Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 130

ದೇವಾಲಯಕ್ಕೆ ಹೋಗುವಾಗ ಹಾಡುವ ಗೀತೆ.

130 ಯೆಹೋವನೇ, ಮಹಾ ಇಕ್ಕಟ್ಟಿನಲ್ಲಿ ಸಿಕ್ಕಿಕೊಂಡಿದ್ದೇನೆ;
    ಸಹಾಯಕ್ಕಾಗಿ ನಿನ್ನನ್ನೇ ಕೂಗಿಕೊಳ್ಳುತ್ತಿದ್ದೇನೆ.
ನನ್ನ ಒಡೆಯನೇ, ನನಗೆ ಕಿವಿಗೊಡು.
    ನನ್ನ ಮೊರೆಯನ್ನು ಆಲಿಸು.
ಯೆಹೋವನೇ, ನೀನು ಮನುಷ್ಯರನ್ನು ಅವರೆಲ್ಲರ ಪಾಪಗಳಿಗೆ ತಕ್ಕಂತೆ ದಂಡಿಸಿದರೆ
    ಒಬ್ಬನೂ ಜೀವಂತವಾಗಿ ಉಳಿಯಲಾರ.
ಯೆಹೋವನೇ, ನಿನ್ನ ಜನರನ್ನು ಕ್ಷಮಿಸು.
    ಆಗ, ನಿನ್ನನ್ನು ಆರಾಧಿಸುವುದಕ್ಕೆ ಜನರಿರುವರು.

ನಾನು ಯೆಹೋವನ ಸಹಾಯಕ್ಕಾಗಿ ಕಾಯುತ್ತಿದ್ದೇನೆ.
    ನನ್ನ ಪ್ರಾಣವು ಆತನಿಗಾಗಿ ಕಾದುಕೊಂಡಿರುವುದು.
    ಆತನು ನುಡಿಯನ್ನು ನಂಬಿಕೊಂಡಿದ್ದೇನೆ.
ನಾನು ನನ್ನ ಒಡೆಯನಿಗಾಗಿ ಮುಂಜಾನೆಗೋಸ್ಕರ ಎದುರುನೋಡುತ್ತಿರುವ
    ಕಾವಲುಗಾರರಂತೆ ನಿರೀಕ್ಷಿಸುತ್ತಿದ್ದೇನೆ.
ಇಸ್ರೇಲೇ, ಯೆಹೋವನಲ್ಲಿ ಭರವಸವಿಡು.
    ಆತನಲ್ಲಿ ಮಾತ್ರ ನಿಜವಾದ ಪ್ರೀತಿಯಿದೆ.
ಆತನು ನಮ್ಮನ್ನು ಯಾವಾಗಲೂ ರಕ್ಷಿಸುವನು.
    ಆತನೇ ಇಸ್ರೇಲರ ಎಲ್ಲಾ ಪಾಪಗಳನ್ನು ಕ್ಷಮಿಸುವನು.

