿಸ್ಥತಿ ಉಂಟಾಗುವುದನ್ನಾಗಲಿ ನನ್ನ ಕುಟಂಬವು ಕೊಲ್ಲಲ್ಪಡುವುದನ್ನು ಕಣ್ಣಾರೆ ನೋಡುವುದಕ್ಕಾಗಲಿ ನನಗೆ ಸಾಧ್ಯವಿಲ್ಲದಿರುವುದರಿಂದ ರಾಜನಲ್ಲಿ ಬೇಡಿಕೊಳ್ಳುತ್ತಿದ್ದೇನೆ” ಎಂದಳು.
7 ಅಹಷ್ವೇರೋಷನು ಎಸ್ತೇರ್ ರಾಣಿಗೆ ಮತ್ತು ಮೊರ್ದೆಕೈಗೆ, “ಹಾಮಾನನು ಯೆಹೂದ್ಯರನ್ನು ದ್ವೇಷಿಸಿದ ಕಾರಣ ಅವನನ್ನು ಗಲ್ಲಿಗೇರಿಸುವಂತೆ ನನ್ನ ಸಿಪಾಯಿಗಳಿಗೆ ಆಜ್ಞಾಪಿಸಿದೆನು; ಅವನ ಆಸ್ತಿಪಾಸ್ತಿಗಳನ್ನೆಲ್ಲಾ ಎಸ್ತೇರಳ ವಶಕ್ಕೆ ಕೊಟ್ಟೆನು. 8 ಈಗ ಇನ್ನೊಂದು ರಾಜಾಜ್ಞೆಯನ್ನು ಬರೆಯಿಸಲು ನಾನು ನಿಮಗೆ ಅಧಿಕಾರ ಕೊಡುತ್ತೇನೆ. ನಿಮಗೆ ಸರಿತೋಚುವ ರೀತಿಯಲ್ಲಿ ಯೆಹೂದ್ಯರಿಗೆ ಸಹಾಯವಾಗುವಂತೆ ಆ ಆಜ್ಞೆಯನ್ನು ರಾಜನ ಅಧಿಕಾರದೊಡನೆ ಬರೆಯಿಸಿ, ರಾಜನ ಉಂಗುರದಿಂದ ಮುದ್ರೆ ಒತ್ತಿರಿ. ರಾಜ ಮುದ್ರೆಯುಳ್ಳ ಯಾವ ಆಜ್ಞೆಯೂ ರದ್ದಾಗಕೂಡದು” ಎಂದನು.
9 ಕೂಡಲೇ ರಾಜಲೇಖಕರನ್ನು ಕರೆಯಿಸಿ ಅವರಿಂದ ಮೊರ್ದೆಕೈ ಹೇಳಿದಂತೆ ರಾಜಾಜ್ಞೆಯನ್ನು ಸಾಮ್ರಾಜ್ಯದ ನಾನಾ ಭಾಷೆಗಳಲ್ಲಿ ಬರೆಯಿಸಲಾಯಿತು. ಹಿಂದೂಸ್ಥಾನದಿಂದ ಹಿಡಿದು ಇಥಿಯೋಪ್ಯದ ತನಕ ರಾಜ್ಯದ ನೂರಿಪ್ಪತ್ತೇಳು ಸಂಸ್ಥಾನಗಳ ಅಧಿಕಾರಿಗಳಿಗೆ, ಎಲ್ಲಾ ರಾಜ್ಯಪಾಲರಿಗೆ, ಜನನಾಯಕರಿಗೆ ಮತ್ತು ಯೆಹೂದ್ಯರಿಗೆ ಆಯಾ ಭಾಷೆಗಳ ಲಿಪಿಗಳಲ್ಲಿ ಮೂರನೇ ತಿಂಗಳಾದ ಸೀವಾನ್ ಮಾಸದ ಇಪ್ಪತ್ತಮೂರನೇ ದಿವಸದಲ್ಲಿ ಬರೆಯಿಸಲಾಯಿತು. 10 ರಾಜನ ಆಜ್ಞೆಯ ಪ್ರಕಾರ ಮೊರ್ದೆಕೈ ರಾಜಶಾಸನವನ್ನು ಬರೆಯಿಸಿದನು. ಅದಕ್ಕೆ ರಾಜಮುದ್ರೆಯನ್ನು ಒತ್ತಿಸಿ ರಾಜನಿಗಾಗಿ ವಿಶೇಷವಾಗಿ ಬೆಳೆಸಿದ ಅತ್ಯಂತ ವೇಗವಾಗಿ ಓಡುವ ಕುದುರೆಗಳ ಮೂಲಕ ಸಂದೇಶವಾಹಕರಿಂದ ರಾಜ್ಯದ ಮೂಲೆ ಮೂಲೆಗೆ ರಾಜಾಜ್ಞೆಯನ್ನು ಕಳುಹಿಸಿದನು.
