Revised Common Lectionary (Complementary)
94 ಯೆಹೋವನೇ, ನೀನು ಸೇಡು ತೀರಿಸಿಕೊಳ್ಳುವ ದೇವರು!
ಸೇಡು ತೀರಿಸಿಕೊಳ್ಳುವ ದೇವರೇ ಪ್ರತ್ಯಕ್ಷನಾಗು!
2 ಇಡೀಲೋಕದ ನ್ಯಾಯಾಧಿಪತಿ ನೀನೇ.
ಅಹಂಕಾರಿಗಳಿಗೆ ತಕ್ಕ ದಂಡನೆಯನ್ನು ಕೊಡು.
3 ಯೆಹೋವನೇ, ದುಷ್ಟಜನರು ಎಷ್ಟರವರೆಗೆ ಪರಿಹಾಸ್ಯ ಮಾಡುವರು?
ಇನ್ನೆಷ್ಟರವರೆಗೆ ಪರಿಹಾಸ್ಯ ಮಾಡುವರು?
4 ಆ ಅಪರಾಧಿಗಳು ತಮ್ಮ ದುಷ್ಕೃತ್ಯಗಳ ಬಗ್ಗೆ
ಇನ್ನೆಷ್ಟರವರೆಗೆ ಜಂಬ ಕೊಚ್ಚಿಕೊಳ್ಳುವರು?
5 ಯೆಹೋವನೇ, ಅವರು ನಿನ್ನ ಜನರಿಗೆ ಕೇಡುಮಾಡಿದ್ದಾರೆ.
ಅವರು ನಿನ್ನ ಜನರನ್ನು ಹಿಂಸೆಪಡಿಸಿದ್ದಾರೆ.
6 ನಮ್ಮ ದೇಶದಲ್ಲಿ ವಾಸವಾಗಿರುವ ವಿಧವೆಯರನ್ನೂ ವಿದೇಶಿಯರನ್ನೂ ಆ ದುಷ್ಟರು ಕೊಲ್ಲುತ್ತಾರೆ.
ಅವರು ಅನಾಥ ಮಕ್ಕಳನ್ನೂ ಕೊಲೆ ಮಾಡುವರು.
7 ಆ ದುಷ್ಕೃತ್ಯಗಳು ಯೆಹೋವನಿಗೆ ಕಾಣದೆಂದು ಅವರು ಹೇಳಿಕೊಳ್ಳುತ್ತಾರೆ.
ಅವುಗಳು ಇಸ್ರೇಲಿನ ದೇವರಿಗೆ ತಿಳಿಯದೆಂದು ಅವರು ಹೇಳುತ್ತಾರೆ.
8 ದುಷ್ಟರೇ, ನೀವು ಮೂಢರಾಗಿದ್ದೀರಿ!
ನೀವು ಪಾಠವನ್ನು ಕಲಿತುಕೊಳ್ಳುವುದು ಯಾವಾಗ?
ದುಷ್ಟರೇ, ನೀವು ಬಹು ದಡ್ಡರಾಗಿದ್ದೀರಿ!
ಅರ್ಥಮಾಡಿಕೊಳ್ಳಲು ನೀವು ಪ್ರಯತ್ನಿಸಬೇಕು.
9 ಕಿವಿಗಳನ್ನು ಸೃಷ್ಟಿಸಿದಾತನಿಗೆ, ಕೇಳುವುದಿಲ್ಲವೇ?
ಕಣ್ಣುಗಳನ್ನು ಸೃಷ್ಟಿಸಿದಾತನಿಗೆ ಕಾಣುವುದಿಲ್ಲವೇ?
10 ಜನಾಂಗಗಳನ್ನು ಶಿಕ್ಷಿಸುವಾತನು ದೇವರೇ.
ಜನರಿಗೆ ಉಪದೇಶಿಸುವವನೂ ಆತನೇ.
