Revised Common Lectionary (Complementary)
18 “ನಾನು ಹೇಳಿದ ಆಜ್ಞೆಗಳನ್ನು ಯಾವಾಗಲೂ ಜ್ಞಾಪಕದಲ್ಲಿಡಿರಿ. ಅದನ್ನು ನಿಮ್ಮ ಹೃದಯದಲ್ಲಿಡಿರಿ. ಅವುಗಳನ್ನು ಬರೆದು ಕೈಗಳಲ್ಲಿ ಮತ್ತು ಹಣೆಯ ಮೇಲೆ ಕಟ್ಟಿರಿ. ಇದು ನಿಮಗೆ ಜ್ಞಾಪಕ ಕೊಡುವುದು. 19 ಈ ಕಟ್ಟಳೆಗಳನ್ನು ನಿಮ್ಮ ಮಕ್ಕಳಿಗೆ ಬೋಧಿಸಿರಿ. ಅವುಗಳ ವಿಷಯವಾಗಿ ನೀವು ನಿಮ್ಮ ಮನೆಗಳಲ್ಲಿ ಕುಳಿತಿರುವಾಗ, ದಾರಿಯಲ್ಲಿ ನಡೆಯುತ್ತಿರುವಾಗ, ಮಲಗುವಾಗ, ಏಳುವಾಗ ನೀವು ಮಾತನಾಡುತ್ತಾ ಇರಬೇಕು. 20 ಈ ಕಟ್ಟಳೆಗಳನ್ನು ನಿಮ್ಮ ಮನೆಯ ಬಾಗಿಲುಗಳ ಮತ್ತು ನಿಲುವುಗಳ ಮತ್ತು ಹೆಬ್ಬಾಗಿಲುಗಳ ಮೇಲೆ ಬರೆಯಿರಿ. 21 ನಿಮ್ಮ ಪೂರ್ವಿಕರಿಗೆ ವಾಗ್ದಾನ ಮಾಡಲ್ಪಟ್ಟ ದೇಶದಲ್ಲಿ ಆಗ ನೀವು ಮತ್ತು ನಿಮ್ಮ ಮಕ್ಕಳು ಬಹುಕಾಲ ಬಾಳುವಿರಿ. ಆಕಾಶವು ಭೂಮಿಯ ಮೇಲೆ ಎಷ್ಟು ಕಾಲವಿರುವುದೋ ಅಷ್ಟುಕಾಲ ನೀವು ಬದುಕುವಿರಿ.
ಆಶೀರ್ವಾದ ಅಥವಾ ಶಾಪ: ಇಸ್ರೇಲರ ಆರಿಸುವಿಕೆ
26 “ಈ ಹೊತ್ತು ನೀವು ಆಶೀರ್ವಾದವನ್ನಾಗಲಿ ಶಾಪವನ್ನಾಗಲಿ ಆರಿಸಬೇಕು. 27 ನಿಮ್ಮ ದೇವರಾದ ಯೆಹೋವನ ಆಜ್ಞೆಗಳಿಗೆ ನೀವು ವಿಧೇಯರಾದರೆ ಆತನಿಂದ ಆಶೀರ್ವಾದ ಹೊಂದುವಿರಿ. 28 ಆದರೆ ನೀವು ವಿಧೇಯರಾಗದಿದ್ದರೆ ಶಾಪವನ್ನು ಹೊಂದುವಿರಿ. ನಾನು ನಿಮಗೆ ಕೊಡುವ ಯೆಹೋವನ ನಿಯಮಗಳನ್ನು ಅನುಸರಿಸುವುದನ್ನು ನಿಲ್ಲಿಸಬೇಡಿರಿ. ಅನ್ಯದೇವತೆಗಳನ್ನು ಪೂಜಿಸಬೇಡಿರಿ. ನಾನು ನಿಮಗೆ ಬೋಧಿಸುತ್ತಿರುವುದು ಯೆಹೋವನ ಮಾರ್ಗದ ಕುರಿತೇ ಹೊರತು ಬೇರೆ ದೇವರುಗಳ ಕುರಿತಲ್ಲ.
ರಚನೆಗಾರ: ದಾವೀದ.
31 ಯೆಹೋವನೇ, ನಿನ್ನನ್ನೇ ಆಶ್ರಯಿಸಿಕೊಂಡಿದ್ದೇನೆ.
