Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 16

ರಚನೆಗಾರ: ದಾವೀದ.

16 ದೇವರೇ, ನನ್ನನ್ನು ಕಾಪಾಡು. ಯಾಕೆಂದರೆ ನಾನು ನಿನ್ನನ್ನೇ ಆಶ್ರಯಿಸಿಕೊಂಡಿರುವೆ.
ನಾನು ಯೆಹೋವನಿಗೆ, “ನೀನೇ ನನ್ನ ಒಡೆಯನು.
    ನನ್ನಲ್ಲಿರುವ ಒಳ್ಳೆಯದನ್ನೆಲ್ಲ ದಯಪಾಲಿಸಿದಾತನು ನೀನೇ” ಎಂದು ಹೇಳಿದೆನು.
ಯೆಹೋವನು ಭೂಲೋಕದಲ್ಲಿರುವ ತನ್ನ ಭಕ್ತರಿಗೆ ಅತಿಶಯವಾದವುಗಳನ್ನು ಮಾಡುವನು;
    ಅವರ ಮೇಲೆ ತನಗಿರುವ ನಿಜವಾದ ಪ್ರೀತಿಯನ್ನು ತೋರ್ಪಡಿಸುವನು.

ಆದರೆ ಅನ್ಯದೇವರುಗಳನ್ನು ಆಶ್ರಯಿಸಿಕೊಂಡವರಿಗೆ ಕೇಡುಗಳು ಹೆಚ್ಚಾಗುತ್ತವೆ.
    ಅವರು ಆ ವಿಗ್ರಹಗಳಿಗೆ ಅರ್ಪಿಸುವ ರಕ್ತದ ಕಾಣಿಕೆಗಳಲ್ಲಿ ನಾನು ಪಾಲುಗಾರನಾಗುವುದಿಲ್ಲ,
    ಆ ವಿಗ್ರಹಗಳ ಹೆಸರುಗಳನ್ನೂ ನಾನು ಉಚ್ಚರಿಸುವುದಿಲ್ಲ.
ನನ್ನ ಪಾಲೂ ನನ್ನ ಪಾತ್ರೆಯೂ ಯೆಹೋವನಿಂದಲೇ ಬರುತ್ತವೆ.
    ನನಗೆ ಆಧಾರವಾಗಿದ್ದು ನನ್ನ ಪಾಲನ್ನು ದಯಪಾಲಿಸುವಾತನು ನೀನೇ.
ನನ್ನ ಪಾಲು[a] ರಮಣೀಯವಾಗಿದೆ.
    ನನ್ನ ಸ್ವಾಸ್ತ್ಯವು[b] ಬಹು ಸುಂದರವಾಗಿದೆ.
ನನ್ನ ಆಲೋಚನಾಕರ್ತನಾದ ಯೆಹೋವನನ್ನು ಕೊಂಡಾಡುವೆನು;
    ರಾತ್ರಿಯಲ್ಲಿಯೂ, ಆತನು ತನ್ನ ಆಲೋಚನೆಗಳನ್ನು ನನ್ನ ಅಂತರಾತ್ಮದಲ್ಲಿ ಬೇರೂರಿಸುವನು.

ನಾನು ಯೆಹೋವನನ್ನು ಯಾವಾಗಲೂ ನನ್ನ ಎದುರಿನಲ್ಲೇ ಇಟ್ಟುಕೊಂಡಿದ್ದೇನೆ;
    ಆತನು ನನ್ನ ಬಲಗಡೆಯಲ್ಲಿರುವುದರಿಂದ ನಾನೆಂದಿಗೂ ಕದಲುವುದಿಲ್ಲ.
ಆದ್ದರಿಂದ ನನ್ನ ಹೃದಯವೂ ಆತ್ಮವೂ ಉಲ್ಲಾಸಪಡುತ್ತವೆ.
    ನನ್ನ ದೇಹವೂ ಸುರಕ್ಷಿತವಾಗಿರುವುದು.
10 ಯಾಕೆಂದರೆ, ನೀನು ನನ್ನ ಆತ್ಮವನ್ನು ಪಾತಾಳದಲ್ಲಿ ಬಿಡುವುದಿಲ್ಲ.
    ನಿನ್ನ ಪವಿತ್ರನನ್ನು ಸಮಾಧಿಯಲ್ಲಿ ಕೊಳೆಯಲು ಬಿಡುವುದಿಲ್ಲ.
11 ನೀನು ನನಗೆ ಜೀವಮಾರ್ಗವನ್ನು ಉಪದೇಶಿಸುವೆ.
    ನಿನ್ನ ಸನ್ನಿಧಿಯಲ್ಲಿದ್ದರೆ ಪರಿಪೂರ್ಣ ಸಂತೋಷವಿರುವುದು;
    ನಿನ್ನ ಬಲಗಡೆಯಲ್ಲಿದ್ದರೆ ಶಾಶ್ವತವಾದ ಆನಂದವಿರುವುದು.

