Revised Common Lectionary (Complementary)
ಸ್ತುತಿಗೀತೆ.
66 ಸರ್ವಭೂನಿವಾಸಿಗಳೇ, ದೇವರಿಗೆ ಜಯಘೋಷ ಮಾಡಿರಿ!
2 ಆತನ ಹೆಸರಿನ ಮಹಿಮೆಯನ್ನು ಕೀರ್ತಿಸಿರಿ.
ಸ್ತುತಿಗೀತೆಗಳಿಂದ ಆತನನ್ನು ಸನ್ಮಾನಿಸಿರಿ.
3 ದೇವರೇ, ನಿನ್ನ ಕಾರ್ಯಗಳು ಎಷ್ಟು ಅದ್ಭುತವಾಗಿವೆ!
ನಿನ್ನ ಮಹಾಶಕ್ತಿಯಿಂದಾಗಿ ಶತ್ರುಗಳು ನಿನಗೆ ಭಯಪಟ್ಟು ಅಡ್ಡಬೀಳುವರು.
4 ಸರ್ವಭೂನಿವಾಸಿಗಳು ನಿನ್ನನ್ನು ಆರಾಧಿಸಲಿ.
ಪ್ರತಿಯೊಬ್ಬರೂ ನಿನ್ನ ಹೆಸರನ್ನು ಕೀರ್ತಿಸಲಿ.
5 ಬನ್ನಿರಿ, ದೇವರ ಕಾರ್ಯಗಳನ್ನು ನೋಡಿರಿ;
ಆತನ ಕಾರ್ಯಗಳು ಅತ್ಯದ್ಭುತವಾಗಿವೆ!
6 ಆತನು ಸಮುದ್ರವನ್ನು ಒಣನೆಲವನ್ನಾಗಿ ಮಾಡಿದನು.
ಆತನ ಜನರು ಕಾಲುನಡಿಗೆಯಿಂದ ನದಿಯನ್ನು ದಾಟಿದರು.
ಅದಕ್ಕಾಗಿ ನಾವು ಆತನಲ್ಲಿ ಉಲ್ಲಾಸಪಡೋಣ.
7 ಆತನು ಪ್ರಪಂಚವನ್ನು ತನ್ನ ಮಹಾಶಕ್ತಿಯಿಂದ ಆಳುತ್ತಾನೆ.
ಆತನು ಎಲ್ಲರನ್ನೂ ಗಮನಿಸುತ್ತಾನೆ.
ಆತನ ವಿರುದ್ಧ ದಂಗೆಯೇಳಲು ಯಾರಿಗೂ ಆಗದು.
8 ಜನಾಂಗಗಳೇ, ನಮ್ಮ ದೇವರನ್ನು ಕೊಂಡಾಡಿರಿ.
ಆತನಿಗೆ ಸ್ತುತಿಗೀತೆಗಳನ್ನು ಹಾಡಿರಿ.
9 ನಮಗೆ ಜೀವಕೊಟ್ಟವನು ಆತನೇ.
ನಮ್ಮನ್ನು ಕಾಪಾಡುವವನೂ ಆತನೇ.
ಮನಸ್ಸೆಯು ತನ್ನ ಕೆಟ್ಟ ಆಳ್ವಿಕೆಯನ್ನು ಯೆಹೂದದಲ್ಲಿ ಆರಂಭಿಸಿದನು
21 ಮನಸ್ಸೆಯು ಆಳಲಾರಂಭಿಸಿದಾಗ ಅವನಿಗೆ ಹನ್ನೆರಡು ವರ್ಷ ವಯಸ್ಸಾಗಿತ್ತು. ಅವನು ಐವತ್ತೈದು ವರ್ಷ ಜೆರುಸಲೇಮಿನಲ್ಲಿ ಆಳಿದನು. ಅವನ ತಾಯಿಯ ಹೆಸರು ಹೆಫ್ಜೆಬಾ.
