Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 50:7-15

ದೇವರು ಹೀಗೆನ್ನುತ್ತಾನೆ: “ನನ್ನ ಜನರೇ, ಇಸ್ರೇಲರೇ, ನನಗೆ ಕಿವಿಗೊಡಿರಿ!
    ನಾನು ನಿಮಗೆ ವಿರುದ್ಧವಾಗಿ ಸಾಕ್ಷಿ ಹೇಳುವೆನು.
    ದೇವರಾದ ನಾನೇ ನಿಮ್ಮ ದೇವರು!
ನಿಮ್ಮ ಯಜ್ಞಗಳ ಬಗ್ಗೆ ನಾನು ದೂರು ಹೇಳುತ್ತಿಲ್ಲ.
    ಇಸ್ರೇಲರಾದ ನೀವು ನನಗೆ ಸರ್ವಾಂಗಹೋಮಗಳನ್ನು ನಿತ್ಯವೂ ಅರ್ಪಿಸುತ್ತಲೇ ಇದ್ದೀರಿ.
ನಿಮ್ಮಮನೆಗಳಿಂದ ನಾನು ಹೋರಿಗಳನ್ನು ತೆಗೆದುಕೊಳ್ಳುವುದಿಲ್ಲ;
    ನಿಮ್ಮ ದೊಡ್ಡಿಗಳಿಂದ ಆಡುಗಳನ್ನು ತೆಗೆದುಕೊಳ್ಳುವುದಿಲ್ಲ.
10 ನನಗೆ ಆ ಪಶುಗಳ ಅಗತ್ಯವಿಲ್ಲ.
    ಕಾಡಿನಲ್ಲಿರುವ ಸರ್ವ ಮೃಗಗಳೂ ಗುಡ್ಡಗಳ ಮೇಲಿರುವ ಸಾವಿರಾರು ಪಶುಗಳೂ ನನ್ನವೇ.
11 ಅತ್ಯಂತ ಉನ್ನತವಾದ ಬೆಟ್ಟಗಳ ಮೇಲಿರುವ ಪಕ್ಷಿಗಳೆಲ್ಲಾ ನನಗೆ ಗೊತ್ತುಂಟು.
    ಬೆಟ್ಟಗಳ ಮೇಲೆ ಚಲಿಸುವ ಜೀವಜಂತುಗಳೆಲ್ಲಾ ನನ್ನವೇ.
12 ನನಗೆ ಹಸಿವೆಯಾಗಿದ್ದರೆ, ಆಹಾರಕ್ಕಾಗಿ ನಿಮ್ಮನ್ನು ಕೇಳಬೇಕಿಲ್ಲ.
    ಲೋಕವೂ ಅದರಲ್ಲಿರುವ ಸಮಸ್ತವೂ ನನ್ನದೇ.
13 ನಾನು ಹೋರಿಗಳ ಮಾಂಸವನ್ನು ತಿನ್ನುವೆನೇ?
    ನಾನು ಆಡುಗಳ ರಕ್ತವನ್ನು ಕುಡಿಯುವೆನೇ?”

14 ಕೃತಜ್ಞತಾಯಜ್ಞಗಳನ್ನು ದೇವರಿಗೆ ಅರ್ಪಿಸಿರಿ.
    ನೀವು ಮಾಡಿಕೊಂಡ ಹರಕೆಗಳನ್ನು ಮಹೋನ್ನತನಿಗೆ ಸಲ್ಲಿಸಿರಿ.
15 ದೇವರು ಹೀಗೆನ್ನುತ್ತಾನೆ: “ಆಪತ್ಕಾಲಗಳಲ್ಲಿ ನನಗೆ ಮೊರೆಯಿಡಿರಿ!
    ನಾನು ನಿಮಗೆ ಸಹಾಯ ಮಾಡುವೆನು, ಆಗ ನೀವು ನನ್ನನ್ನು ಸನ್ಮಾನಿಸುವಿರಿ.”

