Revised Common Lectionary (Complementary)
ರಚನೆಗಾರ: ದಾವೀದ.
40 ನಾನು ಯೆಹೋವನಿಗೋಸ್ಕರ ತಾಳ್ಮೆಯಿಂದ ನಿರೀಕ್ಷಿಸಿದೆನು;
ಆತನು ನನ್ನ ಮೊರೆಗೆ ಕಿವಿಗೊಟ್ಟು ಕೇಳಿದನು.
2 ಆತನು ನನ್ನನ್ನು ನಾಶನದ ಗುಂಡಿಯೊಳಗಿಂದ[a] ಎತ್ತಿದನು.
ಆತನು ನನ್ನನ್ನು ಕೆಸರಿನ ಸ್ಥಳದಿಂದ[b]
ಮೇಲೆತ್ತಿ ಬಂಡೆಯ ಮೇಲಿರಿಸಿದನು;
ದೃಢವಾಗಿ ಹೆಜ್ಜೆಯಿಡುವಂತೆ ಮಾಡಿದನು.
3 ಆತನು ನನ್ನ ಬಾಯಲ್ಲಿ ಹೊಸ ಕೀರ್ತನೆಯನ್ನು ಹುಟ್ಟಿಸಿದ್ದಾನೆ.
ಅದು ನನ್ನ ದೇವರ ಸ್ತುತಿಗೀತೆ.
ನನಗೆ ಸಂಭವಿಸಿದವುಗಳನ್ನು ಅನೇಕರು ನೋಡಿ
ಯೆಹೋವನಲ್ಲಿ ಭರವಸವಿಟ್ಟು ಆತನನ್ನು ಆರಾಧಿಸುವರು.
4 ಯಾವನು ಯೆಹೋವನಲ್ಲಿ ಭರವಸವಿಟ್ಟಿದ್ದಾನೋ ಅವನೇ ಧನ್ಯನು.
ಸಹಾಯಕ್ಕಾಗಿ ವಿಗ್ರಹಗಳ ಕಡೆಗೂ ಸುಳ್ಳುದೇವರುಗಳ ಕಡೆಗೂ ತಿರುಗಿಕೊಳ್ಳದವನೇ ಭಾಗ್ಯವಂತನು.
5 ಯೆಹೋವನೇ, ನನ್ನ ದೇವರೇ, ನೀನು ಅನೇಕ ಮಹತ್ಕಾರ್ಯಗಳನ್ನು ಮಾಡಿರುವೆ!
ನನ್ನ ವಿಷಯದಲ್ಲಿ ನಿನಗೆ ಅತಿಶಯವಾದ ಆಲೋಚನೆಗಳಿವೆ.
ಅವುಗಳನ್ನು ವಿವರಿಸಿ ಹೇಳಲು ಸಾಧ್ಯವಿಲ್ಲ;
ಅವು ಅಸಂಖ್ಯಾತವಾಗಿವೆ.
6 ನಾನು ಗ್ರಹಿಸಿಕೊಂಡಿದ್ದೇನೆಂದರೆ,
ಯಜ್ಞಗಳಾಗಲಿ ಧಾನ್ಯಸಮರ್ಪಣೆಗಳಾಗಲಿ
ಸರ್ವಾಂಗಹೋಮಗಳಾಗಲಿ ಪಾಪಪರಿಹಾರಕ ಯಜ್ಞಗಳಾಗಲಿ ನಿನಗೆ ಬೇಕಿಲ್ಲ.
7 ಆದ್ದರಿಂದ ನಾನು, “ಇಗೋ, ಬರುತ್ತಿದ್ದೇನೆ.
ನನ್ನ ವಿಷಯವಾಗಿ ಗ್ರಂಥದಲ್ಲಿ ಇದನ್ನು ಬರೆಯಲಾಗಿದೆ.
8 ನನ್ನ ದೇವರೇ, ನಿನ್ನ ಚಿತ್ತಾನುಸಾರವಾಗಿ ಮಾಡುತ್ತೇನೆ.
ನಿನ್ನ ಉಪದೇಶಗಳನ್ನು ಹೃದಯದಲ್ಲಿಟ್ಟುಕೊಂಡಿದ್ದೇನೆ” ಅಂದೆನು.
ಇಸ್ರೇಲು ಯೆಹೋವನನ್ನು ಮರೆತು ವಿಗ್ರಹಗಳನ್ನು ಪೂಜಿಸಿದ್ದು
11 “ಎಫ್ರಾಯೀಮ್ ಹೆಚ್ಚೆಚ್ಚಾಗಿ ಯಜ್ಞವೇದಿಕೆಗಳನ್ನು ಕಟ್ಟಿಸಿದನು.
