Revised Common Lectionary (Complementary)
111 ಯೆಹೋವನಿಗೆ ಸ್ತೋತ್ರವಾಗಲಿ!
ನೀತಿವಂತರ ಸಭೆಯಲ್ಲಿ ನಾನು ಪೂರ್ಣಹೃದಯದಿಂದ
ಯೆಹೋವನಿಗೆ ಕೃತಜ್ಞತಾಸ್ತುತಿ ಮಾಡುವೆನು.
2 ಯೆಹೋವನು ಮಹತ್ಕಾರ್ಯಗಳನ್ನು ಮಾಡುವನು.
ಜನರು ಅವುಗಳಲ್ಲಿ ಸಂತೋಷಿಸುತ್ತಾ ಅವುಗಳನ್ನೇ ಧ್ಯಾನಿಸುವರು.
3 ಆತನು ಮಹತ್ವವಾದ ಮತ್ತು ಅದ್ಭುತವಾದ ಕಾರ್ಯಗಳನ್ನು ಮಾಡುವನು.
ಆತನ ನೀತಿಯು ಶಾಶ್ವತವಾದದ್ದು.
4 ದೇವರು ಅಮೋಘವಾದ ಕಾರ್ಯಗಳನ್ನು ಮಾಡುವುದರಿಂದ
ಆತನ ದಯೆಯನ್ನೂ ಕೃಪೆಯನ್ನೂ ಜ್ಞಾಪಿಸಿಕೊಳ್ಳುತ್ತೇವೆ.
5 ಆತನು ತನ್ನ ಭಕ್ತರಿಗೆ ಆಹಾರವನ್ನು ಒದಗಿಸುವನು;
ಆತನು ತನ್ನ ಒಡಂಬಡಿಕೆಯನ್ನು ಯಾವಾಗಲೂ ಜ್ಞಾಪಿಸಿಕೊಳ್ಳುವನು.
6 ಆತನು ಅನ್ಯಜನಾಂಗಗಳ ದೇಶವನ್ನು
ತನ್ನ ಜನರಿಗೆ ಕೊಡುವುದರ ಮೂಲಕ ಪ್ರಬಲವಾದ ಕಾರ್ಯಗಳನ್ನು ಮಾಡಿದ್ದಾನೆ.
7 ಆತನ ಪ್ರತಿಯೊಂದು ಕಾರ್ಯವು ಒಳ್ಳೆಯದೂ ನ್ಯಾಯವಾದದ್ದೂ ಆಗಿದೆ.
ಆತನ ಆಜ್ಞೆಗಳೆಲ್ಲಾ ನಂಬಿಕೆಗೆ ಯೋಗ್ಯವಾಗಿವೆ.
8 ದೇವರ ಆಜ್ಞೆಗಳು ಶಾಶ್ವತವಾಗಿವೆ.
ಅವು ಯಥಾರ್ಥವಾಗಿಯೂ ಮತ್ತು ಶುದ್ಧವಾಗಿಯೂ ಇವೆ.
9 ಆತನು ತನ್ನ ಜನರನ್ನು ರಕ್ಷಿಸಿ ಅವರೊಂದಿಗೆ ಶಾಶ್ವತವಾದ ಒಡಂಬಡಿಕೆಯನ್ನು ಮಾಡಿಕೊಂಡಿದ್ದಾನೆ.
ಆತನ ಹೆಸರು ಅದ್ಭುತವಾಗಿಯೂ ಪರಿಶುದ್ಧವಾಗಿಯೂ ಇದೆ.
10 ಯೆಹೋವನ ಮೇಲಿರುವ ಭಯಭಕ್ತಿಗಳಿಂದಲೇ ಜ್ಞಾನವು ಆರಂಭವಾಗುತ್ತದೆ.
ಆತನಲ್ಲಿ ಭಯಭಕ್ತಿಯುಳ್ಳವರು ಜ್ಞಾನಪೂರ್ಣರಾಗಿದ್ದಾರೆ.
ಆತನಿಗೆ ಸದಾಕಾಲ ಸ್ತೋತ್ರವಾಗಲಿ.
