Revised Common Lectionary (Complementary)
10 ನಾನು ವೃದ್ಧನಾಗುವ ತನಕ ಬದುಕುವೆನೆಂದು ನಾನು ನನ್ನೊಳಗೆ ಅಂದುಕೊಂಡಿದ್ದೆನು.
ಆದರೆ ನಾನು ಮರಣದ್ವಾರದ ಮೂಲಕ ಹೋಗುವ ಸಮಯ ಬಂತು.
ನನ್ನ ಜೀವಮಾನವೆಲ್ಲ ಅಲ್ಲಿ ಕಳೆಯುವೆನು.
11 ಅದಕ್ಕೆ ನಾನೆಂದೆ: “ಇನ್ನು ಮೇಲೆ ಜೀವಿತರ ಲೋಕದಲ್ಲಿ ಇನ್ನು ದೇವರಾದ ಯೆಹೋವನನ್ನು ನೋಡುವದಿಲ್ಲ.
ಇನ್ನು ಮೇಲೆ ಜನರು ಲೋಕದಲ್ಲಿ ಜೀವಿಸುವದನ್ನು ನಾನು ನೋಡುವದಿಲ್ಲ.
12 ನನ್ನ ಮನೆಯು ಅಂದರೆ ನನ್ನ ಕುರುಬನ ಗುಡಾರವು ಕೀಳಲ್ಪಟ್ಟು ನನ್ನಿಂದ ತೆಗೆಯಲ್ಪಡುತ್ತಿದೆ.
ಒಬ್ಬನು ಮಗ್ಗದಲ್ಲಿ ಬಟ್ಟೆಯನ್ನು ಸುತ್ತಿ ಕತ್ತರಿಸಿಬಿಡುವಂತೆ ನಾನು ಕತ್ತರಿಸಲ್ಪಟ್ಟಿದ್ದೇನೆ.
ನನ್ನ ಆಯುಷ್ಯವನ್ನು ಚಿಕ್ಕ ವಯಸ್ಸಿನಲ್ಲಿಯೇ ಮುಗಿಸಿಬಿಟ್ಟಿರುವೆ.
13 ಇಡೀರಾತ್ರಿ ನಾನು ಸಿಂಹದಂತೆ ಗರ್ಜಿಸಿದೆನು.
ಆದರೆ ಸಿಂಹವು ಎಲುಬುಗಳನ್ನು ಜಗಿದು ಪುಡಿಮಾಡುವಂತೆ ನನ್ನ ನಿರೀಕ್ಷೆಯೆಲ್ಲಾ ಜಜ್ಜಿಹೋಯಿತು.
ನೀನು ನನ್ನ ಜೀವಿತವನ್ನು ಅಷ್ಟು ಅಲ್ಪಕಾಲಕ್ಕೇ ಕೊನೆಗೊಳಿಸಿದೆ!
14 ನಾನು ಪಾರಿವಾಳದಂತೆ ಕೂಗಿಕೊಂಡೆನು.
ಪಕ್ಷಿಯಂತೆ ಅರಚಿಕೊಂಡೆನು.
ನನ್ನ ಕಣ್ಣುಗಳು ಸ್ವರ್ಗದ ಕಡೆಗೆ
ನೋಡುತ್ತಾ ಆಯಾಸಗೊಂಡವು.
ನನ್ನ ಒಡೆಯನೇ, ನಾನು ತುಂಬಾ ಚಿಂತಾಕ್ರಾಂತನಾಗಿದ್ದೇನೆ.
ನೀನು ನನಗೆ ಸಹಾಯ ಮಾಡುವುದಾಗಿ ವಾಗ್ದಾನ ಮಾಡು.”
15 ನಾನೇನು ಹೇಳಲಿ?
ನನಗೆ ಸಂಭವಿಸಲಿರುವುದನ್ನು ನನ್ನ ಒಡೆಯನು ತಿಳಿಸಿದ್ದಾನೆ.
ನನ್ನ ಒಡೆಯನು ಅದನ್ನು ನೆರವೇರಿಸುತ್ತಾನೆ.
