Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 18:1-19

ಯೆಹೋವನು ದಾವೀದನನ್ನು ಸೌಲನಿಂದಲೂ ಎಲ್ಲಾ ಶತ್ರು ಸೈನ್ಯಗಳಿಂದಲೂ ರಕ್ಷಿಸಿದಾಗ ರಚಿಸಲ್ಪಟ್ಟಿತು. ರಚನೆಗಾರ: ದಾವೀದ.

18 ನನ್ನ ಬಲವಾಗಿರುವ ಯೆಹೋವನೇ,
    ನಿನ್ನನ್ನೇ ಪ್ರೀತಿಸುವೆನು!

ಯೆಹೋವನು ನನ್ನ ಬಂಡೆಯೂ[a] ನನ್ನ ಕೋಟೆಯೂ
    ನನ್ನ ಆಶ್ರಯಗಿರಿಯೂ ನನ್ನ ಗುರಾಣಿಯೂ
    ನನ್ನ ರಕ್ಷಣಾಬಲವೂ ನನ್ನ ದುರ್ಗವೂ ಆಗಿದ್ದಾನೆ.

ಯೆಹೋವನಿಗೆ ಸ್ತೋತ್ರವಾಗಲಿ!
    ನಾನು ಆತನಿಗೆ ಮೊರೆಯಿಟ್ಟಾಗ ನನ್ನನ್ನು ವೈರಿಗಳಿಂದ ರಕ್ಷಿಸಿದನು.
ಮರಣಕರವಾದ ಹಗ್ಗಗಳು ನನ್ನನ್ನು ಬಿಗಿದುಕೊಂಡವು.
    ನಾಶಪ್ರವಾಹವು ನನ್ನನ್ನು ಪಾತಾಳಕ್ಕೆ ಕೊಚ್ಚಿಕೊಂಡು ಹೋಗುತ್ತಿತ್ತು.
ಪಾತಾಳದ ಹಗ್ಗಗಳು ನನ್ನನ್ನು ಬಿಗಿದುಕೊಂಡಿದ್ದವು.
    ಮರಣಕರವಾದ ಉರುಲುಗಳು ನನ್ನೆದುರಿನಲ್ಲಿದ್ದವು.
ಆಗ ನಾನು ಸಹಾಯಕ್ಕಾಗಿ ಯೆಹೋವನನ್ನು ಕೂಗಿಕೊಂಡೆನು;
    ನನ್ನ ದೇವರಿಗೆ ಮೊರೆಯಿಟ್ಟೆನು.
ಆತನು ತನ್ನ ಆಲಯದಲ್ಲಿ ನನ್ನ ಸ್ವರವನ್ನು ಕೇಳಿದನು;
    ನನ್ನ ಮೊರೆಗೆ ಕಿವಿಗೊಟ್ಟನು.
ಆಗ ಆತನಿಗೆ ಸಿಟ್ಟೇರಿದ್ದರಿಂದ ಭೂಮಿಯು ಗಡಗಡನೆ ನಡುಗಿತು;
    ಪರ್ವತಗಳ ಬುನಾದಿಗಳು ಕಂಪಿಸಿದವು.
ಆತನ ಮೂಗಿನಿಂದ ಹೊಗೆಯು ಬಂದಿತು;
    ಆತನ ಬಾಯಿಂದ ಅಗ್ನಿಜ್ವಾಲೆಯೂ ಬೆಂಕಿಯ ಕಿಡಿಗಳೂ ಬಂದವು.
ಆತನು ಆಕಾಶವನ್ನು ಹರಿದು ಕೆಳಗಿಳಿದು ಬಂದನು.
    ಆತನು ದಟ್ಟವಾದ ಕಪ್ಪುಮೋಡದ ಮೇಲೆ ನಿಂತುಕೊಂಡನು.
10 ಕೆರೂಬಿಗಳ ಮೇಲೆ ಆಸೀನನಾಗಿ
    ವಾಯುವೇ ತನ್ನ ರೆಕ್ಕೆಗಳೋ ಎಂಬಂತೆ ಹಾರಿಬಂದನು.
11 ಆತನನ್ನು ಗುಡಾರದಂತೆ ಆವರಿಸಿಕೊಂಡಿದ್ದ ದಟ್ಟವಾದ ಕಪ್ಪುಮೋಡದಲ್ಲಿ
    ಆತನು ಮರೆಯಾದನು.
12 ಬಳಿಕ, ಆತನ ಉಜ್ವಲವಾದ ಪ್ರಕಾಶವು ಮೋಡಗಳನ್ನು ಛೇದಿಸಿಕೊಂಡು ನುಗ್ಗಲು
    ಆಲಿಕಲ್ಲಿನ ಮಳೆಯು ಸುರಿಯಿತು; ಮಿಂಚುಗಳು ಹೊಳೆದವು.
13 ಯೆಹೋವನು ಆಕಾಶದಲ್ಲಿ ಗುಡುಗಿದನು;
    ಮಹೋನ್ನತ ದೇವರು ತನ್ನ ಧ್ವನಿಯನ್ನು ಕೇಳುವಂತೆ ಮಾಡಿದನು.
14 ಆತನು ಬಾಣಗಳನ್ನು[b] ಎಸೆದು ವೈರಿಗಳನ್ನು ಚದರಿಸಿಬಿಟ್ಟನು;
    ಸಿಡಿಲುಮಿಂಚುಗಳಿಂದ ಅವರನ್ನು ಕಳವಳಗೊಳಿಸಿದನು.

