Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 78:1-4

ರಚನೆಗಾರ: ಆಸಾಫ.

78 ನನ್ನ ಜನರೇ, ನನ್ನ ಉಪದೇಶಗಳಿಗೆ ಕಿವಿಗೊಡಿರಿ;
    ನನ್ನ ನುಡಿಗಳನ್ನು ಲಾಲಿಸಿರಿ.
ನಾನು ಬಾಯ್ದೆರೆದು ಸಾಮ್ಯರೂಪವಾಗಿ ಉಪದೇಶಿಸುವೆನು;
    ಪೂರ್ವಕಾಲದ ಗೂಡಾರ್ಥಗಳನ್ನು ಹೊರಪಡಿಸುವೆನು.
ನಾವು ಅವುಗಳನ್ನು ಕಿವಿಯಾರೆ ಕೇಳಿದ್ದೇವೆ.
    ನಮ್ಮ ಪೂರ್ವಿಕರೇ ಅವುಗಳನ್ನು ನಮಗೆ ಹೇಳಿದರು.
ನಾವು ಅವುಗಳನ್ನು ಮರೆಯುವುದೇ ಇಲ್ಲ.
    ನಮ್ಮ ಜನರು ಕೊನೆಯ ತಲೆಮಾರಿನವರೆಗೂ ಅವುಗಳನ್ನು ಹೇಳುತ್ತಲೇ ಇರುವರು.
ನಾವೆಲ್ಲರೂ ಯೆಹೋವನ ಪರಾಕ್ರಮವನ್ನೂ
    ಅದ್ಭುತಕಾರ್ಯಗಳನ್ನೂ ಹೇಳುತ್ತಾ ಕೊಂಡಾಡುವೆವು.

