Revised Common Lectionary (Complementary)
16 ನಾನು ಸಹಾಯಕ್ಕಾಗಿ ದೇವರಲ್ಲಿ ಮೊರೆಯಿಡುವೆನು.
ಯೆಹೋವನು ನನಗೆ ಉತ್ತರ ಕೊಡುವನು.
17 ನಾನು ದೇವರೊಂದಿಗೆ ಸಾಯಂಕಾಲದಲ್ಲಿಯೂ ಮುಂಜಾನೆಯಲ್ಲಿಯೂ ಮಧ್ಯಾಹ್ನದಲ್ಲಿಯೂ ಮಾತಾಡುವೆನು.
ನನಗಾಗಿರುವ ದುಃಖವನ್ನು ಆತನಿಗೆ ಹೇಳಿಕೊಳ್ಳುವೆನು. ಆತನು ನನಗೆ ಕಿವಿಗೊಡುವನು!
18 ನಾನು ಅನೇಕ ಯುದ್ಧಗಳಲ್ಲಿ ಹೋರಾಡಿದ್ದೇನೆ.
ಆದರೆ ಪ್ರತಿಸಲವೂ ದೇವರು ನನ್ನನ್ನು ಪಾರುಮಾಡಿ, ಸುರಕ್ಷಿತವಾಗಿ ಬರಮಾಡಿದನು.
19 ದೇವರು ನನಗೆ ಕಿವಿಗೊಡುವನು.
ಅನಾದಿಕಾಲದ ರಾಜನು ನನಗೆ ಸಹಾಯ ಮಾಡುವನು.
ನನ್ನ ವೈರಿಗಳು ತಮ್ಮ ಜೀವಿತಗಳನ್ನು ಪರಿವರ್ತಿಸಿಕೊಳ್ಳುವುದಿಲ್ಲ.
ಅವರಿಗೆ ದೇವರಲ್ಲಿ ಭಯಭಕ್ತಿಯಿಲ್ಲ.
20 ನನ್ನ ವೈರಿಗಳು ತಮ್ಮ ಸ್ನೇಹಿತರ ಮೇಲೆಯೇ ಆಕ್ರಮಣ ಮಾಡುವರು;
ತಮ್ಮ ಒಡಂಬಡಿಕೆಗಳನ್ನು ತಾವೇ ಉಲ್ಲಂಘಿಸುವರು.
21 ನನ್ನ ವೈರಿಗಳು ನಯ ನಾಜೂಕಿನಿಂದ ಶಾಂತಿಯ ಕುರಿತು ಮಾತಾಡುವರು;
ಅಂತರಂಗದಲ್ಲಿಯೇ ಯುದ್ಧಗಳ ಕುರಿತು ಆಲೋಚಿಸುವರು.
ಅವರ ಮಾತುಗಳು ಬೆಣ್ಣೆಯಂತೆ ನುಣುಪಾಗಿದ್ದರೂ
ಅವರ ಹೃದಯಗಳು ಬಿಚ್ಚುಗತ್ತಿಗಳೇ ಸರಿ.
22 ನಿನ್ನ ಚಿಂತಾಭಾರವನ್ನು ಯೆಹೋವನ ಮೇಲೆ ಹಾಕು.
ಆತನು ನಿನ್ನನ್ನು ಉದ್ಧಾರ ಮಾಡುವನು.
ಸಜ್ಜನರಿಗೆ ಸೋಲಾಗಲು ಯೆಹೋವನೆಂದಿಗೂ ಬಿಡನು.
23 ದೇವರೇ, ನೀನು ದುಷ್ಟರನ್ನು ಪಾತಾಳಕ್ಕೆ ದಬ್ಬಿಬಿಡುವೆ.
ಕೊಲೆಪಾತಕರೂ ವಂಚಕರೂ ತಮ್ಮ ಅರ್ಧಾಯುಷ್ಯವಾದರೂ ಬದುಕರು.
ನಾನಾದರೊ ನಿನ್ನನ್ನೇ ನಂಬಿಕೊಂಡಿರುವೆನು.
