Revised Common Lectionary (Complementary)
ಯೆರೆಮೀಯನ ಐದನೆ ದೂರು
7 ಯೆಹೋವನೇ, ನೀನು ನನ್ನನ್ನು ಮರುಳುಗೊಳಿಸಿದೆ, ನಿಜವಾಗಿಯೂ ನಾನು ಮರುಳಾದೆನು,
ನೀನು ನನಗಿಂತ ಬಲಿಷ್ಠನಾದುದರಿಂದ ಗೆದ್ದೆ.
ನಾನೊಂದು ತಮಾಷೆಯಾಗಿದ್ದೇನೆ.
ಹಗಲೆಲ್ಲ ಜನರು ನನ್ನನ್ನು ಕಂಡು ನಗುತ್ತಾರೆ.
ನನ್ನನ್ನು ಗೇಲಿ ಮಾಡುತ್ತಾರೆ.
8 ನಾನು ಮಾತನಾಡಿದಾಗಲೆಲ್ಲ ಕೂಗಿಕೂಗಿ ಹೇಳುತ್ತೇನೆ.
ನಾನು ಯಾವಾಗಲೂ ಹಿಂಸೆ ಮತ್ತು ವಿನಾಶದ ಬಗ್ಗೆ ಕೂಗಿಕೊಳ್ಳುತ್ತೇನೆ.
ಯೆಹೋವನಿಂದ ಬಂದ ಸಂದೇಶದ ಬಗ್ಗೆ ಜನರಿಗೆ ಹೇಳುತ್ತೇನೆ.
ಆದರೆ ಜನರು ಯಾವಾಗಲೂ ನನಗೆ ಅವಮಾನ ಮಾಡುತ್ತಾರೆ.
ನನ್ನನ್ನು ಗೇಲಿ ಮಾಡುತ್ತಾರೆ.
9 ಒಮ್ಮೊಮ್ಮೆ ನನ್ನಷ್ಟಕ್ಕೆ ನಾನೇ ಹೇಳಿಕೊಳ್ಳುತ್ತೇನೆ,
“ನಾನು ಯೆಹೋವನನ್ನೇ ಮರೆತುಬಿಡುತ್ತೇನೆ.
ಆತನ ಹೆಸರಿನಲ್ಲಿ ಇನ್ನೇನೂ ಮಾತನಾಡುವುದಿಲ್ಲ”
ಎಂದುಕೊಂಡರೆ ಆತನ ಸಂದೇಶವು ನನ್ನ ಅಂತರಾಳದಲ್ಲಿ ಉರಿಯುವ ಜ್ವಾಲೆಯಂತಾಗುತ್ತದೆ.
ಅದು ಆಳಕ್ಕೆ ಇಳಿದು ನನ್ನ ಎಲುಬುಗಳನ್ನು ಸುಡುವಂತಾಗುತ್ತದೆ.
ಯೆಹೋವನ ಸಂದೇಶವನ್ನು ನನ್ನ ಅಂತರಾಳದಲ್ಲಿ ಹಿಡಿದಿಟ್ಟುಕೊಳ್ಳಲು ಪ್ರಯತ್ನ ಮಾಡಿ ನಾನು ದಣಿಯುತ್ತೇನೆ.
ಕೊನೆಗೆ ಅದನ್ನು ನನ್ನೊಳಗೆ ಇಟ್ಟುಕೊಳ್ಳಲು ಅಸಾಧ್ಯವಾಗುತ್ತದೆ.
10 ಅನೇಕ ಜನರು ನನ್ನ ವಿರುದ್ಧವಾಗಿ ಮೆಲುಧ್ವನಿಯಲ್ಲಿ ಮಾತನಾಡುವದು ನನ್ನ ಕಿವಿಗೆ ಬೀಳುತ್ತಿದೆ,
ಅದು ನನ್ನನ್ನು ಭಯಗೊಳಿಸುತ್ತಿದೆ.
ನನ್ನ ಸ್ನೇಹಿತರು ಸಹ ನನ್ನ ವಿರುದ್ಧ ಮಾತನಾಡುತ್ತಿದ್ದಾರೆ.
