Revised Common Lectionary (Complementary)
ರಚನೆಗಾರ: ದಾವೀದ.
65 ದೇವರೇ, ಚೀಯೋನಿನಲ್ಲಿ ನಾವು ನಿನ್ನನ್ನು ಸ್ತುತಿಸುವೆವು.
ನಾವು ಮಾಡಿದ ಹರಕೆಗಳನ್ನು ನಿನಗೆ ಸಲ್ಲಿಸುವೆವು.
2 ಪ್ರಾರ್ಥನೆಯನ್ನು ಕೇಳುವಾತನೇ,
ಜನರೆಲ್ಲರೂ ನಿನ್ನ ಬಳಿಗೆ ಬರುವರು.
3 ನಮ್ಮ ಪಾಪಗಳು ಹೊರಲಾರದಷ್ಟು ಭಾರವಾಗಿವೆ;
ನಮ್ಮನ್ನು ಆ ಪಾಪಗಳಿಂದ ಬಿಡಿಸು.
4 ನಿನ್ನ ಸೇವಕರನ್ನು ಆರಿಸಿಕೊಂಡಾತನು ನೀನೇ.
ನಿನ್ನ ಆಲಯಕ್ಕೆ ಬಂದು ನಿನ್ನನ್ನು ಆರಾಧಿಸಲು
ನಮ್ಮನ್ನು ಆರಿಸಿಕೊಂಡಾತನು ನೀನೇ.
ನಿನ್ನ ಮಹಾಪವಿತ್ರ ಆಲಯದ ಸೌಭಾಗ್ಯದಿಂದ
ನಾವು ಉಲ್ಲಾಸಗೊಂಡಿದ್ದೇವೆ.
5 ನಮ್ಮ ರಕ್ಷಕನಾದ ದೇವರೇ,
ನೀತಿವಂತರ ಪ್ರಾರ್ಥನೆಗೆ ಸದುತ್ತರವನ್ನು ದಯಪಾಲಿಸು;
ಅವರಿಗೋಸ್ಕರ ಮಹತ್ಕಾರ್ಯಗಳನ್ನು ನಡೆಸು.
ಸರ್ವಭೂನಿವಾಸಿಗಳ ನಂಬಿಕೆಗೆ ನೀನೇ ಆಧಾರ.
6 ಸ್ವಬಲದಿಂದ ಪರ್ವತಗಳನ್ನು ನಿರ್ಮಿಸಿದಾತನು ದೇವರೇ.
ಆತನು “ಶೌರ್ಯ” ಎಂಬ ನಡುಕಟ್ಟನ್ನು ಬಿಗಿದುಕೊಂಡಿದ್ದಾನೆ.
7 ಭೋರ್ಗರೆಯುವ ಸಮುದ್ರಗಳನ್ನೂ
ಅನ್ಯಜನಾಂಗಗಳ ದಂಗೆಯನ್ನೂ ಶಾಂತಗೊಳಿಸುವಾತನು ದೇವರೇ.
8 ಭೂಲೋಕದಾದ್ಯಂತದಲ್ಲಿರುವ ಜನರು ನಿನ್ನ ಮಹತ್ಕಾರ್ಯಗಳಿಂದ ಆಶ್ಚರ್ಯಚಕಿತರಾಗಿದ್ದಾರೆ.
ಸೂರ್ಯೋದಯವೂ ಸೂರ್ಯಸ್ತಮಾನವೂ ನಮ್ಮನ್ನು ಹರ್ಷಗೊಳಿಸುತ್ತವೆ.
9 ದೇವರೇ, ಭೂಪಾಲಕನು ನೀನೇ.
ಭೂಮಿಗೆ ನೀರೆರೆದು ಹದಗೊಳಿಸುವಾತನು ನೀನೇ.
ತೊರೆಗಳನ್ನು ತುಂಬಿಸಿ
ಸುಗ್ಗಿಯನ್ನು ಬರಮಾಡುವಾತನು ನೀನೇ.
10 ಉತ್ತಿರುವ ಹೊಲಗಳ ಮೇಲೆ ಮಳೆ ಸುರಿಸಿ,
ಹೆಂಟೆಗಳನ್ನು ಕರಗಿಸಿ,
ಭೂಮಿಯನ್ನು ಮೃದುಗೊಳಿಸಿ,
ಎಳೆ ಸಸಿಗಳನ್ನು ಬೆಳೆಸುವಾತನು ನೀನೇ.
11 ಹೊಸ ವರ್ಷವನ್ನು ಸಮೃದ್ಧಿಕರವಾದ ಸುಗ್ಗಿಯೊಂದಿಗೆ ಆರಂಭಿಸುವಾತನು ನೀನೇ.
