Revised Common Lectionary (Complementary)
19 ಯೆಹೋವನೇ, ನನ್ನನ್ನು ತೊರೆಯಬೇಡ!
ನೀನೇ ನನ್ನ ಬಲ! ಬೇಗನೆ ನನಗೆ ಸಹಾಯಮಾಡು!
20 ಖಡ್ಗಕ್ಕೆ ಸಿಕ್ಕದಂತೆ ತನ್ನ ಜೀವವನ್ನು ರಕ್ಷಿಸು.
ನನ್ನ ಅಮೂಲ್ಯವಾದ ಜೀವವು ನಾಯಿಗಳ ಪಾಲಾಗದಂತೆ ರಕ್ಷಿಸು.
21 ನನ್ನನ್ನು ಸಿಂಹದ ಬಾಯಿಂದ ಬಿಡಿಸು;
ಹೋರಿಯ ಕೊಂಬುಗಳಿಂದ ನನ್ನನ್ನು ಸಂರಕ್ಷಿಸು.
22 ನಿನ್ನ ನಾಮದ ಕುರಿತು ನನ್ನ ಸಹೋದರರಿಗೆ ಹೇಳುವೆನು;
ಮಹಾಸಭೆಯಲ್ಲಿ ನಿನ್ನನ್ನು ಸುತ್ತಿಸುವೆನು.
23 ಯೆಹೋವನನ್ನು ಆರಾಧಿಸುವವರೇ, ಆತನಿಗೆ ಸ್ತೋತ್ರಮಾಡಿರಿ.
ಯಾಕೋಬನ ಸಂತತಿಗಳವರೇ, ಯೆಹೋವನಿಗೆ ಘನಮಾನವನ್ನು ಸಲ್ಲಿಸಿರಿ!
ಇಸ್ರೇಲರೇ, ಆತನಲ್ಲಿ ಭಯಭಕ್ತಿಯಿಂದಿರಿ!
24 ಯಾಕೆಂದರೆ ಇಕ್ಕಟ್ಟಿನಲ್ಲಿರುವ ಬಡವರಿಗೆ ಆತನು ಸಹಾಯಮಾಡುತ್ತಾನೆ; ಅವರ ವಿಷಯದಲ್ಲಿ ಆತನು ನಾಚಿಕೊಳ್ಳುವುದಿಲ್ಲ;
ಆತನು ಅವರನ್ನು ದ್ವೇಷಿಸುವುದಿಲ್ಲ.
ಅವರು ಆತನನ್ನು ಕೂಗಿಕೊಳ್ಳುವಾಗ
ಆತನು ಅವರಿಗೆ ಮರೆಯಾಗುವುದಿಲ್ಲ.
25 ಯೆಹೋವನೇ, ನಿನ್ನ ಕಾರ್ಯಗಳಿಗಾಗಿ ಮಹಾಸಭೆಯಲ್ಲಿ ನಿನ್ನನ್ನು ಕೊಂಡಾಡುವೆನು;
ನನ್ನ ಹರಕೆಗಳನ್ನು ನಿನ್ನ ಭಕ್ತರ ಮುಂದೆ ಸಲ್ಲಿಸುವೆನು.
26 ಬಡವರು ತಿಂದು ತೃಪ್ತರಾಗುವರು.
ಯೆಹೋವನಿಗಾಗಿ ಹುಡುಕುತ್ತಾ ಬಂದವರೇ, ಆತನಿಗೆ ಸ್ತೋತ್ರಮಾಡಿರಿ!
ನಿಮ್ಮ ಹೃದಯವು ಯಾವಾಗಲೂ ಸಂತೋಷವಾಗಿರಲಿ.[a]
27 ದೂರದೇಶಗಳಲ್ಲಿರುವ ಜನರೆಲ್ಲರೂ ಯೆಹೋವನನ್ನು ಜ್ಞಾಪಿಸಿಕೊಂಡು ಆತನ ಬಳಿಗೆ ಹಿಂತಿರುಗಲಿ.
ವಿದೇಶಗಳಿಲ್ಲಿರುವ ಜನರೆಲ್ಲರೂ ಆತನನ್ನು ಆರಾಧಿಸಲಿ.
28 ಯಾಕೆಂದರೆ ಯೆಹೋವನೇ ರಾಜನು!
ಆತನು ಜನಾಂಗಗಳನ್ನೆಲ್ಲಾ ಆಳುವನು.