11 ಮನುಷ್ಯರ ಆಲೋಚನೆಗಳೆಲ್ಲಾ ಆತನಿಗೆ ತಿಳಿದಿದೆ.
ಮನುಷ್ಯರು ಕೇವಲ ಉಸಿರೆಂಬುದು ಆತನಿಗೆ ತಿಳಿದಿದೆ.
12 ಯೆಹೋವನಿಂದ ಶಿಕ್ಷಿಸಲ್ಪಡುವವನು ಭಾಗ್ಯವಂತನೇ ಸರಿ.
ದೇವರು ಅವನಿಗೆ ನೀತಿಮಾರ್ಗವನ್ನು ಉಪದೇಶಿಸುವನು.
13 ಆಪತ್ತಿನಲ್ಲಿಯೂ ಸಮಾಧಾನದಿಂದಿರಲು ನೀನು ಅವನಿಗೆ ಸಹಾಯಮಾಡುವೆ.
ದುಷ್ಟರು ಸಮಾಧಿಗಳಿಗೆ ಸೇರುವವರೆಗೆ ಸಮಾಧಾನದಿಂದಿರಲು ನೀನು ಅವನಿಗೆ ನೆರವು ನೀಡುವೆ.
14 ಯೆಹೋವನು ತನ್ನ ಜನರನ್ನು ತೊರೆದುಬಿಡುವುದಿಲ್ಲ.
ಆತನು ತನ್ನ ಜನರನ್ನು ನಿಸ್ಸಹಾಯಕರನ್ನಾಗಿ ಮಾಡುವುದಿಲ್ಲ.
15 ನ್ಯಾಯವು ನೀತಿಯೊಂದಿಗೆ ಮರಳಿ ಬರುವುದು.
ಆಗ ಜನರು ಒಳ್ಳೆಯವರೂ ಯಥಾರ್ಥವಂತರೂ ಆಗುವರು.
16 ದುಷ್ಟರಿಗೆ ವಿರೋಧವಾಗಿ ಯಾರೂ ನನಗೆ ಸಹಾಯಮಾಡಲಿಲ್ಲ.
ದುಷ್ಕೃತ್ಯಗಳನ್ನು ಮಾಡುವವರ ವಿರುದ್ಧವಾಗಿ ಯಾರೂ ನನ್ನೊಂದಿಗೆ ನಿಂತುಕೊಳ್ಳಲಿಲ್ಲ.
17 ಯೆಹೋವನು ನನಗೆ ಸಹಾಯಮಾಡಿಲ್ಲದಿದ್ದರೆ,
ಇಷ್ಟರಲ್ಲೇ ಸಮಾಧಿ ಸೇರುತ್ತಿದ್ದೆನು.
18 ಯೆಹೋವನೇ, ಜಾರಿಹೋಗುತ್ತಿರುವೆ ಎಂದು ಮೊರೆಯಿಟ್ಟಾಗ
ಆತನು ನನಗೆ ಆಧಾರ ನೀಡಿದನು.
19 ನಾನು ಚಿಂತೆಗಳಿಂದ ಗಲಿಬಿಲಿಗೊಂಡಿದ್ದಾಗ
ನೀನು ನನ್ನನ್ನು ಸಂತೈಸಿ ಸಂತೋಷಪಡಿಸಿದೆ.
20 ದೇವರೇ, ಮೋಸಗಾರರಾದ ನ್ಯಾಯಾಧೀಶರಿಗೆ ಸಹಾಯಮಾಡಬೇಡ.
ಅವರು ಕಾನೂನನ್ನು ಡೊಂಕು ಮಾಡಿ ಜನರನ್ನು ಹಿಂಸಿಸುವರು.
21 ಅವರು ನೀತಿವಂತರಿಗೆ ಎದುರಾಗಿ
ನಿರಪರಾಧಿಗಳಿಗೆ ಮರಣದಂಡನೆ ವಿಧಿಸುವರು.
