Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 119:161-168

161 ಅಧಿಪತಿಗಳು ನಿಷ್ಕಾರಣವಾಗಿ ನನ್ನ ಮೇಲೆ ಆಕ್ರಮಣ ಮಾಡಿದರು.
    ನಾನಾದರೋ ನಿನ್ನ ಧರ್ಮಶಾಸ್ತ್ರವೊಂದಕ್ಕೇ ಭಯಪಡುವೆನು, ಅದೊಂದನ್ನೇ ಗೌರವಿಸುವೆನು.
162 ಮಹಾಭಂಡಾರವನ್ನು ಕಂಡುಕೊಂಡವನಂತೆ
    ನಾನು ನಿನ್ನ ವಾಕ್ಯದಲ್ಲಿ ಸಂತೋಷಿಸುವೆನು.
163 ನಾನು ಸುಳ್ಳುಗಳನ್ನು ದ್ವೇಷಿಸುವೆನು!
    ಅವು ನನಗೆ ಅಸಹ್ಯವಾಗಿವೆ.
    ನಿನ್ನ ಉಪದೇಶಗಳು ನನಗೆ ಪ್ರಿಯವಾಗಿವೆ.
164 ನಿನ್ನ ನೀತಿಯ ವಿಧಿನಿಯಮಗಳಿಗಾಗಿ
    ನಾನು ದಿನಕ್ಕೆ ಏಳು ಸಲ ನಿನ್ನನ್ನು ಕೊಂಡಾಡುವೆನು.
165 ನಿನ್ನ ಧರ್ಮಶಾಸ್ತ್ರವನ್ನು ಪ್ರೀತಿಸುವವರಿಗೆ ಸಂಪೂರ್ಣ ಸಮಾಧಾನವಿರುವುದು.
    ಅವರನ್ನು ಯಾವುದೂ ಬೀಳಿಸಲಾರದು.
166 ಯೆಹೋವನೇ, ನಿನ್ನ ರಕ್ಷಣೆಗಾಗಿ ಕಾಯ್ದುಕೊಂಡಿದ್ದೇನೆ.
    ನಾನು ನಿನ್ನ ಆಜ್ಞೆಗಳಿಗೆ ವಿಧೇಯನಾಗಿದ್ದೇನೆ.
167 ನಾನು ನಿನ್ನ ಕಟ್ಟಳೆಗಳನ್ನು ಅನುಸರಿಸಿದೆನು.
    ಅವು ನನಗೆ ಬಹು ಪ್ರಿಯವಾಗಿವೆ.
168 ನಾನು ನಿನ್ನ ಒಡಂಬಡಿಕೆಗೂ ನಿನ್ನ ನಿಯಮಗಳಿಗೂ ವಿಧೇಯನಾಗಿದ್ದೇನೆ.
    ನನ್ನ ನಡತೆಯೆಲ್ಲಾ ನಿನಗೆ ಗೊತ್ತಿದೆ.

1 ರಾಜರುಗಳು 21:1-16

ನಾಬೋತನ ದ್ರಾಕ್ಷಿತೋಟ

21 ಸಮಾರ್ಯದ ರಾಜನಾದ ಅಹಾಬನಿಗೆ ಇಜ್ರೇಲಿನಲ್ಲಿ ಅರಮನೆಯಿತ್ತು. ಆ ಅರಮನೆಯ ಹಿತ್ತಲಿನಲ್ಲಿ ಒಂದು ದ್ರಾಕ್ಷಿತೋಟವಿತ್ತು. ಇಜ್ರೇಲಿನವನಾದ ನಾಬೋತನೆಂಬ ಹೆಸರಿನ ಮನುಷ್ಯನು ಆ ದ್ರಾಕ್ಷಿತೋಟದ ಒಡೆಯನಾಗಿದ್ದನು. ಒಂದು ದಿನ ಅಹಾಬನು ನಾಬೋತನಿಗೆ, “ನಿನ್ನ ದ್ರಾಕ್ಷಿತೋಟವನ್ನು ನನಗೆ ಕೊಡು. ನಾನು ಅದನ್ನು ತರಕಾರಿಯ ತೋಟವನ್ನಾಗಿ ಮಾಡುವೆನು. ನಿನ್ನ ದ್ರಾಕ್ಷಿತೋಟವು ನನ್ನ ಅರಮನೆಯ ಹತ್ತಿರದಲ್ಲಿದೆ. ನಾನು ಅದಕ್ಕೆ ಬದಲಾಗಿ ಒಂದು ಉತ್ತಮ ದ್ರಾಕ್ಷಿತೋಟವನ್ನು ನಿನಗೆ ಕೊಡುವೆನು. ನೀನು ಬಯಸಿದರೆ, ನಾನು ಅದರ ಬೆಲೆಯನ್ನು ಹಣದ ರೂಪದಲ್ಲಿ ಕೊಡುತ್ತೇನೆ” ಎಂದು ಹೇಳಿದನು.

