Revised Common Lectionary (Complementary)
ಜನರು ದೇವರ ಬಗ್ಗೆ ಜ್ಞಾನ ಹೊಂದುವರು
65 ಯೆಹೋವನು ಹೇಳುವುದೇನೆಂದರೆ, “ನನ್ನ ಆಲೋಚನೆಯನ್ನು ಕೇಳಲು ಬಾರದೆ ಹೋದ ಜನರಿಗೂ ನಾನು ಸಹಾಯ ಮಾಡಿದೆನು. ನನ್ನನ್ನು ಹುಡುಕದವರಿಗೂ ಸಿಕ್ಕಿದೆನು. ನನ್ನ ಹೆಸರನ್ನು ಧರಿಸದ ಜನಾಂಗದೊಡನೆ ನಾನು ಮಾತನಾಡಿದೆನು. ಅವರಿಗೆ, ‘ನಾನಿಲ್ಲಿದ್ದೇನೆ! ನಾನಿಲ್ಲಿದ್ದೇನೆ!’ ಅಂದೆನು.
2 “ನನಗೆ ವಿರುದ್ಧವಾಗಿ ಎದ್ದವರನ್ನು ಸ್ವೀಕರಿಸಲು ನಾನು ದಿನವೆಲ್ಲಾ ಸಿದ್ಧನಾಗಿ ನಿಂತೆನು. ಅವರು ನನ್ನ ಬಳಿಗೆ ಬರುತ್ತಾರೆಂದು ಕಾಯುತ್ತಾ ನಿಂತುಕೊಂಡೆನು. ಆದರೆ ಅವರು ಕೆಟ್ಟಜೀವಿತದಲ್ಲಿಯೇ ಮುಂದುವರಿದರು. ಅವರು ತಮಗೆ ಇಷ್ಟಬಂದ ಹಾಗೆ ನಡೆದರು. 3 ಅವರು ನನ್ನ ಮುಂದೆ ಯಾವಾಗಲೂ ಇದ್ದು ನನ್ನನ್ನು ರೋಷಗೊಳಿಸಿದರು. ಅವರು ತಮ್ಮ ವಿಶೇಷವಾದ ತೋಟಗಳಲ್ಲಿ ಧೂಪಹಾಕಿ ಬಲಿಯರ್ಪಿಸಿದರು. 4 ಅವರು ಸತ್ತವರಿಂದ ಸಂದೇಶ ಪಡೆಯಲು ಸಮಾಧಿಗಳ ನಡುವೆ ಕುಳಿತುಕೊಳ್ಳುವರು. ಅವರು ಹಂದಿ ಮಾಂಸವನ್ನು ತಿನ್ನುತ್ತಾರೆ. ಅವರು ತೆಗೆದುಕೊಳ್ಳುವ ಭಕ್ಷ್ಯಗಳು ಕೊಳೆತ ಮಾಂಸದಿಂದ ಮಲಿನವಾಗಿವೆ. 5 ಆದರೆ ಅವರು ಇತರರಿಗೆ, ‘ನನ್ನ ಬಳಿಗೆ ಬರಬೇಡ. ನೀನು ನಿನ್ನನ್ನು ಶುದ್ಧಮಾಡುವ ತನಕ ನನ್ನನ್ನು ಮುಟ್ಟದಿರು’ ಎಂದು ಹೇಳುವರು. ಅವರು ನನ್ನ ಕಣ್ಣಿನಲ್ಲಿ ಹೊಗೆಯಂತಿದ್ದಾರೆ; ಅವರ ಬೆಂಕಿಯು ಸದಾ ಉರಿಯುತ್ತಿರುವದು.”