22 ನನಗಾದರೋ ಯೆಹೋವನು ಪರ್ವತದ ಮೇಲಿರುವ ಆಶ್ರಯಸ್ಥಾನವಾಗಿದ್ದಾನೆ.
ನನ್ನ ಬಂಡೆಯಾಗಿರುವ ದೇವರು ನನಗೆ ಆಶ್ರಯಗಿರಿಯಾಗಿದ್ದಾನೆ!
23 ಆತನು ಆ ದುಷ್ಟ ನ್ಯಾಯಾಧೀಶರನ್ನು ಅವರ ದುಷ್ಕೃತ್ಯಗಳ ನಿಮಿತ್ತ ದಂಡಿಸುವನು.
ಅವರ ಪಾಪಗಳ ನಿಮಿತ್ತ ದೇವರು ಅವರನ್ನು ನಾಶಮಾಡುವನು.
ನಮ್ಮ ದೇವರಾದ ಯೆಹೋವನು ಆ ದುಷ್ಟ ನ್ಯಾಯಾಧೀಶರನ್ನು ನಾಶಮಾಡುವನು.
14 ರೂತಳು ಬೆಳಗಿನ ಜಾವದವರೆಗೂ ಬೋವಜನ ಪಾದಗಳ ಬಳಿಯಲ್ಲಿಯೇ ಮಲಗಿದ್ದು ಇನ್ನೂ ಕತ್ತಲಿರುವಾಗಲೇ ಎದ್ದಳು.
ಬೋವಜನು ಅವಳಿಗೆ, “ನೀನು ನಿನ್ನೆ ರಾತ್ರಿ ನನ್ನಲ್ಲಿಗೆ ಬಂದಿದ್ದೆ ಎಂಬ ಸಂಗತಿಯು ರಹಸ್ಯವಾಗಿರಲಿ” ಎಂದು ಹೇಳಿದನು. 15 ಬೋವಜನು, “ನಿನ್ನ ಹೊದಿಕೆಯನ್ನು ಇಲ್ಲಿ ತೆಗೆದುಕೊಂಡು ಬಾ. ಅದನ್ನು ಸ್ವಲ್ಪ ಅಗಲಮಾಡಿ ಹಿಡಿದುಕೋ” ಎಂದನು.
ರೂತಳು ತನ್ನ ಹೊದಿಕೆಯನ್ನು ಅಗಲಮಾಡಿ ಹಿಡಿದಳು. ಬೋವಜನು ಆರು ಸೇರಿನಷ್ಟು ಜವೆಗೋಧಿಯನ್ನು ಅದರಲ್ಲಿ ಸುರಿದು ಚೆನ್ನಾಗಿ ಕಟ್ಟಿ ಅವಳ ಮೇಲೆ ಹೊರಿಸಿದನು. ಬಳಿಕ ಆಕೆ ಊರೊಳಗೆ ಹೋದಳು.
16 ರೂತಳು ತನ್ನ ಅತ್ತೆಯಾದ ನೊವೊಮಿಯ ಮನೆಗೆ ಬಂದಳು. ನೊವೊಮಿಯು ಆಕೆಗೆ, “ನನ್ನ ಮಗಳೇ, ನಿನ್ನ ಕಾರ್ಯವೇನಾಯಿತು?” ಎಂದು ಕೇಳಿದಳು.
ರೂತಳು ನಡೆದ ಸಂಗತಿಯನ್ನೂ ಬೋವಜನು ತನಗೆ ಹೇಳಿದ್ದನ್ನೂ ಅತ್ತೆಗೆ ತಿಳಿಸಿದಳು. 17 ಅಲ್ಲದೆ “ನೀನು ಅತ್ತೆಯ ಬಳಿಗೆ ಬರಿಗೈಲಿ ಹೋಗಬಾರದೆಂದು ಆರು ಸೇರು ಜವೆಗೋಧಿಯನ್ನು ಕೊಟ್ಟನು” ಎಂದು ಹೇಳಿದಳು.
