Revised Common Lectionary (Complementary)
ರಚನೆಗಾರ: ಆಸಾಫ.
78 ನನ್ನ ಜನರೇ, ನನ್ನ ಉಪದೇಶಗಳಿಗೆ ಕಿವಿಗೊಡಿರಿ;
ನನ್ನ ನುಡಿಗಳನ್ನು ಲಾಲಿಸಿರಿ.
2 ನಾನು ಬಾಯ್ದೆರೆದು ಸಾಮ್ಯರೂಪವಾಗಿ ಉಪದೇಶಿಸುವೆನು;
ಪೂರ್ವಕಾಲದ ಗೂಡಾರ್ಥಗಳನ್ನು ಹೊರಪಡಿಸುವೆನು.
3 ನಾವು ಅವುಗಳನ್ನು ಕಿವಿಯಾರೆ ಕೇಳಿದ್ದೇವೆ.
ನಮ್ಮ ಪೂರ್ವಿಕರೇ ಅವುಗಳನ್ನು ನಮಗೆ ಹೇಳಿದರು.
4 ನಾವು ಅವುಗಳನ್ನು ಮರೆಯುವುದೇ ಇಲ್ಲ.
ನಮ್ಮ ಜನರು ಕೊನೆಯ ತಲೆಮಾರಿನವರೆಗೂ ಅವುಗಳನ್ನು ಹೇಳುತ್ತಲೇ ಇರುವರು.
ನಾವೆಲ್ಲರೂ ಯೆಹೋವನ ಪರಾಕ್ರಮವನ್ನೂ
ಅದ್ಭುತಕಾರ್ಯಗಳನ್ನೂ ಹೇಳುತ್ತಾ ಕೊಂಡಾಡುವೆವು.
52 ಬಳಿಕ ಆತನು ಕುರುಬನಂತೆ ಇಸ್ರೇಲನ್ನು ನಡೆಸಿದನು.
ಆತನು ತನ್ನ ಜನರನ್ನು ಕುರಿಗಳಂತೆ ಅರಣ್ಯದಲ್ಲಿ ನಡೆಸಿದನು.
53 ಆತನು ಅವರಿಗೆ ಮಾರ್ಗದರ್ಶನ ಮಾಡುತ್ತಾ
ಸುರಕ್ಷಿತವಾಗಿ ಮುನ್ನಡೆಸಿದನು.
ಆತನ ಜನರು ಯಾವುದಕ್ಕೂ ಭಯಪಡುವ ಅಗತ್ಯವಿರಲಿಲ್ಲ.
ಅವರ ಶತ್ರುಗಳನ್ನು ಆತನು ಕೆಂಪು ಸಮುದ್ರದಲ್ಲಿ ಮುಳುಗಿಸಿದನು.
54 ಆತನು ತನ್ನ ಜನರನ್ನು ತನ್ನ ಪವಿತ್ರನಾಡಿಗೂ
ತನ್ನ ಭುಜಬಲದಿಂದ ತೆಗೆದುಕೊಂಡ ಪರ್ವತಕ್ಕೂ ನಡೆಸಿದನು.
55 ಆ ನಾಡಿನ ಜನಾಂಗಗಳನ್ನು ಆತನು ಬಲವಂತವಾಗಿ ಹೊರಗಟ್ಟಿದನು.
ಆತನು ಇಸ್ರೇಲಿನ ಪ್ರತಿಯೊಂದು ಕುಲಕ್ಕೂ ಆ ನಾಡಿನಲ್ಲಿ ಪಾಲುಕೊಟ್ಟನು;
ಆ ನಾಡಿನ ಮನೆಗಳಲ್ಲಿ ಅವರನ್ನು ನೆಲೆಗೊಳಿಸಿದನು.
56 ಆದರೆ ಇಸ್ರೇಲರು ಮಹೋನ್ನತನಾದ ದೇವರನ್ನು ಪರೀಕ್ಷಿಸಿ ಆತನನ್ನು ಬಹಳವಾಗಿ ನೋಯಿಸಿದರು.
