Revised Common Lectionary (Complementary)
ತೃಪ್ತಿಗೊಳಿಸುವ ಆಹಾರವನ್ನು ದೇವರು ಕೊಡುತ್ತಾನೆ
55 “ಎಲೈ ಬಾಯಾರಿದ ಜನರೆಲ್ಲರೇ,
ಬಂದು ನೀರನ್ನು ಕುಡಿಯಿರಿ.
ನಿಮ್ಮಲ್ಲಿ ಹಣವಿಲ್ಲವೆಂದು ಚಿಂತೆಮಾಡಬೇಡಿರಿ.
ಬಂದು ಹೊಟ್ಟೆತುಂಬಾ ತಿಂದು ಕುಡಿಯಿರಿ.
ನೀವು ಹಣ ಕೊಡಬೇಕಿಲ್ಲ.
ಹೊಟ್ಟೆತುಂಬಾ ತಿಂದು ಕುಡಿಯಿರಿ ಹಾಲಿಗೂ ದ್ರಾಕ್ಷಾರಸಕ್ಕೂ ಕ್ರಯವಿಲ್ಲ.
2 ಆಹಾರವಲ್ಲದ್ದಕ್ಕಾಗಿ ಹಣವನ್ನು ಯಾಕೆ ವೆಚ್ಚ ಮಾಡುತ್ತೀರಿ?
ತೃಪ್ತಿಗೊಳಿಸದ ಆಹಾರಕ್ಕಾಗಿ ನೀವು ಯಾಕೆ ಶ್ರಮಿಸುತ್ತೀರಿ?
ಗಮನವಿಟ್ಟು ಕೇಳಿರಿ.
ನೀವು ಒಳ್ಳೆಯ ಆಹಾರವನ್ನು ತಿನ್ನುವಿರಿ; ನಿಮ್ಮ ಊಟದಲ್ಲಿ ಆನಂದಿಸುವಿರಿ.
ಅವು ನಿಮ್ಮ ಆತ್ಮವನ್ನು ತೃಪ್ತಿಗೊಳಿಸುತ್ತವೆ.
3 ನಾನು ಹೇಳುವ ವಿಷಯಗಳಿಗೆ ಸರಿಯಾಗಿ ಕಿವಿಗೊಡಿರಿ.
ನಿಮ್ಮ ಆತ್ಮಗಳು ಜೀವಿಸುವಂತೆ ನನ್ನ ಮಾತುಗಳನ್ನು ಕೇಳಿರಿ.
ನನ್ನ ಬಳಿಗೆ ಬನ್ನಿರಿ, ನಾನು ನಿಮ್ಮೊಂದಿಗೆ ಶಾಶ್ವತವಾದ ಒಡಂಬಡಿಕೆಯನ್ನು ಮಾಡಿಕೊಳ್ಳುವೆನು.
ನಾನು ದಾವೀದನೊಂದಿಗೆ ಮಾಡಿಕೊಂಡ ಒಡಂಬಡಿಕೆಯಂತೆ ಅದಿರುವುದು.
ನಾನು ದಾವೀದನಿಗೆ ಅವನನ್ನು ಪ್ರೀತಿಸುವೆನೆಂದೂ ಅವನಿಗೆ ಪ್ರಾಮಾಣಿಕನಾಗಿರುವೆನೆಂದೂ ವಾಗ್ದಾನ ಮಾಡಿದ್ದೆನು.
ಆ ಒಡಂಬಡಿಕೆಯನ್ನು ನೀವು ಖಂಡಿತವಾಗಿ ನಂಬಬಹುದು.
4 ದಾವೀದನು ನನ್ನ ಸಾಮರ್ಥ್ಯದ ವಿಷಯದಲ್ಲಿ ಎಲ್ಲ ಜನಾಂಗಗಳವರಿಗೆ ಸಾಕ್ಷಿಯಾಗಿರುವಂತೆ ನಾನೇ ಮಾಡಿದೆನು.
ನಾನು ದಾವೀದನಿಗೆ, ‘ನೀನು ಅಧಿಪತಿಯಾಗುವೆ ಮತ್ತು ಅನೇಕ ಜನಾಂಗಗಳಿಗೆ ನೀನು ಸೈನ್ಯಾಧಿಪತಿಯಾಗುವೆ’ ಎಂದು ಪ್ರಮಾಣ ಮಾಡಿದೆ.”