ಎಸ್ತೇರಳು ರಾಜನನ್ನು ಸಂದರ್ಶಿಸಿದ್ದು
5 ಮೂರನೇ ದಿವಸದಲ್ಲಿ ಎಸ್ತೇರಳು ವಿಶೇಷ ಬಟ್ಟೆಗಳನ್ನು ಧರಿಸಿ ಅರಸನ ಅರಮನೆಯ ಒಳಾಂಗಣದಲ್ಲಿ ನಿಂತುಕೊಂಡಳು. ಅದು ರಾಜ ದರ್ಬಾರಿನ ಮುಂದೆ ಇತ್ತು. ರಾಜನು ಸಿಂಹಾಸನದ ಮೇಲೆ, ಪ್ರಜೆಗಳು ಪ್ರವೇಶಿಸುವ ಬಾಗಿಲಿಗೆ ಎದುರಾಗಿ ಕುಳಿತಿದ್ದನು. 2 ಅರಸನು ಒಳಾಂಗಣದಲ್ಲಿ ನಿಂತಿದ್ದ ಎಸ್ತೇರಳನ್ನು ಕಂಡ ಕೂಡಲೇ ಆಕೆಯನ್ನು ಮೆಚ್ಚಿಕೊಂಡು ತನ್ನ ಕೈಯಲ್ಲಿದ್ದ ರಾಜದಂಡವನ್ನು ಆಕೆಯ ಕಡೆಗೆ ಚಾಚಿದನು. ಆಗ ಎಸ್ತೇರಳು ಒಳಾಂಗಣವನ್ನು ಪ್ರವೇಶಿಸಿ ರಾಜನ ಬಳಿ ಹೋದಳು ಮತ್ತು ರಾಜದಂಡದ ತುದಿಯನ್ನು ತನ್ನ ಬೆರಳಿನಿಂದ ಮುಟ್ಟಿದಳು.
3 “ಎಸ್ತೇರ್ ರಾಣಿಯೇ, ಯಾವುದು ನಿನ್ನ ಮನಸ್ಸನ್ನು ಭಾದಿಸುತ್ತದೆ? ನನ್ನನ್ನು ಏನು ಕೇಳಲು ಬಂದಿರುವಿ? ಕೇಳು, ನಾನು ನಿನಗೆ ಅರ್ಧ ರಾಜ್ಯವನ್ನು ಕೇಳಿದರೂ ಕೊಡುವೆನು” ಎಂದು ರಾಜನು ಅಂದನು.
4 ಅದಕ್ಕೆ ಎಸ್ತೇರಳು, “ನಾನು ಒಂದು ಔತಣವನ್ನು ಸಿದ್ಧಪಡಿಸಿರುತ್ತೇನೆ. ಅದಕ್ಕೆ ನೀವೂ, ಹಾಮಾನನೂ ಬರಬೇಕು ಎಂದು ವಿನಂತಿಸುತ್ತೇನೆ” ಎಂದಳು.
5 ಆಗ ಅರಸನು, “ಹಾಮಾನನನ್ನು ಬೇಗನೇ ಕರೆಯಿಸಿರಿ, ಎಸ್ತೇರಳು ಹೇಳಿದಂತೆ ನಾವು ಮಾಡುವೆವು” ಅಂದನು.
ಹಾಗೆ ಅರಸನೂ ಹಾಮಾನನೂ ಎಸ್ತೇರಳು ಅವರಿಗಾಗಿ ಮಾಡಿದ ಔತಣಕ್ಕೆ ಹೋದರು. 6 ಅವರು ದ್ರಾಕ್ಷಾರಸವನ್ನು ಸೇವಿಸುತ್ತಿರುವಾಗ ರಾಜನು ಎಸ್ತೇರಳನ್ನು ತಿರಿಗಿ ವಿಚಾರಿಸಿದನು, “ನೀನು ನನ್ನನ್ನು ಏನು ಕೇಳಬೇಕೆಂದಿದ್ದೀ? ಏನೂ ಬೇಕಾದರೂ ಕೇಳು. ನಾನು ಕೊಡುತ್ತೇನೆ. ಹೇಳು ಏನುಬೇಕು? ನನ್ನ ಅರ್ಧ ರಾಜ್ಯವನ್ನು ಕೇಳಿದರೂ ನಾನು ಕೊಡುತ್ತೇನೆ” ಅಂದನು.
