Revised Common Lectionary (Complementary)
ಸ್ತುತಿಗೀತೆ. ರಚನೆಗಾರ: ದಾವೀದ.
140 ಯೆಹೋವನೇ, ಕೆಡುಕರಿಂದ ನನ್ನನ್ನು ರಕ್ಷಿಸು.
ಕ್ರೂರಿಗಳಿಂದ ನನ್ನನ್ನು ಕಾಪಾಡು.
2 ಅವರು ಕೇಡುಮಾಡಬೇಕೆಂದಿದ್ದಾರೆ. ಅವರು ಯಾವಾಗಲೂ ಜಗಳವೆಬ್ಬಿಸುತ್ತಾರೆ.
3 ಅವರ ನಾಲಿಗೆಗಳು ಸರ್ಪಗಳಂತಿವೆ.
ಅವರ ನಾಲಿಗೆಯ ಕೆಳಗೆ ಹಾವಿನ ವಿಷವಿದೆ.
4 ಯೆಹೋವನೇ, ದುಷ್ಟರಿಂದ ನನ್ನನ್ನು ರಕ್ಷಿಸು.
ಕ್ರೂರಿಗಳಿಂದ ನನ್ನನ್ನು ಕಾಪಾಡು.
ಅವರು ನನ್ನನ್ನು ಹಿಂದಟ್ಟಿ ನನಗೆ ಕೇಡುಮಾಡಬೇಕೆಂದಿದ್ದಾರೆ.
5 ಆ ಗರ್ವಿಷ್ಠರು ನನಗೆ ಉರುಲನ್ನು ಒಡ್ಡಿದ್ದಾರೆ;
ನನ್ನನ್ನು ಹಿಡಿಯಲು ಬಲೆಯನ್ನು ಹಾಸಿದ್ದಾರೆ;
ನನ್ನ ದಾರಿಯಲ್ಲಿ ಬೋನನ್ನು ಇಟ್ಟಿದ್ದಾರೆ.
6 ಯೆಹೋವನೇ, ನನ್ನ ದೇವರು ನೀನೇ.
ನನ್ನ ಪ್ರಾರ್ಥನೆಗೆ ಕಿವಿಗೊಡು.
7 ಯೆಹೋವನೇ, ನನ್ನ ಬಲಿಷ್ಠನಾದ ಒಡೆಯನು ನೀನೇ.
ನನ್ನ ರಕ್ಷಕನೂ ನೀನೇ, ನನ್ನ ಶಿರಸ್ತ್ರಾಣವೂ ನೀನೇ.
8 ಯೆಹೋವನೇ, ಆ ದುಷ್ಟರ ದುರಾಶೆಯೂ
ದುರಾಲೋಚನೆಯೂ ನೆರವೇರಲು ಬಿಡಬೇಡ.
9 ನನ್ನ ವೈರಿಗಳಿಗೆ ಜಯವಾಗಲು ಬಿಡಬೇಡ.
ಅವರು ಕುಯುಕ್ತಿಗಳನ್ನು ಮಾಡುತ್ತಿದ್ದಾರೆ; ಅವುಗಳನ್ನು ವಿಫಲಗೊಳಿಸು.
10 ಅವರ ತಲೆಗಳ ಮೇಲೆ ಉರಿಯುವ ಕೆಂಡಗಳನ್ನು ಸುರಿದು
ಬೆಂಕಿಯೊಳಗೆ ಎಸೆದುಬಿಡು;
ಎಂದಿಗೂ ಹತ್ತಿ ಬರಲಾಗದ ಗುಂಡಿಯೊಳಗೆ ಅವರನ್ನು ಎಸೆದುಬಿಡು.
11 ಆ ಸುಳ್ಳುಗಾರರನ್ನು ಜೀವಂತವಾಗಿ ಉಳಿಸಬೇಡ.
ಆ ಕೆಡುಕರಿಗೆ ಕೇಡುಗಳಾಗುವಂತೆ ಮಾಡು.
