Revised Common Lectionary (Complementary)
129 ನಿನ್ನ ಕಟ್ಟಳೆಗಳು ಆಶ್ಚರ್ಯಕರವಾಗಿವೆ.
ಪೂರ್ಣಹೃದಯದಿಂದ ಅವುಗಳನ್ನು ಅನುಸರಿಸುವೆನು.
130 ಜನರು ನಿನ್ನ ವಾಕ್ಯವನ್ನು ಅರ್ಥಮಾಡಿಕೊಂಡಾಗ ಅದು ಅವರಿಗೆ ನೀತಿಮಾರ್ಗವನ್ನು ತೋರಿಸುವ ಬೆಳಕಿನಂತಿರುವುದು.
ನಿನ್ನ ವಾಕ್ಯವು ಸಾಮಾನ್ಯರನ್ನು ಜ್ಞಾನಿಗಳನ್ನಾಗಿ ಮಾಡುತ್ತದೆ.
131 ನಿನ್ನ ಆಜ್ಞೆಗಳನ್ನು ಕಲಿತುಕೊಳ್ಳಲು ನನಗೆ ನಿಜವಾಗಿಯೂ ಇಷ್ಟ.
ನಾನು ಏದುಸಿರುಬಿಡುತ್ತಾ ಲವಲವಿಕೆಯಿಂದ ನಿನ್ನ ಆಜ್ಞೆಗಳಿಗಾಗಿ ಕಾಯುತ್ತಿದ್ದೇನೆ.
132 ನನ್ನನ್ನು ನೋಡಿ ಕರುಣಿಸು.
ನಿನ್ನ ಹೆಸರನ್ನು ಪ್ರೀತಿಸುವವರಿಗೆ ಯೋಗ್ಯವಾದುವುಗಳನ್ನು ಮಾಡು.
133 ನಿನ್ನ ವಾಗ್ದಾನಕ್ಕನುಸಾರವಾಗಿ ನನಗೆ ಮಾರ್ಗದರ್ಶನ ನೀಡು.
ಯಾವ ಕೇಡೂ ನನಗೆ ಸಂಭವಿಸದಿರಲಿ.
134 ಕೆಡುಕರಿಂದ ನನ್ನನ್ನು ರಕ್ಷಿಸು.
ಆಗ ನಾನು ನಿನ್ನ ನಿಯಮಗಳಿಗೆ ವಿಧೇಯನಾಗುವೆನು.
135 ನಿನ್ನ ಸೇವಕನ ಮೇಲೆ ಕರುಣೆಯಿರಲಿ,
ನಿನ್ನ ಕಟ್ಟಳೆಗಳನ್ನು ನನಗೆ ಉಪದೇಶಿಸು.
136 ಜನರು ನಿನ್ನ ಉಪದೇಶಗಳಿಗೆ ವಿಧೇಯರಾಗದಿರುವುದರಿಂದ
ನನ್ನ ಕಣ್ಣೀರು ಗೋಳಾಟದಿಂದ ನದಿಯಾಗಿ ಹರಿಯುತ್ತಿದೆ.
38 ಚಾದೋಕನು, ನಾತಾನನು, ಬೆನಾಯನು ಮತ್ತು ರಾಜನ ಅಧಿಕಾರಿಗಳು ರಾಜನಾದ ದಾವೀದನಿಗೆ ವಿಧೇಯರಾದರು. ಅವರು ಸೊಲೊಮೋನನನ್ನು ರಾಜನಾದ ದಾವೀದನ ಹೇಸರಕತ್ತೆಯ ಮೇಲೆ ಕುಳ್ಳಿರಿಸಿ, ಅವನೊಂದಿಗೆ ಗೀಹೋನಿಗೆ ಹೋದರು. 39 ಯಾಜಕನಾದ ಚಾದೋಕನು ಪವಿತ್ರಗುಡಾರದಿಂದ ಎಣ್ಣೆಯನ್ನು ತೆಗೆದುಕೊಂಡು ಬಂದನು. ಸೊಲೊಮೋನನು ರಾಜನೆಂದು ತೋರಿಸಲು ಅವನ ತಲೆಯ ಮೇಲೆ ಚಾದೋಕನು ಎಣ್ಣೆಯನ್ನು ಸುರಿದನು. ದಾವೀದನ ಜನರು ತುತ್ತೂರಿಯನ್ನು ಊದಿದರು. ಆಗ ಎಲ್ಲಾ ಜನರೂ, “ರಾಜನಾದ ಸೊಲೊಮೋನನು ಚಿರಂಜೀವಿಯಾಗಿರಲಿ” ಎಂದು ಆರ್ಭಟಿಸಿದರು. 40 ಜನರೆಲ್ಲರೂ ಸೊಲೊಮೋನನನ್ನು ಹಿಂಬಾಲಿಸುತ್ತಾ ನಗರಕ್ಕೆ ಬಂದರು. ಅವರು ಕೊಳಲುಗಳನ್ನು ಊದುತ್ತಾ ಸಂತಸದಿಂದ ಕೂಗಾಡುತ್ತಾ ಬಂದರು. ಅವರು ಮಾಡಿದ ಶಬ್ದವು ಭೂಮಿಯನ್ನೇ ನಡುಗಿಸುವಂತಿತ್ತು.