ಇಸ್ರೇಲ್ ಶಿಕ್ಷಿಸಲ್ಪಡಲೇಬೇಕು
6 “ಇಗೋ! ನೀವು ಪಾವತಿ ಮಾಡಬೇಕಾದ ರಸೀದಿ ಇಲ್ಲಿದೆ. ನೀವು ಅಪರಾಧಿಗಳೆಂದು ಈ ರಸೀದಿ ತೋರಿಸುತ್ತದೆ. ಈ ಚೀಟಿಯಲ್ಲಿ ಬರೆದ ಮೊತ್ತವನ್ನು ಕೊಡದೆ ಸುಮ್ಮನಿರಲಾರೆ. ನಿಮ್ಮನ್ನು ಶಿಕ್ಷಿಸುವದರ ಮೂಲಕ ಈ ಮೊತ್ತವನ್ನು ಕೊಟ್ಟು ಬಿಡುವೆನು. 7 ನಿಮ್ಮ ಪಾಪಗಳೂ ನಿಮ್ಮ ಪಿತೃಗಳ ಪಾಪಗಳೂ ಒಂದೇಯಾಗಿವೆ. ಇದು ಯೆಹೋವನ ನುಡಿ. ನಿಮ್ಮ ಪೂರ್ವಿಕರು ಬೆಟ್ಟಗಳ ಮೇಲೆ ಧೂಪಸುಟ್ಟು ಪಾಪಮಾಡಿದರು. ಅವರು ಆ ಬೆಟ್ಟಗಳ ಮೇಲೆ ನನ್ನನ್ನು ಅವಮಾನಪಡಿಸಿದರು. ಆದರೆ ನಾನು ಅವರನ್ನು ಮೊದಲು ಶಿಕ್ಷಿಸಿದೆನು. ಅವರಿಗೆ ತಕ್ಕ ಶಿಕ್ಷೆಯನ್ನು ಕೊಟ್ಟೆನು.”
8 ಯೆಹೋವನು ಹೇಳುವುದೇನೆಂದರೆ: “ದ್ರಾಕ್ಷಿಹಣ್ಣಿನಲ್ಲಿ ಹೊಸ ರಸವು ಇರುವಾಗ ಜನರು ಅದನ್ನು ಹಿಂಡಿ ರಸವನ್ನು ತೆಗೆಯುವರು. ಯಾಕೆಂದರೆ ಆ ಹಣ್ಣನ್ನು ಮತ್ತೆ ಉಪಯೋಗಿಸಬೇಕೆಂಬ ಉದ್ದೇಶದಿಂದ ಅದನ್ನು ಸಂಪೂರ್ಣವಾಗಿ ಹಾಳು ಮಾಡುವದಿಲ್ಲ. ಅದೇ ರೀತಿ ನಾನು ನನ್ನ ಸೇವಕರಿಗೂ ಮಾಡುವೆನು. ಅವರನ್ನು ನಾನು ಸಂಪೂರ್ಣವಾಗಿ ನಾಶಮಾಡುವದಿಲ್ಲ. 9 ನಾನು ಯಾಕೋಬನ ಜನರಲ್ಲಿ ಕೆಲವರನ್ನು ಉಳಿಸುವೆನು. ಯೆಹೂದದ ಕೆಲವರು ನನ್ನ ಪರ್ವತವನ್ನು ಪಡೆದುಕೊಳ್ಳುವರು. ನನ್ನ ಸೇವಕರು ಅಲ್ಲಿ ವಾಸಿಸುವರು. ಅಲ್ಲಿ ವಾಸಿಸಬೇಕಾದವರನ್ನು ನಾನೇ ಆರಿಸಿಕೊಳ್ಳುವೆನು.
19 ಯೆಹೋವನೇ, ನನ್ನನ್ನು ತೊರೆಯಬೇಡ!
ನೀನೇ ನನ್ನ ಬಲ! ಬೇಗನೆ ನನಗೆ ಸಹಾಯಮಾಡು!
20 ಖಡ್ಗಕ್ಕೆ ಸಿಕ್ಕದಂತೆ ತನ್ನ ಜೀವವನ್ನು ರಕ್ಷಿಸು.
ನನ್ನ ಅಮೂಲ್ಯವಾದ ಜೀವವು ನಾಯಿಗಳ ಪಾಲಾಗದಂತೆ ರಕ್ಷಿಸು.
21 ನನ್ನನ್ನು ಸಿಂಹದ ಬಾಯಿಂದ ಬಿಡಿಸು;
ಹೋರಿಯ ಕೊಂಬುಗಳಿಂದ ನನ್ನನ್ನು ಸಂರಕ್ಷಿಸು.