ಕೀರ್ತನೆಗಳು 78:52-72

52 ಬಳಿಕ ಆತನು ಕುರುಬನಂತೆ ಇಸ್ರೇಲನ್ನು ನಡೆಸಿದನು.
    ಆತನು ತನ್ನ ಜನರನ್ನು ಕುರಿಗಳಂತೆ ಅರಣ್ಯದಲ್ಲಿ ನಡೆಸಿದನು.
53 ಆತನು ಅವರಿಗೆ ಮಾರ್ಗದರ್ಶನ ಮಾಡುತ್ತಾ
    ಸುರಕ್ಷಿತವಾಗಿ ಮುನ್ನಡೆಸಿದನು.
ಆತನ ಜನರು ಯಾವುದಕ್ಕೂ ಭಯಪಡುವ ಅಗತ್ಯವಿರಲಿಲ್ಲ.
    ಅವರ ಶತ್ರುಗಳನ್ನು ಆತನು ಕೆಂಪು ಸಮುದ್ರದಲ್ಲಿ ಮುಳುಗಿಸಿದನು.
54 ಆತನು ತನ್ನ ಜನರನ್ನು ತನ್ನ ಪವಿತ್ರನಾಡಿಗೂ
    ತನ್ನ ಭುಜಬಲದಿಂದ ತೆಗೆದುಕೊಂಡ ಪರ್ವತಕ್ಕೂ ನಡೆಸಿದನು.
55 ಆ ನಾಡಿನ ಜನಾಂಗಗಳನ್ನು ಆತನು ಬಲವಂತವಾಗಿ ಹೊರಗಟ್ಟಿದನು.
    ಆತನು ಇಸ್ರೇಲಿನ ಪ್ರತಿಯೊಂದು ಕುಲಕ್ಕೂ ಆ ನಾಡಿನಲ್ಲಿ ಪಾಲುಕೊಟ್ಟನು;
    ಆ ನಾಡಿನ ಮನೆಗಳಲ್ಲಿ ಅವರನ್ನು ನೆಲೆಗೊಳಿಸಿದನು.
56 ಆದರೆ ಇಸ್ರೇಲರು ಮಹೋನ್ನತನಾದ ದೇವರನ್ನು ಪರೀಕ್ಷಿಸಿ ಆತನನ್ನು ಬಹಳವಾಗಿ ನೋಯಿಸಿದರು.
    ಅವರು ಆತನ ಆಜ್ಞೆಗಳಿಗೆ ವಿಧೇಯರಾಗಲಿಲ್ಲ.
57 ಇಸ್ರೇಲರು ಆತನಿಗೆ ವಿಮುಖರಾದರು; ತಮ್ಮ ಪೂರ್ವಿಕರಂತೆಯೇ ಆತನಿಗೆ ವಿರೋಧವಾಗಿ ತಿರುಗಿದರು.
    ತಿರುಗುಬಾಣದಂತೆ ತಮ್ಮ ದಿಕ್ಕನ್ನು ಬದಲಾಯಿಸಿಕೊಂಡರು.
58 ಇಸ್ರೇಲರು ಎತ್ತರವಾದ ಸ್ಥಳಗಳನ್ನು ನಿರ್ಮಿಸಿ, ಆತನನ್ನು ಕೋಪಗೊಳಿಸಿದರು.
    ಸುಳ್ಳುದೇವರುಗಳ ವಿಗ್ರಹಗಳನ್ನು ರೂಪಿಸಿ ಆತನನ್ನು ರೇಗಿಸಿದರು.
59 ದೇವರು ಇದನ್ನು ತಿಳಿದು ಬಹು ಕೋಪಗೊಂಡನು,
    ಆತನು ಇಸ್ರೇಲರನ್ನು ಸಂಪೂರ್ಣವಾಗಿ ತಿರಸ್ಕರಿಸಿದನು!
60 ಶೀಲೋವಿನಲ್ಲಿದ್ದ ತನ್ನ ಪವಿತ್ರ ಗುಡಾರವನ್ನು ಆತನು ತೊರೆದುಬಿಟ್ಟನು.
    ಅವರ ಮಧ್ಯದಲ್ಲಿ ಆತನು ವಾಸಮಾಡಿದ್ದು ಆ ಗುಡಾರದಲ್ಲಿಯೇ.
61 ಆತನು ತನ್ನ ಜನರನ್ನು ಇತರ ಜನಾಂಗಗಳ ವಶಕ್ಕೆ ಕೊಟ್ಟನು.
    ಶತ್ರುಗಳು ಆತನ “ಸುಂದರವಾದ ಆಭರಣವನ್ನು” ತೆಗೆದುಕೊಂಡರು.
62 ಆತನು ತನ್ನ ಜನರಿಗೆ ವಿರೋಧವಾಗಿ ತನ್ನ ಕೋಪವನ್ನು ತೋರಿದನು.
    ಯುದ್ಧದಲ್ಲಿ ಅವರಿಗೆ ಮರಣವಾಗುವಂತೆ ಮಾಡಿದನು.
63 ಯುವಕರು ಬೆಂಕಿಯ ಪಾಲಾದರು.
    ಅವರಿಗೆ ನಿಶ್ಚಿತಾರ್ಥವಾಗಿದ್ದ ಕನ್ಯೆಯರು ವಿವಾಹಗೀತೆಯನ್ನು ಹಾಡಲಿಲ್ಲ.
64 ಯಾಜಕರು ಕತ್ತಿಯಿಂದ ಕೊಲ್ಲಲ್ಪಟ್ಟರು,
    ಆದರೆ ವಿಧವೆಯರು ಅವರಿಗಾಗಿ ಗೋಳಾಡಲಿಲ್ಲ.
65 ಕೊನೆಗೆ, ನಿದ್ದೆಯಿಂದ ಎಚ್ಚರಗೊಳ್ಳುತ್ತಿರುವ ಮನುಷ್ಯನಂತೆಯೂ
    ಅಮಲಿಳಿದು ಎಚ್ಚರಗೊಳ್ಳುತ್ತಿರುವ ಸೈನಿಕನಂತೆಯೂ ನಮ್ಮ ಯೆಹೋವನು ಎದ್ದನು.
66 ಆತನು ತನ್ನ ಶತ್ರುಗಳನ್ನು ಸದೆಬಡಿದು ಸೋಲಿಸಿದನು.
    ಆತನು ತನ್ನ ಶತ್ರುಗಳನ್ನು ಸೋಲಿಸಿ ಅವರನ್ನು ನಿತ್ಯನಿಂದೆಗೆ ಗುರಿಮಾಡಿದನು.
67 ಆದರೆ ಆತನು ಯೋಸೇಫನ ಕುಲವನ್ನು ತಿರಸ್ಕರಿಸಿದನು.
    ಎಫ್ರಾಯೀಮನ ಕುಲವನ್ನೂ ಆತನು ಆರಿಸಿಕೊಳ್ಳಲಿಲ್ಲ.
68 ಆತನು ಯೆಹೂದಕುಲವನ್ನೇ ಆರಿಸಿಕೊಂಡನು.
    ಆತನು ತನ್ನ ಪ್ರಿಯ ಚೀಯೋನ್ ಪರ್ವತವನ್ನೇ ಆರಿಸಿಕೊಂಡನು.
69 ಆತನು ತನ್ನ ಪವಿತ್ರಾಲಯವನ್ನು ಆ ಪರ್ವತದ ಮೇಲೆ ಕಟ್ಟಿ
    ಅದನ್ನು ಭೂಮಿಯಂತೆ ಶಾಶ್ವತಗೊಳಿಸಿದನು.
70 ಆತನು ದಾವೀದನನ್ನು ತನ್ನ ವಿಶೇಷ ಸೇವಕನನ್ನಾಗಿ ಆರಿಸಿಕೊಂಡನು.
    ದಾವೀದನು ಕುರಿಹಟ್ಟಿಗಳನ್ನು ಕಾಯುತ್ತಿದ್ದನು.
71 ಆತನು ದಾವೀದನಿಗೆ ಕುರಿಗಳನ್ನು ಪರಿಪಾಲನೆ ಮಾಡುವ ಕೆಲಸದಿಂದ ತೆಗೆದುಹಾಕಿ
    ತನ್ನ ಜನರಾದ ಯಾಕೋಬ್ಯರನ್ನೂ ತನ್ನ ಆಸ್ತಿಯಾದ ಇಸ್ರೇಲರನ್ನೂ ಪರಿಪಾಲಿಸುವ ಉದ್ಯೋಗವನ್ನು ಕೊಟ್ಟನು.
72 ದಾವೀದನು ಯಥಾರ್ಥಹೃದಯದಿಂದಲೂ
    ಬಹು ವಿವೇಕದಿಂದಲೂ ಇಸ್ರೇಲರನ್ನು ನಡೆಸಿದನು.

