Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 101

ರಚನೆಗಾರ: ದಾವೀದ.

101 ಆತನ ಪ್ರೀತಿಯನ್ನೂ ನೀತಿಯನ್ನೂ ಹಾಡಿಹರಸುವೆನು.
    ಯೆಹೋವನೇ, ನಿನಗೆ ಗಾಯನ ಮಾಡುವೆನು.
ನಾನು ಎಚ್ಚರಿಕೆಯಿಂದ ಪರಿಶುದ್ಧನಾಗಿ ಜೀವಿಸುವೆನು;
    ನನ್ನ ಮನೆಯಲ್ಲೂ ಪರಿಶುದ್ಧನಾಗಿರುವೆನು.
    ನೀನು ನನ್ನ ಬಳಿಗೆ ಬರುವುದು ಯಾವಾಗ?
ನನ್ನ ಎದುರಿನಲ್ಲಿ ಯಾವ ವಿಗ್ರಹಗಳೂ ಇಲ್ಲ.
    ನಿನಗೆ ದ್ರೋಹಮಾಡುವವರು ನನಗೆ ಅಸಹ್ಯ.
    ನಾನು ಅವರಂತೆ ಮಾಡುವುದಿಲ್ಲ!
ನಾನು ನಿನಗೆ ಯಥಾರ್ಥನಾಗಿರುವೆನು;
    ದುಷ್ಕೃತ್ಯಗಳನ್ನು ಮಾಡುವುದಿಲ್ಲ.
ನೆರೆಯವನ ಕುರಿತು ಗುಟ್ಟಾಗಿ
    ಚಾಡಿ ಹೇಳುವವನನ್ನು ನಾನು ತಡೆಯುವೆನು.
ಗರ್ವಪಡುವುದಕ್ಕಾಗಲಿ ತಮ್ಮನ್ನೇ ಉತ್ತಮರೆಂದು ಭಾವಿಸಿಕೊಳ್ಳುವುದಕ್ಕಾಗಲಿ
    ನಾನು ಅವರಿಗೆ ಅವಕಾಶ ಕೊಡುವುದಿಲ್ಲ.

ನಂಬಿಗಸ್ತರಿಗಾಗಿ ದೇಶದಲ್ಲೆಲ್ಲಾ ಹುಡುಕಿ ನೋಡುತ್ತೇನೆ.
    ನನ್ನ ಸೇವೆಗೆ ಅವರನ್ನೇ ನೇಮಿಸಿಕೊಳ್ಳುವೆನು.
    ಪರಿಶುದ್ಧರು ಮಾತ್ರ ನನ್ನ ಸೇವಕರಾಗಿರಲು ಸಾಧ್ಯ.
ನನ್ನ ಮನೆಯಲ್ಲಿ ವಾಸಿಸುವ ಸುಳ್ಳುಗಾರರಿಗೆ ಅವಕಾಶ ಕೊಡುವುದಿಲ್ಲ.
    ನನ್ನ ಸಮೀಪದಲ್ಲಿ ಇರುವುದಕ್ಕೂ ನಾನು ಅವರಿಗೆ ಆಸ್ಪದ ಕೊಡುವುದಿಲ್ಲ.
ಈ ದೇಶದಲ್ಲಿರುವ ದುಷ್ಟರನ್ನು ನಾನು ನಾಶಮಾಡುತ್ತೇನೆ.
    ಯೆಹೋವನ ಪಟ್ಟಣದಿಂದ ಕೆಡುಕರನ್ನು ಓಡಿಸುತ್ತೇನೆ.

