Revised Common Lectionary (Complementary)
ಸ್ತುತಿಗೀತೆ. ರಚನೆಗಾರ: ಆಸಾಪ.
76 ಯೆಹೂದದ ಜನರು ದೇವರನ್ನು ಬಲ್ಲವರೇ ಸರಿ!
ಇಸ್ರೇಲಿನ ಜನರು ಆತನ ನಾಮವನ್ನು ಗೌರವಿಸುವರು.
2 ಆತನ ಗುಡಾರವು ಸಾಲೇಮಿನಲ್ಲಿದೆ.
ಆತನ ಆಲಯವು ಸಿಯೋನ್ ಬೆಟ್ಟದ ಮೇಲಿದೆ.
3 ಆ ಸ್ಥಳದಲ್ಲಿ ದೇವರು ಬಿಲ್ಲುಬಾಣಗಳನ್ನೂ ಗುರಾಣಿಗಳನ್ನೂ
ಖಡ್ಗಗಳನ್ನೂ ಇತರ ಯುದ್ಧಾಯುಧಗಳನ್ನೂ ನುಚ್ಚುನೂರು ಮಾಡಿದ್ದಾನೆ.
4 ದೇವರೇ, ಶತ್ರುಗಳನ್ನು ಸೋಲಿಸಿ
ಬೆಟ್ಟಗಳಿಂದ ಇಳಿದುಬರುವಾಗ ನೀನು ತೇಜೋಮಯನಾಗಿರುವೆ.
5 ಆ ಸೈನಿಕರು ತಾವೇ ಶಕ್ತಿವಂತರೆಂದುಕೊಂಡಿದ್ದರು.
ಆದರೆ ಈಗ ಅವರು ಬಯಲುಗಳಲ್ಲಿ ಸತ್ತುಬಿದ್ದಿದ್ದಾರೆ.
ಅವರು ಧರಿಸಿಕೊಂಡಿದ್ದವುಗಳನ್ನೆಲ್ಲ ಸುಲಿಗೆ ಮಾಡಲಾಗಿದೆ.
ಆ ಸೈನಿಕರಲ್ಲಿ ಯಾರೂ ತಮ್ಮನ್ನು ಸಂರಕ್ಷಿಸಿಕೊಳ್ಳಲಾಗಲಿಲ್ಲ.
6 ಯಾಕೋಬನ ದೇವರು ಆ ಸೈನಿಕರನ್ನು ಗದರಿಸಲು
ರಥಾಶ್ವಗಳ ಸೇನೆಯು ಮೂರ್ಛೆಗೊಂಡಿತು.
7 ದೇವರೇ, ನೀನು ಭಯಂಕರನೇ ಸರಿ!
ನೀನು ಕೋಪಗೊಂಡಿರುವಾಗ ನಿನಗೆ ವಿರೋಧವಾಗಿ ಯಾರು ನಿಂತುಕೊಳ್ಳಬಲ್ಲರು?
8 ಯೆಹೋವನು ಎದ್ದುನಿಂತು
ತನ್ನ ನ್ಯಾಯತೀರ್ಪನ್ನು ಪ್ರಕಟಿಸಿದನು.
9 ದೇವರು ಲೋಕದ ದೀನರನ್ನು ರಕ್ಷಿಸಿದನು.
ಆತನು ಪರಲೋಕದಿಂದ ತೀರ್ಮಾನ ನೀಡುತ್ತಿರಲು ಭೂಲೋಕವೆಲ್ಲಾ ಭಯದಿಂದ ಸ್ತಬ್ಧವಾಯಿತು.
10 ದೇವರೇ, ನೀನು ದುಷ್ಟರನ್ನು ದಂಡಿಸುವಾಗ ಜನರು ನಿನ್ನನ್ನು ಕೊಂಡಾಡುವರು;
ನಿನ್ನ ಕೋಪವನ್ನು ತೋರಿಸುವಾಗ ಅಳಿದುಳಿದವರು ಬಲಿಷ್ಠರಾಗುವರು.
11 ದೇವರಾದ ಯೆಹೋವನಿಗೆ ಹರಕೆಗಳನ್ನು ಮಾಡಿದವರೇ,
ನಿಮ್ಮ ಹರಕೆಗಳನ್ನು ಸಲ್ಲಿಸಿರಿ.
ಸರ್ವಭೂನಿವಾಸಿಗಳೇ, ದೇವರಲ್ಲಿ ಭಯಭಕ್ತಿಯುಳ್ಳವರಾಗಿರಿ.
