Revised Common Lectionary (Complementary)
ದಾವೀದನು ಯೆಹೂದದ ಅರಣ್ಯದಲ್ಲಿದ್ದಾಗ ರಚಿಸಲ್ಪಟ್ಟಿತು. ರಚನೆಗಾರ: ದಾವೀದ.
63 ದೇವರೇ, ನೀನೇ ನನ್ನ ದೇವರು.
ನಿನಗಾಗಿ ಕುತೂಹಲದಿಂದ ಎದುರು ನೋಡುತ್ತೇನೆ.
ನೀರಿಲ್ಲದೆ ಒಣಗಿದ ಭೂಮಿಯಂತೆ ನನ್ನ ಆತ್ಮವು ನಿನಗಾಗಿ ಬಾಯಾರಿದೆ;
ನನ್ನ ದೇಹವು ನಿನಗಾಗಿ ಬಯಸಿದೆ.
2 ಹೌದು, ನಿನ್ನನ್ನು ನಿನ್ನ ಆಲಯದಲ್ಲಿ ನೋಡಿದ್ದೇನೆ,
ನಿನ್ನ ಶಕ್ತಿಯನ್ನೂ ಮಹಿಮೆಯನ್ನೂ ಕಂಡಿದ್ದೇನೆ.
3 ನಿನ್ನ ಪ್ರೀತಿಯು ಜೀವಕ್ಕಿಂತಲೂ ಶ್ರೇಷ್ಠ.
ನನ್ನ ತುಟಿಗಳು ನಿನ್ನನ್ನು ಕೊಂಡಾಡುತ್ತವೆ.
4 ಹೌದು, ನನ್ನ ಜೀವಮಾನವೆಲ್ಲಾ ನಿನ್ನನ್ನು ಕೊಂಡಾಡುವೆನು.
ನಿನ್ನ ಹೆಸರಿನಲ್ಲಿ ಕೈಮುಗಿದು ಪ್ರಾರ್ಥಿಸುವೆನು.
5 ಮೃಷ್ಟಾನ್ನವನ್ನು ತಿಂದಿರುವವನಂತೆ ತೃಪ್ತನಾಗಿರುವೆನು.
ನನ್ನ ಬಾಯಿ ನಿನ್ನನ್ನು ಕೊಂಡಾಡುವುದು.
6 ಹಾಸಿಗೆಯು ಮೇಲೆ ಮಲಗಿರುವಾಗಲೂ ನಿನ್ನನ್ನು ಜ್ಞಾಪಿಸಿಕೊಳ್ಳುವೆನು.
ಮಧ್ಯರಾತ್ರಿಯಲ್ಲಿಯೂ ನಿನ್ನನ್ನು ನೆನಸಿಕೊಳ್ಳುವೆನು.
7 ನಿಜವಾಗಿಯೂ ನೀನೇ ನನಗೆ ಸಹಾಯಕ.
ನಿನ್ನ ರೆಕ್ಕೆಗಳ ಮರೆಯಲ್ಲಿ ಆನಂದಘೋಷ ಮಾಡುವೆನು.
8 ನನ್ನ ಆತ್ಮವು ನಿನ್ನನ್ನು ಅಂಟಿಕೊಂಡಿರುವುದು.
ನಿನ್ನ ಬಲಗೈ ನನ್ನ ಕೈಹಿಡಿದು ನಡೆಸುವುದು.
9 ನನ್ನನ್ನು ಕೊಲ್ಲಬೇಕೆಂದಿರುವವರು
ಪಾತಾಳಕ್ಕೆ ಇಳಿದುಹೋಗುವರು.
10 ಅವರು ಖಡ್ಗಗಳಿಂದ ಕೊಲ್ಲಲ್ಪಡುವರು.
ಅವರ ಶವಗಳು ನರಿಗಳ ಪಾಲಾಗುವವು.
11 ರಾಜನಾದರೋ ತನ್ನ ದೇವರಲ್ಲಿಯೇ ಸಂತೋಷಿಸುವನು.
ಹರಕೆಹೊತ್ತು ಅವನಿಗೆ ವಿಧೇಯರಾಗಿರುವವರು ದೇವರನ್ನು ಕೊಂಡಾಡುವರು,
ಯಾಕೆಂದರೆ ಆ ಸುಳ್ಳುಗಾರರನ್ನೆಲ್ಲಾ ಆತನು ಸೋಲಿಸಿದ್ದಾನೆ.
7 ಯೆಹೋವನು “ಯಾಕೋಬನ ಮಹಿಮೆ” ಎಂಬ ತನ್ನ ಹೆಸರಿನ ಮೇಲೆ ಆಣೆಯಿಟ್ಟು ವಾಗ್ದಾನ ಮಾಡಿದ್ದಾನೆ.