ಇಸ್ರೇಲರು ದೇವರನ್ನು ಅನುಸರಿಸುವದಿಲ್ಲ
57 ನೀತಿವಂತರು ಇಲ್ಲವಾಗುವರು; ಯಾರೂ ಅದನ್ನು ಗಮನಿಸರು.
ಸದ್ಭಕ್ತರು ಗತಿಸಿಹೋಗುವರು;
ಅದಕ್ಕೆ ಕಾರಣವೇನೆಂದು ಯಾರೂ ಗ್ರಹಿಸರು.
ಕೇಡಿನಿಂದ ಪಾರಾಗಲೆಂದೇ ಸದ್ಭಕ್ತರಿಗೆ ಹೀಗಾಯಿತು
ಎಂದು ಯಾರೂ ಯೋಚಿಸರು.
2 ಆದರೆ ಶಾಂತಿಸಮಾಧಾನಗಳು ಬರುತ್ತವೆ.
ಆಗ ಜನರು ತಮ್ಮ ಸ್ವಂತ ಹಾಸಿಗೆಗಳ ಮೇಲೆ ವಿಶ್ರಮಿಸಿಕೊಳ್ಳುವರು; ದೇವರು ಅಪೇಕ್ಷಿಸುವ ರೀತಿಯಲ್ಲಿ ಜೀವಿಸುವರು.
3 “ಮಾಟಗಾರ್ತಿಯ ಮಕ್ಕಳೇ, ಇಲ್ಲಿಗೆ ಬನ್ನಿರಿ.
ನಿಮ್ಮ ತಂದೆಯು ವ್ಯಭಿಚಾರದ ಅಪರಾಧವೆಸಗಿದ್ದಾನೆ.
ನಿಮ್ಮ ತಾಯಿಯು ಸೂಳೆಯಾಗಿ ತನ್ನ ದೇಹವನ್ನು ಮಾರುತ್ತಿದ್ದಾಳೆ.
4 ನೀವು ಸುಳ್ಳುಹೇಳುವ ದುಷ್ಟಮಕ್ಕಳು.
ನೀವು ನನ್ನನ್ನು ಪರಿಹಾಸ್ಯ ಮಾಡುತ್ತೀರಿ.
ನನ್ನನ್ನು ಹಿಯಾಳಿಸುತ್ತೀರಿ;
ನಿಮ್ಮ ನಾಲಿಗೆಯನ್ನು ನನ್ನತ್ತ ಚಾಚುತ್ತೀರಿ.
5 ನೀವು ಮಾಡಬೇಕೆನ್ನುವುದು, ಪ್ರತಿಯೊಂದು ಹಸಿರು ಮರದಡಿಯಲ್ಲಿ
ಸುಳ್ಳುದೇವರ ಪೂಜೆ ಮಾಡುವದೊಂದನ್ನೇ,
ಪ್ರತಿಯೊಂದು ನೀರಿನ ಬುಗ್ಗೆಗಳ ಬಳಿಯಲ್ಲಿ ನಿಮ್ಮ ಮಕ್ಕಳನ್ನು ಕೊಂದು
ಬಂಡೆಕಲ್ಲಿನ ಮೇಲೆ ಅವರ ಯಜ್ಞಮಾಡುವಿರಿ.
6 ನದಿ ದಡದಲ್ಲಿರುವ ನುಣುಪಾದ ಕಲ್ಲುಗಳನ್ನು ಪೂಜಿಸಲು ಆಶಿಸುತ್ತೀರಿ.
ಅದರ ಮೇಲೆ ದ್ರಾಕ್ಷಾರಸ ಸುರಿದು ಪೂಜೆ ಮಾಡುತ್ತೀರಿ.
ಅವುಗಳಿಗೆ ಬಲಿಯರ್ಪಿಸುತ್ತೀರಿ.
ಆದರೆ ಅದರಿಂದ ನಿಮಗೆ ದೊರಕುವುದು ಕಲ್ಲೇ.
ಈ ವಿಷಯ ನನ್ನನ್ನು ಸಂತೋಷಗೊಳಿಸುತ್ತದೆಂದು ನೆನಸುತ್ತೀರೋ? ಇಲ್ಲ. ಅವು ನನ್ನನ್ನು ಸಂತೋಷಪಡಿಸುವದಿಲ್ಲ.
7 ಪ್ರತಿಯೊಂದು ಬೆಟ್ಟ ಮತ್ತು
ಉನ್ನತ ಶಿಖರಗಳ ಮೇಲೆ ನಿಮ್ಮ ಹಾಸಿಗೆಯನ್ನು ಹಾಸುವಿರಿ.