41 ಆ ಸಮಯಕ್ಕೆ ಅದೋನೀಯನು ಮತ್ತು ಅವನೊಂದಿಗಿದ್ದ ಅತಿಥಿಗಳು ಊಟವನ್ನು ಮುಗಿಸುತ್ತಿದ್ದರು. ಅವರಿಗೆ ತುತ್ತೂರಿಯ ಶಬ್ದವು ಕೇಳಿಸಿತು. ಯೋವಾಬನು, “ಆ ಶಬ್ದವು ಏನು? ನಗರದಲ್ಲಿ ಏನು ನಡೆಯುತ್ತಿದೆ?” ಎಂದು ಕೇಳಿದನು.
42 ಯೋವಾಬನು ಮಾತನಾಡುತ್ತಿದ್ದಂತೆ, ಯಾಜಕನಾದ ಎಬ್ಯಾತಾರನ ಮಗನಾದ ಯೋನಾತಾನನು ಅಲ್ಲಿಗೆ ಬಂದನು. ಅದೋನೀಯನು, “ಇಲ್ಲಿಗೆ ಬಾ! ನೀನು ಒಬ್ಬ ಒಳ್ಳೆಯ ಮನುಷ್ಯ. ಆದ್ದರಿಂದ ನೀನು ನನಗೆ ಶುಭ ಸಮಾಚಾರವನ್ನೇ ತಂದಿರುವೆ” ಎಂದು ಹೇಳಿದನು.
43 ಆದರೆ ಯೋನಾತಾನನು, “ಇಲ್ಲ! ಇದು ನಿನಗೆ ಶುಭ ಸಮಾಚಾರವಲ್ಲ! ನಮ್ಮ ರಾಜನಾದ ದಾವೀದನು ಸೊಲೊಮೋನನನ್ನು ನೂತನ ರಾಜನನ್ನಾಗಿ ಮಾಡಿದನು. 44 ರಾಜನಾದ ದಾವೀದನು ಯಾಜಕನಾದ ಚಾದೋಕನನ್ನು, ಪ್ರವಾದಿಯಾದ ನಾತಾನನನ್ನು, ಯೆಹೋಯಾದಾವನ ಮಗನಾದ ಬೆನಾಯನನ್ನು ಮತ್ತು ರಾಜನ ಎಲ್ಲಾ ಅಧಿಕಾರಿಗಳನ್ನು ಅವನೊಂದಿಗೆ ಕಳುಹಿಸಿದನು. ಅವರು ಸೊಲೊಮೋನನನ್ನು ರಾಜನ ಸ್ವಂತ ಹೇಸರಕತ್ತೆಯ ಮೇಲೆ ಕುಳ್ಳಿರಿಸಿದರು. 45 ನಂತರ ಯಾಜಕನಾದ ಚಾದೋಕನು ಮತ್ತು ಪ್ರವಾದಿಯಾದ ನಾತಾನನು ಗೀಹೋನ್ ಬುಗ್ಗೆಯ ಹತ್ತಿರ ಸೊಲೊಮೋನನನ್ನು ಅಭಿಷೇಕಿಸಿದರು. ಅನಂತರ ಅವರು ನಗರಕ್ಕೆ ಹೋದರು. ಅವರನ್ನು ಜನರು ಹಿಂಬಾಲಿಸಿದರು. ಈಗ ನಗರದ ಜನರು ತುಂಬಾ ಸಂತೋಷದಿಂದ ಇದ್ದಾರೆ. ಆ ಶಬ್ದವನ್ನೇ ನೀವು ಕೇಳುತ್ತಿರುವುದು. 46-47 ಸೊಲೊಮೋನನು ಈಗ ರಾಜನ ಸಿಂಹಾಸನದ ಮೇಲೆ ಕುಳಿತಿದ್ದಾನೆ. ರಾಜನಾದ ದಾವೀದನು ಒಳ್ಳೆಯ ಕಾರ್ಯಮಾಡಿದನೆಂದು ಹೇಳಲು ರಾಜನ ಸೇವಕರೆಲ್ಲರೂ ಬಂದಿದ್ದಾರೆ. ‘ನಿನ್ನ ದೇವರು ಸೊಲೊಮೋನನನ್ನು ನಿನಗಿಂತಲೂ ಪ್ರಖ್ಯಾತನನ್ನಾಗಿ ಮಾಡಲಿ. ದೇವರು ಸೊಲೊಮೋನನ ರಾಜ್ಯವನ್ನು ನಿನ್ನ ರಾಜ್ಯಕ್ಕಿಂತಲೂ ಹೆಚ್ಚು ಬಲಿಷ್ಠಗೊಳಿಸಲಿ. ಅವನು ನಿನಗಿಂತಲೂ ಉತ್ತಮನಾಗಲಿ!’ ಎಂದು ಅವರು ಹೇಳುತ್ತಿದ್ದಾರೆ. ರಾಜನಾದ ದಾವೀದನೂ ಅಲ್ಲಿದ್ದನು. ಅವನು ತನ್ನ ಹಾಸಿಗೆಯಲ್ಲಿ ತಲೆಬಾಗಿಸಿಕೊಂಡು, 48 ‘ನಾನು ಕಣ್ಣಾರೆ ಕಾಣುವಂತೆ ನನ್ನ ಮಕ್ಕಳಲ್ಲಿ ಒಬ್ಬನನ್ನು ಇಂದು ಸಿಂಹಾಸನದ ಮೇಲೆ ಕುಳ್ಳಿರಿಸಿದ ಇಸ್ರೇಲಿನ ದೇವರಾದ ಯೆಹೋವನಿಗೆ ಸ್ತೋತ್ರವಾಗಲಿ’ ಎಂದು ಹೇಳಿದ್ದಾನೆ” ಎಂದನು.
44 “ದೇವರು ನಮ್ಮ ಪಿತೃಗಳೊಂದಿಗೆ ಯಾವ ಗುಡಾರದಲ್ಲಿ ಮತಾಡಿದ್ದನೋ ಆ ಗುಡಾರವು[a] ಈ ಯೆಹೂದ್ಯರೊಂದಿಗೆ ಮರಳುಗಾಡಿನಲ್ಲಿತ್ತು. ಈ ಗುಡಾರವನ್ನು ನಿರ್ಮಿಸುವ ಬಗೆಯನ್ನು ದೇವರು ಮೋಶೆಗೆ ತಿಳಿಸಿಕೊಟ್ಟನು. ದೇವರು ತನಗೆ ತೋರಿಸಿದ ಆಕಾರದಂತೆಯೇ ಮೋಶೆಯು ಅದನ್ನು ನಿರ್ಮಿಸಿದನು. 45 ತರುವಾಯ ಇತರ ಜನಾಂಗಗಳ ನಾಡುಗಳನ್ನು ವಶಪಡಿಸಿಕೊಳ್ಳುವುದಕ್ಕಾಗಿ ಯೆಹೋಶುವನು ನಮ್ಮ ಪಿತೃಗಳನ್ನು ಮುನ್ನಡೆಸಿದನು. ನಮ್ಮ ಜನರು ಆ ದೇಶದೊಳಗೆ ಹೋದಾಗ, ದೇವರು ಇತರ ಜನರನ್ನು ಅಲ್ಲಿಂದ ಹೊರಡಿಸಿಬಿಟ್ಟನು. ನಮ್ಮ ಜನರು ಆ ಹೊಸ ದೇಶದೊಳಗೆ ಹೋದಾಗ ಈ ಗುಡಾರವನ್ನು ತಮ್ಮೊಂದಿಗೆ ತೆಗೆದುಕೊಂಡು ಹೋದರು. ನಮ್ಮ ಜನರು ಈ ಗುಡಾರವನ್ನು ತಮ್ಮ ಪಿತೃಗಳಿಂದ ಸ್ವೀಕರಿಸಿಕೊಂಡು ದಾವೀದನ ಕಾಲದವರೆಗೂ ಅದನ್ನು ಇಟ್ಟುಕೊಂಡಿದ್ದರು. 46 ದೇವರು ದಾವೀದನನ್ನು ಬಹಳವಾಗಿ ಮೆಚ್ಚಿಕೊಂಡನು. ‘ಯಾಕೋಬನ ದೇವರಾದ ನಿನಗಾಗಿ ಒಂದು ಆಲಯವನ್ನು ಕಟ್ಟಲು ನನಗೆ ಅವಕಾಶಕೊಡು’ ಎಂದು ದಾವೀದನು ದೇವರನ್ನು ಕೇಳಿಕೊಂಡನು. 47 ಆದರೆ ದೇವಾಲಯವನ್ನು ಕಟ್ಟಿದ್ದು (ದಾವೀದನ ಮಗನಾದ) ಸೊಲೊಮೋನನೇ.