ನಾನು ಯಾವುದಾದರೂ ತಪ್ಪನ್ನು ಮಾಡಲಿ ಎಂದು ಜನರು ಹೊಂಚುಹಾಕಿ ಕಾದಿದ್ದಾರೆ.
“ಅವನು ದುಷ್ಕೃತ್ಯವನ್ನು ಮಾಡಿದ್ದಾನೆಂದು ನಾವು ಸುಳ್ಳು ಹೇಳೋಣ.
ಯೆರೆಮೀಯನನ್ನು ನಾವು ವಂಚಿಸಲು ಸಾಧ್ಯವಾಗಬಹುದು.
ನಾವು ಅವನನ್ನು ಹಿಡಿದುಕೊಳ್ಳಬಹುದು.
ಕೊನೆಗೆ ಅವನನ್ನು ತೊಲಗಿಸಬಹುದು.
ನಾವು ಅವನನ್ನು ಹಿಡಿದು ಅವನ ಮೇಲೆ ನಮ್ಮ ಸೇಡನ್ನು ತೀರಿಸಿಕೊಳ್ಳೋಣ” ಎಂದು ಮಾತನಾಡುತ್ತಿದ್ದಾರೆ.
11 ಆದರೆ ಯೆಹೋವನು ನನ್ನೊಡನಿದ್ದಾನೆ.
ಯೆಹೋವನು ಒಬ್ಬ ಶೂರ ಯೋಧನಂತಿದ್ದಾನೆ.
ಆದ್ದರಿಂದ ನನ್ನನ್ನು ಬೆನ್ನಟ್ಟಿಕೊಂಡು ಬರುತ್ತಿದ್ದ ಜನರು ಬೀಳುತ್ತಾರೆ.
ಅವರು ನನ್ನನ್ನು ಸೋಲಿಸಲಾರರು.
ಆ ಜನರು ಸೋತುಹೋಗುತ್ತಾರೆ.
ಅವರಿಗೆ ಆಶಾಭಂಗವಾಗುತ್ತದೆ.
ಅವರಿಗೆ ನಾಚಿಕೆಯಾಗುತ್ತದೆ.
ಅವರು ಆ ನಾಚಿಕೆಯನ್ನು ಎಂದೂ ಮರೆಯಲಾರರು.
12 ಸರ್ವಶಕ್ತನಾದ ಯೆಹೋವನೇ, ನೀನು ಒಳ್ಳೆಯವರನ್ನು ಪರೀಕ್ಷಿಸುವೆ.
ನೀನು ಒಬ್ಬ ವ್ಯಕ್ತಿಯ ಹೃದಯವನ್ನು ಮತ್ತು ಬುದ್ಧಿಯನ್ನು ಆಳವಾಗಿ ಪರೀಕ್ಷಿಸಿನೋಡುವೆ.
ನಾನು ಅವರ ವಿರುದ್ಧ ನನ್ನ ಅಭಿಪ್ರಾಯಗಳನ್ನು ನಿನಗೆ ತಿಳಿಸಿದ್ದೇನೆ.
ನೀನು ಅವರಿಗೆ ತಕ್ಕ ಶಿಕ್ಷೆಯನ್ನು ವಿಧಿಸಿರುವದನ್ನು ನನ್ನ ಕಣ್ಣುಗಳು ನೋಡಲಿ.
13 ಯೆಹೋವನನ್ನು ಕೀರ್ತಿಸಿರಿ, ಯೆಹೋವನನ್ನು ಸ್ತುತಿಸಿರಿ.
ಆತನು ಬಡಜನರ ಪ್ರಾಣಗಳನ್ನು ಉಳಿಸುತ್ತಾನೆ.
ಆತನು ಅವರನ್ನು ದುಷ್ಟರ ದೌರ್ಜನ್ಯದಿಂದ ರಕ್ಷಿಸುತ್ತಾನೆ.
7 ನಾಚಿಕೆಯು ನನ್ನ ಮುಖವನ್ನು ಕವಿದಿದೆ.
ನಿನಗೋಸ್ಕರವಾಗಿ ಈ ನಾಚಿಕೆಯನ್ನು ಹೊತ್ತುಕೊಂಡಿದ್ದೇನೆ.
