Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 90:12-17

12 ನಮ್ಮ ಜೀವಿತಗಳು ಕೊಂಚವೇ ಎಂಬುದನ್ನು ನಮಗೆ ಕಲಿಸು.
    ಆಗ ನಾವು ವಿವೇಕಿಗಳಾಗುವೆವು.
13 ಯೆಹೋವನೇ, ನಮ್ಮ ಬಳಿಗೆ ಹಿಂತಿರುಗಿ ಬಾ.
    ನಿನ್ನ ಸೇವಕರ ಮೇಲೆ ಅಂತಃಕರಣವಿರಲಿ.
14 ಪ್ರತಿ ಮುಂಜಾನೆ ನಿನ್ನ ಪ್ರೀತಿಯಿಂದ ನಮ್ಮನ್ನು ತುಂಬಿಸು.
    ಆಗ ಜೀವಮಾನವೆಲ್ಲಾ ಉಲ್ಲಾಸಿಸಿ ಹರ್ಷಿಸುವೆವು.
15 ನೀನು ನಮಗೆ ಬಹು ದುಃಖವನ್ನೂ ಕಷ್ಟಗಳನ್ನೂ ಬರಮಾಡಿದೆ.
    ಈಗ ನಮ್ಮನ್ನು ಸಂತೋಷಗೊಳಿಸು.
16 ನೀನು ನಿನ್ನ ಸೇವಕರುಗಳಿಗಾಗಿ ಮಾಡಬಲ್ಲ ಅದ್ಭುತಕಾರ್ಯಗಳನ್ನು ನಾವು ನೋಡುವಂತಾಗಲಿ.
17 ನಮ್ಮ ದೇವರಾದ ಯೆಹೋವನೇ, ನಮಗೆ ಕರುಣೆತೋರು.
    ನಮ್ಮ ಕೆಲಸಕಾರ್ಯಗಳು ನಮಗೆ ಫಲ ನೀಡಲಿ;
    ನಮ್ಮ ಕಾರ್ಯಗಳನ್ನು ಆತನು ಸಫಲಪಡಿಸಲಿ.

ಧರ್ಮೋಪದೇಶಕಾಂಡ 5:22-33

ಜನರು ದೇವರಿಗೆ ಹೆದರಿದರು

22 ಮೋಶೆಯು ಹೇಳಿದ್ದೇನೆಂದರೆ: “ನೀವೆಲ್ಲಾ ಆ ಬೆಟ್ಟದ ಬಳಿಯಲ್ಲಿರುವಾಗ ದೇವರಾದ ಯೆಹೋವನು ಈ ಆಜ್ಞೆಗಳನ್ನು ನಿಮಗೆ ಕೊಟ್ಟನು. ಬೆಂಕಿ, ಮೋಡ ಮತ್ತು ಕಾರ್ಗತ್ತಲೊಳಗಿನಿಂದ ಯೆಹೋವನು ಗಟ್ಟಿಯಾದ ಸ್ವರದಲ್ಲಿ ಮಾತಾಡಿದ್ದನ್ನು ನೀವು ಕೇಳಿದಿರಿ. ಆತನು ಈ ಆಜ್ಞೆಗಳನ್ನು ಕೊಟ್ಟ ಬಳಿಕ ಬೇರೆ ಏನನ್ನೂ ಹೇಳಲಿಲ್ಲ. ಆತನು ತನ್ನ ಮಾತುಗಳನ್ನು ಎರಡು ಕಲ್ಲಿನ ಹಲಗೆಗಳ ಮೇಲೆ ಬರೆದು ನನಗೆ ಕೊಟ್ಟನು.