15 ಯೆಹೋವನೇ, ನೀನು ಆಜ್ಞಾಪಿಸಿದಾಗ
    ಬಿರುಗಾಳಿಯು ಬೀಸತೊಡಗಿ ನೀರನ್ನು ನೂಕಲು
ಸಮುದ್ರದ ತಳವೇ ಕಾಣಿಸಿತು.
    ಭೂಮಿಯ ಅಸ್ತಿವಾರಗಳೂ ಕಾಣಿಸಿದವು.

16 ಆತನು ಮೇಲಿನ ಲೋಕದಿಂದ ಕೈಚಾಚಿ ನನ್ನನ್ನು ರಕ್ಷಿಸಿದನು.
    ಆತನು ನನ್ನ ಕೈಹಿಡಿದು ನೀರಿನಿಂದ ಮೇಲೆತ್ತಿದನು.
17 ನನ್ನನ್ನು ದ್ವೇಷಿಸುವ ವೈರಿಗಳು
    ನನಗಿಂತ ಬಲವಾಗಿಯೂ ಶಕ್ತರಾಗಿಯೂ ಇದ್ದರು; ಆತನು ನನ್ನನ್ನು ಅವರಿಂದ ರಕ್ಷಿಸಿದನು.
18 ನಾನು ಕಷ್ಟದಲ್ಲಿದ್ದಾಗ ಅವರು ನನ್ನ ಮೇಲೆ ಆಕ್ರಮಣಮಾಡಲು,
    ಯೆಹೋವನು ನನಗೆ ಸಹಾಯಕನಾಗಿ ಬಂದನು.
19 ಆತನು ನನ್ನನ್ನು ಪ್ರೀತಿಸುವುದರಿಂದ ನನ್ನನ್ನು ರಕ್ಷಿಸಿದನು;
    ನನ್ನನ್ನು ಸುರಕ್ಷಿತವಾದ ಸ್ಥಳಕ್ಕೆ ಕರೆದುಕೊಂಡು ಬಂದನು.

ಆದಿಕಾಂಡ 19:1-29

ಲೋಟನ ಸಂದರ್ಶಕರು

19 ಆ ಸಾಯಂಕಾಲ, ದೇವದೂತರಿಬ್ಬರು ಸೊದೋಮ್ ನಗರಕ್ಕೆ ಬಂದರು. ನಗರದ ಬಾಗಿಲುಗಳ ಬಳಿ ಕುಳಿತುಕೊಂಡಿದ್ದ ಲೋಟನು ದೇವದೂತರನ್ನು ಕಂಡು, ಅವರ ಬಳಿಗೆ ಹೋಗಿ ನಮಸ್ಕರಿಸಿದನು. ಲೋಟನು ಅವರಿಗೆ, “ಸ್ವಾಮಿಗಳೇ, ದಯವಿಟ್ಟು ನನ್ನ ಮನೆಗೆ ಬನ್ನಿ. ನಾನು ನಿಮ್ಮನ್ನು ಉಪಚರಿಸುವೆನು. ನಿಮ್ಮ ಕೈಕಾಲುಗಳನ್ನು ತೊಳೆದುಕೊಂಡು ಈ ರಾತ್ರಿ ನಮ್ಮ ಮನೆಯಲ್ಲೇ ಇರಿ. ನಾಳೆ ಮುಂಜಾನೆ ನಿಮ್ಮ ಪ್ರಯಾಣವನ್ನು ಮುಂದುವರಿಸಬಹುದು” ಎಂದು ಹೇಳಿದನು.