ವಿಮೋಚನಕಾಂಡ 16:27-36

27 ಏಳನೆಯ ದಿನದಲ್ಲಿ ಕೆಲವು ಜನರು ಆಹಾರವನ್ನು ಕೂಡಿಸಿಕೊಳ್ಳಲು ಹೊರಗೆ ಹೋದರು. ಆದರೆ ಅವರಿಗೆ ಏನೂ ಸಿಕ್ಕಲಿಲ್ಲ. 28 ಆಗ ಯೆಹೋವನು ಮೋಶೆಗೆ, “ಜನರೇ, ನೀವು ಇನ್ನೆಷ್ಟರವರೆಗೆ ನನ್ನ ಆಜ್ಞೆಗಳಿಗೆ ಮತ್ತು ಬೋಧನೆಗಳಿಗೆ ವಿಧೇಯರಾಗುವುದಿಲ್ಲ? 29 ನೋಡಿರಿ, ಯೆಹೋವನು ಸಬ್ಬತ್ ದಿನವನ್ನು ನಿಮಗೆ ವಿಶ್ರಾಂತಿ ದಿನವನ್ನಾಗಿ ಮಾಡಿದ್ದಾನೆ. ಆದ್ದರಿಂದ ಯೆಹೋವನು ಶುಕ್ರವಾರದಂದು ನಿಮಗೆ ಎರಡು ದಿನಗಳಿಗೆ ಬೇಕಾದಷ್ಟು ಆಹಾರವನ್ನು ಕೊಡುವನು. ಆದ್ದರಿಂದ ಸಬ್ಬತ್ತಿನಲ್ಲಿ ನಿಮ್ಮಲ್ಲಿ ಪ್ರತಿಯೊಬ್ಬನು ಕುಳಿತುಕೊಂಡು ವಿಶ್ರಮಿಸಿಕೊಳ್ಳಬೇಕು. ನೀವು ಇರುವಲ್ಲೇ ಇರಿ” ಎಂದು ಹೇಳಿದನು. 30 ಆದ್ದರಿಂದ ಜನರು ಸಬ್ಬತ್ತಿನಲ್ಲಿ ವಿಶ್ರಮಿಸಿಕೊಂಡರು.