ನನ್ನ ಆತ್ಮದಲ್ಲಿ ಸಂಕಟಗಳೆಲ್ಲಾ ತುಂಬಿವೆ.
ನಾನು ನನ್ನ ಜೀವಮಾನವೆಲ್ಲಾ ದೀನನಾಗುವೆನು.
16 ನನ್ನ ಒಡೆಯನೇ, ನನ್ನ ಆತ್ಮವು ಪುನರುಜ್ಜೀವಿಸುವಂತೆ ಮಾಡು.
ನನ್ನ ಆತ್ಮವು ಬಲಗೊಂಡು ಆರೋಗ್ಯದಾಯಕವಾಗುವಂತೆ ಸಹಾಯಮಾಡು.
ನಾನು ತಿರುಗಿ ಸ್ವಸ್ಥತೆ ಹೊಂದುವಂತೆ ಮಾಡು.
ನಾನು ಮತ್ತೆ ಜೀವಿಸುವಂತೆ ಮಾಡು.
17 ಇಗೋ, ನನ್ನ ಸಂಕಟವೆಲ್ಲಾ ಹೊರಟುಹೋಯಿತು.
ನನಗೀಗ ಸಮಾಧಾನವಿದೆ.
ನೀನು ನನ್ನನ್ನು ಬಹಳವಾಗಿ ಪ್ರೀತಿಸುವದರಿಂದ
ನನ್ನ ಶರೀರವು ಸಮಾಧಿಯಲ್ಲಿ ಕೊಳೆಯುವಂತೆ ಮಾಡಲಿಲ್ಲ.
ನೀನು ನನ್ನ ಪಾಪಗಳನ್ನು ಕ್ಷಮಿಸಿದೆ.
ನನ್ನ ಪಾಪಗಳನ್ನು ಬಹುದೂರ ಬಿಸಾಡಿದೆ.
18 ಸತ್ತವರು ನಿನ್ನನ್ನು ಸ್ತುತಿಸುವದಿಲ್ಲ.
ಪಾತಾಳದಲ್ಲಿರುವ ಜನರು ನಿನ್ನನ್ನು ಸ್ತುತಿಸುವದಿಲ್ಲ.
ಸತ್ತುಹೋದವರು ಸಹಾಯಕ್ಕಾಗಿ ನಿನ್ನ ಮೇಲೆ ಭರವಸವಿಡರು.
ಅವರು ಭೂಮಿಯಲ್ಲಿರುವ ಆಳವಾದ ಕುಣಿಗೆ ಸೇರುವರು.
ಅವರು ತಿರುಗಿ ಮಾತನಾಡುವದೇ ಇಲ್ಲ.
19 ನನ್ನ ಹಾಗೆ ಈ ದಿನ ಜೀವಿಸುವವರೆಲ್ಲಾ ನಿನ್ನನ್ನು ಕೊಂಡಾಡುವರು.
ತಂದೆಯು ತನ್ನ ಮಕ್ಕಳಿಗೆ ನಿನ್ನ ಮೇಲೆ ಭರವಸವಿಡಲು ಕಲಿಸುವರು.
20 ನಾನು ಹೇಳುವುದೇನೆಂದರೆ: “ಯೆಹೋವನು ನನ್ನನ್ನು ರಕ್ಷಿಸಿದನು.
ನಮ್ಮ ಜೀವಮಾನದ ಕಾಲವೆಲ್ಲಾ ಯೆಹೋವನ ಆಲಯದಲ್ಲಿ ನಾವು ಹಾಡುತ್ತಾ ವಾದ್ಯಬಾರಿಸುತ್ತಾ ಆತನನ್ನು ಸ್ತುತಿಸುವೆವು.”
