Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 119:97-104

97 ನಿನ್ನ ಉಪದೇಶಗಳು ನನಗೆ ಪ್ರಿಯವಾಗಿವೆ;
    ದಿನವೆಲ್ಲಾ ಅವುಗಳನ್ನೇ ಧ್ಯಾನಿಸುವೆನು.
98 ನಿನ್ನ ಆಜ್ಞೆಗಳು ನನ್ನನ್ನು ನನ್ನ ಶತ್ರುಗಳಿಗಿಂತಲೂ ಹೆಚ್ಚು ಜ್ಞಾನಿಯನ್ನಾಗಿ ಮಾಡುತ್ತವೆ.
    ಅವು ಯಾವಾಗಲೂ ನನ್ನೊಂದಿಗಿವೆ.
99 ನಿನ್ನ ಒಡಂಬಡಿಕೆಯನ್ನು ನಾನು ಧ್ಯಾನಿಸುತ್ತಿರುವುದರಿಂದ
    ನನ್ನ ಉಪಾಧ್ಯಾಯರಿಗಿಂತ ಜ್ಞಾನಿಯಾಗಿದ್ದೇನೆ.
100 ನಾನು ನಿನ್ನ ಆಜ್ಞೆಗಳನ್ನು ಅನುಸರಿಸುವುದರಿಂದ
    ಹಿರಿಯರಿಗಿಂತ ವಿವೇಕಿಯಾಗಿದ್ದೇನೆ.
101 ನನ್ನ ಪಾದಗಳು ಕೆಟ್ಟದಾರಿಗೆ ಹೋಗದಂತೆ ನನ್ನನ್ನು ಕಾಪಾಡು,
    ಆಗ, ನಾನು ನಿನ್ನ ವಾಕ್ಯವನ್ನೇ ಅನುಸರಿಸುವೆನು.
102 ನೀನೇ ನನ್ನ ಉಪಾಧ್ಯಾಯ.
    ಆದ್ದರಿಂದ ನಿನ್ನ ಕಟ್ಟಳೆಗಳಿಗೆ ವಿಧೇಯನಾಗಿಯೇ ಇರುವೆನು.
103 ನಿನ್ನ ನುಡಿಗಳು ನನ್ನ ಬಾಯಲ್ಲಿ
    ಜೇನಿಗಿಂತಲೂ ಸಿಹಿಯಾಗಿವೆ.
104 ನಿನ್ನ ಉಪದೇಶಗಳು ನನ್ನನ್ನು ಜ್ಞಾನಿಯನ್ನಾಗಿ ಮಾಡುತ್ತವೆ,
    ಆದ್ದರಿಂದ ನಾನು ದುರುಪದೇಶಗಳನ್ನು ದ್ವೇಷಿಸುವೆನು.