ಅವರು ಆತನ ಆಜ್ಞೆಗಳಿಗೆ ವಿಧೇಯರಾಗಲಿಲ್ಲ.
57 ಇಸ್ರೇಲರು ಆತನಿಗೆ ವಿಮುಖರಾದರು; ತಮ್ಮ ಪೂರ್ವಿಕರಂತೆಯೇ ಆತನಿಗೆ ವಿರೋಧವಾಗಿ ತಿರುಗಿದರು.
ತಿರುಗುಬಾಣದಂತೆ ತಮ್ಮ ದಿಕ್ಕನ್ನು ಬದಲಾಯಿಸಿಕೊಂಡರು.
58 ಇಸ್ರೇಲರು ಎತ್ತರವಾದ ಸ್ಥಳಗಳನ್ನು ನಿರ್ಮಿಸಿ, ಆತನನ್ನು ಕೋಪಗೊಳಿಸಿದರು.
ಸುಳ್ಳುದೇವರುಗಳ ವಿಗ್ರಹಗಳನ್ನು ರೂಪಿಸಿ ಆತನನ್ನು ರೇಗಿಸಿದರು.
59 ದೇವರು ಇದನ್ನು ತಿಳಿದು ಬಹು ಕೋಪಗೊಂಡನು,
ಆತನು ಇಸ್ರೇಲರನ್ನು ಸಂಪೂರ್ಣವಾಗಿ ತಿರಸ್ಕರಿಸಿದನು!
60 ಶೀಲೋವಿನಲ್ಲಿದ್ದ ತನ್ನ ಪವಿತ್ರ ಗುಡಾರವನ್ನು ಆತನು ತೊರೆದುಬಿಟ್ಟನು.
ಅವರ ಮಧ್ಯದಲ್ಲಿ ಆತನು ವಾಸಮಾಡಿದ್ದು ಆ ಗುಡಾರದಲ್ಲಿಯೇ.
61 ಆತನು ತನ್ನ ಜನರನ್ನು ಇತರ ಜನಾಂಗಗಳ ವಶಕ್ಕೆ ಕೊಟ್ಟನು.
ಶತ್ರುಗಳು ಆತನ “ಸುಂದರವಾದ ಆಭರಣವನ್ನು” ತೆಗೆದುಕೊಂಡರು.
62 ಆತನು ತನ್ನ ಜನರಿಗೆ ವಿರೋಧವಾಗಿ ತನ್ನ ಕೋಪವನ್ನು ತೋರಿದನು.
ಯುದ್ಧದಲ್ಲಿ ಅವರಿಗೆ ಮರಣವಾಗುವಂತೆ ಮಾಡಿದನು.
63 ಯುವಕರು ಬೆಂಕಿಯ ಪಾಲಾದರು.
ಅವರಿಗೆ ನಿಶ್ಚಿತಾರ್ಥವಾಗಿದ್ದ ಕನ್ಯೆಯರು ವಿವಾಹಗೀತೆಯನ್ನು ಹಾಡಲಿಲ್ಲ.
64 ಯಾಜಕರು ಕತ್ತಿಯಿಂದ ಕೊಲ್ಲಲ್ಪಟ್ಟರು,
ಆದರೆ ವಿಧವೆಯರು ಅವರಿಗಾಗಿ ಗೋಳಾಡಲಿಲ್ಲ.
65 ಕೊನೆಗೆ, ನಿದ್ದೆಯಿಂದ ಎಚ್ಚರಗೊಳ್ಳುತ್ತಿರುವ ಮನುಷ್ಯನಂತೆಯೂ
ಅಮಲಿಳಿದು ಎಚ್ಚರಗೊಳ್ಳುತ್ತಿರುವ ಸೈನಿಕನಂತೆಯೂ ನಮ್ಮ ಯೆಹೋವನು ಎದ್ದನು.