2 ಪೂರ್ವಕಾಲವೃತ್ತಾಂತ 30:1-12

ಹಿಜ್ಕೀಯನು ಪಸ್ಕಹಬ್ಬವನ್ನು ಆಚರಿಸಿದ್ದು

30 ಅರಸನಾದ ಹಿಜ್ಕೀಯನು ಯೆಹೂದದವರಿಗೂ ಇಸ್ರೇಲರಿಗೂ ಎಫ್ರಾಯೀಮ್ ಮನಸ್ಸೆ ಪ್ರಾಂತ್ಯಗಳವರಿಗೂ ಸಂದೇಶ ಕಳುಹಿಸಿ, ಯೆಹೋವನ ಆಲಯಕ್ಕೆ ಬಂದು ಇಸ್ರೇಲಿನ ಯೆಹೋವ ದೇವರಿಗೆ ಪಸ್ಕಹಬ್ಬವನ್ನು ಆಚರಿಸುವಂತೆ ಅವರನ್ನೆಲ್ಲಾ ಆಮಂತ್ರಿಸಿದನು. ಹಿಜ್ಕೀಯ ಅರಸನೂ ಅಧಿಕಾರಿಗಳೂ ಜೆರುಸಲೇಮಿನ ಸಭೆಯವರೆಲ್ಲರೂ ಎರಡನೆಯ ತಿಂಗಳಲ್ಲಿ ಹಬ್ಬವನ್ನು ಆಚರಿಸಲು ನಿರ್ಧರಿಸಿದರು. ಅದಕ್ಕೆ ಕಾರಣವೇನೆಂದರೆ, ನಿಯಮಿತ ದಿವಸದಲ್ಲಿ ಹಬ್ಬ ನಡೆಸಲು ಸಾಧ್ಯವಾಗಲಿಲ್ಲ. ಯಾಕೆಂದರೆ ಬೇಕಾದಷ್ಟು ಯಾಜಕರು ಆ ಪರಿಶುದ್ಧ ಸೇವೆಗಾಗಿ ತಮ್ಮನ್ನು ಸಿದ್ಧಪಡಿಸಿಕೊಂಡಿರಲಿಲ್ಲ. ಅಲ್ಲದೆ ಜೆರುಸಲೇಮಿನಲ್ಲಿಯೂ ಜನ ಸೇರಿ ಬರಲಿಲ್ಲ. ಈ ನಿರ್ಧಾರವು ಅರಸನಾದ ಹಿಜ್ಕೀಯನಿಗೂ ಜನರಿಗೂ ಸರಿಕಂಡಿತು. ಇದನ್ನು ಬೇರ್ಷೆಬದಿಂದ ಹಿಡಿದು ದಾನ್ ಪಟ್ಟಣದವರೆಗಿನ ಜನರಿಗೆಲ್ಲಾ ಪ್ರಕಟಿಸಿದರು. ಇಸ್ರೇಲಿನ ದೇವರಾದ ಯೆಹೋವನಿಗೆ ಪಸ್ಕಹಬ್ಬವನ್ನು ಆಚರಿಸುವುದಕ್ಕಾಗಿ ಜೆರುಸಲೇಮಿಗೆ ಬರಲು ಎಲ್ಲರಿಗೂ ಆಹ್ವಾನಿಸಿದರು. ಮೋಶೆಯು ಹೇಳಿದ್ದ ನಿಯಮಕ್ಕನುಸಾರವಾಗಿ ಪಸ್ಕಹಬ್ಬವನ್ನು ಎಷ್ಟೋ ಜನರು ಅನೇಕ ವರ್ಷಗಳಿಂದ ಆಚರಿಸಿರಲಿಲ್ಲ. ಅದಕ್ಕಾಗಿ ಸಂದೇಶಕರು ರಾಜನ ಪತ್ರವನ್ನು ಇಡೀ ಇಸ್ರೇಲ್ ಮತ್ತು ಯೆಹೂದ ಪ್ರಾಂತ್ಯದ ಜನರಿಗೆ ಕೊಟ್ಟರು. ಅದರಲ್ಲಿ ಹೀಗೆ ಬರೆದಿದ್ದನು:

“ಇಸ್ರೇಲಿನ ಮಕ್ಕಳೇ, ಅಬ್ರಹಾಮನೂ ಇಸಾಕನೂ ಯಾಕೋಬನೂ ಆರಾಧಿಸಿದ ದೇವರಾದ ಯೆಹೋವನ ಕಡೆಗೆ ತಿರುಗಿರಿ. ಆಗ ನಿಮ್ಮಲ್ಲಿ ಅಶ್ಶೂರದ ಅರಸನ ಕೈಗೆ ಸಿಕ್ಕದಂತೆ ತಪ್ಪಿಸಿಕೊಂಡು ಉಳಿದವರ ಕಡೆಗೆ ಆತನು ತಿರುಗಿಕೊಳ್ಳುವನು. ನಿಮ್ಮ ತಂದೆಗಳೂ ಸಹೋದರರೂ ನಡೆದಂತೆ ನೀವೂ ನಡೆಯಬೇಡಿರಿ. ಅವರು ತಮ್ಮ ಪಿತೃಗಳ ದೇವರಾದ ಯೆಹೋವನಿಗೆ ವಿರೋಧವಾಗಿ ನಡೆದ ಕಾರಣ ಆತನು ಅವರನ್ನು ನಾಶನಕ್ಕೆ ಒಪ್ಪಿಸಿದನು. ಇದಕ್ಕೆ ನೀವೇ ಸಾಕ್ಷಿಗಳು. ನಿಮ್ಮ ಪೂರ್ವಿಕರ ಹಾಗೆ ಮೊಂಡರಾಗಿರಬೇಡಿ. ನೀವು ಪೂರ್ಣಮನಸ್ಸಿನಿಂದ ದೇವರಿಗೆ ವಿಧೇಯರಾಗಿರಿ. ಆತನ ಶಾಶ್ವತವಾದ ಮಹಾಪವಿತ್ರಸ್ಥಳಕ್ಕೆ ಬನ್ನಿರಿ. ನಿಮ್ಮ ದೇವರಾದ ಯೆಹೋವನನ್ನು ಆರಾಧಿಸಿರಿ ಮತ್ತು ಆತನ ಸೇವೆಮಾಡಿರಿ. ಆಗ ನಿಮ್ಮ ಮೇಲಿರುವ ಆತನ ಕೋಪವು ಶಮನವಾಗುವುದು. ನೀವು ಯೆಹೋವನಿಗೆ ವಿಧೇಯರಾದರೆ ನಿಮ್ಮ ಮಕ್ಕಳೂ ಬಂಧುಗಳೂ ತಮ್ಮನ್ನು ಸೆರೆಹಿಡಿದವರಿಂದ ಕರುಣೆಯನ್ನು ಹೊಂದಿ ಮತ್ತೆ ಈ ದೇಶಕ್ಕೆ ಬರುವರು. ದೇವರಾದ ಯೆಹೋವನು ದಯೆಯೂ ಕರುಣೆಯೂ ಉಳ್ಳವನಾಗಿದ್ದಾನೆ. ನೀವು ಆತನ ಕಡೆಗೆ ತಿರುಗಿದರೆ ಆತನು ನಿಮ್ಮನ್ನು ತಳ್ಳಿಬಿಡುವುದಿಲ್ಲ.”

10 ಸಂದೇಶಕಾರರು ಎಫ್ರಾಯೀಮ್ ಮತ್ತು ಮನಸ್ಸೆ ಪ್ರಾಂತ್ಯಗಳ ಪ್ರತಿಯೊಂದು ಪಟ್ಟಣಗಳಿಗೆ ಹೋದರು. ಜೆಬುಲೂನ್ ಪ್ರಾಂತ್ಯಕ್ಕೂ ಹೋದರು. ಆದರೆ ಜನರು ಸಂದೇಶಕರನ್ನು ಗೇಲಿ ಮಾಡಿದರು. 11 ಆದರೆ ಆಶೇರ್, ಮನಸ್ಸೆ ಮತ್ತು ಜೆಬುಲೂನ್ ಪ್ರಾಂತ್ಯಗಳ ಕೆಲವರು ತಮ್ಮನ್ನು ತಗ್ಗಿಸಿಕೊಂಡು ಜೆರುಸಲೇಮಿಗೆ ಹೋದರು. 12 ಇದಲ್ಲದೆ, ದೇವರ ಶಕ್ತಿಯು ಯೆಹೂದದ ಜನರನ್ನು ಒಂದಾಗಿ ಮಾಡಿತು. ಆದ್ದರಿಂದ ಅವರು ಅರಸನಿಗೆ ಮತ್ತು ಅಧಿಕಾರಿಗಳಿಗೆ ವಿಧೇಯರಾದರು. ಹೀಗೆ ಜನರು ಯೆಹೋವನ ಕಟ್ಟಳೆಗಳಿಗೆ ವಿಧೇಯರಾದರು.