2 ಯೆಹೋವನು ಕೆಟ್ಟದ್ದೆಂದು ಹೇಳಿದ ಕಾರ್ಯಗಳನ್ನು ಮನಸ್ಸೆಯು ಮಾಡಿದನು. ಇಸ್ರೇಲರು ತಮ್ಮ ದೇಶಕ್ಕೆ ಬಂದಾಗ ಯೆಹೋವನು ಹೊರಗಟ್ಟಿದ ಅನ್ಯಜನಾಂಗಗಳ ಅಸಹ್ಯಕೃತ್ಯಗಳನ್ನು ಮನಸ್ಸೆಯು ಮಾಡಿದನು. 3 ಮನಸ್ಸೆಯು ತನ್ನ ತಂದೆಯಾದ ಹಿಜ್ಕೀಯನು ನಾಶಪಡಿಸಿದ್ದ ಉನ್ನತಸ್ಥಳಗಳನ್ನು ಮತ್ತೆ ನಿರ್ಮಿಸಿದನು. ಮನಸ್ಸೆಯು ಇಸ್ರೇಲಿನ ರಾಜನಾದ ಅಹಾಬನಂತೆ ಬಾಳನಿಗಾಗಿ ಯಜ್ಞವೇದಿಕೆಯನ್ನು ಮತ್ತು ಅಶೇರಸ್ತಂಭಗಳನ್ನು ನಿರ್ಮಿಸಿದನು. ಮನಸ್ಸೆಯು ಪರಲೋಕದ ನಕ್ಷತ್ರಗಳನ್ನು ಆರಾಧಿಸಿ ಅವುಗಳ ಸೇವೆಮಾಡಿದನು. 4 ಮನಸ್ಸೆಯು ಸುಳ್ಳುದೇವತೆಗಳನ್ನು ಗೌರವಿಸಲು ದೇವಾಲಯದಲ್ಲಿ ಯಜ್ಞವೇದಿಕೆಗಳನ್ನು ನಿರ್ಮಿಸಿದನು. (“ನಾನು ನನ್ನ ಹೆಸರನ್ನು ಜೆರುಸಲೇಮಿನಲ್ಲಿ ಸ್ಥಾಪಿಸುತ್ತೇನೆ” ಎಂದು ಯೆಹೋವನು ಮಾತನಾಡುವಾಗ ಹೇಳುತ್ತಿದ್ದ ಸ್ಥಳವು ಇದೇ ಆಗಿತ್ತು.) 5 ಮನಸ್ಸೆಯು ಪರಲೋಕದ ನಕ್ಷತ್ರಗಳಿಗಾಗಿ ದೇವಾಲಯದ ಎರಡು ಪ್ರಾಕಾರಗಳಲ್ಲಿ ಯಜ್ಞವೇದಿಕೆಗಳನ್ನು ನಿರ್ಮಿಸಿದನು. 6 ಮನಸ್ಸೆಯು ತನ್ನ ಮಗನನ್ನು ಆಹುತಿಕೊಟ್ಟು ಅವನನ್ನು ಯಜ್ಞವೇದಿಕೆಯ ಮೇಲೆ ಹೋಮಮಾಡಿದನು. ಮನಸ್ಸೆಯು ಭವಿಷ್ಯತ್ಕಾಲವನ್ನು ಅರಿಯಲು ಅನೇಕ ಮಾರ್ಗಗಳಲ್ಲಿ ಪ್ರಯತ್ನಿಸುತ್ತಿದ್ದನು. ಅವನು ಪ್ರೇತಾತ್ಮಗಳನ್ನು ವಶಪಡಿಸಿಕೊಂಡಿರುವ ಮಾಂತ್ರಿಕರನ್ನು ಮತ್ತು ತಾಂತ್ರಿಕರನ್ನು ಭೇಟಿಮಾಡಿದನು.
ಯೆಹೋವನು ಕೆಟ್ಟದ್ದೆಂದು ಹೇಳಿದ ಅನೇಕಾನೇಕ ಕಾರ್ಯಗಳನ್ನು ಮನಸ್ಸೆಯು ಮಾಡಿದನು. ಯೆಹೋವನು ಕೋಪಗೊಳ್ಳಲು ಇದು ಕಾರಣವಾಯಿತು. 7 ಮನಸ್ಸೆಯು ಅಶೇರ ವಿಗ್ರಹಗಳನ್ನು ಕೆತ್ತಿಸಿದನು. ಅವನು ಈ ವಿಗ್ರಹಗಳನ್ನು ಆಲಯದಲ್ಲಿ ಇರಿಸಿದನು. ಯೆಹೋವನು ದಾವೀದನಿಗೆ ಮತ್ತು ದಾವೀದನ ಮಗನಾದ ಸೊಲೊಮೋನನಿಗೆ ಈ ಆಲಯವನ್ನು ಕುರಿತು ಹೀಗೆ ಹೇಳಿದ್ದನು: “ಇಸ್ರೇಲಿನಲ್ಲಿರುವ ಎಲ್ಲಾ ನಗರಗಳಿಂದ ನಾನು ಜೆರುಸಲೇಮನ್ನು ಆರಿಸಿದ್ದೇನೆ. ನಾನು ನನ್ನ ಹೆಸರನ್ನು ಜೆರುಸಲೇಮಿನ ಆಲಯದಲ್ಲಿ ಎಂದೆಂದಿಗೂ ಇರಿಸುತ್ತೇನೆ. 