12 ಯೆಹೋವನು ದೀನರಿಗೆ ನ್ಯಾಯವಾದ ತೀರ್ಪನ್ನು ಪಾಲಿಸುತ್ತಾನೆಂದು ನನಗೆ ಗೊತ್ತಿದೆ.
ದೇವರು ಅಸಹಾಯಕರಿಗೆ ಸಹಾಯಮಾಡುವನು.
13 ನೀತಿವಂತರು ನಿನ್ನ ಹೆಸರನ್ನು ಕೊಂಡಾಡುವರು;
ಯಥಾರ್ಥವಂತರು ನಿನ್ನ ಸನ್ನಿಧಿಯಲ್ಲಿ ಜೀವಿಸುವರು.
16 ಸರ್ವಶಕ್ತನಾದ ಯೆಹೋವನು ಹೀಗೆನ್ನುತ್ತಾನೆ:
“ಆ ಪ್ರವಾದಿಗಳು ನಿಮಗೆ ಹೇಳುತ್ತಿರುವ ವಿಷಯಗಳ ಕಡೆಗೆ ಗಮನ ಕೊಡಬೇಡಿರಿ.
ಅವರು ನಿಮ್ಮನ್ನು ಮರುಳುಗೊಳಿಸಲು ಪ್ರಯತ್ನಿಸುತ್ತಿದ್ದಾರೆ.
ಅವರು ದರ್ಶನಗಳ ಬಗ್ಗೆ ಹೇಳುತ್ತಾರೆ.
ಅವರ ದರ್ಶನಗಳು ಅವರ ಮನಸ್ಸಿನಿಂದ ಬಂದವುಗಳೇ ಹೊರತು ನನ್ನಿಂದ ಬಂದವುಗಳಲ್ಲ.
17 ಕೆಲವು ಜನರು ಯೆಹೋವನ ನಿಜವಾದ ಸಂದೇಶಗಳನ್ನು ದ್ವೇಷಿಸುತ್ತಾರೆ.
ಆದ್ದರಿಂದ ಆ ಪ್ರವಾದಿಗಳು ಆ ಜನರಿಗೆ ಬೇರೆಯದನ್ನೇ ಹೇಳುತ್ತಾರೆ.
ಅವರು ‘ನಿಮಗೆ ಶುಭವಾಗುವುದು’ ಎನ್ನುತ್ತಾರೆ.
ಕೆಲವು ಜನರು ಬಹಳ ಮೊಂಡರಾಗಿದ್ದಾರೆ.
ಅವರು ತಮ್ಮ ಮನಸ್ಸಿಗೆ ಬಂದುದನ್ನೇ ಮಾಡುತ್ತಾರೆ.
ಅವರಿಗೆ ಈ ಪ್ರವಾದಿಗಳು ‘ನಿಮಗೆ ಯಾವ ಕೇಡೂ ಸಂಭವಿಸುವದಿಲ್ಲ’ ಎಂದು ಹೇಳುತ್ತಾರೆ.
18 ಈ ಪ್ರವಾದಿಗಳಲ್ಲಿ ಒಬ್ಬನಾದರೂ ಪರಲೋಕದ ಸಭೆಯಲ್ಲಿ ನಿಂತಿಲ್ಲ.
ಒಬ್ಬನಾದರೂ ಯೆಹೋವನ ಸಂದೇಶವನ್ನು ಕೇಳಿಲ್ಲ, ಅಥವಾ ನೋಡಿಲ್ಲ.
ಒಬ್ಬನಾದರೂ ಆತನ ಸಂದೇಶವನ್ನು ಸೂಕ್ಷ್ಮವಾಗಿ ಪರಿಶೀಲಿಸಿಲ್ಲ.
19 ಈಗ ಯೆಹೋವನಿಂದ ದಂಡನೆಯು ಬಿರುಗಾಳಿಯಂತೆ ಬರುವುದು.
ಯೆಹೋವನ ಕೋಪವು ತೂಫಾನಿನಂತೆ
ದುಷ್ಟರ ತಲೆಯ ಮೇಲೆ ಆರ್ಭಟಿಸಿ ಬೀಳುವುದು.
