Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 81:1-10

ರಚನೆಗಾರ: ಆಸಾಫ.

81 ನಮಗೆ ಬಲಪ್ರದನಾಗಿರುವ ದೇವರಿಗೆ ಸಂತಸದಿಂದ ಹಾಡಿರಿ.
    ಇಸ್ರೇಲಿನ ದೇವರಿಗೆ ಆನಂದಘೋಷ ಮಾಡಿರಿ.
ವಾದ್ಯವನ್ನು ನುಡಿಸಲಾರಂಭಿಸಿರಿ;
    ದಮ್ಮಡಿಯನ್ನು ಬಡಿಯಿರಿ.
    ಇಂಪಾದ ಹಾರ್ಪ್ ಮತ್ತು ಲೈರ್ ವಾದ್ಯಗಳನ್ನು ಬಾರಿಸಿರಿ.
ಅಮಾವಾಸ್ಯೆಯಲ್ಲಿಯೂ ನಮ್ಮ ರಜಾಕಾಲವಾದ
    ಪೂರ್ಣಿಮೆಯಲ್ಲಿಯೂ ತುತ್ತೂರಿಯನ್ನು ಊದಿರಿ.
ಇದು ಇಸ್ರೇಲರಿಗೆ ಕಟ್ಟಳೆಯಾಗಿದೆ.
    ಯಾಕೋಬ್ಯರ ದೇವರು ಈ ಆಜ್ಞೆಯನ್ನು ಕೊಟ್ಟನು.
ಆತನು ಯೋಸೇಫನನ್ನು[a] ಈಜಿಪ್ಟಿನಿಂದ ಬಿಡಿಸಿಕೊಂಡು ಬಂದಾಗ
    ಅವನೊಂದಿಗೆ ಈ ಒಡಂಬಡಿಕೆಯನ್ನು ಮಾಡಿಕೊಂಡನು.
ಈಜಿಪ್ಟಿನಲ್ಲಿ ನಾವು ಕೇಳಿದ್ದು ನಮಗೆ ಅರ್ಥವಾಗದ ಭಾಷೆಯನ್ನೇ!
ಆತನು ಹೀಗೆನ್ನುತ್ತಾನೆ: “ನಿಮ್ಮ ಹೆಗಲಿನಿಂದ ಹೊರೆಯನ್ನು ತೆಗೆದುಹಾಕಿದೆನು.
    ಕೆಲಸಗಾರರ ಬುಟ್ಟಿಯನ್ನು ನೀವು ಬಿಸಾಕುವಂತೆ ಮಾಡಿದೆನು.
ನೀವು ಆಪತ್ತಿನಲ್ಲಿದ್ದಾಗ ಸಹಾಯಕ್ಕಾಗಿ ಮೊರೆಯಿಟ್ಟಿರಿ.
    ಆಗ ನಾನು ನಿಮ್ಮನ್ನು ಬಿಡಿಸಿದೆನು.
    ನಾನು ಕಾರ್ಮೋಡದಲ್ಲಿ ಮರೆಯಾಗಿದ್ದರೂ ನಿಮಗೆ ಉತ್ತರಿಸಿದೆನು.
    ನಾನು ನಿಮ್ಮನ್ನು ಮೆರೀಬಾದ ನೀರಿನಿಂದ ಪರೀಕ್ಷಿಸಿದೆನು.”

“ನನ್ನ ಜನರೇ, ನನಗೆ ಕಿವಿಗೊಡಿರಿ, ನಾನು ನಿಮಗೆ ಒಡಂಬಡಿಕೆಯನ್ನು ಕೊಡುತ್ತಿರುವೆ.
    ಇಸ್ರೇಲೇ, ದಯವಿಟ್ಟು ಕಿವಿಗೊಡು!
ಪರದೇಶದವರು ಆರಾಧಿಸುವ
    ಯಾವ ಸುಳ್ಳು ದೇವರುಗಳನ್ನೂ ಪೂಜಿಸಬೇಡ.
10 ಯೆಹೋವನಾದ ನಾನೇ ನಿನ್ನ ದೇವರು.
    ನಿನ್ನನ್ನು ಈಜಿಪ್ಟಿನಿಂದ ಕರೆದುಕೊಂಡು ಬಂದ ದೇವರು ನಾನೇ.
ಇಸ್ರೇಲೇ, ನಿನ್ನ ಬಾಯನ್ನು ತೆರೆ,
    ಆಗ ನಾನು ನಿನಗೆ ತಿನ್ನಿಸುವೆನು.