7 ಅದಕ್ಕೆ ಎಸ್ತೇರಳು, “ನನ್ನ ಬಿನ್ನಹವೇನೆಂದರೆ: 8 ರಾಜನು ಸಮ್ಮತಿಸುವದಾದರೆ ಮತ್ತು ನಾನು ಕೇಳಿಕೊಳ್ಳುವುದನ್ನು ಕೊಡಲು ರಾಜನಿಗೆ ಇಷ್ಟವಾದರೆ, ನಾಳೆ ನಾನು ಇನ್ನೊಂದು ಔತಣ ಸಮಾರಂಭವನ್ನು ಏರ್ಪಡಿಸುತ್ತೇನೆ. ಅದಕ್ಕೆ ನೀವೂ ಹಾಮಾನನೂ ಬರಬೇಕು. ಆಗ ನಾನು ನನಗೇನುಬೇಕೆಂದು ತಿಳಿಸುವೆನು” ಅಂದಳು.
ಮೊರ್ದೆಕೈ ಮೇಲೆ ಹಾಮಾನನ ರೋಷ
9 ಹಾಮಾನನು ಹರ್ಷ ತುಂಬಿದವನಾಗಿ ರಾಜ ಸನ್ನಿಧಿಯಿಂದ ತನ್ನ ಮನೆಗೆ ತೆರಳಿದನು. ಆದರೆ ಹೆಬ್ಬಾಗಿಲ ಬಳಿಯಲ್ಲಿ ಮೊರ್ದೆಕೈಯನ್ನು ನೋಡಿದಾಗ ಅವನ ಮೇಲೆ ಹಾಮಾನನ ಕೋಪ ಉಕ್ಕಿ ಬಂತು. ಯಾಕೆಂದರೆ ಮೊರ್ದೆಕೈ ಹಾಮಾನನಿಗೆ ಯಾವ ಗೌರವವನ್ನೂ ಕೊಟ್ಟಿರಲಿಲ್ಲ ಮತ್ತು ಅವನಿಗೆ ಭಯಪಡಲಿಲ್ಲ. ಇದು ಹಾಮಾನನನ್ನು ಸಿಟ್ಟಿಗೇರುವಂತೆ ಮಾಡಿತು. 10 ಆದರೆ ಹಾಮಾನನು ತನ್ನ ಕೋಪವನ್ನು ಹಿಡಿತದಲ್ಲಿಟ್ಟುಕೊಂಡು ತನ್ನ ಮನೆಗೆ ಹೋದನು. ಅಲ್ಲಿ ತನ್ನ ಸ್ನೇಹಿತರನ್ನೂ ತನ್ನ ಹೆಂಡತಿಯಾದ ಜೆರೆಷಳನ್ನೂ ಕರೆದು 11 ತನ್ನ ಸಂಪತ್ತಿನ ವಿಷಯ ಕೊಚ್ಚಿಗೊಂಡನು. ತನ್ನ ಸ್ನೇಹಿತರಲ್ಲಿ ತನ್ನ ಮಕ್ಕಳ ವಿಚಾರವಾಗಿ ಹೆಗ್ಗಳಿಕೆಯಿಂದ ಮಾತಾಡುತ್ತಿದ್ದನು. ಮಾತ್ರವಲ್ಲದೆ ಅರಸನು ತನ್ನನ್ನು ಅತ್ಯುನ್ನತ ಸ್ಥಾನಕ್ಕೆ ಏರಿಸಿ ಇತರ ಎಲ್ಲಾ ನಾಯಕರುಗಳ ಮೇಲೆ ನೇಮಿಸಿದನು. 12 “ಅಷ್ಟೇ ಅಲ್ಲ” ಹಾಮಾನನು ಮುಂದುವರಿಸುತ್ತಾ, “ಎಸ್ತೇರ್ ರಾಣಿಯು ಅರಸನೊಡನೆ ನನ್ನೊಬ್ಬನನ್ನೇ ಕರೆದು ಔತಣ ಮಾಡಿಸಿದಳು. ನಾಳೆಯ ಔತಣ ಸಮಾರಂಭಕ್ಕೂ ಅರಸನೊಡನೆ ನನ್ನನ್ನು ತಿರಿಗಿ ಬರಲು ಆಮಂತ್ರಿಸಿರುತ್ತಾಳೆ. 13 ಆದರೆ ನಾನು ಹೆಬ್ಬಾಗಿಲ ಬಳಿಯಲ್ಲಿ ಕುಳಿತುಕೊಳ್ಳುತ್ತಿರುವ ಮೊರ್ದೆಕೈಯನ್ನು ನೋಡುವಾಗ ನನ್ನ ಸಂತೋಷವೆಲ್ಲವೂ ಮಾಯವಾಗುತ್ತದೆ” ಎಂದು ಹೇಳಿದನು.