ಪ್ರಲಾಪಗಳು 1:7-11

ಜೆರುಸಲೇಮ್ ಹಿಂದಿನ ದಿನಗಳ ಬಗ್ಗೆ ಯೋಚಿಸುತ್ತಾಳೆ;
ತಾನು ಮನೆಯನ್ನು ಕಳೆದುಕೊಂಡ
    ಮತ್ತು ಹಿಂಸೆಗೊಳಗಾದ ಕಾಲವನ್ನು ಜ್ಞಾಪಿಸಿಕೊಳ್ಳುತ್ತಾಳೆ.
ಹಿಂದೆ ಅವಳಿಗಿದ್ದ ಎಲ್ಲ ಭೋಗ್ಯ ವಸ್ತುಗಳನ್ನು
    ಅವಳು ಜ್ಞಾಪಿಸಿಕೊಳ್ಳುತ್ತಾಳೆ.
ಹಳೆಯ ಕಾಲದಲ್ಲಿ ಲಭ್ಯವಿದ್ದ
    ಎಲ್ಲ ಉತ್ತಮ ವಸ್ತುಗಳನ್ನು ಅವಳು ಸ್ಮರಿಸಿಕೊಳ್ಳುತ್ತಾಳೆ.
ತನ್ನ ಜನರನ್ನು ವೈರಿಗಳು
    ವಶಪಡಿಸಿಕೊಂಡ ಸಂಗತಿಯನ್ನು ಅವಳು ಸ್ಮರಿಸುತ್ತಾಳೆ.
ಆಗ ತನಗೆ ಸಹಾಯ ಮಾಡಲು
    ಯಾರೂ ಇರಲಿಲ್ಲವೆಂಬುದನ್ನು ಅವಳು ಜ್ಞಾಪಿಸಿಕೊಳ್ಳುತ್ತಾಳೆ.
ಅವಳ ಶತ್ರುಗಳು ಅವಳನ್ನು ನೋಡಿ ನಕ್ಕರು.
    ಅವಳು ಹಾಳಾದುದನ್ನು ನೋಡಿ ಅವರು ನಕ್ಕರು.
ಜೆರುಸಲೇಮ್ ಮಹಾಪಾಪ ಮಾಡಿತು.
ಜೆರುಸಲೇಮ್ ಭಯಂಕರ ಪಾಪ ಮಾಡಿದ್ದಕ್ಕಾಗಿ
    ಅವಳು ಹಾಳುಬಿದ್ದ ನಗರವಾದಳು. ಜನರು ಅವಳನ್ನು ಹೀನೈಸುವಂತಾಗಿದೆ.
ಮೊದಲು ಅವಳನ್ನು ಗೌರವಿಸುತ್ತಿದ್ದ ಎಲ್ಲ ಜನ ಈಗ ಅವಳನ್ನು ತಿರಸ್ಕರಿಸುತ್ತಾರೆ.
    ಏಕೆಂದರೆ ಅವರು ಅವಳ ಬೆತ್ತಲೆ ದೇಹವನ್ನು ನೋಡಿದರು.
ಜೆರುಸಲೇಮ್ ನರಳಾಡುತ್ತಿದ್ದಾಳೆ.
    ಅವಳು ನಾಚಿಕೆಯಿಂದ ತನ್ನ ಮುಖವನ್ನು ತಗ್ಗಿಸಿಕೊಂಡಿದ್ದಾಳೆ.
ಜೆರುಸಲೇಮಿನ ಲಂಗಗಳು ಮಲಿನವಾಗಿದ್ದವು.
    ಅವಳಿಗೆ ಮುಂದೆ ಏನಾಗುವದೆಂಬುದರ ಬಗ್ಗೆ ಅವಳು ಯೋಚಿಸಲಿಲ್ಲ.
ಅವಳ ಪತನ ವಿಸ್ಮಯಕಾರಿಯಾಗಿತ್ತು.
    ಅವಳನ್ನು ಸಂತೈಸಲು ಯಾರೂ ಇರಲಿಲ್ಲ.
“ಅಯ್ಯೋ, ಯೆಹೋವನೇ, ನನಗೆಷ್ಟು ನೋವಾಗಿದೆ. ನೋಡು!
    ನನ್ನ ಶತ್ರು ತನ್ನನ್ನು ಎಷ್ಟು ದೊಡ್ಡವನೆಂದು ಭಾವಿಸಿಕೊಂಡಿದ್ದಾನೆ.” ಎಂದು ಆಕೆ ಹೇಳುತ್ತಾಳೆ.