20 ಆತನು ಮಾಡಬೇಕೆಂದು ಯೋಜಿಸಿದ್ದನ್ನು ಮಾಡಿ ಮುಗಿಸುವವರೆಗೆ
ಆತನ ಕೋಪವು ಕಡಿಮೆಯಾಗುವುದಿಲ್ಲ.
ಆ ದಿನವಾದ ಮೇಲೆ ನೀವು ಇದನ್ನು
ಸರಿಯಾಗಿ ಅರ್ಥಮಾಡಿಕೊಳ್ಳುವಿರಿ.
21 ನಾನು ಆ ಪ್ರವಾದಿಗಳನ್ನು ಕಳುಹಿಸಲಿಲ್ಲ.
ಆದರೂ ಅವರು ತಮ್ಮ ಸಂದೇಶವನ್ನು ಕೊಡಲು ಆತುರಪಟ್ಟರು.
ನಾನು ಅವರೊಂದಿಗೆ ಮಾತನಾಡಲಿಲ್ಲ
ಆದರೂ ಅವರು ನನ್ನ ಹೆಸರು ಹೇಳಿ ಉಪದೇಶ ಮಾಡಿದರು.
22 ಅವರು ನನ್ನ ಪರಲೋಕದ ಸಭೆಯಲ್ಲಿ ಭಾಗವಹಿಸಿದ್ದ ಪಕ್ಷದಲ್ಲಿ
ಅವರು ನನ್ನ ಸಂದೇಶಗಳನ್ನು ಯೆಹೂದದ ಜನರಿಗೆ ಹೇಳಬಹುದಾಗಿತ್ತು.
ಅವರ ಕೆಟ್ಟತನವನ್ನೂ
ದುಷ್ಟತನವನ್ನೂ ತಡೆಯಬಹುದಾಗಿತ್ತು.”
ಹಿಂಸೆಯ ಕುರಿತು ಯೇಸುವಿನ ಎಚ್ಚರಿಕೆ
(ಮಾರ್ಕ 13:9-13; ಲೂಕ 21:12-17)
16 “ಕೇಳಿರಿ! ತೋಳಗಳ ನಡುವೆ ಕುರಿಗಳನ್ನು ಬಿಟ್ಟಂತೆ ನಾನು ನಿಮ್ಮನ್ನು ಕಳುಹಿಸುತ್ತಿದ್ದೇನೆ. ಆದ್ದರಿಂದ ನೀವು ಹಾವುಗಳಂತೆ ಸೂಕ್ಷ್ಮ ಬುದ್ದಿಯುಳ್ಳವರಾಗಿರಿ, ಪಾರಿವಾಳಗಳಂತೆ ಯಾವ ಹಾನಿಯನ್ನೂ ಮಾಡದಿರಿ. 17 ಜನರ ವಿಷಯದಲ್ಲಿ ಎಚ್ಚರಿಕೆಯಿಂದಿರಿ. ನಿಮ್ಮನ್ನು ಅವರು ಬಂಧಿಸಿ ನ್ಯಾಯಾಲಯಕ್ಕೆ ಕರೆದುಕೊಂಡು ಹೋಗುವರು. ಅವರು ತಮ್ಮ ಸಭಾಮಂದಿರಗಳಲ್ಲಿ ನಿಮ್ಮನ್ನು ಕೊರಡೆಗಳಿಂದ ಹೊಡೆಯುವರು. 18 ನಿಮ್ಮನ್ನು ಅಧಿಕಾರಿಗಳ ಸಮ್ಮುಖಕ್ಕೂ ಅರಸುಗಳ ಸಮ್ಮುಖಕ್ಕೂ ಕರೆದುಕೊಂಡು ಹೋಗುವರು. ನನ್ನ ನಿಮಿತ್ತ ಜನರು ನಿಮಗೆ ಹೀಗೆ ಮಾಡುವರು. ಆದರೆ ನೀವು ಆ ಅರಸುಗಳಿಗೂ ಅಧಿಕಾರಿಗಳಿಗೂ ಯಹೂದ್ಯರಲ್ಲದ ಜನರಿಗೂ ನನ್ನ ವಿಷಯವಾಗಿ ಹೇಳುವಿರಿ. 19 ನಿಮ್ಮನ್ನು ಬಂಧಿಸಿದಾಗ ನೀವು ಏನು ಮಾತಾಡಬೇಕು, ಹೇಗೆ ಮಾತಾಡಬೇಕು ಎಂದು ಚಿಂತಿಸಬೇಡಿ. ನೀವು ಹೇಳಬೇಕಾದುವುಗಳನ್ನು ಆ ಸಮಯದಲ್ಲಿ ನಿಮಗೆ ಅನುಗ್ರಹಿಸಲಾಗುವುದು. 20 ಮಾತಾಡುವವರು ನಿಜವಾಗಿಯೂ ನೀವಲ್ಲ. ನಿಮ್ಮ ತಂದೆಯ ಆತ್ಮನೇ ನಿಮ್ಮ ಮೂಲಕ ಮಾತನಾಡುತ್ತಾನೆ.