22 ನಿನ್ನ ನಾಮದ ಕುರಿತು ನನ್ನ ಸಹೋದರರಿಗೆ ಹೇಳುವೆನು;
ಮಹಾಸಭೆಯಲ್ಲಿ ನಿನ್ನನ್ನು ಸುತ್ತಿಸುವೆನು.
23 ಯೆಹೋವನನ್ನು ಆರಾಧಿಸುವವರೇ, ಆತನಿಗೆ ಸ್ತೋತ್ರಮಾಡಿರಿ.
ಯಾಕೋಬನ ಸಂತತಿಗಳವರೇ, ಯೆಹೋವನಿಗೆ ಘನಮಾನವನ್ನು ಸಲ್ಲಿಸಿರಿ!
ಇಸ್ರೇಲರೇ, ಆತನಲ್ಲಿ ಭಯಭಕ್ತಿಯಿಂದಿರಿ!
24 ಯಾಕೆಂದರೆ ಇಕ್ಕಟ್ಟಿನಲ್ಲಿರುವ ಬಡವರಿಗೆ ಆತನು ಸಹಾಯಮಾಡುತ್ತಾನೆ; ಅವರ ವಿಷಯದಲ್ಲಿ ಆತನು ನಾಚಿಕೊಳ್ಳುವುದಿಲ್ಲ;
ಆತನು ಅವರನ್ನು ದ್ವೇಷಿಸುವುದಿಲ್ಲ.
ಅವರು ಆತನನ್ನು ಕೂಗಿಕೊಳ್ಳುವಾಗ
ಆತನು ಅವರಿಗೆ ಮರೆಯಾಗುವುದಿಲ್ಲ.
25 ಯೆಹೋವನೇ, ನಿನ್ನ ಕಾರ್ಯಗಳಿಗಾಗಿ ಮಹಾಸಭೆಯಲ್ಲಿ ನಿನ್ನನ್ನು ಕೊಂಡಾಡುವೆನು;
ನನ್ನ ಹರಕೆಗಳನ್ನು ನಿನ್ನ ಭಕ್ತರ ಮುಂದೆ ಸಲ್ಲಿಸುವೆನು.
26 ಬಡವರು ತಿಂದು ತೃಪ್ತರಾಗುವರು.
ಯೆಹೋವನಿಗಾಗಿ ಹುಡುಕುತ್ತಾ ಬಂದವರೇ, ಆತನಿಗೆ ಸ್ತೋತ್ರಮಾಡಿರಿ!
ನಿಮ್ಮ ಹೃದಯವು ಯಾವಾಗಲೂ ಸಂತೋಷವಾಗಿರಲಿ.[a]
27 ದೂರದೇಶಗಳಲ್ಲಿರುವ ಜನರೆಲ್ಲರೂ ಯೆಹೋವನನ್ನು ಜ್ಞಾಪಿಸಿಕೊಂಡು ಆತನ ಬಳಿಗೆ ಹಿಂತಿರುಗಲಿ.
ವಿದೇಶಗಳಿಲ್ಲಿರುವ ಜನರೆಲ್ಲರೂ ಆತನನ್ನು ಆರಾಧಿಸಲಿ.
28 ಯಾಕೆಂದರೆ ಯೆಹೋವನೇ ರಾಜನು!
ಆತನು ಜನಾಂಗಗಳನ್ನೆಲ್ಲಾ ಆಳುವನು.