“ಆಯಿ”ಯ ವಿನಾಶ
8 ಆಗ ಯೆಹೋವನು ಯೆಹೋಶುವನಿಗೆ, “ಭಯಪಡಬೇಡ, ನಿರಾಶೆಗೊಳ್ಳಬೇಡ. ನಿಮ್ಮ ಎಲ್ಲ ಯೋಧರನ್ನು ‘ಆಯಿ’ಗೆ ತೆಗೆದುಕೊಂಡು ಹೋಗು. ‘ಆಯಿ’ಯ ಅರಸನನ್ನು ಸೋಲಿಸಲು ನಾನು ನಿನಗೆ ಸಹಾಯ ಮಾಡುತ್ತೇನೆ. ನಾನು ನಿನಗೆ ಅವನ ಜನರನ್ನು, ಅವನ ಪಟ್ಟಣವನ್ನು ಮತ್ತು ಅವನ ಪ್ರದೇಶವನ್ನು ಕೊಡುವೆನು. 2 ಜೆರಿಕೊ ಮತ್ತು ಅದರ ಅರಸನಿಗೆ ಮಾಡಿದಂತೆಯೇ ನೀವು ‘ಆಯಿ’ ಮತ್ತು ಅದರ ಅರಸನಿಗೆ ಮಾಡಬೇಕು. ಈ ಸಲ ಮಾತ್ರ ನೀವು ಎಲ್ಲ ಸಂಪತ್ತನ್ನು ತೆಗೆದುಕೊಂಡು ನಿಮಗಾಗಿ ಇಟ್ಟುಕೊಳ್ಳಬೇಕು. ನೀವು ಈ ಸಂಪತ್ತನ್ನು ನಿಮ್ಮ ಜನರೊಂದಿಗೆ ಹಂಚಿಕೊಳ್ಳಿರಿ. ಈಗ, ನಿಮ್ಮ ಕೆಲವು ಯೋಧರಿಗೆ ಪಟ್ಟಣದ ಹಿಂಭಾಗದಲ್ಲಿ ಅಡಗಿಕೊಂಡಿರಲು ತಿಳಿಸು” ಅಂದನು.
3 ಯೆಹೋಶುವನು “ಆಯಿ”ಯ ಮೇಲೆ ಆಕ್ರಮಣಮಾಡಲು ಸೈನ್ಯಸಮೇತವಾಗಿ ಹೋದನು. ಮೂವತ್ತು ಸಾವಿರ ಯುದ್ಧವೀರರನ್ನು ಆರಿಸಿಕೊಂಡನು. 4 ಯೆಹೋಶುವನು ಅವರಿಗೆ, “ಗಮನಕೊಟ್ಟು ಕೇಳಿರಿ. ನೀವು ನಗರದ ಹಿಂಭಾಗದ ಸ್ಥಳದಲ್ಲಿ ಅಡಗಿಕೊಂಡಿದ್ದು ಆಕ್ರಮಣಮಾಡಲು ಸಿದ್ಧರಾಗಿರಿ. ನಗರದಿಂದ ಬಹಳ ದೂರ ಹೋಗಬೇಡಿರಿ. 5 ನಾನು ನನ್ನ ಸಂಗಡವಿರುವ ಜನರನ್ನು ಕರೆದುಕೊಂಡು ಪಟ್ಟಣದ ಕಡೆಗೆ ಹೋಗುತ್ತೇನೆ. ಪಟ್ಟಣದೊಳಗಿರುವ ಜನರು ನಮ್ಮ ಸಂಗಡ ಕಾದಾಡಲು ಹೊರಗೆ ಬರುತ್ತಾರೆ. ನಾವು ಮುಂಚಿನಂತೆ ಹಿಂತಿರುಗಿ ಅಲ್ಲಿಂದ ಓಡುತ್ತೇವೆ. 6 ಅವರು ನಗರದಿಂದ ನಮ್ಮನ್ನು ಬೆನ್ನಟ್ಟಿಕೊಂಡು ಬರುತ್ತಾರೆ. ನಾವು ಮುಂಚಿನಂತೆ ಅವರ ಮುಂದೆ ಸೋತು ಓಡಿಹೋಗುತ್ತಿದ್ದೇವೆ ಎಂದು ಅವರು ತಿಳಿದುಕೊಳ್ಳುತ್ತಾರೆ. ಹೀಗೆ ನಾವು ಬಹುದೂರ ಓಡಿಹೋದಾಗ 7 ನೀವು ಯಾವ ಸ್ಥಳದಲ್ಲಿ ಅಡಗಿಕೊಂಡಿದ್ದೀರೋ ಆ ಸ್ಥಳದಿಂದ ಹೊರಬಂದು ಪಟ್ಟಣವನ್ನು ಸ್ವಾಧೀನಪಡಿಸಿಕೊಳ್ಳಬೇಕು. ನಿಮ್ಮ ದೇವರಾದ ಯೆಹೋವನು ನಿಮಗೆ ಗೆಲ್ಲುವ ಸಾಮರ್ಥ್ಯವನ್ನು ದಯಪಾಲಿಸುತ್ತಾನೆ.