66 ಆತನು ತನ್ನ ಶತ್ರುಗಳನ್ನು ಸದೆಬಡಿದು ಸೋಲಿಸಿದನು.
ಆತನು ತನ್ನ ಶತ್ರುಗಳನ್ನು ಸೋಲಿಸಿ ಅವರನ್ನು ನಿತ್ಯನಿಂದೆಗೆ ಗುರಿಮಾಡಿದನು.
67 ಆದರೆ ಆತನು ಯೋಸೇಫನ ಕುಲವನ್ನು ತಿರಸ್ಕರಿಸಿದನು.
ಎಫ್ರಾಯೀಮನ ಕುಲವನ್ನೂ ಆತನು ಆರಿಸಿಕೊಳ್ಳಲಿಲ್ಲ.
68 ಆತನು ಯೆಹೂದಕುಲವನ್ನೇ ಆರಿಸಿಕೊಂಡನು.
ಆತನು ತನ್ನ ಪ್ರಿಯ ಚೀಯೋನ್ ಪರ್ವತವನ್ನೇ ಆರಿಸಿಕೊಂಡನು.
69 ಆತನು ತನ್ನ ಪವಿತ್ರಾಲಯವನ್ನು ಆ ಪರ್ವತದ ಮೇಲೆ ಕಟ್ಟಿ
ಅದನ್ನು ಭೂಮಿಯಂತೆ ಶಾಶ್ವತಗೊಳಿಸಿದನು.
70 ಆತನು ದಾವೀದನನ್ನು ತನ್ನ ವಿಶೇಷ ಸೇವಕನನ್ನಾಗಿ ಆರಿಸಿಕೊಂಡನು.
ದಾವೀದನು ಕುರಿಹಟ್ಟಿಗಳನ್ನು ಕಾಯುತ್ತಿದ್ದನು.
71 ಆತನು ದಾವೀದನಿಗೆ ಕುರಿಗಳನ್ನು ಪರಿಪಾಲನೆ ಮಾಡುವ ಕೆಲಸದಿಂದ ತೆಗೆದುಹಾಕಿ
ತನ್ನ ಜನರಾದ ಯಾಕೋಬ್ಯರನ್ನೂ ತನ್ನ ಆಸ್ತಿಯಾದ ಇಸ್ರೇಲರನ್ನೂ ಪರಿಪಾಲಿಸುವ ಉದ್ಯೋಗವನ್ನು ಕೊಟ್ಟನು.
72 ದಾವೀದನು ಯಥಾರ್ಥಹೃದಯದಿಂದಲೂ
ಬಹು ವಿವೇಕದಿಂದಲೂ ಇಸ್ರೇಲರನ್ನು ನಡೆಸಿದನು.
13 ಸಾಯಂಕಾಲ ಲಾವಕ್ಕಿಗಳು ಪಾಳೆಯದ ಸುತ್ತಲೂ ಬಂದವು. ಜನರು ಮಾಂಸಕ್ಕಾಗಿ ಈ ಪಕ್ಷಿಗಳನ್ನು ಹಿಡಿದರು ಮತ್ತು ಪ್ರತಿ ಮುಂಜಾನೆ ಅವರ ಪಾಳೆಯದ ಸುತ್ತಲೂ ಮಂಜು ನೆಲದ ಮೇಲೆ ಬಿದ್ದಿತ್ತು. 14 ಸೂರ್ಯನು ಮೇಲಕ್ಕೇರಿದ ನಂತರ ಮಂಜು ಕರಗಿ ಇಲ್ಲವಾಯಿತು. ಆದರೆ ಮಂಜು ಕರಗಿ ಹೋದನಂತರ ನೆಲದ ಮೇಲೆ ಮಂಜಿನ ಹನಿಗಳಂತಿದ್ದ ತೆಳುವಾದ ಕಾಳುಗಳು ಬಿದ್ದಿದ್ದವು. 