ಲೇವಿ ಕುಟುಂಬಗಳು
34-35 ಮೋಶೆ ಆರೋನರೂ, ಸಮುದಾಯದ ಪ್ರಧಾನರೂ ಕುಲ ಮತ್ತು ಕುಟುಂಬಗಳಿಗನುಗುಣವಾಗಿ ಕೆಹಾತ್ಯರಲ್ಲಿ ಮೂವತ್ತು ವರ್ಷದಿಂದ ಮೊದಲುಗೊಂಡು ಐವತ್ತು ವರ್ಷದೊಳಗಿರುವ ಗಂಡಸರನ್ನು ಲೆಕ್ಕಿಸಿದರು. ದೇವದರ್ಶನಗುಡಾರಕ್ಕೋಸ್ಕರ ಸೇವೆಯ ದಳದಲ್ಲಿ ಕೆಲಸ ಮಾಡಲು ಯೋಗ್ಯರಾದ ಗಂಡಸರನ್ನೇ ಅವರು ಲೆಕ್ಕಿಸಿದರು.
36 ಅವರಲ್ಲಿ ಈ ಕೆಲಸವನ್ನು ಮಾಡಲು ಅರ್ಹರಾಗಿ ಗೋತ್ರ ಕುಟುಂಬಗಳ ಪ್ರಕಾರ ಲೆಕ್ಕಿಸಲ್ಪಟ್ಟವರು 2,750 ಮಂದಿ. 37 ಯೆಹೋವನು ಮೋಶೆಗೆ ಆಜ್ಞಾಪಿಸಿದ ಪ್ರಕಾರ ಮೋಶೆ ಆರೋನರು ಕೆಹಾತ್ಯರನ್ನು ಲೆಕ್ಕಿಸಲಾಗಿ ಅವರಲ್ಲಿ ದೇವದರ್ಶನಗುಡಾರಕ್ಕೆ ಸಂಬಂಧಪಟ್ಟ ಕೆಲಸವನ್ನು ಮಾಡತಕ್ಕವರು ಇವರೇ.
38-39 ಗೇರ್ಷೋನ್ಯರಲ್ಲಿಯೂ ಮೂವತ್ತು ವರ್ಷ ಮೊದಲುಗೊಂಡು ಐವತ್ತು ವರ್ಷದೊಳಗಿರುವ ಮತ್ತು ದೇವದರ್ಶನಗುಡಾರಕ್ಕೋಸ್ಕರ ಸೇವೆಯ ದಳದಲ್ಲಿ ಕೆಲಸ ಮಾಡಲು ಯೋಗ್ಯರಾದ ಗಂಡಸರನ್ನು ಕುಲ ಮತ್ತು ಕುಟುಂಬಗಳಿಗನುಗುಣವಾಗಿ ಲೆಕ್ಕಿಸಲಾಯಿತು. 40 ಅವರ ಸಂಖ್ಯೆ 2,630. 41 ಯೆಹೋವನ ಅಪ್ಪಣೆಯ ಮೇರೆಗೆ ಮೋಶೆ ಆರೋನರು ಗೇರ್ಷೋನ್ಯರನ್ನು ಲೆಕ್ಕಿಸಿದರು. ಅವರಲ್ಲಿ ದೇವದರ್ಶನಗುಡಾರದ ವಿಶೇಷ ಕೆಲಸವನ್ನು ಮಾಡತಕ್ಕವರು ಇವರೇ.
42-43 ಮೆರಾರೀಯರಲ್ಲಿಯೂ ಮೂವತ್ತರಿಂದ ಐವತ್ತು ವರ್ಷದ ಒಳಗಿರುವ ಮತ್ತು ದೇವದರ್ಶನ ಗುಡಾರಕ್ಕೋಸ್ಕರ ಸೇವೆಯ ದಳದಲ್ಲಿ ಕೆಲಸಮಾಡಲು ಯೋಗ್ಯರಾದ ಗಂಡಸರನ್ನು ಕುಲ ಮತ್ತು ಕುಟುಂಬಗಳಿಗೆ ಅನುಗುಣವಾಗಿ ಲೆಕ್ಕಿಸಲಾಯಿತು. 44 ಅವರ ಒಟ್ಟು ಸಂಖ್ಯೆ 3,200. 45 ಯೆಹೋವನ ಅಪ್ಪಣೆಯ ಮೇರೆಗೆ ಮೋಶೆ ಆರೋನರು ಅವರನ್ನು ಲೆಕ್ಕಿಸಿದರು. ಮೆರಾರೀಯರ ಕುಲಗಳಿಂದ ಈ ಗಂಡಸರನ್ನು ದಾಖಲಾತಿ ಮಾಡಿಕೊಳ್ಳಲಾಯಿತು.
