Revised Common Lectionary (Complementary)
ರಚನೆಗಾರ: ಆಸಾಫ.
78 ನನ್ನ ಜನರೇ, ನನ್ನ ಉಪದೇಶಗಳಿಗೆ ಕಿವಿಗೊಡಿರಿ;
ನನ್ನ ನುಡಿಗಳನ್ನು ಲಾಲಿಸಿರಿ.
2 ನಾನು ಬಾಯ್ದೆರೆದು ಸಾಮ್ಯರೂಪವಾಗಿ ಉಪದೇಶಿಸುವೆನು;
ಪೂರ್ವಕಾಲದ ಗೂಡಾರ್ಥಗಳನ್ನು ಹೊರಪಡಿಸುವೆನು.
3 ನಾವು ಅವುಗಳನ್ನು ಕಿವಿಯಾರೆ ಕೇಳಿದ್ದೇವೆ.
ನಮ್ಮ ಪೂರ್ವಿಕರೇ ಅವುಗಳನ್ನು ನಮಗೆ ಹೇಳಿದರು.
4 ನಾವು ಅವುಗಳನ್ನು ಮರೆಯುವುದೇ ಇಲ್ಲ.
ನಮ್ಮ ಜನರು ಕೊನೆಯ ತಲೆಮಾರಿನವರೆಗೂ ಅವುಗಳನ್ನು ಹೇಳುತ್ತಲೇ ಇರುವರು.
ನಾವೆಲ್ಲರೂ ಯೆಹೋವನ ಪರಾಕ್ರಮವನ್ನೂ
ಅದ್ಭುತಕಾರ್ಯಗಳನ್ನೂ ಹೇಳುತ್ತಾ ಕೊಂಡಾಡುವೆವು.
52 ಬಳಿಕ ಆತನು ಕುರುಬನಂತೆ ಇಸ್ರೇಲನ್ನು ನಡೆಸಿದನು.
ಆತನು ತನ್ನ ಜನರನ್ನು ಕುರಿಗಳಂತೆ ಅರಣ್ಯದಲ್ಲಿ ನಡೆಸಿದನು.
53 ಆತನು ಅವರಿಗೆ ಮಾರ್ಗದರ್ಶನ ಮಾಡುತ್ತಾ
ಸುರಕ್ಷಿತವಾಗಿ ಮುನ್ನಡೆಸಿದನು.
ಆತನ ಜನರು ಯಾವುದಕ್ಕೂ ಭಯಪಡುವ ಅಗತ್ಯವಿರಲಿಲ್ಲ.
ಅವರ ಶತ್ರುಗಳನ್ನು ಆತನು ಕೆಂಪು ಸಮುದ್ರದಲ್ಲಿ ಮುಳುಗಿಸಿದನು.
54 ಆತನು ತನ್ನ ಜನರನ್ನು ತನ್ನ ಪವಿತ್ರನಾಡಿಗೂ
ತನ್ನ ಭುಜಬಲದಿಂದ ತೆಗೆದುಕೊಂಡ ಪರ್ವತಕ್ಕೂ ನಡೆಸಿದನು.
55 ಆ ನಾಡಿನ ಜನಾಂಗಗಳನ್ನು ಆತನು ಬಲವಂತವಾಗಿ ಹೊರಗಟ್ಟಿದನು.
ಆತನು ಇಸ್ರೇಲಿನ ಪ್ರತಿಯೊಂದು ಕುಲಕ್ಕೂ ಆ ನಾಡಿನಲ್ಲಿ ಪಾಲುಕೊಟ್ಟನು;
ಆ ನಾಡಿನ ಮನೆಗಳಲ್ಲಿ ಅವರನ್ನು ನೆಲೆಗೊಳಿಸಿದನು.
56 ಆದರೆ ಇಸ್ರೇಲರು ಮಹೋನ್ನತನಾದ ದೇವರನ್ನು ಪರೀಕ್ಷಿಸಿ ಆತನನ್ನು ಬಹಳವಾಗಿ ನೋಯಿಸಿದರು.
ಅವರು ಆತನ ಆಜ್ಞೆಗಳಿಗೆ ವಿಧೇಯರಾಗಲಿಲ್ಲ.