8 ನನ್ನ ಸಹೋದರರು ನನ್ನನ್ನು ಅಪರಿಚಿತನಂತೆ ಕಾಣುತ್ತಾರೆ.
ನನ್ನ ತಾಯಿಯ ಪುತ್ರರು ನನ್ನನ್ನು ಪರಕೀಯನಂತೆ ಕಾಣುತ್ತಾರೆ.
9 ನಿನ್ನ ಆಲಯಾಭಿಮಾನವು ನನ್ನನ್ನು ಬೆಂಕಿಯಂತೆ ದಹಿಸುತ್ತಿದೆ.
ನಿನ್ನನ್ನು ಗೇಲಿಮಾಡುವ ಜನರಿಂದ ನನಗೆ ಅಪಮಾನವಾಗುತ್ತಿದೆ.
10 ನಾನು ಅಳುತ್ತಾ ಉಪವಾಸಮಾಡುವೆನು.
ಅವರು ಅದಕ್ಕೂ ನನ್ನನ್ನು ಗೇಲಿಮಾಡುವರು.
11 ನಾನು ಶೋಕವಸ್ತ್ರವನ್ನು ಧರಿಸಿಕೊಂಡದ್ದು
ಗಾದೆಯ ಮಾತಾಯಿತು.
12 ಅವರು ನನ್ನ ಬಗ್ಗೆ ಬಹಿರಂಗ ಸ್ಥಳಗಳಲ್ಲಿ ಮಾತಾಡುವರು.
ಕುಡುಕರು ನನ್ನ ವಿಷಯದಲ್ಲಿ ಹಾಡನ್ನು ರಚಿಸುವರು.
13 ಯೆಹೋವನೇ, ನಾನಾದರೋ, ನಿನಗೆ ಮೊರೆಯಿಟ್ಟಿದ್ದೇನೆ;
ನಿನ್ನ ಕೃಪೆಗೆ ತಕ್ಕಕಾಲ ಇದೇ.
ದೇವರೇ, ನಿನ್ನ ಮಹಾಪ್ರೀತಿಯಿಂದಲೂ
ನಿಶ್ಚಿತವಾದ ರಕ್ಷಣೆಯಿಂದಲೂ ನನಗೆ ಉತ್ತರಿಸು.
14 ನನ್ನನ್ನು ಕಳ್ಳುಸುಬಿನಿಂದ ಮೇಲೆತ್ತು;
ಮುಳುಗಿಹೋಗಲು ಬಿಡಬೇಡ.
ನನ್ನನ್ನು ದ್ವೇಷಿಸುವ ಜನರಿಂದ ನನ್ನನ್ನು ರಕ್ಷಿಸು.
ಈ ಆಳವಾದ ನೀರಿನಿಂದ ನನ್ನನ್ನು ರಕ್ಷಿಸು.
15 ಅಲೆಗಳು ನನ್ನನ್ನು ಮುಳುಗಿಸಲು ಬಿಡಬೇಡ.
ಆಳವಾದ ಹಳ್ಳವು ನನ್ನನ್ನು ಎಳೆದುಕೊಳ್ಳಲು ಬಿಡಬೇಡ.
ಸಮಾಧಿಯು ನನ್ನನ್ನು ನುಂಗಲು ಬಿಡಬೇಡ.
16 ಯೆಹೋವನೇ, ನಿನ್ನ ಪ್ರೀತಿ ಎಷ್ಟೋ ಒಳ್ಳೆಯದು.
ನಿನ್ನ ಪೂರ್ಣಪ್ರೀತಿಯಿಂದ ನನಗೆ ಉತ್ತರಿಸು.
ನಿನ್ನ ಪೂರ್ಣ ಕರುಣೆಯಿಂದ ನನ್ನ ಕಡೆಗೆ ತಿರುಗಿ ಸಹಾಯಮಾಡು.
17 ನಿನ್ನ ಸೇವಕನಿಗೆ ವಿಮುಖನಾಗಬೇಡ.