2 ರಾಜರುಗಳು 18:9-18

ಸಮಾರ್ಯಕ್ಕೆ ಅಶ್ಶೂರದವರ ಮುತ್ತಿಗೆ

ಅಶ್ಶೂರದ ರಾಜನಾದ ಶಲ್ಮನೆಸರನು ಸಮಾರ್ಯದ ವಿರುದ್ಧ ಹೋರಾಡಲು ಹೋದನು. ಅವನ ಸೈನ್ಯವು ನಗರವನ್ನು ಸುತ್ತುವರಿಯಿತು. ಹಿಜ್ಕೀಯನು ಯೆಹೂದದ ರಾಜನಾಗಿದ್ದ ನಾಲ್ಕನೆಯ ವರ್ಷದಲ್ಲಿ ಇದು ಸಂಭವಿಸಿತು. (ಅದು ಏಲನ ಮಗನಾದ ಹೋಶೇಯನು ಇಸ್ರೇಲಿನ ರಾಜನಾಗಿ ಆಳುತ್ತಿದ್ದ ಏಳನೆಯ ವರ್ಷದಲ್ಲಿ ಸಂಭವಿಸಿತು.) 10 ಮೂರು ವರ್ಷಗಳ ಕೊನೆಯಲ್ಲಿ ಶಲ್ಮನೆಸರನು ಸಮಾರ್ಯವನ್ನು ವಶಪಡಿಸಿಕೊಂಡನು. ಹಿಜ್ಕೀಯನು ಯೆಹೂದದ ರಾಜನಾಗಿದ್ದ ಆರನೆಯ ವರ್ಷದಲ್ಲಿ ಅವನು ಸಮಾರ್ಯವನ್ನು ವಶಪಡಿಸಿಕೊಂಡನು. (ಹೋಶೇಯನು ಇಸ್ರೇಲಿನ ರಾಜನಾಗಿ ಆಳುತ್ತಿದ್ದ ಒಂಭತ್ತನೆಯ ವರ್ಷದಲ್ಲಿ ಇದು ಸಂಭವಿಸಿತು.) 11 ಅಶ್ಶೂರದ ರಾಜನು ಇಸ್ರೇಲರನ್ನು, ಸೆರೆಯಾಳುಗಳನ್ನಾಗಿ ಅಶ್ಶೂರಿಗೆ ಒಯ್ದನು. ಅವನು ಅವರನ್ನು ಹಲಹು ಎಂಬ ಪ್ರಾಂತದಲ್ಲಿಯೂ ಹಾಬೋರ್ ಹೊಳೆಯಿರುವ ಗೋಜಾನ್ ಪ್ರಾಂತದಲ್ಲಿಯೂ ಮೇದ್ಯರ ನಗರಗಳಲ್ಲಿಯೂ ವಾಸಿಸುವಂತೆ ಮಾಡಿದನು. 12 ಇಸ್ರೇಲರು ತಮ್ಮ ದೇವರಾದ ಯೆಹೋವನಿಗೆ ಅವಿಧೇಯರಾದದ್ದೂ ಆತನ ಒಡಂಬಡಿಕೆಯನ್ನು ಉಲ್ಲಂಘಿಸಿದ್ದೂ ಆತನ ಸೇವಕನಾದ ಮೋಶೆಯ ಆಜ್ಞೆಗಳಿಗೆ ಅವಿಧೇಯರಾದದ್ದೂ ಇದಕ್ಕೆ ಕಾರಣ.