15 ಇಸ್ರೇಲರು ಅದನ್ನು ನೋಡಿ “ಏನದು” ಎಂಬುದಾಗಿ ಒಬ್ಬರನ್ನೊಬ್ಬರು ಕೇಳಿದರು. ಅದು ಏನೆಂದು ಅವರಿಗೆ ಗೊತ್ತಿಲ್ಲದ ಕಾರಣ ಅವರು ಈ ಪ್ರಶ್ನೆಯನ್ನು ಕೇಳಿದರು. ಆದ್ದರಿಂದ ಮೋಶೆ ಅವರಿಗೆ, “ಇದು ಯೆಹೋವನು ನಿಮಗೆ ಕೊಟ್ಟಿರುವ ಆಹಾರ. 16 ಯೆಹೋವನು ಆಜ್ಞಾಪಿಸುವುದೇನೆಂದರೆ, ‘ಪ್ರತಿಯೊಬ್ಬನು ತನಗೆ ಬೇಕಾದಷ್ಟನ್ನು ಮಾತ್ರ ಕೂಡಿಸಿಕೊಳ್ಳಬೇಕು. ನಿಮ್ಮಲ್ಲಿ ಪ್ರತಿಯೊಬ್ಬನು ನಿಮ್ಮ ಕುಟುಂಬದಲ್ಲಿರುವ ಪ್ರತಿಯೊಬ್ಬನಿಗೆ ಸುಮಾರು ಮೂರು ಸೇರಿನಷ್ಟು ಕೂಡಿಸಿಕೊಳ್ಳಬೇಕು’” ಎಂದು ಹೇಳಿದನು.
17 ಅಂತೆಯೇ ಇಸ್ರೇಲರು ಮಾಡಿದರು. ಪ್ರತಿಯೊಬ್ಬನೂ ತನ್ನ ಆಹಾರವನ್ನು ಕೂಡಿಸಿಕೊಂಡನು. ಕೆಲವರು ಇತರರಿಗಿಂತ ಹೆಚ್ಚಾಗಿ ಕೂಡಿಸಿಕೊಂಡರು. 18 ಅವರು ತಮ್ಮ ಕುಟುಂಬದಲ್ಲಿದ್ದ ಪ್ರತಿಯೊಬ್ಬರ ಆಹಾರವನ್ನು ಒಟ್ಟಾಗಿ ಸೇರಿಸಿ ಅಳತೆಮಾಡಿದಾಗ ಅಲ್ಲಿ ಯಾವಾಗಲೂ ಪ್ರತಿಯೊಬ್ಬನಿಗೆ ಬೇಕಾದಷ್ಟು ಮಾತ್ರ ಆಹಾರವಿರುತ್ತಿತ್ತು. ಅದು ಹೆಚ್ಚಾಗಿಯೂ ಇರುತ್ತಿರಲಿಲ್ಲ; ಕಡಿಮೆಯಾಗಿಯೂ ಇರುತ್ತಿರಲಿಲ್ಲ. ಹೀಗೆ ಪ್ರತಿಯೊಬ್ಬನು ತನಗೆ ಮತ್ತು ತನ್ನ ಕುಟುಂಬಕ್ಕೆ ಬೇಕಾದಷ್ಟನ್ನು ಮಾತ್ರ ಕೂಡಿಸಿಕೊಂಡನು.
19 ಮೋಶೆಯು ಅವರಿಗೆ, “ಆಹಾರವನ್ನು ಮರುದಿನಕ್ಕಾಗಿ ಉಳಿಸಿಕೊಳ್ಳಬೇಡಿರಿ” ಎಂದು ಹೇಳಿದನು. 20 ಆದರೆ ಅವರು ಮೋಶೆಯ ಮಾತಿಗೆ ವಿಧೇಯರಾಗಲಿಲ್ಲ. ಕೆಲವು ಜನರು ಮರುದಿನ ತಿನ್ನುವುದಕ್ಕಾಗಿ ಆಹಾರವನ್ನು ಉಳಿಸಿಕೊಂಡರು; ಹೀಗೆ ಉಳಿಸಿಟ್ಟ ಆಹಾರವು ಹುಳಗಳಿಂದ ತುಂಬಿ ಕೊಳೆಯತೊಡಗಿತು. ಮೋಶೆಯು ಹೀಗೆ ಮಾಡಿದ ಜನರ ಮೇಲೆ ಕೋಪಗೊಂಡನು.