“ಆ ಜನರು ಮಾಡಿದ ಕೃತ್ಯಗಳನ್ನು ನಾನು ಎಂದಿಗೂ ಮರೆಯುವುದಿಲ್ಲ.
8 ಅದರ ಸಲುವಾಗಿ ಇಡೀ ದೇಶವು ಅಲುಗಾಡುವದು.
ಸತ್ತವರಿಗಾಗಿ ದೇಶದ ಪ್ರತಿ ನಿವಾಸಿಯೂ ರೋಧಿಸುವನು.
ಈಜಿಪ್ಟಿನ ನೈಲ್ ನದಿಯ ರೀತಿಯಲ್ಲಿ ದೇಶವು ತಿರುಗುಮುರುಗಾಗುವುದು.”
9 ಯೆಹೋವನು ಹೀಗೆನ್ನುತ್ತಾನೆ,
“ಆ ದಿವಸಗಳಲ್ಲಿ ನಡುಮಧ್ಯಾಹ್ನದಲ್ಲಿಯೇ ಸೂರ್ಯನನ್ನು ಮುಳುಗುವಂತೆ ಮಾಡುವೆನು.
ಶುಭ್ರವಾದ ಹಗಲಿನಲ್ಲಿ ಕತ್ತಲು ಉಂಟಾಗುವಂತೆ ಮಾಡುವೆನು.
10 ನಿಮ್ಮ ಸಂತಸದ ದಿವಸಗಳನ್ನು ಸತ್ತವರಿಗಾಗಿ ರೋದಿಸುವ ದಿವಸಗಳನ್ನಾಗಿ ಮಾಡುವೆನು.
ನಿಮ್ಮ ಹಾಡುಗಳೆಲ್ಲಾ ಶೋಕಗೀತೆಯಾಗುವವು.
ಎಲ್ಲರೂ ಶೋಕಬಟ್ಟೆಯನ್ನು ಧರಿಸುವಂತೆ ಮಾಡುವೆನು.
ಪ್ರತಿ ತಲೆಯನ್ನು ಬೋಳು ತಲೆಯನ್ನಾಗಿ ಮಾಡುವೆನು.
ಒಬ್ಬನೇ ಮಗನನ್ನು ಕಳೆದುಕೊಳ್ಳುವಾಗ ರೋದಿಸುವ ಹಾಗೆ
ಗಟ್ಟಿಯಾಗಿ ರೋದಿಸುವಂತೆ ಮಾಡುತ್ತೇನೆ.
ಅದರ ಅಂತ್ಯ ಕಹಿಯಾಗಿರುವುದು.”
ದೇವರ ವಾಕ್ಯಕ್ಕಾಗಿ ಅತಿಯಾದ ಹಸಿವೆಯಿಂದ ಕೇಳುವ ದಿವಸಗಳು ಬರುವವು
11 ಯೆಹೋವನು ಹೇಳುವುದೇನೆಂದರೆ,
“ನಿಮ್ಮ ದೇಶದಲ್ಲಿ ಹಸಿವೆಯ
ದಿವಸಗಳನ್ನು ಬರಮಾಡುವೆನು.
ಜನರು ರೊಟ್ಟಿಗಾಗಿ ಹಸಿಯುವುದಿಲ್ಲ.
ನೀರಿಗಾಗಿ ಬಾಯಾರುವದಿಲ್ಲ.
ಇಲ್ಲ! ಜನರು ಯೆಹೋವನ ವಾಕ್ಯಕ್ಕಾಗಿ ಹಸಿವೆಯುಳ್ಳವರಾಗುವರು.
12 ಮೃತ್ಯುಸಮುದ್ರದಿಂದ ಮೆಡಿಟರೇನಿಯನ್ ಸಮುದ್ರದ ತನಕ,
ಉತ್ತರದಿಂದ ಪೂರ್ವದಿಕ್ಕಿನ ತನಕ ಜನರು
ಯೆಹೋವನ ಸಂದೇಶಕ್ಕಾಗಿ ಹಾತೊರೆಯುತ್ತಾ ಅಲೆದಾಡುವರು.
ಆದರೆ ಅವರು ಕಂಡುಕೊಳ್ಳುವುದಿಲ್ಲ.
13 ಆ ಸಮಯದಲ್ಲಿ ಸುಂದರವಾದ
ತರುಣತರುಣಿಯರು ದಾಹದಿಂದ ಬಳಲುವರು.
14 ಆ ಜನರು ಸಮಾರ್ಯದ ಪಾಪದ[a] ಮೇಲೆ ಆಣೆಯಿಡುವರು,
‘ದಾನೇ, ನಿನ್ನ ದೇವರಾಣೆ ….’
