Revised Common Lectionary (Complementary)
ರಚನೆಗಾರ: ದಾವೀದ.
32 ಯಾವನ ಪಾಪಗಳು ಕ್ಷಮಿಸಲ್ಪಟ್ಟಿವೆಯೋ
ಯಾವನ ದ್ರೋಹಗಳು ಅಳಿಸಲ್ಪಟ್ಟಿವೆಯೋ
ಅವನೇ ಧನ್ಯನು.
2 ಯೆಹೋವನು ಯಾವನನ್ನು ದೋಷಿಯೆಂದು ಹೇಳುವುದಿಲ್ಲವೋ
ಯಾವನು ತನ್ನ ಗುಪ್ತಪಾಪಗಳನ್ನು ಅಡಗಿಸಿಟ್ಟುಕೊಳ್ಳುವುದಿಲ್ಲವೋ
ಅವನೇ ಧನ್ಯನು.
3 ನಾನು ನನ್ನ ಪಾಪವನ್ನು ಅರಿಕೆಮಾಡದೆ ಇದ್ದಾಗ
ದಿನವೆಲ್ಲ್ಲಾ ಪಾಪದಿಂದ ನರಳಬೇಕಾಯಿತು;
ವೇದನೆಯಿಂದ ನನ್ನ ಎಲುಬುಗಳೇ ಸವೆದು ಹೋಗುವಂತಾಯಿತು.
4 ಹಗಲಿರುಳು ನಿನ್ನ ಶಿಕ್ಷಾಹಸ್ತವು ನನ್ನ ಮೇಲೆ ಭಾರವಾಗಿತ್ತು.
ನಾನು ಬೇಸಿಗೆಯಲ್ಲಿ ಒಣಗಿಹೋದ ಭೂಮಿಯಂತಾದೆನು.
5 ಆಗ ನಾನು ನನ್ನ ಪಾಪಗಳನ್ನೆಲ್ಲ ಯೆಹೋವನಿಗೆ ಅರಿಕೆಮಾಡಲು ನಿರ್ಧರಿಸಿದೆನು.
ಯೆಹೋವನೇ, ನಾನು ನನ್ನ ಪಾಪಗಳನ್ನು ಅರಿಕೆಮಾಡಿಕೊಂಡಾಗ, ನನ್ನ ಯಾವ ದೋಷವನ್ನೂ ನಿನಗೆ ಮರೆಮಾಡಲಿಲ್ಲ.
ನೀನು ನನ್ನ ಪಾಪಗಳನ್ನು ಕ್ಷಮಿಸಿದೆ.
6 ದೇವರೇ, ಈ ಕಾರಣದಿಂದಲೇ ನಿನ್ನ ಭಕ್ತರು ನಿನ್ನಲ್ಲಿ ಪ್ರಾರ್ಥಿಸಲಿ.
ಆಪತ್ತುಗಳು ಮಹಾಪ್ರವಾಹದಂತೆ ಬಂದರೂ ಅವರನ್ನು ಮುಟ್ಟಲಾರವು.
7 ನೀನು ನನಗೆ ಆಶ್ರಯದುರ್ಗವಾಗಿರುವೆ.
ಇಕ್ಕಟ್ಟುಗಳಲ್ಲಿ ನೀನು ನನ್ನನ್ನು ಸುತ್ತುವರಿದು ಕಾಪಾಡುವೆ.
ಆದ್ದರಿಂದ ನಿನ್ನ ರಕ್ಷಣೆಯ ಕುರಿತು ಹಾಡಿಕೊಂಡಾಡುವೆ.
8 ಯೆಹೋವನು ಹೀಗೆನ್ನುತ್ತಾನೆ: “ನಿನಗೆ ಜೀವಮಾರ್ಗವನ್ನು ಉಪದೇಶಿಸಿ
ಮಾರ್ಗದರ್ಶನ ನೀಡುವೆನು;
ನಿನ್ನನ್ನು ಕಾಪಾಡಿ ನಿನಗೆ ಮಾರ್ಗದರ್ಶಿಯಾಗಿರುವೆನು.
9 ಆದ್ದರಿಂದ ಕುದುರೆಯಂತಾಗಲಿ ಹೇಸರಕತ್ತೆಯಂತಾಗಲಿ ಮೂಢರಾಗಿರಬೇಡಿ.
ಬಾರು, ಕಡಿವಾಣಗಳಿಲ್ಲದಿದ್ದರೆ ಅವು ನಿಮ್ಮ ಅಧೀನಕ್ಕೆ ಬರುವುದಿಲ್ಲ.”