18 ನೊವೊಮಿಯು, “ನನ್ನ ಮಗಳೇ, ಈ ಕಾರ್ಯದ ಫಲಿತಾಂಶ ಗೊತ್ತಾಗುವವರೆಗೂ ತಾಳ್ಮೆಯಿಂದಿರು. ಈ ಹೊತ್ತು ಅದನ್ನು ಇತ್ಯರ್ಥಪಡಿಸುವವರೆಗೆ ಅವನಿಗೆ ಸಮಾಧಾನವಿರಲಾರದು” ಎಂದು ಹೇಳಿದಳು.
ಬೋವಜ ಮತ್ತು ಮತ್ತೊಬ್ಬ ಸಂಬಂಧಿಕನು
4 ಬೋವಜನು ನಗರದ್ವಾರದ ಬಳಿಯಲ್ಲಿ ಕುಳಿತುಕೊಂಡನು. ತಾನು ಹೇಳಿದ್ದ ಸಮೀಪಬಂಧುವು ಅಲ್ಲಿಂದ ಹಾದು ಹೋಗುವವರೆಗೂ ಅವನು ಅಲ್ಲಿಯೇ ಕುಳಿತಿದ್ದನು. ಅವನನ್ನು ಕಂಡ ಬೋವಜನು, “ಸ್ನೇಹಿತನೇ ಇಲ್ಲಿ ಬಾ, ಇಲ್ಲಿ ಕುಳಿತುಕೋ” ಎಂದು ಕರೆದನು.
2 ಆಮೇಲೆ ಬೋವಜನು ನಗರದ ಹಿರಿಯರಲ್ಲಿ ಹತ್ತುಮಂದಿಯನ್ನು ಕರೆದು ಅವರಿಗೆ, “ಇಲ್ಲಿ ಕುಳಿತುಕೊಳ್ಳಿ” ಎಂದು ಹೇಳಿದನು. ಅವರೂ ಕುಳಿತುಕೊಂಡರು.
3 ಆಗ ಬೋವಜನು ಆ ಸಮೀಪಬಂಧುವಿನೊಡನೆ ಮಾತಾಡಿ, “ನೊವೊಮಿಯು ಮೋವಾಬ್ ಬೆಟ್ಟಪ್ರದೇಶದಿಂದ ಹಿಂದಿರುಗಿ ಬಂದಿದ್ದಾಳೆ. ಅವಳು ನಮ್ಮ ಸಂಬಂಧಿಯಾದ ಎಲೀಮೆಲೆಕನ ಹೊಲವನ್ನು ಮಾರುತ್ತಿದ್ದಾಳೆ. 4 ನಾನು ಇದರ ಬಗ್ಗೆ ನಿನಗೆ ಈ ಜನರ ಸಮ್ಮುಖದಲ್ಲಿ ಮತ್ತು ನಮ್ಮ ಹಿರಿಯರ ಸಮ್ಮುಖದಲ್ಲಿ ಹೇಳಬೇಕೆಂದು ತೀರ್ಮಾನಿಸಿದ್ದೇನೆ. ನೀನು ಆ ಹೊಲವನ್ನು ಕೊಂಡುಕೊಳ್ಳ ಬಯಸಿದರೆ ಕೊಂಡುಕೋ. ನಿನಗೆ ಕೊಂಡುಕೊಳ್ಳಲು ಇಷ್ಟವಿಲ್ಲದಿದ್ದರೆ ನನಗೆ ಹೇಳು. ನಿನ್ನ ಬಳಿಕ ಆ ಹೊಲವನ್ನು ಕೊಂಡುಕೊಳ್ಳುವ ಹಕ್ಕು ನನಗಿದೆ. ನೀನು ಆ ಹೊಲವನ್ನು ಕೊಂಡುಕೊಳ್ಳದಿದ್ದರೆ ನಾನು ಕೊಂಡುಕೊಳ್ಳುತ್ತೇನೆ.” ಅದಕ್ಕೆ ಅವನು, “ಸರಿ, ನಾನೇ ಕೊಂಡುಕೊಳ್ಳುತ್ತೇನೆ.” ಎಂದನು.