8 “ಯೆಹೋವನು ಹೇಳಿದಂತೆಯೇ ನೀವು ಮಾಡಬೇಕು. ನೀವು ಪಟ್ಟಣವನ್ನು ಸ್ವಾಧೀನಪಡಿಸಿಕೊಂಡ ಮೇಲೆ ಅದನ್ನು ಸುಟ್ಟುಹಾಕಬೇಕು. ನನ್ನ ಕಡೆಗೆ ಗಮನವಿರಲಿ! ಆಕ್ರಮಣ ಮಾಡುವುದಕ್ಕೆ ನಾನು ಆಜ್ಞೆಯನ್ನು ಕೊಡುತ್ತೇನೆ” ಎಂದು ಆಜ್ಞಾಪಿಸಿದನು.
9 ಬಳಿಕ ಯೆಹೋಶುವನು ಅವರನ್ನು ಅವರು ಅಡಗಿಕೊಳ್ಳಬೇಕಾದ ಸ್ಥಳಕ್ಕೆ ಕಳುಹಿಸಿದನು. ಅವರು “ಬೇತೇಲ್” ಮತ್ತು “ಆಯಿ”ಯ ಮಧ್ಯದಲ್ಲಿದ್ದ ಒಂದು ಸ್ಥಳಕ್ಕೆ ಹೋದರು. ಇದು ಆಯಿಯ ಪಶ್ಚಿಮಕ್ಕಿತ್ತು. ಯೆಹೋಶುವನು ತನ್ನ ಜನರೊಂದಿಗೆ ಆ ರಾತ್ರಿ ಅಲ್ಲಿಯೇ ಇದ್ದನು.
10 ಮರುದಿನ ಬೆಳಿಗ್ಗೆ ಯೆಹೋಶುವನು ಎಲ್ಲ ಜನರನ್ನು ಒಂದು ಕಡೆ ಬೇಗನೆ ಸೇರಿಸಿದನು. ಆಮೇಲೆ ಯೆಹೋಶುವನು ಮತ್ತು ಇಸ್ರೇಲಿನ ನಾಯಕರು ಜನರನ್ನು “ಆಯಿ”ಗೆ ಮುನ್ನಡೆಸಿದರು. 11 ಅವನ ಜೊತೆಗಿದ್ದ ಎಲ್ಲ ಸೈನಿಕರು “ಆಯಿ”ಯ ಕಡೆಗೆ ಹೋದರು. ಅವರು ನಗರದ ಮುಂದುಗಡೆ ನಿಂತರು. ಸೈನ್ಯವು ನಗರದ ಉತ್ತರ ದಿಕ್ಕಿನಲ್ಲಿಳಿದುಕೊಂಡಿತು. ಈ ಸೈನ್ಯ ಮತ್ತು “ಆಯಿ” ಪಟ್ಟಣದ ನಡುವೆ ಒಂದು ಕಣಿವೆ ಇತ್ತು.