ನೀವು ಅಲ್ಲಿಗೆ ಹೋಗಿ ಬಲಿಯರ್ಪಿಸುತ್ತೀರಿ.
8 ಆ ಬಳಿಕ ಆ ಹಾಸಿಗೆಯ ಮೇಲೆ ಮಲಗಿ ಆ ದೇವರುಗಳನ್ನು ಪ್ರೀತಿಸಿ
ನನಗೆ ವಿರುದ್ಧವಾಗಿ ಪಾಪ ಮಾಡುತ್ತೀರಿ.
ನೀವು ಆ ದೇವರುಗಳನ್ನು ಪ್ರೀತಿಸುತ್ತೀರಿ.
ಅವುಗಳ ಬೆತ್ತಲೆ ಶರೀರಗಳನ್ನು ನೋಡುವದರಲ್ಲಿ ಸಂತೋಷಿಸುವಿರಿ.
ನೀವು ನನ್ನೊಂದಿಗೆ ಇದ್ದಿರಿ.
ಆದರೆ ಈಗ ನನ್ನನ್ನು ತೊರೆದು ಅವುಗಳನ್ನು ಸೇರಿಕೊಂಡಿದ್ದೀರಿ.
ನನ್ನನ್ನು ಜ್ಞಾಪಕ ಹುಟ್ಟಿಸುವ ವಿಷಯಗಳನ್ನು ನೀವು ಅಡಗಿಸಿಡುತ್ತೀರಿ.
ಅವುಗಳನ್ನು ಬಾಗಿಲ ಹಿಂದೆ ಅಡಗಿಸಿಡುತ್ತೀರಿ.
ಅನಂತರ ನೀವು ಹೋಗಿ ಆ ಸುಳ್ಳುದೇವರೊಂದಿಗೆ ಒಪ್ಪಂದ ಮಾಡುತ್ತೀರಿ.
9 ಮೋಲೆಕನಿಗೆ ಅಂದವಾಗಿ ತೋರುವಂತೆ
ನೀವು ನಿಮಗೆ ಎಣ್ಣೆ, ಸುಗಂಧದ್ರವ್ಯಗಳನ್ನು ಹಚ್ಚಿಕೊಂಡು ಹೋಗುವಿರಿ.
ನಿಮ್ಮ ದೂತರನ್ನು ದೂರದೇಶಕ್ಕೆ ಕಳುಹಿಸುತ್ತೀರಿ.
ಇವೇ ನಿಮ್ಮನ್ನು ನರಕಕ್ಕೆ ನಡಿಸುತ್ತವೆ. ಅಲ್ಲಿ ಮರಣವಿರುವದು.
10 ಇವುಗಳನ್ನೆಲ್ಲಾ ನೀವು ಬಹು ಪ್ರಯಾಸದಿಂದ ಮಾಡಿದರೂ ಆಯಾಸಗೊಂಡಿಲ್ಲ.
ಯಾಕೆಂದರೆ ಇವುಗಳನ್ನು ಮಾಡುವುದರಲ್ಲೇ ನಿಮಗೆ ಸಂತೋಷ.
11 ನೀವು ನನ್ನನ್ನು ಜ್ಞಾಪಕ ಮಾಡಿಕೊಳ್ಳಲಿಲ್ಲ.
ನನ್ನನ್ನು ಗಮನಕ್ಕೇ ತರಲಿಲ್ಲ.
ಹೀಗಿರಲು ನೀವು ಯಾರ ಬಗ್ಗೆ ಚಿಂತಿಸುತ್ತಿದ್ದಿರಿ?
ನೀವು ಯಾರಿಗೆ ಭಯಪಡುತ್ತಿದ್ದಿರಿ?
ನೀವು ಸುಳ್ಳಾಡಿದ್ದು ಯಾಕೆ?
ನೋಡಿ, ನಾನು ಬಹಳ ಸಮಯದಿಂದ ಸುಮ್ಮನಿದ್ದೆನು.
ಆದರೆ ನೀವು ನನ್ನನ್ನು ಗೌರವಿಸಲಿಲ್ಲ.
12 ನೀವು ಮಾಡುವ ಧಾರ್ಮಿಕ ಕಾರ್ಯಗಳನ್ನೂ ನಿಮ್ಮ ಒಳ್ಳೆತನವನ್ನೂ
ನಾನು ಹೇಳಿದರೂ ಅವುಗಳೆಲ್ಲಾ ನಿಷ್ಪ್ರಯೋಜಕವಾದವುಗಳು.