ಅದು ಪಾಪವಾಗಿತ್ತು.
ಆ ವೇದಿಕೆಗಳ ಮೇಲೆಯೇ ಅವರು ಪಾಪಮಾಡಿದರು.
12 ಎಫ್ರಾಯೀಮನಿಗೆ ನಾನು ಸಾವಿರಾರು ವಿಧಿನಿಯಮಗಳನ್ನು ಬರೆದರೂ
ಅವನು ಅವುಗಳನ್ನು ಬೇರೆಯವರಿಗಾಗಿ ಬರೆದದೆ ಎಂದು ತಿಳಿದುಕೊಳ್ಳುವನು.
13 ಇಸ್ರೇಲರು ಯಜ್ಞವನ್ನು ಪ್ರೀತಿಸುತ್ತಾರೆ.
ಅವರು ಮಾಂಸವನ್ನು ಯಜ್ಞಮಾಡಿ ತಿನ್ನುತ್ತಾರೆ.
ಯೆಹೋವನು ಅವರ ಯಜ್ಞವನ್ನು ಸ್ವೀಕರಿಸುವುದಿಲ್ಲ.
ಅವರ ಪಾಪಗಳನ್ನು ತನ್ನ ನೆನಪಿಗೆ ತಂದು
ಅವರನ್ನು ಶಿಕ್ಷಿಸುವನು.
ಅವರು ಈಜಿಪ್ಟಿಗೆ ಸೆರೆಯಾಳುಗಳಾಗಿ ಒಯ್ಯಲ್ಪಡುವರು.
14 ಇಸ್ರೇಲರು ರಾಜರ ಅರಮನೆಗಳನ್ನು ಕಟ್ಟಿದರು.
ಆದರೆ ಅದರ ನಿರ್ಮಾಣಿಕನನ್ನು ಮರೆತರು.
ಯೆಹೂದವು ಕೋಟೆಗಳನ್ನು ಕಟ್ಟುತ್ತಾನೆ;
ಆದರೆ ಯೆಹೂದದ ಪಟ್ಟಣಗಳ ಮೇಲೆ ನಾನು ಬೆಂಕಿಯನ್ನು ಕಳುಹಿಸುವೆನು.
ಆ ಬೆಂಕಿಯು ಅರಮನೆಗಳನ್ನು ನಾಶಮಾಡುವದು.”
ಇಸ್ರೇಲರು ಧನಿಕರಾದುದರಿಂದ ವಿಗ್ರಹಾರಾಧನೆಗೆ ನಡಿಸಲ್ಪಟ್ಟರು
10 ಇಸ್ರೇಲ್ ಅಧಿಕ ಹಣ್ಣುಗಳನ್ನು
ಕೊಡುವ ದ್ರಾಕ್ಷಿಬಳ್ಳಿಯಂತಿದೆ.
ಆದರೆ ಇಸ್ರೇಲ್ ಅಭಿವೃದ್ಧಿ ಹೊಂದಿದ ಹಾಗೆ
ಅವರು ಸುಳ್ಳುದೇವರುಗಳನ್ನು ಪೂಜಿಸಲು ಹೆಚ್ಚುಹೆಚ್ಚು ವೇದಿಕೆಗಳನ್ನು ಕಟ್ಟಿದರು.
ಅವರ ದೇಶವು ಉತ್ತಮವಾಗುತ್ತಾ ಬರುತ್ತಿರುವಾಗ
ಅವರು ತಮ್ಮ ಸುಳ್ಳುದೇವರುಗಳಿಗೆ ಉತ್ತಮ ಕಲ್ಲುಗಳಿಂದ ವೇದಿಕೆಗಳನ್ನು ಕಟ್ಟಲು ಪ್ರಾರಂಭಿಸಿದರು.
2 ಇಸ್ರೇಲ್ ಜನರು ದೇವರನ್ನು ಮೋಸಪಡಿಸಲು ನೋಡಿದರು.
ಆದರೆ ಈಗ ಅವರು ತಮ್ಮ ತಪ್ಪನ್ನು ಒಪ್ಪಿಕೊಳ್ಳಬೇಕಾಗುತ್ತದೆ.
ಯೆಹೋವನು ಅವರು ಯಜ್ಞವೇದಿಕೆಗಳನ್ನು ನಾಶಮಾಡುವನು.