ನನ್ನನ್ನು ನಿರಾಶೆಗೊಳಿಸಬೇಡ.
ಕರುಣೆತೋರಿ ನನ್ನನ್ನು ರಕ್ಷಿಸು.
2 ನನಗೆ ಕಿವಿಗೊಡು.
ಬೇಗನೆ ಬಂದು, ನನ್ನನ್ನು ರಕ್ಷಿಸು.
ನನಗೆ ಬಂಡೆಯೂ ನನ್ನ ಆಶ್ರಯಸ್ಥಾನವೂ ಕೋಟೆಯೂ ಆಗಿದ್ದು
ನನ್ನನ್ನು ಕಾಪಾಡು!
3 ನೀನೇ ನನ್ನ ಬಂಡೆಯೂ ಕೋಟೆಯೂ ಆಗಿರುವುದರಿಂದ
ನಿನ್ನ ಹೆಸರಿನ ಘನತೆಗಾಗಿ ನನ್ನನ್ನು ನಡೆಸು; ನನಗೆ ಮಾರ್ಗದರ್ಶನ ನೀಡು.
4 ನನ್ನ ವೈರಿಗಳು ನನಗೆ ಬಲೆಬೀಸಿದ್ದಾರೆ.
ಅವರ ಬಲೆಗೆ ಸಿಕ್ಕಿಬೀಳದಂತೆ ನನ್ನನ್ನು ರಕ್ಷಿಸು.
ನೀನೇ ನನ್ನ ಆಶ್ರಯಸ್ಥಾನವಾಗಿರುವೆ.
5 ಯೆಹೋವನೇ, ನಮ್ಮ ಭರವಸೆಗೆ ಯೋಗ್ಯನಾದ ದೇವರು ನೀನೊಬ್ಬನೇ.
ನನ್ನ ಜೀವವನ್ನು ನಿನ್ನ ಕೈಗಳಲ್ಲಿ ಇಟ್ಟಿರುವೆ.
ನನ್ನನ್ನು ರಕ್ಷಿಸು!
19 ದೇವರೇ, ನೀನು ನಿನ್ನ ಭಕ್ತರಿಗಾಗಿ ಅಮೂಲ್ಯವಾದವುಗಳನ್ನು ಅಡಗಿಸಿಟ್ಟಿರುವೆ.
ನಿನ್ನಲ್ಲಿ ಭರವಸವಿಟ್ಟಿರುವ ಜನರಿಗಾಗಿ
ಎಲ್ಲರ ಮುಂದೆ ನೀನು ಮಾಡುವ ಒಳ್ಳೆಯ ಕಾರ್ಯಗಳು ಎಷ್ಟೋ ವಿಶೇಷವಾಗಿವೆ.
20 ನೀತಿವಂತರಿಗೆ ಕೇಡುಮಾಡಲು ಕೆಡುಕರು ಒಟ್ಟಾಗಿ ಸೇರಿದ್ದಾರೆ.
ನೀನಾದರೋ ನೀತಿವಂತರನ್ನು ಮರೆಮಾಡಿ ಕಾಪಾಡುವೆ;
ಅವರನ್ನು ನಿನ್ನ ಆಶ್ರಯಸ್ಥ್ಥಾನದಲ್ಲಿ ಅಡಗಿಸಿಡುವೆ.
21 ಯೆಹೋವನಿಗೆ ಸ್ತೋತ್ರವಾಗಲಿ! ವೈರಿಗಳು ಈ ಪಟ್ಟಣಕ್ಕೆ ಮುತ್ತಿಗೆ ಹಾಕಿದಾಗ
ಆತನು ತನ್ನ ಶಾಶ್ವತ ಪ್ರೀತಿಯನ್ನು ಆಶ್ಚರ್ಯಕರವಾಗಿ ತೋರಿದ್ದಾನೆ.
22 ನಾನು ಭಯಗೊಂಡು, “ದೇವರು ನನ್ನನ್ನು ತನ್ನ ಸಾನಿಧ್ಯದಿಂದ ಹೊರಗಟ್ಟಿದ್ದಾನೆ” ಎಂದುಕೊಂಡೆನು.
ಆದರೆ ನಾನು ನಿನ್ನನ್ನು ಕೂಗಿಕೊಂಡಾಗ ನೀನು ಕಿವಿಗೊಟ್ಟೆ.