5 ಅದಕ್ಕೆ ಬೋವಜನು, “ನೀನು ನೊವೊಮಿಯಿಂದ ಆ ಹೊಲವನ್ನು ಕೊಂಡುಕೊಂಡರೆ ಸತ್ತವನ ಹೆಂಡತಿಯೂ ಮೋವಾಬ್ಯಳೂ ಆಗಿರುವ ರೂತಳನ್ನು ಸಹ ನೀನು ಮದುವೆಯಾಗಬೇಕು. ರೂತಳಿಗೆ ಜನಿಸುವ ಮಗನು ಆ ಹೊಲಕ್ಕೆ ಹಕ್ಕುದಾರನಾಗುವನು. ಹೀಗೆ ಈ ಭೂಮಿಯು ಸತ್ತು ಹೋದವನ ಕುಟುಂಬದಲ್ಲಿಯೇ ಇದ್ದು ಅವನ ಹೆಸರಿನಲ್ಲಿಯೇ ಮುಂದುವರಿಯುವುದು” ಎಂದು ಹೇಳಿದನು.
6 ಅದಕ್ಕೆ ಆ ಸಮೀಪಬಂಧುವು, “ನಾನು ಆ ಹೊಲವನ್ನು ಕೊಂಡುಕೊಳ್ಳಲಾರೆ. ಆ ಹೊಲ ನನಗೆ ಸೇರಬೇಕಾದರೂ ನಾನು ಅದನ್ನು ಕೊಂಡುಕೊಳ್ಳಲಾರೆ. ಒಂದುವೇಳೆ ನಾನು ಅದನ್ನು ಕೊಂಡುಕೊಂಡರೆ ನನ್ನ ಸ್ವಂತ ಹೊಲವನ್ನೇ ಕಳೆದುಕೊಳ್ಳಬೇಕಾಗುವುದು. ಆದ್ದರಿಂದ ನೀನೇ ಆ ಹೊಲವನ್ನು ಕೊಂಡುಕೊಳ್ಳಬಹುದು” ಎಂದು ಉತ್ತರಿಸಿದನು.
9 ವಿಧವೆಯರ ಪಟ್ಟಿಗೆ ಸೇರಿಸಲ್ಪಟ್ಟ ವಿಧವೆಯರು ವಯಸ್ಸಿನಲ್ಲಿ ಅರವತ್ತು ವರ್ಷಕ್ಕಿಂತ ಮೇಲ್ಪಟ್ಟಿರಬೇಕು. ಅವಳು ತನ್ನ ಗಂಡನಿಗೆ ನಂಬಿಗಸ್ತಳಾಗಿದ್ದವಳೆಂದೂ 10 ಒಳ್ಳೆಯ ಕಾರ್ಯಗಳನ್ನು ಮಾಡುತ್ತಿದ್ದವಳೆಂದೂ ಹೆಸರನ್ನು ಪಡೆದಿರಬೇಕು. ಅಂದರೆ, ಅವಳು ತನ್ನ ಮಕ್ಕಳನ್ನು ಸಾಕಿಸಲಹಿದವಳೂ, ಅತಿಥಿಗಳನ್ನು ಸತ್ಕರಿಸಿದವಳೂ, ದೇವಜನರ ಪಾದಗಳನ್ನು ತೊಳೆದವಳೂ, ತೊಂದರೆಯಲ್ಲಿರುವ ಜನರಿಗೆ ಸಹಾಯ ಮಾಡಿದವಳೂ ಮತ್ತು ತನ್ನಿಂದಾದಷ್ಟು ಒಳ್ಳೆಯ ಕಾರ್ಯಗಳನ್ನು ಮಾಡಿದವಳೂ ಆಗಿರಬೇಕು.