ದೇವದೂತರು, “ಈ ಚೌಕದಲ್ಲಿ ನಾವು ಈ ರಾತ್ರಿ ಕಳೆಯುತ್ತೇವೆ” ಎಂದು ಉತ್ತರಿಸಿದರು.

ಆದರೆ ಲೋಟನು ತನ್ನ ಮನೆಗೆ ಬರುವಂತೆ ಒತ್ತಾಯಿಸಿದ್ದರಿಂದ ಅವರು ಅವನ ಮನೆಗೆ ಹೋದರು. ಲೋಟನು ಅವರಿಗಾಗಿ ಹುಳಿಯಿಲ್ಲದ ರೊಟ್ಟಿಗಳನ್ನು ಸುಡಿಸಿ ಅಡಿಗೆ ಮಾಡಿಸಿದನು. ದೇವದೂತರು ಅದನ್ನು ಊಟಮಾಡಿದರು.

ಆ ರಾತ್ರಿ ಮಲಗುವುದಕ್ಕಿಂತ ಮುಂಚೆ ಸೊದೋಮಿನ ಗಂಡಸರೆಲ್ಲರೂ ಬಂದು ಲೋಟನ ಮನೆಯ ಸುತ್ತಲೂ ನಿಂತುಕೊಂಡು ಲೋಟನಿಗೆ, “ನಿನ್ನ ಮನೆಗೆ ಬಂದ ಆ ಇಬ್ಬರು ಪುರುಷರು ಎಲ್ಲಿದ್ದಾರೆ? ಅವರನ್ನು ಹೊರಗೆ ಕಳುಹಿಸು. ನಾವು ಅವರನ್ನು ಸಂಭೋಗಿಸಬೇಕು” ಎಂದು ಕೂಗಿ ಹೇಳಿದರು.

ಲೋಟನು ಹೊರಗೆ ಬಂದು ಬಾಗಿಲಿಗೆ ಬೀಗ ಹಾಕಿ, ಆ ಗಂಡಸರಿಗೆ, “ನನ್ನ ಸಹೋದರರೇ, ನಾನು ನಿಮ್ಮನ್ನು ಬೇಡಿಕೊಳ್ಳುತ್ತಿದ್ದೇನೆ. ದಯವಿಟ್ಟು ಈ ಕೆಟ್ಟಕಾರ್ಯವನ್ನು ಮಾಡಬೇಡಿ. ನೋಡಿ! ನನಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಅವರು ಹಿಂದೆಂದೂ ಗಂಡಸರೊಡನೆ ಮಲಗಿದವರಲ್ಲ. ನೀವು ಅವರಿಗೆ ಏನುಬೇಕಾದರೂ ಮಾಡಿ, ಆದರೆ ದಯವಿಟ್ಟು ಈ ಪುರುಷರಿಗೆ ಏನನ್ನೂ ಮಾಡಬೇಡಿ. ಇವರು ನನ್ನ ಮನೆಗೆ ಬಂದಿದ್ದಾರೆ; ಇವರನ್ನು ಕಾಪಾಡುವುದು ನನ್ನ ಕರ್ತವ್ಯ” ಎಂದು ಹೇಳಿದನು.

ಮನೆಯ ಸುತ್ತಲೂ ನಿಂತುಕೊಂಡಿದ್ದ ಗಂಡಸರು ಅವನಿಗೆ, “ದಾರಿಬಿಡು” ಎಂದು ಕೂಗಿದರು. ಆಮೇಲೆ ಅವರು ತಮ್ಮೊಳಗೆ, “ಈ ಲೋಟನು ನಮ್ಮ ನಗರಕ್ಕೆ ಪ್ರವಾಸಿಗನಂತೆ ಬಂದು ಈಗ ನಮಗೇ ನ್ಯಾಯವನ್ನು ಹೇಳಿಕೊಡುತ್ತಿದ್ದಾನೆ” ಎಂದು ಮಾತಾಡಿಕೊಂಡರು. ಆಮೇಲೆ ಅವರು ಲೋಟನಿಗೆ, “ನಾವು ಆ ಪುರುಷರಿಗೆ ಮಾಡುವುದಕ್ಕಿಂತ ನಿನಗೇ ಹೆಚ್ಚು ಕೆಟ್ಟದ್ದನ್ನು ಮಾಡುತ್ತೇವೆ” ಎಂದು ಕೂಗಿಹೇಳಿ ಲೋಟನ ಸಮೀಪಕ್ಕೆ ಬಂದು ಬಾಗಿಲನ್ನು ಮುರಿದುಹಾಕಲು ಸಿದ್ಧರಾದರು.

