Revised Common Lectionary (Complementary)
121 ನ್ಯಾಯನೀತಿಗಳುಳ್ಳ ಕಾರ್ಯಗಳನ್ನೇ ನಾನು ಮಾಡಿರುವೆ,
ಕೆಡುಕರಿಗೆ ನನ್ನನ್ನು ಒಪ್ಪಿಸಿಕೊಡಬೇಡ.
122 ನಿನ್ನ ಸೇವಕನಾದ ನನಗೆ ಸಹಾಯಮಾಡುವುದಾಗಿ ವಾಗ್ದಾನಮಾಡು.
ನನಗೆ ಕೇಡುಮಾಡಲು ಆ ಗರ್ವಿಷ್ಠರಿಗೆ ಅವಕಾಶ ಕೊಡಬೇಡ.
123 ನಿನ್ನ ರಕ್ಷಣೆಗಾಗಿಯೂ ನಿನ್ನ ಒಳ್ಳೆಯ ಮಾತಿಗಾಗಿಯೂ
ಎದುರುನೋಡುತ್ತಾ ನನ್ನ ಕಣ್ಣುಗಳು ಆಯಾಸಗೊಂಡಿವೆ.
124 ನಿನ್ನ ಸೇವಕನಾದ ನನಗೆ ನಿನ್ನ ಶಾಶ್ವತ ಪ್ರೀತಿಯನ್ನು ತೋರಿಸು.
ನಿನ್ನ ಕಟ್ಟಳೆಗಳನ್ನು ನನಗೆ ಉಪದೇಶಿಸು.
125 ನಾನು ನಿನ್ನ ಸೇವಕ,
ನಿನ್ನ ಒಡಂಬಡಿಕೆಯನ್ನು ಗ್ರಹಿಸಿಕೊಳ್ಳಲು ನನಗೆ ಬೇಕಾದ ವಿವೇಕವನ್ನು ದಯಪಾಲಿಸು.
126 ಯೆಹೋವನೇ, ನಿನ್ನ ಕಾರ್ಯಾಚರಣೆಗೆ ಇದು ತಕ್ಕ ಸಮಯವಾಗಿದೆ.
ಜನರು ನಿನ್ನ ಧರ್ಮಶಾಸ್ತ್ರವನ್ನು ಮೀರಿದ್ದಾರೆ.
127 ನಾನು ನಿನ್ನ ಆಜ್ಞೆಗಳನ್ನು ಬಂಗಾರಕ್ಕಿಂತಲೂ
ಅಪರಂಜಿಗಿಂತಲೂ ಹೆಚ್ಚಾಗಿ ಪ್ರೀತಿಸುವೆನು.
128 ನಾನು ನಿನ್ನ ಆಜ್ಞೆಗಳಿಗೆಲ್ಲಾ ಎಚ್ಚರಿಕೆಯಿಂದ ವಿಧೇಯನಾಗುವೆನು.
ನಾನು ಸುಳ್ಳು ಉಪದೇಶಗಳನ್ನು ದ್ವೇಷಿಸುವೆನು.
16 ಒಂದು ದಿನ ಇಬ್ಬರು ವೇಶ್ಯೆಯರು ಸೊಲೊಮೋನನ ಹತ್ತಿರಕ್ಕೆ ಬಂದರು. ಅವರು ರಾಜನ ಎದುರಿನಲ್ಲಿ ನಿಂತರು. 17 ಒಬ್ಬ ಸ್ತ್ರೀಯು, “ಸ್ವಾಮಿ, ನಾನು ಮತ್ತು ಈ ಸ್ತ್ರೀಯು ಒಂದೇ ಮನೆಯಲ್ಲಿ ವಾಸಿಸುತ್ತಿದ್ದೇವೆ. ನಾವಿಬ್ಬರೂ ಗರ್ಭಿಣಿಯರಾಗಿದ್ದೆವು ಮತ್ತು ನಮ್ಮ ಮಕ್ಕಳಿಗೆ ಜನ್ಮಕೊಡಲು ಸಿದ್ಧರಾಗಿದ್ದೆವು. ಅವಳು ನನ್ನ ಹತ್ತಿರ ಇದ್ದಾಗ ನಾನು ನನ್ನ ಮಗುವಿಗೆ ಜನ್ಮನೀಡಿದೆ. 18 ಮೂರು ದಿನಗಳ ತರುವಾಯ, ಈ ಸ್ತ್ರೀಯೂ ತನ್ನ ಮಗುವಿಗೆ ಜನ್ಮನೀಡಿದಳು. ಮನೆಯಲ್ಲಿ ನಮ್ಮೊಡನೆ ಬೇರೆ ಯಾರೂ ಇರಲಿಲ್ಲ. ಅಲ್ಲಿ ನಾವಿಬ್ಬರೇ ಇದ್ದೆವು. 19 ಒಂದು ರಾತ್ರಿ, ಈ ಸ್ತ್ರೀಯು ಗಾಢನಿದ್ರೆಯಲ್ಲಿ ತನ್ನ ಮಗುವಿನ ಮೇಲೆ ಹೊರಳಿದ್ದರಿಂದ ಆ ಮಗು ಸತ್ತುಹೋಯಿತು. 