11 ಆ ರಾಜಾಜ್ಞೆಯು ಹೀಗಿತ್ತು: “ಪ್ರತಿಯೊಂದು ನಗರಗಳಲ್ಲಿರುವ ಯೆಹೂದ್ಯರು ಸ್ವರಕ್ಷಣೆಗೋಸ್ಕರ ಒಟ್ಟಾಗಿ ಸೇರಿಬರಲು ಅವರಿಗೆ ಹಕ್ಕಿದೆ. ಅಲ್ಲದೆ ಅವರನ್ನು ಕೊಲ್ಲಲು, ಆಸ್ತಿ ಅಪಹರಿಸಲು ಅವರನ್ನು ನಿರ್ಮೂಲ ಮಾಡುವ ಉದ್ದೇಶದಿಂದ ಅವರ ಬಳಿಗೆ ಬರುವವರನ್ನು ಎದುರಿಸಿ, ಕೊಂದು ನಾಶಮಾಡುವ ಹಕ್ಕು ಅವರಿಗಿದೆ. ಯೆಹೂದ್ಯರಿಗೆ ತಮ್ಮನ್ನು ಹಗೆಮಾಡುವ ವೈರಿಗಳನ್ನು ಕೊಂದು ಅವರ ಆಸ್ತಿಪಾಸ್ತಿಗಳನ್ನು ಸೂರೆಮಾಡುವ ಹಕ್ಕಿದೆ.”
12 ಹೀಗೆ ಮಾಡಲು ಅಹಷ್ವೇರೋಷ್ ರಾಜನ ಎಲ್ಲಾ ಸಂಸ್ಥಾನಗಳಲ್ಲಿರುವ ಯೆಹೂದ್ಯರಿಗೆ ಹನ್ನೆರಡನೆಯ ತಿಂಗಳಾದ ಅದಾರ್ ಮಾಸದ ಹದಿಮೂರನೆ ದಿನವನ್ನು ಗೊತ್ತುಪಡಿಸಲಾಯಿತು. 13 ಈ ರಾಜಾಜ್ಞೆಯು ದೇಶದ ಶಾಸನವಾಯಿತು. ಇದನ್ನು ರಾಜ್ಯದ ಎಲ್ಲಾ ಸಂಸ್ಥಾನಗಳ ಎಲ್ಲಾ ಜನರಿಗೆ ಪ್ರಕಟಿಸಲಾಯಿತು. ಯಾವ ದಿವಸದಲ್ಲಿ ಯೆಹೂದ್ಯರನ್ನು ನಿರ್ಮೂಲ ಮಾಡಲು ಆಜ್ಞೆ ಹೊರಡಿತ್ತೋ ಆ ದಿವಸದಲ್ಲಿಯೆ ಯೆಹೂದ್ಯರು ತಮ್ಮ ವೈರಿಗಳನ್ನು ಎದುರಿಸಿ ಅವರನ್ನು ಕೊಲ್ಲುವುದಕ್ಕೆ ತಯಾರಿರಬೇಕೆಂದು ಈ ಆಜ್ಞೆಯನ್ನು ಹೊರಡಿಸಿದ್ದು. 14 ಈ ಆಜ್ಞೆಯನ್ನು ಜನರಿಗೆ ತಲುಪಿಸಲು ಅರಸನು ಸಂದೇಶ ವಾಹಕರನ್ನು ಅವಸರಪಡಿಸಿದನು. ಶೂಷನ್ ನಗರದಲ್ಲೂ ಇದು ಪ್ರಕಟವಾಯಿತು.
15 ರಾಜಸನ್ನಿಧಿಯಿಂದ ಮೊರ್ದೆಕೈ ಹೊರಟಾಗ, ಅರಸನು ಕೊಟ್ಟ ವಿಶೇಷ ವಸ್ತ್ರಗಳನ್ನು ಮೊರ್ದೆಕೈಯು ಧರಿಸಿದ್ದನು. ಅದು ನೀಲಿ ಮತ್ತು ಬಿಳಿ ಬಣ್ಣದಾಗಿತ್ತು. ತಲೆಗೆ ಬಂಗಾರದ ಕಿರೀಟವನ್ನು ತೊಟ್ಟಿದ್ದನು. ಅಲ್ಲದೆ ನೇರಳೇ ಬಣ್ಣದ ವಸ್ತ್ರವೂ ಕೂಡಾ ಅವನಲ್ಲಿದ್ದವು. ರಾಜಧಾನಿಯಾದ ಶೂಷನ್ ನಗರದಲ್ಲಿ ವಿಶೇಷ ಸಮಾರಂಭವಿತ್ತು. ಜನರು ಸಂತೋಷದಿಂದ ನಲಿದಾಡಿದರು. 16 ಯೆಹೂದ್ಯರಿಗೆ ಆ ದಿನ ಅತ್ಯಂತ ಸಂತೋಷದ ದಿನವಾಗಿತ್ತು. ಆ ದಿನ ಅವರಿಗೆ ಬಹಳ ಆನಂದ ಮತ್ತು ಹರ್ಷದ ದಿನವಾಗಿತ್ತು.