12 ಆಗ ಯೆಹೋಶುವನು ಸುಮಾರು ಐದು ಸಾವಿರ ಜನರನ್ನು ಆರಿಸಿ ಪಟ್ಟಣದ ಪಶ್ಚಿಮದಲ್ಲಿರುವ “ಬೇತೇಲ್” ಮತ್ತು “ಆಯಿ”ಯ ಮಧ್ಯದಲ್ಲಿರುವ ಕ್ಷೇತ್ರದಲ್ಲಿ ಅಡಗಿಕೊಳ್ಳಲು ಕಳುಹಿಸಿಕೊಟ್ಟನು. 13 ಯೆಹೋಶುವನು ತನ್ನ ಜನರನ್ನು ಯುದ್ಧಕ್ಕೆ ಸಿದ್ಧಗೊಳಿಸಿದ್ದನು. ಮುಖ್ಯ ಪಾಳೆಯವು ಪಟ್ಟಣದ ಉತ್ತರ ದಿಕ್ಕಿನಲ್ಲಿತ್ತು. ಉಳಿದ ಜನರು ಪಶ್ಚಿಮದಲ್ಲಿ ಅಡಗಿಕೊಂಡಿದ್ದರು. ಆ ರಾತ್ರಿ ಯೆಹೋಶುವನು ಕಣಿವೆಗೆ ಹೋದನು.
14 ತರುವಾಯ “ಆಯಿ”ಯ ಅರಸನು ಇಸ್ರೇಲರ ಸೈನ್ಯವನ್ನು ನೋಡಿದನು. ಅರಸನು ಮತ್ತು ಅವನ ಜನರು ಇಸ್ರೇಲರ ಸೈನ್ಯದೊಂದಿಗೆ ಯುದ್ಧಮಾಡಿ ಮುಗಿಸುವುದಕ್ಕಾಗಿ ತ್ವರೆಮಾಡಿ ಹೊರಟರು. “ಆಯಿ”ಯ ಅರಸನು ಪಟ್ಟಣದ ಪೂರ್ವಕ್ಕೆ ಹೋದನು. ಆದ್ದರಿಂದ ಅವನು ಪಟ್ಟಣದ ಹಿಂಭಾಗದಲ್ಲಿ ಅಡಗಿದ್ದ ಸೈನಿಕರನ್ನು ನೋಡಲಿಲ್ಲ.
15 ಯೆಹೋಶುವನು ಮತ್ತು ಇಸ್ರೇಲರ ಎಲ್ಲ ಜನರು “ಆಯಿ”ಯ ಸೈನ್ಯವು ತಮ್ಮನ್ನು ಹಿಮ್ಮೆಟ್ಟುವುದಕ್ಕೆ ಅವಕಾಶ ಮಾಡಿಕೊಟ್ಟರು. ಯೆಹೋಶುವನು ಮತ್ತು ಅವನ ಜನರು ಪೂರ್ವಕ್ಕೆ ಮರಭೂಮಿಯ ಕಡೆಗೆ ಓಡಲು ಪ್ರಾರಂಭಿಸಿದರು. 16 ಯೆಹೋಶುವನನ್ನು ಮತ್ತು ಅವನ ಜನರನ್ನು ಬೆನ್ನಟ್ಟಲು “ಆಯಿ” ಪಟ್ಟಣದಲ್ಲಿದ್ದ ಗಂಡಸರನ್ನೆಲ್ಲ ಕರೆಸಲಾಯಿತು. ಎಲ್ಲ ಜನರು ಪಟ್ಟಣವನ್ನು ಬಿಟ್ಟರು. 17 “ಆಯಿ” ಮತ್ತು ಬೇತೇಲಿನ ಎಲ್ಲ ಜನರು ಇಸ್ರೇಲಿನ ಸೈನ್ಯವನ್ನು ಬೆನ್ನಟ್ಟಿದರು. ಪಟ್ಟಣದ ಬಾಗಿಲನ್ನು ತೆರೆದಿಟ್ಟಿದ್ದರು; ಒಬ್ಬನಾದರೂ ಪಟ್ಟಣದ ರಕ್ಷಣೆಗೆ ಉಳಿದಿರಲಿಲ್ಲ.