46 ಹೀಗೆ ಮೋಶೆ ಆರೋನರು ಇಸ್ರೇಲರ ಪ್ರಧಾನರನ್ನೂ ಎಲ್ಲಾ ಲೇವಿಯರನ್ನೂ ಕುಲ ಮತ್ತು ಕುಟುಂಬಗಳಿಗೆ ಅನುಗುಣವಾಗಿ ಲೆಕ್ಕಿಸಿದರು. 47 ಮೂವತ್ತರಿಂದ ಐವತ್ತು ವರ್ಷದೊಳಗಿರುವ ಮತ್ತು ದೇವದರ್ಶನಗುಡಾರಕ್ಕೆ ಸಂಬಂಧಿಸಿದ ವಸ್ತುಗಳನ್ನು ವರ್ಗಾವಣೆಗಾಗಿ ಕಟ್ಟುವುದಕ್ಕೂ ವರ್ಗಾವಣೆಯ ಕೆಲಸಕ್ಕೂ ಯೋಗ್ಯರಾದ ಎಲ್ಲಾ ಗಂಡಸರನ್ನು ಲೆಕ್ಕಿಸಿದರು. 48 ಅವರ ಒಟ್ಟು ಸಂಖ್ಯೆ 8,580. 49 ಹೀಗೆ ಯೆಹೋವನು ಮೋಶೆಗೆ ಆಜ್ಞಾಪಿಸಿದ ಮೇರೆಗೆ ಅವನಿಂದ ಪ್ರತಿಯೊಬ್ಬನೂ ಲೆಕ್ಕಿಸಲ್ಪಟ್ಟನು. ಪ್ರತಿಯೊಬ್ಬನಿಗೂ ವರ್ಗಾವಣೆಗಾಗಿ ವಸ್ತುಗಳನ್ನು ಕಟ್ಟುವ ಮತ್ತು ವರ್ಗಾವಣೆ ಕೆಲಸದ ಕರ್ತವ್ಯಗಳನ್ನು ಗೊತ್ತುಪಡಿಸಲಾಯಿತು. ಯೆಹೋವನು ಆಜ್ಞಾಪಿಸಿದ ಮೇರೆಗೆ ಇದು ಮಾಡಲ್ಪಟ್ಟಿತು.
ಶುದ್ಧಾಚಾರದ ಕುರಿತು ನಿಯಮಗಳು
5 ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: 2 “ಭಯಂಕರವಾದ ಚರ್ಮರೋಗವುಳ್ಳವರನ್ನೂ ದೈಹಿಕಸ್ರಾವವುಳ್ಳವರನ್ನೂ ಹೆಣದ ಸೋಂಕಿನಿಂದ ಅಶುದ್ಧರಾದವರನ್ನೂ ಪಾಳೆಯದಿಂದ ಹೊರಗಿಡಬೇಕೆಂದು ಇಸ್ರೇಲರಿಗೆ ಆಜ್ಞಾಪಿಸು. 3 ಅಂಥವರು ಗಂಡಸರೇ ಆಗಲಿ ಹೆಂಗಸರೇ ಆಗಲಿ ಅವರೆಲ್ಲರನ್ನೂ ಪಾಳೆಯದಿಂದ ಹೊರಡಿಸಬೇಕು. ನಾನೇ ಅವರ ಪಾಳೆಯದಲ್ಲಿ ವಾಸಮಾಡುವುದರಿಂದ ಅವರು ಅದನ್ನು ಅಪವಿತ್ರ ಮಾಡಬಾರದು.”