10 ಆದರೆ ಮನೆಯೊಳಗಿದ್ದ ಇಬ್ಬರು ಪುರುಷರು ಬಾಗಿಲನ್ನು ತೆರೆದು ಲೋಟನನ್ನು ಮನೆಯೊಳಗೆ ಎಳೆದುಕೊಂಡು ಬಾಗಿಲನ್ನು ಮುಚ್ಚಿದರು. 11 ಆ ಇಬ್ಬರು ಪುರುಷರು ಮನೆಯ ಹೊರಗೆ ಇದ್ದ ಗಂಡಸರನ್ನೆಲ್ಲಾ ಕುರುಡರಾಗುವಂತೆ ಮಾಡಿದ್ದರಿಂದ ಅವರು ಬಾಗಿಲನ್ನು ಗುರುತಿಸಲಾರದೆ ಹೋದರು.

ಸೊದೋಮಿನಿಂದ ಪಲಾಯನ

12 ಆ ಇಬ್ಬರು ಪುರುಷರು ಲೋಟನಿಗೆ, “ನಿನ್ನ ಕುಟುಂಬದ ಬೇರೆ ಯಾರಾದರೂ ಈ ನಗರದಲ್ಲಿ ಇದ್ದಾರೆಯೇ? ನಿನಗೆ ಅಳಿಯಂದಿರಾಗಲಿ ಗಂಡುಮಕ್ಕಳಾಗಲಿ ಹೆಣ್ಣುಮಕ್ಕಳಾಗಲಿ ಇಲ್ಲಿ ವಾಸವಾಗಿದ್ದಾರೆಯೇ? ನಿನ್ನ ಕುಟುಂಬದ ಯಾರಾದರೂ ಈ ನಗರದಲ್ಲಿದ್ದರೆ ಈಗಲೇ ಇಲ್ಲಿಂದ ಹೊರಡುವಂತೆ ಅವರಿಗೆ ತಿಳಿಸು. 13 ನಾವು ಈ ನಗರವನ್ನು ನಾಶಮಾಡುತ್ತೇವೆ. ಈ ನಗರದ ದುಷ್ಟತನವನ್ನು ಯೆಹೋವನು ನೋಡಿದ್ದಾನೆ. ಆದ್ದರಿಂದ ಇದನ್ನು ನಾಶಮಾಡಲು ಆತನೇ ನಮ್ಮನ್ನು ಕಳುಹಿಸಿದ್ದಾನೆ” ಎಂದು ಹೇಳಿದರು.

14 ಆದ್ದರಿಂದ ಲೋಟನು ಹೊರಗೆ ಹೋಗಿ, ತನ್ನ ಹೆಣ್ಣುಮಕ್ಕಳೊಡನೆ ನಿಶ್ಚಿತಾರ್ಥವಾಗಿದ್ದ ಅಳಿಯಂದಿರೊಡನೆ ಮಾತಾಡಿ, “ಬೇಗನೆ ಈ ಪಟ್ಟಣವನ್ನು ಬಿಟ್ಟು ಹೊರಡಿರಿ; ಯೆಹೋವನು ಈ ಪಟ್ಟಣವನ್ನು ನಾಶಮಾಡುವನು” ಎಂದು ಹೇಳಿದನು. ಲೋಟನ ಈ ಮಾತು ಅವರಿಗೆ ತಮಾಷೆಯಂತೆ ಕಂಡಿತು.

15 ಸೂರ್ಯೋದಯಕ್ಕಿಂತ ಮೊದಲೇ ಹೊರಡುವಂತೆ ದೇವದೂತರು ಲೋಟನನ್ನು ಒತ್ತಾಯಿಸಿ, “ಈ ನಗರವನ್ನು ನಾಶಗೊಳಿಸಲಾಗುವುದು. ಆದ್ದರಿಂದ ನಿನ್ನ ಹೆಂಡತಿಯನ್ನೂ ನಿನ್ನ ಇಬ್ಬರು ಹೆಣ್ಣುಮಕ್ಕಳನ್ನೂ ಕರೆದುಕೊಂಡು ಈ ಸ್ಥಳದಿಂದ ಓಡಿಹೋಗು, ಆಗ ನೀನು ಈ ನಗರದೊಡನೆ ನಾಶವಾಗುವುದಿಲ್ಲ” ಎಂದು ಹೇಳಿದರು.