ಯೆಹೂದವನ್ನು ವಶಪಡಿಸಿಕೊಳ್ಳಲು ಅಶ್ಶೂರದವರು ಸಿದ್ಧರಾದರು

13 ಹಿಜ್ಕೀಯನು ರಾಜನಾಗಿದ್ದ ಹದಿನಾಲ್ಕನೆಯ ವರ್ಷದಲ್ಲಿ ಅಶ್ಶೂರದ ರಾಜನಾದ ಸನ್ಹೇರೀಬನು ಯೆಹೂದದ ಬಲಾಢ್ಯ ನಗರಗಳ ವಿರುದ್ಧವಾಗಿ ಹೋರಾಡಲು ಹೋದನು. ಸನ್ಹೇರೀಬನು ಆ ನಗರಗಳನ್ನೆಲ್ಲ ಸೋಲಿಸಿದನು. 14 ಆಗ ಯೆಹೂದದ ರಾಜನಾದ ಹಿಜ್ಕೀಯನು ಲಾಕೀಷಿನಲ್ಲಿದ್ದ ಅಶ್ಶೂರದ ರಾಜನಿಗೆ ಒಂದು ಸಂದೇಶವನ್ನು ಕಳುಹಿಸಿದನು. ಹಿಜ್ಕೀಯನು, “ನಾನು ತಪ್ಪು ಮಾಡಿದ್ದೇನೆ. ನನ್ನನ್ನು ಒಬ್ಬಂಟಿಗನನ್ನಾಗಿ ಬಿಡು. ನಂತರ ನೀನು ಅಪೇಕ್ಷಿಸಿದ್ದನ್ನೆಲ್ಲಾ ಕೊಡುತ್ತೇನೆ” ಎಂದು ಹೇಳಿದನು.

ಆಗ ಅಶ್ಶೂರದ ರಾಜನು ಯೆಹೂದದ ರಾಜನಾದ ಹಿಜ್ಕೀಯನಿಗೆ ಸುಮಾರು ಹನ್ನೊಂದು ಟನ್ ಬೆಳ್ಳಿಯನ್ನು ಮತ್ತು ಒಂದು ಟನ್ ಚಿನ್ನವನ್ನು ಕೊಡುವಂತೆ ಹೇಳಿದನು. 15 ಹಿಜ್ಕೀಯನು ದೇವಾಲಯದಲ್ಲಿದ್ದ ಮತ್ತು ರಾಜನ ಭಂಡಾರದಲ್ಲಿದ್ದ ಬೆಳ್ಳಿಯನ್ನೆಲ್ಲ ನೀಡಿದನು. 16 ಈ ಸಮಯದಲ್ಲಿ, ಹಿಜ್ಕೀಯನು ಯೆಹೋವನ ಆಲಯದ ಬಾಗಿಲುಗಳಿಗೆ ಮತ್ತು ಕದಗಳಿಗೆ ಹೊದಿಸಿದ್ದ ಬಂಗಾರವನ್ನು ಕತ್ತರಿಸಿಹಾಕಿದನು. ರಾಜನಾದ ಹಿಜ್ಕೀಯನು ಈ ಬಾಗಿಲುಗಳ ಮತ್ತು ಕದಗಳ ಮೇಲೆ ಬಂಗಾರವನ್ನು ಹೊದಿಸಿದ್ದನು. ಹಿಜ್ಕೀಯನು ಈ ಬಂಗಾರವನ್ನು ಅಶ್ಶೂರದ ರಾಜನಿಗೆ ನೀಡಿದನು.

ಅಶ್ಶೂರದ ರಾಜನು ಜೆರುಸಲೇಮಿಗೆ ಜನರನ್ನು ಕಳುಹಿಸಿದನು

17 ಅಶ್ಶೂರದ ರಾಜ ಜೆರುಸಲೇಮಿನಲ್ಲಿದ್ದ ರಾಜನಾದ ಹಿಜ್ಕೀಯನ ಬಳಿಗೆ ತನ್ನ ಮೂವರು ಮಹಾಸೇನಾಧಿಪತಿಗಳಾದ ತರ್ತಾನ್, ರಬ್ಸಾರೀಸ್, ರಬ್ಷಾಕೆ ಎಂಬವರನ್ನು ಮಹಾಸೈನ್ಯದೊಂದಿಗೆ ಕಳುಹಿಸಿದನು. ಅವರು ಲಾಕೀಷಿನಿಂದ ಜೆರುಸಲೇಮಿಗೆ ಹೋದರು. ಅವರು ಮೇಲಿನ ಕೆರೆಯ ನೀರಿನ ಕೊಳವೆಯ ಬಳಿ ನಿಂತರು. (ಮೇಲಿನ ಕೆರೆಯು ರಸ್ತೆಯ ಮೇಲೆ ದೋಭಿಘಾಟ್ ಬಳಿಯಿತ್ತು.) 18 ಈ ಜನರು ರಾಜನನ್ನು ಕರೆದರು. ಹಿಲ್ಕೀಯನ ಮಗನೂ ರಾಜಗೃಹಾಧಿಪತಿಯೂ ಅದ ಎಲ್ಯಾಕೀಮ್, ಕಾರ್ಯದರ್ಶಿಯಾದ ಶೆಬ್ನ, ಆಸಾಫನ ಮಗನೂ ಮಂತ್ರಿಯೂ ಆಗಿದ್ದ ಯೋವ ಅವರನ್ನು ಭೇಟಿಮಾಡಲು ಹೊರಗೆ ಬಂದರು.