5 ನಿನಗೆ ಗೊತ್ತಿರದ ಸ್ಥಳಗಳಲ್ಲಿ ಜನಾಂಗಗಳು ನೆಲೆಸಿವೆ.
ಆ ದೇಶಗಳನ್ನು ನೀನು ಕರೆಯುವೆ.
ಆ ದೇಶಗಳಿಗೆ ನಿನ್ನ ಪರಿಚಯವಿರುವದಿಲ್ಲ.
ಆದರೆ ಅವುಗಳು ನಿನ್ನ ಬಳಿಗೆ ಓಡಿಬರುವವು.
ಇವೆಲ್ಲಾ ನಿನ್ನ ದೇವರಾದ ಯೆಹೋವನ ಚಿತ್ತಕ್ಕನುಸಾರವಾಗಿ ಆಗುತ್ತವೆ.
ಇಸ್ರೇಲಿನ ಪರಿಶುದ್ಧ ದೇವರು ನಿನ್ನನ್ನು ಗೌರವಿಸುವದರಿಂದ ಇದನ್ನು ನೆರವೇರಿಸುವನು.
8 ಯೆಹೋವನು ದಯೆಯುಳ್ಳವನೂ ಕನಿಕರವುಳ್ಳವನೂ
ದೀರ್ಘಶಾಂತನೂ ಪ್ರೀತಿಪೂರ್ಣನೂ ಆಗಿದ್ದಾನೆ.
9 ಯೆಹೋವನು ಪ್ರತಿಯೊಬ್ಬನಿಗೂ ಒಳ್ಳೆಯವನಾಗಿದ್ದಾನೆ.
ಆತನು ತಾನು ನಿರ್ಮಿಸಿದವುಗಳಿಗೆಲ್ಲಾ ಕನಿಕರ ತೋರಿಸುವನು.
14 ಯೆಹೋವನು ಬಿದ್ದುಹೋಗಿರುವವರನ್ನು ಮೇಲೆತ್ತುವವನೂ
ಕುಗ್ಗಿಹೋದವರನ್ನು ಉದ್ಧರಿಸುವವನೂ ಆಗಿದ್ದಾನೆ.
15 ಎಲ್ಲಾ ಜೀವಿಗಳು ತಮ್ಮ ಆಹಾರಕ್ಕಾಗಿ ನಿನ್ನನ್ನೇ ನೋಡುತ್ತವೆ.
ನೀನು ಸಮಯಕ್ಕೆ ಸರಿಯಾಗಿ ಅವುಗಳಿಗೆ ಆಹಾರವನ್ನು ಕೊಡುವೆ.
16 ನೀನು ಕೈಯನ್ನು ತೆರೆದು
ಜೀವಿಗಳ ಅವಶ್ಯಕತೆಗಳನ್ನೆಲ್ಲಾ ಪೂರೈಸುವೆ.
17 ಯೆಹೋವನ ಕಾರ್ಯಗಳೆಲ್ಲ ನೀತಿಯುಳ್ಳವುಗಳಾಗಿವೆ.
ಆತನ ಪ್ರತಿಯೊಂದು ಕಾರ್ಯದಲ್ಲೂ ಆತನ ಶಾಶ್ವತ ಪ್ರೀತಿ ತೋರಿಬರುವುದು.
18 ಯೆಹೋವನು ತನ್ನ ಭಕ್ತರಿಗೆ ಸಮೀಪವಾಗಿದ್ದಾನೆ.
ಆತನು ತನ್ನನ್ನು ಯಥಾರ್ಥವಾಗಿ ಕರೆಯುವ ಪ್ರತಿಯೊಬ್ಬರಿಗೂ ಸಮೀಪವಾಗಿದ್ದಾನೆ.
19 ಆತನು ತನ್ನ ಭಕ್ತರ ಇಷ್ಟವನ್ನು ನೆರವೇರಿಸುವನು.
ಆತನು ಅವರ ಮೊರೆಗೆ ಕಿವಿಗೊಟ್ಟು ಅವರನ್ನು ರಕ್ಷಿಸುವನು.
20 ಯೆಹೋವನು ತನ್ನನ್ನು ಪ್ರೀತಿಸುವ ಪ್ರತಿಯೊಬ್ಬರನ್ನೂ ಸಂರಕ್ಷಿಸುವನು,
ದುಷ್ಟರನ್ನಾದರೋ ಆತನು ನಾಶಮಾಡುವನು.