21 ಪ್ರತಿ ಮುಂಜಾನೆ ಅವರು ಆಹಾರವನ್ನು ಕೂಡಿಸಿಕೊಂಡರು. ಪ್ರತಿಯೊಬ್ಬನು ತಾನು ಎಷ್ಟು ತಿನ್ನಬಹುದೋ ಅಷ್ಟನ್ನೇ ಕೂಡಿಸಿಕೊಂಡನು. ಆದರೆ ಬಿಸಿಲೇರಿದಾಗ ಆಹಾರವು ಕರಗಿಹೋಯಿತು.
22 ಆರನೆಯ ದಿನವಾದ ಶುಕ್ರವಾರದಲ್ಲಿ ಜನರು ಎರಡರಷ್ಟನ್ನು ಕೂಡಿಸಿಕೊಂಡರು. ಅವರು ಪ್ರತಿಯೊಬ್ಬನಿಗೆ ಆರು ಸೇರಿನಷ್ಟು ಕೂಡಿಸಿಕೊಂಡರು. ಆದ್ದರಿಂದ ಜನನಾಯಕರೆಲ್ಲರೂ ಬಂದು ಮೋಶೆಗೆ ಇದನ್ನು ತಿಳಿಸಿದರು.
23 ಮೋಶೆಯು ಅವರಿಗೆ, “ಯೆಹೋವನೇ ಇದರ ಬಗ್ಗೆ ತಿಳಿಸಿದ್ದನು. ನಾಳೆ ಮುಂಜಾನೆ ಯೆಹೋವನನ್ನು ಸನ್ಮಾನಿಸತಕ್ಕ ವಿಶೇಷ ವಿಶ್ರಾಂತಿ ದಿನವಾದ ಸಬ್ಬತ್ತಾಗಿದೆ. ಆದ್ದರಿಂದ ಇದು ಹೀಗೆ ಸಂಭವಿಸಿತು. ಈ ದಿನಕ್ಕೆ ಬೇಕಾದ ಅಡಿಗೆಯನ್ನು ನೀವು ತಯಾರಿಸಿಕೊಳ್ಳಿರಿ. ಆದರೆ ಈ ಆಹಾರದಲ್ಲಿ ಉಳಿದದ್ದನ್ನು ನಾಳೆ ಪ್ರಾತಃಕಾಲಕ್ಕಾಗಿ ಉಳಿಸಿಕೊಳ್ಳಿರಿ” ಎಂದು ಹೇಳಿದನು.
24 ಆದ್ದರಿಂದ ಉಳಿದ ಆಹಾರವನ್ನು ಜನರು ಮರುದಿನಕ್ಕಾಗಿ ಉಳಿಸಿದರು; ಆದರೆ ಆ ಆಹಾರವು ಕೆಡಲಿಲ್ಲ ಮತ್ತು ಹುಳಗಳು ಆ ಆಹಾರಕ್ಕೆ ಬರಲಿಲ್ಲ.