ಗಲಾತ್ಯದವರಿಗೆ 3:10-14

10 ಆದರೆ ನೀತಿವಂತರಾಗಲು ಧರ್ಮಶಾಸ್ತ್ರವನ್ನು ಅವಲಂಬಿಸಿಕೊಂಡಿರುವವರು ಶಾಪಗ್ರಸ್ತರಾಗಿದ್ದಾರೆ. ಏಕೆಂದರೆ ಪವಿತ್ರ ಗ್ರಂಥವು ಹೇಳುವಂತೆ, “ಧರ್ಮಶಾಸ್ತ್ರದಲ್ಲಿ ಬರೆದಿರುವ ನಿಯಮಗಳನ್ನೆಲ್ಲಾ ಕೈಕೊಂಡು ನಡೆಯಬೇಕು. ಅವುಗಳಿಗೆ ಎಂದಾದರೂ ಅವಿಧೇಯನಾದವನು ಶಾಪಗ್ರಸ್ತನಾಗಿದ್ದಾನೆ.”(A) 11 ಆದ್ದರಿಂದ ಧರ್ಮಶಾಸ್ತ್ರದ ಮೂಲಕ ಯಾವನೂ ನೀತಿವಂತನಾಗಲು ಸಾಧ್ಯವಿಲ್ಲ ಎಂಬುದು ಸ್ಪಷ್ಟವಾಗಿದೆ. ಪವಿತ್ರ ಗ್ರಂಥವು ಹೇಳುವಂತೆ, “ನಂಬಿಕೆಯ ಮೂಲಕ ನೀತಿವಂತನಾದವನು ಸದಾಕಾಲ ಜೀವಿಸುವನು.”[a]

12 ಧರ್ಮಶಾಸ್ತ್ರವು ನಂಬಿಕೆಯ ಮಾರ್ಗವನ್ನು ಬಳಸದೆ, “ಈ ವಿಧಿನಿಯಮಗಳನ್ನು ಪಾಲಿಸುವವನು ಅವುಗಳ ಮೂಲಕ ಜೀವವನ್ನು ಪಡೆದುಕೊಳ್ಳುತ್ತಾನೆ” ಎಂದು ಹೇಳುತ್ತದೆ. 13 ಧರ್ಮಶಾಸ್ತ್ರವು ನಮ್ಮ ಮೇಲೆ ಶಾಪವನ್ನು ಬರಮಾಡುತ್ತದೆ. ಆದರೆ ಕ್ರಿಸ್ತನು ಆ ಶಾಪವನ್ನು ತನ್ನ ಮೇಲೆ ತೆಗೆದುಕೊಂಡನು. ಆತನು ನಮ್ಮ ಸ್ಥಾನವನ್ನು ತಾನೇ ತೆಗೆದುಕೊಂಡನು. ಕ್ರಿಸ್ತನು ತನ್ನನ್ನೇ ಶಾಪಕ್ಕೆ ಒಳಪಡಿಸಿಕೊಂಡನು. ಪವಿತ್ರ ಗ್ರಂಥದಲ್ಲಿ ಬರೆದಿರುವಂತೆ, “ಮರಕ್ಕೆ ತೂಗುಹಾಕಲ್ಪಟ್ಟ ವ್ಯಕ್ತಿಯು ಶಾಪಗ್ರಸ್ತನಾಗಿದ್ದಾನೆ.”(B) 14 ಎಲ್ಲಾ ಜನರಿಗೆ ದೇವರ ಆಶೀರ್ವಾದವು ದೊರೆಯಲೆಂದು ಕ್ರಿಸ್ತನು ಹೀಗೆ ಮಾಡಿದನು. ಈ ಆಶೀರ್ವಾದವನ್ನು ದೇವರು ಅಬ್ರಹಾಮನಿಗೆ ವಾಗ್ದಾನ ಮಾಡಿದ್ದನು. ಈ ಆಶೀರ್ವಾದವು ಯೇಸು ಕ್ರಿಸ್ತನ ಮೂಲಕ ಬರುತ್ತದೆ. ದೇವರು ವಾಗ್ದಾನ ಮಾಡಿದ ಪವಿತ್ರಾತ್ಮನನ್ನು ನಾವು ಹೊಂದಿಕೊಳ್ಳಲೆಂದು ಯೇಸು ಮರಣಹೊಂದಿದನು. ನಂಬಿಕೆಯಿಡುವುದರ ಮೂಲಕ ನಾವು ಈ ವಾಗ್ದಾನವನ್ನು ಪಡೆದುಕೊಳ್ಳುತ್ತೇವೆ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International