17 ರಾಜನ ಸಾಮ್ರಾಜ್ಯದ ಸಂಸ್ಥಾನಗಳಲ್ಲಿ ಎಲ್ಲೆಲ್ಲಿ ರಾಜಶಾಸನವು ತಲಪಿತೋ ಅಲ್ಲಲ್ಲಿ ಯೆಹೂದ್ಯರೆಲ್ಲರೂ ಆನಂದದಿಂದ ನಲಿದಾಡಿದರು. ಅದು ಅವರಿಗೆ ಅತ್ಯಂತ ಸಂತಸದ ದಿವಸವಾಗಿತ್ತು. ತಮ್ಮತಮ್ಮ ಮನೆಗಳಲ್ಲಿ ಔತಣ ಸಿದ್ಧಪಡಿಸಿದರು. ಸಾಮಾನ್ಯ ಜನರಲ್ಲಿ ಎಷ್ಟೋ ಮಂದಿ ಯೆಹೂದ್ಯ ಮತಾವಲಂಭಿಗಳಾದರು. ಯಾಕೆಂದರೆ ಅವರು ಯೆಹೂದ್ಯರಿಗೆ ತುಂಬಾ ಹೆದರಿ ಆ ರೀತಿಯಾಗಿ ಮಾಡಿದರು.
ಎಲ್ಲರನ್ನು ಪ್ರೀತಿಸಿರಿ
(ಲೂಕ 6:27-28,32-36)
43 “‘ನಿನ್ನ ಸ್ನೇಹಿತರನ್ನು ಪ್ರೀತಿಸು ಮತ್ತು ನಿನ್ನ ಶತ್ರುಗಳನ್ನು ದ್ವೇಷಿಸು’(A) ಎಂದು ಹೇಳಿರುವುದನ್ನು ನೀವು ಕೇಳಿದ್ದೀರಿ. 44 ಆದರೆ ನಾನು ನಿಮಗೆ ಹೇಳುವುದೇನೆಂದರೆ, ನಿಮ್ಮ ಶತ್ರುಗಳನ್ನು ಪ್ರೀತಿಸಿರಿ. ನಿಮಗೆ ಕೆಟ್ಟದ್ದನ್ನು ಮಾಡುವ ಜನರಿಗಾಗಿ ಪ್ರಾರ್ಥಿಸಿರಿ. 45 ಆಗ ನೀವು ಪರಲೋಕದಲ್ಲಿರುವ ನಿಮ್ಮ ತಂದೆಯ ನಿಜವಾದ ಮಕ್ಕಳಾಗುವಿರಿ. ನಿಮ್ಮ ತಂದೆಯು ಒಳ್ಳೆಯವರಿಗಾಗಿ ಮತ್ತು ಕೆಟ್ಟವರಿಗಾಗಿ ಸೂರ್ಯನನ್ನು ಉದಯಿಸುತ್ತಾನೆ ಮತ್ತು ಮಳೆಯನ್ನು ಸುರಿಸುತ್ತಾನೆ. 46 ನಿಮ್ಮನ್ನು ಪ್ರೀತಿಸುವ ಜನರನ್ನೇ ನೀವು ಪ್ರೀತಿಸಿದರೆ, ಅದರಿಂದ ನಿಮಗೇನು ಪ್ರತಿಫಲ ದೊರೆಯುವುದು? ಸುಂಕದವರು ಸಹ ಹಾಗೆ ಮಾಡುತ್ತಾರೆ. 47 ನೀವು ನಿಮ್ಮ ಸ್ನೇಹಿತರಿಗೆ ಮಾತ್ರ ಒಳ್ಳೆಯವರಾಗಿದ್ದರೆ, ನೀವು ಬೇರೆಯವರಿಗಿಂತ ಉತ್ತಮರೇನೂ ಅಲ್ಲ. ದೇವರನ್ನರಿಯದ ಜನರು ಸಹ ತಮ್ಮ ಸ್ನೇಹಿತರಿಗೆ ಒಳ್ಳೆಯವರಾಗಿರುತ್ತಾರೆ. 48 ಆದ್ದರಿಂದ ಪರಲೋಕದಲ್ಲಿರುವ ನಿಮ್ಮ ತಂದೆಯು ಪರಿಪೂರ್ಣನಾಗಿರುವಂತೆಯೇ ನೀವೂ ಪರಿಪೂರ್ಣರಾಗಿರಬೇಕು.
Kannada Holy Bible: Easy-to-Read Version. All rights reserved. © 1997 Bible League International