57 ಇಸ್ರೇಲರು ಆತನಿಗೆ ವಿಮುಖರಾದರು; ತಮ್ಮ ಪೂರ್ವಿಕರಂತೆಯೇ ಆತನಿಗೆ ವಿರೋಧವಾಗಿ ತಿರುಗಿದರು.
ತಿರುಗುಬಾಣದಂತೆ ತಮ್ಮ ದಿಕ್ಕನ್ನು ಬದಲಾಯಿಸಿಕೊಂಡರು.
58 ಇಸ್ರೇಲರು ಎತ್ತರವಾದ ಸ್ಥಳಗಳನ್ನು ನಿರ್ಮಿಸಿ, ಆತನನ್ನು ಕೋಪಗೊಳಿಸಿದರು.
ಸುಳ್ಳುದೇವರುಗಳ ವಿಗ್ರಹಗಳನ್ನು ರೂಪಿಸಿ ಆತನನ್ನು ರೇಗಿಸಿದರು.
59 ದೇವರು ಇದನ್ನು ತಿಳಿದು ಬಹು ಕೋಪಗೊಂಡನು,
ಆತನು ಇಸ್ರೇಲರನ್ನು ಸಂಪೂರ್ಣವಾಗಿ ತಿರಸ್ಕರಿಸಿದನು!
60 ಶೀಲೋವಿನಲ್ಲಿದ್ದ ತನ್ನ ಪವಿತ್ರ ಗುಡಾರವನ್ನು ಆತನು ತೊರೆದುಬಿಟ್ಟನು.
ಅವರ ಮಧ್ಯದಲ್ಲಿ ಆತನು ವಾಸಮಾಡಿದ್ದು ಆ ಗುಡಾರದಲ್ಲಿಯೇ.
61 ಆತನು ತನ್ನ ಜನರನ್ನು ಇತರ ಜನಾಂಗಗಳ ವಶಕ್ಕೆ ಕೊಟ್ಟನು.
ಶತ್ರುಗಳು ಆತನ “ಸುಂದರವಾದ ಆಭರಣವನ್ನು” ತೆಗೆದುಕೊಂಡರು.
62 ಆತನು ತನ್ನ ಜನರಿಗೆ ವಿರೋಧವಾಗಿ ತನ್ನ ಕೋಪವನ್ನು ತೋರಿದನು.
ಯುದ್ಧದಲ್ಲಿ ಅವರಿಗೆ ಮರಣವಾಗುವಂತೆ ಮಾಡಿದನು.
63 ಯುವಕರು ಬೆಂಕಿಯ ಪಾಲಾದರು.
ಅವರಿಗೆ ನಿಶ್ಚಿತಾರ್ಥವಾಗಿದ್ದ ಕನ್ಯೆಯರು ವಿವಾಹಗೀತೆಯನ್ನು ಹಾಡಲಿಲ್ಲ.
64 ಯಾಜಕರು ಕತ್ತಿಯಿಂದ ಕೊಲ್ಲಲ್ಪಟ್ಟರು,
ಆದರೆ ವಿಧವೆಯರು ಅವರಿಗಾಗಿ ಗೋಳಾಡಲಿಲ್ಲ.
65 ಕೊನೆಗೆ, ನಿದ್ದೆಯಿಂದ ಎಚ್ಚರಗೊಳ್ಳುತ್ತಿರುವ ಮನುಷ್ಯನಂತೆಯೂ
ಅಮಲಿಳಿದು ಎಚ್ಚರಗೊಳ್ಳುತ್ತಿರುವ ಸೈನಿಕನಂತೆಯೂ ನಮ್ಮ ಯೆಹೋವನು ಎದ್ದನು.
66 ಆತನು ತನ್ನ ಶತ್ರುಗಳನ್ನು ಸದೆಬಡಿದು ಸೋಲಿಸಿದನು.
ಆತನು ತನ್ನ ಶತ್ರುಗಳನ್ನು ಸೋಲಿಸಿ ಅವರನ್ನು ನಿತ್ಯನಿಂದೆಗೆ ಗುರಿಮಾಡಿದನು.
67 ಆದರೆ ಆತನು ಯೋಸೇಫನ ಕುಲವನ್ನು ತಿರಸ್ಕರಿಸಿದನು.
ಎಫ್ರಾಯೀಮನ ಕುಲವನ್ನೂ ಆತನು ಆರಿಸಿಕೊಳ್ಳಲಿಲ್ಲ.