18 ಆಗ ಯೆಹೋವನು ಯೆಹೋಶುವನಿಗೆ, “ನಿನ್ನ ಕೈಯಲ್ಲಿರುವ ಈಟಿಯನ್ನು ‘ಆಯಿ’ ಕಡೆಗೆ ಚಾಚು, ಆ ಪಟ್ಟಣವನ್ನು ನಾನು ನಿಮಗೆ ಕೊಟ್ಟಿದ್ದೇನೆ” ಎಂದನು. ಯೆಹೋಶುವನು ತನ್ನ ಈಟಿಯನ್ನು “ಆಯಿ”ಯ ಕಡೆಗೆ ಚಾಚಿದನು. 19 ಅಡಗಿಕೊಂಡಿದ್ದ ಇಸ್ರೇಲಿನ ಜನರು ಇದನ್ನು ನೋಡಿ ಕೂಡಲೇ ತಾವು ಅಡಗಿದ್ದ ಸ್ಥಳದಿಂದ ಹೊರಬಂದು ವೇಗವಾಗಿ ಪಟ್ಟಣದ ಕಡೆಗೆ ಧಾವಿಸಿದರು. ಅವರು ಪಟ್ಟಣವನ್ನು ಪ್ರವೇಶಿಸಿ ಅದನ್ನು ಸ್ವಾಧೀನಪಡಿಸಿಕೊಂಡು ಅದಕ್ಕೆ ಬೆಂಕಿ ಹಚ್ಚಿದರು.
20 “ಆಯಿ”ಯ ಜನರು ಹಿಂತಿರುಗಿ ನೋಡಿದಾಗ ತಮ್ಮ ಪಟ್ಟಣ ಉರಿಯುತ್ತಿರುವುದನ್ನೂ ಹೊಗೆಯು ಆಕಾಶಕ್ಕೆ ಏರುತ್ತಿರುವುದನ್ನೂ ಕಂಡು ತಮ್ಮ ಶಕ್ತಿಯನ್ನೂ ಧೈರ್ಯವನ್ನೂ ಕಳೆದುಕೊಂಡರು. ಅವರು ಇಸ್ರೇಲಿನ ಜನರ ಬೆನ್ನಟ್ಟುವುದನ್ನು ಬಿಟ್ಟರು. ಇಸ್ರೇಲಿನ ಜನರು ಓಡಿಹೋಗುವುದನ್ನು ನಿಲ್ಲಿಸಿ “ಆಯಿ”ಯ ಜನರೊಂದಿಗೆ ಹೋರಾಡತೊಡಗಿದರು. “ಆಯಿ”ಯ ಜನರಿಗೆ ಓಡಿಹೋಗಲು ಸುರಕ್ಷಿತವಾದ ಯಾವ ಸ್ಥಳವೂ ಇರಲಿಲ್ಲ. 21 ಯೆಹೋಶುವನು ಮತ್ತು ಅವನ ಜನರು, ತಮ್ಮ ಸೈನ್ಯವು ಪಟ್ಟಣವನ್ನು ಸ್ವಾಧೀನಪಡಿಸಿಕೊಂಡದ್ದನ್ನು ನೋಡಿದರು. ಅವರು ಪಟ್ಟಣದಿಂದ ಏಳುತ್ತಿರುವ ಹೊಗೆಯನ್ನು ನೋಡಿದರು. ಆಗ ಅವರು ಓಡಿಹೋಗುವುದನ್ನು ನಿಲ್ಲಿಸಿ “ಆಯಿ” ಜನರೊಂದಿಗೆ ಹೋರಾಡಲು ಬಂದರು. 22 ಆಗ ಅಡಗಿಕೊಂಡಿದ್ದ ಜನರು ಯುದ್ಧದಲ್ಲಿ ಸಹಾಯ ಮಾಡಲು ಪಟ್ಟಣದಿಂದ ಹೊರಬಂದರು. ಇಸ್ರೇಲಿನ ಸೈನ್ಯವು “ಆಯಿ”ಯ ಜನರ ಎರಡು ಕಡೆಗೂ ಇತ್ತು. “ಆಯಿ”ಯ ಜನರು ಸಿಕ್ಕಿಬಿದ್ದರು. ಇಸ್ರೇಲರು ಅವರನ್ನು ಸೋಲಿಸಿ ಅವರಲ್ಲಿ ಒಬ್ಬರನ್ನೂ ಜೀವಂತವಾಗಿ ಉಳಿಸಲಿಲ್ಲ. ಅವರಲ್ಲಿ ಒಬ್ಬನಾದರೂ ತಪ್ಪಿಸಿಕೊಳ್ಳಲಾಗಲಿಲ್ಲ. 23 ಆದರೆ “ಆಯಿ”ಯ ಅರಸನನ್ನು ಜೀವಸಹಿತ ಉಳಿಸಿ ಯೆಹೋಶುವನ ಬಳಿಗೆ ತಂದರು.
