Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 40:1-8

ರಚನೆಗಾರ: ದಾವೀದ.

40 ನಾನು ಯೆಹೋವನಿಗೋಸ್ಕರ ತಾಳ್ಮೆಯಿಂದ ನಿರೀಕ್ಷಿಸಿದೆನು;
    ಆತನು ನನ್ನ ಮೊರೆಗೆ ಕಿವಿಗೊಟ್ಟು ಕೇಳಿದನು.
ಆತನು ನನ್ನನ್ನು ನಾಶನದ ಗುಂಡಿಯೊಳಗಿಂದ[a] ಎತ್ತಿದನು.
    ಆತನು ನನ್ನನ್ನು ಕೆಸರಿನ ಸ್ಥಳದಿಂದ[b]
ಮೇಲೆತ್ತಿ ಬಂಡೆಯ ಮೇಲಿರಿಸಿದನು;
    ದೃಢವಾಗಿ ಹೆಜ್ಜೆಯಿಡುವಂತೆ ಮಾಡಿದನು.
ಆತನು ನನ್ನ ಬಾಯಲ್ಲಿ ಹೊಸ ಕೀರ್ತನೆಯನ್ನು ಹುಟ್ಟಿಸಿದ್ದಾನೆ.
    ಅದು ನನ್ನ ದೇವರ ಸ್ತುತಿಗೀತೆ.
ನನಗೆ ಸಂಭವಿಸಿದವುಗಳನ್ನು ಅನೇಕರು ನೋಡಿ
    ಯೆಹೋವನಲ್ಲಿ ಭರವಸವಿಟ್ಟು ಆತನನ್ನು ಆರಾಧಿಸುವರು.
ಯಾವನು ಯೆಹೋವನಲ್ಲಿ ಭರವಸವಿಟ್ಟಿದ್ದಾನೋ ಅವನೇ ಧನ್ಯನು.
    ಸಹಾಯಕ್ಕಾಗಿ ವಿಗ್ರಹಗಳ ಕಡೆಗೂ ಸುಳ್ಳುದೇವರುಗಳ ಕಡೆಗೂ ತಿರುಗಿಕೊಳ್ಳದವನೇ ಭಾಗ್ಯವಂತನು.
ಯೆಹೋವನೇ, ನನ್ನ ದೇವರೇ, ನೀನು ಅನೇಕ ಮಹತ್ಕಾರ್ಯಗಳನ್ನು ಮಾಡಿರುವೆ!
    ನನ್ನ ವಿಷಯದಲ್ಲಿ ನಿನಗೆ ಅತಿಶಯವಾದ ಆಲೋಚನೆಗಳಿವೆ.
ಅವುಗಳನ್ನು ವಿವರಿಸಿ ಹೇಳಲು ಸಾಧ್ಯವಿಲ್ಲ;
    ಅವು ಅಸಂಖ್ಯಾತವಾಗಿವೆ.

ನಾನು ಗ್ರಹಿಸಿಕೊಂಡಿದ್ದೇನೆಂದರೆ,
    ಯಜ್ಞಗಳಾಗಲಿ ಧಾನ್ಯಸಮರ್ಪಣೆಗಳಾಗಲಿ
    ಸರ್ವಾಂಗಹೋಮಗಳಾಗಲಿ ಪಾಪಪರಿಹಾರಕ ಯಜ್ಞಗಳಾಗಲಿ ನಿನಗೆ ಬೇಕಿಲ್ಲ.
ಆದ್ದರಿಂದ ನಾನು, “ಇಗೋ, ಬರುತ್ತಿದ್ದೇನೆ.
    ನನ್ನ ವಿಷಯವಾಗಿ ಗ್ರಂಥದಲ್ಲಿ ಇದನ್ನು ಬರೆಯಲಾಗಿದೆ.
ನನ್ನ ದೇವರೇ, ನಿನ್ನ ಚಿತ್ತಾನುಸಾರವಾಗಿ ಮಾಡುತ್ತೇನೆ.
    ನಿನ್ನ ಉಪದೇಶಗಳನ್ನು ಹೃದಯದಲ್ಲಿಟ್ಟುಕೊಂಡಿದ್ದೇನೆ” ಅಂದೆನು.