1 ತಿಮೊಥೆಯನಿಗೆ 4:6-16

ಕ್ರಿಸ್ತ ಯೇಸುವಿನ ಒಳ್ಳೆಯ ಸೇವಕನಾಗಿರು

ಅಲ್ಲಿರುವ ಸಹೋದರ ಸಹೋದರಿಯರಿಗೆ ಈ ಸಂಗತಿಗಳನ್ನು ತಿಳಿಸಿದರೆ, ನೀನು ಕ್ರಿಸ್ತ ಯೇಸುವಿನ ಒಳ್ಳೆಯ ಸೇವಕನಾಗಿರುವೆ ಎಂಬುದನ್ನೂ ನಂಬಿಕೆಯ ನುಡಿಗಳಿಂದ ಮತ್ತು ಉತ್ತಮ ಉಪದೇಶಗಳನ್ನು ಅನುಸರಿಸಿದ್ದರಿಂದ ಬಲಗೊಂಡಿರುವೆ ಎಂಬುದನ್ನೂ ತೋರಿಸಿದಂತಾಗುತ್ತದೆ. ದೇವರ ಸತ್ಯಕ್ಕೆ ಹೊಂದಿಕೆಯಾಗದ ಕ್ಷುಲ್ಲಕ ಕಥೆಗಳನ್ನು ಜನರು ಹೇಳುತ್ತಾರೆ. ಆ ಕಥೆಗಳ ಬೋಧನೆಯನ್ನು ಅನುಸರಿಸಬೇಡ. ದೇವರಿಗೆ ನಿಜವಾದ ಸೇವೆ ಮಾಡಲು ನಿನಗೆ ನೀನೇ ಬೋಧಿಸಿಕೊ. ನೀನು ದೇಹವನ್ನು ಪಳಗಿಸಿಕೊಂಡರೆ ನಿನಗೆ ಕೆಲವು ರೀತಿಯಲ್ಲಿ ಸಹಾಯಕವಾಗುವುದು. ಆದರೆ ದೇವರ ಸೇವೆಯು ನಿನಗೆ ಎಲ್ಲಾ ರೀತಿಯಲ್ಲಿಯೂ ಸಹಾಯಕವಾಗುವುದು. ದೇವರ ಸೇವೆಯು ಇಹಪರಗಳೆರಡರಲ್ಲೂ ನಿನಗೆ ಆಶೀರ್ವಾದವನ್ನು ಉಂಟು ಮಾಡುವುದು. ಈ ಸಂಗತಿಯು ನಂಬತಕ್ಕದ್ದೂ ಸರ್ವಾಂಗಿಕಾರಕ್ಕೆ ಯೋಗ್ಯವಾದದ್ದೂ ಆಗಿದೆ. 10 ಆದಕಾರಣವೇ, ನಾವು ಜೀವಸ್ವರೂಪನಾದ ದೇವರ ಮೇಲೆ ನಿರೀಕ್ಷೆಯಿಟ್ಟು ದುಡಿಯುತ್ತಿದ್ದೇವೆ ಮತ್ತು ಹೋರಾಡುತ್ತಿದ್ದೇವೆ. ಆತನು ಎಲ್ಲಾ ಜನರಿಗೆ ರಕ್ಷಕನಾಗಿದ್ದಾನೆ. ತನ್ನಲ್ಲಿ ನಂಬಿಕೆಯಿಡುವ ಜನರಿಗೆಲ್ಲಾ ಆತನು ವಿಶೇಷವಾದ ರೀತಿಯಲ್ಲಿ ರಕ್ಷಕನಾಗಿದ್ದಾನೆ.

