Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 92

ಸಬ್ಬತ್ ದಿನದ ಸ್ತುತಿಗೀತೆ.

92 ಯೆಹೋವನೇ, ನಿನ್ನನ್ನು ಸ್ತುತಿಸುವುದೂ
    ಮಹೋನ್ನತನಾದ ದೇವರೇ, ನಿನ್ನ ಹೆಸರನ್ನು ಕೊಂಡಾಡುವುದೂ ಯುಕ್ತವಾಗಿದೆ.
2-3 ಹತ್ತು ತಂತಿವಾದ್ಯಗಳನ್ನೂ ಹಾರ್ಪ್ ಮತ್ತು ಲೈರ್ ವಾದ್ಯಗಳನ್ನೂ ನುಡಿಸುತ್ತಾ
    ನಿನ್ನ ಪ್ರೀತಿಯ ಕುರಿತು ಮುಂಜಾನೆಯಲ್ಲಿಯೂ
    ನಿನ್ನ ನಂಬಿಗಸ್ತಿಕೆಯ ಕುರಿತು ರಾತ್ರಿಯಲ್ಲಿಯೂ ಹಾಡುವುದು ಯುಕ್ತವಾಗಿದೆ.
ಯೆಹೋವನೇ, ನಿನ್ನ ಕಾರ್ಯಗಳಿಂದ ನಮ್ಮನ್ನು ನಿಜವಾಗಿಯೂ ಸಂತೋಷಗೊಳಿಸಿರುವೆ.
    ಅವುಗಳ ಕುರಿತು ನಾವು ಹರ್ಷದಿಂದ ಹಾಡುವೆವು.
ಯೆಹೋವನೇ, ನೀನು ಅಂತಹ ಮಹಾಕಾರ್ಯಗಳನ್ನು ಮಾಡಿರುವೆ.
    ನಿನ್ನ ಆಲೋಚನೆಗಳನ್ನು ಗ್ರಹಿಸಿಕೊಳ್ಳಲು ನಮ್ಮಿಂದಾಗದು.
ನಿನಗೆ ಹೋಲಿಸಿದರೆ, ಜನರು ದಡ್ಡ ಪ್ರಾಣಿಗಳಂತಿದ್ದಾರೆ.
    ನಾವು ಯಾವುದನ್ನೂ ಅರ್ಥಮಾಡಿಕೊಳ್ಳಲಾಗದ ಮೂಢರಂತಿದ್ದೇವೆ.
ದುಷ್ಟರು ಹುಲ್ಲಿನಂತೆಯೂ
    ಕೆಡುಕರು ಹೂವಿನಂತೆಯೂ ಬದುಕಿ ಸಾಯುವರು.
    ಅವರ ನಿರರ್ಥಕ ಕಾರ್ಯಗಳು ನಿತ್ಯ ನಾಶವಾಗುತ್ತವೆ.
ಯೆಹೋವನೇ, ನೀನಾದರೋ ಸದಾಕಾಲ ಸನ್ಮಾನ ಹೊಂದುವೆ.
ಯೆಹೋವನೇ, ನಿನ್ನ ಶತ್ರುಗಳೆಲ್ಲ ನಾಶವಾಗುವರು;
    ಕೆಟ್ಟಕಾರ್ಯಗಳನ್ನು ಮಾಡುವ ಅವರೆಲ್ಲರೂ ನಾಶವಾಗುವರು.
10 ನನ್ನನ್ನಾದರೋ ನೀನು ಕಾಡುಕೋಣ ಬಲಿಷ್ಠನನ್ನಾಗಿ ಮಾಡಿರುವೆ.
    ನಿನ್ನ ಚೈತನ್ಯ ತೈಲವನ್ನು ನನ್ನ ಮೇಲೆ ಸುರಿದಾತನು ನೀನೇ.
11 ವೈರಿಗಳು ನನ್ನ ಸುತ್ತಲೂ ಸೇರಿಬಂದಿದ್ದಾರೆ.
    ಅವರು ಆಕ್ರಮಣಕ್ಕೆ ಸಿದ್ಧವಾಗಿರುವ ಬಲಿಷ್ಠವಾದ ಹೋರಿಗಳಂತಿದ್ದಾರೆ.
    ಅವರು ನನ್ನ ಬಗ್ಗೆ ಹೇಳುತ್ತಿರುವುದೂ ನನಗೆ ಕೇಳುತ್ತಿದೆ.