20 ಅಂದು ರಾತ್ರಿ ನಾನು ಗಾಢನಿದ್ರೆಯಲ್ಲಿರುವಾಗ ಈಕೆಯು ನನ್ನ ಹಾಸಿಗೆಯಿಂದ ನನ್ನ ಮಗುವನ್ನು ತೆಗೆದುಕೊಂಡು ತನ್ನ ಹಾಸಿಗೆಗೆ ಹೋದಳು; ತನ್ನ ಸತ್ತ ಮಗುವನ್ನು ನನ್ನ ಹಾಸಿಗೆಯಲ್ಲಿಟ್ಟಳು. 21 ಮುಂಜಾನೆ ನಾನು ಎಚ್ಚರಗೊಂಡು ನನ್ನ ಮಗುವಿಗೆ ಹಾಲು ಕುಡಿಸಲು ಸಿದ್ಧಳಾದಾಗ ಮಗು ಸತ್ತುಹೋಗಿರುವುದನ್ನು ಕಂಡೆನು. ಆ ಮಗುವನ್ನು ನಾನು ಸೂಕ್ಷ್ಮವಾಗಿ ನೋಡಿದಾಗ ಆ ಮಗು ನನ್ನದಲ್ಲವೆಂಬುದು ನನಗೆ ತಿಳಿಯಿತು” ಎಂದು ಹೇಳಿದಳು.
22 ಆದರೆ ಇನ್ನೊಬ್ಬ ಸ್ತ್ರೀಯು, “ಇಲ್ಲ! ಜೀವಂತವಾಗಿರುವ ಮಗು ನನ್ನದು. ಸತ್ತಿರುವ ಮಗು ನಿನ್ನದು!” ಎಂದು ಹೇಳಿದಳು.
ಆದರೆ ಮೊದಲನೆಯ ಸ್ತ್ರೀಯು, “ಇಲ್ಲ! ನೀನು ಸುಳ್ಳು ಹೇಳುತ್ತಿರುವೆ! ಸತ್ತಿರುವ ಮಗು ನಿನ್ನದು. ಜೀವಂತವಾಗಿರುವ ಮಗು ನನ್ನದು!” ಎಂದು ಹೇಳಿದಳು. ಹೀಗೆ ಆ ಇಬ್ಬರು ಸ್ತ್ರೀಯರು ರಾಜನ ಎದುರಿನಲ್ಲಿ ವಾದಿಸಿದರು.
23 ಆಗ ರಾಜನಾದ ಸೊಲೊಮೋನನು, “ಜೀವಂತವಾಗಿರುವ ಮಗು ನನ್ನದೆಂದೂ ಸತ್ತಿರುವ ಮಗು ಅವಳದೆಂದೂ ನೀವಿಬ್ಬರೂ ಹೇಳುತ್ತಿದ್ದೀರಲ್ಲವೇ?” ಎಂದು ಹೇಳಿ, 24 ತನ್ನ ಸೇವಕರಿಗೆ, “ಒಂದು ಕತ್ತಿಯನ್ನು ತೆಗೆದುಕೊಂಡು ಬಂದು 25 ಜೀವಂತವಾಗಿರುವ ಮಗುವನ್ನು ಕತ್ತರಿಸಿ ಅವರಿಬ್ಬರಿಗೂ ಅರ್ಧರ್ಧ ಮಗುವನ್ನು ಕೊಟ್ಟುಬಿಡಿ” ಎಂದು ಆಜ್ಞಾಪಿಸಿದನು.
26 ಆಗ ಎರಡನೆಯ ಸ್ತ್ರೀಯು, “ಈಗ ಸರಿಹೋಯಿತು. ಮಗುವನ್ನು ಎರಡು ಹೋಳುಮಾಡಿ. ಆಗ ನಮ್ಮಿಬ್ಬರಿಗೂ ಅವನಿರುವುದಿಲ್ಲ” ಎಂದಳು. ಆದರೆ ಮೊದಲನೆಯ ಸ್ತ್ರೀಯು, ಅಂದರೆ, ತನ್ನ ಮಗುವಿನ ಮೇಲೆ ತುಂಬಾ ಪ್ರೀತಿಯನ್ನಿಟ್ಟಿದ ನಿಜವಾದ ತಾಯಿಯು ರಾಜನಿಗೆ, “ದಯವಿಟ್ಟು ಆ ಮಗುವನ್ನು ಕೊಲ್ಲಬೇಡಿ ಸ್ವಾಮಿ! ಅವಳಿಗೇ ಕೊಟ್ಟುಬಿಡಿ” ಎಂದು ಹೇಳಿದಳು.
27 ಆಗ ಸೊಲೊಮೋನನು, “ಮಗುವನ್ನು ಕೊಲ್ಲಬೇಡಿ! ಅದನ್ನು ಮೊದಲನೆಯ ಸ್ತ್ರೀಗೆ ಕೊಡಿ. ಅವಳೇ ನಿಜವಾದ ತಾಯಿ” ಎಂದು ಹೇಳಿದನು.