31 ಜನರು ಈ ವಿಶೇಷ ಆಹಾರವನ್ನು ಮನ್ನ ಎಂದು ಕರೆಯತೊಡಗಿದರು. ಮನ್ನವು ಚಿಕ್ಕದಾದ ಬಿಳಿ ಕೊತ್ತಂಬರಿ ಬೀಜಗಳಂತಿದ್ದವು ಮತ್ತು ಜೇನುತುಪ್ಪದಿಂದ ಮಾಡಿದ ತೆಳುವಾದ ರೊಟ್ಟಿಯಂತೆ ರುಚಿಯಾಗಿತ್ತು. 32 ಮೋಶೆಯು, “ಯೆಹೋವನು ಆಜ್ಞಾಪಿಸಿದ್ದೇನೆಂದರೆ, ‘ಮೂರು ಸೇರಿನಷ್ಟು ಮನ್ನವನ್ನು ನಿಮ್ಮ ಮುಂದಿನ ಸಂತತಿಯವರಿಗಾಗಿ ಉಳಿಸಿರಿ. ನಾನು ನಿಮ್ಮನ್ನು ಈಜಿಪ್ಟಿನಿಂದ ಹೊರಗೆ ನಡೆಸಿದಾಗ ಅರಣ್ಯದಲ್ಲಿ ನಾನು ನಿಮಗೆ ಕೊಟ್ಟ ಈ ಆಹಾರವನ್ನು ನೋಡುವರು’” ಎಂದು ಹೇಳಿದನು.

33 ಆದ್ದರಿಂದ ಮೋಶೆಯು ಆರೋನನಿಗೆ, “ಒಂದು ಭರಣಿಯನ್ನು ತೆಗೆದುಕೊಂಡು ಅದರಲ್ಲಿ ಮೂರು ಸೇರಿನಷ್ಟು ಮನ್ನವನ್ನು ತುಂಬಿಸು. ನಿಮ್ಮ ಮುಂದಿನ ಸಂತತಿಯವರು ನೋಡುವುದಕೋಸ್ಕರ ಇದನ್ನು ಉಳಿಸಿ ಯೆಹೋವನ ಮುಂದೆ ಇಡು” ಎಂದು ಹೇಳಿದನು. 34 (ನಂತರ ಆರೋನನು, ಯೆಹೋವನು ಮೋಶೆಗೆ ಆಜ್ಞಾಪಿಸಿದಂತೆ ಮಾಡಿದನು. ಆರೋನನು ಮನ್ನದ ಭರಣಿಯನ್ನು ಒಡಂಬಡಿಕೆಯ ಮುಂದುಗಡೆಯಲ್ಲಿ ಇಟ್ಟನು.) 35 ನಲವತ್ತು ವರ್ಷಗಳವರೆಗೆ ಜನರು ಮನ್ನವನ್ನು ತಿಂದರು. ಅವರು ವಿಶ್ರಾಂತಿಯ ದೇಶಕ್ಕೆ ಬರುವ ತನಕ, ಅಂದರೆ ಕಾನಾನಿನ ಗಡಿಗೆ ಬರುವವರೆಗೆ ಮನ್ನವನ್ನು ತಿಂದರು. 36 (ಅವರು ಮನ್ನವನ್ನು ಅಳೆಯುವುದಕ್ಕೆ ಗೋಮೆರ್ ಎಂಬ ಅಳತೆಯನ್ನು ಉಪಯೋಗಿಸಿದರು.)