ವಿಮೋಚನಕಾಂಡ 31:12-18

ಸಬ್ಬತ್

12 ತರುವಾಯ ಯೆಹೋವನು ಮೋಶೆಗೆ ಹೀಗೆಂದನು: 13 “ಇದನ್ನು ಇಸ್ರೇಲರಿಗೆ ಹೇಳು: ‘ನೀವು ನನ್ನ ವಿಶೇಷವಾದ ಸಬ್ಬತ್ ದಿನವನ್ನು ಖಂಡಿತವಾಗಿ ಆಚರಿಸಬೇಕು. ಯೆಹೋವನಾದ ನಾನು ನಿಮ್ಮನ್ನು ನನ್ನ ವಿಶೇಷ ಜನರನ್ನಾಗಿ ಮಾಡಿರುವುದಕ್ಕೆ ಇದು ಗುರುತಾಗಿದೆ.

14 “‘ಸಬ್ಬತ್ ದಿನವನ್ನು ವಿಶೇಷ ದಿನವೆಂದು ಪರಿಗಣಿಸಿ ಆಚರಿಸಿರಿ. ಆ ದಿನವನ್ನು ಬೇರೆ ದಿನದಂತೆ ಪರಿಗಣಿಸಿ ನಡೆಯುವವನಿಗೆ ಮರಣದಂಡನೆಯಾಗಬೇಕು. ಸಬ್ಬತ್ ದಿನದಲ್ಲಿ ಯಾವನಾದರೂ ಕೆಲಸಮಾಡಿದರೆ ಅವನನ್ನು ಬಹಿಷ್ಕರಿಸಬೇಕು. 15 ಕೆಲಸ ಮಾಡುವುದಕ್ಕೆ ವಾರದಲ್ಲಿ ಬೇರೆ ಆರು ದಿನಗಳಿವೆ. ಆದರೆ ಏಳನೆಯ ದಿನವು ವಿಶ್ರಾಂತಿಯ ಬಹು ವಿಶೇಷವಾದ ದಿನವಾಗಿದೆ. ಯೆಹೋವನನ್ನು ಸನ್ಮಾನಿಸಲು ಅದೊಂದು ವಿಶೇಷ ದಿನವಾಗಿದೆ. ಸಬ್ಬತ್ತಿನ ಸಮಯದಲ್ಲಿ ಕೆಲಸಮಾಡುವವನು ಕೊಲ್ಲಲ್ಪಡಬೇಕು. 16 ಇಸ್ರೇಲರು ಸಬ್ಬತ್ ದಿನವನ್ನು ಜ್ಞಾಪಿಸಿಕೊಂಡು ಅದನ್ನು ವಿಶೇಷ ದಿನವನ್ನಾಗಿ ಮಾಡಿಕೊಳ್ಳತಕ್ಕದ್ದು. ಅವರು ಇದನ್ನು ಎಂದೆಂದೂ ಮಾಡತಕ್ಕದ್ದು. ಇದು ಎಂದೆಂದಿಗೂ ಮುಂದುವರಿಯುವ ಒಡಂಬಡಿಕೆ. 17 ಸಬ್ಬತ್ ನನಗೂ ಮತ್ತು ಇಸ್ರೇಲರಿಗೂ ನಡುವೆ ಎಂದೆಂದೂ ಇರುವ ಸೂಚನೆಯಾಗಿರುವುದು.’” ಯೆಹೋವನು ಆರು ದಿನಗಳಲ್ಲಿ ಕೆಲಸಮಾಡಿ ಆಕಾಶವನ್ನೂ ಭೂಮಿಯನ್ನೂ ಉಂಟುಮಾಡಿದನು. ಏಳನೆಯ ದಿನದಲ್ಲಿ ಕೆಲಸ ಮಾಡದೆ ವಿಶ್ರಮಿಸಿಕೊಂಡನು.

