Revised Common Lectionary (Complementary)
11 ಯೆಹೋವನೇ, ನಾನು ಅನೇಕ ಪಾಪಗಳನ್ನು ಮಾಡಿದ್ದೇನೆ.
ಆದರೆ ನೀನು ನಿನ್ನ ಹೆಸರಿನ ನಿಮಿತ್ತ ಅವುಗಳನ್ನೆಲ್ಲಾ ಕ್ಷಮಿಸಿಬಿಟ್ಟೆ.
12 ಯೆಹೋವನು ತನ್ನಲ್ಲಿ ಭಯಭಕ್ತಿಯುಳ್ಳವರಿಗೆ
ಅತ್ಯುತ್ತಮವಾದ ಜೀವಮಾರ್ಗವನ್ನು ತೋರಿಸುವನು.
13 ಅವನು ಸುಖದಿಂದಿರುವನು.
ಆತನು ವಾಗ್ದಾನ ಮಾಡಿದ ದೇಶವನ್ನು ಅವನ ಮಕ್ಕಳು ಅನುಭವಿಸುವರು.
14 ಯೆಹೋವನು ತನಗೆ ವಿಧೇಯರಾಗಿರುವವರಿಗೆ ಆಪ್ತಮಿತ್ರನಂತಿರುವನು.
ಆತನು ಅವರಿಗೆ ತನ್ನ ಒಡಂಬಡಿಕೆಯನ್ನು ಉಪದೇಶಿಸುವನು.
15 ನನ್ನ ಕಣ್ಣುಗಳು ಸಹಾಯಕ್ಕಾಗಿ ಯೆಹೋವನನ್ನೇ ದೃಷ್ಟಿಸುತ್ತಿವೆ.
ಆತನು ನನ್ನನ್ನು ತೊಂದರೆಗಳಿಂದ ಖಂಡಿತವಾಗಿ ಬಿಡುಸುವನು.[a]
16 ಯೆಹೋವನೇ, ನಾನು ಬಾಧೆಪಡುವವನೂ ಒಬ್ಬಂಟಿಗನೂ ಆಗಿದ್ದೇನೆ.
ನನಗೆ ಅಭಿಮುಖನಾಗಿ ಕರುಣೆತೋರು.
17 ಇಕ್ಕಟ್ಟುಗಳಿಂದ ನನ್ನನ್ನು ಬಿಡಿಸು.
ನನ್ನ ಸಮಸ್ಯೆಗಳನ್ನು ಪರಿಹರಿಸು.
18 ಯೆಹೋವನೇ, ನನ್ನ ಸಂಕಟವನ್ನೂ ತೊಂದರೆಗಳನ್ನೂ ನೋಡು.
ನನ್ನ ಪಾಪಗಳನ್ನೆಲ್ಲ ಕ್ಷಮಿಸು.
19 ನನ್ನ ವೈರಿಗಳನ್ನೆಲ್ಲ ದೃಷ್ಟಿಸಿನೋಡು.
ಅವರು ನನ್ನನ್ನು ದ್ವೇಷಿಸುತ್ತಾ ಕೇಡುಮಾಡಬೇಕೆಂದಿದ್ದಾರೆ.
20 ದೇವರೇ, ನನ್ನನ್ನು ಕಾಪಾಡು, ನನ್ನನ್ನು ರಕ್ಷಿಸು.
ನಾನು ನಿನ್ನಲ್ಲಿ ಭರವಸವಿಟ್ಟಿರುವುದರಿಂದ ನನ್ನನ್ನು ನಿರಾಶೆಗೊಳಿಸಬೇಡ.