14 ಇದನ್ನು ಕೇಳಿದ ಹಾಮಾನನ ಹೆಂಡತಿ ಜೆರೆಷಳೂ ಮತ್ತು ಅವನ ಮಿತ್ರವೃಂದದವರೂ ಅವನಿಗೊಂದು ಸಲಹೆಯನ್ನಿತ್ತರು. “ಒಂದು ಗಲ್ಲುಮರವನ್ನು ನೆಡಿಸು. ಅದು ಎಪ್ಪತ್ತೈದು ಅಡಿ ಎತ್ತರವಿರಲಿ. ನಾಳೆ ಮುಂಜಾನೆ ಮೊರ್ದೆಕೈಯನ್ನು ಗಲ್ಲಿಗೇರಿಸಲು ಅರಸನಿಂದ ಅಪ್ಪಣೆ ತೆಗೆದುಕೋ. ಅನಂತರ ಅರಸನೊಂದಿಗೆ ಔತಣ ಸಮಾರಂಭಕ್ಕೆ ಹೋಗಿ ಸಂತೋಷಪಡು.”
ಇದನ್ನು ಕೇಳಿ ಹಾಮಾನನು ಸಂತೋಷಗೊಂಡನು. ಕೂಡಲೇ ಸೇವಕನನ್ನು ಕರೆಸಿ ಗಲ್ಲುಮರವನ್ನು ಸಿದ್ಧಮಾಡಲು ಆಜ್ಞಾಪಿಸಿದನು.
ಮಾನವ ನಿರ್ಮಿತ ನಿಯಮಗಳನ್ನು ಅನುಸರಿಸಬೇಡಿ
16 ಹೀಗಿರುವುದರಿಂದ ತಿಂದು ಕುಡಿಯುವುದರ ಬಗ್ಗೆ ಇಲ್ಲವೆ ಯೆಹೂದ್ಯರ ಪದ್ಧತಿಗಳ (ಹಬ್ಬಗಳು, ಅಮಾವಾಸ್ಯೆಯ ಆಚರಣೆಗಳು, ಸಬ್ಬತ್ ದಿನಗಳು) ಬಗ್ಗೆ ನಿಮಗೆ ನಿಯಮಗಳನ್ನು ರೂಪಿಸಲು ಯಾರಿಗೂ ಅವಕಾಶ ಕೊಡಬೇಡಿ. 17 ಪೂರ್ವಕಾಲದಲ್ಲಿ ಈ ಸಂಗತಿಗಳೆಲ್ಲ ಮುಂದೆ ಬರಬೇಕಾಗಿದ್ದವುಗಳ ಛಾಯೆಗಳಾಗಿದ್ದವು. ಅವುಗಳ ನಿಜರೂಪವು ಕ್ರಿಸ್ತನಲ್ಲಿ ತೋರಿಬಂದಿತು. 18 ಕೆಲವರು ದೇವದೂತರ ಪೂಜೆಯಲ್ಲಿಯೂ ಅತಿವಿನಯವಂತರಂತೆ ನಟಿಸುವುದರಲ್ಲಿಯೂ ಆಸಕ್ತರಾಗಿದ್ದಾರೆ. ಆ ಜನರು ತಾವು ಕಂಡ ದರ್ಶನಗಳ ಬಗ್ಗೆ ಯಾವಾಗಲೂ ಮಾತನಾಡುತ್ತಿರುತ್ತಾರೆ. “ನೀವು ಇಂಥಿಂಥ ಕಾರ್ಯಗಳನ್ನು ಮಾಡದಿರುವುದರಿಂದ ತಪ್ಪಿತಸ್ಥರಾಗಿದ್ದೀರಿ” ಎಂದು ಆ ಜನರು ನಿಮ್ಮ ಬಗ್ಗೆ ಹೇಳಲು ಅವಕಾಶಕೊಡಬೇಡಿ. ಅವರ ಪ್ರಾಪಂಚಿಕ ಆಲೋಚನೆಯು ಅವರನ್ನು ನಿಷ್ಕಾರಣವಾಗಿ ಗರ್ವದಿಂದ ಉಬ್ಬಿಸುತ್ತದೆ. 19 ಆ ಜನರು ತಮ್ಮನ್ನು ಕ್ರಿಸ್ತನೆಂಬ ಶಿರಸ್ಸಿನ ಅಧೀನಕ್ಕೆ ಒಳಪಡಿಸುವುದಿಲ್ಲ. ಇಡೀ ದೇಹವು ಆತನನ್ನೇ ಅವಲಂಬಿಸಿಕೊಂಡಿದೆ. ಆತನಿಂದಲೇ ದೇಹದ ಅಂಗಾಂಗಗಳು ಇತರ ಅಂಗಗಳ ಬಗ್ಗೆ ಚಿಂತಿಸುತ್ತವೆ ಮತ್ತು ಪರಸ್ಪರ ಸಹಾಯ ಮಾಡುತ್ತವೆ. ಇದರಿಂದ ದೇಹವು ಬಲಗೊಂಡು ಒಂದಾಗಿ ಕೂಡಿಸಲ್ಪಡುತ್ತದೆ. ಹೀಗೆ, ದೇವರ ಇಚ್ಛೆಯಂತೆ ದೇಹವು ಬೆಳೆಯುತ್ತದೆ.