ಅವರ ಸ್ಮಾರಕಕಲ್ಲುಗಳನ್ನು ಆತನು ಪುಡಿ ಮಾಡುವನು.
ದೇವರಿಗೆ ಮೆಚ್ಚಿಕೆಯಾದ ಆರಾಧನೆ
13 ನೀವು ಕ್ರಿಸ್ತನಲ್ಲಿ ಸಹೋದರ ಸಹೋದರಿಯರಾಗಿರುವುದರಿಂದ ಒಬ್ಬರನ್ನೊಬ್ಬರು ಪ್ರೀತಿಸಿರಿ. 2 ಅತಿಥಿಸತ್ಕಾರ ಮಾಡಿರಿ. ಕೆಲವರು ತಿಳಿಯದೆ ದೇವದೂತರನ್ನೂ ಸತ್ಕರಿಸಿದ್ದಾರೆ. 3 ಸೆರೆಮನೆಯಲ್ಲಿರುವ ಜನರನ್ನು ಮರೆಯದಿರಿ. ನೀವೂ ಅವರ ಜೊತೆಯಲ್ಲಿ ಸೆರೆಮನೆಯಲ್ಲಿದ್ದೀರೋ ಎಂಬಂತೆ ನೆನಪುಮಾಡಿಕೊಳ್ಳಿ ಮತ್ತು ಸಂಕಟಕ್ಕೊಳಗಾಗಿರುವ ಜನರನ್ನು ಮರೆಯದಿರಿ. ನೀವೂ ಅವರ ಜೊತೆಯಲ್ಲಿ ಸಂಕಟಪಡುತ್ತಿರುವಿರೋ ಎಂಬಂತೆ ನೆನಪು ಮಾಡಿಕೊಳ್ಳಿ.
4 ಮದುವೆಯನ್ನು ಜನರೆಲ್ಲರೂ ಗೌರವಿಸಬೇಕು. ಗಂಡ ಹೆಂಡತಿಯರ ಸಂಬಂಧ ಪರಿಶುದ್ಧವಾಗಿರಬೇಕು. ಲೈಂಗಿಕ ಪಾಪಗಳನ್ನು ಮಾಡುವವರು ಮತ್ತು ವ್ಯಭಿಚಾರವನ್ನು ಮಾಡುವವರು ದೇವರ ತೀರ್ಪಿಗೆ ಒಳಗಾಗಿದ್ದಾರೆ. 5 ಹಣದ ಮೇಲೆ ನಿಮಗಿರುವ ವ್ಯಾಮೋಹವನ್ನು ದೂರತಳ್ಳಿರಿ. ನಿಮ್ಮಲ್ಲಿರುವ ವಸ್ತುಗಳಲ್ಲಿ ತೃಪ್ತಿಯಿಂದಿರಿ. ದೇವರು ಹೀಗೆ ಹೇಳಿದ್ದಾನೆ:
“ನಾನು ನಿಮ್ಮನ್ನು ಎಂದೆಂದಿಗೂ ಕೈಬಿಡುವುದಿಲ್ಲ.
ನಾನು ನಿಮ್ಮನ್ನು ಎಂದೆಂದಿಗೂ ತೊರೆದುಬಿಡುವುದಿಲ್ಲ.”(A)
6 ಆದ್ದರಿಂದ ನಾವು ಖಚಿತವಾಗಿ ಹೀಗೆ ಹೇಳಬಹುದು:
“ಪ್ರಭುವೇ ನನ್ನ ಸಹಾಯಕನು;
ನಾನು ಹೆದರುವುದಿಲ್ಲ.