8 ಇಸ್ರೇಲಿನ ಜನರು ತಮ್ಮ ದೇಶವನ್ನು ತೊರೆದು ಅಲೆದಾಡದೆ ತಮ್ಮ ಪೂರ್ವಿಕರಿಗೆ ಕೊಡಲ್ಪಟ್ಟ ದೇಶದಲ್ಲಿಯೇ ನೆಲೆಸುವಂತೆ ನಾನು ಮಾಡುತ್ತೇನೆ. ನಾನು ನನ್ನ ಸೇವಕನಾದ ಮೋಶೆಯ ಮೂಲಕ ಅವರಿಗೆ ಬೋಧಿಸಿದ ಆಜ್ಞೆಗಳಿಗೆಲ್ಲಾ ಅವರು ವಿಧೇಯರಾಗಿದ್ದರೆ, ನಾನು ಅವರನ್ನು ಅವರ ದೇಶದಲ್ಲಿ ನೆಲೆಗೊಳಿಸುವೆನು.” 9 ಆದರೆ ಜನರು ದೇವರ ಮಾತನ್ನು ಆಲಿಸಲಿಲ್ಲ. ಇಸ್ರೇಲರು ಕಾನಾನಿಗೆ ಬರುವುದಕ್ಕೆ ಮುಂಚೆ ಅಲ್ಲಿ ವಾಸಿಸುತ್ತಿದ್ದ ಜನಾಂಗಗಳು ಮಾಡಿದ್ದಕ್ಕಿಂತ ಹೆಚ್ಚು ಕೆಟ್ಟಕಾರ್ಯಗಳನ್ನು ಮನಸ್ಸೆಯಿಂದ ಪ್ರೇರಿತರಾಗಿ ಮಾಡಿದರು. ಇಸ್ರೇಲರು ಅವರ ದೇಶಗಳನ್ನು ವಶಪಡಿಸಿಕೊಳ್ಳಲು ಬಂದಾಗ ಯೆಹೋವನು ಆ ಜನಾಂಗಗಳನ್ನು ನಾಶಪಡಿಸಿದನು.
10 ಯೆಹೋವನು ತನ್ನ ಸೇವಕರಾದ ಪ್ರವಾದಿಗಳಿಂದ ಈ ಸಂಗತಿಗಳನ್ನು ತಿಳಿಸಿದನು. 11 “ಯೆಹೂದದ ರಾಜನಾದ ಮನಸ್ಸೆಯು ತನಗಿಂತಲೂ ಮುಂಚೆ ಇದ್ದ ಅಮೋರಿಯರಿಗಿಂತ ಹೆಚ್ಚು ಅಸಹ್ಯವಾದ ಕೃತ್ಯಗಳನ್ನು ಮಾಡಿದನು. ಮನಸ್ಸೆಯು ತನ್ನ ವಿಗ್ರಹಗಳಿಂದ ಯೆಹೂದವನ್ನು ಪಾಪಕ್ಕೆ ಪ್ರೇರೇಪಿಸಿದನು. 12 ಆದ್ದರಿಂದ ಇಸ್ರೇಲಿನ ದೇವರು ಹೀಗೆನ್ನುತ್ತಾನೆ: ‘ಇಗೋ, ಜೆರುಸಲೇಮಿಗೂ ಯೆಹೂದಕ್ಕೂ ಎಷ್ಟು ತೊಂದರೆಯನ್ನು ತರುತ್ತೇನೆಂದರೆ, ಅದನ್ನು ಕೇಳಿದ ಯಾರಾದರೂ ನಡುಗಿಬಿಡಬೇಕು. 13 ನಾನು ಸಮಾರ್ಯದ ಮೇಲೆ ಚಾಚಿದ ಮಟ್ಟಗೋಲನ್ನೂ ಅಹಾಬನ ಕುಟುಂಬದ ಮೇಲಿಟ್ಟ ತೂಕದ ಗುಂಡನ್ನೂ ಜೆರುಸಲೇಮಿನ ಮೇಲೆ ಚಾಚುತ್ತೇನೆ. ಒಬ್ಬನು ಒಂದು ಪಾತ್ರೆಯನ್ನು ಒರೆಸಿ, ಅದನ್ನು ಕೆಳಮುಖವಾಗಿ ತಿರುಗಿಸುವಂತೆ ನಾನು ಜೆರುಸಲೇಮಿಗೆ ಮಾಡುತ್ತೇನೆ. 