Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 34:1-8

ದಾವೀದನು ಹುಚ್ಚನಂತೆ ವರ್ತಿಸಿ, ಅಬೀಮೆಲೆಕನಿಂದ ಹೊರಡಿಸಲ್ಪಟ್ಟಾಗ ರಚಿಸಲ್ಪಟ್ಟಿತು. ರಚನೆಗಾರ: ದಾವೀದ.

[a]34 ನಾನು ಯೆಹೋವನನ್ನು ಎಡೆಬಿಡದೆ ಕೊಂಡಾಡುವೆನು.
    ಆತನ ಸ್ತೋತ್ರವು ಯಾವಾಗಲೂ ನನ್ನ ಬಾಯಲ್ಲಿರುವುದು.
ದೀನರೇ, ನನ್ನ ಮನಸ್ಸು ಯೆಹೋವನಲ್ಲಿ ಹಿಗ್ಗುತ್ತಿರುವುದನ್ನು
    ಕೇಳಿ ಸಂತೋಷಪಡಿರಿ.
ನನ್ನೊಂದಿಗೆ ಯೆಹೋವನನ್ನು ಸ್ತುತಿಸಿರಿ.
    ನಾವು ಒಟ್ಟಾಗಿ ಆತನ ಹೆಸರನ್ನು ಸನ್ಮಾನಿಸೋಣ.
ನಾನು ಯೆಹೋವನ ಸನ್ನಿಧಿಯಲ್ಲಿ ಮೊರೆಯಿಟ್ಟಾಗ ಆತನು ನನಗೆ ಸಹಾಯಮಾಡಿದನು.
    ನನ್ನನ್ನು ಎಲ್ಲಾ ಭೀತಿಗಳಿಂದ ಬಿಡಿಸಿದನು.
ಆತನನ್ನೇ ದೃಷ್ಟಿಸುವವರು ಸಹಾಯವನ್ನು ಹೊಂದಿಕೊಳ್ಳುವರು.[b]
    ಅವರಿಗೆ ಆಶಾಭಂಗವಾಗದು.
ಕಷ್ಟದಲ್ಲಿದ್ದ ಈ ಬಡಮನುಷ್ಯನು ಮೊರೆಯಿಡಲು
    ಯೆಹೋವನು ಕೇಳಿ ಎಲ್ಲಾ ಇಕ್ಕಟ್ಟುಗಳಿಂದ ಬಿಡಿಸಿದನು.
ಯೆಹೋವನ ಭಕ್ತರ ಸುತ್ತಲೂ ಆತನ ದೂತನು
    ದಂಡಿಳಿಸಿ ಕಾವಲಾಗಿದ್ದು ಕಾಪಾಡುವನು.
ಯೆಹೋವನು ಎಷ್ಟು ಒಳ್ಳೆಯವನೆಂಬುದನ್ನು ಅನುಭವದಿಂದಲೇ ತಿಳಿದುಕೊಳ್ಳಿರಿ.
    ಆತನನ್ನು ಆಶ್ರಯಿಸಿಕೊಂಡವರು ಎಷ್ಟೋ ಭಾಗ್ಯವಂತರು.

2 ಸಮುವೇಲನು 17:15-29

ದಾವೀದನಿಗೆ ಹೂಷೈನ ಎಚ್ಚರಿಕೆ

15 ಹೂಷೈಯು ಯಾಜಕರಾದ ಚಾದೋಕನಿಗೆ ಮತ್ತು ಎಬ್ಯಾತಾರನಿಗೆ ಆ ವಿಚಾರಗಳನ್ನು ಹೇಳಿದನು. ಅಬ್ಷಾಲೋಮನಿಗೆ ಮತ್ತು ಇಸ್ರೇಲಿನ ನಾಯಕರಿಗೆ ಅಹೀತೋಫೆಲನು ಮಾಡಿದ ಸಲಹೆಗಳ ವಿಚಾರವನ್ನು ಮತ್ತು ತಾನು ನೀಡಿದ ಸಲಹೆಗಳ ವರದಿಯನ್ನು, ಚಾದೋಕ ಮತ್ತು ಎಬ್ಯಾತಾರನಿಗೆ ತಿಳಿಸಿದನು. 16 ಹೂಷೈಯು ಅವರಿಗೆ, ನೀವು ದಾವೀದನಿಗೆ ಹೀಗೆ ಹೇಳಿರಿ: “ಈ ರಾತ್ರಿ ನದಿಯನ್ನು ದಾಟುವ ಅಡವಿಯಲ್ಲಿ ತಂಗಬೇಡ, ಆದಷ್ಟು ಬೇಗನೆ ನದಿಯನ್ನು ದಾಟಿ ಆಚೆ ಹೋದರೆ ಒಳ್ಳೆಯದು. ಇಲ್ಲವಾದರೆ ನೀನು ನಿನ್ನ ಜನರೊಂದಿಗೆ ನಾಶವಾಗುವೆ” ಎಂದು ಹೇಳಿದನು.