3 ಯೇಸುವನ್ನು ಕುರಿತು ಯೋಚಿಸಿರಿ. ಪಾಪಪೂರಿತವಾದ ಜನರು ಆತನ ವಿರುದ್ಧವಾಗಿ ಕೆಟ್ಟದ್ದನ್ನು ಮಾಡುವಾಗ ಆತನು ತಾಳ್ಮೆಯಿಂದ ಇದ್ದನು. ಅದೇ ರೀತಿ ನೀವೂ ತಾಳ್ಮೆಯಿಂದಿರಬೇಕು ಮತ್ತು ಧೈರ್ಯಗೆಡಬಾರದು.
ದೇವರು ತಂದೆಯಂತಿದ್ದಾನೆ
4 ನೀವು ಪಾಪದ ವಿರುದ್ಧ ಹೋರಾಡುತ್ತಿದ್ದರೂ ನಿಮ್ಮ ಹೋರಾಟಗಳು ನಿಮ್ಮನ್ನು ಸಾವಿನ ಸಮೀಪಕ್ಕೆ ಇನ್ನೂ ತಂದಿಲ್ಲ. 5 ನೀವು ದೇವರ ಮಕ್ಕಳಾಗಿದ್ದೀರಿ. ಆತನು ನಿಮಗೆ ನೆಮ್ಮದಿಯ ಮಾತುಗಳನ್ನು ನುಡಿಯುತ್ತಾನೆ. ನೀವು ಆ ಮಾತುಗಳನ್ನು ಮರೆತಿರುವಿರಿ:
“ಮಗನೇ, ಪ್ರಭುವಿನ ಶಿಕ್ಷೆಯನ್ನು ತಾತ್ಸಾರ ಮಾಡಬೇಡ.
ಪ್ರಭುವು ನಿನ್ನನ್ನು ಗದರಿಸುವಾಗ ಬೇಸರಗೊಳ್ಳಬೇಡ.