11 ಆದರೆ ಪ್ರಾಯದ ವಿಧವೆಯರನ್ನು ಆ ಪಟ್ಟಿಯಲ್ಲಿ ಸೇರಿಸಬಾರದು. ಅವರು ಕ್ರಿಸ್ತನಿಗೆ ತಮ್ಮನ್ನು ಒಪ್ಪಿಸಿಕೊಂಡಿದ್ದರೂ ದೈಹಿಕ ಬಯಕೆಗಳ ಒತ್ತಡದಿಂದ ಪದೇಪದೇ ಆತನಿಗೆ ವಿಮುಖರಾಗುತ್ತಾರೆ. ನಂತರ ಅವರು ಮತ್ತೆ ಮದುವೆಯಾಗಲು ಆಸಕ್ತರಾಗುತ್ತಾರೆ. 12 ತಾವು ಕೊಟ್ಟ ವಾಗ್ದಾನವನ್ನು ಮೀರಿದವರೆಂಬ ತೀರ್ಪು ಅವರಿಗಾಗುತ್ತದೆ. 13 ಇದಲ್ಲದೆ, ಅವರು ಮನೆಮನೆಗೆ ಅಲೆಯುತ್ತಾ ತಮ್ಮ ಕಾಲವನ್ನು ಕಳೆಯಲಾರಂಭಿಸುತ್ತಾರೆ; ಹರಟೆ ಮಾತುಗಳನ್ನಾಡುತ್ತಾ ಇತರರ ಜೀವನದಲ್ಲಿ ತಲೆಹಾಕಿ ಕಾಲಹರಣ ಮಾಡುತ್ತಾರೆ; ಹೇಳಬಾರದ ಸಂಗತಿಗಳನ್ನೆಲ್ಲ ಹೇಳುತ್ತಾರೆ. 14 ಆದ್ದರಿಂದ ಅವರು ಮದುವೆ ಮಾಡಿಕೊಂಡು ಮಕ್ಕಳನ್ನು ಪಡೆಯಲಿ ಮತ್ತು ತಮ್ಮ ಮನೆಗಳನ್ನು ನೋಡಿಕೊಳ್ಳಲಿ. ಆಗ ಅವರನ್ನು ಟೀಕಿಸಲು ನಮ್ಮ ಶತ್ರುವಿಗೆ ಯಾವ ಕಾರಣವೂ ಇರುವುದಿಲ್ಲ. 15 ಆದರೆ ಈಗಾಗಲೇ ಕೆಲವರು ತಮ್ಮ ದಾರಿಯನ್ನು ಬದಲಾಯಿಸಿ ಸೈತಾನನನ್ನು ಹಿಂಬಾಲಿಸಿದ್ದಾರೆ.
16 ವಿಶ್ವಾಸಿಯಾದ ಸ್ತ್ರೀಯ ಕುಟುಂಬದಲ್ಲಿ ವಿಧವೆಯರಿದ್ದರೆ, ಆಕೆಯೇ ಅವರನ್ನು ಪರಿಪಾಲಿಸಲಿ. ಅವರನ್ನು ನೋಡಿಕೊಳ್ಳುವಂಥ ಜವಾಬ್ದಾರಿಯನ್ನು ಸಭೆಗೆ ಕೊಡಕೂಡದು. ಆಗ ದಿಕ್ಕಿಲ್ಲದ ವಿಧವೆಯರನ್ನು ನೋಡಿಕೊಳ್ಳಲು ಸಭೆಗೆ ಸಾಧ್ಯವಾಗುವುದು.
Kannada Holy Bible: Easy-to-Read Version. All rights reserved. © 1997 Bible League International