17 ಯಾಜಕರ ಮಕ್ಕಳಾದ ಯೋನಾತಾನನು ಮತ್ತು ಅಹೀಮಾಚನು ಎನ್-ರೋಗೆಲಿನ ಬುಗ್ಗೆಯ ಹತ್ತಿರ ಕಾದಿದ್ದರು. ತಾವು ನಗರದೊಳಕ್ಕೆ ಹೋಗುವುದನ್ನು ಯಾರೂ ನೋಡಬಾರದೆಂದು ಅವರು ಅಲ್ಲಿ ಅಡಗಿಕೊಂಡಿದ್ದರು. ಆದ್ದರಿಂದ ಕೆಲಸದ ಹುಡುಗಿಯೊಬ್ಬಳು ಹೊರಗೆ ಬಂದು ಅವರಿಗೆ ಆ ಸಂದೇಶವನ್ನು ತಿಳಿಸಿದಳು. ಬಳಿಕ ಯೋನಾತಾನನು ಮತ್ತು ಅಹೀಮಾಚನು ದಾವೀದ ರಾಜನ ಬಳಿಗೆ ಹೋಗಿ ಅದನ್ನು ತಿಳಿಸಿದರು.

18 ಆದರೆ ಯೋನಾತಾನ್ ಮತ್ತು ಅಹೀಮಾಚರನ್ನು ಒಬ್ಬ ಬಾಲಕನು ನೋಡಿದನು. ಆ ಬಾಲಕನು ಅಬ್ಷಾಲೋಮನಿಗೆ ತಿಳಿಸಲು ಓಡಿದನು. ಯೋನಾತಾನನು ಮತ್ತು ಅಹೀಮಾಚನು ಬೇಗನೆ ಓಡಿಹೋಗಿ ಬಹುರೀಮಿನಲ್ಲಿ ಒಬ್ಬನ ಮನೆಯೊಳಗೆ ಹೋದರು. ಅವನ ಮನೆಯ ಅಂಗಳದಲ್ಲಿ ಒಂದು ಬಾವಿಯಿತ್ತು. ಯೋನಾತಾನನು ಮತ್ತು ಅಹೀಮಾಚನು ಈ ಬಾವಿಯೊಳಗೆ ಇಳಿದರು. 19 ಆ ಮನುಷ್ಯನ ಹೆಂಡತಿಯು ಒಂದು ಹಲಗೆಯನ್ನು ಬಾವಿಯ ಮೇಲೆ ಹಾಕಿದಳು. ನಂತರ ಅವಳು ಅದರ ಮೇಲೆ ಗೋಧಿಯನ್ನು ಹರಡಿದಳು. ಅದು ಗೋಧಿಯ ರಾಶಿಯಂತೆ ಕಂಡಿತು. ಆದ್ದರಿಂದ ಯೋನಾತಾನನು ಮತ್ತು ಅಹೀಮಾಚರು ಅಲ್ಲಿ ಅಡಗಿಕೊಂಡಿದ್ದಾರೆಂಬುದು ಯಾರಿಗೂ ಗೊತ್ತಾಗಲಿಲ್ಲ. 20 ಅಬ್ಷಾಲೋಮನ ಸೇವಕರು ಆ ಮನೆಯಲ್ಲಿದ್ದ ಹೆಂಗಸಿನ ಬಳಿಗೆ ಬಂದು, “ಅಹೀಮಾಚ್ ಮತ್ತು ಯೋನಾತಾನರು ಎಲ್ಲಿ?” ಎಂದು ಕೇಳಿದರು.

ಆ ಸ್ತ್ರೀಯು ಅಬ್ಷಾಲೋಮನ ಸೇವಕರಿಗೆ, “ಅವರು ಈಗಾಗಲೇ ಹಳ್ಳವನ್ನು ದಾಟಿಹೋಗಿರಬೇಕು” ಎಂದಳು.