ನಾಬೋತನು, “ನಾನು ನನ್ನ ಭೂಮಿಯನ್ನು ಎಂದಿಗೂ ನಿನಗೆ ಕೊಡುವುದಿಲ್ಲ. ಅದು ನನ್ನ ವಂಶಕ್ಕೆ ಸೇರಿದ್ದು” ಎಂದು ಉತ್ತರಿಸಿದನು.

ಅಹಾಬನು ಮನೆಗೆ ಹೋದನು. ಅವನು ನಾಬೋತನ ಮೇಲೆ ಕೋಪಗೊಂಡನು ಮತ್ತು ಬೇಸರಗೊಂಡನು. ಇಜ್ರೇಲಿನವನಾದ ನಾಬೋತನು ಹೇಳಿದ ಸಂಗತಿಗಳನ್ನು ಅವನು ಇಷ್ಟಪಡಲಿಲ್ಲ. “ನಾನು ನನ್ನ ವಂಶಕ್ಕೆ ಸೇರಿದ ದ್ರಾಕ್ಷಿತೋಟವನ್ನು ನಿನಗೆ ಕೊಡುವುದಿಲ್ಲ” ಎಂದು ನಾಬೋತನು ಹೇಳಿದ್ದನು. ಅಹಾಬನು ತನ್ನ ಹಾಸಿಗೆಯಲ್ಲಿ ಮಲಗಿ, ಮುಖವನ್ನು ಬೇರೆ ಕಡೆಗೆ ತಿರುಗಿಸಿಕೊಂಡನು. ಅವನು ಊಟಮಾಡಲಿಲ್ಲ.

ಅಹಾಬನ ಪತ್ನಿಯಾದ ಈಜೆಬೆಲಳು ಅವನ ಹತ್ತಿರ ಹೋದಳು. ಈಜೆಬೆಲಳು, “ನೀನೇಕೆ ತಳಮಳಗೊಂಡಿರುವೆ? ನೀನು ಏಕೆ ಊಟಮಾಡಲಿಲ್ಲ?” ಎಂದು ಅವನನ್ನು ಕೇಳಿದಳು.

ಅಹಾಬನು, “ನಾನು ಇಜ್ರೇಲಿನ ನಾಬೋತನಿಗೆ, ‘ನಿನ್ನ ತೋಟವನ್ನು ನನಗೆ ಕೊಡು. ಅದರ ಪೂರ್ಣ ಬೆಲೆಯನ್ನು ನಿನಗೆ ಕೊಡುತ್ತೇನೆ ಅಥವಾ ನೀನು ಬಯಸಿದರೆ, ನಿನಗೆ ಬೇರೊಂದು ತೋಟವನ್ನು ಕೊಡುತ್ತೇನೆ’ ಎಂದು ಹೇಳಿದೆನು. ಆದರೆ ನಾಬೋತನು ತನ್ನ ತೋಟವನ್ನು ನನಗೆ ಕೊಡಲಿಲ್ಲ” ಎಂದು ಉತ್ತರಿಸಿದನು.

ಈಜೆಬೆಲಳು, “ನೀನು ಇಸ್ರೇಲಿಗೆಲ್ಲ ರಾಜ! ನಿನ್ನ ಹಾಸಿಗೆಯಿಂದ ಎದ್ದು ಬಾ. ನೀನು ಸ್ವಲ್ಪ ಊಟಮಾಡಿ, ಸಂತೋಷದಿಂದಿರು. ನಾನು ನಿನಗೆ ನಾಬೋತನ ದ್ರಾಕ್ಷಿತೋಟವನ್ನು ಕೊಡಿಸುತ್ತೇನೆ” ಎಂದು ಹೇಳಿದಳು.