12 ಆತನು ಮಹಾನಾಯಕರುಗಳನ್ನು ಸೋಲಿಸುವನು.
ಭೂರಾಜರುಗಳೆಲ್ಲಾ ಆತನಿಗೆ ಭಯಪಡುವರು.
19 “ಆಮೇಲೆ ನಾನು, ‘ನಾಲ್ಕನೆಯ ಮೃಗ ಯಾವುದು? ಅದು ಏನನ್ನು ಸೂಚಿಸುತ್ತದೆ?’ ಎಂಬುದನ್ನು ತಿಳಿದುಕೊಳ್ಳಬಯಸಿದೆ. ನಾಲ್ಕನೆಯ ಮೃಗವು ಉಳಿದೆಲ್ಲ ಮೃಗಗಳಿಂದ ಭಿನ್ನವಾಗಿತ್ತು. ಅದು ಬಹಳ ಭಯಾನಕವಾಗಿತ್ತು. ಅದಕ್ಕೆ ಕಬ್ಬಿಣದ ಹಲ್ಲುಗಳು ಮತ್ತು ಕಂಚಿನ ಉಗುರುಗಳಿದ್ದವು. ಅದು ತಾನು ಬೇಟೆಯಾಡಿದ ಪಶುವನ್ನು ತುಂಡುತುಂಡು ಮಾಡಿ ಸಂಪೂರ್ಣವಾಗಿ ತಿಂದು ಮಿಕ್ಕಿದ್ದನ್ನು ಕಾಲಿನಿಂದ ತುಳಿದುಹಾಕುತ್ತಿತ್ತು. 20 ನಾಲ್ಕನೆಯ ಪ್ರಾಣಿಯ ತಲೆಯ ಮೇಲಿದ್ದ ಹತ್ತು ಕೊಂಬುಗಳ ಬಗ್ಗೆ ನಾನು ತಿಳಿದುಕೊಳ್ಳಬಯಸಿದೆ. ನಾನು ಅಲ್ಲಿ ಮೊಳೆತ ಚಿಕ್ಕ ಕೊಂಬಿನ ಬಗ್ಗೆ ತಿಳಿದುಕೊಳ್ಳಬಯಸಿದೆ. ಆ ಚಿಕ್ಕ ಕೊಂಬು ಅಲ್ಲಿದ್ದ ಹತ್ತು ಕೊಂಬುಗಳಲ್ಲಿ ಮೂರನ್ನು ಬೀಳಿಸಿಬಿಟ್ಟಿತು. ಈ ಚಿಕ್ಕ ಕೊಂಬು ಉಳಿದ ಕೊಂಬುಗಳಿಗಿಂತ ಕೀಳಾಗಿ ಕಂಡುಬಂತು. ಅದಕ್ಕೆ ಮನುಷ್ಯರ ಕಣ್ಣುಗಳಂತೆ ಕಣ್ಣುಗಳಿದ್ದವು. ಆ ಚಿಕ್ಕ ಕೊಂಬು ಜಂಬ ಕೊಚ್ಚಿಕೊಳ್ಳುತ್ತಿತ್ತು. 21 ನಾನು ನೋಡುತ್ತಿದ್ದಂತೆಯೇ ಈ ಚಿಕ್ಕ ಕೊಂಬು ದೇವಭಕ್ತರ ಮೇಲೆ ಬಿದ್ದು ಅವರೊಂದಿಗೆ ಯುದ್ಧಮಾಡುತ್ತಿತ್ತು. ಆ ಕೊಂಬು ಅವರ ಕೊಲೆ ಮಾಡುತ್ತಿತ್ತು. 22 ಪುರಾತನ ರಾಜನು ಬಂದು ನ್ಯಾಯತೀರಿಸುವವರೆಗೂ ಆ ಚಿಕ್ಕಕೊಂಬು ದೇವಭಕ್ತರ ಕೊಲೆ ಮಾಡುತ್ತಿತ್ತು. ಪುರಾತನ ರಾಜನು ಈ ಚಿಕ್ಕ ಕೊಂಬಿನ ಬಗ್ಗೆ ತೀರ್ಪನ್ನು ಕೊಟ್ಟನು. ಈ ತೀರ್ಪು ದೇವಭಕ್ತರ ಪರವಾಗಿತ್ತು. ಆದ್ದರಿಂದ ಅವರು ಸಾಮ್ರಾಜ್ಯವನ್ನು ಪಡೆದರು.