ಆಗ ಅಬ್ಷಾಲೋಮನ ಸೇವಕರು ಯೋನಾತಾನ್ ಮತ್ತು ಅಹೀಮಾಚರನ್ನು ಹುಡುಕಲು ಹೋದರು. ಆದರೆ ಅವರು ಸೇವಕರಿಗೆ ಸಿಗಲಿಲ್ಲ. ಆದ್ದರಿಂದ ಅಬ್ಷಾಲೋಮನ ಸೇವಕರು ಜೆರುಸಲೇಮಿಗೆ ಹಿಂದಿರುಗಿದರು.

21 ಅಬ್ಷಾಲೋಮನ ಸೈನಿಕರು ಹೋದ ಮೇಲೆ ಯೋನಾತಾನ್ ಮತ್ತು ಅಹೀಮಾಚರು ಬಾವಿಯಿಂದ ಮೇಲಕ್ಕೆ ಬಂದರು. ಅವರು ಅರಸನಾದ ದಾವೀದನ ಬಳಿಗೆ ಹೋಗಿ, “ಬೇಗ, ನದಿಯನ್ನು ದಾಟಿಹೋಗು. ಅಹೀತೋಫೆಲನು ನಿನ್ನ ವಿರುದ್ಧವಾಗಿ ಈ ಸಂಗತಿಗಳನ್ನು ಹೇಳಿದ್ದಾನೆ” ಎಂದರು.

22 ದಾವೀದನು ಮತ್ತು ಅವನ ಜನರೆಲ್ಲರೂ ಜೋರ್ಡನ್ ನದಿಯನ್ನು ದಾಟಿಹೋದರು. ಸೂರ್ಯನು ಮೇಲೇರುವುದಕ್ಕೆ ಮುಂಚೆಯೇ, ದಾವೀದನ ಜನರೆಲ್ಲರೂ ಜೋರ್ಡನ್ ನದಿಯನ್ನು ದಾಟಿಹೋಗಿದ್ದರು.

ಅಹೀತೋಫೆಲನು ಆತ್ಮಹತ್ಯೆ ಮಾಡಿಕೊಂಡಿದ್ದು

23 ಅಹೀತೋಫೆಲನು ತನ್ನ ಸಲಹೆಯನ್ನು ಇಸ್ರೇಲರು ಸ್ವೀಕರಿಸಲಿಲ್ಲವೆಂಬುದನ್ನು ತಿಳಿದು ತನ್ನ ಹೇಸರಕತ್ತೆಯ ಮೇಲೆ ತಡಿಯನ್ನು ಹಾಕಿ ತನ್ನ ಸ್ವಂತ ಊರಿನಲ್ಲಿದ್ದ ಮನೆಗೆ ಹೋದನು. ಅವನು ತನ್ನ ಕುಟುಂಬಕ್ಕೆ ಯೋಜನೆಗಳನ್ನು ಮಾಡಿದನು. ನಂತರ ಅವನೇ ನೇಣು ಹಾಕಿಕೊಂಡು ಸತ್ತನು. ಅಹೀತೋಫೆಲನನ್ನು ಜನರು ಅವನ ತಂದೆಯ ಸಮಾಧಿಯ ಬಳಿ ಸಮಾಧಿ ಮಾಡಿದರು.

ಅಬ್ಷಾಲೋಮನು ಜೋರ್ಡನ್ ನದಿಯನ್ನು ದಾಟಿದ್ದು

24 ದಾವೀದನು ಮಹನಯಿಮಿಗೆ ಬಂದನು. ಅಬ್ಷಾಲೋಮನು ಮತ್ತು ಇಸ್ರೇಲರೆಲ್ಲರೂ ಜೋರ್ಡನ್ ನದಿಯನ್ನು ದಾಟಿದರು. 25 ಅಬ್ಷಾಲೋಮನು ಅಮಾಸನನ್ನು ಸೈನ್ಯದ ಅಧಿಪತಿಯನ್ನಾಗಿ ಮಾಡಿದನು. ಅಮಾಸನು ಯೋವಾಬನ ಸ್ಥಾನಕ್ಕೆ ಬಂದನು.[a] ಅಮಾಸನು ಇಸ್ರೇಲನಾದ ಇತ್ರನ ಮಗ. ಅಮಾಸನ ತಾಯಿಯಾದ ಅಬೀಗಲಳು, ನಾಹಾಷನ ಮಗಳು ಮತ್ತು ಚೆರೂಯಳ ಸೋದರಿ. 26 ಅಬ್ಷಾಲೋಮನು ಮತ್ತು ಇಸ್ರೇಲರು ಗಿಲ್ಯಾದ್ ದೇಶದಲ್ಲಿ ಪಾಳೆಯವನ್ನು ಮಾಡಿದರು.