ಅನೇಕ ಬೆಳೆಗಳಿಂದ ಬಂಡಿಗಳನ್ನು ತುಂಬಿಸುವಾತನು ನೀನೇ.
12 ಅರಣ್ಯವು ಹುಲ್ಲಿನಿಂದ ಆವೃತವಾಗಿದೆ.
ಬೆಟ್ಟಗುಡ್ಡಗಳು ಸಮೃದ್ಧಿಕರ ಫಸಲಿನಿಂದ ಕಂಗೊಳಿಸುತ್ತವೆ.
13 ಹುಲ್ಲುಗಾವಲುಗಳು ಕುರಿಗಳಿಂದ ತುಂಬಿಹೋಗಿವೆ.
ಕಣಿವೆಗಳು ಧಾನ್ಯದಿಂದ ತುಂಬಿತುಳುಕುತ್ತಿವೆ.
ಎಲ್ಲರೂ ಹಾಡುತ್ತಾ ಆನಂದಘೋಷ ಮಾಡುತ್ತಿದ್ದಾರೆ.
ಇಸ್ರೇಲ್ ರಕ್ಷಿಸಲ್ಪಡುವದು
52 ಚೀಯೋನೇ, ಎಚ್ಚರಗೊಳ್ಳು, ಎದ್ದೇಳು!
ನಿನ್ನ ಉಡುಪನ್ನು ಹಾಕಿಕೊ; ನಿನ್ನ ಪ್ರತಾಪವನ್ನು ಧರಿಸಿಕೊ.
ಪರಿಶುದ್ಧ ಜೆರುಸಲೇಮೇ, ಎದ್ದುನಿಲ್ಲು.
ಸುನ್ನತಿಯಿಲ್ಲದವರೂ ಅಶುದ್ಧರೂ ನಿನ್ನಲ್ಲಿಗೆ ಮತ್ತೇ ಪ್ರವೇಶಿಸರು.
2 ನಿನ್ನ ಧೂಳನ್ನು ಝಾಡಿಸು.
ನಿನ್ನ ಮನೋಹರವಾದ ವಸ್ತ್ರಗಳನ್ನು ಧರಿಸಿಕೊ.
ಚೀಯೋನಿನ ಕುಮಾರ್ತೆಯಾದ ಜೆರುಸಲೇಮೇ, ನೀನು ಒಮ್ಮೆ ಸೆರೆಯಾಳಾಗಿದ್ದೆ.
ಈಗ ನೀನು ನಿನ್ನ ಕುತ್ತಿಗೆಗೆ ಬಂಧಿಸಲ್ಪಟ್ಟ ಸಂಕೋಲೆಗಳಿಂದ ಬಿಡಿಸಿಕೊ.
3 ಯೆಹೋವನು ಹೇಳುವುದೇನೆಂದರೆ:
“ನಾನು ನಿನ್ನನ್ನು ಮಾರಿದ್ದು ಹಣಕ್ಕಾಗಿಯಲ್ಲ;
ಆದ್ದರಿಂದ ನಾನು ನಿನ್ನನ್ನು ಹಣ ಕೊಡದೆ ಬಿಡುಗಡೆ ಮಾಡುವೆನು.”
4 ನನ್ನ ಒಡೆಯನಾದ ಯೆಹೋವನು ಹೇಳುವುದೇನೆಂದರೆ: “ನನ್ನ ಜನರು ಮೊದಲು ಈಜಿಪ್ಟಿನಲ್ಲಿ ನೆಲೆಸಲು ಹೋಗಿ, ನಂತರ ಅಲ್ಲಿ ಅವರು ದಾಸರಾದರು. ಆ ಬಳಿಕ ಅಶ್ಶೂರವು ಅವರನ್ನು ಗುಲಾಮರನ್ನಾಗಿ ಮಾಡಿತು. 5 ಈಗ ನೋಡು, ಸಂಭವಿಸಿದ್ದನ್ನು ಗಮನಿಸು. ಇನ್ನೊಂದು ಜನಾಂಗವು ಅವರನ್ನು ಗುಲಾಮರನ್ನಾಗಿ ಮಾಡಿತು. ಈ ದೇಶವು ನನ್ನ ಜನರನ್ನು ತೆಗೆದುಕೊಂಡು ಹೋಗಲು ಹಣ ಕೊಡಲಿಲ್ಲ. ಈ ದೇಶವು ನನ್ನ ಜನರ ಮೇಲೆ ದಬ್ಬಾಳಿಕೆ ನಡಿಸಿ ನಕ್ಕಿತ್ತು. ಈಗ ಜನರು ನನ್ನನ್ನೂ ನನ್ನ ಹೆಸರನ್ನೂ ಯಾವಾಗಲೂ ಗೇಲಿ ಮಾಡುತ್ತಾರೆ.”