16 ಆದರೆ ಲೋಟನು ಗಲಿಬಿಲಿಗೊಂಡು ತಡಮಾಡಲು ಆ ಇಬ್ಬರು ಪುರುಷರು ಲೋಟನನ್ನೂ ಅವನ ಹೆಂಡತಿಯನ್ನೂ ಅವನ ಇಬ್ಬರು ಹೆಣ್ಣುಮಕ್ಕಳನ್ನೂ ಕೈಹಿಡಿದುಕೊಂಡು ನಗರದ ಹೊರಕ್ಕೆ ಸುರಕ್ಷಿತವಾಗಿ ತಂದುಬಿಟ್ಟರು. ಹೀಗೆ ಯೆಹೋವನು ಲೋಟನಿಗೂ ಅವನ ಕುಟುಂಬದವರಿಗೂ ದಯೆತೋರಿದನು. 17 ಅವರು ನಗರದ ಹೊರಕ್ಕೆ ಬಂದ ಮೇಲೆ ಆ ಪುರುಷರಲ್ಲಿ ಒಬ್ಬನು, “ಈಗ ಓಡಿಹೋಗಿ ನಿಮ್ಮ ಪ್ರಾಣವನ್ನು ಕಾಪಾಡಿಕೊಳ್ಳಿ; ನಗರದ ಕಡೆಗೆ ತಿರುಗಿ ನೋಡಬೇಡಿ; ಕಣಿವೆಯ ಯಾವ ಸ್ಥಳದಲ್ಲೂ ನಿಂತುಕೊಳ್ಳಬೇಡಿ; ತಪ್ಪಿಸಿಕೊಂಡು ಬೆಟ್ಟಗಳಿಗೆ ಓಡಿಹೋಗಿರಿ; ಇಲ್ಲವಾದರೆ, ಈ ನಗರದೊಡನೆ ನೀವೂ ನಾಶವಾಗುವಿರಿ” ಎಂದು ಹೇಳಿದನು.

18 ಆದರೆ ಲೋಟನು ಆ ಪುರುಷರಿಗೆ, “ಸ್ವಾಮಿಗಳೇ, ದಯವಿಟ್ಟು ಬಹುದೂರದವರೆಗೆ ಓಡಿಹೋಗುವಂತೆ ನಮ್ಮನ್ನು ಒತ್ತಾಯಿಸಬೇಡಿ. 19 ನಿಮ್ಮ ಸೇವಕನಾದ ನನಗೆ ಮಹಾಕರುಣೆಯನ್ನು ತೋರಿ ನನ್ನನ್ನು ಕಾಪಾಡಿದ್ದೀರಿ. ಆದರೆ ನಾನು ಬೆಟ್ಟಗಳವರೆಗೂ ಓಡಿಹೋಗಲಾರೆ. ನಾನು ನಿಧಾನವಾಗಿ ಹೋಗುವುದಾದರೆ ಕೇಡು ಸಂಭವಿಸಿ ಕೊಲ್ಲಲ್ಪಡುವೆನು. 20 ಅಗೋ, ಅಲ್ಲಿ ಒಂದು ಚಿಕ್ಕ ಊರಿದೆ. ಆ ಊರಿಗೆ ಓಡಿಹೋಗಲು ನನಗೆ ಅಪ್ಪಣೆಕೊಡಿ. ನಾನು ಅಲ್ಲಿಗೆ ಓಡಿಹೋಗಿ ಸುರಕ್ಷಿತವಾಗಿರುವೆನು” ಎಂದು ಹೇಳಿದನು.

21 ಆ ಪುರುಷನು ಲೋಟನಿಗೆ, “ಆಗಲಿ, ನಿನಗೆ ಅಪ್ಪಣೆ ಕೊಟ್ಟಿದ್ದೇನೆ. ನಾನು ಆ ಊರನ್ನು ನಾಶಮಾಡುವುದಿಲ್ಲ. 22 ಆದರೆ ಅಲ್ಲಿಗೆ ಬೇಗನೆ ಓಡಿಹೋಗು, ನೀನು ಆ ಊರಿಗೆ ಸುರಕ್ಷಿತವಾಗಿ ಸೇರುವತನಕ ನಾನು ಸೊದೋಮನ್ನು ನಾಶಗೊಳಿಸಲಾಗುವುದಿಲ್ಲ” ಎಂದು ಹೇಳಿದನು. (ಆ ಊರಿಗೆ ಚೋಗರ್ ಎಂದು ಕರೆಯಲಾಯಿತು; ಯಾಕೆಂದರೆ ಅದು ಚಿಕ್ಕ ಊರು.)