23 ಈ ನಂಬಿಕೆಯು ಬರುವುದಕ್ಕಿಂತ ಮೊದಲು ನಾವು ಧರ್ಮಶಾಸ್ತ್ರಕ್ಕೆ ಸೆರೆಯಾಳುಗಳಾಗಿದ್ದೆವು. ಬರಲಿದ್ದ ನಂಬಿಕೆಯ ಮಾರ್ಗವನ್ನು ದೇವರು ನಮಗೆ ತೋರಿಸಿಕೊಡುವ ತನಕ ನಮಗೆ ಸ್ವತಂತ್ರವಿರಲಿಲ್ಲ. 24 ಆದ್ದರಿಂದ ಕ್ರಿಸ್ತನು ಬರುವ ತನಕ ಧರ್ಮಶಾಸ್ತ್ರವು ನಮಗೆ ಯಜಮಾನನಾಗಿತ್ತು. ಕ್ರಿಸ್ತನು ಬಂದ ತರುವಾಯ ನಾವು ನಂಬಿಕೆಯ ಮೂಲಕ ನೀತಿವಂತರಾಗಿರಲು ಸಾಧ್ಯವಾಯಿತು. 25 ಈಗ ನಂಬಿಕೆಯ ಮಾರ್ಗವು ಬಂದಿದೆ. ಆದ್ದರಿಂದ ಈಗ ನಾವು ಧರ್ಮಶಾಸ್ತ್ರದ ಅಧೀನದಲ್ಲಿ ಜೀವಿಸುವುದಿಲ್ಲ.
26-27 ನೀವೆಲ್ಲರೂ ಕ್ರಿಸ್ತನಲ್ಲಿ ದೀಕ್ಷಾಸ್ನಾನ ಮಾಡಿಸಿಕೊಂಡಿದ್ದರಿಂದ ಕ್ರಿಸ್ತನನ್ನೇ ಧರಿಸಿಕೊಂಡಿರಿ. ಕ್ರಿಸ್ತ ಯೇಸುವಿನಲ್ಲಿ ನಂಬಿಕೆಯಿಡುವುದರ ಮೂಲಕ ನೀವೆಲ್ಲರೂ ದೇವರ ಮಕ್ಕಳಾಗಿದ್ದೀರೆಂಬುದನ್ನು ಇದು ತೋರಿಸುತ್ತದೆ. 28 ಈಗ ಕ್ರಿಸ್ತನಲ್ಲಿ ಯೆಹೂದ್ಯನು, ಗ್ರೀಕನು ಎಂಬ ವ್ಯತ್ಯಾಸವಿಲ್ಲ; ಸ್ವತಂತ್ರರು ಮತ್ತು ಗುಲಾಮರು ಎಂಬ ವ್ಯತ್ಯಾಸವಿಲ್ಲ; ಸ್ತ್ರೀಯರು ಮತ್ತು ಪುರುಷರು ಎಂಬ ವ್ಯತ್ಯಾಸವಿಲ್ಲ. ನೀವೆಲ್ಲರೂ ಕ್ರಿಸ್ತ ಯೇಸುವಿನಲ್ಲಿ ಒಂದೇ ಆಗಿದ್ದೀರಿ. 29 ನೀವು ಕ್ರಿಸ್ತನವರಾಗಿದ್ದೀರಿ. ಆದ್ದರಿಂದ ನೀವು ಅಬ್ರಹಾಮನ ಸಂತಾನದವರು. ದೇವರು ಅವನಿಗೆ ಮಾಡಿದ ವಾಗ್ದಾನದ ಪ್ರಕಾರ ನೀವೆಲ್ಲರೂ ದೇವರ ಆಶೀರ್ವಾದಗಳನ್ನು ಪಡೆದುಕೊಳ್ಳುವಿರಿ.
ದೆವ್ವಗಳಿಂದ ಪೀಡಿತನಾಗಿದ್ದ ಮನುಷ್ಯ
(ಮತ್ತಾಯ 8:28-34; ಮಾರ್ಕ 5:1-20)
26 ಯೇಸು ಮತ್ತು ಆತನ ಶಿಷ್ಯರು ಗಲಿಲಾಯದಿಂದ ಸರೋವರವನ್ನು ದಾಟಿ, ಗೆರೆಸೇನರ ನಾಡಿಗೆ ಪ್ರಯಾಣ ಮಾಡಿದರು. 27 ಯೇಸು ದೋಣಿಯಿಂದ ಇಳಿದಾಗ, ಆ ಪಟ್ಟಣದ ಮನುಷ್ಯನೊಬ್ಬನು ಯೇಸುವಿನ ಬಳಿಗೆ ಬಂದನು. ಈ ಮನುಷ್ಯನಿಗೆ ದೆವ್ವ ಹಿಡಿದಿತ್ತು. ಬಹಳ ಕಾಲದಿಂದ ಅವನು ಬಟ್ಟೆಯನ್ನೇ ಹಾಕಿಕೊಂಡಿರಲಿಲ್ಲ. ಅವನು ಸಮಾಧಿಯ ಗವಿಗಳಲ್ಲಿ ವಾಸಿಸುತ್ತಿದ್ದನು.