21 “ಸಹೋದರರು ಸ್ವಂತ ಸಹೋದರರಿಗೆ ವಿರೋಧವಾಗಿ ತಿರುಗಿಬಿದ್ದು ಅವರನ್ನು ಮರಣದಂಡನೆಗೆ ಒಪ್ಪಿಸುವರು. ತಂದೆಯಂದಿರು ತಮ್ಮ ಸ್ವಂತ ಮಕ್ಕಳಿಗೆ ವಿರೋಧವಾಗಿ ತಿರುಗಿಬಿದ್ದು ಅವರನ್ನು ಮರಣದಂಡನೆಗೆ ಒಪ್ಪಿಸುವರು. 22 ನೀವು ನನ್ನನ್ನು ಹಿಂಬಾಲಿಸುವುದರಿಂದ ಜನರೆಲ್ಲರೂ ನಿಮ್ಮನ್ನು ದ್ವೇಷಿಸುತ್ತಾರೆ. ಆದರೆ ಕಡೆಯವರೆಗೂ ತಾಳಿಕೊಳ್ಳುವವನು ರಕ್ಷಣೆ ಹೊಂದುವನು. 23 ಒಂದು ಊರಿನಲ್ಲಿ ನಿಮ್ಮನ್ನು ಹಿಂಸಿಸಿದರೆ ಮತ್ತೊಂದು ಊರಿಗೆ ಹೋಗಿ. ಮನುಷ್ಯಕುಮಾರನು ಪುನಃ ಬರುವುದಕ್ಕಿಂತ ಮುಂಚೆ ನೀವು ಇಸ್ರೇಲರ ಊರುಗಳಿಗೆಲ್ಲಾ ಹೋಗುವುದನ್ನು ಮುಗಿಸಿರುವುದಿಲ್ಲ ಎಂದು ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ.
24 “ಶಿಷ್ಯನು ಗುರುವಿಗಿಂತ ಉತ್ತಮನಲ್ಲ. ಆಳು ತನ್ನ ದಣಿಗಿಂತ ಉತ್ತಮನಲ್ಲ. 25 ಶಿಷ್ಯನು ತನ್ನ ಗುರುವಿನಂತಾದರೆ ಸಾಕು. ಆಳು ತನ್ನ ದಣಿಯಂತಾದರೆ ಸಾಕು. ಕುಟುಂಬದ ಹಿರಿಯನನ್ನೇ ಬೆಲ್ಜೆಬೂಲ (ದೆವ್ವ) ಎಂದು ಕರೆದರೆ, ಆ ಕುಟುಂಬದ ಇತರರನ್ನು ಮತ್ತಷ್ಟು ಕೆಟ್ಟ ಹೆಸರಿನಿಂದ ಕರೆಯುವುದಿಲ್ಲವೇ?
Kannada Holy Bible: Easy-to-Read Version. All rights reserved. © 1997 Bible League International