ಸೊದೋಮ್ ಮತ್ತು ಗೊಮೋರ ಪಟ್ಟಣಗಳ ನಾಶನ

23 ಸೂರ್ಯೋದಯವಾಗುವಷ್ಟರಲ್ಲಿ ಲೋಟನು ಚೋಗರಿಗೆ ಪ್ರವೇಶಿಸುತ್ತಿದ್ದನು. 24 ಆಗ ಯೆಹೋವನು ಸೊದೋಮ್ ಮತ್ತು ಗೊಮೋರ ಪಟ್ಟಣಗಳ ಮೇಲೆ ಆಕಾಶದಿಂದ ಉರಿಯುವ ಗಂಧಕದ ಮಳೆಯನ್ನು ಸುರಿಸಿದನು. 25 ಹೀಗೆ ಯೆಹೋವನು ಆ ಎರಡು ನಗರಗಳನ್ನು ನಾಶಮಾಡಿದನು; ಇಡೀ ಕಣಿವೆಯನ್ನೂ ಅದರಲ್ಲಿ ಬೆಳೆಯುತ್ತಿದ್ದ ಸಸ್ಯಗಳನ್ನೂ ನಗರಗಳಲ್ಲಿದ್ದ ಎಲ್ಲಾ ಜನರನ್ನೂ ನಾಶಮಾಡಿದನು.

26 ಅವರು ಓಡಿಹೋಗುತ್ತಿರುವಾಗ ಲೋಟನ ಹೆಂಡತಿ ನಗರದ ಕಡೆಗೆ ಹಿಂತಿರುಗಿ ನೋಡಿದಳು. ಆ ಕೂಡಲೇ ಆಕೆಯು ಉಪ್ಪಿನ ಕಂಬವಾದಳು.

27 ಅಂದು ಮುಂಜಾನೆ ಅಬ್ರಹಾಮನು ಎದ್ದು ತಾನು ಯೆಹೋವನ ಮುಂದೆ ನಿಂತುಕೊಂಡಿದ್ದ ಸ್ಥಳಕ್ಕೆ ಹೋದನು. 28 ಅಬ್ರಹಾಮನು ಸೊದೋಮ್ ಮತ್ತು ಗೊಮೋರ ಪಟ್ಟಣಗಳ ಕಡೆಗೂ ಕಣಿವೆ ಪ್ರದೇಶದ ಕಡೆಗೂ ನೋಡಿದಾಗ ಆ ಪ್ರದೇಶದಿಂದ ಹೊಗೆ ಮೇಲೇರುತ್ತಿರುವುದನ್ನು ಕಂಡನು; ಧಗಧಗಿಸುವ ಬೆಂಕಿಯಿಂದ ಬರುವ ಹೊಗೆಯಂತೆ ಅದು ಕಂಡಿತು.

29 ದೇವರು ಆ ಸೀಮೆಯ ನಗರಗಳನ್ನು ನಾಶಮಾಡಿದರೂ ಅಬ್ರಹಾಮನನ್ನು ಜ್ಞಾಪಿಸಿಕೊಂಡು ಲೋಟನ ಪ್ರಾಣವನ್ನು ಉಳಿಸಿದನು; ಆದರೆ ಲೋಟನು ವಾಸಿಸುತ್ತಿದ್ದ ನಗರವನ್ನು ನಾಶಮಾಡಿದನು.