18 ಹೀಗೆ, ಯೆಹೋವನು ಮೋಶೆಯೊಡನೆ ಸೀನಾಯಿ ಬೆಟ್ಟದಲ್ಲಿ ಮಾತಾಡುವುದನ್ನು ಮುಗಿಸಿದನು. ಬಳಿಕ ಯೆಹೋವನು ಒಡಂಬಡಿಕೆ ಬರೆಯಲ್ಪಟ್ಟಿದ್ದ ಎರಡು ಕಲ್ಲಿನ ಹಲಿಗೆಗಳನ್ನು ಮೋಶೆಗೆ ಕೊಟ್ಟನು. ಅವು ದೇವರ ಬೆರಳಿನಿಂದ ಲಿಖಿತವಾಗಿತ್ತು.

ಅಪೊಸ್ತಲರ ಕಾರ್ಯಗಳು 25:1-12

ಸೀಸರನನ್ನು ಕಾಣಲು ಪೌಲನು ಮಾಡಿದ ಮನವಿ

25 ಫೆಸ್ತನು ರಾಜ್ಯಪಾಲನಾಗಿ ಮೂರು ದಿನಗಳಾದ ಮೇಲೆ ಸೆಜರೇಯದಿಂದ ಜೆರುಸಲೇಮಿಗೆ ಹೋದನು. ಮಹಾಯಾಜಕರು ಮತ್ತು ಪ್ರಮುಖ ಯೆಹೂದ್ಯ ನಾಯಕರು ಫೆಸ್ತನ ಎದುರಿನಲ್ಲಿ ಪೌಲನಿಗೆ ವಿರೋಧವಾಗಿ ದೋಷಾರೋಪಣೆಗಳನ್ನು ಹೇಳಿದರು. ಅಲ್ಲದೆ ಪೌಲನನ್ನು ಜೆರುಸಲೇಮಿಗೆ ಮರಳಿ ಕಳುಹಿಸಿಕೊಡಬೇಕೆಂದು ಅವರು ಫೆಸ್ತನನ್ನು ಕೇಳಿಕೊಂಡರು. ಅವರು ಪೌಲನನ್ನು ಮಾರ್ಗದಲ್ಲೇ ಕೊಲ್ಲಬೇಕೆಂಬ ಯೋಜನೆ ಮಾಡಿಕೊಂಡಿದ್ದರು. ಆದರೆ ಫೆಸ್ತನು, “ಇಲ್ಲ! ಪೌಲನನ್ನು ಸೆಜರೇಯದಲ್ಲೇ ಇರಿಸಲಾಗುವುದು. ನಾನೇ ಅಲ್ಲಿಗೆ ಬೇಗ ಹೋಗಲಿದ್ದೇನೆ. ನಿಮ್ಮ ನಾಯಕರಲ್ಲಿ ಕೆಲವರು ನನ್ನೊಂದಿಗೆ ಬರಲಿ. ಅವನು ನಿಜವಾಗಿಯೂ ಅಪರಾಧ ಮಾಡಿದ್ದರೆ ಅವನ ಮೇಲೆ ಸೆಜರೇಯದಲ್ಲೇ ಅವರು ದೋಷಾರೋಪಣೆ ಮಾಡಲಿ” ಎಂದು ಉತ್ತರಕೊಟ್ಟನು.

ಫೆಸ್ತನು ಇನ್ನೂ ಎಂಟು-ಹತ್ತು ದಿನಗಳವರೆಗೆ ಜೆರುಸಲೇಮಿನಲ್ಲಿ ಇದ್ದನು. ಬಳಿಕ ಅವನು ಸೆಜರೇಯಕ್ಕೆ ಹಿಂತಿರುಗಿದನು. ಮರುದಿನ ಅವನು ಸೈನಿಕರಿಗೆ ಪೌಲನನ್ನು ತನ್ನ ಮುಂದೆ ಕರೆದುಕೊಂಡು ಬರಬೇಕೆಂದು ತಿಳಿಸಿದನು. ಫೆಸ್ತನು ನ್ಯಾಯಾಸ್ಥಾನದ ಮೇಲೆ ಕುಳಿತುಕೊಂಡಿದ್ದನು. ಪೌಲನು ನ್ಯಾಯಾಲಯದೊಳಗೆ ಬಂದನು. ಜೆರುಸಲೇಮಿನಿಂದ ಬಂದಿದ್ದ ಯೆಹೂದ್ಯರು ಅವನ ಸುತ್ತಲೂ ನಿಂತುಕೊಂಡು ಅವನ ಮೇಲೆ ಅನೇಕ ದೋಷಾರೋಪಗಳನ್ನು ಮಾಡಿದರು. ಆದರೆ ಅವುಗಳಲ್ಲಿ ಯಾವುದಕ್ಕೂ ಆಧಾರವಿರಲಿಲ್ಲ. ಪೌಲನು ಪ್ರತಿವಾದ ಮಾಡುತ್ತಾ, “ನಾನು ಯೆಹೂದ್ಯರ ಧರ್ಮಶಾಸ್ತ್ರಕ್ಕೆ ವಿರುದ್ಧವಾಗಲಿ ದೇವಾಲಯಕ್ಕೆ ವಿರುದ್ಧವಾಗಲಿ ಸೀಸರನಿಗೆ ವಿರುದ್ಧವಾಗಲಿ ಯಾವ ತಪ್ಪನ್ನೂ ಮಾಡಿಲ್ಲ” ಎಂದು ಹೇಳಿದನು.