ಯಾಜಕಕಾಂಡ 15:25-31

25 “ಸ್ತ್ರೀಗೆ ತನ್ನ ಮುಟ್ಟಿನ ದಿನಗಳ ಹೊರತಾಗಿ ಅನೇಕ ದಿನಗಳವರೆಗೆ ರಕ್ತಸ್ರಾವವಾದರೆ ಅಥವಾ ಮುಟ್ಟಿನ ದಿನಗಳ ನಂತರ ಅವಳಿಗೆ ಸ್ರಾವವಾದರೆ, ಆಕೆಯು ತನ್ನ ಮುಟ್ಟಿನ ದಿನಗಳಲ್ಲಿ ಅಶುದ್ಧಳಾಗಿರುವಂತೆ, ಅಶುದ್ಧಳಾಗಿರುವಳು. ಅವಳಿಗೆ ಸ್ರಾವವಾಗುವ ದಿನಗಳೆಲ್ಲಾ ಅವಳು ಅಶುದ್ಧಳಾಗಿರುವಳು. 26 ಆ ಸ್ರಾವವಿರುವ ತನಕ ಅವಳು ಯಾವ ಹಾಸಿಗೆಯ ಮೇಲೆ ಮಲಗಿದರೂ, ಅದು ತಿಂಗಳ ಮುಟ್ಟಿನ ಕಾಲದಲ್ಲಿ ಅವಳು ಮಲಗಿರುವ ಹಾಸಿಗೆಯಂತೆಯೇ ಅಶುದ್ಧವಾಗಿರುವುದು. ಅವಳು ಯಾವುದರ ಮೇಲೆ ಕುಳಿತರೂ ಅದು ತಿಂಗಳ ಮುಟ್ಟಿನ ಕಾಲದಲ್ಲಿ ಅವಳು ಕುಳಿತಿದ್ದ ವಸ್ತುವಿನಂತೆಯೇ ಅಶುದ್ಧವಾಗಿರುವುದು. 27 ಯಾವನಾದರೂ ಆ ವಸ್ತುಗಳನ್ನು ಮುಟ್ಟಿದರೆ, ಆ ವ್ಯಕ್ತಿ ಅಶುದ್ಧನಾಗಿರುವನು. ಆ ವ್ಯಕ್ತಿಯು ತನ್ನ ಬಟ್ಟೆಗಳನ್ನು ತೊಳೆದುಕೊಂಡು ನೀರಿನಲ್ಲಿ ಸ್ನಾನಮಾಡಬೇಕು. ಅವನು ಸಾಯಂಕಾಲದವರೆಗೆ ಅಶುದ್ಧನಾಗಿರುವನು. 28 ಸ್ತ್ರೀಗೆ ಸ್ರಾವವು ನಿಂತ ನಂತರ, ಅವಳು ಏಳು ದಿನಗಳವರೆಗೆ ಕಾಯಬೇಕು. ಅದರ ನಂತರ ಅವಳು ಶುದ್ಧಳಾಗಿರುವಳು. 29 ಬಳಿಕ ಎಂಟನೆಯ ದಿನದಲ್ಲಿ ಸ್ತ್ರೀಯು ಎರಡು ಬೆಳವಕ್ಕಿಗಳನ್ನಾಗಲಿ ಎರಡು ಪಾರಿವಾಳದ ಮರಿಗಳನ್ನಾಗಲಿ ತೆಗೆದುಕೊಳ್ಳಬೇಕು. ಅವಳು ಅವುಗಳನ್ನು ದೇವದರ್ಶನಗುಡಾರದ ಬಾಗಿಲಲ್ಲಿ ಯಾಜಕನ ಬಳಿಗೆ ತರಬೇಕು. 30 ತರುವಾಯ ಯಾಜಕನು ಒಂದು ಪಕ್ಷಿಯನ್ನು ಪಾಪಪರಿಹಾರಕ ಯಜ್ಞವಾಗಿಯೂ ಇನ್ನೊಂದು ಪಕ್ಷಿಯನ್ನು ಸರ್ವಾಂಗಹೋಮವಾಗಿಯೂ ಅರ್ಪಿಸಬೇಕು. ಹೀಗೆ ಯಾಜಕನು ಅವಳಿಗಾಗಿ ಯೆಹೋವನ ಸನ್ನಿಧಿಯಲ್ಲಿ ಪ್ರಾಯಶ್ಚಿತ್ತ ಮಾಡುವನು.