ಜ್ಞಾನದ ಶಕ್ತಿ
13 ಇದಲ್ಲದೆ ಲೋಕದಲ್ಲಿ ಜ್ಞಾನದ ಕಾರ್ಯವನ್ನು ಮಾಡುವ ಒಬ್ಬನನ್ನು ನಾನು ಕಂಡೆನು. ಅದು ತುಂಬ ಮುಖ್ಯವಾದದ್ದೆಂದು ನನಗೆ ತೋರಿತು. 14 ಕೆಲವು ಜನರಿದ್ದ ಒಂದು ಚಿಕ್ಕ ನಗರವಿತ್ತು. ಒಬ್ಬ ದೊಡ್ಡ ರಾಜನು ಆ ನಗರದ ಮೇಲೆ ದಂಡೆತ್ತಿ ಬಂದು ಮುತ್ತಿಗೆ ಹಾಕಿದನು. 15 ಆ ನಗರದಲ್ಲಿ ಒಬ್ಬ ಜ್ಞಾನಿ ಇದ್ದನು. ಆದರೆ ಅವನು ಬಡವನಾಗಿದ್ದನು, ಅವನು ತನ್ನ ಜ್ಞಾನದಿಂದ ಆ ನಗರವನ್ನು ಕಾಪಾಡಿದನು; ಆದರೆ ಜನರು ಅವನನ್ನು ಮರೆತೇಬಿಟ್ಟರು. 16 ನಾನು ಹೇಳುವುದೇನೆಂದರೆ, ಜ್ಞಾನವು ಶಕ್ತಿಗಿಂತಲೂ ಉತ್ತಮ. ಅವರು ಆ ಬಡವನ ಜ್ಞಾನವನ್ನು ಮರೆತುಬಿಟ್ಟರೂ ಅವನ ಮಾತುಗಳನ್ನು ಕೇಳದಿದ್ದರೂ ಜ್ಞಾನವು ಉತ್ತಮವಾದದ್ದೇ.
17 ಜ್ಞಾನಿಯ ಮೆಲ್ಲನೆಯ ಮಾತುಗಳು
ಮೂಢನಾದ ಅಧಿಪತಿಯು ಕೂಗಿಹೇಳಿದ ಮಾತುಗಳಿಗಿಂತಲೂ ಎಷ್ಟೋ ಉತ್ತಮ.
18 ಜ್ಞಾನವು ಯುದ್ಧಾಯುಧಗಳಿಗಿಂತಲೂ ಉತ್ತಮ,
ಆದರೆ ಮೂಢನು ಒಳ್ಳೆಯದನ್ನು ಹಾಳು ಮಾಡುವನು.
ಸರ್ವರಿಗೂ ಮನುಷ್ಯಕುಮಾರನು ನೀಡುವ ತೀರ್ಪು
31 “ಮನುಷ್ಯಕುಮಾರನು ತನ್ನ ಮಹಿಮೆಯಲ್ಲಿ ಸಮಸ್ತ ದೇವದೂತರ ಸಮೇತ ಮತ್ತೆ ಬರುವಾಗ ರಾಜನಾಗಿ ಮಹಾಸಿಂಹಾಸನದ ಮೇಲೆ ಕುಳಿತುಕೊಳ್ಳುತ್ತಾನೆ. 32 ಭೂಲೋಕದ ಜನರೆಲ್ಲರೂ ಆತನ ಮುಂದೆ ಒಟ್ಟುಗೂಡುತ್ತಾರೆ. ಕುರುಬನು ಕುರಿಗಳನ್ನು ಆಡುಗಳಿಂದ ಪ್ರತ್ಯೇಕಿಸಿದಂತೆ ಆತನು ಅವರನ್ನು ಬೇರ್ಪಡಿಸುವನು; 33 ಮನುಷ್ಯಕುಮಾರನು ಕುರಿಗಳನ್ನು ತನ್ನ ಬಲಗಡೆಯಲ್ಲಿಯೂ ಮತ್ತು ಆಡುಗಳನ್ನು ತನ್ನ ಎಡಗಡೆಯಲ್ಲಿಯೂ ನಿಲ್ಲಿಸುವನು.