10 ಕೆಡುಕರಿಗೆ ಅನೇಕ ಕೇಡುಗಳಾಗುತ್ತವೆ.
ಆದರೆ ಯೆಹೋವನಲ್ಲಿ ಭರವಸವಿಟ್ಟಿರುವವರನ್ನು ಆತನ ಶಾಶ್ವತವಾದ ಪ್ರೀತಿಯು ಆವರಿಸಿಕೊಳ್ಳುವುದು.
11 ನೀತಿವಂತರೇ, ಹರ್ಷಿಸಿರಿ; ಯೆಹೋವನಲ್ಲಿ ಆನಂದಿಸಿರಿ.
ಶುದ್ಧಹೃದಯವುಳ್ಳವರೇ, ಉಲ್ಲಾಸಿಸಿರಿ.
ಅಬ್ಷಾಲೋಮನ ಪ್ರತೀಕಾರ
23 ಎರಡು ವರ್ಷಗಳ ನಂತರ, ಅಬ್ಷಾಲೋಮನ ಕುರಿಗಳ ತುಪ್ಪಟವನ್ನು ಕತ್ತರಿಸುವುದಕ್ಕಾಗಿ ಕೆಲವು ಜನರು ಬಾಳ್ಹಾಚೋರಿಗೆ ಬಂದರು. ಇದನ್ನು ಬಂದು ನೋಡುವಂತೆ ರಾಜನ ಮಕ್ಕಳಿಗೆಲ್ಲ ಅಬ್ಷಾಲೋಮನು ಆಹ್ವಾನವನ್ನು ನೀಡಿದನು. 24 ಅಬ್ಷಾಲೋಮನು ರಾಜನ ಬಳಿಗೆ ಹೋಗಿ, “ನನ್ನ ಕುರಿಗಳ ತುಪ್ಪಟವನ್ನು ಕತ್ತರಿಸಲು ಕೆಲವು ಜನರು ಬರುತ್ತಾರೆ. ದಯವಿಟ್ಟು ನೀವು ನಿಮ್ಮ ಸೇವಕರೊಂದಿಗೆ ಬಂದು ಅದನ್ನು ಗಮನಿಸಿ” ಎಂದನು.
25 ರಾಜನಾದ ದಾವೀದನು ಅಬ್ಷಾಲೋಮನಿಗೆ, “ಮಗನೇ, ನಾವೆಲ್ಲ ಬರುವುದಿಲ್ಲ. ಅದು ನಿನಗೆ ಬಹಳ ತೊಂದರೆಯಾಗುತ್ತದೆ” ಎಂದು ಹೇಳಿದನು.
ಅಬ್ಷಾಲೋಮನು ಬೇಡಿಕೊಂಡರೂ ದಾವೀದನು ಹೋಗಲಿಲ್ಲ; ಆದರೆ ದಾವೀದನು ಅವನನ್ನು ಆಶೀರ್ವದಿಸಿದನು.
26 ಅಬ್ಷಾಲೋಮನು, “ನೀನು ಬರಲು ಇಚ್ಛಿಸದಿದ್ದರೆ, ದಯವಿಟ್ಟು ನನ್ನ ಸೋದರನಾದ ಅಮ್ನೋನನನ್ನು ಕಳುಹಿಸು” ಎಂದು ಕೇಳಿದನು.
ರಾಜನಾದ ದಾವೀದನು ಅಬ್ಷಾಲೋಮನಿಗೆ, “ನಿನ್ನ ಜೊತೆಯಲ್ಲಿ ಅವನೇಕೆ ಬರಬೇಕು?” ಎಂದನು.
27 ಅಬ್ಷಾಲೋಮನು ದಾವೀದನನ್ನು ಬಹಳವಾಗಿ ಬೇಡಿಕೊಂಡನು. ಕೊನೆಗೆ ದಾವೀದನು ಅಮ್ನೋನನನ್ನು ಮತ್ತು ರಾಜನ ಗಂಡುಮಕ್ಕಳೆಲ್ಲರನ್ನು ಅಬ್ಷಾಲೋಮನ ಜೊತೆಯಲ್ಲಿ ಹೋಗಲು ಹೇಳಿದನು.