10 ಶತ್ರು ತನ್ನ ಕೈಗಳನ್ನು ಚಾಚಿದನು.
    ಅವಳ ಎಲ್ಲ ಅಮೂಲ್ಯ ವಸ್ತುಗಳನ್ನು ತೆಗೆದುಕೊಂಡನು.
ಯೆಹೋವನೇ, ಆ ಜನರು ನಿನ್ನ ಸಭೆಯನ್ನು ಪ್ರವೇಶಿಸಬಾರದೆಂದು
    ನೀನು ಆಜ್ಞಾಪಿಸಿದ್ದರೂ ಪರಕೀಯರು ತನ್ನ ಪವಿತ್ರಾಲಯವನ್ನು ಪ್ರವೇಶಿಸುವದನ್ನು ಅವಳು ನೋಡಬೇಕಾಯಿತು.
11 ಜೆರುಸಲೇಮಿನ ಎಲ್ಲ ಜನರು ನರಳಾಡುತ್ತಿದ್ದಾರೆ.
    ಅವಳ ಎಲ್ಲ ಜನರು ಆಹಾರಕ್ಕಾಗಿ ಹುಡುಕುತ್ತಿದ್ದಾರೆ.
    ಅವರು ತಮ್ಮ ಎಲ್ಲ ಒಳ್ಳೆಯ ವಸ್ತುಗಳನ್ನು ಆಹಾರಕ್ಕಾಗಿ ಕೊಟ್ಟುಬಿಡುತ್ತಿದ್ದಾರೆ.
ಬದುಕಿರುವ ಸಲುವಾಗಿ ಅವರು ಹೀಗೆ ಮಾಡುತ್ತಿದ್ದಾರೆ. “ಯೆಹೋವನೇ, ನನ್ನ ಕಡೆಗೆ ನೋಡು!
    ಜನರು ನನ್ನನ್ನು ಹೇಗೆ ದ್ವೇಷಿಸುತ್ತಾರೆ ನೋಡು” ಎಂದು ಜೆರುಸಲೇಮ್ ಬೇಡಿಕೊಂಡಳು.