11 ಇವುಗಳನ್ನು ಆಜ್ಞಾಪಿಸು ಮತ್ತು ಬೋಧಿಸು. 12 ನೀನು ಯೌವನಸ್ಥನಾಗಿರುವುದರಿಂದ ನಿನ್ನನ್ನು ಪ್ರಮುಖನಲ್ಲವೆಂದು ಪರಿಗಣಿಸಿ ಅಸಡ್ಡೆಮಾಡಲು ಯಾರಿಗೂ ಅವಕಾಶಕೊಡದಿರು. ವಿಶ್ವಾಸಿಗಳು ಹೇಗೆ ಜೀವಿಸಬೇಕೆಂಬುದಕ್ಕೆ ನೀನೇ ಅವರಿಗೆ ಮಾದರಿಯಾಗಿರು. ನಡೆನುಡಿಗಳಲ್ಲಿ, ಪ್ರೀತಿಯಲ್ಲಿ, ನಂಬಿಕೆಯಲ್ಲಿ ಮತ್ತು ಪರಿಶುದ್ಧ ಜೀವನದಲ್ಲಿ ನೀನೇ ಅವರಿಗೆ ಮಾದರಿಯಾಗಿರು.

13 ದೇವರ ವಾಕ್ಯವನ್ನು ಜನರಿಗೆ ಓದಿಹೇಳಿ ಅವರನ್ನು ಬಲಪಡಿಸು ಮತ್ತು ಅವರಿಗೆ ಬೋಧಿಸು. ನಾನು ಬರುವತನಕ ಈ ಕಾರ್ಯಗಳನ್ನು ಮಾಡುತ್ತಿರು. 14 ನಿನ್ನಲ್ಲಿರುವ ವರವನ್ನು ಜ್ಞಾಪಿಸಿಕೊಳ್ಳುತ್ತಿರು. ಸಭೆಯ ಹಿರಿಯರು ಪ್ರವಾದನೆಗಳೊಂದಿಗೆ ತಮ್ಮ ಕೈಗಳನ್ನು ನಿನ್ನ ಮೇಲಿಟ್ಟಾಗ ಆ ವರವು ನಿನಗೆ ಕೊಡಲ್ಪಟ್ಟಿತು. 15 ಈ ಕಾರ್ಯಗಳನ್ನು ಮಾಡುತ್ತಲೇ ಇರು. ಈ ಕಾರ್ಯಗಳನ್ನು ಮಾಡಲು ನಿನ್ನ ಜೀವನವನ್ನು ಮುಡಿಪಾಗಿಡು. ಆಗ ನಿನ್ನ ಕಾರ್ಯವು ಅಭಿವೃದ್ಧಿಗೊಳ್ಳುತ್ತಿರುವುದನ್ನು ಜನರೆಲ್ಲರೂ ನೋಡುವರು. 16 ನಿನ್ನ ಜೀವನದಲ್ಲಿಯೂ ನಿನ್ನ ಬೋಧನೆಯಲ್ಲಿಯೂ ಎಚ್ಚರಿಕೆಯಿಂದಿರು. ಯೋಗ್ಯವಾದ ರೀತಿಯಲ್ಲಿ ಜೀವಿಸುತ್ತಾ ಬೋಧಿಸು. ಆಗ ನೀನು, ನಿನ್ನನ್ನೂ ನಿನ್ನ ಬೋಧನೆ ಕೇಳುವವರನ್ನೂ ರಕ್ಷಿಸುವೆ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International