23 ದೇವರ ಭಕ್ತರೇ, ನೀವು ಯೆಹೋವನನ್ನು ಪ್ರೀತಿಸಲೇಬೇಕು!
ಆತನು ನಂಬಿಗಸ್ತರನ್ನು ಕಾಪಾಡುವನು; ಗರ್ವಿಷ್ಠರನ್ನಾದರೋ ದಂಡಿಸುವನು.
24 ಯೆಹೋವನನ್ನು ನಿರೀಕ್ಷಿಸಿಕೊಂಡಿರುವವರೇ, ದೃಢವಾಗಿಯೂ ಧೈರ್ಯವಾಗಿಯೂ ಇರಿ.
16 ನಾನು ಸುವಾರ್ತೆಯ ವಿಷಯದಲ್ಲಿ ಹೆಮ್ಮೆಪಡುತ್ತೇನೆ. ನಂಬುವ ಪ್ರತಿಯೊಬ್ಬರನ್ನು ರಕ್ಷಿಸುವುದಕ್ಕಾಗಿ ಅಂದರೆ ಮೊದಲನೆಯದಾಗಿ, ಯೆಹೂದ್ಯರನ್ನು ಅನಂತರ ಯೆಹೂದ್ಯರಲ್ಲದವರನ್ನು ಸಹ ರಕ್ಷಿಸುವುದಕ್ಕಾಗಿ ದೇವರು ಸುವಾರ್ತೆ ಎಂಬ ಶಕ್ತಿಯನ್ನು ಉಪಯೋಗಿಸುತ್ತಾನೆ. 17 ಹೇಗೆಂದರೆ, ದೇವರಿಂದ ದೊರೆಯುವ ನೀತಿಯು ಅದರಲ್ಲಿ ತೋರಿಬರುತ್ತದೆ. ಆ ನೀತಿಯು ನಂಬಿಕೆಯ ಫಲವಾಗಿದ್ದು ನಂಬಿಕೆಯನ್ನು ಪ್ರಕಟಿಸುತ್ತದೆ. ಪವಿತ್ರ ಗ್ರಂಥವು ಹೇಳುವಂತೆ, “ನೀತಿವಂತನು ನಂಬಿಕೆಯಿಂದಲೇ ಜೀವಿಸುತ್ತಾನೆ.”(A)
22 ನಂಬಿಕೆಯ ಮೂಲಕವಾಗಿ ಅಂದರೆ ಯೇಸು ಕ್ರಿಸ್ತನಲ್ಲಿ ನಂಬಿಕೆ ಇಡುವ ಎಲ್ಲಾ ಜನರನ್ನು ದೇವರು ನೀತಿವಂತರನ್ನಾಗಿ ಮಾಡುತ್ತಾನೆ. ಆತನಿಗೆ ಎಲ್ಲಾ ಜನರು ಒಂದೇ. 23 ಎಲ್ಲರೂ ಪಾಪಮಾಡಿ ದೇವರ ಮಹಿಮೆಯನ್ನು ಹೊಂದದವರಾಗಿದ್ದಾರೆ. 24 ಅವರು ನೀತಿವಂತರೆಂದು ನಿರ್ಣಯ ಹೊಂದುವುದು ದೇವರ ಉಚಿತಾರ್ಥವರವಾದ ಕೃಪೆಯಿಂದಲೇ. ದೇವರು ಯೇಸು ಕ್ರಿಸ್ತನ ಮೂಲಕವಾಗಿ ಜನರನ್ನು ಪಾಪದಿಂದ ಬಿಡುಗಡೆ ಮಾಡಿ, ನೀತಿವಂತರನ್ನಾಗಿ ಮಾಡುತ್ತಾನೆ. 