ಧರ್ಮೋಪದೇಶಕಾಂಡ 32:15-27

15 “ಆದರೆ ಯೆಶುರೂನು ಕೊಬ್ಬಿದನು; ಕೊಬ್ಬಿದ ಹೋರಿಯಂತೆ ಒದ್ದನು;
    ಅವನು ಚೆನ್ನಾಗಿ ತಿಂದು ಕೊಬ್ಬಿ ಊದಿಕೊಂಡನು;
ತನ್ನ ನಿರ್ಮಾಣಿಕನಾದ ಯೆಹೋವನನ್ನು ತೊರೆದನು;
    ತನ್ನನ್ನು ಸಂರಕ್ಷಿಸಿದ ಬಂಡೆಯಿಂದ ಓಡಿಹೋದನು;
16 ದೇವಜನರು ಇತರ ದೇವರುಗಳನ್ನು ಪೂಜಿಸಿ ಯೆಹೋವನನ್ನು ರೇಗಿಸಿದರು.
    ಅವರು ಅಸಹ್ಯ ವಿಗ್ರಹಗಳನ್ನು ಪೂಜಿಸಿ ಯೆಹೋವನನ್ನು ಸಿಟ್ಟಿಗೆಬ್ಬಿಸಿದರು.
17 ಅವರು ದೆವ್ವಗಳಿಗೆ ಯಜ್ಞವನ್ನರ್ಪಿಸಿದರು. ಅವುಗಳು ನಿಜ ದೇವರುಗಳಲ್ಲ.
    ಅವುಗಳು ಮಾಡಲ್ಪಟ್ಟ ದೇವರುಗಳೆಂದು ಅವರಿಗೆ ಗೊತ್ತಿರಲಿಲ್ಲ.
    ಅವುಗಳು ಕೈಯಿಂದ ಮಾಡಲ್ಪಟ್ಟ ದೇವರುಗಳು.
    ಅವರ ಪೂರ್ವಿಕರಿಗೆ ತಿಳಿಯದಂಥ ದೇವರುಗಳು.
18 ನೀವು ನಿಮ್ಮನ್ನು ನಿರ್ಮಿಸಿದ ಬಂಡೆಯಂತಿರುವ ದೇವರನ್ನು ತೊರೆದುಬಿಟ್ಟಿರಿ;
    ನಿಮಗೆ ಪ್ರಾಣವನ್ನು ಕೊಟ್ಟ ದೇವರನ್ನು ನೀವು ಮರೆತುಬಿಟ್ಟಿರಿ.