23 “ಬೆಟ್ಟವು ಬೆಂಕಿಯಿಂದ ಉರಿಯುತ್ತಿರುವಾಗ ಕಾರ್ಗತ್ತಲೆಯಿಂದ ಬಂದ ಸ್ವರವನ್ನು ನೀವು ಕೇಳಿದಿರಿ. ಆಗ ನಿಮ್ಮ ಹಿರಿಯರು, ಕುಲಪ್ರಧಾನರು ನನ್ನ ಬಳಿಗೆ ಬಂದು ಹೇಳಿದ್ದೇನೆಂದರೆ: 24 ‘ನಮ್ಮ ದೇವರಾದ ಯೆಹೋವನು ತನ್ನ ಮಹಿಮೆಯನ್ನೂ ಪ್ರತಾಪವನ್ನೂ ನಮಗೆ ತೋರಿಸಿದ್ದಾನೆ. ಬೆಂಕಿಯೊಳಗಿಂದ ಆತನು ಮಾತನಾಡಿದ್ದನ್ನು ನಾವು ಕೇಳಿದ್ದೇವೆ. ದೇವರು ಒಬ್ಬನೊಡನೆ ಸ್ವತಃ ಮಾತನಾಡಿದ ಬಳಿಕವೂ ಅವನು ಜೀವದಿಂದುಳಿಯಲು ಸಾಧ್ಯ ಎಂಬುದನ್ನು ನಾವು ಕಣ್ಣಾರೆ ಕಂಡೆವು. 25 ಆದರೆ ನಮ್ಮ ದೇವರಾದ ಯೆಹೋವನು ಮಾತನಾಡುವುದನ್ನು ನಾವು ಮತ್ತೆ ಕೇಳಿದರೆ ಖಂಡಿತವಾಗಿ ಸಾಯುವೆವು. ಆ ಭಯಂಕರವಾದ ಬೆಂಕಿಯು ನಮ್ಮನ್ನು ದಹಿಸುವುದು. ನಮಗೆ ಸಾಯಲು ಇಷ್ಟವಿಲ್ಲ. 26 ಜೀವಸ್ವರೂಪನಾದ ದೇವರ ನುಡಿಯನ್ನು ಪ್ರತ್ಯಕ್ಷವಾಗಿ ನಾವು ಕೇಳಿದ ಹಾಗೆ ಬೇರೆ ಯಾರೂ ಕೇಳಿಲ್ಲ. ಆದರೂ ನಾವು ಜೀವದಿಂದಿದ್ದೇವೆ. 27 ಮೋಶೆಯೇ, ನೀನು ಹತ್ತಿರ ಹೋಗಿ ಯೆಹೋವನು ಹೇಳುವುದನ್ನೆಲ್ಲಾ ಕೇಳಿ ನಮಗೆ ಅದನ್ನು ತಿಳಿಸು. ನಾವು ನಿನ್ನ ಮಾತುಗಳನ್ನು ಕೇಳಿ ನೀನು ಹೇಳಿದ ಹಾಗೆ ಮಾಡುವೆವು.’

ಯೆಹೋವನು ಮೋಶೆಯ ಸಂಗಡ ಮಾತನಾಡುತ್ತಾನೆ

28 “ನೀವು ಹೇಳಿದ್ದನ್ನು ಯೆಹೋವನು ಕೇಳಿ ನನ್ನೊಡನೆ ಹೀಗೆಂದನು: ‘ನಿನ್ನ ಜನರು ಹೇಳುವುದನ್ನು ನಾನು ಕೇಳಿದೆನು. ಆ ಮಾತುಗಳೆಲ್ಲಾ ಒಳ್ಳೆಯವೇ. 29 ಆದರೆ ಅವರು ಆಲೋಚಿಸುವ ರೀತಿಯನ್ನು ನಾನು ಬದಲಾಯಿಸಬೇಕಾಗಿದೆ. ಅವರು ನನಗೆ ವಿಧೇಯರಾಗಿ ನನ್ನ ಆಜ್ಞೆಗಳನ್ನೆಲ್ಲಾ ಅನುಸರಿಸಿ ತಮ್ಮ ಹೃದಯಗಳಿಂದ ನನ್ನನ್ನು ಗೌರವಿಸಬೇಕು. ಆಗ ಅವರಿಗೂ ಅವರ ಸಂತತಿಯವರಿಗೂ ಶಾಶ್ವತವಾಗಿ ಶುಭವಿರುವುದು.

30 “‘ನೀನು ಹೋಗಿ ಜನರಿಗೆ ಅವರವರ ಗುಡಾರಗಳಿಗೆ ಹಿಂದಿರುಗಿ ಹೋಗಲು ತಿಳಿಸು. 31 ಆದರೆ ಮೋಶೆಯೇ, ನೀನು ನನ್ನ ಬಳಿಯಲ್ಲಿಯೇ ನಿಂತಿರು. ನೀನು ಅವರಿಗೆ ಉಪದೇಶಿಸಬೇಕಾಗಿರುವ ಎಲ್ಲಾ ಆಜ್ಞೆಗಳನ್ನು, ಕಟ್ಟಳೆಗಳನ್ನು ಮತ್ತು ನಿಯಮಗಳನ್ನು ನಾನು ನಿನಗೆ ತಿಳಿಸುತ್ತೇನೆ. ಅವರ ವಾಸಕ್ಕಾಗಿ ನಾನು ಕೊಡಲಿರುವ ದೇಶದಲ್ಲಿ ಅವರು ಇವುಗಳೆಲ್ಲವನ್ನು ಪರಿಪಾಲಿಸಬೇಕು.’