13 ನಿಮಗೆ ಸಹಾಯದ ಅವಶ್ಯಕತೆ ಬಂದಾಗ
ನೀವು ಆ ಸುಳ್ಳುದೇವರುಗಳನ್ನು ಕರೆಯುವಿರಿ.
ಅವುಗಳನ್ನು ನಿಮ್ಮ ಸುತ್ತಲೂ ಸೇರಿಸಿಕೊಂಡಿರುವಿರಿ.
ಆದರೆ ನಾನು ಹೇಳುವುದೇನೆಂದರೆ, ಗಾಳಿಯು ಅವುಗಳನ್ನು ಬಡಿದುಕೊಂಡು ಹೋಗುವುದು.
ಅವುಗಳನ್ನೆಲ್ಲ ಉಸಿರಿನ ಗಾಳಿಯು ನಿಮ್ಮಿಂದ ದೂರಕ್ಕೆ ಕೊಂಡೊಯ್ಯುವುದು.
ಆದರೆ ನನ್ನನ್ನು ಅವಲಂಬಿಸಿರುವವರು ಭೂಮಿಯನ್ನು ಪಡೆದುಕೊಳ್ಳುವರು.
ನನ್ನ ಪವಿತ್ರ ಪರ್ವತವನ್ನು ಬಾಧ್ಯವಾಗಿ ಹೊಂದಿಕೊಳ್ಳುವರು.”
ಧರ್ಮಶಾಸ್ತ್ರ ಮತ್ತು ವಾಗ್ದಾನ
15 ಸಹೋದರ ಸಹೋದರಿಯರೇ, ನಾನು ನಿಮಗೊಂದು ಉದಾಹರಣೆಯನ್ನು ಕೊಡುತ್ತೇನೆ. ಒಬ್ಬನು ಇನ್ನೊಬ್ಬನೊಂದಿಗೆ ಮಾಡಿಕೊಳ್ಳುವ ಒಪ್ಪಂದದ ಬಗ್ಗೆ ಯೋಚಿಸಿ. ಆ ಒಪ್ಪಂದವು ಅಧಿಕೃತವಾದಾಗ ಅದನ್ನು ರದ್ದುಮಾಡುವುದಕ್ಕಾಗಲಿ ಅಥವಾ ಅದಕ್ಕೆ ಬೇರೆ ಏನಾದರು ಸೇರಿಸುವುದಕ್ಕಾಗಲಿ ಯಾರಿಗೂ ಸಾಧ್ಯವಿಲ್ಲ. 16 ದೇವರು ಅಬ್ರಹಾಮನಿಗೂ ಅವನ ಸಂತಾನದವರಿಗೂ ವಾಗ್ದಾನಗಳನ್ನು ಮಾಡಿದನು. “ನಿನ್ನ ಸಂತತಿಗಳಿಗೆ” ಎಂದು ದೇವರು ಹೇಳಲಿಲ್ಲ. ಏಕೆಂದರೆ ಅನೇಕ ಜನರು ಎಂಬರ್ಥವನ್ನು ಅದು ಕೊಡುತ್ತದೆ. ಆದರೆ ದೇವರು ಅವನಿಗೆ, “ನಿನ್ನ ಸಂತತಿಗೆ”[a] ಎಂದು ಹೇಳಿದನು. ಅದರರ್ಥವೇನೆಂದರೆ, ಒಬ್ಬನೇ ಒಬ್ಬ ವ್ಯಕ್ತಿ. ಆತನೇ ಕ್ರಿಸ್ತನು. 17 ನಾನು ಹೇಳುತ್ತಿರುವುದೇನೆಂದರೆ, ದೇವರು ಅಬ್ರಹಾಮನೊಂದಿಗೆ ಒಂದು ಒಡಂಬಡಿಕೆಯನ್ನು ಮಾಡಿಕೊಂಡು ಅದನ್ನು ಸ್ಥಿರಪಡಿಸಿದನು. ಆದ್ದರಿಂದ ನಾನೂರಮೂವತ್ತು ವರ್ಷಗಳಾದ ನಂತರ ಬಂದ ಧರ್ಮಶಾಸ್ತ್ರವು ಅಬ್ರಹಾಮನಿಗೆ ದೇವರು ಮಾಡಿದ ವಾಗ್ದಾನವನ್ನು ರದ್ದುಪಡಿಸುವುದೂ ಇಲ್ಲ ಬದಲಾಯಿಸುವುದೂ ಇಲ್ಲ.