21 ನಾನು ಯೆಹೋವನನ್ನು ಕೊಂಡಾಡುತ್ತೇನೆ!
ಎಲ್ಲಾ ಜೀವಿಗಳು ಆತನ ಪವಿತ್ರ ಹೆಸರನ್ನು ಸದಾಕಾಲ ಕೊಂಡಾಡಲಿ!
ದೇವರು ಮತ್ತು ಯೆಹೂದ್ಯರು
9 ನಾನು ಕ್ರಿಸ್ತನಲ್ಲಿದ್ದೇನೆ ಮತ್ತು ನಿಮಗೆ ಸತ್ಯವನ್ನೇ ಹೇಳುತ್ತಿದ್ದೇನೆ. ನಾನು ಸುಳ್ಳಾಡುವುದಿಲ್ಲ. ನನ್ನ ಆಲೋಚನೆಗಳು ಪವಿತ್ರಾತ್ಮನ ಆಳ್ವಿಕೆಗೆ ಒಳಪಟ್ಟಿವೆ. ನನ್ನ ಮನಸ್ಸೇ ಇದಕ್ಕೆ ಸಾಕ್ಷಿ. 2 ಯೆಹೂದ್ಯರ ವಿಷಯದಲ್ಲಿ ನನಗೆ ಅತೀವ ದುಃಖವಿದೆ; ನಿರಂತರ ಮನೋವೇದನೆಯಿದೆ. 3 ಅವರು ನನ್ನ ಸಹೋದರ ಸಹೋದರಿಯರಾಗಿದ್ದಾರೆ; ಇಹಲೋಕದ ಕುಟುಂಬದವರಾಗಿದ್ದಾರೆ. ಅವರಿಗೆ ಸಹಾಯ ಮಾಡಲು ಕ್ರಿಸ್ತನನ್ನು ಅಗಲಿ ಶಾಪಗ್ರಸ್ತನಾಗುವುದಕ್ಕೂ ಸಿದ್ಧನಾಗಿದ್ದೇನೆ. 4 ಅವರು ಇಸ್ರೇಲಿನ ಜನರು. ಅವರು ದೇವರಿಂದ ಆರಿಸಲ್ಪಟ್ಟ ಮಕ್ಕಳು. ಅವರು ದೇವರ ಮಹಿಮೆಯನ್ನು ಮತ್ತು ದೇವರು ಅವರೊಂದಿಗೆ ಮಾಡಿಕೊಂಡ ಒಡಂಬಡಿಕೆಗಳನ್ನು ಹೊಂದಿದ್ದಾರೆ. ದೇವರು ಅವರಿಗೆ ಮೋಶೆಯ ಧರ್ಮಶಾಸ್ತ್ರವನ್ನೂ ಸರಿಯಾದ ಆರಾಧನೆಯ ಕ್ರಮವನ್ನೂ ತನ್ನ ವಾಗ್ದಾನಗಳನ್ನೂ ಕೊಟ್ಟನು. 5 ಅವರು ನಮ್ಮ ಪಿತೃಗಳ ಸಂತಾನಗಳಿಗೆ ಸೇರಿದವರಾಗಿದ್ದಾರೆ; ಕ್ರಿಸ್ತನು ಶಾರೀರಿಕವಾಗಿ ಇವರ ವಂಶದಲ್ಲಿಯೇ ಹುಟ್ಟಿದನು. ಕ್ರಿಸ್ತನು ಸಕಲಕ್ಕೂ ಒಡೆಯನಾಗಿದ್ದಾನೆ. ಆತನಿಗೆ ಎಂದೆಂದಿಗೂ ಸ್ತೋತ್ರವಾಗಲಿ! ಆಮೆನ್.
