Revised Common Lectionary (Complementary)
12 ‘ನಿನ್ನ ದೇವರಾದ ಯೆಹೋವನು ಆಜ್ಞಾಪಿಸಿದಂತೆ ಸಬ್ಬತ್ ದಿನವನ್ನು ವಿಶೇಷದಿನವೆಂದು ಪರಿಗಣಿಸಬೇಕು. 13 ವಾರದ ಆರು ದಿನಗಳಲ್ಲಿ ಕೆಲಸಮಾಡಿರಿ. 14 ಆದರೆ ಏಳನೆಯ ದಿನವು ವಿಶ್ರಾಂತಿಯ ದಿನವಾಗಿದೆ. ಆ ದಿನ ಯಾರೂ ಕೆಲಸ ಮಾಡಬಾರದು. ನೀವು ಮಾತ್ರವೇ ಅಲ್ಲ, ನಿಮ್ಮ ಮಕ್ಕಳು, ಸೇವಕರು, ನಿಮ್ಮ ಪಶುಗಳು, ನಿಮ್ಮಲ್ಲಿರುವ ಪರದೇಶಿಯರು ಕೆಲಸಮಾಡದೆ ವಿಶ್ರಾಂತಿಯಲ್ಲಿರಬೇಕು. ನಿಮ್ಮ ದೇವರಾದ ಯೆಹೋವನ ಗೌರವಾರ್ಥವಾಗಿ ಸಬ್ಬತ್ ದಿನವು ವಿಶ್ರಾಂತಿಯ ದಿನವಾಗಿದೆ. 15 ನೀವು ಈಜಿಪ್ಟ್ ದೇಶದಲ್ಲಿ ಗುಲಾಮರಾಗಿದ್ದಿರೆಂಬುದನ್ನು ಮರೆಯಬೇಡಿ. ನಿಮ್ಮ ದೇವರಾದ ಯೆಹೋವನು ತನ್ನ ಮಹಾಶಕ್ತಿಯಿಂದ ನಿಮ್ಮನ್ನು ಈಜಿಪ್ಟಿನಿಂದ ಬಿಡಿಸಿ ನಿಮ್ಮನ್ನು ಸ್ವತಂತ್ರರನ್ನಾಗಿ ಮಾಡಿದನು. ಆದ್ದರಿಂದಲೇ ನಿಮ್ಮ ದೇವರು ಸಬ್ಬತ್ ದಿನವನ್ನು ಆಚರಿಸಬೇಕೆಂದು ಆಜ್ಞೆ ಮಾಡಿದ್ದು.
ರಚನೆಗಾರ: ಆಸಾಫ.
81 ನಮಗೆ ಬಲಪ್ರದನಾಗಿರುವ ದೇವರಿಗೆ ಸಂತಸದಿಂದ ಹಾಡಿರಿ.
ಇಸ್ರೇಲಿನ ದೇವರಿಗೆ ಆನಂದಘೋಷ ಮಾಡಿರಿ.
2 ವಾದ್ಯವನ್ನು ನುಡಿಸಲಾರಂಭಿಸಿರಿ;
ದಮ್ಮಡಿಯನ್ನು ಬಡಿಯಿರಿ.
ಇಂಪಾದ ಹಾರ್ಪ್ ಮತ್ತು ಲೈರ್ ವಾದ್ಯಗಳನ್ನು ಬಾರಿಸಿರಿ.
3 ಅಮಾವಾಸ್ಯೆಯಲ್ಲಿಯೂ ನಮ್ಮ ರಜಾಕಾಲವಾದ
ಪೂರ್ಣಿಮೆಯಲ್ಲಿಯೂ ತುತ್ತೂರಿಯನ್ನು ಊದಿರಿ.
4 ಇದು ಇಸ್ರೇಲರಿಗೆ ಕಟ್ಟಳೆಯಾಗಿದೆ.
ಯಾಕೋಬ್ಯರ ದೇವರು ಈ ಆಜ್ಞೆಯನ್ನು ಕೊಟ್ಟನು.
5 ಆತನು ಯೋಸೇಫನನ್ನು[a] ಈಜಿಪ್ಟಿನಿಂದ ಬಿಡಿಸಿಕೊಂಡು ಬಂದಾಗ
ಅವನೊಂದಿಗೆ ಈ ಒಡಂಬಡಿಕೆಯನ್ನು ಮಾಡಿಕೊಂಡನು.
ಈಜಿಪ್ಟಿನಲ್ಲಿ ನಾವು ಕೇಳಿದ್ದು ನಮಗೆ ಅರ್ಥವಾಗದ ಭಾಷೆಯನ್ನೇ!