ನಾನು ಆಪತ್ತಿನಲ್ಲಿದ್ದೇನೆ! ಬೇಗನೆ ನನಗೆ ಸಹಾಯಮಾಡು!
18 ಬಂದು ನನ್ನ ಪ್ರಾಣವನ್ನು ರಕ್ಷಿಸು.
ನನ್ನ ಶತ್ರುಗಳಿಂದ ನನ್ನನ್ನು ವಿಮೋಚಿಸು.
ಪಾಪದ ಪಾಲಿಗೆ ಸತ್ತವರು, ಆದರೆ ಕ್ರಿಸ್ತನಲ್ಲಿ ಜೀವಂತರು
6 ಹಾಗಾದರೆ ನಿಮ್ಮ ಅಭಿಪ್ರಾಯವೇನು? ದೇವರು ನಮಗೆ ಹೆಚ್ಚುಹೆಚ್ಚು ಕೃಪೆಯನ್ನು ತೋರಿಸಲೆಂದು ನಾವು ಪಾಪದಲ್ಲೇ ಮುಂದುವರಿಯಬೇಕೇ? 2 ಇಲ್ಲ! ನಾವು ನಮ್ಮ ಹಿಂದಿನ ಪಾಪಮಯ ಜೀವಿತಗಳ ಪಾಲಿಗೆ ಸತ್ತುಹೋದೆವು. ಹೀಗಿರಲು, ನಾವು ಪಾಪದಲ್ಲೇ ಜೀವಿಸಲು ಹೇಗೆ ಸಾಧ್ಯ? 3 ನಾವು ದೀಕ್ಷಾಸ್ನಾನ ಮಾಡಿಸಿಕೊಂಡಾಗ ಕ್ರಿಸ್ತನಲ್ಲಿ ಪಾಲುಗಾರರಾದೆವು ಎಂಬುದನ್ನು ನೀವು ಮರೆತುಬಿಟ್ಟಿರಾ? ನಮ್ಮ ದೀಕ್ಷಾಸ್ನಾನದ ಮೂಲಕ ನಾವು ಆತನ ಮರಣದಲ್ಲಿ ಪಾಲುಗಾರರಾದೆವು. 4 ಹೀಗಿರಲಾಗಿ, ನಾವು ದೀಕ್ಷಾಸ್ನಾನ ಮಾಡಿಸಿಕೊಂಡಾಗ, ನಮಗೆ ಕ್ರಿಸ್ತನೊಂದಿಗೆ ಸಮಾಧಿಯಾಯಿತು ಮತ್ತು ನಾವು ಆತನ ಮರಣದಲ್ಲಿ ಪಾಲುಗಾರರಾದೆವು. ನಾವು ಜೀವಂತವಾಗಿ ಎದ್ದು ಹೊಸ ಜೀವಿತವನ್ನು ನಡೆಸಬೇಕೆಂದು ನಮಗೆ ಕ್ರಿಸ್ತನೊಂದಿಗೆ ಸಮಾಧಿಯಾಯಿತು. ಕ್ರಿಸ್ತನು ತಂದೆಯ ಅದ್ಭುತವಾದ ಶಕ್ತಿಯ ಮೂಲಕ ಸತ್ತವರೊಳಗಿಂದ ಜೀವಂತವಾಗಿ ಎದ್ದುಬಂದಂತೆಯೇ ನಾವು ಜೀವಂತವಾಗಿ ಎದ್ದುಬಂದೆವು.