34 “ಆಗ ರಾಜನು ತನ್ನ ಬಲಗಡೆಯಲ್ಲಿರುವ ಜನರಿಗೆ, ‘ಬನ್ನಿರಿ, ನನ್ನ ತಂದೆ ನಿಮಗೆ ಮಹಾ ಆಶೀರ್ವಾದಗಳನ್ನು ಕೊಟ್ಟಿದ್ದಾನೆ. ಬನ್ನಿರಿ, ದೇವರು ನಿಮಗೆ ವಾಗ್ದಾನ ಮಾಡಿದ ರಾಜ್ಯವನ್ನು ಪಡೆದುಕೊಳ್ಳಿರಿ. ಆ ರಾಜ್ಯವು ಲೋಕ ಉಂಟಾದಂದಿನಿಂದ ನಿಮಗಾಗಿ ಸಿದ್ಧಮಾಡಲ್ಪಟ್ಟಿದೆ. 35 ನೀವು ಈ ರಾಜ್ಯವನ್ನು ಪಡೆದುಕೊಳ್ಳಿರಿ. ಏಕೆಂದರೆ ನಾನು ಹಸಿದಿದ್ದೆನು. ನೀವು ನನಗೆ ಊಟ ಕೊಟ್ಟಿರಿ. ನಾನು ಬಾಯಾರಿದ್ದೆನು, ನೀವು ನನಗೆ ಕುಡಿಯುವುದಕ್ಕೆ ಕೊಟ್ಟಿರಿ. ನಾನು ಒಬ್ಬಂಟಿಗನಾಗಿ ಮನೆಯಿಂದ ದೂರದಲ್ಲಿ ಇದ್ದಾಗ, ನೀವು ನನ್ನನ್ನು ನಿಮ್ಮ ಮನೆಯೊಳಗೆ ಸೇರಿಸಿಕೊಂಡಿರಿ. 36 ನಾನು ಬಟ್ಟೆಯಿಲ್ಲದವನಾಗಿದ್ದೆನು. ನೀವು ನನಗೆ ಉಡುವುದಕ್ಕೆ ಕೊಟ್ಟಿರಿ. ನಾನು ಕಾಯಿಲೆಯಲ್ಲಿ ಬಿದ್ದಿದ್ದೆನು, ನೀವು ನನಗೆ ಆರೈಕೆ ಮಾಡಿದಿರಿ. ನಾನು ಸೆರೆಯಲ್ಲಿದ್ದೆನು, ನೀವು ನನ್ನನ್ನು ನೋಡುವುದಕ್ಕೆ ಬಂದಿರಿ’ ಎಂದು ಹೇಳುತ್ತಾನೆ.
37 “ಆಗ ಒಳ್ಳೆಯ ಜನರು, ‘ಪ್ರಭುವೇ, ನೀನು ಹಸಿದಿದ್ದನ್ನು ನೋಡಿ ಯಾವಾಗ ನಿನಗೆ ಆಹಾರ ಕೊಟ್ಟೆವು? ನೀನು ಬಾಯಾರಿದ್ದನ್ನು ನೋಡಿ ಯಾವಾಗ ಕುಡಿಯುವುದಕ್ಕೆ ಕೊಟ್ಟೆವು? 38 ನೀನು ಒಬ್ಬಂಟಿಗನಾಗಿ ಮನೆಯಿಂದ ದೂರವಾಗಿ ಇದ್ದದ್ದನ್ನು ನೋಡಿ ಯಾವಾಗ ನಿನ್ನನ್ನು ನಮ್ಮ ಮನೆಗಳೊಳಗೆ ಸೇರಿಸಿಕೊಂಡೆವು? ನಿನಗೆ ಬಟ್ಟೆಯಿಲ್ಲದಿರುವುದನ್ನು ನೋಡಿ ಯಾವಾಗ ಉಡುವುದಕ್ಕೆ ಕೊಟ್ಟೆವು? 39 ನೀನು ಕಾಯಿಲೆ ಬಿದ್ದಿದ್ದನ್ನು ಅಥವಾ ಸೆರೆಯಲ್ಲಿ ಇದ್ದದ್ದನ್ನು ನೋಡಿ ಯಾವಾಗ ನಿನ್ನನ್ನು ಆರೈಕೆ ಮಾಡಿದೆವು?’ ಎಂದು ಹೇಳುವರು.
40 “ಆಗ ರಾಜನು, ‘ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ನೀವು ಇಲ್ಲಿ ನನ್ನ ಜನರಿಗಾಗಿ ಏನೇನು ಮಾಡುತ್ತೀರೋ ಅದೆಲ್ಲವನ್ನು ನನಗೂ ಮಾಡಿದಂತಾಯಿತು’ ಎಂದು ಉತ್ತರಕೊಡುವನು.