ರೋಮ್ನಗರದವರಿಗೆ 9:14-29

14 ಹಾಗಾದರೆ, ಇದರ ಬಗ್ಗೆ ಏನು ಹೇಳೋಣ? ದೇವರು ಅನ್ಯಾಯಗಾರನೇ? ಎಂದಿಗೂ, ಇಲ್ಲ. 15 ದೇವರು ಮೋಶೆಗೆ, “ನಾನು ಯಾರಿಗೆ ಕರುಣೆ ತೋರಬಯಸುತ್ತೇನೋ ಅವನಿಗೆ ಕರುಣೆ ತೋರುವೆನು. ನಾನು ಯಾರಿಗೆ ಕನಿಕರ ತೋರಬಯಸುತ್ತೇನೋ ಅವರಿಗೆ ಕನಿಕರ ತೋರುವೆನು”(A) ಎಂದು ಹೇಳಿದ್ದಾನೆ. 16 ಆದ್ದರಿಂದ ದೇವರು ತಾನು ಯಾರಿಗೆ ಕರುಣೆ ತೋರಬಯಸುತ್ತಾನೊ ಅವನನ್ನೇ ಆರಿಸಿಕೊಳ್ಳುತ್ತಾನೆ. ಆತನ ಆಯ್ಕೆಯು ಜನರು ಏನು ಮಾಡಬಯಸುತ್ತಾರೆ ಅಥವಾ ಏನು ಮಾಡಲು ಪ್ರಯತ್ನಿಸುತ್ತಾರೆಂಬುದರ ಮೇಲೆ ಆಧಾರಗೊಂಡಿಲ್ಲ. 17 ಪವಿತ್ರ ಗ್ರಂಥದಲ್ಲಿ ದೇವರು ಫರೋಹನಿಗೆ, “ನಾನು ನಿನಗೆ ನನ್ನ ಶಕ್ತಿಯನ್ನು ತೋರಿಸಬೇಕೆಂತಲೂ ನನ್ನ ಹೆಸರನ್ನು ಲೋಕದಲ್ಲೆಲ್ಲಾ ಪ್ರಖ್ಯಾತಿಪಡಿಸಬೇಕೆಂತಲೂ ನಿನ್ನನ್ನು ರಾಜನನ್ನಾಗಿ ಮಾಡಿದೆನು”(B) ಎಂದು ಹೇಳಿದ್ದಾನೆ. 18 ಆದ್ದರಿಂದ ದೇವರು ತಾನು ಯಾರಿಗೆ ಕರುಣೆಯನ್ನು ತೋರಬಯಸುತ್ತಾನೋ ಅವರಿಗೆ ಕರುಣೆಯನ್ನು ತೋರಿಸುತ್ತಾನೆ. ದೇವರು ಯಾರನ್ನು ಮೊಂಡರನ್ನಾಗಿ ಮಾಡಬಯಸುತ್ತಾನೋ ಅವರನ್ನು ಮೊಂಡರನ್ನಾಗಿ ಮಾಡುತ್ತಾನೆ.

19 “ನಾವು ಮಾಡುವ ಕಾರ್ಯಗಳು ದೇವರ ಹಿಡಿತಕ್ಕೆ ಒಳಗಾಗಿರುವುದಾದರೆ, ನಮ್ಮ ಪಾಪಗಳ ನಿಮಿತ್ತ ದೇವರು ನಮ್ಮನ್ನು ದೂಷಿಸುವುದೇಕೆ?” ಎಂದು ನಿಮ್ಮಲ್ಲಿ ಒಬ್ಬನು ಕೇಳಬಹುದು. 20 ಹಾಗೆ ಕೇಳಬೇಡಿ. ನೀವು ಕೇವಲ ಮನುಷ್ಯರು. ದೇವರನ್ನು ಪ್ರಶ್ನಿಸಲು ಮನುಷ್ಯರಿಗೆ ಯಾವ ಹಕ್ಕೂ ಇಲ್ಲ. ಮಡಕೆಯು ತನ್ನನ್ನು ತಯಾರಿಸಿದವನಿಗೆ, “ನೀನು ನನ್ನನ್ನು ಈ ರೀತಿ ತಯಾರಿಸಿದ್ದೇಕೆ” ಎಂದು ಕೇಳುವುದುಂಟೇ? 21 ಕುಂಬಾರನು ತನಗೆ ಇಷ್ಟಬಂದಂತೆ ಒಂದೇ ಮಣ್ಣಿನಿಂದ ವಿವಿಧ ವಸ್ತುಗಳನ್ನು ತಯಾರಿಸುವುದಿಲ್ಲವೇ? ಅವನು ಒಂದನ್ನು ವಿಶೇಷವಾದ ಬಳಕೆಗಾಗಿಯೂ ಮತ್ತೊಂದನ್ನು ದೈನಂದಿನ ಬಳಕೆಗಾಗಿಯೂ ತಯಾರಿಸುವನು.