5 ಕ್ರಿಸ್ತನ ಮರಣಕ್ಕೆ ಸದೃಶ್ಯವಾದ ಮರಣದ ಮೂಲಕ ನಾವು ಸಹ ಆತನೊಂದಿಗೆ ಐಕ್ಯರಾದೆವು. ಆದ್ದರಿಂದ ಕ್ರಿಸ್ತನು ಸತ್ತವರೊಳಗಿಂದ ಜೀವಂತವಾಗಿ ಎದ್ದುಬಂದಂತೆಯೇ ನಾವು ಸಹ ಜೀವಂತವಾಗಿ ಎದ್ದುಬರುವುದರ ಮೂಲಕವಾಗಿ ಆತನೊಂದಿಗೆ ಐಕ್ಯರಾಗುವೆವು. 6 ನಮ್ಮ ಹಳೆಯ ಜೀವಿತವು ಕ್ರಿಸ್ತನೊಂದಿಗೆ ಶಿಲುಬೆಯ ಮೇಲೆ ಸತ್ತುಹೋಯಿತೆಂಬುದು ನಮಗೆ ಗೊತ್ತಿದೆ. ನಮ್ಮ ಪಾಪಸ್ವಭಾವಕ್ಕೆ ನಮ್ಮ ಮೇಲೆ ಯಾವ ಅಧಿಕಾರ ಇರಬಾರದೆಂತಲೂ ನಾವು ಪಾಪಕ್ಕೆ ಗುಲಾಮರಾಗಿರಬಾರದೆಂತಲೂ ಹೀಗಾಯಿತು. 7 ಪಾಪದ ಪಾಲಿಗೆ ಸತ್ತವನು ಪಾಪದ ಹಿಡಿತದಿಂದ ಬಿಡುಗಡೆ ಹೊಂದಿದ್ದಾನೆ.
8 ನಾವು ಕ್ರಿಸ್ತನೊಂದಿಗೆ ಸತ್ತಿದ್ದರೆ, ಆತನೊಂದಿಗೆ ಜೀವಿಸುತ್ತೇವೆ ಎಂಬುದೂ ನಿಶ್ಚಯವಾಗಿದೆ. 9 ಕ್ರಿಸ್ತನು ಸತ್ತವರೊಳಗಿಂದ ಜೀವಂತನಾಗಿ ಎದ್ದುಬಂದನು. ಆತನು ಮತ್ತೆ ಸಾಯಲು ಸಾಧ್ಯವಿಲ್ಲವೆಂಬುದು ನಮಗೆ ತಿಳಿದಿದೆ. ಈಗ ಮರಣಕ್ಕೆ ಆತನ ಮೇಲೆ ಯಾವ ಅಧಿಕಾರವೂ ಇಲ್ಲ. 10 ಹೌದು, ಕ್ರಿಸ್ತನು ಪಾಪದ ಶಕ್ತಿಯನ್ನು ಸೋಲಿಸುವುದಕ್ಕಾಗಿ ಒಂದೇ ಸಲ ಸತ್ತನು; ಅದು ಎಲ್ಲಾ ಕಾಲಕ್ಕೂ ಸಾಕಾಗಿದೆ. ಈಗ ಆತನಲ್ಲಿ ಹೊಸ ಜೀವಿತವಿದೆ. ದೇವರೊಂದಿಗೆ ಜೀವಿಸುವುದೇ ಆ ಹೊಸ ಜೀವಿತ. 11 ಅದೇ ರೀತಿಯಲ್ಲಿ ನೀವು ಸಹ ನಿಮ್ಮನ್ನು ಪಾಪದ ಶಕ್ತಿಯ ಪಾಲಿಗೆ ಸತ್ತವರೆಂದು ಮತ್ತು ಕ್ರಿಸ್ತ ಯೇಸುವಿನ ಮೂಲಕ ದೇವರಿಗಾಗಿ ಜೀವಿಸುವವರೆಂದು ಪರಿಗಣಿಸಿರಿ.
24 “ಶಿಷ್ಯನು ಗುರುವಿಗಿಂತ ಉತ್ತಮನಲ್ಲ. ಆಳು ತನ್ನ ದಣಿಗಿಂತ ಉತ್ತಮನಲ್ಲ. 25 ಶಿಷ್ಯನು ತನ್ನ ಗುರುವಿನಂತಾದರೆ ಸಾಕು. ಆಳು ತನ್ನ ದಣಿಯಂತಾದರೆ ಸಾಕು. ಕುಟುಂಬದ ಹಿರಿಯನನ್ನೇ ಬೆಲ್ಜೆಬೂಲ (ದೆವ್ವ) ಎಂದು ಕರೆದರೆ, ಆ ಕುಟುಂಬದ ಇತರರನ್ನು ಮತ್ತಷ್ಟು ಕೆಟ್ಟ ಹೆಸರಿನಿಂದ ಕರೆಯುವುದಿಲ್ಲವೇ?