‘ಬೇರ್ಷೆಬದ ದೇವರಾಣೆ ….’ ಎಂಬುದಾಗಿ ಹೇಳುವರು.
ಆದರೆ ಆ ಜನರು ಬಿದ್ದುಹೋಗುವರು.
ಅಲ್ಲಿಂದ ತಿರುಗಿ ಏಳುವದೇ ಇಲ್ಲ.”
20 ಸಹೋದರ ಸಹೋದರಿಯರೇ, ಮಕ್ಕಳಂತೆ ಆಲೋಚಿಸಬೇಡಿ. ಕೆಟ್ಟ ವಿಷಯಗಳಲ್ಲಿ ಎಳೆಗೂಸುಗಳಂತಿರಿ. ಆದರೆ ನಿಮ್ಮ ಆಲೋಚನೆಗಳಲ್ಲಿ ಪ್ರಾಯಸ್ಥರಂತಿರಿ. 21 ಪವಿತ್ರ ಗ್ರಂಥದಲ್ಲಿ ಈ ರೀತಿ ಬರೆಯಲ್ಪಟ್ಟಿದೆ:
“ವಿವಿಧ ಭಾಷೆಗಳನ್ನು ಮಾತಾಡುವವರ ಮೂಲಕವೂ
ವಿದೇಶಿಯರ ನಾಲಿಗೆಯ ಮೂಲಕವೂ
ನಾನು ಈ ಜನರೊಂದಿಗೆ ಮಾತಾಡುವೆನು;
ಆದರೂ ಇವರು ನನಗೆ ವಿಧೇಯರಾಗುವುದಿಲ್ಲ.”(A)
ಪ್ರಭುವು ಹೇಳುವುದು ಅದನ್ನೇ.
22 ಆದ್ದರಿಂದ ವಿವಿಧ ಭಾಷೆಗಳನ್ನು ಮಾತಾಡುವ ವರವು ನಂಬದ ಜನರಿಗೆ ಆಧಾರವಾಗಿದೆಯೇ ಹೊರತು ನಂಬುವವರಿಗಲ್ಲ. ಆದರೆ ಪ್ರವಾದನೆಯು ನಂಬುವ ಜನರಿಗೋಸ್ಕರವಾಗಿ ಇದೆಯೇ ಹೊರತು ನಂಬದವರಿಗಲ್ಲ. 23 ಒಂದುವೇಳೆ ಇಡೀ ಸಭೆಯು ಕೂಡಿಬಂದಾಗ ನೀವೆಲ್ಲರೂ ವಿವಿಧ ಭಾಷೆಗಳನ್ನು ಮಾತಾಡತೊಡಗಿದರೆ, ಅಲ್ಲಿಗೆ ಬರುವ ತಿಳುವಳಿಕೆಯಿಲ್ಲದ ಅಥವಾ ನಂಬದ ಕೆಲವು ಜನರು ನಿಮ್ಮನ್ನು ಹುಚ್ಚರೆಂದು ಹೇಳುವರು. 24 ಒಂದುವೇಳೆ ನೀವೆಲ್ಲರೂ ಪ್ರವಾದನೆ ಮಾಡುತ್ತಿರುವಾಗ, ತಿಳುವಳಿಕೆಯಿಲ್ಲದ ಅಥವಾ ನಂಬಿಕೆಯಿಲ್ಲದ ವ್ಯಕ್ತಿಯು ಒಳಗೆ ಬಂದರೆ, ನಿಮ್ಮ ಪ್ರವಾದನೆಗಳು ಆ ವ್ಯಕ್ತಿಗೆ ಅವನ ಪಾಪವನ್ನು ತೋರಿಸಿಕೊಡುತ್ತವೆ ಮತ್ತು ನೀವು ಹೇಳುವ ವಿಷಯಗಳ ಆಧಾರದ ಮೇಲೆ ಅವನಿಗೆ ತೀರ್ಪಾಗುವುದು. 25 ಆ ವ್ಯಕ್ತಿಯ ಹೃದಯದಲ್ಲಿರುವ ರಹಸ್ಯ ಸಂಗತಿಗಳು ಬಯಲಾಗುತ್ತವೆ. ಆದ್ದರಿಂದ ಆ ವ್ಯಕ್ತಿಯು ಅಡ್ಡಬಿದ್ದು ದೇವರನ್ನು ಆರಾಧಿಸುವನು. “ನಿಜವಾಗಿಯೂ ದೇವರು ನಿಮ್ಮ ಸಂಗಡವಿದ್ದಾನೆ” ಎಂದು ಅವನು ಹೇಳುವನು.[a]
Kannada Holy Bible: Easy-to-Read Version. All rights reserved. © 1997 Bible League International