6 ಆತನು ಹೀಗೆನ್ನುತ್ತಾನೆ: “ನಿಮ್ಮ ಹೆಗಲಿನಿಂದ ಹೊರೆಯನ್ನು ತೆಗೆದುಹಾಕಿದೆನು.
ಕೆಲಸಗಾರರ ಬುಟ್ಟಿಯನ್ನು ನೀವು ಬಿಸಾಕುವಂತೆ ಮಾಡಿದೆನು.
7 ನೀವು ಆಪತ್ತಿನಲ್ಲಿದ್ದಾಗ ಸಹಾಯಕ್ಕಾಗಿ ಮೊರೆಯಿಟ್ಟಿರಿ.
ಆಗ ನಾನು ನಿಮ್ಮನ್ನು ಬಿಡಿಸಿದೆನು.
ನಾನು ಕಾರ್ಮೋಡದಲ್ಲಿ ಮರೆಯಾಗಿದ್ದರೂ ನಿಮಗೆ ಉತ್ತರಿಸಿದೆನು.
ನಾನು ನಿಮ್ಮನ್ನು ಮೆರೀಬಾದ ನೀರಿನಿಂದ ಪರೀಕ್ಷಿಸಿದೆನು.”
8 “ನನ್ನ ಜನರೇ, ನನಗೆ ಕಿವಿಗೊಡಿರಿ, ನಾನು ನಿಮಗೆ ಒಡಂಬಡಿಕೆಯನ್ನು ಕೊಡುತ್ತಿರುವೆ.
ಇಸ್ರೇಲೇ, ದಯವಿಟ್ಟು ಕಿವಿಗೊಡು!
9 ಪರದೇಶದವರು ಆರಾಧಿಸುವ
ಯಾವ ಸುಳ್ಳು ದೇವರುಗಳನ್ನೂ ಪೂಜಿಸಬೇಡ.
10 ಯೆಹೋವನಾದ ನಾನೇ ನಿನ್ನ ದೇವರು.
ನಿನ್ನನ್ನು ಈಜಿಪ್ಟಿನಿಂದ ಕರೆದುಕೊಂಡು ಬಂದ ದೇವರು ನಾನೇ.
ಇಸ್ರೇಲೇ, ನಿನ್ನ ಬಾಯನ್ನು ತೆರೆ,
ಆಗ ನಾನು ನಿನಗೆ ತಿನ್ನಿಸುವೆನು.
5 ನಾವು ನಮ್ಮ ಬಗ್ಗೆ ಬೋಧಿಸುವುದಿಲ್ಲ. ಆದರೆ ಯೇಸು ಕ್ರಿಸ್ತನೇ ಪ್ರಭುವೆಂದು ಮತ್ತು ಯೇಸುವಿಗೋಸ್ಕರ ನಿಮ್ಮ ಸೇವಕರಾಗಿದ್ದೇವೆಂದು ಬೋಧಿಸುತ್ತೇವೆ. 6 “ಬೆಳಕು ಕತ್ತಲೆಯೊಳಗಿಂದ ಪ್ರಕಾಶಿಸಲಿ!” ಎಂದು ದೇವರು ಒಮ್ಮೆ ಹೇಳಿದ್ದಾನೆ. ಈ ದೇವರೇ ನಮ್ಮ ಹೃದಯಗಳಲ್ಲಿ ತನ್ನ ಬೆಳಕನ್ನು ಬೆಳಗಿಸಿದ್ದಾನೆ. ಕ್ರಿಸ್ತನ ಮುಖದಲ್ಲಿರುವ ದೇವರ ಮಹಿಮೆಯನ್ನು ನಮಗೆ ತಿಳಿಯಪಡಿಸುವುದರ ಮೂಲಕ ಆತನು ನಮಗೆ ಬೆಳಕನ್ನು ಕೊಟ್ಟಿದ್ದಾನೆ.