31 “ಆದ್ದರಿಂದ ಅಶುದ್ಧತ್ವದ ಕುರಿತು ನೀವು ಇಸ್ರೇಲರನ್ನು ಎಚ್ಚರಿಸಬೇಕು. ನೀವು ಜನರನ್ನು ಎಚ್ಚರಿಸದಿದ್ದರೆ ಅವರು ನನ್ನ ಪವಿತ್ರ ಗುಡಾರವನ್ನು ಅಶುದ್ಧಮಾಡಿ ಸಾವಿಗೀಡಾಗುವರು.”

ಯಾಜಕಕಾಂಡ 22:1-9

22 ದೇವರಾದ ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: “ಆರೋನನಿಗೂ ಅವನ ಪುತ್ರರಿಗೂ ಹೀಗೆ ಹೇಳು: ಇಸ್ರೇಲರು ನನಗೆ ಕಾಣಿಕೆಗಳನ್ನು ಸಮರ್ಪಿಸುವರು. ಅವು ಪರಿಶುದ್ಧವಾದವುಗಳು. ಅವು ನನ್ನವು, ಆದ್ದರಿಂದ ಯಾಜಕರಾದ ನೀವು ಅವುಗಳನ್ನು ತೆಗೆದುಕೊಳ್ಳಬಾರದು. ನೀವು ಆ ಪರಿಶುದ್ಧ ವಸ್ತುಗಳನ್ನು ಉಪಯೋಗಿಸಿದರೆ, ನನ್ನ ಪರಿಶುದ್ಧ ಹೆಸರಿಗೆ ಅವಮಾನವಾಗುವುದು. ನಾನೇ ಯೆಹೋವನು! ನಿಮ್ಮ ಸಂತತಿಯವರೆಲ್ಲರಲ್ಲಿ ಯಾವನಾದರೂ ಅಪವಿತ್ರನಾಗಿರುವಾಗ ಅವುಗಳನ್ನು ಮುಟ್ಟಿದರೆ, ಅವನನ್ನು ನನ್ನ ಸನ್ನಿಧಿ ಸೇವೆಯಿಂದ ತೆಗೆದುಹಾಕಬೇಕು! ಇಸ್ರೇಲರು ಅವುಗಳನ್ನು ನನಗೆ ಕೊಟ್ಟಿದ್ದಾರೆ. ನಾನೇ ಯೆಹೋವನು!