ಅಮ್ನೋನನನ್ನು ಕೊಂದುಹಾಕಿದ್ದು
28 ಆಗ ಅಬ್ಷಾಲೋಮನು ತನ್ನ ಸೇವಕರಿಗೆ ಈ ರೀತಿ ಆಜ್ಞೆ ಮಾಡಿದನು: “ಅಮ್ನೋನನನ್ನು ಗಮನಿಸುತ್ತಿರಿ. ಅವನು ಮತ್ತನಾಗಿ ಆನಂದಿಸುತ್ತಿರುವಾಗ ನಾನು ಆಜ್ಞೆಯನ್ನು ಕೊಡುತ್ತೇನೆ. ಆಗ ನೀವು ಅವನ ಮೇಲೆ ಆಕ್ರಮಣಮಾಡಿ ಕೊಲ್ಲಬೇಕು. ನಿಮಗೆ ಶಿಕ್ಷೆಯಾಗುತ್ತದೆ ಎಂಬ ಭಯವಿಲ್ಲದಿರಲಿ, ಯಾಕೆಂದರೆ ನೀವು ನನ್ನ ಆಜ್ಞೆಯನ್ನು ಪಾಲಿಸಿದಿರಷ್ಟೇ, ಆದ್ದರಿಂದ ಶಕ್ತರಾಗಿಯೂ ಧೈರ್ಯವಂತರಾಗಿಯೂ ಇರಿ” ಎಂದನು.
29 ಅಬ್ಷಾಲೋಮನ ಸೇವಕರು ಅವನ ಆಜ್ಞೆಯಂತೆ ಅಮ್ನೋನನನ್ನು ಕೊಂದುಬಿಟ್ಟರು. ಆದರೆ ದಾವೀದನ ಇತರ ಗಂಡುಮಕ್ಕಳೆಲ್ಲರೂ ತಮ್ಮತಮ್ಮ ಹೇಸರಕತ್ತೆಗಳನ್ನೇರಿ ತಪ್ಪಿಸಿಕೊಂಡರು.
ಅಮ್ನೋನನ ಮರಣದ ಸುದ್ದಿಯು ದಾವೀದನಿಗೆ ಮುಟ್ಟಿತು
30 ರಾಜನ ಗಂಡುಮಕ್ಕಳು ತಮ್ಮ ಮಾರ್ಗದಲ್ಲಿ ಬರುತ್ತಿರುವಾಗಲೇ ದಾವೀದನಿಗೆ ಈ ಸುದ್ದಿಯು ತಲುಪಿತು. “ಅಬ್ಷಾಲೋಮನು ರಾಜನ ಮಕ್ಕಳೆಲ್ಲರನ್ನೂ ಕೊಂದುಹಾಕಿದನು; ಒಬ್ಬ ಮಗನನ್ನೂ ಜೀವಂತವಾಗಿ ಬಿಟ್ಟಿಲ್ಲ” ಎಂಬುದೇ ಆ ಸುದ್ದಿ.
31 ರಾಜನಾದ ದಾವೀದನು ಬಟ್ಟೆಗಳನ್ನು ಹರಿದುಕೊಂಡು ನೆಲದ ಮೇಲೆ ಬಿದ್ದನು. ದಾವೀದನ ಸುತ್ತಲೂ ನಿಂತಿದ್ದ ಅವನ ಸೇವಕರೂ ತಮ್ಮತಮ್ಮ ಬಟ್ಟೆಗಳನ್ನು ಹರಿದುಕೊಂಡರು.
32 ಆದರೆ ದಾವೀದನ ಅಣ್ಣನಾದ ಶಿಮ್ಮನ ಮಗ ಯೋನಾದಾಬನು ದಾವೀದನಿಗೆ, “ರಾಜನ ಗಂಡುಮಕ್ಕಳೆಲ್ಲರನ್ನೂ ಕೊಂದುಹಾಕಿದರೆಂದು ಯೋಚಿಸುವುದು ಸರಿಯಲ್ಲ. ಅಮ್ನೋನನು ಮಾತ್ರ ಸತ್ತಿರಬೇಕು. ಅಬ್ಷಾಲೋಮನ ತಂಗಿಯಾದ ತಾಮಾರಳನ್ನು ಅಮ್ನೋನನು ಕೆಡಿಸಿದ್ದಕ್ಕಾಗಿ ಅಬ್ಷಾಲೋಮನು ಆ ದಿನದಿಂದ ಅವನನ್ನು ಕೊಲ್ಲಲು ಸಂಚು ಮಾಡುತ್ತಿದ್ದನು. 33 ರಾಜನಾದ ನನ್ನ ಒಡೆಯನೇ, ರಾಜನ ಮಕ್ಕಳೆಲ್ಲರೂ ಸತ್ತರೆಂದು ಯೋಚಿಸಬೇಡ. ಅಮ್ನೋನನು ಮಾತ್ರ ಸತ್ತುಹೋದನು” ಎಂದನು.