7 ನಮಗೆ ಈ ನಿಕ್ಷೇಪವು ದೇವರಿಂದ ದೊರೆತಿದೆ. ನಾವಾದರೋ ನಿಕ್ಷೇಪವನ್ನು ತುಂಬಿ ಕೊಂಡಿರುವ ಕೇವಲ ಮಡಕೆಗಳಂತಿದ್ದೇವೆ. ಈ ಮಹಾಶಕ್ತಿಯು ಬಂದದ್ದು ದೇವರಿಂದಲೇ ಹೊರತು ನಮ್ಮಿಂದಲ್ಲವೆಂಬುದನ್ನು ಇದು ತೋರಿಸುತ್ತದೆ. 8 ನಮ್ಮ ಸುತ್ತಮುತ್ತಲೆಲ್ಲಾ ಇಕ್ಕಟ್ಟುಗಳಿವೆ, ಆದರೆ ಸೋತುಹೋಗಿಲ್ಲ. ಅನೇಕಸಲ, ಏನು ಮಾಡಬೇಕೋ ನಮಗೆ ತಿಳಿಯದು, ಆದರೂ ನಾವು ಧೈರ್ಯಗೆಡುವುದಿಲ್ಲ. 9 ನಾವು ಹಿಂಸೆಗೆ ಗುರಿಯಾದೆವು, ಆದರೆ ದೇವರು ನಮ್ಮನ್ನು ತೊರೆದುಬಿಡಲಿಲ್ಲ. ಕೆಲವು ಸಲ ನಮಗೆ ನೋವಾಯಿತು, ಆದರೂ ನಾಶವಾಗಲಿಲ್ಲ. 10 ನಮ್ಮ ದೇಹಗಳಲ್ಲಿ ಯೇಸುವಿನ ಜೀವವು ತೋರಿಬರಲೆಂದು ಆತನ ಮರಣಾವಸ್ಥೆಯನ್ನು ಅನುಭವಿಸುತ್ತಿದ್ದೇವೆ. 11 ನಾವು ಜೀವಂತವಾಗಿದ್ದರೂ ಯೇಸುವಿಗೋಸ್ಕರ ಯಾವಾಗಲೂ ಮರಣದ ಅಪಾಯದಲ್ಲಿದ್ದೇವೆ. ಸತ್ತುಹೋಗುವ ನಮ್ಮ ದೇಹಗಳಲ್ಲಿ ಆತನ ಜೀವವು ಕಾಣಬರಲೆಂದು ಇದು ನಮಗೆ ಸಂಭವಿಸುತ್ತದೆ. 12 ಆದ್ದರಿಂದ ಮರಣವು ನಮ್ಮಲ್ಲಿ ಕಾರ್ಯಮಾಡುತ್ತಿದೆ, ಆದರೆ ನಿಮ್ಮಲ್ಲಿ ಜೀವವು ಕಾರ್ಯಮಾಡುತ್ತಿದೆ.
ಕೆಲವು ಯೆಹೂದ್ಯರು ಯೇಸುವಿನ ಕುರಿತು ಮಾಡಿದ ಟೀಕೆ
(ಮತ್ತಾಯ 12:1-8; ಲೂಕ 6:1-5)
23 ಸಬ್ಬತ್‌ದಿನದಂದು, ಯೇಸು ತನ್ನ ಶಿಷ್ಯರೊಂದಿಗೆ ಕೆಲವು ಹೊಲಗಳ ಮೂಲಕ ಹಾದುಹೋಗುತ್ತಿದ್ದನು. ಶಿಷ್ಯರು ತಿನ್ನಲು ಕೆಲವು ಕಾಳಿನ ತೆನೆಗಳನ್ನು ಕಿತ್ತುಕೊಂಡರು. 24 ಫರಿಸಾಯರು ಇದನ್ನು ಕಂಡು ಯೇಸುವಿಗೆ, “ನಿನ್ನ ಶಿಷ್ಯರು ಹೀಗೇಕೆ ಮಾಡುತ್ತಾರೆ? ಸಬ್ಬತ್‌ದಿನದಂದು ಹೀಗೆ ಮಾಡುವುದು ಯೆಹೊದ್ಯರ ನಿಯಮಗಳಿಗೆ ವಿರುದ್ಧವಲ್ಲವೆ?” ಎಂದು ಕೇಳಿದರು.
25 ಯೇಸು ಅವರಿಗೆ, “ದಾವೀದನು ಮತ್ತು ಅವನ ಜನರು ಹಸಿದು ಆಹಾರವನ್ನು ಬಯಸಿದಾಗ ಅವನೇನು ಮಾಡಿದನೆಂಬುದನ್ನು ನೀವು ಓದಿದ್ದೀರಿ.[a] 26 ಅದು ಮಹಾಯಾಜಕನಾದ ಅಬಿಯಾತರನ ಕಾಲ. ದಾವೀದನು ದೇವಾಲಯಕ್ಕೆ ಹೋಗಿ, ದೇವರಿಗೆ ಅರ್ಪಿಸಿದ ರೊಟ್ಟಿಯನ್ನು ತಿಂದನು. ಯಾಜಕರು ಮಾತ್ರ ಆ ರೊಟ್ಟಿಯನ್ನು ತಿನ್ನತಕ್ಕದ್ದೆಂದು ಮೋಶೆಯ ಧರ್ಮಶಾಸ್ತ್ರ ಹೇಳುತ್ತದೆ. ದಾವೀದನು ತನ್ನೊಂದಿಗಿದ್ದ ಜನರಿಗೂ ಆ ರೊಟ್ಟಿಯನ್ನು ನೀಡಿದನು” ಎಂದು ಉತ್ತರಕೊಟ್ಟನು.