ಅಪೊಸ್ತಲರ ಕಾರ್ಯಗಳು 15:1-5

ಜೆರುಸಲೇಮಿನಲ್ಲಿ ಸಮ್ಮೇಳನ

15 ಬಳಿಕ ಕೆಲವು ಜನರು ಜುದೇಯದಿಂದ ಅಂತಿಯೋಕ್ಯಕ್ಕೆ ಬಂದರು. “ನೀವು ಸುನ್ನತಿ ಮಾಡಿಸಿಕೊಳ್ಳದಿದ್ದರೆ ನಿಮಗೆ ರಕ್ಷಣೆಯಾಗುವುದಿಲ್ಲ. ಸುನ್ನತಿ ಮಾಡಿಸಿಕೊಳ್ಳಬೇಕೆಂದು ಮೋಶೆಯೇ ಹೇಳಿದ್ದಾನೆ” ಎಂದು ಅವರು ಯೆಹೂದ್ಯರಲ್ಲದ ವಿಶ್ವಾಸಿಗಳಿಗೆ ಉಪದೇಶಿಸತೊಡಗಿದರು. ಪೌಲ ಬಾರ್ನಬರು ಈ ಉಪದೇಶಕ್ಕೆ ತಮ್ಮ ವಿರೋಧವನ್ನು ವ್ಯಕ್ತಪಡಿಸಿ ಅವರೊಂದಿಗೆ ವಾದ ಮಾಡಿದರು. ಈ ಸಮಸ್ಯೆಯ ಬಗ್ಗೆ ಅಪೊಸ್ತಲರೊಡನೆ ಮತ್ತು ಹಿರಿಯರೊಡನೆ ಚರ್ಚಿಸಲು ಪೌಲ ಬಾರ್ನಬರನ್ನು ಮತ್ತು ಇತರ ಕೆಲವರನ್ನು ಜೆರುಸಲೇಮಿಗೆ ಕಳುಹಿಸಲು ಸಭೆ ನಿರ್ಧರಿಸಿತು.

ಅಂತೆಯೇ ಸಭೆಯು ಇವರನ್ನು ಕಳುಹಿಸಿತು. ಇವರು ಫೆನಿಷ್ಯ ಮತ್ತು ಸಮಾರ್ಯದ ಮಾರ್ಗವಾಗಿ ಪ್ರಯಾಣಮಾಡಿದರು. ಯೆಹೂದ್ಯರಲ್ಲದ ಜನರು ನಿಜದೇವರ ಕಡೆಗೆ ತಿರುಗಿಕೊಂಡಿದ್ದರ ಬಗ್ಗೆ ಈ ನಾಡುಗಳಲ್ಲಿ ವಿವರಿಸಿದರು. ಇದನ್ನು ಕೇಳಿ ಸಹೋದರರಿಗೂ ಬಹಳ ಸಂತೋಷವಾಯಿತು. ಪೌಲ ಬಾರ್ನಬರು ಮತ್ತು ಇತರರು ಜೆರುಸಲೇಮನ್ನು ತಲುಪಿದರು. ಅಪೊಸ್ತಲರು, ಹಿರಿಯರು ಮತ್ತು ಸಭೆಯವರು ಇವರನ್ನು ಸ್ವಾಗತಿಸಿದರು. ದೇವರು ತಮ್ಮೊಂದಿಗಿದ್ದು ಮಾಡಿದ ಎಲ್ಲಾ ಕಾರ್ಯಗಳ ಬಗ್ಗೆ ಪೌಲ ಬಾರ್ನಬರು ಮತ್ತು ಇತರರು ವಿವರಿಸಿದರು. ಜೆರುಸಲೇಮಿನಲ್ಲಿದ್ದ ವಿಶ್ವಾಸಿಗಳಲ್ಲಿ ಕೆಲವರು ಫರಿಸಾಯರ ಗುಂಪಿಗೆ ಸೇರಿದವರಾಗಿದ್ದರು. ಅವರು ಎದ್ದು ನಿಂತುಕೊಂಡು, “ಯೆಹೂದ್ಯರಲ್ಲದ ವಿಶ್ವಾಸಿಗಳು ಸುನ್ನತಿ ಮಾಡಿಸಿಕೊಳ್ಳಬೇಕು. ಮೋಶೆಯ ಧರ್ಮಶಾಸ್ತ್ರಕ್ಕೆ ವಿಧೇಯರಾಗಬೇಕೆಂದು ನಾವು ಅವರಿಗೆ ಹೇಳಬೇಕು!” ಎಂದರು.