4 ಯೆಹೋವನ ಅಪ್ಪಣೆಯ ಮೇರೆಗೆ ಇಸ್ರೇಲರು ತಮ್ಮಲ್ಲಿರುವ ಅಂಥವರೆಲ್ಲರನ್ನೂ ಪಾಳೆಯದ ಹೊರಗಿರಿಸಿದರು. ಯೆಹೋವನು ಮೋಶೆಗೆ ಆಜ್ಞಾಪಿಸಿದಂತೆಯೇ ಅವರು ಮಾಡಿದರು.
ಕ್ರಿಸ್ತ ಯೇಸುವಿನ ನಿಷ್ಠಾವಂತ ಸೈನಿಕ
2 ಕ್ರಿಸ್ತ ಯೇಸುವಿನ ನಿಷ್ಠಾವಂತ ಸೈನಿಕನಾಗಿರುವ ತಿಮೊಥೆಯನೇ, ನೀನು ನನಗೆ ಮಗನಂತಿರುವೆ. ಕ್ರಿಸ್ತ ಯೇಸುವಿನಲ್ಲಿರುವ ಕೃಪೆಯಿಂದ ಬಲ ಹೊಂದಿದವನಾಗು. 2 ನಾನು ಉಪದೇಶಿಸಿದ ಸಂಗತಿಗಳನ್ನು ನೀನು ಕೇಳಿರುವೆ. ಅವುಗಳನ್ನು ಇತರ ಅನೇಕ ಜನರೂ ಕೇಳಿದ್ದಾರೆ. ನೀನು ಆ ಸಂಗತಿಗಳನ್ನು ಉಪದೇಶಿಸಬೇಕು. ನಿನಗೆ ನಂಬಿಗಸ್ತರಾದ ಕೆಲವರ ವಶಕ್ಕೆ ಆ ಉಪದೇಶಗಳನ್ನು ಕೊಡು. ಆಗ ಅವರು ಆ ಸಂಗತಿಗಳನ್ನು ಇತರರಿಗೆ ಉಪದೇಶಿಸಲು ಸಾಧ್ಯವಾಗುತ್ತದೆ. 3 ನಮಗಿರುವ ತೊಂದರೆಗಳಲ್ಲಿ ನೀನೂ ಪಾಲುಗಾರನಾಗು. ಕ್ರಿಸ್ತ ಯೇಸುವಿನ ನಿಜವಾದ ಸೈನಿಕನಂತೆ ಆ ತೊಂದರೆಗಳನ್ನು ಸ್ವೀಕರಿಸು. 4 ಸೈನಿಕನು ತನ್ನ ಸೈನ್ಯಾಧಿಕಾರಿಯನ್ನು ಮೆಚ್ಚಿಸಲು ಇಷ್ಟಪಡುತ್ತಾನೆ. ಆದ್ದರಿಂದ ಆ ಸೈನಿಕನು ಲೋಕವ್ಯವಹಾರದಲ್ಲಿ ಸಿಕ್ಕಿಕೊಳ್ಳದಂತೆ ಎಚ್ಚರಿಕೆಯಿಂದಿರುವನು. 5 ಓಟದ ಸ್ಪರ್ಧೆಯಲ್ಲಿ ಗೆಲ್ಲಬೇಕಾದರೆ, ಓಟಗಾರನು ಎಲ್ಲಾ ನಿಯಮಗಳನ್ನು ಪಾಲಿಸಬೇಕು. 6 ಕಷ್ಟಪಟ್ಟು ಕೆಲಸಮಾಡುವ ರೈತನಿಗೆ ಬೆಳೆಯ ಪ್ರಥಮ ಪಾಲು ದೊರೆಯಬೇಕು. 7 ನಾನು ಹೇಳುತ್ತಿರುವ ಈ ಸಂಗತಿಗಳನ್ನು ಕುರಿತು ಆಲೋಚಿಸು. ಈ ಸಂಗತಿಗಳನ್ನೆಲ್ಲ ಅರ್ಥಮಾಡಿಕೊಳ್ಳುವ ವಿವೇಕವನ್ನು ಪ್ರಭುವು ನಿನಗೆ ದಯಪಾಲಿಸುವನು.
Kannada Holy Bible: Easy-to-Read Version. All rights reserved. © 1997 Bible League International