ನಂತರ ಈಜೆಬೆಲಳು ಕೆಲವು ಪತ್ರಗಳನ್ನು ಬರೆದಳು. ಅವಳು ಆ ಪತ್ರಗಳಿಗೆ ಅಹಾಬನ ಹೆಸರಿನ ಸಹಿಯನ್ನು ಮಾಡಿದಳು. ಅಹಾಬನ ಸ್ವಂತ ಮೊಹರನ್ನು ಅವಳು ಆ ಪತ್ರಗಳಿಗೆ ಹಾಕಿದಳು. ನಾಬೋತನು ಇದ್ದ ಆ ಪಟ್ಟಣದಲ್ಲಿ ವಾಸವಾಗಿದ್ದ ಮುಖ್ಯಜನರಿಗೂ ಹಿರಿಯರಿಗೂ ಅವಳು ಆ ಪತ್ರಗಳನ್ನು ಕಳುಹಿಸಿದಳು. ಆ ಪತ್ರದಲ್ಲಿ ಹೀಗೆ ಬರೆದಿತ್ತು:

“ಉಪವಾಸದ ಒಂದು ದಿನವನ್ನು ಗೊತ್ತುಮಾಡಿ, ಆ ದಿನವನ್ನು ಪ್ರಕಟಿಸಿ, ನಂತರ ಪಟ್ಟಣದ ಜನರನ್ನೆಲ್ಲ ಸಭೆ ಸೇರಿಸಿರಿ. 10 ನಾಬೋತನ ಬಗ್ಗೆ ಸುಳ್ಳುಹೇಳುವ ಕೆಲವು ಜನರನ್ನು ಪತ್ತೆಹಚ್ಚಿ, ನಾಬೋತನು ರಾಜನ ವಿರುದ್ಧವಾಗಿ ಮತ್ತು ದೇವರ ವಿರುದ್ಧವಾಗಿ ಮಾತನಾಡುವುದನ್ನು ನಾವು ಕೇಳಿಸಿಕೊಂಡೆವೆಂದು ಅವರು ಹೇಳಲೇಬೇಕು. ಆಗ ನಾಬೋತನನ್ನು ನಗರದಿಂದ ಹೊರಕ್ಕೆ ಕರೆದೊಯ್ದು ಅವನನ್ನು ಕಲ್ಲೆಸೆದು ಕೊಂದುಹಾಕಿರಿ.”

11 ಇಜ್ರೇಲಿನ ಹಿರಿಯರು ಮತ್ತು ಪ್ರಮುಖರಾದ ಜನರು ಆ ಆಜ್ಞೆಗನುಸಾರವಾಗಿ ಮಾಡಿದರು. 12 ನಾಯಕರು ಒಂದು ದಿನವನ್ನು ಉಪವಾಸದ ದಿನವಾಗಿ ಪ್ರಕಟಿಸಿದರು. ಆ ದಿನ ಅವರು ಜನರನ್ನೆಲ್ಲ ಸಭೆಸೇರಿಸಿದರು. ನಾಬೋತನನ್ನು ಜನರೆದುರಿಗೆ ಪ್ರಮುಖವಾದ ಒಂದು ಸ್ಥಳದಲ್ಲಿ ಅವರು ಕುಳ್ಳಿರಿಸಿದರು. 13 ನಾಬೋತನು ದೇವರ ವಿರುದ್ಧವಾಗಿಯೂ ರಾಜನ ವಿರುದ್ಧವಾಗಿಯೂ ಮಾತನಾಡಿದ್ದನ್ನು ತಾವು ಕೇಳಿರುವುದಾಗಿ ಇಬ್ಬರು ಅಲ್ಲಿನ ಜನರಿಗೆ ಹೇಳಿದರು. ಜನರು ನಾಬೋತನನ್ನು ನಗರದ ಹೊರಕ್ಕೆ ಕರೆದೊಯ್ದು ಅವನನ್ನು ಕಲ್ಲೆಸೆದು ಕೊಂದರು. 14 ನಾಯಕರು ಈಜೆಬೆಲಳಿಗೆ ಒಂದು ಸಂದೇಶವನ್ನು ಕಳುಹಿಸಿದರು. ಆ ಸಂದೇಶವು ಹೀಗಿತ್ತು: “ನಾಬೋತನನ್ನು ಕೊಂದುಹಾಕಲಾಗಿದೆ.”