23 “ಅವನು ನನಗೆ ಈ ರೀತಿ ವಿವರಿಸಿದನು: ‘ನಾಲ್ಕನೆಯ ಮೃಗವು ಈ ಲೋಕದಲ್ಲಿ ಉಂಟಾಗುವ ನಾಲ್ಕನೆಯ ರಾಜ್ಯ. ಇದು ಬೇರೆಲ್ಲ ರಾಜ್ಯಗಳಿಂದ ಭಿನ್ನವಾಗಿರುತ್ತದೆ. ಆ ನಾಲ್ಕನೆಯ ರಾಜ್ಯವು ಜಗತ್ತಿನ ಜನರನ್ನೆಲ್ಲ ನಾಶಗೊಳಿಸುವುದು. ಇದು ಜಗತ್ತಿನ ಎಲ್ಲ ರಾಷ್ಟ್ರಗಳನ್ನು ತುಳಿದು ಪುಡಿಪುಡಿ ಮಾಡುವುದು. 24 ಹತ್ತು ಕೊಂಬುಗಳು ಈ ನಾಲ್ಕನೆಯ ರಾಜ್ಯದ ಹತ್ತು ಜನ ಅರಸರನ್ನು ಸೂಚಿಸುತ್ತವೆ. ಆ ಹತ್ತು ಜನ ಅರಸರ ತರುವಾಯ ಮತ್ತೊಬ್ಬ ಅರಸನು ಬರುವನು. ಅವನು ತನಗಿಂತಲೂ ಮುಂಚೆ ರಾಜ್ಯಭಾರ ಮಾಡಿದ ಅರಸರಿಗಿಂತ ಭಿನ್ನನಾಗಿರುವನು. ಅವನು ಬೇರೆ ಅರಸರುಗಳಲ್ಲಿ ಮೂವರನ್ನು ಸೋಲಿಸುವನು. 25 ಈ ಪುರಾತನ ರಾಜನು ಮಹೋನ್ನತನಾದ ದೇವರ ವಿರುದ್ಧ ಮಾತನಾಡುವನು. ಆ ರಾಜನು ದೇವರ ಪರಮ ಭಕ್ತರಿಗೆ ತೊಂದರೆ ಕೊಡುವನು ಮತ್ತು ಕೊಲೆ ಮಾಡುವನು. ಆ ರಾಜನು ರೂಢಿಯಲ್ಲಿದ್ದ ಧರ್ಮವಿಧಿಗಳನ್ನು ಮಾರ್ಪಡಿಸುವ ಪ್ರಯತ್ನ ಮಾಡುವನು. ಆ ಭಕ್ತರು ಒಂದು ಕಾಲ, ಎರಡು ಕಾಲ, ಅರ್ಧಕಾಲ[a] ಅವನ ಕೈವಶವಾಗಿರುವರು.
26 “‘ಆಮೇಲೆ ಏನಾಗಬೇಕೆಂಬುದನ್ನು ನ್ಯಾಯಸಭೆಯು ನಿರ್ಣಯಿಸುವುದು. ಆ ರಾಜನ ಅಧಿಕಾರವನ್ನು ಕಸಿದುಕೊಳ್ಳಲಾಗುವುದು. ಅವನ ಸಾಮ್ರಾಜ್ಯವು ಸಂಪೂರ್ಣವಾಗಿ ಕೊನೆಗೊಳ್ಳುವುದು. 27 ಆಗ ದೇವಭಕ್ತರು ರಾಜ್ಯವನ್ನು ಆಳುವರು. ಅವರು ಸಮಸ್ತ ಭೂಮಂಡಲದ ರಾಜ್ಯಗಳ ಮೇಲೆ ಆಳ್ವಿಕೆ ಮಾಡುವರು. ಈ ಸಾಮ್ರಾಜ್ಯವು ಕೊನೆಯವರೆಗೂ ಉಳಿಯುವುದು. ಮಿಕ್ಕ ಎಲ್ಲ ರಾಜ್ಯಗಳ ಜನರು ಅವರನ್ನು ಗೌರವಿಸುವರು ಮತ್ತು ಸೇವಿಸುವರು.’