68 ಆತನು ಯೆಹೂದಕುಲವನ್ನೇ ಆರಿಸಿಕೊಂಡನು.
ಆತನು ತನ್ನ ಪ್ರಿಯ ಚೀಯೋನ್ ಪರ್ವತವನ್ನೇ ಆರಿಸಿಕೊಂಡನು.
69 ಆತನು ತನ್ನ ಪವಿತ್ರಾಲಯವನ್ನು ಆ ಪರ್ವತದ ಮೇಲೆ ಕಟ್ಟಿ
ಅದನ್ನು ಭೂಮಿಯಂತೆ ಶಾಶ್ವತಗೊಳಿಸಿದನು.
70 ಆತನು ದಾವೀದನನ್ನು ತನ್ನ ವಿಶೇಷ ಸೇವಕನನ್ನಾಗಿ ಆರಿಸಿಕೊಂಡನು.
ದಾವೀದನು ಕುರಿಹಟ್ಟಿಗಳನ್ನು ಕಾಯುತ್ತಿದ್ದನು.
71 ಆತನು ದಾವೀದನಿಗೆ ಕುರಿಗಳನ್ನು ಪರಿಪಾಲನೆ ಮಾಡುವ ಕೆಲಸದಿಂದ ತೆಗೆದುಹಾಕಿ
ತನ್ನ ಜನರಾದ ಯಾಕೋಬ್ಯರನ್ನೂ ತನ್ನ ಆಸ್ತಿಯಾದ ಇಸ್ರೇಲರನ್ನೂ ಪರಿಪಾಲಿಸುವ ಉದ್ಯೋಗವನ್ನು ಕೊಟ್ಟನು.
72 ದಾವೀದನು ಯಥಾರ್ಥಹೃದಯದಿಂದಲೂ
ಬಹು ವಿವೇಕದಿಂದಲೂ ಇಸ್ರೇಲರನ್ನು ನಡೆಸಿದನು.
ದಾವೀದನು ಯಾಜಕನಾದ ಅಹೀಮೆಲೆಕನನ್ನು ನೋಡಲು ಹೋದನು
21 ನಂತರ ದಾವೀದನು ಹೊರಟುಹೋದನು. ಯೋನಾತಾನನು ಪಟ್ಟಣಕ್ಕೆ ಹಿಂದಿರುಗಿದನು. ದಾವೀದನು ನೋಬ್ ಎಂಬ ಪಟ್ಟಣದ ಯಾಜಕನಾದ ಅಹೀಮೆಲೆಕನನ್ನು ನೋಡಲು ಹೋದನು.
ಅಹೀಮೆಲೆಕನು ದಾವೀದನನ್ನು ಸಂಧಿಸಲು ಹೊರಗೆ ಬಂದನು. ಅಹೀಮೆಲೆಕನು ಭಯದಿಂದ ನಡುಗುತ್ತಿದ್ದನು. ಅಹೀಮೆಲೆಕನು ದಾವೀದನಿಗೆ, “ನೀನು ಒಬ್ಬಂಟಿಗನಾಗಿ ಬಂದಿರುವುದೇಕೆ? ಬೇರೆ ಯಾವ ವ್ಯಕ್ತಿಯೂ ನಿನ್ನ ಜೊತೆಯಲ್ಲಿಲ್ಲದಿರುವುದೇಕೆ?” ಎಂದು ಕೇಳಿದನು.
2 ದಾವೀದನು ಅಹೀಮೆಲೆಕನಿಗೆ, “ರಾಜನು ನನಗೆ ಒಂದು ವಿಶೇಷ ಆಜ್ಞೆಯನ್ನು ಕೊಟ್ಟಿರುವನು. ಅವನು ನನಗೆ, ‘ಈ ಕೆಲಸದ ಬಗ್ಗೆ ಬೇರೆ ಯಾರಿಗೂ ತಿಳಿಸಬೇಡ. ನಾನು ನಿನಗೆ ಮಾಡಲು ಹೇಳಿದ ಕೆಲಸವು ಯಾರಿಗೂ ತಿಳಿಯಕೂಡದು’ ಎಂದು ಹೇಳಿದ್ದಾನೆ. ನಾನು ನನ್ನ ಜನರಿಗೆ ನನ್ನನ್ನು ಎಲ್ಲಿ ಭೇಟಿಯಾಗಬೇಕೆಂದು ತಿಳಿಸಿದ್ದೇನೆ. 3 ಈಗ, ನಿನ್ನ ಬಳಿ ತಿನ್ನಲು ಏನಾದರೂ ಆಹಾರವಿದೆಯೋ? ನನಗೆ ಐದು ರೊಟ್ಟಿಗಳನ್ನಾಗಲಿ ಅಥವಾ ಬೇರೆ ಯಾವ ಆಹಾರಪದಾರ್ಥವನ್ನಾಗಲಿ ಕೊಡು” ಎಂದು ಹೇಳಿದನು.