34 ಅಬ್ಷಾಲೋಮನು ಓಡಿಹೋದನು.
ಆ ನಗರದ ಗೋಡೆಯ ಮೇಲೆ ಒಬ್ಬ ಕಾವಲುಗಾರನು ನಿಂತಿದ್ದನು. ಬೆಟ್ಟದ ಬೇರೊಂದು ಕಡೆಯಿಂದ ಅಂದರೆ ಹೋರೋನಿನ ಮಾರ್ಗವಾಗಿ ಅನೇಕ ಜನರು ಬರುತ್ತಿರುವುದನ್ನು ಅವನು ನೋಡಿದನು. 35 ಯೋನಾದಾಬನು ರಾಜನಾದ ದಾವೀದನಿಗೆ, “ನಾನು ಹೇಳಿದ್ದು ಸರಿ. ಅಲ್ಲಿ ನೋಡು, ರಾಜನ ಗಂಡುಮಕ್ಕಳೆಲ್ಲರೂ ಬರುತ್ತಿದ್ದಾರೆ” ಎಂದನು.
36 ಯೋನಾದಾಬನು ಈ ಮಾತುಗಳನ್ನು ಹೇಳಿ ಮುಗಿಸುವಷ್ಟರಲ್ಲಿ ರಾಜನ ಗಂಡುಮಕ್ಕಳೆಲ್ಲರೂ ಬಂದರು. ಅವರು ಗಟ್ಟಿಯಾಗಿ ಅಳುತ್ತಿದ್ದರು. ದಾವೀದನು ಮತ್ತು ಅವನ ಸೇವಕರೆಲ್ಲ ಅಳರಾಂಭಿಸಿದರು. ಅವರೆಲ್ಲರೂ ಮತ್ತಷ್ಟು ಜೋರಾಗಿ ಗೋಳಾಡಿದರು. 37 ದಾವೀದನು ತನ್ನ ಮಗನಿಗಾಗಿ ಪ್ರತಿನಿತ್ಯವೂ ಗೋಳಾಡುತ್ತಿದ್ದನು.
ಅಬ್ಷಾಲೋಮನು ಗೆಷೂರಿಗೆ ತಪ್ಪಿಸಿಕೊಂಡು ಹೋದದ್ದು
ಗೆಷೂರಿನ ರಾಜನೂ ಅಮ್ಮೀಹೂದನ ಮಗನೂ ಆದ ತಲ್ಮೈನ[a] ಹತ್ತಿರಕ್ಕೆ ಅಬ್ಷಾಲೋಮನು ಓಡಿಹೋದನು. 38 ಅಬ್ಷಾಲೋಮನು ಗೆಷೂರಿಗೆ ಓಡಿಹೋದ ನಂತರ, ಅಲ್ಲಿ ಅವನು ಮೂರು ವರ್ಷಗಳ ಕಾಲ ನೆಲೆಸಿದನು. 39 ಅಮ್ನೋನನ ಮರಣದ ವಿಷಯದಲ್ಲಿ ರಾಜನಾದ ದಾವೀದನು ಸಂತೈಸಿಕೊಂಡನು. ಆದರೆ ಅವನು ಅಬ್ಷಾಲೋಮನನ್ನು ಕಾಣಲು ಬಹಳವಾಗಿ ಹಾತೊರೆಯತೊಡಗಿದನು.