25 ಶನಿವಾರದಲ್ಲಿ ಮೋಶೆಯು ಜನರಿಗೆ, “ಈ ದಿನ ಸಬ್ಬತ್ತಾಗಿದೆ. ಇದು ಯೆಹೋವನನ್ನು ಸನ್ಮಾನಿಸುವುದಕ್ಕಿರುವ ವಿಶೇಷವಾದ ವಿಶ್ರಾಂತಿ ದಿನವಾಗಿದೆ. ನೀವು ನಿನ್ನೆಯಿಂದ ಇಟ್ಟುಕೊಂಡಿದ್ದ ಆಹಾರವನ್ನು ಊಟಮಾಡಿರಿ. ಇಂದು ನೀವು ಹೊಲದಲ್ಲಿ ಯಾವ ಆಹಾರವನ್ನೂ ಕಾಣುವುದಿಲ್ಲ. 26 ನೀವು ಆರು ದಿನಗಳಲ್ಲಿ ಆಹಾರವನ್ನು ಕೂಡಿಸಬೇಕು. ಆದರೆ ವಾರದ ಏಳನೆಯ ದಿನವು ಸಬ್ಬತ್ ದಿನವಾಗಿದೆ, ಅಂದರೆ ವಿಶ್ರಾಂತಿಯ ದಿನವಾಗಿದೆ. ಆದ್ದರಿಂದ ಆ ದಿನದಲ್ಲಿ ನೆಲದ ಮೇಲೆ ಯಾವ ಆಹಾರವೂ ಇರುವುದಿಲ್ಲ” ಅಂದನು.
19 “ನಾವು ಮಾಡುವ ಕಾರ್ಯಗಳು ದೇವರ ಹಿಡಿತಕ್ಕೆ ಒಳಗಾಗಿರುವುದಾದರೆ, ನಮ್ಮ ಪಾಪಗಳ ನಿಮಿತ್ತ ದೇವರು ನಮ್ಮನ್ನು ದೂಷಿಸುವುದೇಕೆ?” ಎಂದು ನಿಮ್ಮಲ್ಲಿ ಒಬ್ಬನು ಕೇಳಬಹುದು. 20 ಹಾಗೆ ಕೇಳಬೇಡಿ. ನೀವು ಕೇವಲ ಮನುಷ್ಯರು. ದೇವರನ್ನು ಪ್ರಶ್ನಿಸಲು ಮನುಷ್ಯರಿಗೆ ಯಾವ ಹಕ್ಕೂ ಇಲ್ಲ. ಮಡಕೆಯು ತನ್ನನ್ನು ತಯಾರಿಸಿದವನಿಗೆ, “ನೀನು ನನ್ನನ್ನು ಈ ರೀತಿ ತಯಾರಿಸಿದ್ದೇಕೆ” ಎಂದು ಕೇಳುವುದುಂಟೇ? 21 ಕುಂಬಾರನು ತನಗೆ ಇಷ್ಟಬಂದಂತೆ ಒಂದೇ ಮಣ್ಣಿನಿಂದ ವಿವಿಧ ವಸ್ತುಗಳನ್ನು ತಯಾರಿಸುವುದಿಲ್ಲವೇ? ಅವನು ಒಂದನ್ನು ವಿಶೇಷವಾದ ಬಳಕೆಗಾಗಿಯೂ ಮತ್ತೊಂದನ್ನು ದೈನಂದಿನ ಬಳಕೆಗಾಗಿಯೂ ತಯಾರಿಸುವನು.