ಇಬ್ಬರು ಸಾಕ್ಷಿಗಳು
11 ತರುವಾಯ ದಂಡದಂತಿರುವ ಒಂದು ಅಳತೆಯ ಕೋಲನ್ನು ನನಗೆ ಕೊಟ್ಟು ಹೀಗೆ ತಿಳಿಸಲಾಯಿತು: “ಹೋಗು, ದೇವರ ಆಲಯವನ್ನೂ ಯಜ್ಞವೇದಿಕೆಯನ್ನೂ ಅಳತೆಮಾಡು; ಮತ್ತು ಅಲ್ಲಿ ಆರಾಧಿಸುವ ಜನರನ್ನು ಲೆಕ್ಕಹಾಕು. 2 ಆದರೆ ಆಲಯದ ಹೊರಗಿರುವ ಅಂಗಳವನ್ನು ಅಳತೆ ಮಾಡದೆ ಬಿಟ್ಟುಬಿಡು. ಅದನ್ನು ಯೆಹೂದ್ಯರಲ್ಲದ ಜನರಿಗೆ ಬಿಟ್ಟಿದೆ. ಆ ಜನರು ಪವಿತ್ರ ನಗರದ ಮೇಲೆ ನಲವತ್ತೆರಡು ತಿಂಗಳ ಕಾಲ ತುಳಿದಾಡುವರು. 3 ನಾನು ನನ್ನ ಇಬ್ಬರು ಸಾಕ್ಷಿಗಳಿಗೆ ಅಧಿಕಾರವನ್ನು ಕೊಡುತ್ತೇನೆ. ಅವರು ಸಾವಿರದ ಇನ್ನೂರ ಅರವತ್ತು ದಿನಗಳ ಕಾಲ ಪ್ರವಾದನೆ ಮಾಡುತ್ತಾರೆ. ಅವರು ಗೋಣಿತಟ್ಟುಗಳನ್ನು ಧರಿಸಿಕೊಂಡಿರುತ್ತಾರೆ.”
4 ಭೂಲೋಕದ ಪ್ರಭುವಿನ ಸನ್ನಿಧಿಯಲ್ಲಿ ನಿಂತಿರುವ ಎರಡು ಆಲಿವ್ ಮರಗಳು ಮತ್ತು ಎರಡು ದೀಪಸ್ತಂಭಗಳೇ ಈ ಇಬ್ಬರು ಸಾಕ್ಷಿಗಳು. 5 ಈ ಸಾಕ್ಷಿಗಳಿಗೆ ಯಾರಾದರೂ ಕೇಡು ಮಾಡಲು ಪ್ರಯತ್ನಿಸಿದರೆ, ಸಾಕ್ಷಿಗಳ ಬಾಯಿಂದ ಬೆಂಕಿಯು ಹೊರಬಂದು ಅವರ ಶತ್ರುವನ್ನು ಅಂದರೆ ಅವರಿಗೆ ತೊಂದರೆ ಮಾಡಲು ಪ್ರಯತ್ನಿಸಿದ್ದವರನ್ನೆಲ್ಲ ಸಾಯಿಸುತ್ತದೆ. 6 ಈ ಸಾಕ್ಷಿಗಳು ತಮ್ಮ ಪ್ರವಾದನೆಯ ಕಾಲದಲ್ಲಿ ಆಕಾಶದಿಂದ ಸುರಿಯುವ ಮಳೆಯನ್ನು ನಿಲ್ಲಿಸಲೂ ನೀರನ್ನು ರಕ್ತವನ್ನಾಗಿಸಲೂ ಭೂಮಿಗೆ ಎಲ್ಲಾ ವಿಧವಾದ ವಿಪತ್ತುಗಳನ್ನು ಕಳುಹಿಸಲೂ ಅಧಿಕಾರವನ್ನು ಹೊಂದಿರುತ್ತಾರೆ. ಅವರು ತಮಗೆ ಇಷ್ಟ ಬಂದಷ್ಟು ಸಲ ಹೀಗೆ ಮಾಡಶಕ್ತರಾಗಿದ್ದಾರೆ.