19 “ಯೆಹೋವನು ಇದನ್ನು ನೋಡಿ ಕೋಪಗೊಂಡನು.
    ಆತನ ಮಕ್ಕಳೇ ಆತನನ್ನು ಸಿಟ್ಟಿಗೆಬ್ಬಿಸಿದರು.
20 ಆಗ ಯೆಹೋವನು, ‘ನಾನು ಅವರಿಗೆ ವಿಮುಖನಾಗುವೆನು.
    ಆಗ ಅವರಿಗೇನು ಸಂಭವಿಸುವುದೋ ನೋಡೋಣ.
ಅವರು ಎದುರುಬೀಳುವ ಜನರಾಗಿದ್ದಾರೆ.
    ಅವರು ತಮ್ಮ ಪಾಠಗಳನ್ನು ಕಲಿಯದ ಮಕ್ಕಳಂತಿದ್ದಾರೆ.
21 ಅವರು ದೆವ್ವಗಳನ್ನು ದೇವರನ್ನಾಗಿ ಮಾಡಿ ನನ್ನಲ್ಲಿ ಅಸೂಯೆಯನ್ನು ಉಂಟುಮಾಡಿದರು.
ಆ ವಿಗ್ರಹಗಳು ನಿಜವಾದ ದೇವರುಗಳಲ್ಲ!
    ಅವರು ಪ್ರಯೋಜನವಿಲ್ಲದ ವಿಗ್ರಹಗಳನ್ನು ಮಾಡಿ ನನ್ನನ್ನು ಸಿಟ್ಟಿಗೆಬ್ಬಿಸಿದರು.
ಆದ್ದರಿಂದ ನಿಜವಾದ ಜನಾಂಗವಲ್ಲದವರಿಂದ ನಾನು ಅವರಲ್ಲಿ ಈರ್ಷೆಯನ್ನು ಉಂಟು ಮಾಡುವೆನು.
    ಮೂರ್ಖ ಜನಾಂಗದಿಂದ ಅವರನ್ನು ಸಿಟ್ಟಿಗೆಬ್ಬಿಸುವೆನು.
22 ನನ್ನ ಕೋಪವು ಬೆಂಕಿಯಂತೆ ದಹಿಸುವುದು;
    ಪಾತಾಳವನ್ನು ಸುಡುವುದು.
ಭೂಮಿಯನ್ನೂ ಅದರಲ್ಲಿರುವ ಸಕಲ ವಸ್ತುಗಳನ್ನೂ ಸುಡುವುದು.
    ಪರ್ವತಗಳ ಬುಡದ ಕೆಳಗೂ ದಹಿಸುವುದು.

23 “‘ನಾನು ಇಸ್ರೇಲಿಗೆ ಸಂಕಟವನ್ನು ಬರಮಾಡುವೆನು.
    ನನ್ನ ಬಾಣಗಳನ್ನೆಲ್ಲಾ ಅದಕ್ಕೆ ಬಿಡುವೆನು.
24 ಹಸಿವೆಯಿಂದ ಅವರು ಕ್ಷೀಣವಾಗುವರು;
    ಭಯಂಕರ ವ್ಯಾಧಿಯಿಂದ ಅವರು ನಾಶವಾಗುವರು.
ಕಾಡುಪ್ರಾಣಿಗಳನ್ನು ಅವರ ಮಧ್ಯೆ ಕಳುಹಿಸುವೆನು.
    ವಿಷಸರ್ಪಗಳೂ ಹಲ್ಲಿಗಳೂ ಅವರನ್ನು ಕಚ್ಚುವವು.
25 ರಸ್ತೆಗಳಲ್ಲಿ ಸಿಪಾಯಿಗಳು ಅವರನ್ನು ಕೊಲ್ಲುವರು.
    ಅವರ ಮನೆಗಳಲ್ಲಿ ಭಯಂಕರ ಸಂಗತಿಗಳು ನಡೆಯುವವು.
ಯುವಕಯುವತಿಯರನ್ನೂ ಸಿಪಾಯಿಗಳು ಕೊಲ್ಲುವರು,
    ಮುದುಕರನ್ನೂ ಎಳೆಗೂಸುಗಳನ್ನೂ ಸಂಹರಿಸುವರು.

26 “‘ನಾನು ಇಸ್ರೇಲರನ್ನು ಸಂಪೂರ್ಣವಾಗಿ ನಿರ್ಮೂಲ ಮಾಡಲು ಯೋಚಿಸಿದೆನು.
    ಲೋಕದಲ್ಲಿ ಅವರ ಹೆಸರು ಉಳಿಯದಂತೆ ಮಾಡುವೆನು ಎಂದು ನೆನಸಿದೆನು.
27 ಆದರೆ ಅವರ ವೈರಿಗಳು ಏನು ಹೇಳುತ್ತಾರೆಂಬುದು ನನಗೆ ಗೊತ್ತಿದೆ.
    ವೈರಿಯು ಅರ್ಥಮಾಡಿಕೊಳ್ಳುವುದಿಲ್ಲ,
ಅವರಿಗೆ ವಿಷಯವು ತಿಳಿಯದು. ಅವರು ಜಂಬದಿಂದ ಹೀಗೆ ಹೇಳುವರು,
    “ಯೆಹೋವನು ಇಸ್ರೇಲನ್ನು ನಾಶಮಾಡಲಿಲ್ಲ.
    ನಾವು ನಮ್ಮ ಬಲದಿಂದಲೇ ಅವರನ್ನು ಬಡಿದುಹಾಕಿದೆವು.”’