22 ದೇವರು ಮಾಡಿರುವುದು ಸಹ ಹೀಗೆಯೇ. ಆತನು ತನ್ನ ಕೋಪವನ್ನು ತೋರಿಸಿ, ತನ್ನ ಶಕ್ತಿಯನ್ನು ಜನರಿಗೆ ಪ್ರಸಿದ್ಧಿಪಡಿಸಬೇಕೆಂದಿದ್ದನು. ಆದರೂ ಆತನು ತನ್ನ ಕೋಪಕ್ಕೆ ಗುರಿಯಾಗಿ ನಾಶವಾಗಲಿದ್ದ ಜನರನ್ನು ಬಹು ಸಹನೆಯಿಂದ ಸಹಿಸಿಕೊಂಡನು. 23 ದೇವರು ತನ್ನ ಅತಿಶಯವಾದ ಮಹಿಮೆಯನ್ನು ತೋರ್ಪಡಿಸಬೇಕೆಂದು ತಾಳ್ಮೆಯಿಂದ ಕಾದುಕೊಂಡಿದ್ದನು. ತನ್ನ ಕರುಣೆಯನ್ನು ಹೊಂದಿಕೊಳ್ಳುವ ಜನರಿಗೆ ದೇವರು ಆ ಮಹಿಮೆಯನ್ನು ಕೊಡಬೇಕೆಂದಿದ್ದನು. ತನ್ನ ಮಹಿಮೆಯನ್ನು ಹೊಂದಿಕೊಳ್ಳಲೆಂದು ದೇವರು ಆ ಜನರನ್ನು ಸಿದ್ಧಪಡಿಸಿದನು. 24 ನಾವೇ ಆ ಜನರು. ದೇವರಿಂದ ಕರೆಯಲ್ಪಟ್ಟ ಜನರು ನಾವೇ. ದೇವರು ನಮ್ಮನ್ನು ಯೆಹೂದ್ಯರೊಳಗಿಂದ ಮತ್ತು ಯೆಹೂದ್ಯರಲ್ಲದವರೊಳಗಿಂದ ಕರೆದನು. 25 ಪವಿತ್ರ ಗ್ರಂಥದ ಹೋಶೇಯನ ಪುಸ್ತಕದಲ್ಲಿ ಈ ರೀತಿ ಬರೆಯಲ್ಪಟ್ಟಿದೆ:

“ನನ್ನವರಲ್ಲದ ಜನರನ್ನು
    ನನ್ನ ಜನರೆಂದು ಹೇಳುವೆನು.
ನನಗೆ ಪ್ರಿಯರಲ್ಲದವರನ್ನು
    ನನಗೆ ಪ್ರಿಯರೆಂದು ಹೇಳುವೆನು.”(C)

26 ಮತ್ತು

“ಯಾವ ಸ್ಥಳದಲ್ಲಿ ದೇವರು,
    ‘ನೀವು ನನ್ನ ಜನರಲ್ಲ’ ಎಂದು ಹೇಳಿದ್ದನೋ
    ಅದೇ ಸ್ಥಳದಲ್ಲಿ ಅವರನ್ನು ಜೀವವುಳ್ಳ ದೇವರ ಮಕ್ಕಳೆಂದು ಕರೆಯಲಾಗುವುದು.”(D)

27 ಇದಲ್ಲದೆ ಯೆಶಾಯನು ಇಸ್ರೇಲಿನ ಬಗ್ಗೆ ಕೂಗಿ ಹೇಳಿದ್ದಾನೆ:

“ಸಮುದ್ರ ತೀರದ ಮರಳಿನಂತೆ ಇಸ್ರೇಲರು ಅಸಂಖ್ಯಾತವಾಗಿರುವರು.
    ಆದರೆ ಆ ಜನರಲ್ಲಿ ಕೆಲವರು ಮಾತ್ರ ರಕ್ಷಣೆ ಹೊಂದುವರು.
28 ಹೌದು, ಪ್ರಭುವು ಭೂಮಿಯ ಮೇಲಿನ ಜನರಿಗೆ ಬಹುಬೇಗನೆ ತೀರ್ಪನ್ನು ಪೂರ್ಣವಾಗಿ ತೀರಿಸುವನು.”(E)

29 ಯೆಶಾಯನು ಹೇಳಿರುವುದೇನೆಂದರೆ:

“ಪ್ರಭುವು ಸರ್ವಶಕ್ತನಾಗಿದ್ದಾನೆ. ಪ್ರಭುವು ತನ್ನ ಜನರಲ್ಲಿ ಕೆಲವರನ್ನು ನಮಗೋಸ್ಕರವಾಗಿ ರಕ್ಷಿಸಿದ್ದಾನೆ.
ಆತನು ಹೀಗೆ ಮಾಡಿಲ್ಲದಿದ್ದರೆ,
    ಈಗ ನಾವು ಸೊದೋಮಿನಂತೆಯೂ
    ಗೊಮೋರದಂತೆಯೂ ಇರುತ್ತಿದ್ದೆವು.”(F)

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International