4 ಯಾಜಕನು ದಾವೀದನಿಗೆ, “ನನ್ನ ಬಳಿ ಸಾಧಾರಣವಾದ ರೊಟ್ಟಿಗಳಿಲ್ಲ. ಆದರೆ ಕೆಲವು ಪವಿತ್ರ ರೊಟ್ಟಿಗಳಿವೆ. ನಿನ್ನ ಸೈನಿಕರು ಯಾವ ಹೆಂಗಸಿನೊಡನೆಯೂ ಲೈಂಗಿಕ ಸಂಬಂಧ ಮಾಡಿಲ್ಲದಿದ್ದರೆ ಅವರು ಅವುಗಳನ್ನು ತಿನ್ನಬಹುದು” ಎಂದನು.
5 ದಾವೀದನು ಯಾಜಕನಿಗೆ, “ನಾವು ಯಾವ ಹೆಂಗಸಿನೊಂದಿಗೂ ಲೈಂಗಿಕ ಸಂಬಂಧ ಹೊಂದಿಲ್ಲ. ನನ್ನ ಜನರು ಯುದ್ಧಕ್ಕೆ ಹೋಗುವಾಗಲೂ ಸಾಧಾರಣಕಾರ್ಯಕ್ಕೆ ಹೋಗುವಾಗಲೂ ತಮ್ಮ ದೇಹಗಳನ್ನು ಶುಚಿಯಾಗಿಟ್ಟುಕೊಳ್ಳುತ್ತಾರೆ. ನಮ್ಮ ಇಂದಿನ ಕಾರ್ಯವು ವಿಶೇಷವಾದ್ದರಿಂದ ನಾವು ಖಂಡಿತವಾಗಿ ಪವಿತ್ರರಾಗಿದ್ದೇವೆ” ಎಂದು ಹೇಳಿದನು.
6 ಅಲ್ಲಿ ಪವಿತ್ರ ರೊಟ್ಟಿಯ ಹೊರತು ಬೇರೆ ರೊಟ್ಟಿಯು ಇರಲಿಲ್ಲ. ಆದ್ದರಿಂದ ಯಾಜಕನು ಆ ರೊಟ್ಟಿಯನ್ನು ದಾವೀದನಿಗೆ ಕೊಟ್ಟನು. ಯಾಜಕರು ಯೆಹೋವನ ಸನ್ನಿಧಿಯಲ್ಲಿ ಪವಿತ್ರ ಮೇಜಿನ ಮೇಲಿಟ್ಟಿದ್ದ ರೊಟ್ಟಿಯೇ ಅದಾಗಿತ್ತು. ಈ ರೊಟ್ಟಿಯನ್ನು ಪ್ರತಿದಿನವೂ ಹೊರ ತೆಗೆಯುತ್ತಿದ್ದರು ಮತ್ತು ಹೊಸ ರೊಟ್ಟಿಯನ್ನು ಆ ಸ್ಥಳದಲ್ಲಿ ಇಡುತ್ತಿದ್ದರು.