6 ಪ್ರಭುವು ತಾನು ಪ್ರೀತಿಸುವವನನ್ನೇ ದಂಡಿಸುತ್ತಾನೆ;
ಯಾರನ್ನು ಮಗನೆಂದು ಒಪ್ಪಿಕೊಳ್ಳುವನೋ ಅವನನ್ನು ದಂಡಿಸುತ್ತಾನೆ.”(A)
7 ಆದ್ದರಿಂದ ತಂದೆಯು ನೀಡುವ ದಂಡನೆ ಎಂಬುದಾಗಿ ಅವುಗಳನ್ನು ಸಹಿಸಿಕೊಳ್ಳಿ. ತಂದೆಯು ತನ್ನ ಮಕ್ಕಳನ್ನು ದಂಡಿಸುವಂತೆ ದೇವರು ನಿಮ್ಮನ್ನು ಈ ರೀತಿ ಶಿಕ್ಷಿಸುತ್ತಾನೆ. ಎಲ್ಲಾ ಮಕ್ಕಳು ತಮ್ಮ ತಂದೆಗಳಿಂದ ಶಿಕ್ಷಿಸಲ್ಪಡುತ್ತಾರೆ. 8 ನೀವು ಎಂದೂ ಶಿಕ್ಷಿಸಲ್ಪಡದಿದ್ದರೆ ನಿಮ್ಮ ತಂದೆಗೆ ನೀವು ನಿಜವಾದ ಮಕ್ಕಳಲ್ಲ. 9 ಈ ಲೋಕದಲ್ಲಿ ನಮ್ಮೆಲ್ಲರನ್ನೂ ಶಿಕ್ಷಿಸಿದಂಥ ತಂದೆಗಳು ನಮಗಿದ್ದರು. ನಾವು ಅವರನ್ನು ಗೌರವಿಸಿದೆವು. ಆದ್ದರಿಂದ ನಮ್ಮ ಆತ್ಮಗಳಿಗೆ ತಂದೆಯಾಗಿರುವಾತನಿಂದ ದಂಡನೆಗಳನ್ನು ಸ್ವೀಕರಿಸಿಕೊಳ್ಳುವುದು ಬಹಳ ಮುಖ್ಯವಾದದ್ದು. ನಾವು ಹೀಗೆ ಮಾಡಿದರೆ ಜೀವವನ್ನು ಹೊಂದಿಕೊಳ್ಳುವೆವು. 10 ಈ ಲೋಕದ ನಮ್ಮ ತಂದೆಗಳು ನಮ್ಮನ್ನು ಸ್ವಲ್ಪಕಾಲ ದಂಡಿಸಿದರು. ಅವರು ತಮಗೆ ಉತ್ತಮವೆಂದು ತೋರಿದ ರೀತಿಯಲ್ಲಿ ನಮ್ಮನ್ನು ಶಿಕ್ಷಿಸಿದರು. ಆದರೆ ದೇವರು ನಮಗೆ ಸಹಾಯ ಮಾಡಲು ನಮ್ಮನ್ನು ಶಿಕ್ಷಿಸುತ್ತಾನೆ. ಏಕೆಂದರೆ ನಾವೂ ಆತನಂತೆ ಪರಿಶುದ್ಧರಾಗಬೇಕೆಂಬುದೇ ಆತನ ಉದ್ದೇಶ. 11 ಯಾವುದೇ ದಂಡನೆಯಾಗಲಿ ತತ್ಕಾಲಕ್ಕೆ ಸಂತೋಷಕರವಾಗಿರದೆ ದುಃಖಕರವಾಗಿರುತ್ತದೆ. ಆದರೆ ಆ ತರುವಾಯ ದಂಡನೆಯಿಂದ ನಾವು ಕಲಿತುಕೊಂಡು ಯೋಗ್ಯವಾದ ಜೀವಿತವನ್ನು ಆರಂಭಿಸುವುದರ ಮೂಲಕ ನಮಗೆ ಸಮಾಧಾನ ಉಂಟಾಗುತ್ತದೆ.
ಯೋಗ್ಯ ಮಾರ್ಗದಲ್ಲಿ ಜೀವಿಸಿರಿ
12 ನೀವು ದುರ್ಬಲರಾಗಿದ್ದೀರಿ. ಆದ್ದರಿಂದ ನಿಮ್ಮನ್ನು ಮತ್ತೆ ಬಲಪಡಿಸಿಕೊಳ್ಳಿರಿ. 13 ನೀವು ಯೋಗ್ಯವಾದ ಮಾರ್ಗದಲ್ಲಿ ಜೀವಿಸಿದರೆ ರಕ್ಷಣೆ ಹೊಂದುವಿರಿ ಮತ್ತು ನಿಮ್ಮನ್ನು ನಾಶಗೊಳಿಸಲು ನಿಮ್ಮ ಬಲಹೀನತೆಗಳಿಗೆ ಸಾಧ್ಯವಾಗುವುದಿಲ್ಲ.
Kannada Holy Bible: Easy-to-Read Version. All rights reserved. © 1997 Bible League International