“ಆರೋನನ ಸಂತತಿಯವರಲ್ಲಿ ಯಾವನಿಗಾದರೂ ಕೆಟ್ಟದಾದ ಚರ್ಮರೋಗವಾಗಲಿ ಸ್ರಾವವಾಗಲಿ ಇದ್ದರೆ, ಅವನು ಶುದ್ಧನಾಗುವವರೆಗೆ ದೇವರಿಗೆ ನೈವೇದ್ಯವಾದ ಪದಾರ್ಥಗಳನ್ನು ತಿನ್ನಬಾರದು. ಅಶುದ್ಧನಾಗುವ ಪ್ರತಿ ಯಾಜಕನಿಗೂ ಈ ನಿಯಮ ಅನ್ವಯಿಸುತ್ತದೆ. ಆ ಯಾಜಕನು ಹೆಣವನ್ನು ಮುಟ್ಟಿದರೆ, ವೀರ್ಯಸ್ಖಲನ ಮಾಡಿಕೊಂಡರೆ, ಯಾವುದೇ ಅಶುದ್ಧವಾದ ಹರಿದಾಡುವ ಜಂತುಗಳನ್ನು ಮುಟ್ಟಿದರೆ, ಅಶುದ್ಧನಾದ ವ್ಯಕ್ತಿಯನ್ನು ಮುಟ್ಟಿದರೆ ಅಶುದ್ಧನಾಗುವನು. ಯಾವುದು ಅವನನ್ನು ಅಶುದ್ಧಪಡಿಸಿತು ಎಂಬುದು ಪ್ರಾಮುಖ್ಯವಲ್ಲ. ಒಬ್ಬನು ಅವುಗಳಲ್ಲಿ ಯಾವುದನ್ನು ಮುಟ್ಟಿದರೂ ಸಾಯಂಕಾಲದವರೆಗೆ ಅಶುದ್ಧನಾಗುವನು. ಅವನು ನೈವೇದ್ಯ ಪದಾರ್ಥಗಳಲ್ಲಿ ಯಾವುದನ್ನೂ ತಿನ್ನಬಾರದು. ಅವನು ತನ್ನನ್ನು ನೀರಿನಿಂದ ತೊಳೆದುಕೊಂಡರೂ ಪವಿತ್ರ ಪದಾರ್ಥವನ್ನು ತಿನ್ನಬಾರದು.[a] ಸೂರ್ಯನು ಮುಳುಗಿದ ನಂತರವೇ ಅವನು ಶುದ್ಧನಾಗುವನು. ಬಳಿಕ ಅವನು ನೈವೇದ್ಯ ಪದಾರ್ಥವನ್ನು ತಿನ್ನಬಹುದು. ಯಾಕೆಂದರೆ ಆ ಪದಾರ್ಥವು ಅವನ ಪಾಲಾಗುತ್ತದೆ.

“ಯಾಜಕನು ಸತ್ತ ಪ್ರಾಣಿಯನ್ನಾಗಲಿ ಕ್ರೂರ ಪ್ರಾಣಿಗಳಿಂದ ಕೊಲ್ಲಲ್ಪಟ್ಟ ಪ್ರಾಣಿಯನ್ನಾಗಲಿ ತಿನ್ನಬಾರದು. ಅವನು ಅದನ್ನು ತಿಂದರೆ ಅಶುದ್ಧನಾಗುವನು. ನಾನೇ ಯೆಹೋವನು!

“ಯಾಜಕರು ನನ್ನ ಅಗತ್ಯತೆಗಳನ್ನು ಎಚ್ಚರಿಕೆಯಿಂದ ಪೂರೈಸಿದರೆ ಅಪರಾಧಕ್ಕೆ ಒಳಗಾಗುವುದಿಲ್ಲ. ಅವರು ಪವಿತ್ರವಾದವುಗಳನ್ನು ಅಪವಿತ್ರಗೊಳಿಸಿದರೆ ಸಾಯುವರು. ಯೆಹೋವನಾದ ನಾನೇ ಅವರನ್ನು ಪರಿಶುದ್ಧರನ್ನಾಗಿ ಮಾಡಿದ್ದೇನೆ ಮತ್ತು ಈ ವಿಶೇಷ ಸೇವೆಗಾಗಿ ಪ್ರತ್ಯೇಕಿಸಿದ್ದೇನೆ.