ಜನರು ನನಗೆ ಏನೂ ಮಾಡಲಾರರು.”(B)
7 ನಿಮ್ಮ ಸಭಾನಾಯಕರನ್ನು ನೆನಪು ಮಾಡಿಕೊಳ್ಳಿ. ಅವರು ನಿಮಗೆ ದೇವರ ಸಂದೇಶವನ್ನು ಬೋಧಿಸಿದರು. ಅವರು ಹೇಗೆ ಜೀವಿಸಿದ್ದರು ಮತ್ತು ಹೇಗೆ ಸತ್ತರು ಎಂಬುದನ್ನು ನೆನಪಿಸಿಕೊಳ್ಳಿ. ಅವರ ನಂಬಿಕೆಯನ್ನು ಅನುಸರಿಸಿರಿ. 8 ಯೇಸು ಕ್ರಿಸ್ತನು ನಿನ್ನೆ ಇದ್ದಂತೆ ಇಂದಿಗೂ ಇದ್ದಾನೆ. ಸದಾಕಾಲ ಹಾಗೆಯೇ ಇರುವನು. 9 ನಿಮ್ಮನ್ನು ತಪ್ಪು ಮಾರ್ಗಕ್ಕೆ ಎಳೆಯುವಂತಹ ಅನ್ಯೋಪದೇಶಗಳ ಕಡೆಗೆ ಗಮನಕೊಡಬೇಡಿ. ನಿಮ್ಮ ಹೃದಯಗಳು ದೇವರ ಕೃಪೆಯಿಂದ ಬಲವಾಗಬೇಕೇ ಹೊರತು ಆಹಾರದ ನಿಯಮಗಳ ಪಾಲನೆಯಿಂದಲ್ಲ. ಆ ನಿಯಮಗಳ ಪಾಲನೆಯು ಜನರಿಗೆ ಸಹಾಯಕವಾಗುವುದಿಲ್ಲ.
10 ನಮಗೊಂದು ಯಜ್ಞವಿದೆ. ಪವಿತ್ರ ಗುಡಾರದಲ್ಲಿ ಸೇವೆ ಸಲ್ಲಿಸುತ್ತಿರುವ ಯಾಜಕರು ನಮ್ಮ ಯಜ್ಞದಿಂದ ತಿನ್ನಲಾಗುವುದಿಲ್ಲ. 11 ಪ್ರಧಾನಯಾಜಕನು ಪಶುಗಳ ರಕ್ತವನ್ನು ಮಹಾ ಪವಿತ್ರಸ್ಥಳದೊಳಕ್ಕೆ ತೆಗೆದುಕೊಂಡು ಹೋಗುತ್ತಾನೆ. ಅವನು ಪಾಪಗಳಿಗಾಗಿ ಆ ರಕ್ತವನ್ನು ಅರ್ಪಿಸುತ್ತಾನೆ. ಆದರೆ ಆ ಪಶುಗಳ ದೇಹಗಳು ಪಾಳೆಯದ ಆಚೆ ಸುಡಲ್ಪಡುತ್ತವೆ. 12 ಆದ್ದರಿಂದ ಯೇಸುವು ನಗರದ ಹೊರಗಡೆ ಸಂಕಟವನ್ನು ಅನುಭವಿಸಿದನು. ಆತನು ತನ್ನ ಜನರನ್ನು ಪವಿತ್ರರನ್ನಾಗಿಸಲು, ತನ್ನ ಸ್ವಂತ ರಕ್ತವನ್ನೇ ಅರ್ಪಿಸಿ ಸತ್ತನು. 13 ನಾವು ಪಾಳೆಯದ ಹೊರಗಡೆಯಲ್ಲಿರುವ ಆತನ ಬಳಿಗೆ ಹೋಗಬೇಕು. ಆತನಿಗಾದ ಅಪಮಾನವನ್ನು ನಾವೂ ಸ್ವೀಕರಿಸಿಕೊಳ್ಳಬೇಕು. 14 ಈ ಲೋಕದಲ್ಲಿ ಶಾಶ್ವತವಾಗಿರುವ ನಗರವೇ ಇಲ್ಲ. ಆದರೆ ನಾವು ಮುಂದೆ ಬರುವ ನಗರಕ್ಕಾಗಿ ಕಾಯುತ್ತಿದ್ದೇವೆ. 15 ಆದ್ದರಿಂದ ಆತನ ಮೂಲಕ ನಾವು ದೇವರಿಗೆ ಯಜ್ಞಗಳನ್ನು ಅರ್ಪಿಸುವುದನ್ನು ನಿಲ್ಲಿಸಬಾರದು. ಆತನೇ ಪ್ರಭುವೆಂದು ನಮ್ಮ ಬಾಯಿಂದ ಅರಿಕೆ ಮಾಡುವುದೇ ನಾವು ಅರ್ಪಿಸುವ ಯಜ್ಞವಾಗಿದೆ. 16 ಇದಲ್ಲದೆ ಪರೋಪಕಾರವನ್ನೂ ದಾನಧರ್ಮವನ್ನೂ ಮರೆಯದಿರಿ. ಇವೇ ದೇವರಿಗೆ ಸಮರ್ಪಕವಾದ ಯಜ್ಞಗಳು.
Kannada Holy Bible: Easy-to-Read Version. All rights reserved. © 1997 Bible League International