6 ಯೆಹೋವನು ಹೇಳುವುದೇನೆಂದರೆ, “ಜನರು ನನ್ನನ್ನು ತಿಳಿದುಕೊಳ್ಳಲೆಂದು ಹೀಗಾಯಿತು. ನಾನು ಯಾರೆಂದು ನನ್ನ ಜನರಿಗೆ ಗೊತ್ತಾಗುವದು. ನನ್ನ ಜನರಿಗೆ ನನ್ನ ಹೆಸರಿನ ಪರಿಚಯವಾಗುವದು. ‘ನಾನೇ’ ಎಂಬಾತನಾದ ನಾನೇ ಅವರ ಸಂಗಡ ಮಾತನಾಡುತ್ತಿದ್ದೇನೆ ಎಂದು ಅವರಿಗೆ ಗೊತ್ತಾಗುವದು.”
ಯೇಸುವಿನ ಉಪದೇಶ ಜನರಿಗೆ ತೀರ್ಪು ಮಾಡುವುದು
44 ಬಳಿಕ ಯೇಸು ಗಟ್ಟಿಯಾಗಿ ಹೀಗೆಂದನು: “ನನ್ನಲ್ಲಿ ನಂಬಿಕೆ ಇಡುವವನು ನನ್ನನ್ನು ಕಳುಹಿಸಿದಾತನಲ್ಲಿ (ದೇವರು) ನಿಜವಾಗಿಯೂ ನಂಬಿಕೆ ಇಡುವವನಾಗಿದ್ದಾನೆ. 45 ನನ್ನನ್ನು ನೋಡುವವನು ನನ್ನನ್ನು ಕಳುಹಿಸಿದಾತನನ್ನು ನಿಜವಾಗಿಯೂ ನೋಡುವವನಾಗಿದ್ದಾನೆ. 46 ನಾನೇ ಬೆಳಕಾಗಿದ್ದೇನೆ. ನನ್ನಲ್ಲಿ ನಂಬಿಕೆ ಇಡುವವರು ಕತ್ತಲೆಯಲ್ಲಿ ಇರಬಾರದೆಂದು ನಾನೇ ಈ ಲೋಕಕ್ಕೆ ಬಂದಿದ್ದೇನೆ.
47 “ನಾನು ಈ ಲೋಕಕ್ಕೆ ಬಂದದ್ದು ಜನರಿಗೆ ತೀರ್ಪು ಮಾಡುವುದಕ್ಕಾಗಿಯಲ್ಲ. ಈ ಲೋಕದಲ್ಲಿರುವ ಜನರನ್ನು ರಕ್ಷಿಸುವುದಕ್ಕಾಗಿ ನಾನು ಬಂದೆನು. ಆದ್ದರಿಂದ ನನ್ನ ಮಾತುಗಳನ್ನು ಕೇಳಿಯೂ ನಂಬದಿರುವ ಜನರಿಗೆ ತೀರ್ಪು ಮಾಡುವವನು ನಾನಲ್ಲ. 48 ನನ್ನಲ್ಲಿ ನಂಬಿಕೆ ಇಡದಿರುವವನಿಗೆ ಮತ್ತು ನಾನು ಹೇಳುವುದನ್ನು ತಿರಸ್ಕರಿಸುವವನಿಗೆ ತೀರ್ಪುಮಾಡುವಂಥದ್ದು ನಾನು ಆಡಿದ ಮಾತುಗಳೇ. ಅಂತಿಮ ದಿನದಂದು ಅವೇ ಅವನಿಗೆ ತೀರ್ಪುಮಾಡುತ್ತವೆ. 49 ಏಕೆಂದರೆ, ನನ್ನ ಮಾತುಗಳು ನನ್ನಿಂದ ಬಂದವುಗಳಲ್ಲ. ನನ್ನನ್ನು ಕಳುಹಿಸಿದ ತಂದೆಯೇ ನಾನು ಏನು ಹೇಳಬೇಕು, ಏನು ಮಾತಾಡಬೇಕು ಎಂದು ನನಗೆ ಹೇಳಿಕೊಟ್ಟಿದ್ದಾನೆ. 50 ತಂದೆಯ ಆಜ್ಞೆಯು ನಿತ್ಯಜೀವಕ್ಕೆ ನಡೆಸುತ್ತದೆ ಎಂದು ನಾನು ಬಲ್ಲೆನು. ಆದ್ದರಿಂದ ತಂದೆಯು ನನಗೆ ಹೇಳಿಕೊಟ್ಟ ಸಂಗತಿಗಳನ್ನೇ ನಾನು ತಿಳಿಸುತ್ತೇನೆ.”
Kannada Holy Bible: Easy-to-Read Version. All rights reserved. © 1997 Bible League International