28-29 ದೆವ್ವವು ಅವನನ್ನು ಪದೇಪದೇ ವಶಪಡಿಸಿಕೊಳ್ಳುತ್ತಿತ್ತು. ಆ ಮನುಷ್ಯನನ್ನು ಸೆರೆಮನೆಗೆ ಹಾಕಿ ಕೈಕಾಲುಗಳನ್ನು ಸರಪಣಿಗಳಿಂದ ಕಟ್ಟಿದರೂ ಅವನು ಅವುಗಳನ್ನು ಕಿತ್ತೊಗೆದುಬಿಡುತ್ತಿದ್ದನು. ಅವನೊಳಗಿದ್ದ ದೆವ್ವವು ಅವನನ್ನು ಜನರಿಲ್ಲದ ಸ್ಥಳಗಳಿಗೆ ಬಲವಂತವಾಗಿ ಕೊಂಡೊಯ್ಯುತ್ತಿತ್ತು. ಯೇಸು ಆ ದೆವ್ವಕ್ಕೆ, “ಅವನನ್ನು ಬಿಟ್ಟು ಹೋಗು” ಎಂದು ಆಜ್ಞಾಪಿಸಿದನು. ಆ ಮನುಷ್ಯನು ಯೇಸುವಿನ ಮುಂದೆ ಅಡ್ಡಬಿದ್ದು ಗಟ್ಟಿಯಾದ ಸ್ವರದಿಂದ, “ಯೇಸುವೇ, ಮಹೋನ್ನತನಾದ ದೇವರ ಮಗನೇ, ನನ್ನಿಂದ ನಿನಗೇನಾಗಬೇಕಾಗಿದೆ? ದಯಮಾಡಿ ನನ್ನನ್ನು ದಂಡಿಸಬೇಡ!” ಎಂದು ಕೂಗಿದನು.
30 “ನಿನ್ನ ಹೆಸರೇನು?” ಎಂದು ಯೇಸು ಕೇಳಿದನು.
“ದಂಡು” ಎಂದು ಅವನು ಉತ್ತರಿಸಿದನು. (ಏಕೆಂದರೆ ಅವನೊಳಗೆ ಅನೇಕ ದೆವ್ವಗಳು ಸೇರಿಕೊಂಡಿದ್ದವು.) 31 ತಮ್ಮನ್ನು ಪಾತಾಳಕ್ಕೆ ಕಳುಹಿಸಕೂಡದೆಂದು ಆ ದೆವ್ವಗಳು ಯೇಸುವನ್ನು ಬೇಡಿಕೊಂಡವು. 32 ಅಲ್ಲಿದ್ದ ಒಂದು ಗುಡ್ಡದ ಮೇಲೆ ಹಂದಿಗಳ ಒಂದು ದೊಡ್ಡ ಗುಂಪು ಮೇಯುತ್ತಿತ್ತು. ಹಂದಿಗಳೊಳಗೆ ಹೋಗಲು ತಮಗೆ ಅನುಮತಿ ಕೊಡಬೇಕೆಂದು ಆ ದೆವ್ವಗಳು ಯೇಸುವನ್ನು ಬೇಡಿಕೊಂಡವು. ಯೇಸು ಅವುಗಳಿಗೆ ಅನುಮತಿಕೊಟ್ಟನು. 33 ಆಗ ದೆವ್ವಗಳು ಆ ಮನುಷ್ಯನಿಂದ ಹೊರಬಂದು ಹಂದಿಗಳೊಳಗೆ ಸೇರಿಕೊಂಡವು. ಆ ಕೂಡಲೇ ಹಂದಿಗಳ ಗುಂಪು ಗುಡ್ಡದ ಕೆಳಗೆ ಓಡಿಹೋಗಿ ಸರೋವರದಲ್ಲಿ ಬಿದ್ದು ಮುಳುಗಿಹೋದವು.