15 ಇದನ್ನು ಕೇಳಿದ ಈಜೆಬೆಲಳು ಅಹಾಬನಿಗೆ, “ನಾಬೋತನು ಸತ್ತುಹೋದನು. ಈಗ ನೀನು ಹೋಗಿ, ನಿನಗೆ ಇಷ್ಟವಾದ ಆ ದ್ರಾಕ್ಷಿತೋಟವನ್ನು ತೆಗೆದುಕೊ” ಎಂದು ಹೇಳಿದಳು. 16 ಅಹಾಬನು ದ್ರಾಕ್ಷಿತೋಟಕ್ಕೆ ಹೋಗಿ ಅದನ್ನು ತನ್ನದನ್ನಾಗಿಸಿಕೊಂಡನು.

1 ಥೆಸಲೋನಿಕದವರಿಗೆ 4:9-12

ಕ್ರಿಸ್ತನಲ್ಲಿ ಸಹೋದರ ಸಹೋದರಿಯರನ್ನು ಹೇಗೆ ಪ್ರೀತಿಸಬೇಕೆಂಬುದರ ಬಗ್ಗೆ ನಾವು ನಿಮಗೆ ಬರೆಯುವ ಅವಶ್ಯಕತೆಯಿಲ್ಲ. ಒಬ್ಬರನ್ನೊಬ್ಬರು ಹೇಗೆ ಪ್ರೀತಿಸಬೇಕೆಂಬುದನ್ನು ಈಗಾಗಲೇ ದೇವರು ನಿಮಗೆ ಕಲಿಸಿದ್ದಾನೆ. 10 ಮಕೆದೋನಿಯದಲ್ಲಿರುವ ಸಹೋದರ ಸಹೋದರಿಯರನ್ನೆಲ್ಲ ನೀವು ನಿಜವಾಗಿಯೂ ಪ್ರೀತಿಸುತ್ತಿದ್ದೀರಿ. ಅವರನ್ನು ಇನ್ನೂ ಹೆಚ್ಚೆಚ್ಚಾಗಿ ನೀವು ಪ್ರೀತಿಸಬೇಕೆಂದು ನಾವು ನಿಮ್ಮನ್ನು ಪ್ರೋತ್ಸಾಹಿಸುತ್ತೇವೆ.

11 ಶಾಂತಿಯಿಂದ ಜೀವಿಸಲು ನಿಮ್ಮಿಂದಾದಷ್ಟು ಪ್ರಯತ್ನಿಸಿರಿ. ನಿಮ್ಮ ಸ್ವಂತ ವ್ಯವಹಾರದ ಮೇಲ್ವಿಚಾರಣೆಯನ್ನು ನೋಡಿಕೊಳ್ಳಿ. ನಿಮ್ಮ ಕೈಯಾರೆ ಕೆಲಸ ಮಾಡಬೇಕೆಂದು ನಾವು ಈಗಾಗಲೇ ನಿಮಗೆ ಹೇಳಿದ್ದೇವೆ. 12 ನೀವು ಹೀಗೆ ಮಾಡಿದರೆ, ವಿಶ್ವಾಸಿಗಳಲ್ಲದವರು ನಿಮ್ಮ ಜೀವತದ ರೀತಿಯನ್ನು ಕಂಡು ನಿಮ್ಮನ್ನು ಗೌರವಿಸುತ್ತಾರೆ. ಅಲ್ಲದೆ ನಿಮ್ಮ ಅಗತ್ಯತೆಗಳ ಪೂರೈಕೆಗಾಗಿ ನೀವು ಬೇರೆಯವರನ್ನು ಅವಲಂಬಿಸಿಕೊಳ್ಳುವ ಅವಶ್ಯಕತೆಯೂ ಇರುವುದಿಲ್ಲ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International