14 ಆದರೂ ಅಲ್ಲಿ ನನ್ನ ಕೆಲವು ಜನರು ಉಳಿದುಕೊಳ್ಳುತ್ತಾರೆ. ನಾನು ಅವರನ್ನು ಬಿಟ್ಟುಬಿಡುತ್ತೇನೆ. ನಾನು ಅವರನ್ನು ಅವರ ಶತ್ರುಗಳಿಗೆ ಒಪ್ಪಿಸುತ್ತೇನೆ. ಅವರ ಶತ್ರುಗಳು ಅವರನ್ನು ಸೆರೆಯಾಳುಗಳನ್ನಾಗಿ ಇಟ್ಟುಕೊಳ್ಳುವರು; ಯುದ್ಧಗಳಲ್ಲಿ ಸೈನಿಕರು ವಶಪಡಿಸಿಕೊಳ್ಳುವ ಬೆಲೆಯುಳ್ಳ ವಸ್ತುಗಳಂತೆ ಅವರಿರುವರು. 15 ಏಕೆಂದರೆ ನಾನು ಕೆಟ್ಟದ್ದೆಂದು ಹೇಳಿದ ಕಾರ್ಯಗಳನ್ನೇ ನನ್ನ ಜನರು ಮಾಡಿದರು. ಅವರ ಪೂರ್ವಿಕರು ಈಜಿಪ್ಟಿನಿಂದ ಹೊರಬಂದ ದಿನದಿಂದ ಅವರು ನನ್ನನ್ನು ರೇಗಿಸಿದರು.
ಮನುಷ್ಯನಲ್ಲಿ ಗೊಂದಲ
14 ಧರ್ಮಶಾಸ್ತ್ರವು ಆತ್ಮಿಕವಾದದ್ದೆಂದು ನಾವು ಬಲ್ಲೆವು. ಆದರೆ ನಾನು ಆತ್ಮಿಕನಲ್ಲ. ನಾನು ಪಾಪಕ್ಕೆ ಮಾರಲ್ಪಟ್ಟ ಗುಲಾಮನೋ ಎಂಬಂತೆ ಪಾಪವು ನನ್ನನ್ನು ಆಳುತ್ತದೆ. 15 ನಾನು ಮಾಡುವ ಕಾರ್ಯಗಳು ನನಗೇ ಅರ್ಥವಾಗುವುದಿಲ್ಲ. ನಾನು ಯಾವ ಒಳ್ಳೆಯ ಕಾರ್ಯಗಳನ್ನು ಮಾಡಬೇಕೆಂದು ಇಚ್ಛಿಸುತ್ತೇನೋ ಆ ಕಾರ್ಯಗಳನ್ನು ಮಾಡದೆ ನಾನು ದ್ವೇಷಿಸುವ ಕೆಟ್ಟಕಾರ್ಯಗಳನ್ನೇ ಮಾಡುತ್ತೇನೆ. 16 ನಾನು ಮಾಡುವ ಕೆಟ್ಟಕಾರ್ಯಗಳನ್ನು ಮಾಡಲು ನನಗೆ ಇಷ್ಟವಿಲ್ಲದಿದ್ದರೆ, ಧರ್ಮಶಾಸ್ತ್ರವು ಒಳ್ಳೆಯದೆಂದು ನಾನು ಒಪ್ಪಿಕೊಂಡಂತಾಯಿತು. 17 ಹೀಗಿರಲಾಗಿ ಈ ಕೆಟ್ಟಕಾರ್ಯಗಳನ್ನು ಮಾಡುವವನು ನಿಜವಾಗಿಯೂ ನಾನಲ್ಲ. ನನ್ನಲ್ಲಿ ವಾಸವಾಗಿರುವ ಪಾಪವೇ ಈ ಕೆಟ್ಟಕಾರ್ಯಗಳನ್ನು ಮಾಡುತ್ತದೆ. 18 ಹೌದು, ನನ್ನಲ್ಲಿ ಅಂದರೆ ನನ್ನ ಪಾಪಾಧೀನಸ್ವಭಾವದಲ್ಲಿ ಒಳ್ಳೆಯದೇನೂ ವಾಸವಾಗಿಲ್ಲವೆಂಬುದು ನನಗೆ ಗೊತ್ತಿದೆ. ಒಳ್ಳೆಯ ಕಾರ್ಯಗಳನ್ನು ಮಾಡುವುದಕ್ಕೆ ನನಗೆ ಮನಸ್ಸಿದ್ದರೂ ಅವುಗಳನ್ನು ಕಾರ್ಯಗತಗೊಳಿಸಲು ನನಗೆ ಸಾಧ್ಯವಿಲ್ಲ. 19 ನಾನು ಮಾಡಲಿಚ್ಛಿಸುವ ಒಳ್ಳೆಯ ಕಾರ್ಯಗಳನ್ನು ಮಾಡದೆ ಮಾಡಲಿಚ್ಛಿಸದಿರುವ ಕೆಟ್ಟಕಾರ್ಯಗಳನ್ನೇ ಮಾಡುತ್ತೇನೆ. 20 ಹೀಗಿರಲಾಗಿ, ನಾನು ಮಾಡಲಿಚ್ಛಿಸದಿರುವ ಕಾರ್ಯಗಳನ್ನು ನಾನು ಮಾಡಿದರೆ, ಅವುಗಳನ್ನು ಮಾಡವವನು ನಿಜವಾಗಿಯೂ ನಾನಲ್ಲ. ನನ್ನಲ್ಲಿ ವಾಸವಾಗಿರುವ ಪಾಪವೇ ಆ ಕೆಟ್ಟಕಾರ್ಯಗಳನ್ನು ಮಾಡುತ್ತದೆ.