34 ಹಂದಿಗಳನ್ನು ಕಾಯುತ್ತಿದ್ದವರು ಓಡಿಹೋಗಿ, ನಡೆದ ಈ ಸಂಗತಿಯನ್ನು ಹೊಲಗಳಲ್ಲಿಯೂ ಊರುಗಳಲ್ಲಿಯೂ ಇದ್ದ ಜನರಿಗೆ ತಿಳಿಸಿದರು. 35 ಅದನ್ನು ನೋಡಲು ಜನರೆಲ್ಲರೂ ಯೇಸುವಿದ್ದಲ್ಲಿಗೆ ಬಂದರು. ಆ ಮನುಷ್ಯನು ಯೇಸುವಿನ ಪಾದಗಳ ಬಳಿಯಲ್ಲಿ ಕುಳಿತಿದ್ದುದನ್ನು ಅವರು ನೋಡಿದರು. ಅವನು ಬಟ್ಟೆಗಳನ್ನು ಹಾಕಿಕೊಂಡಿದ್ದನು; ಸ್ವಸ್ಥಬುದ್ಧಿಯುಳ್ಳವನಾಗಿದ್ದನು. ದೆವ್ವಗಳು ಅವನನ್ನು ಬಿಟ್ಟುಹೋಗಿದ್ದವು. ಜನರಿಗೆ ಭಯವಾಯಿತು. 36 ಯೇಸು ಆ ಮನುಷ್ಯನನ್ನು ಗುಣಪಡಿಸಿದ ರೀತಿಯನ್ನು ನೋಡಿದ್ದವರು ಆತನನ್ನು ನೋಡಲು ಬಂದ ಜನರೆಲ್ಲರಿಗೂ ಆ ಘಟನೆಯನ್ನು ವಿವರಿಸಿ ಹೇಳಿದರು. 37 ಜನರು ಯೇಸುವಿಗೆ, “ನೀನು ಇಲ್ಲಿಂದ ಹೊರಟುಹೋಗು” ಎಂದು ಕೇಳಿಕೊಂಡರು. ಏಕೆಂದರೆ ಅವರು ಬಹಳ ಭಯಗೊಂಡಿದ್ದರು.
ಆದ್ದರಿಂದ ಯೇಸು ದೋಣಿಯನ್ನು ಹತ್ತಿ ಮತ್ತೆ ಗಲಿಲಾಯಕ್ಕೆ ಹಿಂತಿರುಗಿದನು. 38 ದೆವ್ವಗಳಿಂದ ಬಿಡುಗಡೆಯಾಗಿದ್ದವನು, “ನನ್ನನ್ನು ನಿನ್ನ ಜೊತೆಯಲ್ಲೇ ಕರೆದುಕೊಂಡು ಹೋಗು,” ಎಂದು ಕೇಳಿಕೊಂಡನು. 39 ಅದಕ್ಕೆ ಯೇಸು, “ನಿನ್ನ ಮನೆಗೆ ಹಿಂತಿರುಗಿ ಹೋಗು. ದೇವರು ನಿನಗೆ ಮಾಡಿದ ಉಪಕಾರವನ್ನು ಜನರಿಗೆ ತಿಳಿಸು” ಎಂದು ಹೇಳಿ ಅವನನ್ನು ಕಳುಹಿಸಿದನು.
ಆದ್ದರಿಂದ ಆ ಮನುಷ್ಯನು ಅಲ್ಲಿಂದ ಹೊರಟುಹೋಗಿ ಯೇಸು ತನಗೆ ಮಾಡಿದ ಉಪಕಾರವನ್ನು ಊರಲ್ಲೆಲ್ಲಾ ತಿಳಿಸಿದನು.
Kannada Holy Bible: Easy-to-Read Version. All rights reserved. © 1997 Bible League International