ಭಯಪಡಬೇಕಾದದ್ದು ದೇವರಿಗೆ, ಮನುಷ್ಯರಿಗಲ್ಲ
(ಲೂಕ 12:2-7)
26 “ಆದಕಾರಣ ಆ ಜನರಿಗೆ ಹೆದರಬೇಡಿ. ಮರೆಯಾಗಿರುವ ಪ್ರತಿಯೊಂದೂ ಬಹಿರಂಗವಾಗುವುದು. ಗುಪ್ತವಾಗಿರುವ ಪ್ರತಿ ಸಂಗತಿಯು ಬಯಲಾಗುವುದು. 27 ನಾನು ಕತ್ತಲೆಯಲ್ಲಿ (ರಹಸ್ಯವಾಗಿ) ಈ ಸಂಗತಿಗಳನ್ನು ನಿಮಗೆ ಹೇಳುತ್ತಿದ್ದೇನೆ. ಆದರೆ ನೀವು ಈ ಸಂಗತಿಗಳನ್ನು ಬೆಳಕಿನಲ್ಲಿ ಹೇಳಬೇಕೆಂಬುದು ನನ್ನ ಇಷ್ಟ. ನಾನು ಈ ವಿಷಯಗಳನ್ನು ನಿಮಗೆ ಮೆಲ್ಲಗೆ ಹೇಳುತ್ತಿದ್ದೇನೆ. ಆದರೆ ನೀವು ಈ ವಿಷಯಗಳನ್ನು ಜನರಿಗೆಲ್ಲ ಗಟ್ಟಿಯಾಗಿ ಹೇಳಿರಿ.
28 “ಜನರಿಗೆ ಹೆದರಬೇಡಿ. ಅವರು ಶರೀರವನ್ನು ಮಾತ್ರ ಕೊಲ್ಲಬಹುದು. ಆತ್ಮವನ್ನು ಅವರು ಕೊಲ್ಲಲಾರರು. ಶರೀರವನ್ನೂ ಆತ್ಮವನ್ನೂ ನರಕಕ್ಕೆ ಹಾಕಬಲ್ಲ ದೇವರಿಗೆ ಭಯಪಡಿರಿ. 29 ಮಾರುಕಟ್ಟೆಯಲ್ಲಿ ಎರಡು ಗುಬ್ಬಚ್ಚಿಗಳನ್ನು ಒಂದು ನಾಣ್ಯಕ್ಕೆ[a] ಮಾರುತ್ತಾರೆ. ಆದರೆ ನಿಮ್ಮ ತಂದೆಯು ಅಪ್ಪಣೆ ಕೊಡದ ಹೊರತು ಅವುಗಳಲ್ಲಿ ಒಂದಾದರೂ ಸಾಯುವುದಿಲ್ಲ. 30 ನಿಮ್ಮ ತಲೆಯಲ್ಲಿ ಎಷ್ಟು ಕೂದಲುಗಳು ಇವೆ ಎಂಬುದು ಸಹ ದೇವರಿಗೆ ತಿಳಿದಿದೆ. 31 ಆದಕಾರಣ ಹೆದರಬೇಡಿ. ನೀವು ಅನೇಕ ಗುಬ್ಬಚ್ಚಿಗಳಿಗಿಂತಲೂ ಹೆಚ್ಚು ಬೆಲೆಯುಳ್ಳವರಾಗಿದ್ದೀರಿ.
ನಿಮ್ಮ ನಂಬಿಕೆಯ ಕುರಿತು ಬಹಿರಂಗ ಸಾಕ್ಷಿ
(ಲೂಕ 12:8-9)
32 “ಒಬ್ಬನು ಬೇರೆಯವರ ಮುಂದೆ, ತಾನು ನನ್ನವನೆಂದು ಹೇಳಿದರೆ, ನಾನು ಸಹ ಪರಲೋಕದಲ್ಲಿ ನನ್ನ ತಂದೆಯ ಮುಂದೆ ಅವನನ್ನು ನನ್ನವನೆಂದು ಹೇಳುತ್ತೇನೆ. 33 ಆದರೆ ಒಬ್ಬನು ಜನರ ಮುಂದೆ, ತಾನು ನನ್ನವನಲ್ಲವೆಂದು ಹೇಳಿದರೆ, ನಾನು ಸಹ ಪರಲೋಕದಲ್ಲಿ ನನ್ನ ತಂದೆಯ ಮುಂದೆ ಅವನು ನನ್ನವನಲ್ಲವೆಂದು ಹೇಳುತ್ತೇನೆ.