ಧರ್ಮೋಪದೇಶಕಾಂಡ 12:1-12

ಯೆಹೋವನನ್ನು ಆರಾಧಿಸುವ ಸ್ಥಳ

12 “ನಿಮಗೆ ಸಿಗುವ ಹೊಸ ದೇಶದಲ್ಲಿ ಈ ಕಟ್ಟಳೆಗಳನ್ನು ನೀವು ಅನುಸರಿಸಬೇಕು. ನೀವು ಭೂಮಿಯ ಮೇಲೆ ಜೀವಿಸುವವರೆಗೆ ಆ ಕಟ್ಟಳೆಗಳನ್ನು ತಪ್ಪದೇ ಅನುಸರಿಸಬೇಕು. ನಮ್ಮ ಯೆಹೋವನು ನಮ್ಮ ಪೂರ್ವಿಕರ ದೇವರಾಗಿದ್ದಾನೆ. ಆತನೇ ಈ ದೇಶವನ್ನು ನಿಮಗೆ ಕೊಡುತ್ತಿದ್ದಾನೆ. ಈಗ ಆ ಪ್ರಾಂತ್ಯದಲ್ಲಿ ವಾಸಿಸುತ್ತಿರುವ ಜನರಿಂದ ತೆಗೆದುಕೊಂಡು ನಿಮಗೆ ಅದನ್ನು ಕೊಡುತ್ತಾನೆ. ಅಲ್ಲಿ ನೀವು ಹೋದಾಗ ಆ ಜನರ ವಿಗ್ರಹಾರಾಧನೆಯ ಸ್ಥಳಗಳನ್ನು ಸಂಪೂರ್ಣವಾಗಿ ಹಾಳುಮಾಡಬೇಕು. ಅವರ ಪೂಜಾಸ್ಥಳಗಳು ಎತ್ತರವಾದ ಬೆಟ್ಟಗುಡ್ಡಗಳ ಮೇಲೆಯೂ ಹಸುರಾಗಿರುವ ಮರಗಳ ಕೆಳಗೂ ಇರುತ್ತವೆ. ನೀವು ಅವರ ಯಜ್ಞವೇದಿಕೆಗಳನ್ನು ಪುಡಿಪುಡಿಮಾಡಿ, ಅವರ ಸ್ಮಾರಕ ಕಲ್ಲುಗಳನ್ನು ಕೆಡವಬೇಕು. ಅವರ ಅಶೇರ ಕಂಬಗಳನ್ನು ಸುಟ್ಟುಬಿಡಬೇಕು ಮತ್ತು ದೇವರುಗಳ ವಿಗ್ರಹಗಳನ್ನು ಕತ್ತರಿಸಿಹಾಕಬೇಕು. ಹೀಗೆ ನೀವು ಅವುಗಳ ಹೆಸರನ್ನು ಆ ಸ್ಥಳದಿಂದ ನಿರ್ಮೂಲ ಮಾಡಬೇಕು.

“ಆ ಜನರು ತಮ್ಮ ದೇವರುಗಳನ್ನು ಆರಾಧಿಸುವ ಪ್ರಕಾರ ನೀವು ನಿಮ್ಮ ದೇವರಾದ ಯೆಹೋವನನ್ನು ಆರಾಧಿಸಬಾರದು. ನಿಮ್ಮ ದೇವರಾದ ಯೆಹೋವನು ನಿಮ್ಮ ಕುಲದವರ ಪ್ರಾಂತ್ಯಗಳಿಂದ ಒಂದು ವಿಶೇಷ ಸ್ಥಳವನ್ನು ಆರಿಸಿಕೊಂಡು ಅದಕ್ಕೆ ತನ್ನ ಹೆಸರಿಡುವನು. ಅಲ್ಲಿ ಆತನ ಆಲಯ ಕಟ್ಟಲ್ಪಡುವುದು. ಆತನನ್ನು ಆರಾಧಿಸಲು ನೀವು ಅಲ್ಲಿಗೆ ಹೋಗಬೇಕು. ಅಲ್ಲಿಗೆ ನೀವು ನಿಮ್ಮ ಸರ್ವಾಂಗಹೋಮಗಳನ್ನು, ಯಜ್ಞಗಳನ್ನು, ನಿಮ್ಮ ಬೆಳೆಗಳಲ್ಲಿ ಮತ್ತು ಪಶುಗಳಲ್ಲಿ ದಶಾಂಶವನ್ನು, ನಿಮ್ಮ ವಿಶೇಷ ಕಾಣಿಕೆಗಳನ್ನು, ಯೆಹೋವನಿಗೆ ನೀವು ಹರಕೆ ಹೊತ್ತುಕೊಂಡ ಯಾವುದೇ ಕಾಣಿಕೆಗಳನ್ನು, ನೀವು ಕೊಡಲಿಚ್ಛಿಸುವ ಯಾವುದೇ ವಿಶೇಷ ಕಾಣಿಕೆಗಳನ್ನು, ನಿಮ್ಮ ಮಂದೆ ಮತ್ತು ಹಿಂಡುಗಳ ಚೊಚ್ಚಲುಮರಿಗಳನ್ನು ತರಬೇಕು. ನೀವೂ ಮತ್ತು ನಿಮ್ಮ ಕುಟುಂಬಗಳವರೂ ಅಲ್ಲಿ ಒಟ್ಟಿಗೆ ಊಟ ಮಾಡಬೇಕು. ನಿಮ್ಮ ದೇವರಾದ ಯೆಹೋವನು ನಿಮ್ಮೊಂದಿಗಿರುವನು. ನೀವು ದುಡಿದು ಸಂಪಾದಿಸಿದ ಎಲ್ಲಾ ವಸ್ತುಗಳನ್ನು ಇತರರೊಂದಿಗೆ ಹಂಚಿಕೊಂಡು ಆ ಸ್ಥಳದಲ್ಲಿ ಆನಂದಿಸುವಿರಿ. ನಿಮ್ಮ ದೇವರಾದ ಯೆಹೋವನು ನಿಮ್ಮನ್ನು ಆಶೀರ್ವದಿಸಿ ಆ ಎಲ್ಲಾ ಒಳ್ಳೆಯವುಗಳನ್ನು ನಿಮಗೆ ಕೊಟ್ಟನೆಂದು ನೀವು ಜ್ಞಾಪಿಸಿಕೊಳ್ಳುವಿರಿ.