18 ದೇವರು ವಾಗ್ದಾನ ಮಾಡಿದಂಥವುಗಳು ಧರ್ಮಶಾಸ್ತ್ರದ ಅನುಸರಣೆಯಿಂದ ದೊರೆಯುತ್ತವೆಯೇ? ಇಲ್ಲ! ಧರ್ಮಶಾಸ್ತ್ರವನ್ನು ಅನುಸರಿಸುವುದರ ಮೂಲಕ ನಾವು ಅವುಗಳನ್ನು ಪಡೆದುಕೊಳ್ಳಬಹುದಾಗಿದ್ದರೆ ಅವುಗಳನ್ನು ನಮಗೆ ಕೊಡುವಂಥದ್ದು ದೇವರ ವಾಗ್ದಾನವಲ್ಲ. ಆದರೆ ದೇವರು ತಾನು ಮಾಡಿದ ವಾಗ್ದಾನದ ಮೂಲಕ ತನ್ನ ಆಶೀರ್ವಾದಗಳನ್ನು ಅಬ್ರಹಾಮನಿಗೆ ಉಚಿತವಾಗಿ ಕೊಟ್ಟನು.
19 ಹಾಗಾದರೆ ಧರ್ಮಶಾಸ್ತ್ರವಿದ್ದದ್ದು ಯಾಕೆ? ಜನರ ಅಪರಾಧಗಳನ್ನು ತೋರಿಸುವುದಕ್ಕಾಗಿ ಧರ್ಮಶಾಸ್ತ್ರವನ್ನು ಕೊಡಲಾಯಿತು. ಅಬ್ರಹಾಮನ ವಿಶೇಷ ಸಂತಾನವು ಬರುವ ತನಕ ಧರ್ಮಶಾಸ್ತ್ರವಿತ್ತು. ಈ ಸಂತಾನದ (ಕ್ರಿಸ್ತನು) ಬಗ್ಗೆಯೇ ದೇವರು ವಾಗ್ದಾನ ಮಾಡಿದನು. ಧರ್ಮಶಾಸ್ತ್ರವನ್ನು ದೇವದೂತರ ಮೂಲಕ ಕೊಡಲಾಯಿತು. ಜನರಿಗೆ ಧರ್ಮಶಾಸ್ತ್ರವನ್ನು ಕೊಡುವುದಕ್ಕಾಗಿ ದೇವದೂತರು ಮೋಶೆಯನ್ನು ಮಧ್ಯವರ್ತಿಯನ್ನಾಗಿ ಉಪಯೋಗಿಸಿದರು. 20 ಒಂದೇ ಪಕ್ಷವಿದ್ದರೆ ಮಧ್ಯಸ್ತನು ಬೇಕಿಲ್ಲ. ದೇವರು ಒಬ್ಬನೇ.
ಮೋಶೆಯ ಧರ್ಮಶಾಸ್ತ್ರದ ಉದ್ದೇಶ
21 ಧರ್ಮಶಾಸ್ತ್ರವು ದೇವರ ವಾಗ್ದಾನಗಳಿಗೆ ವಿರೋಧವಾಗಿದೆ ಎಂಬುದು ಇದರರ್ಥವೇ? ಇಲ್ಲ! ಜೀವವನ್ನು ಕೊಡುವಂಥ ಧರ್ಮಶಾಸ್ತ್ರವಿದ್ದಿದ್ದರೆ ಅದನ್ನು ಅನುಸರಿಸುವುದರ ಮೂಲಕ ನೀತಿವಂತರಾಗಬಹುದಾಗಿತ್ತು. 22 ಆದರೆ ಇದು ಸತ್ಯವಲ್ಲ. ಏಕೆಂದರೆ ಸಮಸ್ತವೂ ಪಾಪಕ್ಕೆ ಒಳಗಾಗಿದೆ ಎಂದು ಪವಿತ್ರ ಗ್ರಂಥ ಪ್ರಕಟಿಸುತ್ತದೆ. ಯೇಸು ಕ್ರಿಸ್ತನಲ್ಲಿ ನಂಬಿಕೆ ಇಡುವವರಿಗೆ ಅವರ ನಂಬಿಕೆಯ ಆಧಾರದ ಮೇಲೆ ವಾಗ್ದಾನದ ಫಲವು ದೊರೆಯಬೇಕೆಂದೇ ಪವಿತ್ರ ಗ್ರಂಥವು ಹೀಗೆ ಪ್ರಕಟಿಸಿದೆ.
Kannada Holy Bible: Easy-to-Read Version. All rights reserved. © 1997 Bible League International