20 ನೀವು ಕ್ರಿಸ್ತನೊಂದಿಗೆ ಸತ್ತು ಪ್ರಾಪಂಚಿಕವಾದ ನಿರರ್ಥಕ ನಿಯಮಗಳಿಂದ ಬಿಡುಗಡೆ ಹೊಂದಿದ್ದೀರಿ. ಹೀಗಿದ್ದರೂ ನೀವು ಈ ಲೋಕಕ್ಕೆ ಸೇರಿದವರಂತೆ ವರ್ತಿಸುವುದೇಕೆ? ಈ ನಿಯಮಗಳನ್ನು ಏಕೆ ಅನುಸರಿಸುತ್ತಿರುವಿರಿ ಎಂಬುದೇ ನನ್ನ ಮಾತಿನ ಅರ್ಥ: 21 “ಇದನ್ನು ತಿನ್ನಬೇಡ”, “ಅದರ ರುಚಿ ನೋಡಬೇಡ”, “ಅದನ್ನು ಮುಟ್ಟಬೇಡ” ಎಂದು ಹೇಳುವುದೇಕೆ? 22 ಪ್ರಾಪಂಚಿಕ ವಿಷಯಗಳ ಕುರಿತಾದ ಈ ನಿಯಮಗಳೆಲ್ಲ ಬಳಸಿದ ಮೇಲೆ ನಾಶವಾಗುತ್ತವೆ. ಅವುಗಳು ಜನರ ಆಜ್ಞೆ ಮತ್ತು ಜನರ ಉಪದೇಶಗಳೇ ಹೊರತು ದೇವರವಲ್ಲ. 23 ಈ ನಿಯಮಗಳು ನೋಡುವುದಕ್ಕೆ ಬದ್ಧಿಯುಳ್ಳವಾಗಿವೆ. ಆದರೆ ಅತಿವಿನಯವಂತರಂತೆ ನಟಿಸಲು ಮತ್ತು ತಮ್ಮ ದೇಹಗಳನ್ನು ದಂಡಿಸಲು ಜನರನ್ನು ಪ್ರೆರೇಪಿಸುವ ಅವುಗಳು ಕೇವಲ ಮಾನವ ನಿರ್ಮಿತವಾದ ಧರ್ಮದ ಒಂದು ಭಾಗವಾಗಿವೆ. ಆದರೆ ಪಾಪಸ್ವಭಾವವು ಇಚ್ಛಿಸುವ ದುಷ್ಕೃತ್ಯಗಳನ್ನು ಮಾಡದಂತೆ ಅವು ಜನರಿಗೆ ಯಾವ ಸಹಾಯವನ್ನೂ ಮಾಡುವುದಿಲ್ಲ.
ಕ್ರಿಸ್ತನಲ್ಲಿ ನಿಮ್ಮ ಹೊಸಜೀವನ
3 ನೀವು ಕ್ರಿಸ್ತನ ಜೊತೆಯಲ್ಲಿ ಜೀವಂತವಾಗಿ ಎದ್ದುಬಂದಿರುವುದರಿಂದ ಪರಲೋಕದವುಗಳನ್ನು ಪಡೆಯಲು ಪ್ರಯತ್ನಿಸಿರಿ. ಕ್ರಿಸ್ತ ಯೇಸು ಪರಲೋಕದಲ್ಲಿ ದೇವರ ಬಲಗಡೆ ಆಸನಾರೂಢನಾಗಿದ್ದಾನೆ.
Kannada Holy Bible: Easy-to-Read Version. All rights reserved. © 1997 Bible League International