12-13 ನೀತಿವಂತರಾದರೋ ಯೆಹೋವನ ಆಲಯದಲ್ಲಿ
    ಬೆಳೆಯುತ್ತಿರುವ ಲೆಬನೋನಿನ ದೇವದಾರು ವೃಕ್ಷದಂತಿರುವರು.
ನೀತಿವಂತರಾದರೋ ನಮ್ಮ ದೇವಾಲಯದ ಅಂಗಳದಲ್ಲಿ
    ಮೊಗ್ಗು ಬಿಡುತ್ತಿರುವ ಖರ್ಜೂರದ ಮರಗಳಂತಿರುವರು.
14 ಅವರು ಮುಪ್ಪಿನಲ್ಲಿಯೂ ಪುಷ್ಟಿಯಾಗಿ ಬೆಳೆದಿರುವ
    ಎಲೆಮರಗಳಂತೆ ಫಲಿಸುವರು.
15 ಯೆಹೋವನು ಒಳ್ಳೆಯವನೆಂಬುವುದಕ್ಕೆ
    ಅವರು ದೃಷ್ಟಾಂತವಾಗಿರುವರು.
ಆತನೇ ನನ್ನ ಬಂಡೆ.
    ಆತನು ಎಂದಿಗೂ ತಪ್ಪು ಮಾಡನು.

ಜ್ಞಾನೋಕ್ತಿಗಳು 11:23-30

23 ಒಳ್ಳೆಯವರ ಬಯಕೆ ಅವರನ್ನು ಕ್ಷೇಮಕ್ಕೆ ನಡೆಸುತ್ತದೆ. ಆದರೆ ದುಷ್ಟರ ಆಕಾಂಕ್ಷೆ ಅವರನ್ನು ದಂಡನೆಗೆ ನಡೆಸುತ್ತದೆ.

24 ಉಚಿತವಾಗಿ ಕೊಡುವವನು ಅದಕ್ಕಿಂತಲೂ ಹೆಚ್ಚುಗಳಿಸುವನು. ಆದರೆ ಕೊಡಲೊಲ್ಲದವನು ಬಡವನಾಗುವನು.

25 ಉದಾರಿಯು ಅಭಿವೃದ್ಧಿಯಾಗುವನು. ಬೇರೆಯವರಿಗೆ ಸಹಾಯಮಾಡುವವನು ಸಹಾಯವನ್ನು ಹೊಂದಿಕೊಳ್ಳುವನು.

26 ಧಾನ್ಯವನ್ನು ಮಾರದೆ ಕೂಡಿಟ್ಟುಕೊಳ್ಳುವವನನ್ನು ಜನರು ಶಪಿಸುವರು. ಧಾನ್ಯ ಮಾರುವವನನ್ನು ಜನರು ಆಶೀರ್ವದಿಸುವರು.

27 ಒಳ್ಳೆಯದನ್ನು ಮಾಡುವವನನ್ನು ಜನರು ಗೌರವಿಸುವರು. ಕೇಡನ್ನು ಮಾಡುವವನಿಗೆ ಕೇವಲ ಕೇಡೇ ಆಗುವುದು.

28 ಐಶ್ವರ್ಯದ ಮೇಲೆ ಭರವಸೆಯಿಟ್ಟಿರುವವನು ಎಲೆಯಂತೆ ಉದುರಿಹೋಗುವನು. ಆದರೆ ಸಧರ್ಮಿಯು ಚಿಗುರಿದ ಎಲೆಯಂತೆ ಬೆಳೆಯುವನು.

29 ತನ್ನ ಕುಟುಂಬಕ್ಕೆ ತೊಂದರೆ ಕೊಡುವವನಿಗೆ ಆಸ್ತಿಯು ದೊರೆಯುವುದಿಲ್ಲ. ಮೂಢನು ಬಲವಂತಕ್ಕೊಳಗಾಗಿ ಜ್ಞಾನಿಯ ಸೇವೆ ಮಾಡಬೇಕಾಗುವುದು.

30 ನೀತಿವಂತನ ಕಾರ್ಯಗಳು ಜೀವವುಳ್ಳ ಮರಗಳಂತಿವೆ. ಜ್ಞಾನಿಯು ಆತ್ಮಗಳನ್ನು ಗೆದ್ದುಕೊಳ್ಳುವನು.

ಮತ್ತಾಯ 13:10-17

ಯೇಸು ಸಾಮ್ಯಗಳನ್ನು ಏಕೆ ಬಳಸಿದನು?

(ಮಾರ್ಕ 4:10-12; ಲೂಕ 8:9-10)

10 ಆಗ ಶಿಷ್ಯರು ಯೇಸುವಿನ ಬಳಿಗೆ ಬಂದು, “ನೀನು ಸಾಮ್ಯಗಳ ಮೂಲಕ ಜನರಿಗೆ ಉಪದೇಶಿಸುವುದೇಕೆ?” ಎಂದು ಕೇಳಿದರು.