ಕೊಳದ ಬಳಿ ಗುಣಹೊಂದಿದ ರೋಗಿ
5 ತರುವಾಯ ಯೇಸು ಯೆಹೂದ್ಯರ ಒಂದು ಹಬ್ಬಕ್ಕಾಗಿ ಜೆರುಸಲೇಮಿಗೆ ಹೋದನು. 2 ಜೆರುಸಲೇಮಿನಲ್ಲಿ ಐದು ಮಂಟಪಗಳಿಂದ ಕೂಡಿದ ಒಂದು ಕೊಳವಿದೆ. ಯೆಹೂದ್ಯರ ಭಾಷೆಯಲ್ಲಿ ಅದಕ್ಕೆ “ಬೆತ್ಸಥ” ಎಂದು ಕರೆಯುತ್ತಾರೆ. ಈ ಕೊಳವು “ಕುರಿಬಾಗಿಲು” ಎಂಬ ಸ್ಥಳದ ಸಮೀಪದಲ್ಲಿದೆ. 3 ಕೊಳದ ಬಳಿಯಲ್ಲಿದ್ದ ಮಂಟಪಗಳಲ್ಲಿ ಅನೇಕ ರೋಗಿಗಳು ಬಿದ್ದುಕೊಂಡಿರುತ್ತಿದ್ದರು. ಅವರಲ್ಲಿ ಕೆಲವರು ಕುರಡರಾಗಿದ್ದರು, ಕೆಲವರು ಕುಂಟರಾಗಿದ್ದರು, ಮತ್ತೆ ಕೆಲವರು, ಪಾರ್ಶ್ವವಾಯು ರೋಗಿಗಳಾಗಿದ್ದರು.[a] 4 [b] 5 ಮೂವತ್ತೆಂಟು ವರ್ಷಗಳಿಂದ ರೋಗಿಯಾಗಿದ್ದ ಒಬ್ಬನು ಅಲ್ಲಿ ಬಿದ್ದುಕೊಂಡಿದ್ದನು. 6 ಯೇಸು ಅವನನ್ನು ನೋಡಿದನು. ಅವನು ಬಹುಕಾಲದಿಂದ ರೋಗಿಯಾಗಿರುವುದು ಆತನಿಗೆ ಗೊತ್ತಿತ್ತು. ಆದ್ದರಿಂದ ಆತನು ಅವನಿಗೆ, “ಗುಣಹೊಂದಲು ನಿನಗೆ ಅಪೇಕ್ಷೆ ಇದೆಯಾ?” ಎಂದು ಕೇಳಿದನು.
7 ಆ ರೋಗಿಯು, “ಅಯ್ಯಾ, ನೀರು ಉಕ್ಕುವಾಗ ಕೊಳದೊಳಗೆ ಇಳಿದುಹೋಗಲು ನನಗೆ ಯಾರೂ ಸಹಾಯ ಮಾಡುವುದಿಲ್ಲ. ನಾನು ಎಲ್ಲರಿಗಿಂತ ಮೊದಲೇ ನೀರಿಗೆ ಇಳಿಯಲು ಪ್ರಯತ್ನಿಸುವೆ. ಆದರೆ ಪ್ರತಿಸಲವೂ ನನಗಿಂತ ಮೊದಲೇ ಮತ್ತೊಬ್ಬನು ಇಳಿದುಬಿಡುತ್ತಾನೆ” ಎಂದು ಹೇಳಿದನು.
8 ಆಗ ಯೇಸು, “ಎದ್ದುನಿಲ್ಲು! ನಿನ್ನ ಹಾಸಿಗೆಯನ್ನು ಎತ್ತಿಕೊಂಡು ನಡೆ” ಎಂದು ಹೇಳಿದನು. 9 ಆ ಕ್ಷಣವೇ ಆ ಮನುಷ್ಯನು ಗುಣಹೊಂದಿ, ತನ್ನ ಹಾಸಿಗೆಯನ್ನು ಎತ್ತಿಕೊಂಡು ನಡೆದನು.
ಇದೆಲ್ಲಾ ನಡೆದದ್ದು ಸಬ್ಬತ್‌ದಿನದಲ್ಲಿ. 10 ಆದ್ದರಿಂದ ಯೆಹೂದ್ಯರು ಗುಣಹೊಂದಿದ ಆ ವ್ಯಕ್ತಿಗೆ, “ಇಂದು ಸಬ್ಬತ್‌ದಿನ. ನೀನು ಸಬ್ಬತ್‌ದಿನದಲ್ಲಿ[c] ಹಾಸಿಗೆಯನ್ನು ಹೊತ್ತುಕೊಂಡು ಹೋಗುವುದು ನಮ್ಮ ಧರ್ಮಶಾಸ್ತ್ರಕ್ಕೆ ವಿರುದ್ಧವಾದದ್ದು” ಎಂದರು.