8-9 “ನೀವು ಇನ್ನೂ ವಾಗ್ದಾನದ ದೇಶವನ್ನು ಪ್ರವೇಶಿಸಲಿಲ್ಲದ ಕಾರಣ ನೀವು ಯೆಹೋವನಿಗೆ ನಿಮ್ಮ ಇಷ್ಟಾನುಸಾರವಾಗಿ ಆರಾಧನೆ ಮಾಡುತ್ತಿದ್ದೀರಿ. ಆದರೆ ಇದನ್ನೇ ಮುಂದುವರಿಸಬೇಡಿ. 10 ನೀವು ಜೋರ್ಡನ್ ನದಿಯನ್ನು ದಾಟಿ, ಯೆಹೋವನು ನಿಮಗೆ ಕೊಡುವ ದೇಶದಲ್ಲಿ ವಾಸಿಸುವಿರಿ. ನಿಮ್ಮ ಎಲ್ಲಾ ವೈರಿಗಳಿಂದ ತಪ್ಪಿಸಿ ದೇವರು ನಿಮಗೆ ಸಮಾಧಾನವನ್ನು ಅನುಗ್ರಹಿಸುವನು; ನೀವು ಅಲ್ಲಿ ಸುರಕ್ಷಿತವಾಗಿರುವಿರಿ. 11 ಆಗ ನಿಮ್ಮ ಯೆಹೋವನು ತನ್ನ ಹೆಸರಿಗಾಗಿ ಒಂದು ಸ್ಥಳವನ್ನು ಆರಿಸಿಕೊಳ್ಳುವನು. ಆ ಸ್ಥಳಕ್ಕೆ ನೀವು ನಿಮ್ಮ ಸರ್ವಾಂಗಹೋಮಗಳನ್ನು ಮತ್ತು ಯಜ್ಞಾದಿಗಳನ್ನು ಸಮರ್ಪಿಸಬೇಕು; ನಿಮ್ಮ ಹರಕೆಯ ಕಾಣಿಕೆಗಳನ್ನು, ಚೊಚ್ಚಲ ಪಶುಗಳನ್ನು, ದಶಾಂಶವನ್ನು ಸಲ್ಲಿಸಬೇಕು. 12 ಅಲ್ಲಿಗೆ ನಿಮ್ಮ ಹೆಂಡತಿ ಮಕ್ಕಳೊಂದಿಗೆ, ನಿಮ್ಮ ಸೇವಕರೊಂದಿಗೆ ಮತ್ತು ನಿಮ್ಮ ಪಟ್ಟಣದಲ್ಲಿ ಸ್ವಾಸ್ತ್ಯವನ್ನು ಹೊಂದದೆ ಇರುವ ಲೇವಿಯರೊಂದಿಗೆ ಹೋಗಿ ಯೆಹೋವನ ಸಮಕ್ಷಮದಲ್ಲಿ ಸಂತೋಷಪಡಬೇಕು.

ಯೋಹಾನ 6:41-51

41 ಯೆಹೂದ್ಯರು ಯೇಸುವಿನ ಬಗ್ಗೆ ಗುಣುಗುಟ್ಟಿದರು. “ಪರಲೋಕದಿಂದ ಇಳಿದುಬರುವ ರೊಟ್ಟಿಯೇ ನಾನು” ಎಂದು ಆತನು ಹೇಳಿದ್ದರಿಂದ ಅವರು ಆಕ್ಷೇಪಿಸಿದರು. 42 ಯೆಹೂದ್ಯರು, “ಇವನು ಯೇಸು. ಇವನ ತಂದೆತಾಯಿಗಳನ್ನು ನಾವು ಬಲ್ಲೆವು. ಇವನು ಕೇವಲ ಯೋಸೇಫನ ಮಗನು. ‘ನಾನು ಪರಲೋಕದಿಂದ ಇಳಿದುಬಂದೆನು’ ಎಂದು ಇವನು ಹೇಳುವುದಕ್ಕೆ ಹೇಗೆ ಸಾಧ್ಯ?” ಎಂದರು.