2 ಪೇತ್ರನು 2:17-22

17 ಈ ಸುಳ್ಳುಬೋಧಕರು ನೀರಿಲ್ಲದ ಒರತೆಗಳಂತಿದ್ದಾರೆ. ಅವರು ಬಿರುಗಾಳಿಯಿಂದ ಬಡಿದುಕೊಂಡು ಹೋಗುವ ಮೋಡಗಳಂತಿದ್ದಾರೆ. ಅವರಿಗಾಗಿ ಒಂದು ಕಗ್ಗತ್ತಲಾದ ಸ್ಥಳವನ್ನು ಕಾದಿರಿಸಲಾಗಿದೆ. 18 ಅವರು ಅರ್ಥವಿಲ್ಲದ ಮಾತು ಗಳಿಂದ ಬಡಾಯಿಕೊಚ್ಚಿಕೊಳ್ಳುತ್ತಾರೆ; ಜನರನ್ನು ಪಾಪಗಳ ಬಲೆಗೆ ನಡೆಸುತ್ತಿದ್ದಾರೆ. ತಪ್ಪುಮಾರ್ಗದಲ್ಲಿ ನಡೆಯುವ ಜನರ ಸಹವಾಸದಿಂದ ಹೊಸದಾಗಿ ತಪ್ಪಿಸಿಕೊಂಡು ಬಂದ ಜನರನ್ನು ದಾರಿತಪ್ಪಿಸುತ್ತಾರೆ. ತಮ್ಮ ಪಾಪಸ್ವಭಾವಕ್ಕನುಸಾರವಾಗಿ ಮಾಡಲು ಇಚ್ಛಿಸುವ ಕೆಟ್ಟಕಾರ್ಯಗಳನ್ನು ಬಳಸಿಕೊಂಡು ಈ ಸುಳ್ಳುಬೋಧಕರು ಅವರನ್ನು ದಾರಿ ತಪ್ಪಿಸುತ್ತಾರೆ. 19 ಈ ಸುಳ್ಳುಬೋಧಕರು ಆ ಜನರಿಗೆ ಸ್ವಾತಂತ್ರ್ಯವನ್ನು ಕೊಡುವುದಾಗಿ ವಾಗ್ದಾನ ಮಾಡುತ್ತಾರೆ. ಆದರೆ ಈ ಸುಳ್ಳುಬೋಧಕರೇ ಸ್ವತಂತ್ರರಾಗದೆ ನಾಶವಾಗುವಂಥ ಸಂಗತಿಗಳಿಗೆ ಗುಲಾಮರಾಗಿದ್ದಾರೆ. ಒಬ್ಬನು ಯಾವುದಕ್ಕೆ ಸೋತುಹೋಗಿದ್ದಾನೋ ಅದಕ್ಕೆ ಗುಲಾಮನಾಗಿದ್ದಾನೆ.

20 ಈ ಲೋಕದಲ್ಲಿನ ಕೆಟ್ಟಕಾರ್ಯಗಳಿಂದ ಆ ಜನರನ್ನು ಪಾರುಮಾಡಲಾಯಿತು. ನಮ್ಮ ಪ್ರಭುವಾದ ಮತ್ತು ರಕ್ಷಕನಾದ ಯೇಸು ಕ್ರಿಸ್ತನನ್ನು ತಿಳಿದುಕೊಳ್ಳುವುದರ ಮೂಲಕ ಅವರಿಗೆ ಬಿಡುಗಡೆಯಾಯಿತು. ಆದರೆ ಆ ಜನರು ತಮ್ಮ ಹಿಂದಿನ ಸಂಗತಿಗಳ ಕಡೆಗೆ ಹಿಂದಿರುಗಿಹೋದರೆ ಮತ್ತು ಅವುಗಳು ಅವರನ್ನು ತಮ್ಮ ಹತೋಟಿಯಲ್ಲಿಟ್ಟುಕೊಂಡಿದ್ದರೆ ಅವರು ಮೊದಲಿಗಿಂತಲೂ ಹೆಚ್ಚು ಕೆಟ್ಟುಹೋಗುತ್ತಾರೆ. 21 ಹೌದು, ಆ ಜನರು ಸರಿಯಾದ ಮಾರ್ಗವನ್ನು ತಿಳಿಯದೆ ಹೋಗಿದ್ದರೇ ಒಳ್ಳೆಯದಾಗುತ್ತಿತ್ತು. ಸರಿಯಾದ ಮಾರ್ಗವನ್ನು ಅರಿತುಕೊಂಡು, ಪವಿತ್ರ ಬೋಧನೆಗಳಿಗೆ ವಿಮುಖರಾಗುವುದಕ್ಕಿಂತ ಅದನ್ನು ತಿಳಿದುಕೊಳ್ಳದಿದ್ದರೇ ಚೆನ್ನಾಗಿರುತ್ತಿತ್ತು. 22 ನಿಜವಾಗಿ ಈ ಗಾದೆಗಳಂತೆಯೇ ಅವರು ಮಾಡಿದರು: “ನಾಯಿಯು ತಾನು ಕಕ್ಕಿದ್ದನ್ನೇ ನೆಕ್ಕಲು ತಿರುಗಿಕೊಂಡಿತು”(A) ಮತ್ತು “ತೊಳೆದ ಹಂದಿಯು ಕೆಸರಿನಲ್ಲಿ ಹೊರಳಾಡಲು ಹೋಯಿತು.”

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International