ಆದರೆ ಫೆಸ್ತನು ಯೆಹೂದ್ಯರ ಮೆಚ್ಚಿಕೆ ಗಳಿಸಿಕೊಳ್ಳಬೇಕೆಂದಿದ್ದನು. ಆದ್ದರಿಂದ ಅವನು ಪೌಲನಿಗೆ, “ನೀನು ಜೆರುಸಲೇಮಿಗೆ ಹೋಗಬಯಸುವೆಯಾ? ಈ ದೋಷಾರೋಪಣೆಗಳ ಕುರಿತು ನಾನು ಅಲ್ಲಿಯೇ ನಿನಗೆ ತೀರ್ಪು ಮಾಡಬೇಕೆಂದು ಅಪೇಕ್ಷಿಸುವಿಯಾ?” ಎಂದು ಕೇಳಿದನು.

10-11 ಪೌಲನು, “ಈಗ ನಾನು ಸೀಸರನ ನ್ಯಾಯಾಸ್ಥಾನದ ಮುಂದೆ ನಿಂತಿದ್ದೇನೆ. ನನಗೆ ತೀರ್ಪಾಗಬೇಕಾದದ್ದು ಇಲ್ಲಿಯೇ! ನಾನು ಯೆಹೂದ್ಯರಿಗೆ ಯಾವ ಅಪರಾಧವನ್ನೂ ಮಾಡಿಲ್ಲ. ಇದು ಸತ್ಯವೆಂದು ನಿನಗೆ ಗೊತ್ತಿದೆ. ನಾನು ಅಪರಾಧಿಯಾಗಿದ್ದು ಧರ್ಮಶಾಸ್ತ್ರವು ನನಗೆ ಮರಣದಂಡನೆ ವಿಧಿಸಿದರೆ, ನಾನು ಆ ತೀರ್ಪನ್ನು ಒಪ್ಪಿಕೊಳ್ಳುತ್ತೇನೆ. ಆದರೆ ಇವರ ದೋಷಾರೋಪಣೆಗಳು ಸತ್ಯವಾಗಿಲ್ಲದಿದ್ದರೆ, ನನ್ನನ್ನು ಇವರ ಕೈಗೆ ಒಪ್ಪಿಸಲು ಯಾರಿಗೂ ಸಾಧ್ಯವಿಲ್ಲ! ನನ್ನ ವಿಷಯವನ್ನು ಸೀಸರನೇ ಪರಿಶೀಲಿಸಲಿ!” ಎಂದನು.

12 ಫೆಸ್ತನು ತನ್ನ ಸಲಹೆಗಾರರೊಂದಿಗೆ ಇದರ ಬಗ್ಗೆ ಮಾತಾಡಿದನು. ಬಳಿಕ ಅವನು, “ನನ್ನ ವಿಷಯವನ್ನು ಸೀಸರನೇ ಪರಿಶೀಲಿಸಲಿ ಎಂದು ನೀನು ಕೇಳಿಕೊಂಡದ್ದರಿಂದ ನಿನ್ನನ್ನು ಸೀಸರನ ಬಳಿಗೇ ಕಳುಹಿಸಿಕೊಡುತ್ತೇನೆ” ಎಂದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International