41 “ಆಮೇಲೆ ರಾಜನು ತನ್ನ ಎಡಗಡೆಯಿದ್ದ ಜನರಿಗೆ, ‘ನನ್ನಿಂದ ತೊಲಗಿಹೋಗಿರಿ, ನಿಮಗೆ ಶಿಕ್ಷೆಯಾಗಬೇಕೆಂದು ದೇವರು ತೀರ್ಮಾನಿಸಿದ್ದಾನೆ. ಸೈತಾನನಿಗೂ ಅವನ ದೂತರಿಗೂ ಸಿದ್ಧಮಾಡಿರುವ ಆರದ ಬೆಂಕಿಗೆ ಬೀಳಿರಿ. 42 ಏಕೆಂದರೆ ನಾನು ಹಸಿದಿದ್ದೆನು, ನೀವು ನನಗೆ ಊಟ ಕೊಡಲಿಲ್ಲ. ನಾನು ಬಾಯಾರಿದ್ದೆನು, ನೀವು ನನಗೆ ಕುಡಿಯಲು ಕೊಡಲಿಲ್ಲ. 43 ನಾನು ಪರದೇಶಿಯಾಗಿದ್ದೆನು, ನೀವು ನನ್ನನ್ನು ನಿಮ್ಮ ಮನೆಯೊಳಕ್ಕೆ ಸೇರಿಸಿಕೊಳ್ಳಲಿಲ್ಲ. ನಾನು ಬಟ್ಟೆಯಿಲ್ಲದವನಾಗಿದ್ದೆನು. ನೀವು ನನಗೆ ಉಡುವುದಕ್ಕೆ ಕೊಡಲಿಲ್ಲ. ನಾನು ಕಾಯಿಲೆಯಲ್ಲಿ ಬಿದ್ದಿದ್ದೆನು ಮತ್ತು ಸೆರೆಯಲ್ಲಿದ್ದೆನು, ನೀವು ನನ್ನನ್ನು ನೋಡಿಕೊಳ್ಳಲಿಲ್ಲ’ ಎಂದು ಹೇಳುವನು.
44 “ಅವರು, ‘ಪ್ರಭುವೇ, ನೀನು ಯಾವಾಗ ಹಸಿದಿದ್ದೆ ಮತ್ತು ಬಾಯಾರಿದ್ದೆ? ನೀನು ಯಾವಾಗ ಆಶ್ರಯವಿಲ್ಲದವನಾಗಿದ್ದೆ? ನಿನಗೆ ಯಾವಾಗ ಬಟ್ಟೆಯಿರಲಿಲ್ಲ? ನೀನು ಯಾವಾಗ ಕಾಯಿಲೆ ಬಿದ್ದಿದ್ದೆ ಮತ್ತು ಸೆರೆವಾಸದಲ್ಲಿದ್ದೆ? ಇವೆಲ್ಲವನ್ನು ನಾವು ನೋಡಿಯೂ ನಿನಗೆ ಸಹಾಯ ಮಾಡದೆ ಹೋದದ್ದು ಯಾವಾಗ?’ ಎಂದು ಉತ್ತರಿಸುವರು.
45 “ಆಗ ರಾಜನು, ‘ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ನೀವು ಇಲ್ಲಿ ನನ್ನ ಜನರಿಗೆ ಏನೇನು ಮಾಡಲಿಲ್ಲವೋ ಅದನ್ನು ನನಗೂ ಮಾಡದಂತಾಯಿತು’ ಎಂದು ಉತ್ತರಕೊಡುವನು.
46 “ಆಗ ಕೆಟ್ಟಜನರು ಅಲ್ಲಿಂದ ಹೊರಟುಹೋಗುವರು. ಅವರಿಗೆ ನಿತ್ಯದಂಡನೆಯಾಗುವುದು. ಒಳ್ಳೆಯ ಜನರಾದರೋ ನಿತ್ಯಜೀವವನ್ನು ಹೊಂದುವರು.”
Kannada Holy Bible: Easy-to-Read Version. All rights reserved. © 1997 Bible League International