ಅಪೊಸ್ತಲರ ಕಾರ್ಯಗಳು 15:22-35

ಯೆಹೂದ್ಯರಲ್ಲದ ವಿಶ್ವಾಸಿಗಳಿಗೆ ಪತ್ರ

22 ಅಪೊಸ್ತಲರು, ಹಿರಿಯರು ಮತ್ತು ಇಡೀ ಸಭೆಯವರು ಪೌಲ ಬಾರ್ನಬರೊಂದಿಗೆ ಕೆಲವು ಜನರನ್ನು ಅಂತಿಯೋಕ್ಯಕ್ಕೆ ಕಳುಹಿಸಬಯಸಿದರು. ತಮ್ಮವರೇ ಆದ ಕೆಲವರನ್ನು ಆರಿಸಿಕೊಳ್ಳಲು ಸಭೆಯು ನಿರ್ಧರಿಸಿತು. ಅವರು ಯೂದನನ್ನು (ಬಾರ್ಸಬನೆಂದೂ ಕರೆಯುತ್ತಿದ್ದರು) ಮತ್ತು ಸೀಲನನ್ನು ಆರಿಸಿಕೊಂಡರು. ಇವರು ಜೆರುಸಲೇಮಿನ ಸಭೆಯವರಲ್ಲಿ ಪ್ರಮುಖರಾಗಿದ್ದರು. 23 ಸಭೆಯು ಇವರ ಕೈಯಲ್ಲಿ ಪತ್ರವನ್ನು ಕಳುಹಿಸಿಕೊಟ್ಟಿತು. ಆ ಪತ್ರದಲ್ಲಿ ಹೀಗೆ ಬರೆದಿತ್ತು:

ಅಂತಿಯೋಕ್ಯ ಪಟ್ಟಣದಲ್ಲಿಯೂ ಸಿರಿಯ ಮತ್ತು ಸಿಲಿಸಿಯ ನಾಡುಗಳಲ್ಲಿಯೂ ಇರುವ ಯೆಹೂದ್ಯರಲ್ಲದ ಸಹೋದರರಿಗೆಲ್ಲಾ, ನಿಮ್ಮ ಸಹೋದರರಾದ ಅಪೊಸ್ತಲರೂ ಹಿರಿಯರೂ ಬರೆಯುವುದೇನೆಂದರೆ:

ಪ್ರಿಯ ಸಹೋದರರೇ,

24 ನಮ್ಮ ಸಮುದಾಯದಿಂದ ನಿಮ್ಮ ಬಳಿಗೆ ಬಂದ ಕೆಲವರು ನಿಮಗೆ ಕೆಲವು ಸಂಗತಿಗಳನ್ನು ಹೇಳುವುದರ ಮೂಲಕ ನಿಮ್ಮನ್ನು ತೊಂದರೆಗೆ ಈಡುಮಾಡಿ ನಿಮ್ಮಲ್ಲಿ ಗಲಿಬಿಲಿ ಉಂಟುಮಾಡಿದರೆಂಬ ಸಮಾಚಾರ ನಮಗೆ ತಿಳಿಯಿತು. ಆದರೆ ಹೀಗೆ ಮಾಡಬೇಕೆಂದು ನಾವು ಅವರಿಗೆ ಹೇಳಿರಲಿಲ್ಲ! 25 ಆದ್ದರಿಂದ ನಾವೆಲ್ಲರೂ ಕೆಲವರನ್ನು ಸರ್ವಾನುಮತದಿಂದ ಆರಿಸಿ ನಿಮ್ಮ ಬಳಿಗೆ ಕಳುಹಿಸಲು ನಿರ್ಧರಿಸಿದೆವು. ನಮ್ಮ ಪ್ರಿಯ ಸಹೋದರರಾದ ಬಾರ್ನಬ ಮತ್ತು ಪೌಲರೊಂದಿಗೆ ಅವರು ಬರುತ್ತಿದ್ದಾರೆ. 26 ಬಾರ್ನಬನು ಮತ್ತು ಪೌಲನು ನಮ್ಮ ಪ್ರಭುವಾದ ಯೇಸು ಕ್ರಿಸ್ತನ ಸೇವೆಗಾಗಿ ತಮ್ಮ ಜೀವಿತಗಳನ್ನೇ ಕೊಟ್ಟಿದ್ದಾರೆ. 27 ಆದ್ದರಿಂದ ನಾವು ಯೂದನನ್ನು ಮತ್ತು ಸೀಲನನ್ನು ಅವರೊಂದಿಗೆ ಕಳುಹಿಸಿದ್ದೇವೆ. ಕೆಳಕಂಡ ಸಂಗತಿಗಳನ್ನೆಲ್ಲ ಅವರು ನಿಮಗೆ ತಿಳಿಸುವರು. 28 ನಿಮಗೆ ಇನ್ನೂ ಹೆಚ್ಚಿನ ಭಾರಗಳು ಇರಕೂಡದೆಂಬುದು ಪವಿತ್ರಾತ್ಮನ ನಿರ್ಧಾರ. ಅದಕ್ಕೆ ನಾವು ಒಪ್ಪಿಕೊಂಡಿದ್ದೇವೆ. ನೀವು ಈ ನಿಯಮಗಳನ್ನು ಮಾತ್ರ ಅನುಸರಿಸಬೇಕಾಗಿದೆ:

29 ವಿಗ್ರಹಗಳಿಗೆ ಅರ್ಪಿಸಿರುವ ಆಹಾರವನ್ನು ತಿನ್ನಬೇಡಿ.

ರಕ್ತವನ್ನು ತಿನ್ನಬೇಡಿ. ಕುತ್ತಿಗೆ ಹಿಸುಕಿ ಕೊಂದ ಪ್ರಾಣಿಗಳ ಮಾಂಸವನ್ನು ತಿನ್ನಬೇಡಿ.

ಯಾವುದೇ ಬಗೆಯ ಲೈಂಗಿಕ ಪಾಪವನ್ನು ಮಾಡಬೇಡಿ.

ನೀವು ಇವುಗಳಿಂದ ದೂರವಿದ್ದರೆ ನಿಮಗೆ ಒಳ್ಳೆಯದಾಗುವುದು. ನಿಮಗೆ ಶುಭವಾಗಲಿ!

30 ಆದ್ದರಿಂದ ಪೌಲ ಬಾರ್ನಬರು ಮತ್ತು ಯೂದ ಸೀಲರು ಜೆರುಸಲೇಮಿನಿಂದ ಹೊರಟರು. ಅವರು ಅಂತಿಯೋಕ್ಯಕ್ಕೆ ಹೋಗಿ, ಅಲ್ಲಿ ವಿಶ್ವಾಸಿಗಳ ಸಭೆಸೇರಿಸಿ ಅವರಿಗೆ ಪತ್ರವನ್ನು ಕೊಟ್ಟರು. 31 ವಿಶ್ವಾಸಿಗಳು ಅದನ್ನು ಓದಿ ಬಹು ಸಂತೋಷಪಟ್ಟರು. ಆ ಪತ್ರವು ಅವರನ್ನು ಸಂತೈಸಿತು. 32 ಯೂದ ಸೀಲರು ಸಹ ಪ್ರವಾದಿಗಳಾಗಿದ್ದರು. ಅವರು ಅನೇಕ ಸಂಗತಿಗಳನ್ನು ಸಹೋದರರಿಗೆ ತಿಳಿಸಿ ಅವರನ್ನು ಬಲಪಡಿಸಿದರು. 33 ಯೂದ ಸೀಲರು ಸ್ವಲ್ಪಕಾಲ ಅಲ್ಲಿದ್ದು ಸಹೋದರರಿಂದ ಸಮಾಧಾನವೆಂಬ ಆಶೀರ್ವಾದವನ್ನು ಪಡೆದುಕೊಂಡರು. ಬಳಿಕ ಅವರು ತಮ್ಮನ್ನು ಕಳುಹಿಸಿಕೊಟ್ಟಿದ್ದ ಜೆರುಸಲೇಮಿನ ಸಹೋದರರ ಬಳಿಗೆ ಹಿಂತಿರುಗಿದರು. 34 [a]

35 ಆದರೆ ಪೌಲ ಬಾರ್ನಬರು ಅಂತಿಯೋಕ್ಯದಲ್ಲಿ ತಂಗಿದ್ದು ಇತರ ಅನೇಕರೊಂದಿಗೆ ಸೇರಿಕೊಂಡು ಸುವಾರ್ತೆಯನ್ನು ಸಾರಿದರು ಮತ್ತು ಪ್ರಭುವಿನ ಸಂದೇಶವನ್ನು ಜನರಿಗೆ ಬೋಧಿಸಿದರು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International