43 ಅದಕ್ಕೆ ಯೇಸು, “ನೀವು ಗುಣುಗುಟ್ಟುತ್ತಿರುವುದನ್ನು ನಿಲ್ಲಿಸಿರಿ. 44 ತಂದೆಯೇ ನನ್ನನ್ನು ಕಳುಹಿಸಿದನು ಮತ್ತು ತಂದೆಯೇ ನನ್ನ ಬಳಿಗೆ ಜನರನ್ನು ಕರೆತರುವನು. ಅಂತಿಮ ದಿನದಂದು ನಾನು ಆ ಜನರನ್ನು ಜೀವಂತವಾಗಿ ಎಬ್ಬಿಸುವೆನು. ತಂದೆಯು ನನ್ನ ಬಳಿಗೆ ಕರೆದುಕೊಂಡು ಬರದ ಹೊರತು ಯಾವನೂ ನನ್ನ ಬಳಿಗೆ ಬರಲಾರನು. 45 ‘ದೇವರು ಎಲ್ಲಾ ಜನರಿಗೆ ಉಪದೇಶಿಸುವನು’(A) ಎಂದು ಪವಿತ್ರ ಗ್ರಂಥದಲ್ಲಿ ಬರೆದಿದೆ. ಜನರು ತಂದೆಗೆ ಕಿವಿಗೊಟ್ಟು ಆತನಿಂದ ಕಲಿತುಕೊಳ್ಳುವರು. ಆ ಜನರು ನನ್ನ ಬಳಿಗೆ ಬರುವರು. 46 ತಂದೆಯಿಂದ ಬಂದಿರುವಾತನು ಮಾತ್ರ ತಂದೆಯನ್ನು ನೋಡಿದವನಾಗಿದ್ದಾನೆ. ಬೇರೆ ಯಾವ ವ್ಯಕ್ತಿಯೂ ತಂದೆಯನ್ನು ಎಂದೂ ನೋಡಿಲ್ಲ.

47 “ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ನನ್ನನ್ನು ನಂಬಿರುವವನು ನಿತ್ಯಜೀವವನ್ನು ಹೊಂದಿದ್ದಾನೆ. 48 ನಾನೇ ಜೀವಕೊಡುವ ರೊಟ್ಟಿ. 49 ನಿಮ್ಮ ಪಿತೃಗಳು ತಮಗೆ ದೇವರು ಮರುಭೂಮಿಯಲ್ಲಿ ಕೊಟ್ಟ ಮನ್ನವನ್ನು ತಿಂದರು. ಆದರೆ ಎಲ್ಲಾ ಜನರಂತೆ ಅವರೂ ಸತ್ತುಹೋದರು. 50 ಪರಲೋಕದಿಂದ ಇಳಿದುಬರುವ ರೊಟ್ಟಿ ನಾನೇ. ಈ ರೊಟ್ಟಿಯನ್ನು ತಿನ್ನುವವನು ಎಂದಿಗೂ ಸಾಯುವುದಿಲ್ಲ. 51 ಪರಲೋಕದಿಂದ ಇಳಿದುಬಂದ ಜೀವವುಳ್ಳ ರೊಟ್ಟಿ ನಾನೇ. ಈ ರೊಟ್ಟಿಯನ್ನು ತಿನ್ನುವವನು ಶಾಶ್ವತವಾಗಿ ಜೀವಿಸುವನು. ಈ ರೊಟ್ಟಿಯೇ ನನ್ನ ದೇಹ. ಈ ಲೋಕದಲ್ಲಿರುವ ಜನರು ಜೀವವನ್ನು ಹೊಂದಿಕೊಳ್ಳಲೆಂದು ನಾನು ನನ್ನ ದೇಹವನ್ನೇ ಕೊಡುತ್ತೇನೆ” ಎಂದು ಉತ್ತರಕೊಟ್ಟನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International