7 ಈ ಇಬ್ಬರು ಸಾಕ್ಷಿಗಳು ತಮ್ಮ ಸಂದೇಶವನ್ನು ಹೇಳಿ ಮುಗಿಸಿದ ನಂತರ, ತಳವಿಲ್ಲದ ಕೂಪದಿಂದ ಮೇಲಕ್ಕೆ ಬರುವ ಮೃಗವು ಅವರ ವಿರುದ್ಧ ಹೋರಾಟ ಮಾಡುತ್ತದೆ. ಈ ಮೃಗವು ಅವರನ್ನು ಸೋಲಿಸಿ, ಕೊಂದು ಹಾಕುತ್ತದೆ. 8 ಈ ಸಾಕ್ಷಿಗಳ ಎರಡು ಶವಗಳು ಮಹಾನಗರದ ಬೀದಿಯಲ್ಲಿ ಬಿದ್ದಿರುತ್ತವೆ. ಈ ನಗರಕ್ಕೆ ಸೊದೋಮ್[a] ಮತ್ತು ಈಜಿಪ್ಟ್ ಎಂದು ಹೆಸರಾಗುತ್ತದೆ. ಆ ನಗರದ ಹೆಸರುಗಳಿಗೆ ವಿಶೇಷ ಅರ್ಥವಿದೆ. ಪ್ರಭುವು ಈ ನಗರದಲ್ಲಿಯೇ ಶಿಲುಬೆಗೇರಿಸಲ್ಪಟ್ಟನು. 9 ಸಕಲ ಪ್ರಜೆ, ಕುಲ, ಭಾಷೆ, ಜನಾಂಗದವರು ಮೂರುವರೆ ದಿನಗಳ ಕಾಲ ಈ ಸಾಕ್ಷಿಗಳ ಶವಗಳನ್ನು ನೋಡುತ್ತಾ ಇರುತ್ತಾರೆ. ಅವರನ್ನು ಸಮಾಧಿ ಮಾಡಲು ಜನರು ಒಪ್ಪುವುದಿಲ್ಲ. 10 ಈ ಇಬ್ಬರು ಸತ್ತದ್ದಕ್ಕಾಗಿ ಭೂಮಿಯ ಮೇಲಿನ ಜನರು ಸಂತೋಷಗೊಳ್ಳುವರು. ಅವರು ಸಮಾರಂಭಗಳನ್ನು ನಡೆಸಿ, ಒಬ್ಬರಿಗೊಬ್ಬರು ಉಡುಗೊರೆಗಳನ್ನು ನೀಡುತ್ತಾರೆ. ಈ ಇಬ್ಬರು ಪ್ರವಾದಿಗಳು ಭೂಮಿಯ ಮೇಲೆ ವಾಸಿಸುತ್ತಿರುವ ಜನರಿಗೆ ಹೆಚ್ಚು ಸಂಕಟವನ್ನು ಉಂಟುಮಾಡಿದ್ದರಿಂದ ಆ ಜನರು ಹೀಗೆ ಮಾಡುತ್ತಾರೆ.
11 ಆದರೆ ಮೂರುವರೆ ದಿನಗಳ ನಂತರ ದೇವರು ಆ ಇಬ್ಬರು ಪ್ರವಾದಿಗಳೊಳಗೆ ಮತ್ತೆ ಜೀವ ಪ್ರವೇಶಿಸುವಂತೆ ಮಾಡಿದನು. ಆಗ ಅವರು ತಮ್ಮ ಕಾಲೂರಿ ನಿಂತುಕೊಂಡರು. ಅವರನ್ನು ನೋಡಿದ ಜನರೆಲ್ಲರೂ ಭಯಗ್ರಸ್ತರಾದರು. 12 ಅನಂತರ “ಮೇಲೇರಿ ಬನ್ನಿ!” ಎಂದು ಪರಲೋಕದಿಂದ ಮಹಾವಾಣಿಯು ಆ ಪ್ರವಾದಿಗಳಿಗೆ ತಿಳಿಸಿತು. ಆಗ ಆ ಇಬ್ಬರು ಪ್ರವಾದಿಗಳು ಮೋಡದೊಂದಿಗೆ ಪರಲೋಕಕ್ಕೆ ಏರಿಹೋದರು. ಅವರು ಹೋಗುವುದನ್ನು ಅವರ ಶತ್ರುಗಳು ನೋಡುತ್ತಾ ಇದ್ದರು.
13 ಆ ಸಮಯದಲ್ಲಿ ಮಹಾಭೂಕಂಪವಾಯಿತು. ಆ ನಗರದ ಹತ್ತನೆಯ ಒಂದು ಭಾಗ ನಾಶವಾಯಿತು. ಭೂಕಂಪದಲ್ಲಿ ಏಳು ಸಾವಿರ ಜನರು ನಾಶವಾದರು. ಸಾಯದೆ ಉಳಿದಿದ್ದ ಜನರು ಬಹು ಭಯಗೊಂಡು ಪರಲೋಕದ ದೇವರನ್ನು ಘನಪಡಿಸಿದರು.
14 ಎರಡನೆಯ ಮಹಾವಿಪತ್ತು ಮುಗಿಯಿತು. ಮೂರನೆಯ ಮಹಾವಿಪತ್ತು ಬೇಗನೆ ಬರಲಿದೆ.
Kannada Holy Bible: Easy-to-Read Version. All rights reserved. © 1997 Bible League International