ಯೇಸುವನ್ನು ಹಿಂಬಾಲಿಸುವವರಿಗೆ ಬರುವ ತೊಂದರೆಗಳು
(ಲೂಕ 12:51-53; 14:26-27)
34 “ಭೂಲೋಕದಲ್ಲಿ ಶಾಂತಿಯನ್ನು ಉಂಟುಮಾಡಲು ನಾನು ಬಂದಿದ್ದೇನೆಂದು ಯೋಚಿಸಬೇಡಿ. ನಾನು ಶಾಂತಿಯನ್ನು ಉಂಟುಮಾಡಲು ಬರಲಿಲ್ಲ, ಖಡ್ಗ ಹಾಕಲು ಬಂದಿದ್ದೇನೆ. 35-36 ಈ ಪ್ರವಾದನೆ ನೆರವೇರುವಂತೆ ಮಾಡಲು ನಾನು ಬಂದಿದ್ದೇನೆ:
‘ಒಬ್ಬನಿಗೆ ಅವನ ಮನೆಯವರೇ ವೈರಿಗಳಾಗುವರು.
ಮಗನು ತಂದೆಗೆ,
ಮಗಳು ತಾಯಿಗೆ,
ಸೊಸೆಯು ಅತ್ತೆಗೆ ವೈರಿಗಳಾಗುವರು.’(A)
37 “ಯಾರಾದರೂ ನನ್ನನ್ನು ಪ್ರೀತಿಸುವುದಕ್ಕಿಂತ ಹೆಚ್ಚಾಗಿ ತನ್ನ ತಂದೆ ಅಥವಾ ತಾಯಿಯನ್ನು ಪ್ರೀತಿಸಿದರೆ, ಅವನು ನನ್ನ ಹಿಂಬಾಲಕನಾಗಲು ಯೋಗ್ಯನಲ್ಲ. ಯಾವನಾದರೂ ನನ್ನನ್ನು ಪ್ರೀತಿಸುವುದಕ್ಕಿಂತ ಹೆಚ್ಚಾಗಿ ತನ್ನ ಮಗನನ್ನು ಇಲ್ಲವೆ ಮಗಳನ್ನು ಪ್ರೀತಿಸಿದರೆ, ಅವನು ನನ್ನ ಹಿಂಬಾಲಕನಾಗಲು ಯೋಗ್ಯನಲ್ಲ. 38 ಯಾವನಾದರೂ ನನ್ನನ್ನು ಹಿಂಬಾಲಿಸುವಾಗ ಅವನಿಗೆ ಕೊಡುವಂಥ ಶಿಲುಬೆಯನ್ನು (ಸಂಕಟವನ್ನು) ಅಂಗೀಕರಿಸದಿದ್ದರೆ, ಅವನು ನನ್ನ ಹಿಂಬಾಲಕನಾಗಲು ಯೋಗ್ಯನಲ್ಲ. 39 ನನ್ನನ್ನು ಪ್ರೀತಿಸುವುದಕ್ಕಿಂತ ಹೆಚ್ಚಾಗಿ ತನ್ನ ಪ್ರಾಣವನ್ನು ಪ್ರೀತಿಸುವವನು ಅದನ್ನು ಕಳೆದುಕೊಳ್ಳುತ್ತಾನೆ. ನನಗಾಗಿ ತನ್ನ ಪ್ರಾಣವನ್ನು ಕಳೆದುಕೊಳ್ಳುವವನು ಅದನ್ನು ಪಡೆದುಕೊಳ್ಳುವನು.
Kannada Holy Bible: Easy-to-Read Version. All rights reserved. © 1997 Bible League International