25 ದೇವರು ನಂಬಿಕೆಯ ಮೂಲಕ ಜನರ ಪಾಪಗಳನ್ನು ಕ್ಷಮಿಸುವ ಮಾರ್ಗವನ್ನು ಮಾಡಿದ್ದಾನೆ. ಆ ಮಾರ್ಗವೇ ಯೇಸು. ದೇವರು ಯೇಸುವಿನ ರಕ್ತದ ಮೂಲಕ ಪಾಪವನ್ನು ಕ್ಷಮಿಸುತ್ತಾನೆ. ದೇವರು ಮಾಡುವಂಥದ್ದು ಯಾವಾಗಲೂ ಸರಿಯಾಗಿರುತ್ತದೆ ಮತ್ತು ನ್ಯಾಯಬದ್ಧವಾಗಿರುತ್ತದೆ ಎಂಬುದನ್ನು ಇದು ತೋರಿಸುತ್ತದೆ. ದೇವರು ಹಿಂದಿನ ಕಾಲದಲ್ಲಿ ತಾಳ್ಮೆಯಿಂದಿದ್ದು ಜನರನ್ನು ಅವರ ಪಾಪಗಳಿಗಾಗಿ ದಂಡಿಸದೆ ಹೋದಾಗಲೂ ದೇವರು ನೀತಿವಂತನಾಗಿದ್ದನು. 26 ಹೀಗೆ ದೇವರು ತಾನೇ ನೀತಿವಂತನೆಂಬುದನ್ನು ಮತ್ತು ಯೇಸುವಿನಲ್ಲಿ ನಂಬಿಕೆಯಿಡುವ ಯಾವನನ್ನೇ ಆಗಲಿ ನೀತಿವಂತನನ್ನಾಗಿ ಮಾಡುತ್ತೇನೆಂಬದನ್ನು ನಿರೂಪಿಸಿದ್ದಾನೆ.
27 ಹೀಗಿರಲು, ನಮ್ಮ ಬಗ್ಗೆ ಹೊಗಳಿಕೊಳ್ಳಲು ನಮಗೆ ಏನಾದರೂ ಕಾರಣಗಳಿವೆಯೋ? ಇಲ್ಲ! ಏಕೆ? ಎಲ್ಲಾ ಹೊಗಳಿಕೆಯನ್ನು ನಿಲ್ಲಿಸುವಂಥದ್ದು ನಂಬಿಕೆಯ ಮಾರ್ಗವೇ ಹೊರತು ಧರ್ಮಶಾಸ್ತ್ರವನ್ನು ಅನುಸರಿಸುವ ಮಾರ್ಗವಲ್ಲ. 28 ಏಕೆಂದರೆ ಒಬ್ಬನು ನೀತಿವಂತನಾಗುವುದು ನಂಬಿಕೆಯ ಮೂಲಕವೇ ಹೊರತು ಧರ್ಮಶಾಸ್ತ್ರವನ್ನು ಅನುಸರಿಸಲು ಅವನು ಮಾಡಿದ ಕಾರ್ಯಗಳಿಂದಲ್ಲ. ನಾವು ನಂಬುವುದೂ ಇದನ್ನೇ.
29 ದೇವರು ಕೇವಲ ಯೆಹೂದ್ಯರ ದೇವರಲ್ಲ. ಆತನು ಯೆಹೂದ್ಯರಲ್ಲದವರಿಗೂ ಸಹ ದೇವರಾಗಿದ್ದಾನೆ. 30 ದೇವರು ಒಬ್ಬನೇ. ಆತನು ಯೆಹೂದ್ಯರನ್ನೂ ಯೆಹೂದ್ಯರಲ್ಲದವರನ್ನೂ ಅವರ ನಂಬಿಕೆಯ ಮೂಲಕ ನೀತಿವಂತರನ್ನಾಗಿ ಮಾಡುತ್ತಾನೆ. 31 ಹೀಗಿರಲು, ನಂಬಿಕೆಯ ಮಾರ್ಗವನ್ನು ಅನುಸರಿಸುವುದರ ಮೂಲಕ ನಾವು ಧರ್ಮಶಾಸ್ತ್ರವನ್ನು ಅಲ್ಲಗಳೆಯುತ್ತೇವೋ? ಇಲ್ಲ! ನಾವು ಧರ್ಮಶಾಸ್ತ್ರವನ್ನು ಸಮರ್ಥಿಸುತ್ತೇವೆ.