32 “ಆದ್ದರಿಂದ, ಇಸ್ರೇಲ್ ಜನರೇ, ಯೆಹೋವನು ಆಜ್ಞಾಪಿಸಿದ್ದನ್ನೆಲ್ಲಾ ಅನುಸರಿಸಲು ನೀವು ಎಚ್ಚರದಿಂದಿರಬೇಕು. ಆತನನ್ನು ಹಿಂಬಾಲಿಸುವುದನ್ನು ನಿಲ್ಲಿಸಬೇಡಿ. 33 ನಿಮ್ಮ ದೇವರಾದ ಯೆಹೋವನು ಹೇಳಿದ ಆಜ್ಞೆಗಳಿಗನುಸಾರವಾಗಿ ನಡೆದರೆ ನೀವು ಜೀವಿಸುವಿರಿ. ಆಗ ನೀವು ಶುಭವನ್ನೇ ಹೊಂದುವಿರಿ. ನಿಮಗೆ ದೊರಕಿದ ಸ್ವಾಸ್ತ್ಯಭೂಮಿಯಲ್ಲಿ ನೀವು ಬಹುಕಾಲ ಬಾಳುವಿರಿ.

ಇಬ್ರಿಯರಿಗೆ 4:1-11

ದೇವರು ಆ ಜನರಿಗೆ ನೀಡಿದ ವಾಗ್ದಾನವು ನಮ್ಮಲ್ಲಿ ಇನ್ನೂ ಇದೆ. ನಾವು ದೇವರ ವಿಶ್ರಾಂತಿಯಲ್ಲಿ ಪ್ರವೇಶಿಸಬಹುದೆಂಬುದೇ ಆ ವಾಗ್ದಾನ. ಆದ್ದರಿಂದ ನಮ್ಮಲ್ಲಿ ಯಾರೂ ಆ ವಾಗ್ದಾನದ ಫಲವನ್ನು ಪಡೆಯುವದರಲ್ಲಿ ವಿಫಲರಾಗದಂತೆ ಬಹು ಎಚ್ಚರಿಕೆಯಿಂದಿರೋಣ. ರಕ್ಷಣಾಮಾರ್ಗದ ಕುರಿತು ಅವರಿಗೆ ತಿಳಿಸಲ್ಪಟ್ಟಂತೆಯೇ ನಮಗೂ ತಿಳಿಸಲಾಯಿತು. ಅವರು ಆ ಬೋಧನೆಯನ್ನು ಕೇಳಿದರೂ ಅವರಿಗೆ ಪ್ರಯೋಜನವಾಗಲಿಲ್ಲ. ಏಕೆಂದರೆ ಅವರು ಅದನ್ನು ನಂಬಿಕೆಯಿಂದ ಸ್ವೀಕರಿಸಿಕೊಳ್ಳಲಿಲ್ಲ. ನಂಬುವವರಾದ ನಾವು ದೇವರ ವಿಶ್ರಾಂತಿಯಲ್ಲಿ ಸೇರಲು ಸಮರ್ಥರಾಗಿದ್ದೇವೆ. ದೇವರು ಹೇಳಿದಂತೆ:

“ಆ ಜನರು ನನ್ನ ವಿಶ್ರಾಂತಿಯಲ್ಲಿ ಎಂದಿಗೂ ಪ್ರವೇಶಿಸುವುದಿಲ್ಲವೆಂದು
    ನಾನು ಕೋಪಗೊಂಡು ಪ್ರಮಾಣ ಮಾಡಿದೆನು.”(A)

ಈ ಲೋಕವನ್ನು ಸೃಷ್ಟಿಸಿದ ನಂತರ ತನ್ನ ಕಾರ್ಯಗಳು ಮುಗಿದುಹೋಗಿದ್ದರೂ ದೇವರು ಹೀಗೆ ಹೇಳಿದನು. ಪವಿತ್ರ ಗ್ರಂಥದ ಒಂದು ಭಾಗದಲ್ಲಿ ಆತನು ವಾರದ ಏಳನೆಯ ದಿನದ ಬಗ್ಗೆ ಹೀಗೆ ಮಾತಾಡಿದ್ದಾನೆ: “ಆದ್ದರಿಂದ ದೇವರು ತನ್ನ ಕಾರ್ಯಗಳನ್ನೆಲ್ಲ ಮುಗಿಸಿ ಏಳನೆಯ ದಿನ ವಿಶ್ರಾಂತಿ ಹೊಂದಿದನು.”(B) ಪವಿತ್ರ ಗ್ರಂಥದ ಇನ್ನೊಂದು ಭಾಗದಲ್ಲಿ ಆತನು, “ಆ ಜನರು ನನ್ನ ವಿಶ್ರಾಂತಿಯಲ್ಲಿ ಎಂದಿಗೂ ಪ್ರವೇಶಿಸುವುದಿಲ್ಲ”(C) ವೆಂದೂ ಹೇಳಿದ್ದಾನೆ.