ಶೋಬಿ, ಮಾಕೀರ್ ಮತ್ತು ಬರ್ಜಿಲ್ಲೈಯರು

27 ದಾವೀದನು ಮಹನಯಿಮಿಗೆ ಬಂದನು. ಶೋಬಿ, ಮಾಕೀರ್ ಮತ್ತು ಬರ್ಜಿಲ್ಲೈಯರು ಆ ಸ್ಥಳದಲ್ಲಿದ್ದರು. (ಶೋಬಿಯು ಅಮ್ಮೋನಿಯರ ಪಟ್ಟಣವಾದ ರಬ್ಬಾದ ಊರಿನ ನಾಹಾಷನ ಮಗ. ಮಾಕೀರನು ಲೋದೆಬಾರಿನ ಅಮ್ಮೀಯೇಲನ ಮಗ. ಬರ್ಜಿಲ್ಲೈಯು ಗಿಲ್ಯಾದ್ ನಾಡಿನ ರೋಗೆಲೀಮ್ ನಗರದವನು.) 28-29 ಅವರು, “ಅರಣ್ಯದಲ್ಲಿ ಪ್ರಯಾಣಮಾಡಿ ಜನರು ದಣಿದಿದ್ದಾರೆ, ಹಸಿದಿದ್ದಾರೆ ಮತ್ತು ದಾಹಗೊಂಡಿದ್ದಾರೆ” ಎಂದು ಹೇಳಿ, ದಾವೀದನಿಗೂ ಅವನ ಜನರಿಗೂ ತಿನ್ನಲು ಅನೇಕ ಆಹಾರಪದಾರ್ಥಗಳನ್ನು ತಂದರು. ಅವರು ಹಾಸಿಗೆಗಳನ್ನು, ಬಟ್ಟಲುಗಳನ್ನು ಮತ್ತು ಮಡಕೆಕುಡಿಕೆಗಳನ್ನು, ಗೋಧಿ, ಬಾರ್ಲಿ, ಹಿಟ್ಟು, ಹುರಿದಕಾಳುಗಳು, ಅವರೆ, ಅಲಸಂದಿ, ಒಣಗಿಸಿದ ಬೇಳೆ, ಜೇನುತುಪ್ಪ, ಬೆಣ್ಣೆ, ಕುರಿ ಮತ್ತು ಹಸುವಿನ ಹಾಲಿನಿಂದ ಮಾಡಿದ ಗಿಣ್ಣು ಇವುಗಳನ್ನು ತಂದುಕೊಟ್ಟರು.

ಗಲಾತ್ಯದವರಿಗೆ 6:1-10

ಒಬ್ಬರಿಗೊಬ್ಬರು ಸಹಾಯ ಮಾಡಿರಿ

ಸಹೋದರ ಸಹೋದರಿಯರೇ, ನಿಮ್ಮ ಸಭೆಯಲ್ಲಿ ಯಾವನಾದರೂ ತಪ್ಪು ಮಾಡಿದರೆ, ಆತ್ಮಿಕರಾದ ನೀವು ಅವನ ಬಳಿಗೆ ಹೋಗಿ ಸೌಮ್ಯತೆಯಿಂದ ಅವನನ್ನು ತಿದ್ದಿ ಸರಿಪಡಿಸಬೇಕು. ಆದರೆ ಎಚ್ಚರಿಕೆಯಿಂದಿರಿ! ನೀವು ಸಹ ಶೋಧನೆಗೊಳಗಾಗಿ ಪಾಪಕ್ಕೆ ಬೀಳುವ ಸಾಧ್ಯವಿದೆ. ನಿಮ್ಮ ಭಾರವಾದ ಹೊರೆಗಳನ್ನು ಹೊರಲು ಒಬ್ಬರಿಗೊಬ್ಬರು ಸಹಾಯಮಾಡಿರಿ. ಹೀಗೆ ನೀವು ಕ್ರಿಸ್ತನ ಆಜ್ಞೆಯನ್ನು ನಿಜವಾಗಿಯೂ ಅನುಸರಿಸಿರಿ. ಯಾವನಾದರೂ ತಾನು ಪ್ರಾಮುಖ್ಯನಲ್ಲದಿದ್ದರೂ ತನ್ನನ್ನು ಪ್ರಾಮುಖ್ಯನೆಂದು ಭಾವಿಸಿಕೊಂಡರೆ ಅವನು ತನ್ನನ್ನೇ ಮೋಸಪಡಿಸಿಕೊಳ್ಳುತ್ತಾನೆ. ಒಬ್ಬನು ತನ್ನನ್ನು ಮತ್ತೊಬ್ಬನೊಡನೆ ಹೋಲಿಸಿಕೊಳ್ಳಕೂಡದು. ಪ್ರತಿಯೊಬ್ಬನು ತನ್ನ ನಡತೆಯನ್ನು ತಾನೇ ವಿಮರ್ಶಿಸಿಕೊಳ್ಳಲಿ. ಆಗ ತಾನೇನಾದರೂ ಹೆಚ್ಚಳಪಡುವಂತ ಕಾರ್ಯಗಳನ್ನು ಮಾಡಿದ್ದರೆ ಅವನಿಗೆ ತಿಳಿಯುವುದು. ಪ್ರತಿಯೊಬ್ಬನು ತನ್ನ ಜವಾಬ್ದಾರಿಕೆಯನ್ನು ತಾನೇ ಹೊತ್ತುಕೊಳ್ಳಬೇಕು.