11 ಯೇಸು, “ಪರಲೋಕರಾಜ್ಯದ ರಹಸ್ಯವಾದ ಸತ್ಯಗಳನ್ನು ನೀವು ಮಾತ್ರ ತಿಳಿದುಕೊಳ್ಳಬಲ್ಲಿರಿ. ಈ ಸತ್ಯಗಳ ರಹಸ್ಯವು ಬೇರೆ ಜನರಿಗೆ ತಿಳಿಯಲಾರದು. 12 ಸ್ವಲ್ಪ ಜ್ಞಾನವನ್ನು ಹೊಂದಿರುವವನು ಇನ್ನೂ ಹೆಚ್ಚು ಜ್ಞಾನವನ್ನು ಪಡೆದುಕೊಂಡು ಸಾಕಷ್ಟು ಜ್ಞಾನವಂತನಾಗುವನು. ಆದರೆ ಜ್ಞಾನವನ್ನು ಹೊಂದಿಲ್ಲದವನು ತನಗಿರುವ ಸ್ವಲ್ಪ ಜ್ಞಾನವನ್ನೂ ಕಳೆದುಕೊಳ್ಳುವನು. 13 ಈ ಕಾರಣದಿಂದಲೇ ನಾನು ಈ ಸಾಮ್ಯಗಳ ಮೂಲಕ ಇವರಿಗೆ ಬೋಧಿಸುತ್ತೇನೆ. ಈ ಜನರು ನೋಡಿದರೂ ಕಾಣುವುದಿಲ್ಲ, ಕೇಳಿದರೂ ಗ್ರಹಿಸುವುದಿಲ್ಲ. 14 ಇಂಥವರ ಬಗ್ಗೆ ಯೆಶಾಯನು ಹೇಳಿದ್ದೇನೆಂದರೆ:

‘ನೀವು ಆಲಿಸುತ್ತೀರಿ, ಕೇಳುತ್ತೀರಿ,
    ಆದರೆ ನಿಮಗೆ ಅರ್ಥವಾಗುವುದಿಲ್ಲ.
ನೀವು ದೃಷ್ಟಿಸಿ ನೋಡುತ್ತೀರಿ,
    ಆದರೆ ನಿಮಗೆ ಕಾಣುವುದನ್ನು ಅರ್ಥಮಾಡಿಕೊಳ್ಳುವುದಿಲ್ಲ.
15 ಹೌದು, ಇವರ ಮನಸ್ಸುಗಳು ಕಠಿಣವಾಗಿವೆ.
    ಕಿವಿ ಮಂದವಾಗಿವೆ,
    ಕಣ್ಣು ಮಬ್ಬಾಗಿವೆ.
ಅವರು
    ತಮ್ಮ ಕಣ್ಣುಗಳಿಂದ ನೋಡದಂತೆಯೂ
    ತಮ್ಮ ಕಿವಿಗಳಿಂದ ಕೇಳದಂತೆಯೂ
    ತಮ್ಮ ಮನಸ್ಸುಗಳಿಂದ ಅರ್ಥಮಾಡಿಕೊಳ್ಳದಂತೆಯೂ
ನನ್ನ ಕಡೆಗೆ ತಿರುಗಿಕೊಳ್ಳದಂತೆಯೂ ನನ್ನಿಂದ ಗುಣಹೊಂದದಂತೆಯೂ ಹೀಗಾಯಿತು.’(A)

16 ನೀವಾದರೋ ಧನ್ಯರು. ನಿಮಗೆ ಕಾಣುವ ಸಂಗತಿಗಳನ್ನೂ ನಿಮಗೆ ಹೇಳುವ ವಿಷಯಗಳನ್ನೂ ಅರ್ಥಮಾಡಿಕೊಳ್ಳಬಲ್ಲಿರಿ. 17 ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ, ನೀವು ಈಗ ನೋಡುವ ಸಂಗತಿಗಳನ್ನು ನೋಡಲು ಮತ್ತು ಈಗ ನೀವು ಕೇಳುವ ಸಂಗತಿಗಳನ್ನು ಕೇಳಲು ಅನೇಕ ಪ್ರವಾದಿಗಳು ಮತ್ತು ಒಳ್ಳೆಯ ಜನರು ಅಪೇಕ್ಷಿಸಿದರು. ಆದರೆ ಅವರಿಗೆ ಸಾಧ್ಯವಾಗಲಿಲ್ಲ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International