ಐದು ಸಾವಿರಕ್ಕಿಂತ ಹೆಚ್ಚು ಜನರಿಗೆ ಆಹಾರದಾನ
(ಮಾರ್ಕ 6:30-44; ಲೂಕ 9:10-17; ಯೋಹಾನ 6:1-14)
13 ಯೋಹಾನನಿಗೆ ಸಂಭವಿಸಿದ್ದನ್ನು ಕೇಳಿದಾಗ ಯೇಸು ದೋಣಿಹತ್ತಿ ನಿರ್ಜನವಾದ ಸ್ಥಳಕ್ಕೆ ಒಬ್ಬನೇ ಹೋದನು. ಆದರೆ ಈ ಸುದ್ದಿ ಜನರಿಗೆ ತಿಳಿಯಿತು. ಆದ್ದರಿಂದ ಅವರು ತಮ್ಮ ಊರುಗಳನ್ನು ಬಿಟ್ಟು ಕಾಲುನಡಿಗೆಯಲ್ಲೇ ಆತನಿದ್ದ ಸ್ಥಳಕ್ಕೆ ಹೋದರು. 14 ಯೇಸು ಅಲ್ಲಿಗೆ ಬಂದಾಗ, ಜನರು ಗುಂಪುಗುಂಪಾಗಿ ನೆರೆದಿರುವುದನ್ನು ಕಂಡು ಅವರಿಗಾಗಿ ದುಃಖಪಟ್ಟು ಕಾಯಿಲೆಯವರನ್ನು ಗುಣಪಡಿಸಿದನು.
15 ಸಂಜೆಯಾದಾಗ, ಶಿಷ್ಯರು ಯೇಸುವಿನ ಬಳಿಗೆ ಬಂದು, “ಈ ಸ್ಥಳದಲ್ಲಿ ಜನರು ವಾಸಿಸುವುದಿಲ್ಲ. ಈಗಾಗಲೇ ಸಮಯವಾಗಿದೆ. ಜನರು ತಮಗಾಗಿ ಆಹಾರವನ್ನು ಕೊಂಡುಕೊಳ್ಳಲು ಅವರನ್ನು ಊರುಗಳಿಗೆ ಕಳುಹಿಸಿಬಿಡು” ಎಂದು ಹೇಳಿದರು.
16 ಯೇಸು, “ಜನರು ಹೋಗುವುದು ಬೇಡ. ನೀವೇ ಅವರಿಗೆ ಸ್ವಲ್ಪ ಊಟವನ್ನು ಕೊಡಿ” ಎಂದು ಹೇಳಿದನು.
17 ಆಗ ಶಿಷ್ಯರು, “ನಮ್ಮಲ್ಲಿ ಐದು ರೊಟ್ಟಿ ಮತ್ತು ಎರಡು ಮೀನುಗಳು ಮಾತ್ರ ಇವೆ” ಎಂದು ಉತ್ತರಕೊಟ್ಟರು.
18 ಯೇಸು, “ಆ ರೊಟ್ಟಿ ಮತ್ತು ಮೀನುಗಳನ್ನು ನನ್ನ ಬಳಿಗೆ ತನ್ನಿರಿ” ಅಂದನು. 19 ಬಳಿಕ ಆತನು ಜನರಿಗೆ ಹುಲ್ಲಿನ ಮೇಲೆ ಕುಳಿತುಕೊಳ್ಳುವುದಕ್ಕೆ ಹೇಳಿ ಐದು ರೊಟ್ಟಿ ಮತ್ತು ಎರಡು ಮೀನುಗಳನ್ನು ತೆಗೆದುಕೊಂಡು, ಆಕಾಶದ ಕಡೆಗೆ ನೋಡಿ, ಅವುಗಳಿಗಾಗಿ ದೇವರಿಗೆ ಸ್ತೋತ್ರಸಲ್ಲಿಸಿ, ರೊಟ್ಟಿಯನ್ನು ಮುರಿದು ತನ್ನ ಶಿಷ್ಯರಿಗೆ ಕೊಟ್ಟನು. ಶಿಷ್ಯರು ರೊಟ್ಟಿಯನ್ನು ಜನರಿಗೆ ಹಂಚಿದರು. 20 ಜನರೆಲ್ಲರೂ ತಿಂದು ತೃಪ್ತರಾದರು. ಜನರು ತಿಂದು ಮುಗಿಸಿದ ನಂತರ, ತಿನ್ನಲಾರದೆ ಉಳಿಸಿದ ಚೂರುಗಳನ್ನು ಶಿಷ್ಯರು ಶೇಖರಿಸಿದಾಗ ಹನ್ನೆರಡು ಬುಟ್ಟಿಗಳು ತುಂಬಿಹೋದವು. 21 ಊಟ ಮಾಡಿದವರಲ್ಲಿ ಹೆಂಗಸರು ಮತ್ತು ಮಕ್ಕಳನ್ನು ಬಿಟ್ಟರೆ, ಗಂಡಸರೇ ಸುಮಾರು ಐದುಸಾವಿರ ಇದ್ದರು.
Kannada Holy Bible: Easy-to-Read Version. All rights reserved. © 1997 Bible League International