27 ನಂತರ ಯೇಸು ಫರಿಸಾಯರಿಗೆ, “ಸಬ್ಬತ್‌ದಿನವನ್ನು ನಿರ್ಮಾಣ ಮಾಡಿರುವುದು ಜನರ ಸಹಾಯಕ್ಕಾಗಿ. ಆದರೆ ಜನರನ್ನು ಸೃಷ್ಟಿಸಿರುವುದು ಸಬ್ಬತ್‌ದಿನಕ್ಕೆ ಅವರು ಅಧೀನರಾಗಿರಲಿ ಎಂದಲ್ಲ. 28 ಆದ್ದರಿಂದ ಮನುಷ್ಯಕುಮಾರನು ಸಬ್ಬತ್‌ದಿನಕ್ಕೂ ಉಳಿದೆಲ್ಲ ದಿನಗಳಿಗೂ ಪ್ರಭುವಾಗಿದ್ದಾನೆ” ಎಂದು ಹೇಳಿದನು.
ಕೈಬತ್ತಿದವನಿಗೆ ಸ್ವಸ್ಥತೆ
(ಮತ್ತಾಯ 12:9-14; ಲೂಕ 6:6-11)
3 ಮತ್ತೊಂದು ದಿನದಲ್ಲಿ, ಯೇಸು ಸಭಾಮಂದಿರದೊಳಕ್ಕೆ ಹೋದನು. ಅಲ್ಲಿ ಕೈಬತ್ತಿದ್ದ ಒಬ್ಬ ಮನುಷ್ಯನಿದ್ದನು. 2 ಅಲ್ಲಿದ್ದ ಕೆಲವು ಯೆಹೂದ್ಯರು, ಯೇಸುವನ್ನು ದೂಷಿಸುವುದಕ್ಕಾಗಿ ಆತನಲ್ಲಿ ಏನಾದರೂ ತಪ್ಪನ್ನು ಕಂಡುಹಿಡಿಯಲು ಎದುರು ನೋಡುತ್ತಿದ್ದರು. ಸಬ್ಬತ್‌ದಿನದಂದು ಆ ಮನುಷ್ಯನನ್ನು ಯೇಸು ಗುಣಪಡಿಸಬಹುದೆಂದು ಅವರು ಆತನ ಸಮೀಪದಲ್ಲಿಯೇ ಇದ್ದರು. 3 ಯೇಸು ಕೈಬತ್ತಿದ್ದ ಆ ಮನುಷ್ಯನಿಗೆ, “ಎದ್ದುನಿಲ್ಲು, ಜನರೆಲ್ಲರೂ ನಿನ್ನನ್ನು ನೋಡಲಿ” ಎಂದು ಹೇಳಿದನು.
4 ನಂತರ ಯೇಸು ಜನರಿಗೆ, “ಸಬ್ಬತ್‌ದಿನದಂದು ಯಾವ ಕಾರ್ಯಗಳನ್ನು ಮಾಡಬೇಕು? ಒಳ್ಳೆಯ ಕಾರ್ಯವನ್ನೇ? ಕೆಟ್ಟಕಾರ್ಯವನ್ನೇ? ಒಂದು ಜೀವವನ್ನು ರಕ್ಷಿಸಬೇಕೇ? ಅಥವಾ ನಾಶಪಡಿಸಬೇಕೇ?” ಎಂದು ಕೇಳಿದನು. ಆಗ ಅವರು ಏನೂ ಉತ್ತರ ಕೊಡಲಾರದೆ ಮೌನವಾಗಿದ್ದರು.
5 ಯೇಸು ಕೋಪಗೊಂಡು ಜನರ ಕಡೆಗೆ ನೋಡಿದನು. ಅವರ ಮೊಂಡುತನವನ್ನು ಕಂಡು ಆತನಿಗೆ ದುಃಖವಾಯಿತು. ಯೇಸು ಆ ಮನುಷ್ಯನಿಗೆ, “ನಿನ್ನ ಕೈ ಚಾಚು” ಎಂದು ಹೇಳಿದನು. ಅವನು ತನ್ನ ಕೈಯನ್ನು ಯೇಸುವಿನತ್ತ ಚಾಚಿದನು. ಕೂಡಲೇ ಅವನ ಕೈ ವಾಸಿಯಾಯಿತು. 6 ಆಗ ಫರಿಸಾಯರು ಹೊರಗೆ ಹೋಗಿ, ಹೆರೋದ್ಯರನ್ನು ಕೂಡಿಕೊಂಡು ಯೇಸುವನ್ನು ಯಾವ ರೀತಿ ಕೊಲ್ಲಬೇಕೆಂದು ಆಲೋಚಿಸಿದರು.
Kannada Holy Bible: Easy-to-Read Version. All rights reserved. © 1997 Bible League International