11 ಅದಕ್ಕೆ ಅವನು, “ನನ್ನನ್ನು ಗುಣಪಡಿಸಿದವನೇ, ‘ನಿನ್ನ ಹಾಸಿಗೆಯನ್ನು ಎತ್ತಿಕೊಂಡು ನಡೆ’ ಎಂದು ಹೇಳಿದನು” ಎಂಬುದಾಗಿ ಉತ್ತರಿಸಿದನು.
12 ಅದಕ್ಕೆ ಅವರು, “ನಿನ್ನ ಹಾಸಿಗೆಯನ್ನು ಎತ್ತಿಕೊಂಡು ನಡೆಯಲು ನಿನಗೆ ಹೇಳಿದವನು ಯಾರು?” ಎಂದು ಕೇಳಿದರು.
13 ಆದರೆ ಗುಣಹೊಂದಿದ್ದ ವ್ಯಕ್ತಿಗೆ ತನ್ನನ್ನು ಗುಣಪಡಿಸಿದವನು ಯಾರೆಂಬುದು ಗೊತ್ತಿರಲಿಲ್ಲ. ಆ ಸ್ಥಳದಲ್ಲಿ ಅನೇಕ ಜನರಿದ್ದರು. ಯೇಸು ಆ ಸ್ಥಳದಿಂದ ನುಸುಳಿಕೊಂಡು ಹೊರಟುಹೋದನು.
14 ಅನಂತರ ಯೇಸು ಆ ಮನುಷ್ಯನನ್ನು ದೇವಾಲಯದಲ್ಲಿ ಕಂಡು ಅವನಿಗೆ, “ನೋಡು, ಈಗ ನೀನು ಗುಣಹೊಂದಿರುವೆ. ಆದರೆ ಪಾಪ ಮಾಡುವುದನ್ನು ಬಿಟ್ಟುಬಿಡು. ಇಲ್ಲದಿದ್ದರೆ ಹೆಚ್ಚಿನ ಕೇಡು ನಿನಗೆ ಸಂಭವಿಸಬಹುದು!” ಎಂದು ಹೇಳಿದನು.
15 ಆಗ ಆ ಮನುಷ್ಯನು ಆ ಯೆಹೂದ್ಯರ ಬಳಿಗೆ ಹೋಗಿ ತನ್ನನ್ನು ಗುಣಪಡಿಸಿದವನು ಯೇಸುವೇ ಎಂದು ತಿಳಿಸಿದನು.
16 ಯೇಸು ಈ ಕಾರ್ಯಗಳನ್ನು ಸಬ್ಬತ್‌ದಿನದಲ್ಲಿ ಮಾಡುತ್ತಿದ್ದನು. ಈ ಕಾರಣದಿಂದಾಗಿ ಯೆಹೂದ್ಯರು ಯೇಸುವನ್ನು ಹಿಂಸಿಸತೊಡಗಿದರು. 17 ಆದರೆ ಯೇಸು ಅವರಿಗೆ, “ನನ್ನ ತಂದೆಯು ತನ್ನ ಕಾರ್ಯವನ್ನು ಎಂದಿಗೂ ನಿಲ್ಲಿಸುವುದಿಲ್ಲ. ಆದ್ದರಿಂದ ನಾನು ಸಹ ಕಾರ್ಯನಿರತನಾಗಿದ್ದೇನೆ” ಎಂದು ತನ್ನನ್ನು ಪ್ರತಿಪಾದಿಸಿಕೊಂಡನು.
18 ಯೇಸು ಸಬ್ಬತ್ತನ್ನು ಉಲ್ಲಂಘಿಸಿದ್ದಲ್ಲದೆ ದೇವರನ್ನು ತನ್ನ ತಂದೆಯೆಂದು ಹೇಳಿಕೊಂಡು ತನ್ನನ್ನು ದೇವರಿಗೆ ಸರಿಸಮಾನನನ್ನಾಗಿ ಮಾಡಿಕೊಳ್ಳುತ್ತಿದ್ದಾನೆಂದು ಯೆಹೂದ್ಯರು ಆತನನ್ನು ಕೊಲ್ಲಲು ಮತ್ತಷ್ಟು ಪ್ರಯತ್ನಿಸಿದರು.
Kannada Holy Bible: Easy-to-Read Version. All rights reserved. © 1997 Bible League International