22 ದೇವರು ಮಾಡಿರುವುದು ಸಹ ಹೀಗೆಯೇ. ಆತನು ತನ್ನ ಕೋಪವನ್ನು ತೋರಿಸಿ, ತನ್ನ ಶಕ್ತಿಯನ್ನು ಜನರಿಗೆ ಪ್ರಸಿದ್ಧಿಪಡಿಸಬೇಕೆಂದಿದ್ದನು. ಆದರೂ ಆತನು ತನ್ನ ಕೋಪಕ್ಕೆ ಗುರಿಯಾಗಿ ನಾಶವಾಗಲಿದ್ದ ಜನರನ್ನು ಬಹು ಸಹನೆಯಿಂದ ಸಹಿಸಿಕೊಂಡನು. 23 ದೇವರು ತನ್ನ ಅತಿಶಯವಾದ ಮಹಿಮೆಯನ್ನು ತೋರ್ಪಡಿಸಬೇಕೆಂದು ತಾಳ್ಮೆಯಿಂದ ಕಾದುಕೊಂಡಿದ್ದನು. ತನ್ನ ಕರುಣೆಯನ್ನು ಹೊಂದಿಕೊಳ್ಳುವ ಜನರಿಗೆ ದೇವರು ಆ ಮಹಿಮೆಯನ್ನು ಕೊಡಬೇಕೆಂದಿದ್ದನು. ತನ್ನ ಮಹಿಮೆಯನ್ನು ಹೊಂದಿಕೊಳ್ಳಲೆಂದು ದೇವರು ಆ ಜನರನ್ನು ಸಿದ್ಧಪಡಿಸಿದನು. 24 ನಾವೇ ಆ ಜನರು. ದೇವರಿಂದ ಕರೆಯಲ್ಪಟ್ಟ ಜನರು ನಾವೇ. ದೇವರು ನಮ್ಮನ್ನು ಯೆಹೂದ್ಯರೊಳಗಿಂದ ಮತ್ತು ಯೆಹೂದ್ಯರಲ್ಲದವರೊಳಗಿಂದ ಕರೆದನು. 25 ಪವಿತ್ರ ಗ್ರಂಥದ ಹೋಶೇಯನ ಪುಸ್ತಕದಲ್ಲಿ ಈ ರೀತಿ ಬರೆಯಲ್ಪಟ್ಟಿದೆ:
“ನನ್ನವರಲ್ಲದ ಜನರನ್ನು
ನನ್ನ ಜನರೆಂದು ಹೇಳುವೆನು.
ನನಗೆ ಪ್ರಿಯರಲ್ಲದವರನ್ನು
ನನಗೆ ಪ್ರಿಯರೆಂದು ಹೇಳುವೆನು.”(A)
26 ಮತ್ತು
“ಯಾವ ಸ್ಥಳದಲ್ಲಿ ದೇವರು,
‘ನೀವು ನನ್ನ ಜನರಲ್ಲ’ ಎಂದು ಹೇಳಿದ್ದನೋ
ಅದೇ ಸ್ಥಳದಲ್ಲಿ ಅವರನ್ನು ಜೀವವುಳ್ಳ ದೇವರ ಮಕ್ಕಳೆಂದು ಕರೆಯಲಾಗುವುದು.”(B)
27 ಇದಲ್ಲದೆ ಯೆಶಾಯನು ಇಸ್ರೇಲಿನ ಬಗ್ಗೆ ಕೂಗಿ ಹೇಳಿದ್ದಾನೆ:
“ಸಮುದ್ರ ತೀರದ ಮರಳಿನಂತೆ ಇಸ್ರೇಲರು ಅಸಂಖ್ಯಾತವಾಗಿರುವರು.
ಆದರೆ ಆ ಜನರಲ್ಲಿ ಕೆಲವರು ಮಾತ್ರ ರಕ್ಷಣೆ ಹೊಂದುವರು.
28 ಹೌದು, ಪ್ರಭುವು ಭೂಮಿಯ ಮೇಲಿನ ಜನರಿಗೆ ಬಹುಬೇಗನೆ ತೀರ್ಪನ್ನು ಪೂರ್ಣವಾಗಿ ತೀರಿಸುವನು.”(C)
29 ಯೆಶಾಯನು ಹೇಳಿರುವುದೇನೆಂದರೆ:
“ಪ್ರಭುವು ಸರ್ವಶಕ್ತನಾಗಿದ್ದಾನೆ. ಪ್ರಭುವು ತನ್ನ ಜನರಲ್ಲಿ ಕೆಲವರನ್ನು ನಮಗೋಸ್ಕರವಾಗಿ ರಕ್ಷಿಸಿದ್ದಾನೆ.
ಆತನು ಹೀಗೆ ಮಾಡಿಲ್ಲದಿದ್ದರೆ,
ಈಗ ನಾವು ಸೊದೋಮಿನಂತೆಯೂ
ಗೊಮೋರದಂತೆಯೂ ಇರುತ್ತಿದ್ದೆವು.”(D)
Kannada Holy Bible: Easy-to-Read Version. All rights reserved. © 1997 Bible League International