ದೇವರಿಗೆ ನಿಮ್ಮನ್ನು ಒಪ್ಪಿಸಿಕೊಳ್ಳಿ
4 ನಿಮ್ಮ ಹೋರಾಟಗಳು ಮತ್ತು ವಾದವಿವಾದಗಳು ಎಲ್ಲಿಂದ ಬರುತ್ತವೆಯೆಂಬುದು ನಿಮಗೆ ತಿಳಿದಿದೆಯೋ? ನಿಮ್ಮ ಸ್ವಾರ್ಥಪರ ಆಸೆಗಳಿಂದ ನಿಮ್ಮ ಹೋರಾಟಗಳು ಮತ್ತು ವಾದವಿವಾದಗಳು ಬರುತ್ತವೆ. ಅವು ನಿಮ್ಮ ಅಂತರಂಗದಲ್ಲಿ ಯುದ್ಧ ಮಾಡುತ್ತಿವೆ. 2 ನೀವು ಅನೇಕ ವಸ್ತುಗಳಿಗಾಗಿ ಆಶಿಸುತ್ತೀರಿ. ಆದರೆ ಅವುಗಳನ್ನು ಪಡೆಯುವುದರಲ್ಲಿ ವಿಫಲರಾಗುತ್ತೀರಿ. ಆದ್ದರಿಂದ ನೀವು ಕೊಲೆ ಮಾಡುತ್ತೀರಿ ಮತ್ತು ಇತರರ ಬಗ್ಗೆ ಅಸೂಯೆಪಡುತ್ತೀರಿ. ಆದರೆ ನೀವು ಆಸೆಪಟ್ಟದ್ದನ್ನು ಇನ್ನೂ ಪಡೆಯಲಾರದವರಾಗಿರುವಿರಿ. ಆದ್ದರಿಂದ ನೀವು ವಾದವಿವಾದ ಮಾಡುವಿರಿ ಮತ್ತು ಹೊಡೆದಾಡುವಿರಿ. ನೀವು ದೇವರನ್ನು ಕೇಳಿಕೊಳ್ಳಲಿಲ್ಲ. ಆದ್ದರಿಂದಲೇ, ನೀವು ಆಸೆ ಪಟ್ಟದ್ದು ನಿಮಗೆ ದೊರೆಯಲಿಲ್ಲ. 3 ಮತ್ತು ನೀವು ಕೇಳಿಕೊಂಡಾಗ ನಿಮಗೆ ಅವು ಸಿಗಲಿಲ್ಲ. ಏಕೆಂದರೆ ನಿಮ್ಮ ಉದ್ದೇಶವು ಸರಿಯಾಗಿರಲಿಲ್ಲ. ನೀವು ಅವುಗಳನ್ನು ಕೇವಲ ನಿಮ್ಮ ಸ್ವಂತ ಸುಖಕ್ಕಾಗಿ ಕೇಳಿಕೊಂಡಿರಿ.
4 ಆದ್ದರಿಂದ ನೀವು ದೇವರಿಗೆ ನಂಬಿಗಸ್ತರಾಗಿಲ್ಲ! ಇಹಲೋಕದ ಮೇಲಿರುವ ವ್ಯಾಮೋಹ ದೇವರ ಮೇಲಿರುವ ದ್ವೇಷಕ್ಕೆ ಸಮಾನವಾಗಿದೆ. ಆದ್ದರಿಂದ ಈ ಲೋಕವನ್ನು ಪ್ರೀತಿಸುವವನು ತನ್ನನ್ನು ದೇವರಿಗೆ ಶತ್ರುವನ್ನಾಗಿ ಮಾಡಿಕೊಳ್ಳುತ್ತಾನೆ. 5 ಪವಿತ್ರ ಗ್ರಂಥವು ಅರ್ಥವಿಲ್ಲದ್ದೆಂದು ಯೋಚಿಸುವಿರಾ? “ದೇವರು ನಮ್ಮಲ್ಲಿ ಇರಿಸಿರುವ ಆತ್ಮದ ಅಪೇಕ್ಷೆಯೇನೆಂದರೆ, ನಾವು ಆತನಿಗೋಸ್ಕರ ಮಾತ್ರ ಇರಬೇಕೆಂದಷ್ಟೆ”[a] ಎಂದು ಪವಿತ್ರ ಗ್ರಂಥವು ಹೇಳುತ್ತದೆ. 6 ಆದರೆ ದೇವರು ದಯಪಾಲಿಸಿದ ಕೃಪೆಯು ಅದಕ್ಕಿಂತಲೂ ಹೆಚ್ಚಿನದು. ಪವಿತ್ರ ಗ್ರಂಥವು ಹೇಳುವಂತೆ, “ದೇವರು ಅಹಂಕಾರಿಗಳಿಗೆ ವಿರುದ್ಧವಾಗಿರುತ್ತಾನೆ, ದೀನರಿಗಾದರೆ ಕೃಪೆಯನ್ನು ದಯಪಾಲಿಸುತ್ತಾನೆ.”(A)
7 ಆದ್ದರಿಂದ ದೇವರಿಗೆ ನಿಮ್ಮನ್ನು ಒಪ್ಪಿಸಿಕೊಂಡು ಸೈತಾನನನ್ನು ಎದುರಿಸಿರಿ. ಆಗ ಅವನು ನಿಮ್ಮಿಂದ ದೂರ ಓಡಿಹೋಗುತ್ತಾನೆ.
Kannada Holy Bible: Easy-to-Read Version. All rights reserved. © 1997 Bible League International