ಧರ್ಮೋಪದೇಶಕಾಂಡ 32:39-43

39 “‘ನಾನೇ ದೇವರು, ನನ್ನ ಹೊರತು ಬೇರೆ ದೇವರಿಲ್ಲ.
    ಜನರಿಗೆ ಮರಣವನ್ನೂ ಜೀವವನ್ನೂ ಕೊಡುವವನು ನಾನೇ.
ಅವರಿಗೆ ಗಾಯ ಮಾಡುವವನೂ ನಾನೇ,
    ಅದನ್ನು ಗುಣಮಾಡುವವನೂ ನಾನೇ.
ನನ್ನ ಶಕ್ತಿಯ ಹಿಡಿತದಿಂದ ಇನ್ನೊಬ್ಬನನ್ನು
    ರಕ್ಷಿಸಲು ಯಾರಿಗೂ ಸಾಧ್ಯವಿಲ್ಲ.
40 ನನ್ನ ಕೈಗಳನ್ನು ಆಕಾಶದ ಕಡೆಗೆತ್ತಿ ವಚನ ಕೊಡುತ್ತೇನೆ.
    ನಾನು ನಿತ್ಯಕಾಲಕ್ಕೆ ಜೀವಿಸುವುದು ಎಷ್ಟು ಸತ್ಯವೋ ಅದೇರೀತಿ ಇವೆಲ್ಲವೂ ನೆರವೇರುವವು.
41 ಥಳಥಳಿಸುವ ನನ್ನ ಖಡ್ಗವನ್ನು ನಾನು ಹದಮಾಡುವೆನು.
    ನನ್ನ ವೈರಿಗಳನ್ನು ಶಿಕ್ಷಿಸಲು ನಾನದನ್ನು ಉಪಯೋಗಿಸುವೆನು.
ನಾನು ಅವರಿಗೆ ಯೋಗ್ಯವಾದ ದಂಡನೆಯನ್ನು ಕೊಡುವೆನು
    ಎಂದು ನಾನು ಆಣೆಯಿಟ್ಟು ಹೇಳುತ್ತೇನೆ.
42 ನನ್ನ ವೈರಿಗಳು ಕೊಲ್ಲಲ್ಪಡುವರು ಮತ್ತು ಸೆರೆಯಾಳುಗಳಾಗಿ ಒಯ್ಯಲ್ಪಡುವರು.
    ನನ್ನ ಬಾಣಗಳು ಅವರ ರಕ್ತದಿಂದ ಮುಚ್ಚಲ್ಪಟ್ಟಿವೆ.
    ನನ್ನ ಖಡ್ಗವು ಅವರ ಸೈನಿಕರ ತಲೆಯನ್ನು ಕತ್ತರಿಸುವುದು.’”

43 “ಭೂಲೋಕವೆಲ್ಲಾ ದೇವಜನರಿಗಾಗಿ ಸಂತೋಷಿಸುವದು;
    ಯಾಕೆಂದರೆ ಆತನು ಅವರನ್ನು ಸಾಯಿಸುವನು;
ತನ್ನ ಸೇವಕರನ್ನು ಸಂಹರಿಸುವವರನ್ನು ಶಿಕ್ಷಿಸುವನು; ತನ್ನ ವೈರಿಗಳಿಗೆ ತಕ್ಕ ದಂಡನೆ ಕೊಡುವನು.
    ತನ್ನ ದೇಶವನ್ನೂ ತನ್ನ ಜನರನ್ನೂ ಶುದ್ಧಿ ಮಾಡುವನು.”