48 “ಆದರೆ ಮನುಷ್ಯರು ತಮ್ಮ ಕೈಯಾರೆ ನಿರ್ಮಿಸಿದ ಮನೆಗಳಲ್ಲಿ ಮಹೋನ್ನತನು (ದೇವರು) ವಾಸಿಸುವುದಿಲ್ಲ. ಪ್ರವಾದಿಯು ಹೀಗೆ ಬರೆದಿದ್ದಾನೆ:
49 ‘ಪ್ರಭುವು ಹೀಗೆನ್ನುತ್ತಾನೆ,
ಪರಲೋಕವು ನನ್ನ ಸಿಂಹಾಸನ.
ಭೂಮಿಯು ನನ್ನ ಪಾದಪೀಠ.
ನೀವು ನನಗೋಸ್ಕರ ಯಾವ ಬಗೆಯ ಮನೆಯನ್ನು ಕಟ್ಟಬಲ್ಲಿರಿ?
ನಾನು ವಿಶ್ರಮಿಸಿಕೊಳ್ಳತಕ್ಕ ಸ್ಥಳವೇ ಇಲ್ಲ!
50 ನೆನಪಿರಲಿ, ಈ ವಸ್ತುಗಳನ್ನೆಲ್ಲ ಮಾಡಿದವನು ನಾನೇ!’(A)”
51 ಸ್ತೆಫನನು ಮಾತನ್ನು ಮುಂದುವರಿಸಿದನು: “ಮೊಂಡರಾದ ಯೆಹೂದ್ಯನಾಯಕರೇ! ನೀವು ನಿಮ್ಮ ಹೃದಯಗಳನ್ನು ದೇವರಿಗೆ ಕೊಟ್ಟಿಲ್ಲ. ನೀವು ಆತನಿಗೆ ಕಿವಿಗೊಡುವುದಿಲ್ಲ. ಪವಿತ್ರಾತ್ಮನು ನಿಮಗೆ ತಿಳಿಸಲು ಪ್ರಯತ್ನಿಸುತ್ತಿರುವ ವಿಷಯಕ್ಕೆ ನೀವು ಯಾವಾಗಲೂ ವಿರೋಧಿಗಳಾಗಿದ್ದೀರಿ. ನಿಮ್ಮ ಪಿತೃಗಳು ಹೀಗೆಯೇ ಮಾಡಿದರು ಮತ್ತು ನೀವೂ ಅವರಂತೆಯೇ ಇದ್ದೀರಿ! 52 ಜೀವಸಿದ್ದ ಪ್ರವಾದಿಗಳಲ್ಲಿ ಪ್ರತಿಯೊಬ್ಬರನ್ನೂ ನಿಮ್ಮ ಪಿತೃಗಳು ಹಿಂಸಿಸಿದರು. ನೀತಿವಂತನೊಬ್ಬನು (ಕ್ರಿಸ್ತನು) ಬರುತ್ತಾನೆಂದು ಬಹುಕಾಲದ ಹಿಂದೆಯೇ ಆ ಪ್ರವಾದಿಗಳು ತಿಳಿಸಿದ್ದರು. ಆದರೆ ನಿಮ್ಮ ಪಿತೃಗಳು ಆ ಪ್ರವಾದಿಗಳನ್ನು ಕೊಂದುಹಾಕಿದರು. ಈಗ ನೀವು ನೀತಿವಂತನಿಗೆ ವಿರುದ್ಧವಾಗಿ ತಿರುಗಿ ಆತನನ್ನು ಕೊಂದುಹಾಕಿದಿರಿ. 53 ದೇವರು ತನ್ನ ದೂತರ ಮೂಲಕ ಕೊಟ್ಟ ಮೋಶೆಯ ಧರ್ಮಶಾಸ್ತ್ರವನ್ನು ಪಡೆದುಕೊಂಡ ನೀವೇ ಅದಕ್ಕೆ ವಿಧೇಯರಾಗುವುದಿಲ್ಲ!”
Kannada Holy Bible: Easy-to-Read Version. All rights reserved. © 1997 Bible League International