ಆದ್ದರಿಂದ ಕೆಲವರು ದೇವರ ವಿಶ್ರಾಂತಿಯಲ್ಲಿ ಸೇರುತ್ತಾರೆಂಬುದು ಇನ್ನೂ ಖಚಿತವಾಗಿದೆ. ಆದರೆ ರಕ್ಷಣಾಮಾರ್ಗವನ್ನು ಮೊದಲು ಕೇಳಿದ ಜನರು ಪ್ರವೇಶಿಸಲಿಲ್ಲ. ಅವರು ವಿಧೇಯರಾಗದೆ ಇದ್ದುದರಿಂದ ಅವರು ಸೇರಲಿಲ್ಲ. ಆದ್ದರಿಂದ ಆತನು ಮತ್ತೊಂದು ವಿಶೇಷ ದಿನವನ್ನು ಯೋಜಿಸಿದನು. ಅದನ್ನು “ಈ ಹೊತ್ತು” ಎಂದು ಕರೆಯಲಾಗಿದೆ. ಆತನು ಆ ದಿನವನ್ನು ಕುರಿತು ಬಹುಕಾಲದ ನಂತರ ದಾವೀದನ ಮೂಲಕ ತಿಳಿಸಿದನು. ಪವಿತ್ರ ಗ್ರಂಥದ ಈ ಭಾಗವನ್ನು ನಾವು ಮೊದಲೊಮ್ಮೆ ನೋಡಿದೆವು:

“ನೀವು ಈ ಹೊತ್ತು ದೇವರ ಸ್ವರಕ್ಕೆ ಕಿವಿಗೊಟ್ಟರೆ,
    ನಿಮ್ಮ ಹೃದಯಗಳನ್ನು ಕಠಿಣಮಾಡಿಕೊಳ್ಳಬೇಡಿ.”(D)

ದೇವರು ವಾಗ್ದಾನ ಮಾಡಿದ್ದ ವಿಶ್ರಾಂತಿಗೆ ಯೆಹೋಶುವನು ಜನರನ್ನು ಕರೆದೊಯ್ದಿದ್ದರೆ ವಿಶ್ರಾಂತಿಯ ಮತ್ತೊಂದು ದಿನದ ಕುರಿತು ಹೇಳುತ್ತಿರಲಿಲ್ಲ. ದೇವಜನರಿಗೋಸ್ಕರವಿರುವ ಸಬ್ಬತ್ ಎಂಬ ವಿಶ್ರಾಂತಿಯು ಇನ್ನೂ ಬರಲಿದೆ ಎಂಬುದನ್ನು ಇದು ತೋರ್ಪಡಿಸುತ್ತದೆ. 10 ಆತನು ತನ್ನ ಕಾರ್ಯವನ್ನು ಮುಗಿಸಿದ ನಂತರ ವಿಶ್ರಾಂತಿ ಹೊಂದಿದನು. ಆದ್ದರಿಂದ ದೇವರ ವಿಶ್ರಾಂತಿಯಲ್ಲಿ ಪ್ರವೇಶಿಸುವವನು ಆತನು ಮಾಡಿದಂತೆ ತನ್ನ ಕಾರ್ಯವನ್ನು ಮುಗಿಸಿದವನಾಗಿರಬೇಕು. 11 ದೇವರ ವಿಶ್ರಾಂತಿಯಲ್ಲಿ ಪ್ರವೇಶಿಸಲು ನಮ್ಮಿಂದಾದಷ್ಟು ಪ್ರಯತ್ನಿಸೋಣ. ಆತನಿಗೆ ಅವಿಧೇಯರಾದ ಆ ಜನರನ್ನು ಅನುಸರಿಸಿ ನಮ್ಮಲ್ಲಿ ಯಾರೂ ವಿಫಲರಾಗದಂತೆ ನೋಡಿಕೊಳ್ಳೋಣ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International