2 ಕೊರಿಂಥದವರಿಗೆ 6:14-7:2

ಅವಿಶ್ವಾಸಿಗಳ ಮಧ್ಯದಲ್ಲಿ ಜೀವಿಸುವುದರ ಬಗ್ಗೆ ಎಚ್ಚರಿಕೆ

14 ಕ್ರಿಸ್ತನಂಬಿಕೆಯಿಲ್ಲದ ಜನರಿಗೂ ನಿಮಗೂ ವ್ಯತ್ಯಾಸವಿದೆ. ಆದ್ದರಿಂದ ನೀವು ಅವರೊಂದಿಗೆ ಸೇರಬೇಡಿ. ಒಳ್ಳೆಯದು ಮತ್ತು ಕೆಟ್ಟದು ಒಟ್ಟಾಗಿ ಸೇರಲು ಸಾಧ್ಯವಿಲ್ಲ. ಬೆಳಕು ಕತ್ತಲೆಯೊಡನೆ ಅನ್ಯೋನ್ಯವಾಗಿರಲು ಸಾಧ್ಯವೇ? 15 ಕ್ರಿಸ್ತನೂ ಸೈತಾನನೂ ಅನ್ಯೋನ್ಯವಾಗಿರಲು ಸಾಧ್ಯವೇ? ವಿಶ್ವಾಸಿಗಳಿಗೂ ಅವಿಶ್ವಾಸಿಗಳಿಗೂ ಪಾಲುಗಾರಿಕೆಯೇನು? 16 ದೇವರ ಆಲಯವು ವಿಗ್ರಹಗಳೊಂದಿಗೆ ಒಪ್ಪಂದವನ್ನು ಮಾಡಿಕೊಳ್ಳಲು ಸಾಧ್ಯವೇ? ನಾವು ಜೀವಸ್ವರೂಪನಾದ ದೇವರ ಆಲಯವಾಗಿದ್ದೇವೆ. ದೇವರು ಹೇಳಿದಂತೆ:

“ನಾನು ಅವರೊಂದಿಗೆ ವಾಸಿಸುವೆನು; ಅವರೊಂದಿಗೆ ನಡೆಯುವೆನು;
ಅವರ ದೇವರಾಗಿರುವೆನು; ಅವರು ನನ್ನ ಜನರಾಗಿರುವರು.”(A)

17 “ಆದ್ದರಿಂದ ಆ ಜನರನ್ನು ಬಿಟ್ಟು ಹೊರಬನ್ನಿರಿ;
    ಅವರಿಂದ ಬೇರ್ಪಡಿರಿ ಎನ್ನುತ್ತಾನೆ ಪ್ರಭುವು.
ಅಶುದ್ಧವಾದ ಯಾವುದನ್ನೂ ಮುಟ್ಟಬೇಡಿ,
    ಆಗ ನಾನು ನಿಮ್ಮನ್ನು ಸ್ವೀಕರಿಸಿಕೊಳ್ಳುವೆನು.”(B)

18 “ನಾನು ನಿಮ್ಮ ತಂದೆಯಾಗಿರುವೆನು
    ಮತ್ತು ನೀವು ನನ್ನ ಪುತ್ರಪುತ್ರಿಯರಾಗುವಿರಿ ಎನ್ನುತ್ತಾನೆ ಸರ್ವಶಕ್ತನಾದ ಪ್ರಭುವು.”(C)

ಪ್ರಿಯ ಸ್ನೇಹಿತರೇ, ನಾವು ದೇವರಿಂದ ಈ ವಾಗ್ದಾನಗಳನ್ನು ಹೊಂದಿದ್ದೇವೆ. ಆದ್ದರಿಂದ ನಮ್ಮನ್ನು ಶುದ್ಧರನ್ನಾಗಿ ಮಾಡಿಕೊಳ್ಳಬೇಕು. ನಮ್ಮ ದೇಹವನ್ನಾಗಲಿ ನಮ್ಮ ಆತ್ಮವನ್ನಾಗಲಿ ಅಶುದ್ಧಗೊಳಿಸುವ ಎಲ್ಲಾ ವಿಧದ ಮಲಿನತೆಯಿಂದ ನಾವು ದೂರವಿರೋಣ. ನಾವು ದೇವರನ್ನು ಗೌರವಿಸುವುದರಿಂದ ಪರಿಶುದ್ಧವಾದ ಬಾಳ್ವೆಯನ್ನು ನಡೆಸಲು ನಾವು ಪ್ರಯತ್ನಿಸಬೇಕು.

ಪೌಲನ ಆನಂದ

ನಿಮ್ಮ ಹೃದಯಗಳಲ್ಲಿ ನಮಗೆ ಸ್ಥಳವನ್ನು ಕೊಡಿರಿ. ನಾವು ನಿಮ್ಮಲ್ಲಿ ಯಾರಿಗೂ ಕೆಟ್ಟದ್ದನ್ನು ಮಾಡಿಲ್ಲ. ಯಾರ ನಂಬಿಕೆಯನ್ನೂ ಹಾಳುಮಾಡಿಲ್ಲ; ಯಾರನ್ನೂ ವಂಚಿಸಲಿಲ್ಲ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International