28 ಸೊಲೊಮೋನನ ತೀರ್ಪಿನ ವಿಚಾರವು ಇಸ್ರೇಲಿನ ಜನರಿಗೆ ತಿಳಿಯಿತು. ಅವನು ವಿವೇಕಿಯಾದುದರಿಂದ ಅವರು ಅವನನ್ನು ಗೌರವಿಸಿದರು ಮತ್ತು ಸನ್ಮಾನಿಸಿದರು. ಅವನು ದೇವರ ಜ್ಞಾನದಿಂದ ಸಮಂಜಸವಾದ ತೀರ್ಪು ನೀಡುತ್ತಾನೆಂದು ಅವರು ಕಂಡುಕೊಂಡರು.
ನಿಜವಾದ ಜ್ಞಾನ
13 ನಿಮ್ಮಲ್ಲಿ ಜ್ಞಾನವಂತರಾಗಲಿ ಬದ್ಧಿವಂತರಾಗಲಿ ಇದ್ದಾರೋ? ಅಂಥವನು ತನ್ನ ಜ್ಞಾನವನ್ನು ಯೋಗ್ಯವಾಗಿ ಬದುಕುವುದರ ಮೂಲಕ ತೋರ್ಪಡಿಸಲಿ. ಅವನು ಒಳ್ಳೆಯ ಕಾರ್ಯಗಳನ್ನು ದೀನತೆಯಿಂದ ಮಾಡಲಿ. ಜ್ಞಾನಿಯಾದವನು ಕೊಚ್ಚಿಕೊಳ್ಳುವುದಿಲ್ಲ. 14 ನೀವು ಸ್ವಾರ್ಥಿಗಳೂ ತೀಕ್ಷ್ಣವಾದ ಮತ್ಸರವನ್ನು ಹೃದಯದಲ್ಲಿ ಹೊಂದಿರುವವರೂ ಆಗಿದ್ದರೆ, ನೀವು ಕೊಚ್ಚಿಕೊಳ್ಳುವುದರಲ್ಲಿ ಅರ್ಥವೇ ಇಲ್ಲ. ಏಕೆಂದರೆ ಅದು ಕೇವಲ ಸುಳ್ಳಷ್ಟೇ. 15 ಇಂಥ “ಜ್ಞಾನ”ವು ದೇವರಿಂದ ಬರದೆ ಲೋಕದಿಂದ ಬರುತ್ತದೆ. ಅದು ಆತ್ಮ ಸಂಬಂಧವಾದುದಲ್ಲ. ಅದು ದೆವ್ವಗಳಿಂದ ಬಂದುದು. 16 ಹೊಟ್ಟೆಕಿಚ್ಚು ಮತ್ತು ಸ್ವಾರ್ಥತೆಗಳು ಎಲ್ಲಿರುವವೋ ಅಲ್ಲಿ ಗಲಿಬಿಲಿಯೂ ಎಲ್ಲಾ ಬಗೆಯ ನೀಚತನಗಳೂ ಇರುತ್ತವೆ. 17 ಆದರೆ ದೇವರಿಂದ ಬರುವ ಜ್ಞಾನವು ಹೀಗಿರುತ್ತದೆ: ಮೊದಲನೆಯದಾಗಿ ಅದು ಪರಿಶುದ್ಧವಾದದ್ದು. ಅದು ಶಾಂತಿದಾಯಕವಾದದ್ದು, ಸಾತ್ವಿಕವಾದದ್ದು ಮತ್ತು ಸುಲಭವಾಗಿ ಮೆಚ್ಚಿಕೊಳ್ಳುವಂಥದ್ದು. ಈ ಜ್ಞಾನವು ತೊಂದರೆಯಲ್ಲಿರುವ ಜನರಿಗೆ ಸಹಾಯ ಮಾಡಲು ಮತ್ತು ಇತರ ಜನರಿಗೆ ಒಳ್ಳೆಯದನ್ನು ಮಾಡಲು ಯಾವಾಗಲೂ ಸಿದ್ಧವಾಗಿರುತ್ತದೆ. ಈ ಜ್ಞಾನವು ಯಾವಾಗಲೂ ನ್ಯಾಯವಾದದ್ದು ಮತ್ತು ಯಥಾರ್ಥವಾದದ್ದು. 18 ಶಾಂತಿ ಸ್ಥಾಪಿಸುವುದಕ್ಕಾಗಿ ಸಮಾಧಾನಕರವಾದ ರೀತಿಯಲ್ಲಿ ಕಾರ್ಯ ಮಾಡುವವರು ಯೋಗ್ಯವಾದ ಬದುಕಿನಿಂದ ಬರುವ ಉತ್ತಮ ಫಲಗಳನ್ನು ಪಡೆಯುತ್ತಾರೆ.
Kannada Holy Bible: Easy-to-Read Version. All rights reserved. © 1997 Bible League International