21 “‘ನಾನು ಪ್ರಭುವಿನವನು’ ಎಂದು ಹೇಳಿದ ಮಾತ್ರಕ್ಕೆ ಮನುಷ್ಯನು ಪರಲೋಕರಾಜ್ಯಕ್ಕೆ ಪ್ರವೇಶಿಸಲು ಸಾಧ್ಯವಿಲ್ಲ. ಪರಲೋಕದಲ್ಲಿರುವ ನನ್ನ ತಂದೆಯ ಇಷ್ಟದಂತೆ ಮಾಡುವವರೇ ಪರಲೋಕರಾಜ್ಯಕ್ಕೆ ಪ್ರವೇಶಿಸುವರು. 22 ಕೊನೆಯ ದಿನಗಳಲ್ಲಿ ಅನೇಕರು ನನಗೆ, ‘ನೀನೇ ನಮ್ಮ ಪ್ರಭು! ನಿನ್ನ ವಿಷಯವಾಗಿ ನಾವು ಬೋಧಿಸಿದೆವು. ನಿನ್ನ ಹೆಸರಿನ ಮೂಲಕ ದೆವ್ವಗಳನ್ನು ಬಿಡಿಸಿದೆವು ಮತ್ತು ಅನೇಕ ಅದ್ಭುತಕಾರ್ಯಗಳನ್ನು ಮಾಡಿದೆವು’ ಎಂದು ಹೇಳುವರು. 23 ಆದರೆ ನಾನು ಅವರಿಗೆ, ‘ಅಧರ್ಮಿಗಳೇ, ನನ್ನಿಂದ ತೊಲಗಿರಿ. ನೀವು ಯಾರೋ ನನಗೆ ತಿಳಿಯದು’ ಎಂದು ಸ್ಪಷ್ಟವಾಗಿ ಹೇಳಿಬಿಡುವೆನು.
ಬುದ್ಧಿವಂತ ಮತ್ತು ಬುದ್ಧಿಹೀನ
(ಲೂಕ 6:47-49)
24 “ನನ್ನ ಈ ಮಾತುಗಳನ್ನು ಕೇಳಿ ಅವುಗಳಿಗೆ ವಿಧೇಯನಾಗಿರುವ ಪ್ರತಿಯೊಬ್ಬನೂ ತನ್ನ ಮನೆಯನ್ನು ಬಂಡೆಯ ಮೇಲೆ ಕಟ್ಟಿದ ಬುದ್ಧಿವಂತನಿಗೆ ಹೋಲಿಕೆಯಾಗಿದ್ದಾನೆ. 25 ಬಿರುಸಾದ ಮಳೆಯು ಸುರಿದು ನೀರು ಮೇಲಕ್ಕೆ ಏರುತ್ತದೆ. ಗಾಳಿ ಬೀಸಿ ಆ ಮನೆಗೆ ಬಡಿಯುತ್ತದೆ. ಆದರೆ ಆ ಮನೆಯನ್ನು ಬಂಡೆಯ ಮೇಲೆ ಕಟ್ಟಿದ್ದರಿಂದ ಅದು ಬೀಳಲಿಲ್ಲ.
26 “ಆದರೆ ನನ್ನ ಮಾತುಗಳನ್ನು ಕೇಳಿಯೂ ಅವುಗಳಿಗೆ ವಿಧೇಯನಾಗದವನು ಬುದ್ಧಿಹೀನನಾಗಿದ್ದಾನೆ. ಆ ಬುದ್ಧಿಹೀನನು ಮರಳಿನ ಮೇಲೆ ತನ್ನ ಮನೆಯನ್ನು ಕಟ್ಟಿದನು. 27 ಬಿರುಸಾದ ಮಳೆ ಸುರಿದು ನೀರು ಮೇಲಕ್ಕೆ ಏರಿತು, ಗಾಳಿ ಬೀಸಿ ಆ ಮನೆಗೆ ಬಡಿಯಿತು. ಆಗ ಆ ಮನೆಯು ಕುಸಿದು ಬಿತ್ತು.”
28 ಯೇಸು ಉಪದೇಶಿಸಿದ ಈ ಸಂಗತಿಗಳನ್ನು ಕೇಳಿ ಜನರು ಅತ್ಯಾಶ್ಚರ್ಯಪಟ್ಟರು. 29 ಏಕೆಂದರೆ, ಆತನು ಧರ್ಮೋಪದೇಶಕರಂತೆ ಉಪದೇಶಿಸದೆ ಅಧಿಕಾರವಿದ್ದವನಂತೆ ಉಪದೇಶಿಸಿದನು.
Kannada Holy Bible: Easy-to-Read Version. All rights reserved. © 1997 Bible League International