ಜೀವನವು ಜಮೀನಿನಲ್ಲಿ ಬಿತ್ತುವಂತಿದೆ

ದೇವರ ವಾಕ್ಯವನ್ನು ಕಲಿತುಕೊಳ್ಳುವವನು, (ತನಗೆ) ಕಲಿಸುವವನಿಗೆ ತನ್ನಲ್ಲಿರುವ ಎಲ್ಲಾ ಒಳ್ಳೆತನಗಳಲ್ಲಿ ಪಾಲು ಕೊಡತಕ್ಕದ್ದು.

ಮೋಸಹೋಗಬೇಡಿರಿ! ನೀವು ದೇವರನ್ನು ವಂಚಿಸಲು ಸಾಧ್ಯವಿಲ್ಲ. ಒಬ್ಬನು ತಾನು ಏನು ಬಿತ್ತುತ್ತಾನೋ ಅದನ್ನೇ ಕೊಯ್ಯುತ್ತಾನೆ. ಒಬ್ಬನು ತನ್ನ ಶರೀರಭಾವವನ್ನು ತೃಪ್ತಿಪಡಿಸುವುದಕ್ಕಾಗಿ ಪಾಪ ಕಾರ್ಯಗಳನ್ನು ಮಾಡಿದರೆ ಆ ಶರೀರಭಾವವು ಅವನಿಗೆ ನಿತ್ಯನಾಶವನ್ನು ಬರಮಾಡುತ್ತದೆ. ಆದರೆ ಒಬ್ಬನು ಪವಿತ್ರಾತ್ಮನನ್ನು ಮೆಚ್ಚಿಸುವುದಕ್ಕಾಗಿ ಒಳ್ಳೆಯ ಕಾರ್ಯಗಳನ್ನು ಮಾಡುವುದಾಗಿದ್ದರೆ, ಅವನು ಪವಿತ್ರಾತ್ಮನಿಂದ ನಿತ್ಯಜೀವವನ್ನು ಹೊಂದಿಕೊಳ್ಳುವನು. ನಾವು ಒಳ್ಳೆಯ ಕಾರ್ಯ ಮಾಡುವುದರಲ್ಲಿ ಬೇಸರಗೊಳ್ಳಬಾರದು. ತಕ್ಕ ಸಮಯದಲ್ಲಿ ನಾವು ನಿತ್ಯಜೀವವೆಂಬ ಸುಗ್ಗಿಯನ್ನು ಪಡೆಯುವೆವು. ಆದ್ದರಿಂದ ಒಳ್ಳೆಯ ಕಾರ್ಯ ಮಾಡುವುದನ್ನು ನಾವು ಬಿಟ್ಟುಬಿಡಬಾರದು. 10 ಯಾರಿಗಾದರೂ ಒಳ್ಳೆಯದನ್ನು ಮಾಡಲು ಅವಕಾಶವಿರುವಾಗ ನಾವು ಮಾಡಲೇಬೇಕು. ಅದರಲ್ಲೂ ಒಂದೇ ಕುಟುಂಬದವರಂತಿರುವ ವಿಶ್ವಾಸಿಗಳ ಬಗ್ಗೆ ನಾವು ವಿಶೇಷವಾದ ಗಮನ ಕೊಡಬೇಕು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International