ಲೂಕ 9:21-27

21 ಈ ವಿಷಯವನ್ನು ಯಾರಿಗೂ ಹೇಳಬಾರದೆಂದು ಯೇಸು ಅವರನ್ನು ಎಚ್ಚರಿಸಿದನು.

ಯೇಸು ತನ್ನ ಮರಣದ ಕುರಿತು ಮುಂತಿಳಿಸಿದ್ದು

(ಮತ್ತಾಯ 16:21-28; ಮಾರ್ಕ 8:31–9:1)

22 ಬಳಿಕ ಯೇಸು, “ಮನುಷ್ಯಕುಮಾರನು ಅನೇಕ ಸಂಕಟಗಳನ್ನು ಅನುಭವಿಸಬೇಕಾಗಿದೆ. ಆತನು ಹಿರಿಯ ಯೆಹೂದ್ಯನಾಯಕರಿಂದಲೂ ಮಹಾಯಾಜಕರಿಂದಲೂ ಧರ್ಮೋಪದೇಶಕರಿಂದಲೂ ತಿರಸ್ಕೃತನಾಗಿ ಕೊಲ್ಲಲ್ಪಟ್ಟು ಮೂರನೆಯ ದಿನದಲ್ಲಿ ಜೀವಂತವಾಗಿ ಎದ್ದುಬರುವನು” ಎಂದು ಹೇಳಿದನು.

23 ಯೇಸು ತನ್ನ ಮಾತನ್ನು ಮುಂದುವರಿಸಿ ಅವರೆಲ್ಲರಿಗೆ ಹೇಳಿದ್ದೇನೆಂದರೆ: “ನನ್ನ ಹಿಂಬಾಲಕನಾಗಬಯಸುವವನು ತನ್ನನ್ನು ನಿರಾಕರಿಸಿ, ಪ್ರತಿದಿನ ತನ್ನ ಶಿಲುಬೆಯನ್ನು (ತನಗಾಗುವ ಹಿಂಸೆಯನ್ನು) ಹೊತ್ತುಕೊಂಡು ನನ್ನನ್ನು ಹಿಂಬಾಲಿಸಲಿ. 24 ತನ್ನ ಪ್ರಾಣವನ್ನು ಉಳಿಸಿಕೊಳ್ಳಬೇಕೆಂದಿರುವವನು ಅದನ್ನು ಕಳೆದುಕೊಳ್ಳುವನು. ನನಗೋಸ್ಕರ ತನ್ನ ಜೀವವನ್ನು ಕೊಡುವವನು ಅದನ್ನು ಉಳಿಸಿಕೊಳ್ಳುವನು. 25 ಒಬ್ಬನು ಇಡೀ ಲೋಕವನ್ನೇ ಸಂಪಾದಿಸಿಕೊಂಡು, ತನ್ನನ್ನೇ ಕೆಡಿಸಿಕೊಂಡರೆ ಅಥವಾ ನಷ್ಟಪಡಿಸಿಕೊಂಡರೆ ಅದರಿಂದ ಅವನಿಗೆ ಲಾಭವೇನು? 26 ಯಾವನಾದರೂ ನನಗೂ ನನ್ನ ಉಪದೇಶಕ್ಕೂ ನಾಚಿಕೊಳ್ಳುವುದಾದರೆ, ನಾನು ನನ್ನ ಮಹಿಮೆಯೊಡನೆ, ತಂದೆಯ ಮಹಿಮೆಯೊಡನೆ ಮತ್ತು ಪರಿಶುದ್ಧ ದೂತರ ಮಹಿಮೆಯೊಡನೆ ಬಂದಾಗ ಅವನ ವಿಷಯದಲ್ಲಿ ನಾಚಿಕೊಳ್ಳುವೆನು. 27 ನಾನು ಸತ್ಯವನ್ನು ಹೇಳುತ್ತೇನೆ. ಇಲ್ಲಿ ನಿಂತಿರುವ ಕೆಲವರು ತಾವು ಸಾಯುವುದಕ್ಕಿಂತ ಮೊದಲು ದೇವರ ರಾಜ್ಯವನ್ನು ನೋಡುವರು” ಎಂದು ಹೇಳಿದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International