21 ಹೀಗಿರಲಾಗಿ, ನಾನು ಈ ನಿಯಮವನ್ನು ಕಲಿತುಕೊಂಡಿದ್ದೇನೆ: ನಾನು ಒಳ್ಳೆಯದನ್ನು ಮಾಡಲಿಚ್ಛಿಸುವಾಗ, ಕೆಟ್ಟದ್ದು ನನ್ನೊಳಗೇ ಇರುತ್ತದೆ. 22 ನನ್ನ ಅಂತರಂಗದಲ್ಲಿ ದೇವರ ನಿಯಮದ ವಿಷಯದಲ್ಲಿ ನಾನು ಸಂತೋಷಪಡುತ್ತೇನೆ. 23 ಆದರೆ ನನ್ನ ದೇಹದಲ್ಲಿ ಮತ್ತೊಂದು ನಿಯಮ ಕೆಲಸ ಮಾಡುತ್ತಿರುವುದನ್ನು ನಾನು ಕಾಣುತ್ತೇನೆ. ನನ್ನ ಅಂತರಂಗ ಒಪ್ಪಿಕೊಳ್ಳುವ ನಿಯಮಕ್ಕೆ ವಿರುದ್ಧವಾಗಿ ಆ ನಿಯಮ ಹೋರಾಡುತ್ತದೆ. ನನ್ನ ದೇಹದಲ್ಲಿ ಕೆಲಸ ಮಾಡುತ್ತಿರುವ ಆ ಮತ್ತೊಂದು ನಿಯಮವೇ ಪಾಪದ ನಿಯಮವಾಗಿದೆ. ಆ ನಿಯಮವು ನನ್ನನ್ನು ತನ್ನ ಸೆರೆಯಾಳನ್ನಾಗಿ ಮಾಡುತ್ತದೆ. 24 ನಾನು ದುರಾವಸ್ಥೆಗೆ ಒಳಗಾಗಿದ್ದೇನೆ. ನನಗೆ ಮರಣವನ್ನು ತರುವ ಈ ದೇಹದಿಂದ ನನ್ನನ್ನು ರಕ್ಷಿಸುವವರು ಯಾರು? 25 ದೇವರು ನನ್ನನ್ನು ರಕ್ಷಿಸುವನು! ನಮ್ಮ ಪ್ರಭುವಾದ ಕ್ರಿಸ್ತ ಯೇಸುವಿನ ಮೂಲಕ ಆತನು ದಯಪಾಲಿಸುವ ರಕ್ಷಣೆಗಾಗಿ ಆತನಿಗೆ ಸ್ತೋತ್ರವಾಗಲಿ!
ಆದ್ದರಿಂದ ನನ್ನ ಅಂತರಂಗದಲ್ಲಿ ನಾನು ದೇವರ ನಿಯಮಕ್ಕೆ ಗುಲಾಮನಾಗಿದ್ದೇನೆ. ಆದರೆ ನನ್ನ ಪಾಪಾಧೀನಸ್ವಭಾವದಲ್ಲಿ ನಾನು ಪಾಪದ ನಿಯಮಕ್ಕೆ ಗುಲಾಮನಾಗಿದ್ದೇನೆ.
Kannada Holy Bible: Easy-to-Read Version. All rights reserved. © 1997 Bible League International